ವಿಷಯಕ್ಕೆ ಹೋಗು

ಗುರುಬಸವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗುರುಬಸವನು (ಸು. 1430) ಕನ್ನಡದಲ್ಲಿ ಸಪ್ತಕಾವ್ಯಗಳ ಕರ್ತೃ; ಸಪ್ತಕಾವ್ಯಗಳ ಗುರುಬಸವನೆಂದೇ ಪ್ರಸಿದ್ಧನಾಗಿದ್ದಾನೆ.[] ಶಿವಯೋಗಾಂಗ ವಿಭೂಷಣ, ಸದ್ಗುರು ರಹಸ್ಯ, ಕಲ್ಯಾಣೇಶ್ವರ, ಸ್ವರೂಪಾಮೃತ, ವೃಷಭಗೀತೆ, ಅವಧೂತಗೀತೆ ಮತ್ತು ಮನೋವಿಜಯ-ಇವೇ ಆ ಏಳು ಕೃತಿಗಳು. ಈತನಿಂದ ಕೆಲವು ಸ್ವರವಚನಗಳು ರಚಿತವಾಗಿರುವುದಾಗಿ ತಿಳಿದುಬಂದಿದೆ.

ಬಿರುದುಗಳು: ಗುರುಬಸವನಿಗೆ ಭಕ್ತಜನ ಮನೋಮಂದಿರ, ಶಿವಯೋಗಜನಸೇವಿತಚರಣಾರವಿಂದ, ಷಟ್‌ಸ್ಥಲ ಜ್ಞಾನ ಪ್ರಭಾಪುಂಜರಂಜಿತಾಂತರಂಗ, ವೀರಶೈವಮತಸ್ಥಾಪನಾಚಾರ್ಯ ಮುಂತಾದ ಬಿರುದುಗಳಿದ್ದವೆಂದು ಮನೋವಿಜಯಕ್ಕೆ ತಾತ್ಪರ್ಯವನ್ನು ಬರೆದ ವಿರಕ್ತ ತೋಂಟದಾರ್ಯ ತಿಳಿಸಿದ್ದಾನೆ.

ಸ್ವವಿಷಯವಾಗಿ ಕವಿ ಏನನ್ನೂ ಹೇಳಿಕೊಂಡಿಲ್ಲ. ಕವಿ ವಿರಕ್ತನಾಗಿದ್ದುದೇ ಇದಕ್ಕೆ ಕಾರಣವಾಗಿರಬೇಕು. ಮುಂದೆ ಬಂದ ಕವಿಗಳು ಹಿಂದಿನವರ ಕಾವ್ಯಗಳ ಹೆಸರೆತ್ತುವುದು ಸಂಪ್ರದಾಯ. ಆದರೆ ಆ ಭಾಗ್ಯವೂ ಈ ಕವಿಗಿಲ್ಲ. ಎಲ್ಲಿಯೂ ಗುರುಬಸವ ಸಪ್ತಕಾವ್ಯಗಳ ಉಲ್ಲೇಖವಿಲ್ಲ. ಈತನ ಸಪ್ತಕಾವ್ಯಗಳ ತಾಡವೋಲೆಯ ಕಟ್ಟುಗಳು ಸಾಕಷ್ಟು ದೊರೆಯುತ್ತವೆ. ಅವುಗಳಲ್ಲಿ ಗುರುಬಸವನ ನಾಮನಿರ್ದೇಶ ಮಾತ್ರ ಸ್ಪಷ್ಟವಾಗಿದೆ.

ಗುರುಬಸವ ಎಂಬ ಹೆಸರಿನ ಒಬ್ಬ ವ್ಯಕ್ತಿ ನೂರೊಂದು ವಿರಕ್ತರಲ್ಲಿ ಪ್ರಸಿದ್ಧನಾಗಿದ್ದನೆಂದು ವೀರಶೈವ ಪುರಾಣಗಳು ಹೇಳುತ್ತವೆ. ಇವನೇ ಸಪ್ತಕಾವ್ಯಗಳ ಕರ್ತೃ ಎಂದು ಜನತೆ ನಂಬಿದೆ. ವಿಜಯನಗರ ಸಾಮ್ರಾಜ್ಯವನ್ನು ಸ್ಥಿರಗೊಳಿಸಿದ ಪ್ರೌಢದೇವರಾಯನ (ಕ್ರಿ.ಶ. 1419-1446) ಕಾಲದಲ್ಲಿ ಈ ಕವಿಯಿದ್ದನೆಂದು ಚೆನ್ನಬಸವಪುರಾಣದಿಂದ ತಿಳಿದುಬರುತ್ತವೆ. ಪ್ರೌಢದೇವರಾಯ ವೀರಶೈವನಾಗಿದ್ದು ಕನ್ನಡ ಸಾಹಿತ್ಯ, ಸಂಸ್ಕೃತಿಯ ಅಭಿವೃದ್ಧಿಗೆ ತುಂಬ ನೆರವಾದುದು ಇತಿಹಾಸಾವಲೋಕನದಿಂದ ಶ್ರುತವಾಗಿದೆ. ಆತನ ಕಾಲದಲ್ಲಿ ನೂರೊಂದು ವಿರಕ್ತರು ಉದಿಸಿ, ಹಂಪೆಯಲ್ಲಿ ನೆರೆದು ವೀರಶೈವಧರ್ಮವನ್ನು ಪ್ರಚುರಗೊಳಿಸಿದುದೂ ಅಷ್ಟೇ ಪ್ರಸಿದ್ಧವಾದ ವಿಷಯ. ಈ ವಿರಕ್ತರ ತಪಃಭಾವ ನಿಜವಾಗಿಯೂ ಅವರ್ಣನೀಯವಾದುದು. ಅವರು ಸಂಸಾರದ ಅಸಾರತೆಯನ್ನು ಕಂಡುಕೊಂಡು, ಜಂಗಮಸ್ಥಲವನ್ನಾಶ್ರಯಿಸಿ ಪರಮವೈರಾಗ್ಯಶೀಲರಾಗಿ ಮೆರೆದಿದ್ದಾರೆ. ಅವರಲ್ಲಿ ಕರಸ್ಥಲದ ನಾಗಿದೇವನಿಗೂ ಗುರುಬಸವನಿಗೂ ಮಹತ್ತ್ವದ ಸ್ಥಾನವಿದೆ. ಇವರಿಬ್ಬರ ಒಡನಾಟವನ್ನು ಚೆನ್ನಬಸವಪುರಾಣದಲ್ಲಿ ವಿವರಿಸಲಾಗಿದೆ. ಅಲ್ಲಿ ಹೇಳಿರುವುದನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಒಂದೆರಡು ಮಾತುಗಳು ಸ್ಪಷ್ಟವಾಗುತ್ತವೆ. ಗುರುಬಸವನ ಅರಮನೆ (ಮಠ) ವಿಜಯನಗರದಲ್ಲಿತ್ತು. ಕರಸ್ಥಲದ ನಾಗಿದೇವ ಆ ಮಠಕ್ಕೆ ಒಮ್ಮೆ ಬಂದು ಗುರುಬಸವನನ್ನು ಕಂಡಿದ್ದ. ಗುರುಬಸವ ವೇದ, ವೇದಾಂತ, ಪುರಾಣಾಗಮ, ಇತಿಹಾಸಾದಿಗಳಲ್ಲಿ ಬಲ್ಲಿದವನಾಗಿದ್ದು ಯೋಗಶಕ್ತಿಯಿಂದ ಅನೇಕ ಪವಾಡಗಳನ್ನು ಮೆರೆದನೆಂದೂ, ಪ್ರೌಢದೇವರಾಯನ ಸಮ್ಮುಖದಲ್ಲಿ ಪರವಾದಿಗಳನ್ನು ಗೆದ್ದು ಶಾರದೆಯ ಪೀಠವನ್ನು ಅಲಂಕರಿಸಿದನೆಂದೂ ಖೇಚರಶಕ್ತಿಯನ್ನು ಪ್ರದರ್ಶಿಸಿ, ಗಗನದಲ್ಲಿ ಈಜುತ್ತ ಸಕಲ ರಾಗಗಳನ್ನು ಹಾಡಿ, ಬಯಲಿನೊಳಗೆ ಬಯಲಾದನೆಂದೂ ಅದೇ ಪುರಾಣದಿಂದ ತಿಳಿದುಬರುತ್ತದೆ.

ಗುರುಬಸವನು ವಿಜಯನಗರಕ್ಕೆ ಬರುವ ಪೂರ್ವದಲ್ಲಿ ಎಲ್ಲಿದ್ದ, ಅವನ ಮೂಲ ಮಠ ಯಾವುದು, ತಂದೆತಾಯಿ ಯಾರು-ಎಂಬ ಪ್ರಶ್ನೆಗಳಿಗೆ ಬಿ. ಶಿವಮೂರ್ತಿ ಶಾಸ್ತ್ರಿಗಳು ಕೊಡುವ ಪರಿಹಾರಗಳನ್ನು ಗಮನಿಸಬಹುದು. ಕವಿ ಗುರುಬಸವನು ಶಿವಮೊಗ್ಗ ಜಿಲ್ಲೆಯ ಕ್ಯಾಸನೂರು ಮಠಾಧ್ಯಕ್ಷನಾಗಿದ್ದನೆಂದೂ, ವಿಜಯನಗರದ ರಾಯರ ಕಾಲದಲ್ಲಿಯೂ, ಕೆಳದಿಯ ದೊರೆಗಳ ಕಾಲದಲ್ಲಿಯೂ, ಕ್ಯಾಸನೂರು ಎಂಬುದಕ್ಕೆ ಸಂಸ್ಕೃತದಲ್ಲಿ ಖೇಚರಪುರಿ ಎಂದು ಹೇಳುವರೆಂದೂ, ಶಿವಯೋಗಿಯಾದ ಗುರುಬಸವನು ತನ್ನ ಯೋಗ ಸಾಮರ್ಥ್ಯದಿಂದ ಆಕಾಶದಲ್ಲಿ ಸಂಚರಿಸುತ್ತ ಇದ್ದುದರಿಂದ ಅವನಿದ್ದ ಊರಿಗೆ ಖೇಚರಪುರ ಎಂದು ಹೆಸರಾಯಿತೆಂದೂ ಐತಿಹ್ಯವುಂಟು. ಖೇಚರಪುರಿ ಎಂಬುದರ ಅಪಭ್ರಂಶವೇ ಕ್ಯಾಸನೂರು-ಇದು ಅವರ ಮತ.

ಗುರುಬಸವನು ಪ್ರೌಢದೇವರಾಯನ ಕಾಲದಲ್ಲಿ ಜೀವಿಸಿದ್ದನೆಂಬುದರ ಮೇಲೆ ಈತನ ಕಾಲ ಕ್ರಿ.ಶ. 1430ರ ಸುಮಾರು ಎಂದು ಹೇಳಲಡ್ಡಿಯಿಲ್ಲ. ಆದರೆ ಈತನಿಂದಲೇ ಸಪ್ತ ಕಾವ್ಯಗಳು ರಚಿತವಾದವೆಂದು ಹೇಳಲು ಖಚಿತ ಆಧಾರ ಇಂದಿಗೂ ದೊರೆತಿಲ್ಲ.

ಸಪ್ತಕಾವ್ಯಗಳು

[ಬದಲಾಯಿಸಿ]

ಈತನ ಸಪ್ತಕಾವ್ಯಗಳು ವೇದಾಂತವನ್ನು ಬೋಧಿಸುತ್ತವೆ; ಲಿಂಗಾಂಗಸಾಮರಸ್ಯಕ್ಕೆ ಯೋಗವೇ ಮೂಲವೆಂದು ಸಾರುತ್ತವೆ. ವಚನಾಗಮ, ವೇದೋಪನಿಷತ್ತುಗಳ ಸಾರವನ್ನು ಹೀರಿ, ನಿತ್ಯಸಾಧನೆಯನ್ನು ಬೋಧನೆಯ ರೂಪದಲ್ಲಿ ಕವಿ ನೀಡಿದ್ದಾನೆ.

ಗುರುಬಸವನ ಕೃತಿಗಳಲ್ಲಿ ಸದ್ಗುರು ರಹಸ್ಯ ನಿಜತತ್ತ್ವವನ್ನು ಬೋಧಿಸುತ್ತದೆ. ಈ ಕೃತಿ ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿದೆ. ಕಲ್ಯಾಣೇಶ್ವರ ಪರಿವರ್ಧಿನಿಯ ವಿವಿಧ ರಾಗಗಳಲ್ಲಿ ಮೂಡಿಬಂದು ಷಟ್‌ಸ್ಥಲ ವಿವರಣೆ ಮಾಡುತ್ತದೆ. ಸ್ವರೂಪಾಮೃತ ಜೀವಪರಮರ ಸ್ವರೂಪವನ್ನು ತಿಳಿಸಿ, ಅವರ ಪರಸ್ಪರ ಮಿಲನವೇ ಮುಕ್ತಿಯೆಂಬುದನ್ನು ಹೇಳುತ್ತದೆ. ಅವಧೂತಗೀತೆ ನೂರೊಂದು ಚೌಪದಿಗಳಲ್ಲಿ ಮೂಡಿ ಬಂದಿದೆ. ಜ್ಞಾನೋತ್ತರ ಮಾರ್ಗದ ವಿಧವಿಧಗಳನ್ನು ಅನುಭವಿಸುವವನೇ ಅವಧೂತನೆಂದು ಕವಿಯ ಮತವಾಗಿದೆ. ಮನೋವಿಜಯ ಕುಸುಮಷಟ್ಪದಿಯಲ್ಲಿದ್ದು ಮನೋನಿಗ್ರಹವನ್ನು ತಿಳಿಸುವ ಶ್ರೇಷ್ಠ ಕೃತಿ. ಶಿವಯೋಗಾಂಗ ವಿಭೂಷಣ ಯೋಗಗಳ ಅಂಗಗಳನ್ನು ವಿವರಿಸುತ್ತ ಶಿವಯೋಗದ ಮೇಲ್ಮೈಯನ್ನು ಹೇಳುತ್ತದೆ. ವೃಷಭಗೀತೆ ಭೋಗಷಟ್ಪದಿಯಲ್ಲಿದ್ದು ಒಂದು ಶತಕಕೃತಿ ಎನಿಸಿಕೊಂಡಿದೆ.

ಈತನ ಸಪ್ತಕಾವ್ಯಗಳಲ್ಲಿ ವೈವಿಧ್ಯವಿದೆ; ವೈಶಿಷ್ಟ್ಯವಿದೆ. ಈ ಕೃತಿಗಳು ಗುರು ಶಿಷ್ಯರ ಸಂವಾದರೂಪದಲ್ಲಿ ರಚಿತವಾಗಿವೆ. ಸುವಿವೇಕನೆಂಬ ಶಿಷ್ಯನಿಗೆ ದೇಶಿಕರು ಬೋಧೆ ಮಾಡುತ್ತಾರೆ. ವಿಷಯ ಸುಖದಲ್ಲಿ ಲೀನವಾದ ಶಿಷ್ಯನ ಮನಸ್ಸನ್ನು ಶಿವಯೋಗಾನಂದ ಸಾಗರಕ್ಕೆ ಸಾಗಿಸಬೇಕೆಂಬುದೇ ಸದ್ಗುರುವಿನ ಸಾಹಸ. ಗುರುಬಸವನ ಸಂಗೀತಜ್ಞಾನ ಅಗಾಧವಾದ್ದು. ಶಾಸ್ತ್ರಕ್ಕೆ ಸಂಗೀತದ ಒಪ್ಪವಿದ್ದರೆ ಮೃದುಮಧುರವಾಗುವುದೆಂದು ಕವಿ ಅರಿತಿದ್ದಾನೆ. ಕನ್ನಡ ಛಂದೋಮಟ್ಟುಗಳಲ್ಲಿ ರಾಗಬದ್ಧವಾಗಿ ಹಾಡಲು ಕವಿಗೆ ಹೆಚ್ಚಿನ ಉತ್ಸಾಹವಿದೆ. ಸಂಸ್ಕೃತ ಛಂದಸ್ಸನ್ನು ಅಲ್ಲಗಳೆದು ಕನ್ನಡ ಷಟ್ಪದಿಯನ್ನು ಅಪ್ಪಿಕೊಂಡುದು ಕವಿಯ ಶೈಲಿಯ ವೈಶಿಷ್ಟ್ಯವೆನ್ನಬಹುದು. ಕವಿಯ ವಾಣಿಯಲ್ಲಿ ಪ್ರಾಸಾದಗುಣವಿದೆ; ಭಾಷೆಯಲ್ಲಿ ಹದವಿದೆ. ಒಟ್ಟಿನಲ್ಲಿ, ಈ ಕವಿ ತತ್ತ್ವನಿರೂಪಣೆಗಾಗಿ ಬಳಸಿಕೊಂಡಿರುವ ನಿರ್ವಿಕಾರ ಮಾರ್ಗ, ತತ್ತ್ವಸಮನ್ವಯ ರೀತಿ, ಸಂಗೀತದ ಸೊಗಸು ಮನೋಹರವಾಗಿವೆ. ಸಪ್ತಕಾವ್ಯಗಳು ಶಾಸ್ತ್ರನಿರೂಪಣೆ ಮಾಡುವ ಕೃತಿಗಳಾದುದರಿಂದ ಮೋಕ್ಷಾಪೇಕ್ಷಿಗಳ ಮನಸ್ಸನ್ನು ಸೆಳೆಯಬಲ್ಲವು.

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗುರುಬಸವ&oldid=1282839" ಇಂದ ಪಡೆಯಲ್ಪಟ್ಟಿದೆ