ವಿಷಯಕ್ಕೆ ಹೋಗು

ಗೊರಸಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೊರಸಿಗಳು
Temporal range: Paleocene–present
ಮೇಲಿನಿಂದ ಎಡಕ್ಕಿನ ಚಿತ್ರದಲ್ಲಿ ಆರ್ಟಿಯೊಡ್ಯಾಕ್ಟಿಲಾಗಳು ಮೇಲಿವೆ ಮತ್ತು ಪೆರಿಸೊಡ್ಯಾಕ್ಟಿಲಾಗಳು ಕೆಳಗಿವೆ: ಜಿರಾಫೆ, ಬಯಲಿನ ಕಾಡುಕೋಣ, ಸವಾರಿ ಒಂಟೆ, ಕೆಂಪು ಜಿಂಕೆ, ಕಾಡುಹಂದಿ, ತಿಮಿಂಗಿಲ (ಸೆಟೇಸೀ), ಬಯಲಿನ ಜ಼ೀಬ್ರಾ, ಭಾರತದ ಖಡ್ಗಮೃಗ, ಮತ್ತು ಬ್ರಜ಼ಿಲ್‍ನ ಟಪೀರ್.
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯಾ
ವಿಭಾಗ: ಕಾರ್ಡೇಟಾ
ವರ್ಗ: ಮ್ಯಾಮೇಲಿಯಾ
ಏಕಮೂಲ ವರ್ಗ: ಪ್ಯಾನ್-ಯೂಅಂಗ್ಯುಲೇಟಾ
Mirorder: ಯೂಅಂಗ್ಯುಲೇಟಾ
Waddell et al., 2001[]
ಗಣಗಳು ಮತ್ತು ಏಕಮೂಲ ವರ್ಗಗಳು
  • ಏಕಮೂಲ ವರ್ಗ: ಪ್ಯಾನ್‍ಪೆರಿಸೊಡ್ಯಾಕ್ಟೀಲಾ
    • ಕುಟುಂಬ: †ಫ಼ೆನಕೊಡಾಂಟಿಡೇ?
    • ಏಕಮೂಲ ವರ್ಗ: †ಆಂಥ್ರಾಕೊಬೂನಿಯಾ
    • ಗಣ: †ಡೆಸ್ಮೊಸ್ಟೈಲಿಯಾ(?)
    • ಏಕಮೂಲ ವರ್ಗ: †ಲಿಟಾಪ್ಟರ್ನಾ
    • ಏಕಮೂಲ ವರ್ಗ: †ನೋಟೊಅಂಗ್ಯುಲೇಟಾ
    • ಗಣ: ಪೆರಿಸೊಡ್ಯಾಕ್ಟೀಲಾ
  • ಏಕಮೂಲ ವರ್ಗ: ಪ್ಯಾನ್ಆರ್ಟಿಯೋಡ್ಯಾಕ್ಟೀಲಾ
    • ಗಣ: †ಆರ್ಕ್‌ಟೊಸಯೋನಿಯಾ?
    • ಗಣ: †ಮೀಸೊನೈಚಿಯಾ?
    • ಕುಟುಂಬ: †ಪೆರಿಪ್ಟೈಕಿಡೇ?
    • ಗಣ: ಆರ್ಟಿಯೋಡ್ಯಾಕ್ಟೀಲಾ
Synonyms
  • ಸೆಟಂಗ್ಯುಲೇಟಾ
Irwin and Wilson, 1993[]

ಗೊರಸಿಗಳು ವೈವಿಧ್ಯಮಯ ಯೂಅಂಗ್ಯುಲೇಟಾ ಏಕಮೂಲವರ್ಗಕ್ಕೆ ಸೇರಿದ ಹಲವಾರು ಬಗೆಯ ಜರಾಯುಜ ಮತ್ತು ಸಸ್ಯಾಹಾರಿ ಸಸ್ತನಿಗಳು. ಹಿಂದೆ ಗೊರಸಿಗಳು ಮ್ಯಾಮೇಲಿಯ (Mammalia) ವರ್ಗದ ಅಂಗ್ಯುಲೇಟ ಆಧಿಗಣಕ್ಕೆ ಸೇರಿದ್ದವು. ಇವೆಲ್ಲವುಗಳಲ್ಲೂ ಕಾಲಿನಲ್ಲಿ ಗೊರಸು ಇರುವುದರಿಂದ ಈ ಹೆಸರು ಬಂದಿದೆ. ತಮ್ಮ ರೂಪ, ರಚನೆ ಮತ್ತು ಸ್ವಭಾವಗಳಲ್ಲಿ ವೈವಿಧ್ಯವನ್ನು ಪ್ರದರ್ಶಿಸುವ ಇವನ್ನು ಬೇರೆ ಬೇರೆ ಗಣಗಳಲ್ಲಿ ಸೇರಿಸಲಾಗಿದೆ. ಕುದುರೆ, ಕತ್ತೆ, ದನ, ಕುರಿ, ಜಿಂಕೆ, ಆನೆ, ಖಡ್ಗಮೃಗ, ಹಂದಿ, ನೀರು ಕುದುರೆ, ಕೋನೆ (ಹೈರ‍್ಯಾಕ್ಸ್), ಟಪಿರ್, ಮುಂತಾದವು ಗೊರಸಿನ ಕೆಲವು ಉದಾಹರಣೆಗಳು. ಇವಲ್ಲದೆ ಇಯೊಸೀನ್, ಆಲಿಗೊಸೀನ್ ಮತ್ತು ಪ್ಲೀಸ್ಟೊಸೀನ್ ಕಾಲಗಳಲ್ಲಿ ಜೀವಂತವಾಗಿದ್ದು ಈಗ ಬರಿಯ ಫಾಸಿಲುಗಳ ರೂಪದಲ್ಲಿ ಮಾತ್ರ ಕಾಣದೊರೆಯುವ ಅನೇಕ ಪ್ರಭೇದಗಳೂ ಗೊರಸಿಗಳ ಗುಂಪಿನಲ್ಲಿವೆ. ಇಲ್ಲಿ ಗೊರಸಿಗಳ ಮುಖ್ಯ ಲಕ್ಷಣಗಳನ್ನೂ, ಸ್ಥೂಲ ವರ್ಗಿಕರಣವನ್ನೂ ಸಂಕ್ಷೇಪವಾಗಿ ಕೊಡಲಾಗಿದೆ.

ಗೊರಸಿಗಳ ಲಕ್ಷಣಗಳು

[ಬದಲಾಯಿಸಿ]

ಗೊರಸಿಗಳು ಪೇಲಿಯೋಸೀನ್ ಯುಗದಿಂದೀಚೆಗೆ ಮಾತ್ರ ಕಾಣದೊರೆಯುತ್ತವೆ. ಈ ಕಾಲಕ್ಕಿಂತ ಮುಂಚೆ ಜೀವಿಸಿದ್ದ ಪ್ರಾಣಿಗಳೆಲ್ಲವೂ ಕೀಟಾಹಾರಿಗಳಾಗಿದ್ದು ಸಣ್ಣ ಗಾತ್ರದವಾಗಿದ್ದವು. ಅನಂತರ ಇವುಗಳ ಆಹಾರ ಸೇವನೆಯ ಕ್ರಮದಲ್ಲಿ ಕೆಲವು ಮೂಲಭೂತ ಬದಲಾವಣೆಗಳು ಉಂಟಾಗಿ ಇವುಗಳಲ್ಲಿ ಬಹುಪಾಲು ಪ್ರಾಣಿಗಳು ಸಸ್ಯಾಹಾರದ ಸೇವನೆಗೆ ಮೊದಲಾದವು, ಬಹುಶಃ ಈ ಬದಲಾವಣೆಯಿಂದಾಗಿ ಪ್ರಾಣಿಗಳ ಗಾತ್ರ (ಕೆಲವು ಪ್ರಾಣಿಗಳನ್ನುಳಿದು ಉದಾ: ಕೋನಿಗಳು) ಹೆಚ್ಚುತ್ತಾ ಬಂತು. ಹೀಗಾಗಿ ಗೊರಸಿಗಳು ದೊಡ್ಡ ಗಾತ್ರದ ಪ್ರಾಣಿಗಳಾಗಿವೆ. ಇವುಗಳ ಚರ್ಮ ದಪ್ಪ ಮತ್ತು ಹಲವಾರು ಬಗೆಯ ಮಚ್ಚೆಗಳಿಂದ ಕೂಡಿದ್ದು ವರ್ಣಮಯವಾಗಿರುತ್ತವೆ. ಕೊಬ್ಬು, ಕೋರೆ ಮುಂತಾದ ರಕ್ಷಣೆಯ ಸಾಧನಗಳಿದ್ದರೂ ಗೊರಸಿಗಳು ತಮ್ಮ ರಕ್ಷಣೆಗೆ ಈ ಸಾಧನಗಳಿಗಿಂತ ಹೆಚ್ಚಾಗಿ ವೇಗದ ನಡಿಗೆಯನ್ನು ಅವಲಂಬಿಸಿವೆ. ಚುರುಕಿನ ನಡೆಯು ಅತ್ಯಂತ ವೇಗದ್ದಾಗಿದೆ. ಕಾಲುಗಳು ತುದಿಬೆರಳಿನ ಮೇಲೆ ನಿಲ್ಲುವಂತಾಗಿ ಅವುಗಳೂ ಉದ್ದವೂ ಹೆಚ್ಚಿದೆ. ಇದರಿಂದಾಗಿ ಕಾಲಿನ ಐದು ಬೆರಳುಗಳಲ್ಲಿ ಆಚೀಚಿನವು ಭೂಮಿಯನ್ನು ತಲುಪುತ್ತವೆ. ಹೋಗುವುದರಿಂದ ಕ್ಷೀಣಗೊಂಡಿವೆ. ಕೊನೆಯ ಕಾಲಿನಲ್ಲಿ ಬರಿ ಒಂದೇ ಇವೆ. ಎರಡು ಮಧ್ಯದ ಬೆರಳುಗಳು ಮಾತ್ರ ಉಳಿದಿವೆ. ಕಾಲಿನ ಚಲನೆಯ ರೀತಿಯಲ್ಲೂ ಕೆಲವು ಹಿಂದಿನ ಮುಂದಿನ ಚಲನೆಗೆ ಮಾತ್ರ ಸೀಮಿತವಾಗಿದೆ. ಕೀಲುಗಳು ರಾಟೆಯ ಮಾದರಿಯದಾಗಿದ್ದವು. ಅಲ್ಬ ಮತ್ತು ಫೀಬ್ಯೂಲಾ ಮೂಳೆಗಳು ಕ್ಷೀಣವಾಗಿತ್ತು. ಅಲ್ನಾ ಬಂದು ರೇಡಿಯಸ್ ಹಾಗೂ ಟಿಬಿಯಗಳೊಂದಿಗೆ ಕೂಡಿಕೊಂಡು ಬಿಟ್ಟಿವೆ. ಆರ್ಕ್‌ಟಾಸಿಯೋನಿಡ್‌ಗಳಂತಹ ಮುಂಚಿನ ಗೊರಸಿಗಳು ಈ ಅನನ್ಯವಾದ ಕಂಕಾಲ ರಚನೆಯನ್ನು ಹಂಚಿಕೊಂಡಿರಲಿಲ್ಲ.[] ಬಹುತೇಕ ಗೊರಸಿಗಳು ಗ್ರೀವಾಸ್ಥಿಯನ್ನು ಹೊಂದಿಲ್ಲ.[] ಮಧ್ಯದ ಬೆರಳಿನ ತುದಿಯಲ್ಲಿ ಎಲುಬುಗಳು ಅಗಲವಾಗಿದೆಯಲ್ಲದೆ ಇದರ ಕೊಂಡಿ ಉಗುರು (ಕ್ಲಾ) ಮಾರ್ಪಾಟಿಗಾಗಿ ಎಲುಬಿನ ಸುತ್ತ ಗೊರಸಾಗಿ ಬೆಳೆದಿದೆ. ಕಾಲುಗಳು ಹೀಗೆ ಉದ್ದದಲ್ಲಿ ಹೆಚ್ಚಿದ್ದರೂ ಈ ಹೆಚ್ಚುಗಳು ಕಾಲಿನ ಕೆಳಭಾಗದಲ್ಲಿ ಮಾತ್ರ ಕಂಡು ಬರುತ್ತದೆ. ಹ್ಯೂಮರಸ್ ಮತ್ತು ಫೀಮರ್ ಮೂಳೆಗಳು ಮಾತ್ರ ಮೋಟಾಗಿಯೇ ಇವೆ. ಹಿಂಗಾಲುಗಳು ದೇಹದ ಮುನ್ನಡೆಗೆ ಸಹಾಯಕವಾಗಿದೆ. ಸಾಧನಗಳಾಗಿಯೂ, ಮುಂಗಾಲುಗಳು ದೇಹದ ಭಾರವನ್ನು ಹೊರುವ ಸಾಧನಗಳಾಗಿಯೂ ಇರುವುದರಿಂದ ಕಶೇರು ಸ್ತಂಭ ಸೂಕ್ತವಾಗಿ ಮಾರ್ಪಟ್ಟಿವೆ. ಪಕ್ಕೆಲುಬುಗಳು ಹೇರಳವಾಗಿವೆ. ಇಲಿಯಂ ಮೂಳೆಗಳು ಅಗಲವಾಗಿವೆ ನೇರವಾಗಿವೆ. ಮೇಲೆಕ್ಕೆದ್ದಿರುವಂತೆ ಇದ್ದು ಚಲನೆಗೆ ಅಗತ್ಯವಾದ ಸ್ನಾಯುಗಳಾದ ಗ್ಲೂಟೈಗಳು ಮತ್ತು ಹೊಟ್ಟೆಯ ಭಾರವನ್ನು ಹೊರುವ ಸ್ನಾಯುಗಳು ಇದಕ್ಕೆ ಅಂಟಿಕೊಳ್ಳಲು ಅನುಕೂಲವಾಗಿದೆ.

ಗೊರಸಿಗಳ ಕತ್ತು ಉದ್ದವಾಗಿರುತ್ತವೆ. ಪ್ರಾಣಿ ತನ್ನ ಸುತ್ತಮುತ್ತ ದೃಷ್ಟಿ ಹಾಯಿಸುವುದಕ್ಕೆ, ಆಹಾರವನ್ನು ಎಟಕಿಸಿಕೊಳ್ಳಲು ತಲೆಯನ್ನು ಚಾಚುವುದಕ್ಕೆ ಇದರಿಂದ ಅನುಕೂಲ. ಸಾಮಾನ್ಯವಾಗಿ ಗೊರಸಿಗಳ ಶ್ರವಣಶಕ್ತಿ ಬಹು ಚುರುಕು. ಕಿವಿಗಳು ಬಲು ಉದ್ದವಾಗಿದ್ದು ಶಬ್ದ ಬರುವ ದಿಕ್ಕನ್ನು ಗ್ರಹಿಸಲು ಸಹಾಯಕವಾಗಿವೆ. ಘ್ರಾಣ ಶಕ್ತಿಯೂ ಹೆಚ್ಚಾಗಿವೆ. ಸಾಮಾನ್ಯವಾಗಿ ಗೊರಸಿಗಳು ಹುಲ್ಲು ಮೇಯುವಾಗ ಗಾಳಿಗೆ ಎದುರಾಗಿಯೇ ಸಾಗುತ್ತವೆ. ಮೂತಿ ಸದಾ ಒದ್ದೆಯಾಗಿದ್ದು ಅದರಲ್ಲಿರುವ ಗ್ರಾಹಕಗಳು ಗಾಳಿಗುಂಟ ಬರುವ ವಾಸನೆಯನ್ನು ಗ್ರಹಿಸಲು ಸಮರ್ಥವಾಗಿವೆ. ಅಂತಯೇ ನಾಲಿಗೆ ದೊಡ್ಡ ಗಾತ್ರವಾಗಿದ್ದು ಸೂಕ್ಷ್ಮವೇದಿಗಳಾಗಿವೆ. ರಸನೇಂದ್ರಿಯಗಳನ್ನು ಪಡೆದಿದೆ. ಮಿದುಳು ದೊಡ್ಡ ಗಾತ್ರದ್ದು.

ಗೊರಸಿಗಳಲ್ಲಿ ಬಹುಪಾಲು ಬಗೆಯವು ಸಮಾಜಜೀವಿಗಳು. ಗುಂಪುಗುಂಪಾಗಿರುವುದರಿಂದ ಒಂದು ಪ್ರಾಣಿಯ ಅನುಭವವನ್ನು ಗಮನಿಸಿ ಆ ಗುಂಪಿನ ಇತರ ಪ್ರಾಣಿಗಳು ಸುಲಭವಾಗಿ ಪಾಠ ಕಲಿಯುತ್ತವೆ. ಗೊರಸಿಗಳ ಇನ್ನೊಂದು ಮುಖ್ಯ ಲಕ್ಷಣ ವಾಸನಾಗ್ರಂಥಿಗಳು. ಇವುಗಳಲ್ಲಿ ಉತ್ಪತ್ತಿಯಾಗುವ ವಾಸನೆಯನ್ನು ಗೊರಸಿಗಳು ತಮ್ಮ ನಡೆಜಾಡುಗಳನ್ನು ಮತ್ತು ಆಧೀನ ಪ್ರಾಂತ್ಯಗಳನ್ನು ಗುರುತಿಸಿಕೊಂಡು ತಮ್ಮ ನಡುವಿನ ಸಂಜ್ಞೆಗಳನ್ನು ವಿನಿಮಯ ಮಾಡಿಕೊಳ್ಳುವುದಕ್ಕೂ ಉಪಯೋಗಿಸಿಕೊಳ್ಳುತ್ತವೆ. ಗೊರಸಿಗಳ ಲೈಂಗಿಕ ವ್ಯವಸ್ಥೆ ಸಂಕೀರ್ಣವಾಗಿದ್ದು ಇದು ದೃಷ್ಟಿ, ಶ್ರವಣ, ಘ್ರಾಣ ಸಂಬಂಧಿ ಸಂಜ್ಞೆಗಳ ವಿವರವಾದ ಬಳಕೆಯನ್ನು ಒಳಗೊಂಡಿದ್ದು ಕೆಲವು ಸಾರಿ ಗಂಡುಗಳ ನಡುವೆ ಕಾದಾಟ ನಡೆಯುವ ಪರಿಪಾಠ ಉಂಟು. ಗರ್ಭಾವಸ್ಥೆ ಅವಧಿ ದೀರ್ಘವಾಗಿದ್ದು ಅಲ್ಲದೆ ಸಮರ್ಥವಾದ ಮಿದಿಳುಳ್ಳ ಇತರ ದೊಡ್ಡ ಗಾತ್ರದ ಪ್ರಾಣಿಗಳಲ್ಲಿರುವಂತೆ ಹುಟ್ಟುವ ಮರಿಗಳ ಸಂಖ್ಯೆ ಕಡಿಮೆ. ಹೊಸದಾಗಿ ಹುಟ್ಟಿದ ಮರಿ ಚೆನ್ನಾಗಿ ಬೆಳೆದಿರುತ್ತದಲ್ಲದೆ ಬೇಗ ಹೆಣ್ಣಿನೊಡನೆ ಸ್ವತಂತ್ರವಾಗಿ ಓಡಾಡುವ ಸಾಮರ್ಥ್ಯವನ್ನು ಪಡೆಯುತ್ತವೆ.

ಗೊರಸಿಗಳು ಆಹಾರವನ್ನು ಪಡೆಯುವ ಮತ್ತು ಅರಗಿಸಿಕೊಳ್ಳುವ ವಿಧಾನದಲ್ಲಿ ಬಹುಶಃ ಮೇಲೆ ಹೇಳಿದ ಲಕ್ಷಣಗಳಿಗಿಂತ ಹೆಚ್ಚು ಗಮನಾರ್ಹವಾದ ಮಾರ್ಪಾಡುಗಳನ್ನು ಕಾಣಬಹುದು. ಇವುಗಳ ಪೂರ್ವಜರಾದ ಕೀಟಭಕ್ಷಗಳಲ್ಲಿದ್ದ ದವಡೆ ಹಲ್ಲಿನ ತ್ರಿಕೋನಾಕಾರದ ವಿನ್ಯಾಸ ಇವುಗಳಲ್ಲಿ ಚಚ್ಚೌಕ ಮಾದರಿಯಾಗಿದೆ. ಹಲ್ಲುಗಳು, ಕೋಡು ಕೆಲವು ಬದಲಾವಣೆಗಳಿಗೊಳಗಾಗಿ ಚೂಪು ಮೊನೆಯಂತಿರುವ ಹಲವಾರು ಏಣುಗಳುಳ್ಳ ಲೋಫೋಡಾಂಟ್ (lophodont) ಮಾದರಿಯ ಮೇಲ್ಮೈಯಾಗಿ ರೂಪುಗೊಂಡಿವೆ. ಮಿಗಿಲಾಗಿ ಇಡೀ ಹಲ್ಲೇ ಸಿಮೇಂಟಿನಿಂದ (ಮೂಳೆ) ಆವೃತವಾಗುತ್ತದೆ. ಬೇಗ ಸವೆಯಬಹುದಾದ ಮೋಟು ಬಗೆಯ ದವಡೆ ಹಲ್ಲುಗಳ (ಬ್ರಾಕಿಡಾಂಟ್ - brachydont) ಬದಲಾಗಿ ಉದ್ದವಾದ ಹೈಪೋಸೋಡಾಂಟ್ ಬಗೆ ಹಲ್ಲುಗಳು ಕಾಣಿಸಿಕೊಳ್ಳುತ್ತವೆ. ಈ ಪ್ರಾಣಿಗಳಲ್ಲಿ ಆಹಾರವನ್ನು ಅರೆಯುವ ಅವಶ್ಯಕತೆ ಹೆಚ್ಚಾಗಿರುವುದರಿಂದ ಸಾಮಾನ್ಯವಾಗಿ ಇಡೀ ದಂತಶ್ರೇಣಿ ಹಾಗೆಯೇ ಬಹುಕಾಲ ಉಳಿಯುವುದಲ್ಲದೆ ದವಡೆಹಲ್ಲುಗಳೂ, ಮುಂದವಡೆ ಹಲ್ಲುಗಳೂ ಆಹಾರವನ್ನು ಅರೆಯಲು ಅನುಕೂಲವಾಗುವಂತೆ ಚಪ್ಪಟೆಯಾಗಿವೆ. ಈ ಲಕ್ಷಣದಲ್ಲಿ ಗೊರಸಿಗಳು ಮಾಂಸಾಹಾರಿಗಳಾದ ಕಾರ್ನಿವೋರ ಗಣದ ಪ್ರಾಣಿಗಳಿಂದ ಭಿನ್ನವೆನಿಸಿವೆ. ಗೊರಸಿಗಳ ಬಾಚಿಹಲ್ಲುಗಳು ಹುಲ್ಲು, ಚಿಗುರು ಮುಂತಾದ ಸಸ್ಯಾಹಾರವನ್ನು ತುಂಡರಿಸಲು ಸಹಾಯಕವಾಗಿವೆ. ಕೆಲವೊಮ್ಮೆ (ಉದಾಹರಣೆಗೆ ಆರ್ಟಿಯೋಡ್ಯಾಕ್ಟಿಲ ಗಣದ ಗೊರಸಿಗಳು ) ಮೇಲ್ದವಡೆಯಲ್ಲಿನ ಬಾಚಿಹಲ್ಲುಗಳ ಸಾಲು ಅಳಿದು ಹೋಗಿರುತ್ತವೆ. ಇಂಥವುಗಳಲ್ಲಿ ಕೆಳದವಡೆಯ ಬಾಚಿಹಲ್ಲುಗಳು ಮತ್ತು ಕೊಂಬಿನಂತೆ ಇರುವ ಮೇಲ್ದುಟಿಗಳೇ ಆಹಾರವನ್ನು ಕತ್ತರಿಸಲು ಸಹಾಯಕವಾಗಿವೆ. ಅನೇಕ ಸಲ ಕೋರೆಹಲ್ಲು ಕಾಣೆಯಾಗಿರುತ್ತದೆ. ಆಹಾರವನ್ನು ತುಂಡರಿಸುವ ಮತ್ತು ಅರೆಯುವ ಕಾರ್ಯ ತುಟಿ, ತಾಲು, ನಾಲಿಗೆ ಮತ್ತು ದವಡೆಗಳು ಹಾಗೂ ಅವುಗಳ ಸ್ನಾಯುಗಳ ಹಲವಾರು ಮಾರ್ಪಾಟುಗಳಿಗೆ ಕಾರಣವಾಗಿದೆ. ದವಡೆ ತಲೆಬುರುಡೆಯೊಂದಿಗೆ ಚಪ್ಪಟೆ ಫಲಕದ ರೀತಿ ಕೀಲಿಸಿ ಕೊಂಡಿರುವುದರಿಂದ ಕೆಳದವಡೆ ಆವರ್ತಚಲನೆಯನ್ನು ತೋರುತ್ತದೆ. ಗೊರಸಿಗಳ ತಲೆಬುರುಡೆಯಲ್ಲಿ ಹಣೆಯ ಏಣು ಇಲ್ಲದಿರುವುದರಿಂದ ಅದು ಚಪ್ಪಟೆಯಾಗಿದೆ. ಕೆಲವು ಗೊರಸಿಗಳು ಮೇಲಿನ ಕೋರೆಹಲ್ಲುಗಳನ್ನು ಹೊಂದಿರುವುದಿಲ್ಲ. ಇವುಗಳ ಬದಲಾಗಿ ಹುಲ್ಲು ತಿನ್ನಲು ನೆರವಾಗಲು ಒಂದು ದಂತಫಲಕವನ್ನು (dental pad) ಹೊಂದಿರುತ್ತವೆ.[][]

ಕೊಂಬನ್ನು ಹೊಂದಿರುವ ಬೋವಿಡೇ ಕುಟುಂಬಕ್ಕೆ ಸೇರಿದ ಗೊರಸಿಗಳ ಅನನ್ಯವಾದ ಲಕ್ಷಣವು ಇವುಗಳ ಏಕೈಕ ಸ್ಪಷ್ಟ ರೂಪ ಲಕ್ಷಣವಾಗಿವೆ. ಈ ಕೊಂಬುಗಳು ಇವುಗಳನ್ನು ಪೆಕೋರಾ ಅವಗಣಕ್ಕೆ ಸೇರಿದ ಇತರ ಗೊರಸಿಗಳಿಂದ ಬೇರೆಯಾಗಿಸುತ್ತವೆ.[][]

ಗೊರಸಿಗಳು ಸೇವಿಸುವ ಆಹಾರದಲ್ಲಿನ ಸೆಲ್ಯುಲೋಸಿನ ಪಚನಕ್ರಿಯೆಯಲ್ಲಿ ಸಹಾಯ ಮಾಡುವ ಬ್ಯಾಕ್ಟೀರಿಯಗಳಿಗಾಗಿ ಗೊರಸಿಗಳ ಜೀರ್ಣಾಂಗವ್ಯವಸ್ಥೆಯಲ್ಲಿ (digestive system) ಸಾಮಾನ್ಯವಾಗಿ ಒಂದು ಪ್ರತ್ಯೇಕ ಕೋಣೆಯಿರುತ್ತದೆ. ಈ ಕೋಣೆ ಆರ್ಟಿಯೋಡ್ಯಾಕ್ಟಿಲ ಪ್ರಾಣಿಗಳಲ್ಲಿ ಜಠರದಲ್ಲಿದ್ದರೆ, ಪೆರಿಸೋಡ್ಯಾಕ್ಟಿಲ ಪ್ರಾಣಿಗಳಲ್ಲಿ ಸೀಕಂ ಭಾಗದಲ್ಲಿದೆ.

ಹೀಗೆ ಮೇಲೆ ವಿವರಿಸಿದ ಲಕ್ಷಣಗಳು ಗೊರಸಿಗಳಿಗೆ ಮಾತ್ರ ವಿಶಿಷ್ಟವಾಗಿದ್ದು ಎಲ್ಲವೂ ಆ ಪ್ರಾಣಿಗಳ ಸಸ್ಯಾಹಾರ ಜೀವನಕ್ಕೆ ಪೂರಕವಾಗಿವೆ.

ವರ್ಗೀಕರಣ

[ಬದಲಾಯಿಸಿ]

ಗೊರಸಿಗಳ ಗುಂಪನ್ನು ಪ್ರೋಟೋಅಂಗ್ಯುಲೇಟ (protoungulata), ಪೀನಂಗ್ಯುಲೇಟ, ಮೀಸಾಕ್ಸೋನಿಯ ಮತ್ತು ಪ್ಯಾರಾಕ್ಸೋನಿಯ (paraxonia) ಎಂಬ 4 ಅಧಿಗಣಗಳಾಗಿ ವಿಂಗಡಿಸಲಾಗಿದೆ: ಪ್ರೋಟೋಅಂಗ್ಯುಲೇಟದಲ್ಲಿ ಕಾಂಡಿಲಾರ್ತ್ರ, ನೋಟೋಅಂಗ್ಯುಲೇಟ, ಲಿಟಾಪ್ಟರ್ನ, ಆಸ್ಟ್ರಪೊತೀರಿಯ ಮತ್ತು ಟ್ಯೂಬ್ಯುಲಿಡೆಂಟೇಟ ಎಂಬ 5 ಗಣಗಳಿವೆ. ಪೀನಂಗ್ಯುಲೇಟ ಅಧಿಗಣವು ಹೈರಕಾಯ್ಡಿಯ, ಪ್ರೊಬಾಸಿಡಿಯ, ಪ್ಯಾಂಟೊಡಾಂಟ, ಡೈನೋಸೆರೇಟ, ಪೈರೊಥೀರಿಯ, ಎಂಬ್ರಿತಾಪೊಡ ಮತ್ತು ಸೈರೀನಿಯ ಎಂಬ 7 ಗಣಗಳನ್ನು ಒಳಗೊಂಡಿದೆ. ಪೆರಿಸೋಡ್ಯಾಕ್ಟಿಲ ಎಂಬ ಗಣ ಮೀಸಾಕ್ಸೋನಿಯ ಅಧಿಗಣಕ್ಕೂ, ಆರ್ಟಿಯೊಡ್ಯಾಕ್ಟಿಲ ಎಂಬ ಗಣ ಪ್ಯಾರಾಕ್ಸೋನಿಯ ಅಧಿಗಣಕ್ಕೂ ಸೇರಿವೆ.

ಉಲ್ಲೇಖಗಳು

[ಬದಲಾಯಿಸಿ]
  1. Peter J. Waddell, Hirohisa Kishino, Rissa Ota (2001). "A Phylogenetic Foundation for Comparative Mammalian Genomics". Genome Informatics 12: 141–154, doi:10.11234/gi1990.12.141.
  2. Irwin, D.M. and Wilson, A.C. (1993). "Limitations of molecular methods for establishing the phylogeny of mammals, with special reference to the position of elephants". In: F.S. Szalay, M.J. Novacek, and M.C. McKenna (eds.), Mammal Phylogeny: Placentals. pp. 257–267, Springer-Verlag, New York.
  3. Janis, Christine M.; Scott, Kathleen M. and Jacobs, Louis L. (1998) Evolution of Tertiary Mammals of North America, Volume 1. Cambridge: Cambridge University Press. pp. 322-23. ISBN 9780521355193
  4. The Illustrated Encyclopedia of the Animal Kingdom. p. 7
  5. Rouge, Melissa (2001). "Dental Anatomy of Ruminants". Colorado State University. Archived from the original on 28 September 2011. Retrieved 5 May 2010.
  6. "Toothless cud chewers, To see ourselves as others see us..." WonderQuest. Retrieved 5 May 2010.
  7. Bibi, F.; Bukhsianidze, M.; Gentry, A.; Geraads, D.; Kostopoulos, D.; Vrba, E. (2009). "The fossil record and evolution of Bovidae: State of the field". Palaeontologia Electronica. 12 (3): 10A.
  8. Gatesy, J.; Yelon, D., DeSalle, R., Vrba, E. (1992). "Phylogeny of the Bovidae (Artiodactyla, Mammalia), Based on Mitochondrial Ribosomal DNA Sequences". Mol. Biol. Evol. 9 (3): 433–446. doi:10.1093/oxfordjournals.molbev.a040734. PMID 1584013.{{cite journal}}: CS1 maint: multiple names: authors list (link)


ಹೊರಗಿನ ಕೊಂಡಿಗಳು

[ಬದಲಾಯಿಸಿ]



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: