ಗೇಯಸ್

ಗೇಯಸ್ ರೋಮಿನ ಪ್ರಖ್ಯಾತ ನ್ಯಾಯತತ್ವವೇತ್ವ (ಜೂರಿಸ್ಟ್).
ಬದುಕು
[ಬದಲಾಯಿಸಿ]ಈತ ಕ್ರಿ.ಶ. 2ನೆಯ ಶತಮಾನದಲ್ಲಿ ಬದುಕಿದ್ದನೆಂದಷ್ಟು ಹೇಳಬಹುದಲ್ಲದೆ ಇವನ ಜನನ ಮತ್ತು ಮರಣ ಯಾವಾಗ ಎಂಬುದನ್ನು ನಿರ್ದಿಷ್ಟವಾಗಿ ಹೇಳಲು ಬರುವುದಿಲ್ಲ. ಇವನು ರೋಂ ನ್ಯಾಯಶಾಸ್ತ್ರ ಚರಿತ್ರೆಯ ಸುವರ್ಣಯುಗದ ಆದಿಕಾಲದಲ್ಲಿದ್ದ. ಕೆಲವು ವಿದ್ವಾಂಸರು ಗೇಯಸ್ ಗ್ರೀಕನೆಂದು ಅಭಿಪ್ರಾಯಪಟ್ಟರೂ ಅದಕ್ಕೆ ಯಾವ ನಿರ್ದಿಷ್ಟ ಆಧಾರಗಳೂ ಇಲ್ಲ. ರೋಮಿನ ಪೌರನಾಗಿದ್ದು, ಲ್ಯಾಟಿನ್ ಭಾಷೆಯಲ್ಲಿ ಪರಿಣಿತನಾಗಿ, ಅದರಲ್ಲಿ ಅನೇಕ ಪುಸ್ತಕಗಳನ್ನು ಬರೆದಿರುವುದರಿಂದ ರೋಮಿನವನೆಂದು ಇತರ ವಿದ್ವಾಂಸರ ಅಭಿಪ್ರಾಯ.
ಸಮಕಾಲೀನ ಗ್ರಂಥಗಳಲ್ಲಾಗಲಿ, ಆಗಿನ ಕಾಲದ ಚಕ್ರವರ್ತಿಗಳಿಂದ ವಿಶೇಷ ಪುರಸ್ಕೃತಿ ಹೊಂದಿದ ನ್ಯಾಯಶಾಸ್ತ್ರಜ್ಞರ ಮಾಲಿಕೆಯಲ್ಲಾಗಲಿ ಇವನ ಹೆಸರು ಕಂಡುಬರದಿರುವುದರಿಂದ ಇವನು ತನ್ನ ಜೀವಿತಕಾಲದಲ್ಲಿ ವಿಶೇಷ ಪ್ರಸಿದ್ಧಿ ಹೊಂದಿರಲಿಲ್ಲವೆಂದು ಊಹಿಸಬಹುದು. 350ರ ಅನಂತರ ಗೇಯಸನ ಪುಸ್ತಕಗಳು ವಿದ್ವಜ್ಜನ ಪ್ರಿಯವಾಗಿ ಇವನ ಹೆಸರು ಖ್ಯಾತಿ ಪಡೆಯಿತು. ಯಾವುದೇ ವ್ಯವಹರಣೆಯಲ್ಲಿ ತೀರ್ಪು ನೀಡಬೇಕಾದಾಗ ನ್ಯಾಯಾಲಯದಲ್ಲಿ ಅಧಿಕಾರಿಗಳು ಪರಿಗಣಿಸಬೇಕಾದ ಐವರು ನ್ಯಾಯತತ್ತ್ವವೇತ್ತರಲ್ಲಿ ಗೇಯಸನೂ ಒಬ್ಬನೆಂದು 2ನೆಯ ಥಿಯೊಡೋಸಿಯಸ್ ಚಕ್ರವರ್ತಿ ಇವನನ್ನು ಹೆಸರಿಸಿದ. ಈ ಐವರ ಕೃತಿಗಳು ರೋಮನ್ ನ್ಯಾಯದ ಅತ್ಯಂತ ಮುಖ್ಯ ಆಕರಗಳಾಗಿ ಪರಿಣಮಿಸಿದುವು.[೧]
ಇನ್‍ಸ್ಟಿಟ್ಯೂಟ್ಸ್ ಗ್ರಂಥ
[ಬದಲಾಯಿಸಿ]ಈತ ಬರೆದ ಅನೇಕ ಗ್ರಂಥಗಳಲ್ಲಿ ಈತನ ನ್ಯಾಯಸೂತ್ರಗಳು (ಇನ್‍ಸ್ಟಿಟ್ಯೂಟ್ಸ್) ಮುಖ್ಯ. ಈ ಗ್ರಂಥ ಸುಮಾರು 350 ವರ್ಷಗಳ ಕಾಲ ರೋಮಿನ ನ್ಯಾಯಶಾಸ್ತ್ರಾಭ್ಯಾಸಿಗಳ ಕೈಪಿಡಿಯಾಗಿತ್ತೆಂದು ಪೊಸ್ಟೆ ಎಂಬ ವಿದ್ವಾಂಸ ಹೇಳುತ್ತಾನೆ. ಸುಪ್ರಸಿದ್ಧವಾದ ಜಸ್ಟಿನಿಯನನ ನ್ಯಾಯಸೂತ್ರಗಳು ರೂಪಿತವಾದ್ದು ಗೇಯಸನ ಗ್ರಂಥದ ಆಧಾರದ ಮೇಲೆ. ಆ ಮಾದರಿಯಲ್ಲಿ ಗೇಯಸ್ ನ್ಯಾಯಶಾಸ್ತ್ರಾಧ್ಯಾಪಕನಾಗಿದ್ದನೆಂದೂ ವಿದ್ಯಾರ್ಥಿಗಳ ಉಪಯೋಗಕ್ಕಾಗಿಯೇ ಈ ಗ್ರಂಥವನ್ನು ಬರೆದನೆಂದೂ ನಂಬಲಾಗಿದೆ. ನ್ಯಾಯಸೂತ್ರಗಳನ್ನು ಕುರಿತು ಗೇಯಸ್ ಬರೆದಿರುವ ಗ್ರಂಥ ನಾಲ್ಕು ಭಾಗಗಳಾಗಿ ವಿಂಗಡವಾಗಿದೆ:[೨]
- ವ್ಯಕ್ತಿಗಳು, ಕಾನೂನಿನ ದೃಷ್ಟಿಯಲ್ಲಿ ಅವರ ಭಿನ್ನ ಸ್ಥಾನಮಾನಗಳು;
- ವಸ್ತುಗಳು ಮತ್ತು ಅವುಗಳನ್ನು ಪಡೆದುಕೊಳ್ಳುವ ವಿಧಾನಗಳು, ಉಯಿಲಿಗೆ ಸಂಬಂಧಿಸಿದ ಕಾನೂನು;
- ಉಯಿಲು ಮಾಡದೆ ಮರಣಿಸಿದವನ ಉತ್ತರಾಧಿಕಾರ ಮತ್ತು ಹೊಣೆಗಳು;
- ವ್ಯವಹರಣಕ್ರಮ ಮತ್ತು ಅದರ ನಾನಾ ರೂಪಗಳು.
ಎಲ್ಲ ನ್ಯಾಯವೂ ವ್ಯಕ್ತಿಗಳಿಗೆ, ಸ್ವತ್ತಿಗೆ ಅಥವಾ ವ್ಯವಹರಣ ಕ್ರಮಕ್ಕೆ ಸಂಬಂಧಿಸಿದ್ದೆಂಬ ಆಧಾರದ ಮೇಲೆ ಅವನು ವಿವೇಚನೆಯನ್ನು ವರ್ಗೀಕರಿಸಿದ. ಈ ವರ್ಗೀಕರಣ ವಿಧಾನವನ್ನು ಜಸ್ಟಿನಿಯನನ ನ್ಯಾಯಸೂತ್ರಗಳಲ್ಲೂ ಅನುಸರಿಸಲಾಗಿದೆ. ಆದರೆ ಈ ವರ್ಗೀಕರಣದ ಭಿನ್ನ ಭಿನ್ನ ಭಾಗಗಳ ನಿಶ್ಚಿತವಾದ ಅರ್ಥ ಹಾಗೂ ಪರಿಮಿತಿಯ ಬಗೆಗೆ ತೀವ್ರ ವಿವಾದವಿದೆ. ಪ್ರಪ್ರಥಮವಾಗಿ ಈ ವರ್ಗೀಕರಣ ಮಾಡಿದವನು ಗೇಯಸ್ ಅಲ್ಲವೆಂದು ಅನೇಕ ಪಂಡಿತರು ಅಭಿಪ್ರಾಯಪಡುತ್ತಾರೆ. ಈ ವರ್ಗೀಕರಣ ಪರಂಪರಾಗತವಾಗಿದ್ದರೂ ಇದರ ಆಧಾರದ ಮೇಲೆ ಸುವ್ಯವಸ್ಥಿತವಾದ ವಿಷಯ ನಿರೂಪಣೆ ಮಾಡಿದವರಲ್ಲಿ ಗೇಯಸನೇ ಮೊದಲಿಗ; ಮಾರ್ಗದರ್ಶಕ.
ರೋಂ ಗಣರಾಜ್ಯ ಕಾಲದ ಮತ್ತು ಚಕ್ರಾಧಿಪತ್ಯದ ಮೊದಲನೆಯ ಎರಡು ಶತಮಾನಗಳಲ್ಲಿ ರೂಢಿಯಲ್ಲಿದ್ದ ನ್ಯಾಯ ಪದ್ಧತಿಯನ್ನು ಕುರಿತ ವಿಷಯಗಳಿಗೆ ಗೇಯಸನ ಈ ಕೃತಿಯೇ ಆಧಾರ. ಜಸ್ಟಿನಿಯನನ ನಿಬಂಧ (ಡೈಜೆಸ್ಟ್) ರೋಮನ್ ನ್ಯಾಯಶಾಸ್ತ್ರದ ಇತಿಹಾಸ ದೃಷ್ಟಿಯಿಂದ ಅಸಮರ್ಪಕವಾಗಿದ್ದು ಅನೇಕ ವಿಷಯಗಳಲ್ಲಿ ಊಹಾಪೋಹಗಳಿಗೆ ಮತ್ತು ವಿವಾದಗಳಿಗೆ ಅವಕಾಶನೀಡಿತ್ತು. 1816ರಲ್ಲಿ ಗೇಯಸನ ನ್ಯಾಯಸೂತ್ರಗಳ ಪ್ರತಿ ದೊರಕಿದಾಗ ಈ ಸಂದೇಹಗಳು ಪರಿಹಾರವಾದುವು.[೩]
ಉಲ್ಲೇಖಗಳು
[ಬದಲಾಯಿಸಿ]- ↑ Chisholm 1911.
- ↑ Berger, Adolph. Encyclopedic Dictionary of Roman Law. The American Philosophical Society. September 1953. p 504
- ↑ Tikkanen, Amy. "Gaius". Encyclopaedia Britannica. Retrieved 7 August 2022.
ಹೊರಗಿನ ಕೊಂಡಿಗಳು
[ಬದಲಾಯಿಸಿ]- The Roman Law Library by Professor Yves Lassard and Alexandr Koptev
- The Institutes of Gaius
- Gai institutionum iuris civilis commentarii quattuor
