ಗೋಂಡೋಫರಸ್

ಗೋಂಡೋಫರಸ್ ಒಬ್ಬ ಇಂಡೋಪಾರ್ಥಿಯನ್ ದೊರೆ. ಕಾಲ ಬಹುಶಃ ಕ್ರಿ. ಶ. 1ನೆಯ ಶತಮಾನ. ಅರಕೋಸಿಯ, ಕಾಬೂಲ್ ಮತ್ತು ಗಾಂಧಾರಗಳು ಇವನ ಆಳ್ವಿಕೆಗೆ ಒಳಪಟ್ಟಿದ್ದ ಭಾಗಗಳು.[೧] ಶಕ ಮತ್ತು ಪಹ್ಲವರ ಪ್ರಸಿದ್ಧ ದೊರೆಗಳಲ್ಲಿ ಮೂರನೆಯವ.
ಶಬ್ದ ವ್ಯುತ್ಪತ್ತಿ
[ಬದಲಾಯಿಸಿ]ವಿಂದಫರ್ನ (ಕೀರ್ತಿಶಾಲಿ) ಎಂಬ ಪರ್ಷಿಯನ್ ಮೂಲದಿಂದ ಈತನ ಹೆಸರು ಬಂದಿದೆ;[೨] ನಾಣ್ಯಗಳ ಮೇಲೆ ಗ್ರೀಕ್ ಅಂಕನಗಳಲ್ಲಿ ಉಂದೊಫೆರೊಸ್ ಅಥವಾ ಗೊಂಡೋಫರೊಸ್ ಮತ್ತು ಖರೋಷ್ಠಿಯಲ್ಲಿ ಗುಡಫಾರ ಅಥವಾ ಗಂದಫಾರ ಎಂಬ ರೂಪಗಳಲ್ಲಿ ಕಂಡುಬರುತ್ತದೆ.
ನಾಣ್ಯಗಳು, ಶಾಸನಗಳು
[ಬದಲಾಯಿಸಿ]ಈತನ ನಾಣ್ಯಗಳು ಹೇರಳವಾಗಿ ದೊರೆತಿವೆಯಾದ್ದರಿಂದ ಈತನ ರಾಜ್ಯ ವಿಸ್ತಾರವಾಗಿದ್ದು, ಈತ ಹೆಚ್ಚು ಕಾಲ ರಾಜ್ಯವಾಳಿದನೆಂದು ವ್ಯಕ್ತವಾಗುತ್ತದೆ. ಈತನ ವಿಷಯದಲ್ಲಿ ಐತಿಹಾಸಿಕ ಆಧಾರಗಳು ಕಡಿಮೆಯೆ. ತಖ್ತ್- ಇ ಬಹಿಯಲ್ಲಿ ದೊರೆತ ಒಂದು ಶಾಸನ ಗೋಂಡೋಫರಸನ ಆಳ್ವಿಕೆಯ 26ನೆಯ ವರ್ಷದಲ್ಲಿ ಹಾಕಿಸಿದ್ದು.[೩] ಆದ್ದರಿಂದ ಈತ ಕಡೆಯ ಪಕ್ಷ 26 ವರ್ಷಗಳ ಕಾಲ ಆಳಿರಬೇಕು. ಅದರಲ್ಲಿ ಸೂಚಿಸಿರುವ 103ನೆಯ ವರ್ಷ ವಿಕ್ರಮ ಶಕೆಗೆ ಸಂಬಂಧಿಸಿದ್ದಾಗಿ ತೋರುವುದರಿಂದ ಅದರ ಕಾಲ ಕ್ರಿ. ಶ. 45 ಎಂದೂ, ಗೋಂಡೋಫರಸ್ ಕ್ರಿ. ಶ. 19ರಲ್ಲಿ ಪಟ್ಟಕ್ಕೆ ಬಂದನೆಂದೂ ಹೇಳಬಹುದು.
ಅಶುದ್ಧ ಬೆಳ್ಳಿ ಮತ್ತು ತಾಮ್ರಗಳಿಂದ ಮಾಡಿದ ಇವನ ಅನೇಕ ನಾಣ್ಯಗಳು ದೊರೆತಿವೆ. ಈ ನಾಣ್ಯಗಳ ಮೇಲೆ ಜ್ಯೂಸ್, ಪಲ್ಲಾಸ್, ನೈಕ್, ಶಿವ ಇವರ ಮೂರ್ತಿಗಳಿವೆ. ತನ್ನ ಹೆಸರಿನಲ್ಲಿ ಮಾತ್ರವಲ್ಲದೆ ಗೋಂಡೋಫರಸ್ ತನ್ನ ಸೋದರ ಗುಡ ಮತ್ತು ಇತರರ ಹೆಸರುಗಳನ್ನು ಸೇರಿಸಿಯೂ ನಾಣ್ಯಗಳನ್ನು ಹಾಕಿಸಿದ್ದಾನೆ.
ಆ್ಯಕ್ಟ್ಸ್ ಆಫ್ ಥಾಮಸ್ ಗ್ರಂಥ
[ಬದಲಾಯಿಸಿ]ಆ್ಯಕ್ಟ್ಸ್ ಆಫ್ ಸೇಂಟ್ ಥಾಮಸ್ ಎಂಬ ಧರ್ಮಗ್ರಂಥದಲ್ಲಿ ಗೋಂಡೋಫರಸ್ ಮತ್ತು ಅವನ ವಂಶದವರ ವಿಷಯ ತಿಳಿದುಬರುತ್ತದೆ.[೪] ಈ ಗ್ರಂಥದಲ್ಲಿ ಇವನ ಹೆಸರು ಗುದ್ನಫಾರ್ ಎಂದಿದೆ.
ಗೋಂಡೋಫರಸ್ಸನ ಆಸ್ಥಾನಕ್ಕೆ ಸೇಂಟ್ ಥಾಮಸ್ ಬಂದಿದ್ದ. ಅಲ್ಲಿ ರಾಜನ ಅರಮನೆಯನ್ನು ಕಟ್ಟಿಸುವ ಕೆಲಸ ವಹಿಸಿಕೊಂಡು, ತನಗೆ ಒಪ್ಪಿಸಿದ್ದ ಹಣವನ್ನೆಲ್ಲ ದಾನಧರ್ಮಗಳಿಗಾಗಿ ವಿತರಣೆ ಮಾಡಿ ರಾಜನಿಗೆ ಸ್ವರ್ಗದಲ್ಲೊಂದು ಅರಮನೆ ಕಟ್ಟಿಸುತ್ತಿರುವುದಾಗಿ ಹೇಳಿದ. ಕುಪಿತಗೊಂಡ ರಾಜನು ಥಾಮಸನನ್ನೂ, ಅವನನ್ನು ಭಾರತಕ್ಕೆ ಕರೆತಂದ ವರ್ತಕ ಅಬೇನ್ಸನನ್ನೂ ಸೆರೆಯಲ್ಲಿಡಿಸಿದ. ಈ ನಡುವೆ ದೊರೆಯ ಸೋದರ ಗ್ಯಾಡ್ ತೀರಿಕೊಳ್ಳಲು ಅಪ್ಸರೆಯರು ಅವನನ್ನು ಸ್ವರ್ಗಕ್ಕೆ ಕೊಂಡೊಯ್ದು ಅಲ್ಲಿ ಸೇಂಟ್ ಥಾಮಸ್ ತನ್ನ ಒಳ್ಳೆಯ ಕೃತ್ಯಗಳ ಫಲವಾಗಿ ನಿರ್ಮಿಸಿದ್ದ ಅರಮನೆಯನ್ನು ತೋರಿಸಿದರು. ಗ್ಯಾಡನಿಗೆ ಮತ್ತೆ ಜೀವ ಬಂತು. ಗ್ಯಾಡ್ ಮತ್ತು ಗೋಂಡೋಫರಸ್ ಇಬ್ಬರೂ ಕ್ರೈಸ್ತರಾಗಿ ಮತಾಂತರ ಹೊಂದಿದರು ಎಂದು ಈ ಗ್ರಂಥ ತಿಳಿಸುತ್ತದೆ. ಕ್ರಿಸ್ತನ ಜನನವಾದಾಗ ಅವನನ್ನು ಪೂಜಿಸಲು ಪೂರ್ವದೇಶದಿಂದ ಬಂದ ಮೂವರು ಸಂತರಲ್ಲಿ ಒಬ್ಬನಾದ ಗ್ಯಾಸ್ಪರನ ಹೆಸರಿಗೂ ಗೋಂಡೋಫರಸ್ ಎಂಬುದಕ್ಕೂ, ಆರ್ಮೇನಿಯದ ಗಥಾಸ್ಟರ್ ಎಂಬ ರೂಪದ ಮೂಲಕ ಸಾಮ್ಯವನ್ನು ಕೆಲವು ವಿದ್ವಾಂಸರು ಕಲ್ಪಿಸಿದ್ದಾರೆ.[೫] ಇವನ ಸೋದರ ಗ್ಯಾಡ್ ನಾಣ್ಯಗಳಲ್ಲಿ ಬರುವ ಗುಡ ಆಗಿರಬೇಕು. ಗೋಂಡೋಫರಸನ ಆಸ್ಥಾನಕ್ಕೆ ಸೇಂಟ್ ಥಾಮಸ್ ಭೇಟಿ ಕೊಟ್ಟಿದ್ದನೆಂಬ ಅಂಶವನ್ನು ಇವ್ಯಾಂಚೆಲಿಯಂ ತಾಂಡ್ರಿಸ್ ಒಬಿಟು ಮರಿಯ ಎಂಬ ಗ್ರಂಥವೂ ಸಮರ್ಥಿಸುತ್ತದೆಂಬುದು ವಿದ್ವಾಂಸರ ಅಭಿಪ್ರಾಯ.
ಉಲ್ಲೇಖಗಳು
[ಬದಲಾಯಿಸಿ]- ↑ Rezakhani 2017, p. 35.
- ↑ W. Skalmowski and A. Van Tongerloo, Middle Iranian Studies: Proceedings of the International Symposium Organized by the Katholieke Universiteit Leuven from the 17th to the 20th of May 1982, p. 19
- ↑ A. D. H. Bivar, "The History of Eastern Iran", in Ehsan Yarshater (ed.), The Cambridge History of Iran, Vol.3 (1), The Seleucid, Parthian and Sasanian Periods, London, Cambridge University Press, 1983, p.197.
- ↑ Curtin, D. P.; James, M.R. (June 2018). The Acts of St. Thomas in India. Dalcassian Publishing Company. ISBN 9781087965710.
- ↑ Alfred von Gutschmid, Die Königsnamen in den apokryphen Apostelgeschichten, in the Rheinisches Museum für Philologie (1864), XIX, 161-183, nb p.162; Mario Bussagli, "L'art du Gandhara", p.207
ಗ್ರಂಥಸೂಚಿ
[ಬದಲಾಯಿಸಿ]- Rezakhani, Khodadad (2017). ReOrienting the Sasanians: East Iran in Late Antiquity. Edinburgh University Press. pp. 1–256. ISBN 9781474400305.
