ವಿಷಯಕ್ಕೆ ಹೋಗು

ಗೊಬ್ಬರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರಾಣಿ ಗೊಬ್ಬರವು ಹಲವುವೇಳೆ ಪ್ರಾಣಿ ಮಲ ಮತ್ತು ಹುಲ್ಲುಮೆತ್ತೆಯ ಒಣಹುಲ್ಲಿನ ಮಿಶ್ರಣವಾಗಿರುತ್ತದೆ, ಈ ಉದಾಹರಣೆಯಲ್ಲಿ ಕುದುರೆ ಲಾಯದಿಂದ ಇರುವಂತೆ.
ಪ್ರಾಣಿಗಳ ಗೊಬ್ಬರದಲ್ಲಿ ಅವುಗಳ ಮಲ ಹಾಗು ಮೂತ್ರವನ್ನು ಹೀರಿಕೊಳ್ಳುವ ಗಿಡದ ಭಾಗಗಳು ಸಹ ಸೇರಿಕೊಳ್ಳುತ್ತವೆ

ಗೊಬ್ಬರ ಎಂದರೆ ಸಸ್ಯಕ್ಕೆ ಅವಶ್ಯವಿರುವ ಯಾವುದೋ ಒಂದು ಅಥವಾ ಅಧಿಕ ಪೋಷಕಗಳನ್ನು ಒದಗಿಸುವ ಉದ್ದೇಶದಿಂದ ಮತ್ತು ಅಗತ್ಯವಿದ್ದಲ್ಲಿ ಮಣ್ಣಿನ ಭೌತಗುಣವನ್ನು ಉತ್ತಮಗೊಳಿಸುವ ಸಲುವಾಗಿ ಉಪಯೋಗಿಸುವ ಪದಾರ್ಥ. ಇದನ್ನು ವ್ಯವಸಾಯದಲ್ಲಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಲು ಉಪಯೋಗಿಸುತ್ತಾರೆ. ಇದರಿಂದ ಮಣ್ಣಿನಲ್ಲಿರುವ ಗೊಬ್ಬರವಾಗುವ ಕೊಳೆತ ಸೇಂದ್ರಿಯ ವಸ್ತುಗಳು ಹೆಚ್ಚುತ್ತವೆ. ಸಸ್ಯದ ಉತ್ತಮ ಬೆಳೆವಣಿಗೆಗೆ ಹಲವಾರು ಮೂಲ ವಸ್ತಗಳು ಅವಶ್ಯ. ಇವುಗಳ ಪೈಕಿ ಕೆಲವನ್ನು ಅದು ಮಣ್ಣಿನಿಂದಲೂ, ಉಳಿದವನ್ನು ನೀರು ಮತ್ತು ವಾಯುವಿನಿಂದಲೂ ಪಡೆಯುತ್ತದೆ. ಈ ಮೂಲವಸ್ತುಗಳಿಗೆ ಸಸ್ಯಪೋಷಕಗಳು (ಪ್ಲಾಂಟ್ ನ್ಯೂಟ್ರಿಯೆಂಟ್ಸ್) ಎಂದು ಹೆಸರು. ಇವನ್ನು ಪ್ರಧಾನ ಸಸ್ಯಪೋಷಕಗಳು ಮತ್ತು ಗೌಣ ಸಸ್ಯಪೋಷಕಗಳು ಎಂಬುದಾಗಿ ವಿಭಾಗಿಸಬಹುದು. ಕಾರ್ಬನ್, ಹೈಡ್ರೊಜನ್, ಆಕ್ಸಿಜನ್, ನೈಟ್ರೊಜನ್, ಫಾಸ್ಫರಸ್, ಪೊಟಾಸಿಯಮ್, ಸಲ್ಫರ್, ಕ್ಯಾಲ್ಸಿಯಮ್ ಮತ್ತು ಮೆಗ್ನೀಸಿಯಮ್ ಪ್ರಧಾನ ಸಸ್ಯಪೋಷಕಗಳು. ಕಬ್ಬಿಣ, ಮ್ಯಾಂಗನೀಸ್, ಬೊರಾನ್, ಸತು, ತಾಮ್ರ ಮತ್ತು ಮಾಲಿಬ್ಡಿನಮ್ ಗೌಣ ಸಸ್ಯ ಪೋಷಕಗಳು. ಪೋಷಕಗಳ ಪೈಕಿ ಹೆಚ್ಚಿನವು ಮಣ್ಣಿನಿಂದಲೇ ಸಸ್ಯಕ್ಕೆ ಒದಗುತ್ತವೆ. ಆದರೆ ಮಣ್ಣಿನಲ್ಲಿ ಇವು ಸಾಕಷ್ಟು ಪರಿಮಾಣದಲ್ಲಿ ಇಲ್ಲದಾಗ ಅಥವಾ ಹಾಗಿರುವಾಗಲೂ ಸಸ್ಯ ಇವನ್ನು ಹೀರುವ ಸ್ಥಿತಿಯಲ್ಲಿ ಇಲ್ಲದಾಗ ಸಸ್ಯಾವಶ್ಯಕತೆಗಳನ್ನು ಪೂರೈಸಲು ಗೊಬ್ಬರವನ್ನು ಬಳಸಬೇಕಾಗುತ್ತದೆ.

ಗೊಬ್ಬರದಲ್ಲಿ ಎರಡು ಬಗೆ-ಸಾವಯವ (ಆರ್ಗ್ಯಾನಿಕ್) ಗೊಬ್ಬರ, ಕೃತಕ ಇಲ್ಲವೇ ನಿರವಯವ (ಇನಾರ್ಗ್ಯಾನಿಕ್) ಗೊಬ್ಬರ. ಗೊಬ್ಬರದ ಮುಖ್ಯಲಕ್ಷಣಗಳನ್ನು ಮುಂದೆ ಪಟ್ಟಿ ಮಾಡಿದೆ:

  1. ಮನುಷ್ಯ ಹಾಗೂ ಪ್ರಾಣಿಗಳು ವಿಸರ್ಜಿಸುವ ವಸ್ತುಗಳಿಂದಲೂ, ಸಸ್ಯಗಳಿಂದಲೂ ತಯಾರಾಗುತ್ತದೆ. ಉದಾಹರಣೆ-ಹಟ್ಟಿ ಗೊಬ್ಬರ, ಕಾಂಪೋಸ್ಟ್ ಗೊಬ್ಬರ.
  2. ಇದರಲ್ಲಿ ನೈಟ್ರೊಜನ್, ಫಾಸ್ಫರಸ್ ಮತ್ತು ಪೊಟಾಷುಗಳ ಪ್ರಮಾಣ ಕಡಿಮೆ. ಗೌಣ ಪೋಷಕಗಳೂ ಸ್ವಲ್ಪ ಇವೆ.
  3. ರೈತ ತನ್ನ ಹಿಡುವಳಿಯಲ್ಲಿ ಸ್ವಪ್ರಯತ್ನದಿಂದ ತಯಾರಿಸಬಹುದು.
  4. ಇದರಲ್ಲಿ ಅಡಕವಾಗಿರುವ ಪೋಷಕಗಳನ್ನು ಸಸ್ಯ ನಿಧಾನವಾಗಿ ಹೀರುತ್ತದೆ.

ಗೊಬ್ಬರವು ಮಣ್ಣಿನಲ್ಲಿ ಕಡಿಮೆಯಾದಾಗ ಮಣ್ಣು ನುಸುಳಾಗಿರುವ ಬದಲು ಬಿರುಸಾಗುತ್ತದೆ. ಅಂಥ ಮಣ್ಣಿನಲ್ಲಿ ಬೆಳೆಯುವ ಸಸ್ಯಕ್ಕೆ ಅನಾವೃಷ್ಟಿಯನ್ನು ಎದುರಿಸುವ ಸಾಮರ್ಥ್ಯವಿರುವುದಿಲ್ಲ.

ಸಾವಯವ ಅಥವಾ ನಿರವಯವ ಗೊಬ್ಬರಗಳಲ್ಲಿ ಯಾವುದು ಉತ್ತಮ ಎಂಬುದಕ್ಕೆ ಪ್ರಯೋಗಗಳು

  • ಸಾವಯವ ಅಥವಾ ನಿರವಯವ ಗೊಬ್ಬರಗಳಲ್ಲಿ ಯಾವುದು ಉತ್ತಮ ಎಂಬ ಸಮಸ್ಯೆಯನ್ನು ಪರಿಹರಿಸಲು ಇಂಗ್ಲೆಂಡಿನ ರೋಥಂಸ್ಟೆಡ್ ವ್ಯವಸಾಯ ಕೇಂದ್ರದಲ್ಲಿ ಒಂದು ಪ್ರಯೋಗವನ್ನು ಮಾಡಿ ನೋಡಿದ್ದಾರೆ. ಎರಡು ಸರ್ವಸಮ ಹಿಡುವಳಿಗಳನ್ನು ಆಯ್ದು ಒಂದಕ್ಕೆ ಸಾವಯವ ಗೊಬ್ಬರವನ್ನೂ ಇನ್ನೊಂದಕ್ಕೆ ನಿರವಯವ ಗೊಬ್ಬರವನ್ನೂ ನಿಗದಿಮಾಡಿದ ಗಾತ್ರದಲ್ಲಿ ಪೂರೈಕೆಮಾಡುತ್ತ ಗೋದಿಯನ್ನು ಬೆಳೆಸಿದರು. 150 ವರ್ಷಗಳ ಕಾಲ ಮಾಡಿದ ಪ್ರಯೋಗದಿಂದ ಲಭಿಸಿದ ಗೋದಿಯ ಫಸಲನ್ನು ಹೋಲಿಸಿ ನೋಡಿದಾಗ ನಿರವಯವ ಭೂಮಿಯಿಂದ ಸರಾಸರಿ ವಾರ್ಷಿಕ ಇಳುವರಿ ಎಕರೆಗೆ 36.3 ಬುಷಲುಗಳಾದರೆ ಸಾವಯವ ಭೂಮಿಯಿಂದ ಇದು 33.2 ಬುಷಲುಗಳಾದುವು. ಅಲ್ಲಿಗೆ ನಿರವಯವ ಗೊಬ್ಬರವು ಗೋದಿಯ ಇಳುವರಿಯನ್ನು ಸುಮಾರು 10%ರಷ್ಟು ಅಭಿವೃದ್ಧಿಪಡಿಸುವುದು ಎಂದಾಯಿತು.
  • ಭಾರತ ಸರ್ಕಾರದ ವತಿಯಿಂದ ಪೂಸಾ ವ್ಯವಸಾಯ ಸಂಶೋಧನಾ ಕೇಂದ್ರದಲ್ಲಿ ಹಲವಾರು ವರ್ಷಗಳ ಕಾಲ ನಡೆಸಿದ ಇದೇ ತರಹದ ಪ್ರಯೋಗ ನಿರವಯವ ಹಾಗೂ ಸಾವಯವ ಭೂಮಿಗಳ ಇಳುವರಿಗಳಲ್ಲಿ ಯಾವ ವ್ಯತ್ಯಾಸವನ್ನೂ ತೋರಿಸಲಿಲ್ಲ. ನಿರವಯವ ಗೊಬ್ಬರದ ಬಳಕೆಯಿಂದ ಮಣ್ಣಿನ ಫಲವಂತಿಕೆ ಕೆಡುವುದಿಲ್ಲ ಎಂದು ಇಂಥದೇ ಇತರ ಪ್ರಯೋಗಗಳಿಂದ ವೇದ್ಯವಾಗಿದೆ. ತಮಿಳುನಾಡಿನಲ್ಲಿ ಮಾಡಿದ ಒಂದು ದೀರ್ಘಕಾಲೀನ ಪ್ರಯೋಗದಿಂದ ತಿಳಿದಿರುವ ಅಂಶವಿಷ್ಟು: 36 ವರ್ಷಗಳವರೆಗೆ ಹಟ್ಟಿಗೊಬ್ಬರ (ಅಂದರೆ ಸಾವಯವ ಗೊಬ್ಬರ) ಕೃತಕ ಗೊಬ್ಬರದಷ್ಟು (ಅಂದರೆ ನಿರವಯವ ಗೊಬ್ಬರ) ಉತ್ತಮ ಫಲ ನೀಡಲಿಲ್ಲ; 37ನೆಯ ವರ್ಷದಿಂದ ಮುಂದಕ್ಕೆ ಸಾವಯವ ಗೊಬ್ಬರವೇ ಉತ್ತಮವೆಂದು ಗೊತ್ತಾಯಿತು. ಪೂಸಾದಲ್ಲಿ ನಡೆಸುತ್ತಿರುವ ಖಾಯಂ ಪ್ರಯೋಗಗಳಲ್ಲಿಯೂ 22 ವರ್ಷಗಳವರೆಗೆ ನಿರವಯವ ಗೊಬ್ಬರ ಹೆಚ್ಚು ಪ್ರಯೋಜನಕಾರಿಯಾಗಿದ್ದು ಮುಂದಕ್ಕೆ ಸಾವಯವ ಗೊಬ್ಬರವೇ ಹೆಚ್ಚು ಪ್ರಯೋಜನಕಾರಿ ಎಂದು ತಿಳಿದು ಬಂದಿದೆ. ಸಾವಯವ ಗೊಬ್ಬರ ಭೂಮಿಯ ಭೌತಗುಣದ ಮೇಲೆ ಉಂಟುಮಾಡುವ ಪರಿಣಾಮ ಮತ್ತು ಆ ಗೊಬ್ಬರದಲ್ಲಿರುವ ಗೌಣ ಪೋಷಕಗಳು ಇದರ ಕಾರಣವಾಗಿರಬೇಕು. ಆದ್ದರಿಂದ ನಿರವಯವ ಗೊಬ್ಬರವನ್ನು ಸೂಕ್ತ ಪರಿಮಾಣದಲ್ಲಿ ಯೋಗ್ಯ ಕ್ರಮವರಿತು ಪೂರೈಸುವುದರಿಂದ ಮಣ್ಣಿನ ಫಲವಂತಿಕೆಯನ್ನು ಕಾಪಾಡಿಕೊಂಡು ಅಧಿಕ ಇಳುವರಿಯನ್ನು ಪಡೆಯಬಹುದು. ಅಂದರೆ, ಸಾವಯವ ಹಾಗೂ ನಿರವಯವ ಗೊಬ್ಬರಗಳ ಯುಕ್ತ ಮಿಶ್ರಣ ಸರ್ವಶ್ರೇಷ್ಠ.

ನಿರವಯವ ಗೊಬ್ಬರದ ಪ್ರಯೋಜನಗಳು: ನಿರವಯವ ಗೊಬ್ಬರ ಬೆಳೆಯ ಗುಣವನ್ನು ಕೆಡಿಸುತ್ತದೆ, ಫಸಲಿನ ರುಚಿಯಲ್ಲಿ ಕುಂದು ಉಂಟಾಗುತ್ತದೆ ಎಂಬ ದೂರು ಉಂಟು. ರುಚಿ ತೀರ ವ್ಯಕ್ತಿನಿಷ್ಠ ಗುಣವಾದ್ದರಿಂದ ಇದನ್ನು ಕುರಿತು ಖಚಿತವಾಗಿ ಏನನ್ನೂ ಹೇಳಲಾಗುವುದಿಲ್ಲ. ನಿರವಯವ ಗೊಬ್ಬರದ ಉಪಯೋಗದಿಂದ ಬೆಳೆಯ ಗುಣಮಟ್ಟ-ಅಂದರೆ ಪ್ರೋಟೀನುಗಳ ಹಾಗೂ ವಿಟಮಿನುಗಳ ಅಂಶ, ಇತ್ಯಾದಿ-ಏರಿದೆ ಎಂದು ರಾಸಾಯನಿಕ ವಿಶ್ಲೇಷಣೆಯಿಂದ ತಿಳಿದಿದೆ. ಶೇಂಗಾ ಮತ್ತು ಸಾಸಿವೆ ಶೇಕಡ ತೈಲಾಂಶ ಹೆಚ್ಚಾದ ವರದಿಯೂ ಉಂಟು. ಹೊಗೆಸೊಪ್ಪಿನಲ್ಲಿ ಬೆಂಕಿಯನ್ನು ದೀರ್ಘಕಾಲ ತಡೆದು ಹಿಡಿದುಕೊಳ್ಳುವ ಗುಣ ವೃದ್ಧಿ ಆದದ್ದೂ ತಿಳಿದುಬಂದಿದೆ.

ಮಣ್ಣಿನಲ್ಲಿ ಗೊಬ್ಬರಗಳ ಪ್ರಮಾಣ ಎಷ್ಟು ಪ್ರಮಾಣದಲ್ಲಿರಬೇಕು: ಯಾವ ಮಣ್ಣಿಗೆ ಎಂಥ ಗೊಬ್ಬರವನ್ನು ಎಷ್ಟು ಪರಿಮಾಣದಲ್ಲಿ ಪೂರೈಸಬೇಕು ಎನ್ನುವ ಪ್ರಶ್ನೆಗೆ ಸಾರ್ವತ್ರಿಕ ಉತ್ತರ ಒಂದೇ-ಸರ್ಕಾರದ ವತಿಯಿಂದ ಅಲ್ಲಲ್ಲಿ ನಡೆಸಲಾಗುತ್ತಿರುವ ಸ್ಥಾಯೀ ಹಾಗೂ ಸಂಚಾರೀ ಮಣ್ಣು ಪರೀಕ್ಷಣಾ ಪ್ರಯೋಗಾಲಯಗಳಿಗೆ ಮಣ್ಣಿನ ಪ್ರತಿಚಯವನ್ನು (ಸ್ಯಾಂಪಲ್) ಕಳಿಸಿ ವೈಜ್ಞಾನಿಕ ಪರೀಕ್ಷಣೆಗೆ ಅದನ್ನು ಒಳಪಡಿಸಿ ತಿಳಿದುಕೊಳ್ಳಬೇಕು. ಯಾವುದೇ ಗೊಬ್ಬರವನ್ನು ಹೊಲಕ್ಕೆ ಹಾಕಿ ಬೆಳೆ ತೆಗೆದ ಬಳಿಕ ಮಣ್ಣಿನಲ್ಲಿ ಉಳಿಯುವ ಗೊಬ್ಬರದ ಅಂಶ ಎಷ್ಟು ಎನ್ನುವುದೊಂದು ಕುತೂಹಲಕಾರಿ ಪ್ರಶ್ನೆ. ಇದರ ಉತ್ತರ ಗೊಬ್ಬರದ ಗುಣವನ್ನು ಅವಲಂಬಿಸಿದೆ. ಸಾಮಾನ್ಯವಾಗಿ ಒಂದು ಸಲ ಗೊಬ್ಬರ ನೀಡಿ ನಾಲ್ಕು ಬೆಳೆಗಳನ್ನು ತೆಗೆದ ಬಳಿಕ ಮಣ್ಣಿನಲ್ಲಿ ಆ ಗೊಬ್ಬರದ ಅಂಶ ವಿಶೇಷವಾಗಿ ಏನೂ ಉಳಿದಿರುವುದಿಲ್ಲ ಎನ್ನಬಹುದು. ಅಮೋನಿಯಮ್ ಸಲ್ಫೇಟ್, ಯೂರಿಯಾ ಮುಂತಾದ ಸಾರಜನಕಯುತ ಕೃತಕ ಗೊಬ್ಬರಗಳನ್ನು ಮಣ್ಣಿಗೆ ಹಾಕಿ ಒಂದು ಬೆಳೆ ತೆಗೆದ ಬಳಿಕ ಅವುಗಳ ಅಂಶ ಮಣ್ಣಿನಲ್ಲಿ ಏನೂ ಉಳಿದಿರುವುದಿಲ್ಲ ಎಂದು ತಿಳಿದು ಬಂದಿದೆ. ರಂಜಕ ಮತ್ತು ಪೊಟಾಷ್ ಗೊಬ್ಬರಗಳ ಸ್ವಲ್ಪಾಂಶ ಉಳಿದಿರುತ್ತದೆ. ಸಾವಯವ ಗೊಬ್ಬರದ ವಿಚಾರ ಹೀಗಲ್ಲ. ಒಂದು ಬೆಳೆ ತೆಗೆದ ಬಳಿಕ ಮೊದಲು ಪೂರೈಸಿದುದರ ಸುಮಾರು ಅರ್ಧಾಂಶವೂ, ಎರಡು ಬೆಳೆ ತೆಗೆದ ಬಳಿಕ ಸುಮಾರು ಕಾಲು ಅಂಶವೂ ಉಳಿದಿರುತ್ತದೆ.

ಗೊಬ್ಬರದ ವಿಧಗಳು

[ಬದಲಾಯಿಸಿ]

ಸಾವಯವ ಗೊಬ್ಬರವನ್ನು ಸಾಮಾನ್ಯವಾಗಿ ಹಟ್ಟಿಗೊಬ್ಬರ (pinfold manure), ವಿವಿಧ ಸಾಕು ಪ್ರಾಣಿ ಗೊಬ್ಬರ, ಕಾಂಪೋಸ್ಟ್ ಗೊಬ್ಬರ, ಎಲೆ ಗೊಬ್ಬರ, ಹಿಂಡಿ ಗೊಬ್ಬರ, ಕಸಾಯಿಖಾನೆ ಗೊಬ್ಬರ, ಹ್ಯೂಮಸ್ ಗೊಬ್ಬರ ಮತ್ತು ಹಿತ್ತಲಗೊಬ್ಬರ ಎಂದು ವಿಭಾಗಿಸುವುದುಂಟು.

ಹಟ್ಟಿ ಗೊಬ್ಬರ

[ಬದಲಾಯಿಸಿ]

ಎಮ್ಮೆ, ದನ, ಕರು ಮುಂತಾದವುಗಳ ಸಗಣಿ, ಗಂಜಳದ ಜೊತೆಗೆ ಕೊಟ್ಟಿಗೆಯಲ್ಲಿ ಬಿದ್ದಿರುವ ಕಸಕಡ್ಡಿಗಳನ್ನೂ, ಕೊಟ್ಟಿಗೆಗೆ ಹಾಸಿರುವ ಎಲೆ, ಹುಲ್ಲು ಮುಂತಾದವನ್ನೂ ಸಂಗ್ರಹಿಸಿ ತಯಾರಿಸಿದ ಗೊಬ್ಬರವಿದು.[] ಸಾಮಾನ್ಯವಾಗಿ ಈ ಪದಾರ್ಥವನ್ನು ದಿನಕ್ಕೊಂದಾವರ್ತಿ ಇಲ್ಲವೇ ವಾರದಲ್ಲಿ ಎರಡು ಮೂರಾವರ್ತಿ ಕೊಟ್ಟಿಗೆಯಿಂದ ಬಾಚಿ ಹೊರಗೆ ತೆರೆಜಾಗದಲ್ಲಿ ರಾಶಿ ಹಾಕುತ್ತಾರೆ. ಇದರಿಂದ ಗಂಜಳ ಹರಿದು ಹಿಂಗಿ ನಾಶವಾಗುತ್ತದೆ. ಬಿಸಿಲು, ಗಾಳಿ, ಮಳೆ ಹೊಡೆತದಿಂದ ಗೊಬ್ಬರದಲ್ಲಿನ ಇತರ ಸಸ್ಯಪೋಷಕಾಂಶಗಳೂ ನಷ್ಟಗೊಂಡು ಉಳಿಯುವ ಗೊಬ್ಬರ ಬಹುಮಟ್ಟಿಗೆ ಸಾರಹೀನವಾಗುವುದು. ದೊಡ್ಡದಾಗಿ ಗುಂಡಿ ತೋಡಿ ಅದರ ಒಳಮೈಯನ್ನು ನುಣ್ಣಗೆ ಸಾರಣೆ ಮಾಡಿ ಅದರೊಳಗೆ ಹಟ್ಟಿಗೊಬ್ಬರ ಸಂಗ್ರಹಿಸುವುದು ಯೋಗ್ಯಕ್ರಮ. ಇಂಥ ಗೊಬ್ಬರದ ಮೇಲ್ಪದರವನ್ನು ಎಲೆ, ಹುಲ್ಲು, ಮಣ್ಣು ಮುಂತಾದವುಗಳಿಂದ ಮೆತ್ತಿ ಗೊಬ್ಬರ ನೇರವಾಗಿ ಗಾಳಿ ಬೆಳಕಿಗೆ ಈಡಾಗದಂತೆ ತಡೆಯಬೇಕು. ಗಂಜಳವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಇದೇ ಗುಂಡಿಗೆ ಸುರಿಯಬಹುದು. ಅವಶ್ಯವಿದ್ದಲ್ಲಿ ನೀರನ್ನು ಸುರಿಯಬಹುದು. ಸ್ವಲ್ಪ ತಿಂಗಳುಗಳ ಕಾಲದಲ್ಲಿ ಈ ಮಿಶ್ರಣ ಒಳಗೇ ಹಳಸಿ ಹದ ಬಂದು ಉತ್ತಮ ಗೊಬ್ಬರವಾಗುತ್ತದೆ. ಇಂಥ ಗೊಬ್ಬರದಲ್ಲಿ 1.25% ನೈಟ್ರೊಜನ್ ಇರುವುದು.[] ಜಾನುವಾರುಗಳ ಮೇವು ಮತ್ತು ಆಹಾರವನ್ನು ಹೊಂದಿಕೊಂಡು ಗೊಬ್ಬರದಲ್ಲಿರುವ ಪೋಷಕಗಳಲ್ಲಿ ವ್ಯತ್ಯಾಸವಾಗುತ್ತದೆ. ಹಿಂಡಿ, ಧಾನ್ಯ ಮತ್ತು ಶೇಂಗಾ ಹೊಟ್ಟು ತಿನ್ನುವ ಜಾನುವಾರುಗಳ ಗೊಬ್ಬರವು ಕೇವಲ ಹಸಿರು ಹುಲ್ಲು, ಬೈಹುಲ್ಲು ಇಲ್ಲವೇ ಮುಳಿ ಹುಲ್ಲು ತಿನ್ನುವ ಜಾನುವಾರುಗಳ ಗೊಬ್ಬರಕ್ಕಿಂತ ಉತ್ಕೃಷ್ಟವಾಗಿರುತ್ತದೆ. ಜಿಪ್ಸಂ ಅಂದರೆ ಕ್ಯಾಲ್ಸಿಯಮ್ ಸಲ್ಫೇಟನ್ನು ಗೊಬ್ಬರದೊಡನೆ ಬೆರೆಸಿ ಅದರಲ್ಲಿರುವ ನೈಟ್ರೊಜನ್ ನಷ್ಟವಾಗದಂತೆ ನೋಡಿಕೊಳ್ಳಬಹುದು. ಸೂಪರ್‌ಫಾಸ್ಫೇಟನ್ನು ಮಿಶ್ರ ಮಾಡಿದರೆ ಹಟ್ಟಿಗೊಬ್ಬರ ಇನ್ನಷ್ಟು ಉತ್ತಮಗೊಳ್ಳವುದು. ಚೆನ್ನಾಗಿ ಕೊಳೆತ ಹಟ್ಟಿಗೊಬ್ಬರವನ್ನು ಎಕರೆಗೆ ಸಾಮಾನ್ಯವಾಗಿ 5 ಗಾಡಿಯಂತೆ ಖುಷ್ಕಿ ಬೆಳೆಗೂ, 10 ಗಾಡಿಯಂತೆ ನೀರಾವರಿ ಬೆಳೆಗೂ ಉಪಯೋಗಿಸಿದರೆ ಅನುಕೂಲತಮ ಫಲಿತಾಂಶ ದೊರೆಯುತ್ತದೆ. ಕಬ್ಬು, ಬಟಾಣಿ, ಶುಂಠಿ, ಅರಿಸಿನ, ತರಕಾರಿ, ಫಲವೃಕ್ಷ ಮುಂತಾದ ವಿಶಿಷ್ಟ ಕೃಷಿಯಲ್ಲಿ ಎಕರೆಗೆ 40-50 ಗಾಡಿಗಳಷ್ಟು ಗೊಬ್ಬರವನ್ನು ಉಪಯೋಗಿಸುತ್ತಾರೆ (ಒಂದು ಗಾಡಿ ಗೊಬ್ಬರ -30 ಘ. ಅ. ಅಥವಾ ಅರ್ಧ ಟನ್). ಹಟ್ಟಿ ಗೊಬ್ಬರದ ಒಂದು ವೈಶಿಷ್ಟ್ಯವೆಂದರೆ ಅದರಲ್ಲಿರುವ ನೈಟ್ರೊಜನಿನ 40% ರಷ್ಟು ಭಾಗ ಮಾತ್ರ ಮೊದಲಿನ ಬೆಳೆಗೆ ದೊರೆಯುತ್ತದೆ. ಉಳಿದ ಅಂಶ ಮುಂದಿನ ಬೆಳೆಗೆ ಉಳಿದಿರುತ್ತದೆ.

ಈ ಗೊಬ್ಬರವು ದನ, ಎಮ್ಮೆ, ಚಮರೀಮೃಗ (ಯಾಕ್) ಎಂಬ ಪ್ರಾಣಿಗಳಿಂದ ಬರುವ ತ್ಯಾಜ್ಯ ಉತ್ಪನ್ನ. ಸಗಣಿಯು ಈ ಪ್ರಾಣಿಗಳು ತಿನ್ನುವಂತಹ ಗಿಡದ ಭಾಗಗಳ ಜೀರ್ಣಗೊಳ್ಳದ ಶೇಷ. ಇದರಲ್ಲಿ ಖನಿಜಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಸಗಣಿಯನ್ನು ಎರೆಹುಳುಗಳು ಅಥವಾ ಸಗಣಿ ಜೀರುಂಡೆಗಳು ಪುನರುಪಯೋಗಿಸದಿದ್ದರೆ ಅದು ಒಣಗುತ್ತದೆ. ಇದರ ಮೇಲೆ ದನದ ಮೇವು ಒಳ್ಳೆಯ ರೀತಿಯಲ್ಲಿ ಬೆಳೆಯುತ್ತದೆ. ಪ್ರಪಂಚದ ವಿವಿಧ ಭಾಗಗಳಲ್ಲಿ ಒಣಗಿದ ಸಗಣಿಯನ್ನು ಇಂಧನವನ್ನಾಗಿ ಉಪಯೋಗಿಸುತ್ತಾರೆ. ಸಗಣಿಯನ್ನು ಜೈವಿಕ ಅನಿಲವನ್ನು ಉತ್ಪತ್ತಿಮಾಡಲು ಉಪಯೋಗಿಸುತ್ತಾರೆ. ಇದರಿಂದ ವಿದ್ಯುತ್ ತಯಾರಿಸಬಹುದು. ಈ ಜೈವಿಕ ಅನಿಲದಲ್ಲಿ ಮೀಥೇನ್ ಹೆಚ್ಚಾಗಿದ್ದು, ಇದನ್ನು ದೇಶದ ಗ್ರಾಮೀಣ ಭಾಗಗಳಲ್ಲಿ ನವೀಕರಿಸಬಹುದಾದ ವಿದ್ಯುತ್ ಮೂಲವನ್ನಾಗಿ ಉಪಯೋಗಿಸುತ್ತಾರೆ. ಆಫ್ರಿಕಾದ ಕೆಲವು ಭಾಗಗಳಲ್ಲಿ ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಸುಟ್ಟ ಸಗಣಿಯನ್ನು ಉಪಯೋಗಿಸುತ್ತಾರೆ. ಭಾರತದ ಹಳ್ಳಿಗಳಲ್ಲಿ ಸಗಣಿಯನ್ನು ನೀರಿನ ಜೊತೆ ಬೆರೆಸಿ ಮನೆ ಮುಂದೆ ಸಿಂಪಡಿಸುತ್ತಾರೆ. ಇದರಿಂದ ಕೀಟಗಳು ಕಡಿಮೆಯಾಗುತ್ತವೆ. ಒಣಗಿದ ಸಗಣಿಯನ್ನು ಕಟ್ಟಿಗೆಯ ಬದಲಾಗಿ ಉಪಯೋಗಿಸುತ್ತಾರೆ. ಸಗಣಿಯು ಅನೇಕ ಪ್ರಾಣಿಗಳು ಹಾಗು ಶಿಲೀಂಧ್ರಗಳ ವರ್ಗಗಳಿಗೆ ಆಹಾರವಾಗುತ್ತದೆ. ಈ ಮೂಲಕ ಅದು ವಿಘಟಿಸಿ ಪುನರುಪಯೋಗಿಸುವ ರೀತಿಯಲ್ಲಿ ಆಹಾರಚಕ್ರ ಹಾಗು ಮಣ್ಣಿನಲ್ಲಿ ಸೇರಿಕೊಳ್ಳುತ್ತದೆ.

ವಿವಿಧ ಸಾಕು ಪ್ರಾಣಿ ಗೊಬ್ಬರ

[ಬದಲಾಯಿಸಿ]

ಕುದುರೆ ಗೊಬ್ಬರ, ಕುರಿ ಗೊಬ್ಬರ, ಕೋಳಿ ಗೊಬ್ಬರ ಮುಂತಾದವು ಈ ವರ್ಗಕ್ಕೆ ಸೇರುತ್ತವೆ.[] ಕೋಳಿ ಕಸವು ನೈಟ್ರೋಜನ್ ಮತ್ತು ಫಾಸ್ಫೇಟ್ ಸಾರವನ್ನು ಬಹಳವಾಗಿ ಹೊಂದಿರುತ್ತದೆ ಹಾಗೂ ಈ ಎರಡೂ ಲಕ್ಷಣಗಾಗಿ ಬಹಳ ಬೆಲೆಬಾಳುತ್ತದೆ.[] ಇವೆಲ್ಲವೂ ಸಾರದ ದೃಷ್ಟಿಯಿಂದ ದನದ ಗೊಬ್ಬರಕ್ಕಿಂತ ಉತ್ತಮ. ಆದರೆ ವಿಪುಲವಾಗಿ ಲಭ್ಯವಿಲ್ಲ. ಕುದುರೆ ಗೊಬ್ಬರ ವಿಪರೀತ ಉಷ್ಣಯುತವಾಗಿರುವುದರಿಂದ ಇದರ ಬಳಕೆಯಲ್ಲಿ ಎಚ್ಚರಿಕೆ ತೀರ ಅಗತ್ಯ. ಸಾಮಾನ್ಯವಾಗಿ ತರಕಾರಿ, ಹಣ್ಣು, ಹೂ ಬೇಸಾಯದಲ್ಲಿ ಸಾಕುಪ್ರಾಣಿ ಗೊಬ್ಬರವನ್ನು ಬಳಸುತ್ತಾರೆ.

ಹಂದಿಗಳು, ಕುರಿ, ಕೋಳಿಗಳು, ಮೊಲಗಳು, ಬಾವಲಿಗಳು ಇನ್ನಿತರ ಜೀವಿಗಳಿಂದ ಬರುವ ಗೊಬ್ಬರಗಳಲ್ಲಿ ತಮ್ಮದೇ ಆದ ವಿವಿಧ ಲಕ್ಷಣಗಳಿರುತ್ತವೆ. ಕುರಿ ಗೊಬ್ಬರದಲ್ಲಿ ಸಾರಜನಕ ಹಾಗು ಪೊಟ್ಯಾಷ್ ಹೆಚ್ಚಿನ ಪ್ರಮಾಣದಲ್ಲಿದ್ದು, ಹಂದಿಯ ಗೊಬ್ಬರದಲ್ಲಿ ಈ ಎರಡು ಸಹ ಕಡಿಮೆ ಪ್ರಮಾಣದಲ್ಲಿದೆ. ಕುದುರೆಗಳು ಮುಖ್ಯವಾಗಿ ಹುಲ್ಲು ಹಾಗು ಅಲುಬುಗಳನ್ನು ತಿನ್ನುವುದರಿಂದ ಅದರ ಗೊಬ್ಬರದಲ್ಲಿ ಹುಲ್ಲು ಹಾಗು ಅಲುಬುಗಳ ಬೀಜಗಳು ಸಹ ಇರುತ್ತದೆ. ಏಕೆಂದರೆ ಅವು ದನಗಳಂತೆ ಬೀಜಗಳನ್ನು ಜೀರ್ಣಿಸಿಕೊಳ್ಳುವುದಿಲ್ಲ. ಪ್ರಾಣಿಗಳ ಗೊಬ್ಬರವು ಅವುಗಳ ಇತರ ಉತ್ಪನ್ನಗಳಾದ ಉಣ್ಣೆ, ರಕ್ತ, ಮೂಳೆ, ಪುಕ್ಕಗಳಿಂದ ಮಲಿನಗೊಳ್ಳುವ ಸಾಧ್ಯತೆಗಳು ಸಹ ಇದೆ.

ಇತರ ಪ್ರಾಣಿಗಳ ಗೊಬ್ಬರವು ಸಹ ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ. ಇದರಿಂದ ಗಿಡಗಳ ಪೌಷ್ಟಿಕಾಂಶಗಳು ಸಹ ಹೆಚ್ಚುತ್ತದೆ. ವಾಸನೆ ಬರುವಂತಹ ಗೊಬ್ಬರಗಳನ್ನು ಮಣ್ಣಿನೊಳಗೆ ಚುಚ್ಚುತ್ತಾರೆ. ಇದರಿಂದಾಗಿ ಅದರ ವಾಸನೆ ಕಡಿಮೆಯಾಗುತ್ತದೆ. ತರಕಾರಿಗಳಲ್ಲಿ ಕಡಿಮೆ ಮಟ್ಟದ ಪ್ರೋಟೀನ್ ಇರುವುದರಿಂದ ಸಸ್ಯಾಹಾರಿ ಮೂಲದ ಗೊಬ್ಬರದ ವಾಸನೆ ಮಾಂಸಾಹಾರಿ ಹಾಗು ಸರ್ವಭಕ್ಷಕಗಳಿಂದ ಬರುವ ವಾಸನೆಗಿಂತ ಕಡಿಮೆಯಾಗಿರುತ್ತದೆ. ಆದರೂ ಸಹ ಆಮ್ಲಜನಕವಿಲ್ಲದೆ ಹುದುಗುವಿಕೆಯಾದಂತಹ ಸಸ್ಯಾಹಾರಿ ಗೊಬ್ಬರವು ದುರ್ವಾಸನೆಯನ್ನು ನೀಡುತ್ತದೆ. ಕೋಳಿ ಹಿಕ್ಕೆಗಳನ್ನು ಸಹ ಕೊಳೆತ ನಂತರವೇ ಉಪಯೋಗಿಸಬೇಕು. ಹಸಿ ಗೊಬ್ಬರವನ್ನು ಉಪಯೋಗಿಸುವುದರಿಂದ ಗಿಡಗಳಿಗೆ ಹಾನಿಯಾಗುತ್ತದೆ.

ಕೋಳಿ ಗೊಬ್ಬರ: ಕೋಳಿ ಗೊಬ್ಬರದಲ್ಲಿ ಸಾರಜನಕ ಹೆಚ್ಚಾಗಿದ್ದು, ಕಡಿಮೆ ಸಾರಜನಕವಿರುವ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಉಪಯೋಗಿಸುತ್ತಾರೆ. ಬೇರೆ ಪ್ರಾಣಿಗಳ ಗೊಬ್ಬರಗಳಿಗೆ ಹೋಲಿಸಿದರೆ ಇದರಲ್ಲಿ ಸಾರಜನಕ, ಪೊಟ್ಯಾಶಿಯಮ್, ರಂಜಕ ಈ ಎಲ್ಲವೂ ಹೆಚ್ಚಿನ ಪ್ರಮಾಣದಲ್ಲಿದೆ. ಈ ಗೊಬ್ಬರವನ್ನು ಮುಚ್ಚಿದ ಸ್ಥಳದಲ್ಲಿ ಇಡಬೇಕು ಹಾಗು ಅದು ತನ್ನ ದ್ರವ ರೂಪವನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು, ಏಕೆಂದರೆ ಅದರ ಮೂತ್ರದಲ್ಲಿಯೇ ಹೆಚ್ಚಿನ ಪ್ರಮಾಣದ ಸಾರಜನಕವಿದೆ. ಕೋಳಿ ಗೊಬ್ಬರದಲ್ಲಿ ಶೇಕಡವಾರು ೫ ರಷ್ಟು ಸಾರಜನಕವಿರುತ್ತದೆ. ಒಂದು ಕೋಳಿ ಸುಮಾರು ೮-೧೧ ಪೌಂಡ್ ಗೊಬ್ಬರವನ್ನು ನೀಡುತ್ತದೆ. ಇದನ್ನು ಉಪಯೋಗಿಸಿ ಮನೆಯಲ್ಲಿಯೇ ರಸಗೊಬ್ಬರವನ್ನು ತಯಾರಿಸಬಹುದು.

ಕಾಂಪೋಸ್ಟ್ ಗೊಬ್ಬರ

[ಬದಲಾಯಿಸಿ]

ಕೃಷಿ ಕ್ಷೇತ್ರದಿಂದ ದೊರೆಯುವ ಮತ್ತು ಜಾನುವಾರು ಕೊಟ್ಟಿಗೆಯಿಂದ ವಿಸರ್ಜಿತವಾಗುವ ಪದಾರ್ಥಗಳನ್ನು ಸಂಗ್ರಹಿಸಿ ತಯಾರಿಸುವ ಗೊಬ್ಬರವಿದು. ಸಾಮಾನ್ಯವಾಗಿ ಯಾವುದೇ ಹಿಡುವಳಿಯಲ್ಲಿ ದೊರೆಯುವ ಬೆಳೆಗಳ ಹುಲ್ಲು, ದಂಟು, ಸಿಪ್ಪೆ, ಹೊಟ್ಟು ಇವುಗಳ ಜೊತೆಗೆ ಮರಗಿಡಗಳ ಎಲೆ ಮುಂತಾದವನ್ನು ಕೊಟ್ಟಿಗೆಯಲ್ಲಿ ನೆಲದ ಮೇಲೆ ಹಾಸುತ್ತಾರೆ. ಬೂದಿಯ ಒಂದು ಪದರವನ್ನು ಸಹ ತಳದಲ್ಲಿ ಹಾಸುವುದುಂಟು. ಈ ಹಾಸಿನ ಮೇಲೆ ಜಾನುವಾರು ನಿಂತು ಮಲಗಿ ಸೆಗಣಿ ಹಾಕಿ ಗಂಜಲ ಹೊಯ್ದು ಒಟ್ಟು ಒಂದು ಹದಕ್ಕೆ ಬರುತ್ತದೆ. ಇದನ್ನು ಸುಮಾರು 15' ಉದ್ದ 5' ಅಗಲ 3' ಆಳದ ಹೊಂಡಕ್ಕೆ ಅವಧಿಯುತವಾಗಿ ವರ್ಗಾಯಿಸಿ ಪ್ರತಿಸಲವೂ ಶೇಖರಣೆಯ ಮೇಲ್ಮೈಯ ಮೇಲೆ 5 ಕೆಜಿ ಸೆಗಣಿ, 150 ಗ್ರಾಂ ಬೂದಿ ಮತ್ತು 20 ಲೀಟರ್ ನೀರಿನ ಮಿಶ್ರಣವನ್ನು ಚಿಮುಕಿಸಬೇಕು. ಒಂದು ಪದರದ ದಪ್ಪ ಸುಮಾರು 1.5' ಆದ ಬಳಿಕ ಮೇಲ್ಮೈಯನ್ನು ಸೆಗಣಿ ಮಿಶ್ರಿತ ಮಣ್ಣಿನ ಲೇಪನದಿಂದ ಮುಚ್ಚಬೇಕು. ಈ ಕ್ರಿಯೆಯನ್ನು ಹೊಂಡ ಪೂರ್ತಿ ಆಗುವವರೆಗೂ ಮುಂದುವರಿಸಿ 5-6 ತಿಂಗಳ ಪರ್ಯಂತ ಅದನ್ನು ಹಾಗೆಯೇ ಬಿಡಬೇಕು. ಆಗ ಕಾಂಪೋಸ್ಟ್ ಗೊಬ್ಬರ ಉಪಯೋಗಕ್ಕೆ ಸಿದ್ಧವಾಗಿರುತ್ತದೆ. ವಾಸ್ತವಿಕವಾಗಿ ಹಟ್ಟಿ ಗೊಬ್ಬರದ ಪರಿಷ್ಕೃತ ವಿಧಾನ ಮತ್ತು ರೂಪವೇ ಕಾಂಪೋಸ್ಟ್ ಗೊಬ್ಬರ. ಹೊಂಡದ ಉಪಯೋಗ ಸಾಧ್ಯವಾಗದ ಎಡೆಗಳಲ್ಲಿ ಮಟ್ಟಸ ನೆಲದ ಮೇಲೆಯೇ ಕಾಂಪೋಸ್ಟ್ ಗೊಬ್ಬರವನ್ನು ತಯಾರಿಸಬಹುದು. ಆದರೆ ಇಲ್ಲಿ ಗೊಬ್ಬರದ ಸುತ್ತಲು ಮಣ್ಣಿನ ತೆಳು ಪದರದಿಂದ ಮುಚ್ಚುವುದು ಅಗತ್ಯ. ಅಲ್ಲದೇ ಪದೇ ಪದೇ ರಾಶಿಯನ್ನು ಅಡಿ ಮೇಲು ಕಲಸುತ್ತಿರಬೇಕು. ಕಾಂಪೋಸ್ಟ್ ಗೊಬ್ಬರ ಹಟ್ಟಿಗೊಬ್ಬರಕ್ಕಿಂತಲೂ ಸಾರಯುತವಾದುದ್ದು. ಮಣ್ಣಿನ ಫಲವಂತಿಕೆಯನ್ನು ವೃದ್ಧಿಗೊಳಿಸುವುದರಲ್ಲೂ, ಅಧಿಕ ಇಳುವರಿಯನ್ನು ಸಾಧಿಸುವುದರಲ್ಲೂ ಹೆಚ್ಚು ಪರಿಣಾಮಕಾರಿಯಾದದ್ದು.

ಎಲೆಗೊಬ್ಬರ

[ಬದಲಾಯಿಸಿ]

ಕೆಲವು ವಿಶಿಷ್ಟ ಜಾತಿಯ ಗಿಡ ಮರಗಳಿಂದ ಆಯ್ದ ಹಸಿರು ಎಲೆಗಳ ಒಂದು ಪದರವನ್ನು ಗುಂಡಿಯಲ್ಲಿ ಹಾಸಿ, ಅದರ ಮೇಲೆ ಕೆಮ್ಮಣ್ಣಿನ ಒಂದು ಪದರ, ಅದರ ಮೇಲೆ ಪುನಃ ಎಲೆ ಪದರ ಹೀಗೆಯೇ ಮುಂದುವರಿಸಿ ಗುಂಡಿಯನ್ನು ಭರ್ತಿ ಮಾಡಿ ಅದರ ಒಳಪಿಡಿಯನ್ನು ಕೊಳೆತು ಹದ ಬರಲು ಬಿಟ್ಟಾಗ ದೊರೆಯುವ ಗೊಬ್ಬರ. ಇದು ಸಹ ಹಟ್ಟಿಯ ಗೊಬ್ಬರ ಹಾಗೂ ಕಾಂಪೋಸ್ಟ್ ಗೊಬ್ಬರಗಳಂತೆ ಸುಲಭ ಮತ್ತು ಚಾರಿ.

ಹಸಿರುಗೊಬ್ಬರವೆಂಬ ಹೆಸರಿನ ಇನ್ನೊಂದು ಬಗೆಯನ್ನು ಕೂಡ ಎಲೆಗೊಬ್ಬರದೊಂದಿಗೆ ಹೇಳಬಹುದು. ಗದ್ದೆಯಲ್ಲಿ ಕೆಲವು ವಿಶಿಷ್ಟವಾದ ಹಸಿರು ಗಿಡಗಳನ್ನು ಬೆಳೆಸಿ ಅವು ಹಲುಸಾಗಿರುವಾಗಲೇ ಅವನ್ನು ಉತ್ತು ಮಣ್ಣಿನೊಡನೆ ಮಿಶ್ರ ಮಾಡಿದಾಗ ದೊರೆಯುವ ಗೊಬ್ಬರವಿದು. ಮಣ್ಣಿನ ಫಲವಂತಿಕೆಯನ್ನು ಹೆಚ್ಚಿಸಿ ಮುಂದೆ ಗದ್ದೆಯಲ್ಲಿ ಬೆಳೆಸುವ ಪೈರಿಗೆ ಯೋಗ್ಯ ಸಸ್ಯಪೋಷಕಗಳು ಒದಗುವಂತೆ ಮಾಡುವುದೇ ಇಲ್ಲಿನ ಉದ್ದೇಶ. ಅವರೆ, ಅಲಸಂಡೆ ಮುಂತಾದ ಕಾಳು ಬಿಡುವ ಗಿಡಗಳು (ಲೆಗ್ಯೂಮಿನಿಸ್), ಅಪಸೆಣಬು (ಕ್ರಾಟಲೇರಿಯ ಜನ್ಸಿಯ), ಧೈಂಚ, ಅಗಸೆ, ಬೆಂಡು ಗಿಡ, ಆವರಿಕೆ ಗಿಡ (ಕ್ಯಾಶಿಯ ತೋರಾ), ಗೋಡಿಕಾಯಿ ಗಿಡ, ಕಾಡು ಬಟಾಣಿ ಮುಂತಾದವನ್ನು ಹಸಿರು ಗೊಬ್ಬರಕ್ಕಾಗಿ ಬೆಳೆಸುವುದುಂಟು. ಕಾಡಿನಿಂದ ಕಡಿದು ತಂದ ಎಲೆ, ಎಳೆ ರೆಂಬೆ ಮುಂತಾದವನ್ನು ಗದ್ದೆಯಲ್ಲಿ ಹರಡಿ ಉತ್ತಮ ಹಸಿರು ಗೊಬ್ಬರವನ್ನು ತಯಾರಿಸುವುದೂ ಇದೆ. ಹಸಿರು ಗೊಬ್ಬರದಿಂದ ಉತ್ತಮ ಪ್ರಯೋಜನ ದೊರೆಯಬೇಕಾದರೆ ಉತ್ತು ಮಿಶ್ರ ಮಾಡಿದ ಹಸಿರು ಪದಾರ್ಥ ಚೆನ್ನಾಗಿ ಕೊಳೆತು ಮಣ್ಣಿನೊಡನೆ ಎರಕಗೊಳ್ಳಬೇಕು. ಇಂಥ ಗೊಬ್ಬರದ ಉಪಯೋಗದಿಂದ ಇಳುವರಿಯನ್ನು 30%  -  50%ರ ವರೆಗೆ ಉತ್ತಮಗೊಳಿಸಬಹುದು.

ಇದಕ್ಕೆ ದ್ವಿದಳ ಧಾನ್ಯ ಸಸ್ಯಗಳನ್ನು ಮುಖ್ಯವಾಗಿ ಉಪಯೋಗಿಸುತ್ತಾರೆ. ಇವು ತಮ್ಮ ಬೇರಿನ ಗಂಟಿನಲ್ಲಿರುವ ರೈಜೋಬಿಯಾ ಬ್ಯಾಕ್ಟೀರಿಯದ ಸಹಾಯದಿಂದ ಸಾರಜನಕವನ್ನು ಮಣ್ಣಿನಲ್ಲಿ ನೆಲೆಗೊಳಿಸುತ್ತವೆ. ಹಸಿರು ಗೊಬ್ಬರವನ್ನು ಗಿಡಗಳು ಹೂಗಳನ್ನು ಬಿಡುವ ಮುನ್ನವೇ ಮಣ್ಣಿನಲ್ಲಿ ಸಂಯೋಜಿಸಬೇಕು, ಏಕೆಂದರೆ ಅವುಗಳನ್ನು ಮುಖ್ಯವಾಗಿ ತಮ್ಮ ಹಸಿರು ಎಲೆಗಳಿಗಾಗಿ ಬೆಳೆಸಲಾಗುತ್ತದೆ. ಇದರಿಂದ ಫಲವತ್ತತೆ ಹೆಚ್ಚುತ್ತದೆ. ಇಂತಹ ಉಳುಮೆಯನ್ನು ಬೆಳೆ ನೆಟ್ಟುವ ಮುಂಚೆ ಮಾಡಬೇಕು, ಏಕೆಂದರೆ ಈ ಕ್ರಿಯೆಗೆ ಸಾಕಷ್ಟು ಸಮಯ ಬೇಕಾಗುತ್ತದೆ.

ಹಿಂಡಿ ಗೊಬ್ಬರ

[ಬದಲಾಯಿಸಿ]

ಶೇಂಗ, ಹರಳು, ಎಳ್ಳು, ಹುಚ್ಚೆಳ್ಳು, ಕೊಬ್ಬರಿ, ಹೊಂಗೆ, ಬೇವು ಮುಂತಾದವುಗಳಿಂದ ಎಣ್ಣೆ ಹಿಂಡಿದ ಬಳಿಕ ಉಳಿಯುವ ಚರಟಿನಿಂದ (ಇದೇ ಹಿಂಡಿ) ತಯಾರಿಸಿದ ಗೊಬ್ಬರ (oilcake manure). ಇದನ್ನು ನೇರವಾಗಿ ಬಳಸುವುದು ವಿರಳ. ಒಣ ಹಿಂಡಿಯನ್ನು ಪುಡಿ ಮಾಡಿ ದೊಡ್ಡ ಬಾನಿಗಳಲ್ಲಿ ನೆನೆಹಾಕಿ ಒಂದೆರಡು ದಿವಸ ಕೊಳೆಸಿ ಈ ಮಿಶ್ರಣಕ್ಕೆ ಸಾಕಷ್ಟು ನೀರು ಸೇರಿಸಿ ತೆಳು ಮಾಡಿ ಯುಕ್ತ ಪರಿಮಾಣದಲ್ಲಿ ಗಿಡಗಳಿಗೆ ಹಾಕುವುದು ವಾಡಿಕೆ. ಇಂಥ ದ್ರವ ಗೊಬ್ಬರದ ಬಳಕೆ ಹಣ್ಣು, ಹೂ, ತರಕಾರಿ ಗಿಡಗಳ ಬೇಸಾಯದಲ್ಲಿ ಹೆಚ್ಚು.

ಕಸಾಯಿಖಾನೆ ಗೊಬ್ಬರ

[ಬದಲಾಯಿಸಿ]

ಕಸಾಯಿಖಾನೆಯಲ್ಲಿನ ವಿಸರ್ಜಿತ ವಸ್ತುವನ್ನು- ಪ್ರಾಣಿ ರಕ್ತ, ತೊಗಲಿನ ಅಂಶ, ಮಾಂಸದ ತುಣುಕುಗಳು, ಅಮೇಧ್ಯ, ಇತರ ಉಚ್ಚಿಷ್ಟಗಳು-ಸಂಗ್ರಹಿಸಿ ತಯಾರಿಸಿದ ಗೊಬ್ಬರ. ಇದರೊಂದಿಗೆ ಮೀನು ಗೊಬ್ಬರವನ್ನೂ (fish waste) ಹೆಸರಿಸಬಹುದು. ಈ ಗೊಬ್ಬರಗಳು ಸಸ್ಯಗಳಿಗೆ ಬಹಳ ಉಪಯುಕ್ತ. ಇವುಗಳಲ್ಲಿ ಪೋಷಕಾಂಶಗಳನ್ನು ಅವು ಬೇಗನೆ ಹೀರಿಕೊಂಡು ಸಮೃದ್ಧವಾಗಿ ಬೆಳೆಯುತ್ತವೆ. ಆದರೆ ಇವು ದುಬಾರಿಯ ಗೊಬ್ಬರಗಳು.

ಹ್ಯೂಮಸ್ ಗೊಬ್ಬರ

[ಬದಲಾಯಿಸಿ]

ಗಿಡಮರಗಳ ಎಲೆ, ರೆಂಬೆ, ತೊಗಟೆ, ಹೂ, ಕಾಯಿ, ಹಣ್ಣು ಮುಂತಾದವು ಕಾಡುಗಳಲ್ಲಿ ವಿಪುಲವಾಗಿ ಬಿದ್ದು ಸಂಗ್ರಹಗೊಂಡು ಕೊಳೆತು ಕಾಲಾಂತರದಲ್ಲಿ ತಯಾರಾಗುವ ಗೊಬ್ಬರ. ಕಾಡುಗಳಲ್ಲಿ ಮಣ್ಣಿನ ಮೇಲುಪದರವನ್ನು ಕೆತ್ತಿ ಹೆರೆಸಿ ತೆಗೆದಾಗ ದೊರೆಯುವ ಗೊಬ್ಬರವಿದು. ಸಸ್ಯಗಳಿಗೆ ಅತಿ ಪ್ರಯೋಜನಕಾರಿ. ಈ ಗೊಬ್ಬರ ಹಾಕಿ ಬೆಳೆಸಿದ ಸಸ್ಯಗಳಿಗೆ ರೋಗರುಜಿನ ತಗಲುವುದು ವಿರಳ.

ಹಿತ್ತಲ ಗೊಬ್ಬರ

[ಬದಲಾಯಿಸಿ]

ಮಲವನ್ನು ಬೂದಿಯೊಡನೆ ಮಿಶ್ರ ಮಾಡಿ ತಯಾರಿಸಿದ ಗೊಬ್ಬರ (ನೈಟ್ ಸಾಯಿಲ್). ಒಳಚರಂಡಿ ವ್ಯವಸ್ಥೆ ಇರುವ ನಗರಗಳಲ್ಲಿ ಮಲ ಮತ್ತು ಇತರ ವಿಸರ್ಜಿತ ವಸ್ತುವನ್ನು ಕೇಂದ್ರಿಯವಾಗಿ ಸಂಗ್ರಹಿಸಿ ಹಿತ್ತಲ ಗೊಬ್ಬರವನ್ನು ತಯಾರಿಸುತ್ತಾರೆ. ಇದಕ್ಕೆ ಸ್ಯೂಯೇಜ್ (ಚರಂಡಿ) ಗೊಬ್ಬರ ಎಂದು ಹೆಸರು.

ಕೋಳಿ ಹಿಕ್ಕೆಯು ತಾಜಾ ಆಗಿದ್ದಾಗ ಸಸ್ಯಗಳಿಗೆ ಹಾನಿಕಾರಕವಾಗಿದೆ, ಆದರೆ ಒಂದು ಅವಧಿಯವರೆಗೆ ಮಿಶ್ರಗೊಬ್ಬರ ಮಾಡುವಲ್ಲಿ ಬಳಸಿದಾಗ ಅಮೂಲ್ಯ ಗೊಬ್ಬರವಾಗುತ್ತದೆ.[] ಗೊಬ್ಬರವನ್ನು ವಾಣಿಜ್ಯಿಕವಾಗಿ ಮಿಶ್ರಗೊಬ್ಬರವಾಗಿ ಮಾಡಿ, ಚೀಲಗಳಲ್ಲಿ ತುಂಬಿಸಿ, ಮಣ್ಣಿನ ಒಂದು ಸಂಯೋಜನೀಯವಾಗಿ ಮಾರಲಾಗುತ್ತದೆ.[][] ಗೊಬ್ಬರವು ಹಸಿರುಮನೆ ಅನಿಲವಾದ ನೈಟ್ರಸ್ ಆಕ್ಸೈಡನ್ನು ವಿಸರ್ಜಿಸಬಹುದು. ಹೀಗೆ ವಾಯುಗುಣ ಬದಲಾವಣೆಗೆ ಕೊಡುಗೆ ನೀಡಬಲ್ಲುದು.[]

ದ್ರವದ ರೂಪದಲ್ಲಿರುವ ಗೊಬ್ಬರ

ದ್ರವ ಗೊಬ್ಬರ: ಇದು ದ್ರವದ ರೂಪದಲ್ಲಿರುವ ಗೊಬ್ಬರ. ಗೊಬ್ಬರವನ್ನು ನೀರಿನ ಜೊತೆಗೆ ಬೆರೆಸಿದಾಗ ಅದು ದ್ರವ ಗೊಬ್ಬರವಾಗಿ ಬದಲಾಗುತ್ತದೆ.ಇದನ್ನು ಗೊಬ್ಬರದ ಬದಲಾಗಿ ಉಪಯೋಗಿಸುತ್ತಾರೆ. ಆದರೆ ಇದನ್ನು ಸಮವಾಗಿ ಸಿಂಪಡಿಸಲು ಸಾಧ್ಯವಿಲ್ಲ. ಇದು ಸಹ ಗಿಡದ ಪೋಷಕಾಂಶಗಳನ್ನು ಹೆಚ್ಚಿಸುತ್ತದೆ.

ಒಣ ಗೊಬ್ಬರ: ತೇವವಾದ ಗೊಬ್ಬರಕ್ಕಿಂತ ಒಣ ಗೊಬ್ಬರವು ಹೆಚ್ಚು ಉಪಯುಕ್ತ, ಏಕೆಂದರೆ ಅದನ್ನು ಸುಲಭವಾಗಿ ಸುಡಬಹುದು. ಒಣ ಗೊಬ್ಬರದಲ್ಲಿ ಶೇಕಡವಾರು ೩೦ಕ್ಕಿಂತ ಕಡಿಮೆ ತೇವಾಂಶ ಭಾಗವಿರುತ್ತದೆ. ಇದರ ಪ್ರಯೋಜನಗಳೆಂದರೆ:

  • ಬೇರೆ ಆಧುನಿಕ ಇಂಧನಗಳಿಗೆ ಹೋಲಿಸಿದರೆ ಇದು ಅಗ್ಗ.
  • ಸುಲಭವಾಗಿ ದೊರೆಯುತ್ತದೆ-ಬಹಳ ದೂರ ನಡೆಯುವ ಅವಶ್ಯಕತೆ ಇಲ್ಲ.
  • ಕಟ್ಟಿಗೆ ಸಂಪನ್ಮೂಲಗಳ ನಾಶವನ್ನು ಕಡಿಮೆಮಾಡುತ್ತದೆ.
  • ಕಡಿಮೆ ಪರಿಸರ ಮಾಲಿನ್ಯ.
  • ಗೊಬ್ಬರ ವಿಲೇವಾರಿಯನ್ನು ಸುರಕ್ಷಿತ ರೀತಿಯಲ್ಲಿ ಮಾಡಬಹುದು.
  • ಸಮರ್ಥನೀಯ ಹಾಗು ನವೀಕರಿಸಬಹುದಾದ ಶಕ್ತಿಯ ಮೂಲ.

ಗೊಬ್ಬರದ ಮುಖ್ಯ ಪ್ರಯೋಜನಗಳು

[ಬದಲಾಯಿಸಿ]
  1. ಮಣ್ಣಿನ ಬಿಗಿತನವನ್ನು ಕಾಪಾಡಿ ಮಳೆ, ಗಾಳಿ, ನೀರಿನ ಹೊಡೆತದಿಂದ ಆಗುವ ಸವಕಳಿಯನ್ನು ಕನಿಷ್ಠ ಪರಿಮಾಣದಲ್ಲಿ ಇಡುತ್ತದೆ.
  2. ಸಸ್ಯಗಳ ಬೇರುಗಳನ್ನು ಚೆನ್ನಾಗಿ ಹರಡಿ ಹಬ್ಬಿ ನೆಲದ ಸಾರವನ್ನು ಹೀರಲು ಅನುಕೂಲವಾದ ಪರಿಸರವನ್ನು ಸೃಷ್ಟಿಸುತ್ತದೆ.
  3. ಮಣ್ಣಿನ ತೇವವನ್ನು ಕಾಪಾಡಿ ಸಸ್ಯಗಳಿಗೆ ತಂಪಾದ ಆಸರೆಯನ್ನು ಒದಗಿಸುತ್ತದೆ.
  4. ಸಸ್ಯಗಳಿಗೂ, ಮಣ್ಣಿನಲ್ಲಿರುವ ಅಸಂಖ್ಯಾತ ಸಸ್ಯ ಪೋಷಕ ಜೀವಿಗಳಿಗೂ ಪೋಷಣೆಯನ್ನು ನೀಡುತ್ತದೆ.[]
  5. ನಿರವಯವ ಗೊಬ್ಬರದ ಬಳಕೆಯಿಂದ ಉತ್ತಮ ಫಲಿತಾಂಶ ದೊರೆಯುವಂತೆ ಮಾಡಲು ಯೋಗ್ಯ ಆಧಾರ ನೆಲೆ ಸಾವಯವ ಗೊಬ್ಬರ.
  6. ಆಲ್ಬಂ ಗ್ರೇಕಂ/ಸ್ಟರ್ಕಸ್ ಕೆನಿಸ್ ಒಫಿಸಿನಾಲೆ - ಇದು ನಾಯಿ ಅಥವಾ ಕತ್ತೆಕಿರುಬದ ಗೊಬ್ಬರ. ಇದನ್ನು ಗಾಳಿಗೆ ತೆರೆದಿಟ್ಟರೆ ಬಿಳಿಯಾಗುತ್ತದೆ. ಇದನ್ನು ಗಂಟಲಿನ ಉರಿಯುವಿಕೆಯನ್ನು ಕಡಿಮೆ ಮಾಡಲು ಜೇನು ತುಪ್ಪದ ಜೊತೆಗೆ ಉಪಯೋಗಿಸುತ್ತಿದ್ದರು. ಗಾಯಗಳಿಗೆ ಔಷಧಲೇಪವಾಗಿಯೂ ಸಹ ಇದನ್ನು ಉಪಯೋಗಿಸುತ್ತಿದ್ದರು.

ಮುನ್ನೆಚ್ಚರಿಕೆ ಕ್ರಮಗಳು

[ಬದಲಾಯಿಸಿ]

ಗೊಬ್ಬರವು ಕೊಳೆಯುವ ಸಂಧರ್ಭದಲ್ಲಿ ತಾಪವನ್ನು ಹೊರಹಾಕುತ್ತದೆ. ಇದರಿಂದಾಗಿ ರಾಶಿಯಾಗಿ ಇಟ್ಟಂತಹ ಗೊಬ್ಬರವು ಕೆಲವೊಮ್ಮೆ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆಗಳಿವೆ. ಇದರಿಂದ ಸುತ್ತಮುತ್ತಲಿನ ಗಾಳಿಯೂ ಮಲಿನವಾಗುತ್ತದೆ ಹಾಗು ಬೆಂಕಿಯನ್ನು ನಂದಿಸುವುದು ಬಹಳ ಕಷ್ಟ. ಆದ್ದರಿಂದ ನಾವು ಹಸಿಗೊಬ್ಬರವನ್ನು ಸಂಗ್ರಹಿಸುವಾಗ ಅದರ ಪ್ರಮಾಣವನ್ನು ಸರಿಯಾಗಿ ನೋಡಿಕೊಳ್ಳಬೇಕು. ಕ್ರಿಮಿ ಕೀಟಗಳು ಮಲವನ್ನು ನೀರು ಹಾಗು ಆಹಾರಕ್ಕೆ ಸಾಗಿಸುವ ಸಾಧ್ಯತೆ ಇದೆ.ಇದರಿಂದಾಗಿ ರೋಗಗಳು ಸಹ ಬರಬಹುದು.

ಉಲ್ಲೇಖಗಳು

[ಬದಲಾಯಿಸಿ]
  1. Dittmar, Heinrich; Drach, Manfred; Vosskamp, Ralf; Trenkel, Martin E.; Gutser, Reinhold; Steffens, Günter (2009). "Fertilizers, 2. Types". Ullmann's Encyclopedia of Industrial Chemistry. Weinheim: Wiley-VCH. doi:10.1002/14356007.n10_n01. {{cite encyclopedia}}: Cite has empty unknown parameter: |authors= (help)
  2. Bernal, M.P.; Alburquerque, J.A.; Moral, R. (November 2009). "Composting of animal manures and chemical criteria for compost maturity assessment. A review". Bioresource Technology. 100 (22): 5444–5453. Bibcode:2009BiTec.100.5444B. doi:10.1016/j.biortech.2008.11.027. PMID 19119002.
  3. "Manure". h2g2. July 15, 2010. Retrieved 23 July 2017.
  4. Lustosa Filha, Jose; Penido, Evanise; Castro, Patricia; Silva, Carlos; Melo, Leonidas (September 4, 2017). "Co-pyrolysis of poultry litter and phosphate and magnesium generates alternative slow-release fertilizer suitable for tropical soils". ACS Sustainable Chemistry & Engineering. 5 (10): 9043–9052. doi:10.1021/acssuschemeng.7b01935.
  5. Thomas Bass; Julia Dafoe; Joel Schumacher. "Manure Composting for Livestock & Poultry Production" (PDF). MontGuide. MT201206AG Reviewed 4/17.
  6. Wortman, Sam E.; Holmes, Ashley A.; Miernicki, Elizabeth; Knoche, Kaelyn; Pittelkow, Cameron M. (2017-07-08). "First-Season Crop Yield Response to Organic Soil Amendments: A Meta-Analysis". Agronomy Journal (in ಇಂಗ್ಲಿಷ್). 109 (4): 1210. Bibcode:2017AgrJ..109.1210W. doi:10.2134/agronj2016.10.0627. ISSN 0002-1962.
  7. "Using Manure in the Home Garden". Archived from the original on 2020-10-26. Retrieved 2019-07-06.
  8. "Managing manure to reduce greenhouse gas emissions". agric.wa.gov.au (in ಇಂಗ್ಲಿಷ್). Retrieved 2022-04-15.
  9. Das, Suvendu; Jeong, Seung Tak; Das, Subhasis; Kim, Pil Joo (2017). "Composted Cattle Manure Increases Microbial Activity and Soil Fertility More Than Composted Swine Manure in a Submerged Rice Paddy". Frontiers in Microbiology. 8: 1702. doi:10.3389/fmicb.2017.01702. ISSN 1664-302X. PMC 5591829. PMID 28928727.


ಹೊರಗಿನ ಕೊಂಡಿಗಳು

[ಬದಲಾಯಿಸಿ]



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗೊಬ್ಬರ&oldid=1299247" ಇಂದ ಪಡೆಯಲ್ಪಟ್ಟಿದೆ