ವಿಷಯಕ್ಕೆ ಹೋಗು

ಗೆಜೆಟ್ಟು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಚಲಿತ ಸಂಗತಿಗಳ ಗೋಷ್ವಾರೆಯನ್ನೊಳಗೊಂಡ ಸುದ್ದಿ ಹಾಳೆಗಳನ್ನು ಅಥವಾ ವೃತ್ತಪತ್ರಿಕೆಗಳನ್ನು ಗೆಜೆ಼ಟ್ ಎಂದು ಕರೆಯುತ್ತಿದ್ದರು. ಇವು ಆಧುನಿಕ ವೃತ್ತಪತ್ರಿಕೆಗಳ ಪೂರ್ವಜ ರೂಪಗಳೆನ್ನಬಹುದು.

ಶಬ್ದ ವ್ಯುತ್ಪತ್ತಿ

[ಬದಲಾಯಿಸಿ]

ಈ ಶಬ್ದಕ್ಕೆ ಮೂಲ ಗಾಝಾ (ವೃತ್ತ ಭಂಡಾರ) ಎಂಬ ಗ್ರೀಕ್ ಪದ. ಇಂಗ್ಲೀಷಿಗೆ ಗಜೆ಼ಟ್ ಎಂಬ ಶಬ್ದ ಫ್ರೆಂಚ್‍ನಿಂದ ಬಂತು; ಅದಕ್ಕೆ ಇಟಾಲಿಯನ್ ಭಾಷೆಯ ಗಜೆ಼ಟಾ ಮೂಲ. ಫ್ರೆಂಚ್ ಭಾಷೆಯಲ್ಲಿ ಗಜೆ಼ಟಾ ಎಂಬ ಹೆಸರನ್ನೇ ಈಗಲೂ ಬಳಸಲಾಗುತ್ತಿದೆ. ವೆನಿಸ್‌ನಲ್ಲಿ ಗೆಜೆ಼ಟಾ ಒಂದು ಚಿಕ್ಕ ನಾಣ್ಯದ ಹೆಸರಾಗಿತ್ತು. 1566ರಲ್ಲಿ ವೆನಿಸ್ ಸರ್ಕಾರ ಪ್ರಕಟಿಸಿ, ಈ ಮೊತ್ತಕ್ಕೆ ಮಾರುತ್ತಿದ್ದ ಸೂಚೀಪತ್ರಕ್ಕೆ ಇದೇ ಹೆಸರು ಬಂತು.[]

ಇತಿಹಾಸ

[ಬದಲಾಯಿಸಿ]

16ನೆಯ ಶತಮಾನದ ನಡುಗಾಲದಲ್ಲಿ ವೆನಿಸಿನಲ್ಲಿ ಪ್ರಕಟವಾಗಲಾರಂಭಿಸಿದ ಲೋಕಾಭಿರಾಮದ ಸುದ್ದಿ ಹಾಳೆಗಳಿಗೆ ಈ ಹೆಸರಿತ್ತು. ಇದೇ ಬಗೆಯ ಪತ್ರಗಳು ಫ್ರಾನ್ಸ್, ಇಂಗ್ಲೆಂಡುಗಳಲ್ಲೂ ತಲೆದೋರಿದುವು.ಒಂದನೆಯ ಎಲಿಜ಼ಬೆತಳ ಸಿಂಹಾಸನಾರೋಹಣವಾದ ಮೇಲೆ ಇಂಥ ಸುದ್ದಿಹಾಳೆಗಳು ಹೆಚ್ಚಿದುವು. ಹರಟೆ, ಸುದ್ದಿ ತುಣುಕು, ಅನಧಿಕೃತ ವೃತ್ತಾಂತ ನಿರೂಪಣೆ, ದೇಶವಿದೇಶ ಪರ್ಯಟನೆ, ಕೊಲೆಯೇ ಮುಂತಾದ ಘಟನೆಗಳು, ವದಂತಿಗಳು, ಜಾಹೀರಾತುಗಳು ಮುಂತಾದವನ್ನೊಳಗೊಂಡ ಆಕರ್ಷಕ ಪತ್ರಗಳು ಹೊರಬೀಳಲಾರಂಭಿಸಿದುವು. 17ನೆಯ ಶತಮಾನದಿಂದೀಚೆಗೆ ಗೆಜೆ಼ಟ್ ಎಂಬ ಶಬ್ದ ಅಧಿಕೃತ ಸರ್ಕಾರಿ ಪ್ರಕಟಣೆಗಳಿಗೆ ಅಧಿಕಾಧಿಕವಾಗಿ ಅನ್ವಯವಾಗತೊಡಗಿತು. ಆಕ್ಸ್‌ಫರ್ಡ್ ಗಜೆ಼ಟ್, ಲಂಡನ್ ಗಜೆ಼ಟ್, ಡಬ್ಲಿನ್ ಗಜೆ಼ಟ್, ಉದಾಹರಣೆಗಳು.

ಉದಾಹರಣೆಗಳು

[ಬದಲಾಯಿಸಿ]

ಸರ್ಕಾರಿ ವಿಷಯಗಳನ್ನು, ನೇಮಕ ವಿವರಗಳನ್ನು, ಅಧಿಕೃತ ಪರಿನಿಯತ ಪತ್ರಗಳನ್ನು ಒಳಗೊಂಡ ಪತ್ರಿಕೆ ಎಂಬುದು ಸಾಮಾನ್ಯವಾಗಿ ಇದರ ಈಗಿನ ಅರ್ಥ. ಆದರೆ ವೃತ್ತಪತ್ರಿಕೆಗಳ ಹೆಸರುಗಳ ಕೊನೆಯಲ್ಲೂ ಕ್ವಚಿತ್ತಾಗಿ ಈ ಶಬ್ದವನ್ನು ಬಳಸುವುದುಂಟು. ದ ಪಾಲ್ ಮಾಲ್ ಗಜೆ಼ಟ್, ದ ಸೇಂಟ್ ಜೇಮ್ಸ್ ಗಜೆ಼ಟ್, ದ ವೆಸ್ಟ್‌ಮಿನ್‌ಸ್ಟರ್ ಗಜೆ಼ಟ್ ಮುಂತಾದವು 20ನೆಯ ಶತಮಾನದ ಆದಿಭಾಗದಲ್ಲಿ ಲಂಡನಿನಿಂದ ಪ್ರಕಟವಾದ ವೃತ್ತಪತ್ರಿಕೆಗಳು. ದ ಪಾಲ್ ಮಾಲ್ ಗಜ಼ೆಟ್ ೧೯೨೩ರಲ್ಲಿ ದಿ ಈವನಿಂಗ್ ಸ್ಟ್ಯಾಂಡರ್ಡ್‌ನಲ್ಲಿ ಲೀನವಾಯಿತು.[] ಬ್ರಿಟನ್‌ನಲ್ಲಿ ಈಗಲೂ ಪ್ರಕಟವಾಗುತ್ತಿರುವ ಹಲವು ವೃತ್ತಪತ್ರಿಕೆಗಳ ಹೆಸರುಗಳಲ್ಲಿ ಗಜೆ಼ಟ್ ಎಂಬ ಶಬ್ದ ಉಳಿದುಬಂದಿದೆ. ಅಮೆರಿಕದ ದ ಪೆನ್‌ಸಿಲ್ವೇನಿಯ ಗಜೆ಼ಟ್ ಎಂಬ ಪತ್ರಿಕೆ ಅತ್ಯಂತ ಪ್ರಭಾವಶಾಲಿಯಾಗಿತ್ತು. ಗಜೆ಼ಟ್ ಎಂಬ ಉತ್ತರಪದವನ್ನೊಳಗೊಂಡ ಹಲವು ವೃತ್ತಪತ್ರಿಕೆಗಳು ಅಮೆರಿಕದಲ್ಲಿ ಪ್ರಕಟವಾಗುತ್ತಿದ್ದುವು. ಸಂಯುಕ್ತ ಸಂಸ್ಥಾನಗಳ ಗಜೆ಼ಟ್ ಮತ್ತು ದ ನ್ಯಾಷನಲ್ ಗಜೆ಼ಟ್ ಇನ್ನೆರಡು ಉದಾಹರಣೆಗಳು. 18ನೆಯ ಶತಮಾನದ ಉತ್ತರಾರ್ಧದಲ್ಲಿ ಆರಂಭವಾದ ಬೆಂಗಾಲ್ ಗೆಜೆ಼ಟ್, ಇಂಡಿಯ ಗಜೆ಼ಟ್ ಇವು ಭಾರತದ ಆರಂಭ ಕಾಲದ ಪತ್ರಿಕೆಗಳು. ಭಾರತದಲ್ಲಿ ಸ್ಥಾಪಿತವಾದ ಬ್ರಿಟಿಷ್ ಆಳ್ವಿಕೆಯಲ್ಲಿ ಸರ್ಕಾರಗಳ ಅಧಿಪತ್ರಗಳಾಗಿ ಗೆಜೆಟ್ಟುಗಳು ಪ್ರಕಟವಾಗತೊಡಗಿದುವು. ಈಗ ಎಲ್ಲ ರಾಜ್ಯ ಸರ್ಕಾರಗಳೂ ಗೆಜೆ಼ಟ್ಟುಗಳನ್ನು ಪ್ರಕಟಿಸುತ್ತಿವೆ. ಮೈಸೂರು ಸರ್ಕಾರದ ಗೆಜೆಟ್ಟು "ದ ಮೈಸೂರ್ ಗಜೆ಼ಟ್ " (ನಂತರ ದ ಕರ್ನಾಟಕ ಗೆಜೆಟ್ - ಕನ್ನಡದಲ್ಲಿ `ಕರ್ನಾಟಕ ರಾಜ್ಯಪತ್ರ') ಎಂಬ ಹೆಸರಿನಲ್ಲಿ ಸು. 1866 ರಿಂದ ಪ್ರಕಟವಾಗುತ್ತಿದೆ. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ಗೆಜೆಟ್ 1965ರ ಫೆಬ್ರುವರಿ 15 ರಿಂದ, ಕನ್ನಡದ ಗೆಜೆಟ್ 1968ರ ನವೆಂಬರ್ 1 ರಿಂದ ಪ್ರಕಟವಾಗುತ್ತಿವೆ.

ಉಲ್ಲೇಖಗಳು

[ಬದಲಾಯಿಸಿ]
  1. Diez, Friedrich (1864). An Etymological Dictionary of the Romance Languages. London: Williams.
  2. Brake, Laurel; Demoor, Marysa Dictionary of Nineteenth-century Journalism in Great Britain and Ireland, Academia Press, 2009, p478


ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: