ಗೇಣಿಯ ನಿಯಮ
ಗೇಣಿಯ ನಿಯಮವು ಹೇಳುವುದೇನೆಂದರೆ ಒಂದು ಭೂನಿವೇಶನದ ಗೇಣಿಯು, ಕಾರ್ಮಿಕರ ಮತ್ತು ಬಂಡವಾಳದ ದತ್ತ ಆದಾನಗಳಿಗೆ, ಒಂದು ಉದ್ದೇಶಕ್ಕೆ ಸೀಮಾಂತ (ಅಂದರೆ ಅತ್ಯುತ್ತಮ ಗೇಣಿರಹಿತ) ಜಮೀನನ್ನು ಬಳಸುವುದರಿಂದ ದೊರೆಯುವ ಅನುಕೂಲಕ್ಕೆ ಹೋಲಿಸಿದಾಗ, ಆ ನಿವೇಶನವನ್ನು ಅದರ ಅತ್ಯಂತ ಲಾಭದಾಯಕ ಉಪಯೋಗದಲ್ಲಿ ಬಳಸುವುದರಿಂದ ದೊರೆಯುವ ಆರ್ಥಿಕ ಅನುಕೂಲಕ್ಕೆ ಸಮಾನವಾಗಿರುತ್ತದೆ.
ಇದನ್ನು ಡೇವಿಡ್ ರಿಕಾರ್ಡೋ ಸೂತ್ರೀಕರಿಸಿದ.
ರಿಕಾರ್ಡೋನ ಗೇಣಿ ಸಿದ್ಧಾಂತ
[ಬದಲಾಯಿಸಿ]19ನೆಯ ಶತಮಾನದ ಆದಿ ಭಾಗದಲ್ಲಿ ಡೇವಿಡ್ ರಿಕಾರ್ಡೋ ಗೇಣಿಯನ್ನು (rent) ಕುರಿತ ಸಿದ್ಧಾಂತವೊಂದನ್ನು ಮಂಡಿಸಿದ. ಇದೊಂದು ಅಭಿಜಾತ ಸಿದ್ಧಾಂತ (classical theory). ಆತನ ಅಭಿಪ್ರಾಯದಲ್ಲಿ ಗೇಣಿಗೆ ಮೂಲವಾದ್ದು ಪ್ರಕೃತಿಯ ಕೃಪಣತನವೇ ವಿನಾ ಔದಾರ್ಯವಲ್ಲ. ಉತ್ತಮ ದರ್ಜೆಯ ಜಮೀನಿನ ಅಭಾವವೇ ಗೇಣಿಗೆ ಕಾರಣ. ಕೀಳು ದರ್ಜೆ ಜಮೀನಿಗೆ ಬೇಸಾಯವನ್ನು ವಿಸ್ತರಿಸಿದಾಗ, ಉತ್ತಮ ಜಮೀನಿನಲ್ಲಿ ದೊರೆಯುವ ಅಧಿಕವನ್ನು ಭೂ ಮಾಲೀಕರು ಗೇಣಿ ಎಂದು ತೆಗೆದುಕೊಳ್ಳುತ್ತಾರೆ. ಭೂಮಾಲೀಕರು ಪಡೆಯುವ ಸಂಪಾದಿಸದ ವರಮಾನವೇ ಗೇಣಿ.[೧] ಗೇಣಿ ಎಂದರೆ ಭೂಮಿಯ ಮೂಲ ಹಾಗೂ ಅವಿನಾಶಿ ಶಕ್ತಿಗಳನ್ನು ಉಪಯೋಗಿಸಿಕೊಳ್ಳುವುದಕ್ಕೆ ಪ್ರತಿಯಾಗಿ ಭೂಮಾಲೀಕನಿಗೆ ಕೊಡುವ ಭೂಮಿಯ ಉತ್ಪನ್ನದ ಭಾಗ ಎಂದು ರಿಕಾರ್ಡೋ ನಿರೂಪಿಸಿದ್ದಾನೆ.
ಭೂಮಿಯ ಗುಣ ಮತ್ತು ಸ್ಥಾನಿಕ ಸೌಕರ್ಯ ಎಲ್ಲೆಡೆಯೂ ಏಕರೀತಿ ಇರುವುದಿಲ್ಲ. ಅವು ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸ ಹೊಂದುತ್ತವೆ. ಒಂದು ಪ್ರದೇಶದಲ್ಲಿ ಜನ ನೆಲಸುವಾಗ ಮೊದಲು ಉತ್ಕೃಷ್ಟ ಜಮೀನನ್ನು ಬೇಸಾಯ ಮಾಡುತ್ತಾರೆ. ಕಾಲಕ್ರಮದಲ್ಲಿ ಜನಸಂಖ್ಯೆ ಹೆಚ್ಚಿ, ಆಹಾರ ಪದಾರ್ಥಗಳಿಗೆ ಬೇಡಿಕೆ ಹೆಚ್ಚಿದಾಗ, ಕಡಿಮೆ ದರ್ಜೆಯ ಜಮೀನುಗಳನ್ನೂ ಬೇಸಾಯ ಮಾಡಬೇಕಾಗುತ್ತದೆ. ಆದರೆ ಮೇಲುದರ್ಜೆಯ ಜಮೀನುಗಳಿಗೆ ಹಾಕುವಷ್ಟೇ ಪ್ರಮಾಣದಲ್ಲಿ ಬಂಡವಾಳ ಮತ್ತಿತರ ಉತ್ಪಾದನಾಂಗಗಳನ್ನು ಕಡಿಮೆ ದರ್ಜೆಯ ಜಮೀನುಗಳಿಗೂ ಹಾಕಿದಾಗ, ಇಳಿಮುಖ ಪ್ರತಿಫಲ ನಿಯಮ ಅನ್ವಯವಾಗುತ್ತದೆ. ಅಂದರೆ ಕೆಳದರ್ಜೆಯ ಭೂಮಿಯ ಉತ್ಪಾದನಾ ವೆಚ್ಚ ಅಧಿಕವಾಗುತ್ತದೆ. ಆ ವೆಚ್ಚಕ್ಕಿಂತ ಧಾನ್ಯದ ಬೆಲೆ ಕಡಿಮೆಯಿಲ್ಲದಿದ್ದರೆ ಮಾತ್ರ ಆ ಕೀಳು ಭೂಮಿಯನ್ನು ಬೇಸಾಯಮಾಡಬಹುದು. ಆದರೆ ಪರಿಪೂರ್ಣ ಸ್ಪರ್ಧೆಯ ಪರಿಸ್ಥಿತಿಯಲ್ಲಿ ಮೇಲು ಕೀಳು ಜಮೀನುಗಳೆರಡರ ಉತ್ಪನ್ನಕ್ಕೂ ಬೆಲೆ ಒಂದೇ ದರದಲ್ಲಿರುತ್ತದೆ. ಆದ್ದರಿಂದ ಕಡಿಮೆ ವೆಚ್ಚ ತಗಲುವ ಮೇಲ್ದರ್ಜೆಯ ಭೂಮಿಯಲ್ಲಿ ಉತ್ಪನ್ನದ ಅಧಿಕ್ಯ ಕಂಡುಬರುತ್ತದೆ. ಈ ಅಧಿಕ್ಯಕ್ಕೆ ಕಾರಣ ಮೇಲ್ದರ್ಜೆಯ ಹಾಗೂ ಕೆಳದರ್ಜೆಯ ಜಮೀನುಗಳ ಸ್ವಾಭಾವಿಕ ಗುಣಗಳ ವ್ಯತ್ಯಾಸವೇ ವಿನಾ ಬೇರೇನೂ ಅಲ್ಲ. ಇದು ಭಿನ್ನಕ ಆಧಿಕ್ಯ (ಡಿಫರೆನ್ಷಿಯಲ್ ಸರ್‌ಪ್ಲಸ್). ಇದನ್ನು ಭೂಮಾಲೀಕ ಗೇಣಿ ಎಂದು ತೆಗೆದುಕೊಳ್ಳುತ್ತಾನೆ. ಧಾನ್ಯದ ಬೆಲೆ ಸೀಮಾಂತ ಭೂಮಿಯ ಉತ್ಪಾದನಾ ವೆಚ್ಚಕ್ಕೆ ಸಮಾನವಾಗಿರುತ್ತದೆಯಾದ್ದರಿಂದ ಆ ಭೂಮಿಯಿಂದ ಅಧಿಕೋತ್ಪನ್ನ ದೊರಕುವುದಿಲ್ಲ. ಅದು ಗೇಣಿರಹಿತ ಭೂಮಿ.
ಧಾನ್ಯದ ಬೆಲೆ ನಿರ್ಧಾರವಾಗುವುದು ಸೀಮಾಂತ ಭೂಮಿ ಅಥವಾ ಗೇಣಿರಹಿತ ಭೂಮಿಯ ಉತ್ಪಾದನಾ ವೆಚ್ಚದ ಆಧಾರದ ಮೇಲಾದ್ದರಿಂದ ರಿಕಾರ್ಡೋನ ಅಭಿಪ್ರಾಯದಲ್ಲಿ ಬೆಲೆಯಿಂದ ಗೇಣಿ ನಿರ್ಧರಿಸಲ್ಪಡುವುದೇ ವಿನಾ ಬೆಲೆಯನ್ನು ಗೇಣಿ ನಿರ್ಧರಿಸುವುದಿಲ್ಲ. ಗೇಣಿ ಕೊಡಬೇಕಾಗಿ ಬಂದುದೇ ಧಾನ್ಯದ ಬೆಲೆ ಏರಿಕೆಗೆ ಕಾರಣವೆಂದು ಹೇಳುವುದು ಸರಿಯಲ್ಲ. ಧಾನ್ಯದ ಬೆಲೆ ಏರಿದಷ್ಟೂ ಸೀಮಾಂತ ಭೂಮಿಗೆ ಮೇಲ್ಪಟ್ಟ ಜಮೀನುಗಳ ಪ್ರತಿಫಲದ ಅಧಿಕ್ಯವೂ ಏರುತ್ತದೆ. ಗೇಣಿಯೂ ಹೆಚ್ಚುತ್ತದೆ.[೨]
ವಿವಿಧ ವ್ಯವಸಾಯ ಪದ್ಧತಿಗಳ ಮೇಲೆ ರಿಕಾರ್ಡೋನ ಗೇಣಿ ಸಿದ್ಧಾಂತದ ಅನ್ವಯ
[ಬದಲಾಯಿಸಿ]ಮೇಲೆ ವಿವರಿಸಿದ, ರಿಕಾರ್ಡೋ ನೀಡಿರುವ ಗೇಣಿ ಸಿದ್ಧಾಂತವು ವಿಸ್ತೃತ (ವ್ಯಾಪಕ) ವ್ಯವಸಾಯ ಪದ್ಧತಿ, ಸಾಂದ್ರ ವ್ಯವಸಾಯ ಪದ್ಧತಿ ಎರಡಕ್ಕೂ ಅನ್ವಯವಾಗುತ್ತದೆ. ವ್ಯಾಪಕ ಕೃಷಿ ಪದ್ಧತಿಯಲ್ಲಿ ಭೂಮಿಯ ಪರಿಮಾಣವನ್ನು ಹೆಚ್ಚಿಸುತ್ತ, ಉಳಿದ ಉತ್ಪಾದನಾಂಗಗಳ ಪರಿಮಾಣವನ್ನು ಒಂದೇ ಮಟ್ಟದಲ್ಲಿ ಮಾಡಲಾಗುವುದು.[೩] ಸಾಂದ್ರ ವ್ಯವಸಾಯ ಪದ್ಧತಿಯಲ್ಲಿ ಭೂಮಿಯ ಪರಿಮಾಣವನ್ನು ಹೆಚ್ಚಿಸಲು ಸಾಧ್ಯವಿಲ್ಲದ್ದರಿಂದ, ಇತರ ಉತ್ಪಾದನಾಂಗಗಳ ಪರಿಮಾಣವನ್ನು ಹೆಚ್ಚು ಮಾಡಲಾಗುವುದು.[೪] ಈ ಎರಡು ಬೇಸಾಯ ಪದ್ಧತಿಗಳಲ್ಲೂ ಇಳಿಮುಖ ಸೀಮಾಂತ ಪ್ರತಿಫಲ ಪ್ರವೃತ್ತಿ ತಲೆದೋರುತ್ತದೆ.
ವ್ಯಾಪಕ ವ್ಯವಸಾಯ ಪದ್ಧತಿಯನ್ನು ನಕ್ಷೆಯಲ್ಲಿ ಸೂಚಿಸಬಹುದು. ಒಂದು ಗೊತ್ತಾದ ಪರಿಮಾಣದ ಬಂಡವಾಳ ಮತ್ತಿತರ ಉತ್ಪಾದನಾಂಗಗಳನ್ನು ಪ್ರಥಮ ದರ್ಜೆಯ ಜಮೀನಿಗೆ ಹಾಕಿದಾಗ 10 ಕ್ವಿಂಟಲ್, ದ್ವಿತೀಯ ದರ್ಜೆಯ ಜಮೀನಿಗೆ ಹಾಕಿದಾಗ 8 ಕ್ವಿಂಟಲ್, ತೃತೀಯ ದರ್ಜೆಯ ಜಮೀನಿಗೆ ಹಾಕಿದಾಗ 5 ಕ್ವಿಂಟಲ್ ಮತ್ತು ಚತುರ್ಥ ದರ್ಜೆಯ ಜಮೀನಿಗೆ ಹಾಕಿದಾಗ 3 ಕ್ವಿಂಟಲ್ ಭತ್ತ ಬರುತ್ತದೆ.
ಇಲ್ಲಿ ಭತ್ತದ ಏಕಮಾನದ ಬೆಲೆ ನಾಲ್ಕನೆಯ ದರ್ಜೆಯ ಜಮೀನಿನ ಏಕಮಾನ ಉತ್ಪಾದನಾ ವೆಚ್ಚಕ್ಕೆ ಸಮನಾಗಿರುತ್ತದೆ. ಏಕೆಂದರೆ ನಾಲ್ಕನೆಯ ದರ್ಜೆಯ ಜಮೀನು ಸೀಮಾಂತ ಅಥವಾ ಗೇಣಿರಹಿತ ಭೂಮಿ. ಇದಕ್ಕೆ ಮೇಲ್ಮಟ್ಟದ ಮೂರು ಜಮೀನುಗಳಿಂದ ಭೂಮಾಲೀಕರಿಗೆ ಸಿಗುವ ಗೇಣಿ ಅನುಕ್ರಮವಾಗಿ 2,5,7, ಕ್ವಿಂಟಲ್ ಭತ್ತದ ಬೆಲೆ.
ಹಾಗೆಯೇ ಸಾಂದ್ರ ವ್ಯವಸಾಯ ಪದ್ಧತಿಯನ್ನು ನಕ್ಷೆಯಲ್ಲಿ ಸೂಚಿಸಬಹುದು. ಒಂದು ಗೊತ್ತಾದ ಗಾತ್ರದ ಭೂಮಿಗೇ ಹೆಚ್ಚು ಹೆಚ್ಚು ಪರಿಮಾಣಗಳಲ್ಲಿ ಶ್ರಮ ಮತ್ತು ಬಂಡವಾಳಗಳನ್ನು ಹಾಕಿದಾಗ ಮೊದಲನೆಯದರಿಂದ 10 ಕ್ವಿಂಟಲ್, ಎರಡನೆಯದರಿಂದ 8 ಕ್ವಿಂಟಲ್, ಮೂರನೆಯದರಿಂದ 5 ಕ್ವಿಂಟಲ್ ಮತ್ತು ನಾಲ್ಕನೆಯದರಿಂದ 3 ಕ್ವಿಂಟಲ್ ಭತ್ತ ಬರುತ್ತದೆ. ಇಲ್ಲಿಯೂ ನಾಲ್ಕನೆಯ ಪರಿಮಾಣದಿಂದ ಬರುವ ಭತ್ತದ ಉತ್ಪಾದನಾಂಗಗಳ (ಫ್ಯಾಕ್ಟರ್ಸ್ ಆಫ್ ಪ್ರೋಡಕ್ಷನ್) ವೆಚ್ಚ 3 ಕ್ವಿಂಟಲ್ ಬತ್ತದ ಬೆಲೆಗೆ ಸಮ. ಆದ್ದರಿಂದ ನಾಲ್ಕನೆಯ ಪರಿಮಾಣದ ಶ್ರಮ ಮತ್ತು ಬಂಡವಾಳದಿಂದ ಗೇಣಿ ಸಿಕ್ಕುವುದಿಲ್ಲ. ಇನ್ನುಳಿದ (ಹೆಚ್ಚಿನ ಮಟ್ಟಗಳ) ಪರಿಮಾಣಗಳಿಂದ ಅನುಕ್ರಮವಾಗಿ 2, 5, 7 ಕ್ವಿಂಟಲ್ ಭತ್ತ ಗೇಣಿಯಾಗಿ ಸಿಕ್ಕುತ್ತದೆ.
ರಿಕಾರ್ಡೋನ ಅಭಿಪ್ರಾಯದಲ್ಲಿ ಭೂಮಿಗೂ ಇತರ ಉತ್ಪಾದನಾಂಗಗಳಿಗೂ ವ್ಯತ್ಯಾಸವಿದೆ. ಭೂಮಿ ಪ್ರಕೃತಿಯ ಪ್ರಸಾದ; ಆದರೆ ಇತರ ಉತ್ಪಾದನಾಂಗಗಳು ಮನುಷ್ಯಕೃತ. ಭೂಮಿಯ ಪರಿಮಾಣವನ್ನು ಹೆಚ್ಚಿಸಲು ಸಾಧ್ಯವಿಲ್ಲ; ಆದರೆ ಇತರ ಉತ್ಪಾದನಾಂಗಗಳ ಪರಿಮಾಣಗಳನ್ನು ಅಧಿಕ ಪ್ರತಿಫಲ ನೀಡಿ ಹೆಚ್ಚಿಸಬಹುದು. ಆದ್ದರಿಂದ ಭೂಮಿಯ ಪ್ರತಿಫಲವಾದ ಗೇಣಿಯು ಧಾನ್ಯದ ಬೆಲೆಗೆ ಸೇರುವುದಿಲ್ಲ. ಆದರೆ ಶ್ರಮ, ಬಂಡವಾಳ ಮತ್ತು ಸಂಘಟನೆಗೆ ಪ್ರತಿಫಲವೆನಿಸುವ ವೇತನ, ಬಡ್ಡಿ ಮತ್ತು ಲಾಭ ಇವು ಬೆಲೆಗೆ ಸೇರುತ್ತವೆ.
ಗೇಣಿ ಸಿದ್ಧಾಂತದ ಬಗ್ಗೆ ಟೀಕೆಗಳು
[ಬದಲಾಯಿಸಿ]ರಿಕಾರ್ಡೋನ ಗೇಣಿ ಸಿದ್ಧಾಂತವನ್ನು ಕುರಿತ ಟೀಕೆಗಳಿವು:
- ರಿಕಾರ್ಡೋ ಊಹಿಸಿದಂತೆ ಭೂಮಿಯಲ್ಲಿ ಮೂಲ ಮತ್ತು ಅವಿನಾಶಿ ಶಕ್ತಿಗಳಿವೆಯೆನ್ನುವುದು ಸರಿಯಲ್ಲ. ಏಕೆಂದರೆ ದೀರ್ಘಕಾಲದ ಬೇಸಾಯದ ಫಲವಾಗಿ ಭೂಮಿ ತನ್ನ ನೈಜ ಸಾರವನ್ನು ಕಳೆದುಕೊಂಡಿದೆ. ಗೊಬ್ಬರ ಮುಂತಾದವನ್ನು ಹಾಕಿ ಮನುಷ್ಯ ಅದನ್ನು ಕೃಷಿಗೆ ಯೋಗ್ಯವಾಗಿಟ್ಟುಕೊಂಡಿದ್ದಾನೆ.
- ರಿಕಾರ್ಡೋ ಹೇಳಿರುವ ಕ್ರಮದಲ್ಲಿಯೇ ಬೇಸಾಯಕ್ಕೆ ಭೂಮಿಯನ್ನು ಆಕ್ರಮಿಸಿಕೊಳ್ಳಲಾಗುವುದೆಂಬುದಕ್ಕೆ ಚಾರಿತ್ರಿಕ ನಿದರ್ಶನವಿಲ್ಲ. ಅನೇಕ ಕಡೆ ಫಲವತ್ತಾದ ಭೂಮಿಗೂ ಮುಂಚೆಯೇ ಕಳಪೆ ಜಮೀನನ್ನು ಬೇಸಾಯ ಮಾಡಲಾಗಿದೆ.
- ಭೂಮಿಗೆ ಮಾತ್ರ ಗೇಣಿ ದೊರೆಯುವುದೆಂಬುದನ್ನು ಜೋನ್ ರಾಬಿನ್ಸನ್ ಮುಂತಾದ ಅರ್ಥಶಾಸ್ತ್ರಜ್ಞರು ಟೀಕಿಸಿದ್ದಾರೆ. ಭೂಮಿಗೆ ಗೇಣಿ ದೊರಕಲು ಕಾರಣವೆಂದರೆ ಶೇಷ್ಠ ದರ್ಜೆಯ ಜಮೀನಿನ ಅಭಾವ. ಅಲ್ಪಾವಧಿಯಲ್ಲಿ ಈ ಮಾತು ಇತರ ಉತ್ಪಾದನಾಂಗಗಳಿಗೂ ಅನ್ವಯಿಸುತ್ತದೆಯೆಂಬುದು ಆಲ್ಫ್ರೆಡ್ ಮಾರ್ಷಲ್ ಮೊದಲ್ಗೊಂಡು ಹಲವರ ಅಭಿಪ್ರಾಯ. ಆದರೆ ಭೂಮಿಯ ಪ್ರತ್ಯೇಕತೆಯನ್ನು ತೋರಿಸುವುದಕ್ಕಾಗಿ ಅದರಿಂದ ಪ್ರಾಪ್ತವಾಗುವ ಅಧಿಕ್ಯವನ್ನು ಗೇಣಿ ಎಂದು ಕರೆದು, ಇತರ ಉತ್ಪಾದನಾಂಗಗಳ ಅಧಿಕ್ಯವನ್ನು ಅರೆ-ಗೇಣಿ (ಕ್ವಾಸೈ-ರೆಂಟ್) ಎಂದು ಆತ ಕರೆದಿದ್ದಾನೆ.
- ಶ್ರೇಷ್ಠ ದರ್ಜೆಯ ಭೂಮಿಯ ಅಭಾವದಿಂದ ಗೇಣಿ ದೊರಕವುದೆಂದು ರಿಕಾರ್ಡೋ ಭಾವಿಸಿದ್ದ. ಆದರೆ ಒಂದು ವೇಳೆ ಎಲ್ಲ ಭೂಮಿಯೂ ಶ್ರೇಷ್ಠ ದರ್ಜೆಯದೇ ಆಗಿದ್ದರೂ ಗೇಣಿ ಇರುತ್ತದೆ. ಏಕೆಂದರೆ ಇಳಿಮುಖ ಪ್ರತಿಫಲ ಪ್ರವೃತ್ತಿ ಕಂಡುಬರುವುದು ಅನಿವಾರ್ಯ.
- ಗೇಣಿಯು ಬೆಲೆಗೆ ಸೇರುವುದಿಲ್ಲ ಎಂಬ ಅಭಿಪ್ರಾಯವನ್ನು ಮಿಲ್ ಮುಂತಾದವರು ಟೀಕಿಸಿದ್ದಾರೆ. ಒಟ್ಟಿನಲ್ಲಿ ಭೂಮಿಯ ಪರಿಮಾಣವನ್ನು ಹೆಚ್ಚಿಸಲು ಸಾಧ್ಯವಾಗದಿದ್ದರೂ ಯಾವುದೇ ನಿರ್ದಿಷ್ಟ ಉದ್ದೇಶಕ್ಕೆ ಬೇಕಾಗುವ ಭೂಮಿಯ ಪರಿಮಾಣವನ್ನು ಹೆಚ್ಚಿಸಬಹುದು. ಕಡಿಮೆ ಪ್ರತಿಫಲ ನೀಡುವ ಉದ್ದೇಶದಿಂದ ಹೆಚ್ಚಿನ ಪ್ರತಿಫಲ ನೀಡುವ ಉದ್ದೇಶಕ್ಕೆ ಭೂಮಿಯನ್ನು ವರ್ಗಾಯಿಸುವುದರಿಂದ ಇದು ಸಾಧ್ಯ. ಆಗ ವರ್ಗಾವಣೆಯ ವೆಚ್ಚ ಬೆಲೆಯಲ್ಲಿ ಸೇರುತ್ತದೆ.
- ರಿಕಾರ್ಡೋ ಸಿದ್ಧಾಂತ ಪರಿಪೂರ್ಣ ಸ್ಪರ್ಧೆಯ ಆಧಾರದ ಮೇಲೆ ರೂಪಿತವಾಗಿದೆ. ಆದರೆ ವಾಸ್ತವ ಪ್ರಪಂಚದಲ್ಲಿ ಪರಿಪೂರ್ಣ ಸ್ಪರ್ಧೆಯ ಪರಿಸ್ಥಿತಿ ಇರುವುದಿಲ್ಲ.
ಈ ಕಾರಣಗಳಿಂದ ರಿಕಾರ್ಡೋನ ಗೇಣಿ ಸಿದ್ಧಾಂತವನ್ನು ಟೀಕಿಸಿದರೂ, ಅದು ಅನೇಕ ರೀತಿಗಳಲ್ಲಿ ಉಪಯುಕ್ತವಾಗಿದೆ. ಜನಸಂಖ್ಯೆಯ ಒತ್ತಡ ಹೆಚ್ಚಿ ಆಹಾರಕ್ಕೆ ಬೇಡಿಕೆ ಹೆಚ್ಚಿದಂತೆಲ್ಲ ಕಡಿಮೆ ದರ್ಜೆಯ ಜಮೀನುಗಳನ್ನೂ ಬೇಸಾಯಕ್ಕೆ ತರಬೇಕಾಗುವುದೆಂಬ ಅಂಶವನ್ನು ಅದು ಒತ್ತಿ ಹೇಳುತ್ತದೆ. ಭೂಮಾಲೀಕ ವರ್ಗಕ್ಕೂ, ಸಮಾಜದ ಇತರ ವರ್ಗಗಳಿಗೂ ಘರ್ಷಣೆಗೆ ಕಾರಣವೇನೆಂಬುದನ್ನು ಇದು ತಿಳಿಸುತ್ತದೆ. ಗೇಣಿಯು ಶ್ರಮರಹಿತ ವರಮಾನವೆಂದು ರಿಕಾರ್ಡೋ ಪ್ರತಿಪಾದಿಸಿದ ಮೇಲೆ ಅದನ್ನು ತೆರಿಗೆಯ ರೂಪದಲ್ಲಿ ಸರ್ಕಾರ ಕಸಿದುಕೊಳ್ಳಬೇಕೆಂದು ಮಿಲ್ ಒತ್ತಾಯಪಡಿಸಿದ. ಗೇಣಿಯನ್ನು ರದ್ದುಗೊಳಿಸಿದರೆ ಜನಸಾಮಾನ್ಯರ ದಾರಿದ್ರ್ಯ ನಿವಾರಣೆಯಾಗುವುದೆಂದು ಹೆನ್ರಿ ಜಾರ್ಜ್ ಭಾವಿಸಿದ. ಒಟ್ಟಿನಲ್ಲಿ ರಿಕಾರ್ಡೋನ ಗೇಣಿ ಸಿದ್ಧಾಂತವು ಸಮಾಜವಾದಿಗಳ ಅಭಿಪ್ರಾಯವನ್ನು ಪುಷ್ಟಿಗೊಳಿಸಲು ಸಹಾಯಕವಾಯಿತು.
ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ Ricardo, David (1911). On the Principles of Political Economy and Taxation. London: New York: JM Dent. p. 42.
- ↑ Ricardo, David (1911). On the Principles of Political Economy and Taxation. London: New York: JM Dent. p. 74.
- ↑ The Editors of Encyclopaedia Britannica. "extensive agriculture". Encyclopedia Britannica, 23 Dec. 2011, https://www.britannica.com/topic/extensive-agriculture. Accessed 2 March 2025.
- ↑ Encyclopædia Britannica, revised and updated by Amy Tikkanen. "'s definition of Intensive Agriculture". britannica.com. Archived from the original on 2008-06-24. Retrieved 2019-09-21.
ಹೆಚ್ಚಿನ ಓದಿಗೆ
[ಬದಲಾಯಿಸಿ]- David Ricardo, An Essay on the influence of a low price of corn on the profits of stock
