ಗುಂಡಿಗೆ ಮತ್ತು ಪುಪ್ಫುಸಗಳ ಶಸ್ತ್ರಚಿಕಿತ್ಸೆ

ವಿಕಿಪೀಡಿಯ ಇಂದ
Jump to navigation Jump to search

ಯಾವುದೇ ಬಾಹ್ಯ ಉಪಕರಣಕ್ಕೆ ಅಪ್ರವೇಶ್ಯವಾಗಿದ್ದ ಎದೆಗೂಡಿನ ಒಳಭಾಗ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದು ಶಸ್ತ್ರಗಳಲ್ಲೂ ಶಸ್ತ್ರಚಿಕಿತ್ಸಾ ತಂತ್ರದಲ್ಲೂ ಬಲು ನಾಜೂಕಾದ ಪ್ರಗತಿ ಸಿದ್ಧಿಸಿದ ಬಳಿಕವೇ ಗುಂಡಿಗೆಯ ಮೇಲಿನ ಶಸ್ತ್ರಚಿಕಿತ್ಸೆ ಬಳಕೆಗೆ ಬಂದದು 20ನೆಯ ಶತಮಾನದಲ್ಲಿ; ಗಮನಾರ್ಹವಾಗಿ 1939ರ ತರುವಾಯ.


ಗುಂಡಿಗೆ ಮತ್ತು ಮಹಾರಕ್ತನಾಳಗಳ ಶಸ್ತ್ರಚಿಕಿತ್ಸೆ[ಬದಲಾಯಿಸಿ]

ಗುಂಡಿಗೆಗೆ ಪರಕೀಯ ವಸ್ತುವಿನ ಪ್ರವೇಶ ಅಥವಾ ಚೂಪಾದ ವಸ್ತುವಿನಿಂದಾಗುವ ಗಾಯ ಸಾಧಾರಣವಾಗಿ ಪ್ರಾಣಾಂತಿಕವೇ ಆಗುತ್ತದೆ. ಗುಂಡಿಗೆ ಪೊರೆಯಲ್ಲಿ ರಕ್ತ ತುಂಬಿಕೊಂಡು ಗುಂಡಿಗೆಯ ಅವಿಚ್ಚಿನ್ನ ಬಡಿತಕ್ಕೆ ಅಡಚಣೆ ಉಂಟಾಗುವುದೇ ಇದರ ಕಾರಣ. ಒಂದು ವೇಳೆ ಗುಂಡಿಗೆಗೆ ಗಾಯವಾದ ಕೂಡಲೇ ಸಾವು ಸಂಭವಿಸದಿದ್ದರೆ ಅದರ ಚುಚ್ಚುಗಾಯಗಳನ್ನು ಹೊಲಿದು ಸರಿಪಡಿಸುವವರೆಗೂ ಪೊರೆಯಲ್ಲಿ ಸೇರುವ ರಕ್ತವನ್ನು ತೆಗೆದುಹಾಕುವುದರ ಮೂಲಕ ಅದರ ಕಾರ್ಯ ಮುಂದುವರಿಯುವಂತೆ ಮಾಡಬಹುದು. ಈ ದಿಸೆಯಲ್ಲಿ, ಎಂದರೆ ಗುಂಡಿಗೆಯ ಶಸ್ತ್ರಚಿಕಿತ್ಸೆಯಲ್ಲಿ ಮೊದಲ ಯಶಸ್ಸು ವರದಿಯಾದದ್ದು 1896ರಲ್ಲಿ. ಆ ಬಳಿಕ ಇಂಥ ವರದಿಗಳು ವಿಪುಲ ಸಂಖ್ಯೆಯಲ್ಲಿ ಬಂದಿವೆ. 1940ರವರೆಗೂ ಗುಂಡಿಗೆಯ ಎಲ್ಲ ಗಾಯಗಳಿಗೂ ಹೊಲಿಗೆಯೊಂದೇ ಸರಿಯಾದ ಕ್ರಮ ಎಂದು ಭಾವಿಸಲಾಗಿತ್ತು. 1943ರ ವೇಳೆಗೆ ಹೊಸದೊಂದು ಶಸ್ತ್ರಚಿಕಿತ್ಸೆಕ್ರಮವನ್ನು ಎ. ಬ್ಲಲಾಕ್ ಮತ್ತು ಎ. ಎಂ. ರ್ಯಾವಿಚ್ ಸೂಚಿಸಿದರು. ಅವರ ಚಿಂತನೆ ಹರಿದಿದ್ದು ಹೀಗೆ. ಗುಂಡಿಗೆಯ ಗಾಯದಿಂದ ನಿಧಾನವಾಗಿ ರಕ್ತ ಸೋರಿಹೋಗಿ ಗುಂಡಿಗೆಗೆ ರಕ್ತದ ಮರಳಿಕೆಗೆ ಸಾಧ್ಯವಾಗದ್ದರಿಂದ ವ್ಯಕ್ತಿ ಸಾಯುತ್ತಾನೆ. ಈಗ ಗಾಯದಿಂದ ಒಸರುವ ರಕ್ತವನ್ನು ಯಾವುದೇ ವಿಧಾನದಿಂದ ಗುಂಡಿಗೆಗೆ ಮರಳಿಸುವುದು ಸಾಧ್ಯವಾದರೆ ಗಾಯವನ್ನು ಹೊಲಿಯದೇ ಚಿಕಿತ್ಸೆಯನ್ನು ಮುಂದುವರಿಸಬಹುದು; ಗಾಯದಿಂದಾಗುವ ರಕ್ತಸ್ರಾವ ಅಗಾಧವಾಗಿದ್ದು ಅದನ್ನು ತಡೆಗಟ್ಟಲು ಸಾಧ್ಯವೇ ಆಗದಾಗ ಮಾತ್ರ ಹೊಲಿಗೆ ಹಾಕಿ ಗಾಯವನ್ನು ಮುಚ್ಚಬೇಕು.


ಗುಂಡಿಗೆ ಪೊರೆಯೊಳಗಿರುವ ದೊಡ್ಡ ರಕ್ತನಾಳಗಳ ಚುಚ್ಚು ಗಾಯಗಳಿಂದ ಸಾವು ಉಂಟಾಗುವ ಸಾಧ್ಯತೆ ಹೆಚ್ಚು. ಏಕೆಂದರೆ ಗುಂಡಿಗೆ ಭಿತ್ತಿಯ ಗಾಯಗಳು ಮುಚ್ಚಿಕೊಳ್ಳುವಂತೆ ರಕ್ತನಾಳದ ಗಾಯಗಳು ಮುಚ್ಚಿಕೊಳ್ಳುವುದಿಲ್ಲ. ಇದರಿಂದ ಗುಂಡಿಗೆ ಮೇಲಿನ ಪೊರೆಯೊಳಗೆ ರಕ್ತ ಬೇಗ ಬೇಗ ತುಂಬಿಕೊಂಡು ಗುಂಡಿಗೆಯ ಕೆಲಸಕ್ಕೆ ಅಪಾಯಕರ ಅಡ್ಡಿಯನ್ನುಂಟುಮಾಡುತ್ತದೆ. ಪರಕೀಯ ವಸ್ತುಗಳು ಗುಂಡಿಗೆ ಪೇಶಿಯಲ್ಲಿ ಸಿಕ್ಕಿಕೊಂಡು ಅನಿರ್ದಿಷ್ಟಕಾಲ ಅಲ್ಲಿರಬಹುದು. ಗುಂಡಿಗೆ ಭಿತ್ತಿಯ ರಕ್ತನಾಳಗಳಲ್ಲಿ ರಕ್ತಚಲನೆಗೆ ಅಡ್ಡಿಯಾಗದೆ ಪರಕೀಯ ವಸ್ತು ದೊಡ್ಡದಾಗದಿದ್ದಲ್ಲಿ ಗುಂಡಿಗೆಯ ಕೆಲಸಕ್ಕೆ ಚ್ಯುತಿಬರುವುದಿಲ್ಲ. ದೊಡ್ಡ ವಸ್ತುಗಳಿಂದ ಹಾನಿಯಿರುವುದರಿಂದ ಅವನ್ನು ತೆಗೆದುಹಾಕಬೇಕು. ಈ ಶಸ್ತ್ರಕಾರ್ಯದಲ್ಲಿ ಸಾಧಾರಣವಾಗಿ ಹೆಚ್ಚು ಅಪಾಯವಿಲ್ಲ.


ಹೃದಯ ರಕ್ತನಾಳಗಳ ಹುಟ್ಟುವಿಕಲತೆಗಳು.[ಬದಲಾಯಿಸಿ]

 • ಮುಚ್ಚಿಕೊಳ್ಳದ ಡಕ್ಟಸ್ ಆರ್ಟೀರಿಯೋಸಸ್: ಇದು ಗರ್ಭಾವ್ಯಸ್ಥೆಯಲ್ಲಿ ಮಹಾಪಧಮನಿ ಮತ್ತು ಫುಪ್ಪಸ ಅಪಧಮನಿಗಳನ್ನು ಸೇರಿಸುವ ನಾಳ. ಗರ್ಭಸ್ಥ ಶಿಶುವಿನಲ್ಲಿ ಫುಪ್ಪಸಗಳಿಗೆ ಹೋಗದೆ ಮಹಾಪಧಮನಿಯನ್ನು ಸೇರಲು ಈ ನಾಳಗಳಿರುತ್ತವೆ. ಜನನದ ಬಳಿಕ ಉಸಿರಾಟ ಪ್ರಾರಂಭಿಸಿದ ಮೇಲೆ ಇದು ಮುಚ್ಚಿಕೊಳ್ಳತ್ತದೆ. ಹೀಗಾಗದೆ ನಾಳ ತೆರೆದಿದ್ದರೆ ರಕ್ತ ಫುಪ್ಪಸಗಳಿಗೆ ಸಾಕಷ್ಟು ಹೋಗದೆ ದೇಹಕ್ಕೆ ಆಕ್ಸಿಜನ್ನಿನ ಕೊರತೆಯಾಗಿ ಶಿಶುವಿನ ಬಣ್ಣ ನೀಲಿಯಾಗಿ ಗುಂಡಿಗೆಯ ಕಾರ್ಯ ಹೆಚ್ಚುತ್ತದೆ. ಆಗ ಅದು ದೊಡ್ಡದಾಗುತ್ತದೆ. ಕೂಸು ಬೆಳೆದಂತೆ ಹೆಚ್ಚು ಆಟವಾಡಲಾರದು: ಆಡಿದರೆ ಅದಕ್ಕೆ ಉಸಿರುಕಟ್ಟಿದಂತಾ ಗುವುದು. ಕೆಲವು ವೇಳೆ ರೋಗಕ್ರಿಮಿಗಳು ಈ ನಾಳದಲ್ಲಿ ಬೆಳೆದು ರಕ್ತದ ನಂಜು ಉಂಟಾಗುತ್ತದೆ. ನಾಳ ಉಬ್ಬುತ್ತಾ ಒಂದು ದಿನ ಒಡೆದು ಮಗು ಸಾಯಬಹುದು. ಆದರೆ ಹೀಗಾಗವುದು ಅಪರೂಪ. ಮುಚ್ಚಿಕೊಳ್ಳದ ಡಕ್ಟಸ್ ಆರ್ಟೀರಿಯೋಸಸ್ಸನ್ನು ಶಸ್ತ್ರಕ್ರಿಯೆಯಿಂದ ಮುಚ್ಚಬೇಕೆಂದು 1907ರಲ್ಲೇ ಸೂಚನೆ ಬಂದಿದ್ದರೂ ಅದು ಸಾಧ್ಯವಾಗಲಿಲ್ಲ. ಈ ಶಸ್ತ್ರಕ್ರಿಯೆ ಯಶಸ್ವಿಯಾಗಿ ನಡೆದದ್ದು 1939ರಲ್ಲಿ. ಅಂದಿನಿಂದ ಇದು ಅನೇಕ ಕಡೆ ತೃಪ್ತಿಕರವಾಗಿ ನಡೆದಿದೆ. ಈ ನಾಳವನ್ನು ದಾರದಿಂದ ಕಟ್ಟಿದರೆ ಅಥವಾ ಕತ್ತರಿಸಿ ಹೊಲಿದರೆ ಫುಪ್ಪಸಗಳಲ್ಲಿ ರಕ್ತಚಲನೆ ಸಮರ್ಪಕವಾಗಿ ಏರುವುದು ನಿಂತು ಎಲ್ಲವೂ ಸರಿಹೋಗುತ್ತವೆ. ಈ ವೇಳೇಗೆ ಗುಂಡಿಗೆ ಸರಿಹೋಗಲಾರದಷ್ಟು ಕೆಡದಿದ್ದರೆ ಆಯುಷ್ಯ ಕಡಿಮೆಯಾಗುವುದಿಲ್ಲ.


 • ಫ್ಯಾಲಟ್ನ ಚತುಷ್ಟಯ (ಫ್ಯಾಲಟ್ಸ್ ಟೆಟ್ರಾಲಜಿ) : ಎಂದರೆ ಹುಟ್ಟಿನಿಂದ ನಾಲ್ಕು ಆಕ್ರಮಗಳಿರುತ್ತವೆ. ಈ ರೋಗವನ್ನು ನೀಲಿ ಶಿಶುವಿನ ರೋಗವೆನ್ನುತ್ತಿದ್ದರು. ಇದರ ವಿವರಗಳು ಹೀಗಿವೆ.
 1. ಕಿರಿದಾದ ಫುಪ್ಪಸ ಅಪಧಮನಿ.
 2. ಎಡಬಲ ಹೃತ್ಕುಕ್ಷಿಗಳ ನಡುವೆ ತಡಿಕೆಯಿಲ್ಲದಿರುವುದು ಅಥವಾ ಅದರಲ್ಲಿ ತೂತಿರುವುದು.
 3. ಎರಡೂ ಹೃತ್ಕುಕ್ಷಿಗಳಿಂದ ರಕ್ತ ಅಗಲವಾದ ಮಹಾಪಧಮನಿಯೊಳಗೆ ನುಗ್ಗುವುದು.
 4. ಬಲಹೃತ್ಕುಕ್ಷಿ ಭಿತ್ತಿ ಹೆಚ್ಚು ದಪ್ಪವಾಗುವುದು. 1945ರಲ್ಲಿ ಬ್ಲಲಾಕ್ ಮತ್ತು ಟಾಸಿಗ್ ಎಂಬುವರು ಇದಕ್ಕೆ ನಡೆಸಿದ ಶಸ್ತ್ರಕ್ರಮ ಶಸ್ತ್ರವೈದ್ಯದ ಬೆಳೆವಣಿಗೆಯಲ್ಲಿ ಒಂದು ಮೈಲಿಗಲ್ಲಾಯಿತು.

ಮೇಲೆ ಹೇಳಿರುವ ನಾಲ್ಕು ಆಕ್ರಮಗಳ ಮುಖ್ಯ ಪರಿಣಾಮ ಫುಪ್ಪಸದಲ್ಲಿ ಕಡಿಮೆ ರಕ್ತ ಚಲನೆ. ಬ್ಲಲಾಕ್ ಕ್ರಮದಲ್ಲಿ ತೋಳಿನ ರಕ್ತನಾಳವನ್ನು (ಸಿಸ್ಟೆಮಿಕ್ ಆರ್ಟರಿ) ಫುಪ್ಪಸ ಅಪಧಮನಿಯ (ಪಲ್ಮನರಿ ಆರ್ಟರಿ) ಒಂದು ಶಾಖೆಗೆ ಹೊಲಿಯುವುದರಿಂದ ಫುಪ್ಪಸ ಅಪಧಮನಿಯ ಮೂಲದಲ್ಲಿ ರಕ್ತಕ್ಕಿರುವ ಅಡಚಣೆ ಪರಿಣಾಮ ತಪ್ಪಿದಂತಾಗಿ, ರಕ್ತ ತೋಳಿನ ರಕ್ತನಾಳದಿಂದ ಫುಪ್ಪಸಗಳಿಗೆ ನುಗ್ಗುತ್ತದೆ. ಇದೇ ಉದ್ದೇಶ್ಯದಿಂದ ಬೇರೆ ತಂತ್ರಗಳನ್ನೊಳಗೊಂಡ ಚಿಕಿತ್ಸೆಗಳು 1946ರಲ್ಲಿ ವರದಿಯಾದವು. ಒಂದು ವಿಶೇಷ ರೀತಿಯ ಉಪಕರಣದಿಂದ ಫುಪ್ಪಸ ರಕ್ತನಾಳ ಮತ್ತು ಅರ್ಯೋಟಗಳನ್ನು ಕೂಡಿಸುವುದು ಈ ತಂತ್ರಗಳಲ್ಲೊಂದು. ಫ್ಯಾಲಟ್ ಚತುಷ್ಟಯದಲ್ಲಿ ಶಸ್ತ್ರಪ್ರಯೋಗದ ಫಲಗಳು ಅದ್ಭುತ ಮತ್ತು ತೃಪ್ತಿಕರ. ಪ್ರಯೋಗವಾದ ಕೂಡಲೆ ಚರ್ಮದ ನೀಲಿಬಣ್ಣ ಮಾಯವಾಗಿ ನೈಸರ್ಗಿಕ ಬಣ್ಣ ಬರುತ್ತದೆ; ಶ್ರಮಸಹಿಷ್ಣುತೆ ಹೆಚ್ಚುತ್ತದೆ ಮತ್ತು ರಕ್ತದಲ್ಲಿ ಆಕ್ಸಿಜನ್ ಪ್ರಮಾಣ ಸರಿಹೋಗುತ್ತದೆ. ಈ ಶಸ್ತ್ರವೈದ್ಯದ ಅಪಾಯ ಕೇವಲ ಶೇ.10ರ ವರೆಗೆ. ಇದರ ಫಲಿತಾಂಶಗಳು ತೃಪ್ತಿಕರವಾಗಿವೆ. ಗುಂಡಿಗೆ-ಫುಪ್ಪಸ ಯಂತ್ರದಿಂದ ಕೃತಕವಾಗಿ ರಕ್ತಪರಿಚಲನೆ ಏರ್ಪಡಿಸಿ ನೇರವಾಗಿ ಗುಂಡಿಗೆಯ ಮೇಲೆ ಶಸ್ತ್ರಚಿಕಿತ್ಸೆ ನಡೆಸಿ ಎಡಬಲಹೃತ್ಕುಕ್ಷಿ ಮಧ್ಯೆ ತಡಿಕೆಯನ್ನು ಕೃತಕವಾಗಿ ಸೃಷ್ಟಿಸುವುದು ಮತ್ತು ಅಗತ್ಯವಾದ ಬದಲಾವಣೆಯನ್ನು ಮಾಡುವುದು ಹೆಚ್ಚು ತೃಪ್ತಿಕರವಾದ ಚಿಕಿತ್ಸೆಯಾಗಿದೆ. ಆದರೆ ಇದು ಸ್ವಲ್ಪ ಅಪಾಯಕಾರಿ ಕ್ರಮ.


 • ಫುಪ್ಪಸ ಅಪಧಮನಿಯ ಕಿರಿದಾದ ಮೂಲ: ಇದು ಹೃದಯ ಮತ್ತು ರಕ್ತನಾಳಗಳ ಇತರ ಕುಂದುಗಳಿಲ್ಲದೆ ಒಂಟಿಯಾಗಿರಬಹುದು. ಇದಿರುವ ಹೆಚ್ಚು ರೋಗಿಗಳಲ್ಲಿ ಹೃತ್ಕರ್ಣಗಳನ್ನು ಬೇರ್ಪಡಿಸುವ ತಡಿಕೆಯಲ್ಲಿ ರಂಧ್ರವಿರುತ್ತದೆ. ಈ ರೋಗದ ಕೆಟ್ಟ ಪರಿಣಾಮಗಳು ಫ್ಯಾಲೋನ ಚತುಷ್ಟಯದಿಂದಾದಂತಿರುತ್ತವೆ. ಏಕೆಂದರೆ ಫುಪ್ಪಸಗಳ ಮೂಲಕ ಆಕ್ಸಿಜನ್ ರಕ್ತವನ್ನು ಸಾಕಷ್ಟು ಸೇರಲಾರದು. ಈ ಸಮಸ್ಯೆಗೆ ನೇರ ಪರಿಹಾರವನ್ನು 1948ರಲ್ಲಿ ಲಂಡನಿನ ಆರ್. ಸಿ ಬ್ರಾಕ್ ಎಂಬಾತ ಕಂಡುಹಿಡಿದ. ಒಂದು ವಿಶೇಷ ರೀತಿಯ ಕತ್ತಿಯಿಂದ ಫುಪ್ಪಸ ಅಪಧಮನಿಯ ಮೂಲವನ್ನು ದೊಡ್ಡದು ಮಾಡುವುದೇ ಈ ಪರಿಹಾರ. ಮೂಲದಲ್ಲಿ ಮಾತ್ರ ಕಿರಿದಾಗಿರುವ ಫುಪ್ಪಸ ಅಪಧಮನಿ ಇರುವ ಫ್ಯಾಲಟ್ನ ಚತುಷ್ಟಯ ರೋಗಿಗಳಲ್ಲೂ ಈತನ ವಿಧಾನವನ್ನು ಉಪಯೋಗಿಸಲಾಗಿದೆ. ಫುಪ್ಪಸ ಅಪಧಮನಿ ಕಿರುಮೂಲವನ್ನು ಹೀಗೆ ಹಿಗ್ಗಿಸುವುದರಿಂದ ಬಲ ಹೃತ್ಕುಕ್ಷಿಯಿಂದ ಫುಪ್ಪಸ ರಕ್ತನಾಳಕ್ಕೆ ಸಾಕಷ್ಟು ರಕ್ತ ನುಗ್ಗಿ ಫುಪ್ಪಸಗಳಲ್ಲಿ ರಕ್ತ ಪರಿಚಲನೆ ಸಮರ್ಪಕವಾಗುವುದರಿಂದ ಫಲಿತಾಂಶ ಅದ್ಭುತವಾಗಿರುವುದು. ದೇಹದೋಷ್ಣತೆಯನ್ನು ತಗ್ಗಿಸಿ ಗುಂಡಿಗೆಯನ್ನು ನೋಡಲು ಸಾಧ್ಯವಾಗುವಂತೆ ಎದೆಯನ್ನು ಛೇದಿಸಿ ಗುಂಡಿಗೆ ಮತ್ತು ನಾಳಗಳ ಮೇಲೆ ನೇರಪ್ರಯೋಗ ನಡೆಸುವುದರಿಂದ ಶಸ್ತ್ರಕಾರ್ಯಗಳು ಹೆಚ್ಚು ತೃಪ್ತಿಕರವಾಗುತ್ತವೆ. ಇಲ್ಲಿ ಅಪಾಯ ಕಡಿಮೆ. ಹೃತ್ಕರ್ಣಗಳ ನಡುವೆ ಇರುವ ತೂತನ್ನು ಮುಚ್ಚಿದ ಕೂಡಲೆ ನೀಲಿಬಣ್ಣ ಮಾಯವಾಗಿ ಬಲಹೃತ್ಕರ್ಣ ಮತ್ತು ಬಲಹೃತ್ಕುಕ್ಷಿಗಳ ಮೇಲೆ ಬಿದ್ದಿರುವ ಕೆಲಸದ ಭಾರ ತಗ್ಗುತ್ತದೆ.


 • ಮಹಾಪಧಮನಿಯ ಕೊಆರ್ಕ್ಟೆಷನ್: ಎಂದರೆ ಡಕ್ಟಸ್ ಆರ್ಟೀರಿಯೋಸಸ್ ಸೇರುವಡೆ ಮಹಾಪಧಮನಿಯು ಚಿಕ್ಕದಾಗಿದ್ದು ಜನನದ ಬಳಿಕವೂ ಹಾಗೆಯೇ ಚಿಕ್ಕದಾಗಿರುವುದು. ಇದರಿಂದ ರಕ್ತ ಒತ್ತಡ ತಲೆತೋಳುಗಳಲ್ಲಿ ಹೆಚ್ಚು ಮತ್ತು ಮುಂಡ ಕಾಲುಗಳಲ್ಲಿ ಕಡಿಮೆ ಇರುತ್ತದೆ. ಚಿಕ್ಕದಾಗಿರುವ ಅರ್ಯೋಟ ಭಾಗದ ಮೇಲೆ ಕೆಳಗೆ ಇರುವ ಭಾಗಗಳನ್ನು ಸಂಬಂಧಿಸುವ ರಕ್ತನಾಳಗಳು ಹಿಗ್ಗಿ ದೊಡ್ಡವಾದರೂ ರಕ್ತದ ಒತ್ತಡಗಳ ವ್ಯತ್ಯಾಸವಿದ್ದೇ ಇರುತ್ತದೆ. ಇದರಿಂದ ಗುಂಡಿಗೆಗೆ ಹೆಚ್ಚು ಶ್ರಮವಾಗುವುದು. ರಕ್ತನಾಳಗಳು ಉಬ್ಬಿಕೊಳ್ಳುವುದು ಮತ್ತು ಮಿದುಳಿನಲ್ಲಿ ರಕ್ತಸ್ರಾವವಾಗುವುದು ಸಾಮಾನ್ಯ ಪರಿಣಾಮಗಳು. 1945ರಲ್ಲಿ ಸ್ಟಾಕೋಮಿನ ಸಿ. ಕ್ರಾಫರ್ಡ್ ಎಂಬಾತ ಚಿಕ್ಕದಾಗಿರುವ ಅರ್ಯೋಟ ಭಾಗವನ್ನು ಕತ್ತರಿಸಿಹಾಕಿ ಮಿಕ್ಕ ಅರ್ಯೋಟ ಭಾಗಗಳನ್ನು ಕೂಡಿಸಿ ಹೊಲಿಯುವ ತಂತ್ರವನ್ನು ಪ್ರಪಂಚಕ್ಕೆ ತಿಳಿಸುವವರೆಗೂ ಚಿಕ್ಕ ಅರ್ಯೋಟ ಭಾಗವಿರುವವರ ಆಯುಷ್ಯ ತೀರ ಕಡಿಮೆಯೇ ಇತ್ತು. ಈ ವೈದ್ಯದಲ್ಲಿ ಅಪಾಯ ಶೇ.5 ಕ್ಕಿಂತ ಕಡಿಮೆ.


 • ತಡಿಕೆಗಳ ಕೊರತೆಗಳು : ಬಲ ಎಡ ಹೃತ್ಕರ್ಣಗಳಿಗೂ ಬಲ ಹೃತ್ಕುಕ್ಷಿಗಳಿಗೂ ಸಂಬಂಧವನ್ನು ಕಲ್ಪಿಸುತ್ತವೆ. ಭ್ರೂಣಾವಸ್ಥೆಯಲ್ಲಿ ಈ ತಡಿಕೆಗಳು ಪೂರ್ತಿಯಾಗಿ ಬೆಳೆಯದೆ ಇರುವುದರಿಂದ ಇವು ಆಗುತ್ತವೆ. ಹೃತ್ಕರ್ಣಗಳ ನಡುವೆ ಇರುವ ತಡಿಕೆ ಕೊರತೆಗಿಂತಲೂ ಹೃತ್ಕುಕ್ಷಿಗಳ ನಡುವೆ ಇರುವ ತಡಿಕೆಯ ಕೊರತೆಯಿಂದ ಹೆಚ್ಚು ಕೆಡಕು. ಇದನ್ನು ಶಸ್ತ್ರವೈದ್ಯರಿಂದ ಸರಿಪಡಿಸುವುದೂ ಕಷ್ಟ. ಈ ಕೊರತೆಯಿಂದಾಗಿ ಗುಂಡಿಗೆ ಸಾಧಾರಣವಾಗಿ ಹೆಚ್ಚು ಶ್ರಮದಿಂದ ದಣಿದು ಕೊನೆಗೆ ಪುರ್ತಿ ಸೋಲುವುದು. 1950ರ ದಶಕದಲ್ಲಿ ಯಶಸ್ವೀ ಶಸ್ತ್ರ ಚಿಕಿತ್ಸೆಯ ವರದಿಗಳು ಕೆಲವಾಗಿದ್ದರೂ ಈ ಕೊರತೆಗಳನ್ನು ಶಸ್ತ್ರಗಳಿಂದ ಸರಿಪಡಿಸುವ ವಿಧಾನಗಳು ಖಚಿತವಾಗಿ ನಿರ್ಧರಿಸಲ್ಪಟ್ಟಿಲ್ಲ. ಗುಂಡಿಗೆಯನ್ನು ಕೊಯ್ಯದೆಯೇ ಸರಿಪಡಿಸುವ ವಿಧಾನವನ್ನು ಮೊತ್ತಮೊದಲು ವರದಿಯಾದದ್ದು 1952ರಲ್ಲಿ. ಪೂರ್ತಿ ಅಥವಾ ಸ್ವಲ್ಪ ಗುಂಡಿಗೆಯನ್ನು ಬಿಚ್ಚಿ ನೇರವಾಗಿ ಕಣ್ಣಿನಿಂದ ನೋಡುತ್ತ ಸರಿಪಡಿಸುವ ವಿಧಾನಗಳನ್ನು ಉಪಯೋಗಿಸಲಾಯಿತು. ತಡಿಕೆ ತೂತುಗಳನ್ನು ಶಸ್ತ್ರಗಳಿಂದ ಮುಚ್ಚುವದರಿಂದಾಗುವ ಪ್ರಯೊಜನ ಪ್ರಶಸ್ತವಾಗಿರಬಹುದು. ಆದರೆ ಹೊಲಿಯಲು ಸಾಕಷ್ಟು ಆಧಾರವಿಲ್ಲದಂಥ ದೊಡ್ಡ ತೂತುಗಳನ್ನು ಸರಿಪಡಿಸುವುದರಿಂದ ಫಲ ತೃಪ್ತಿಕರವಾಗಿಲ್ಲ. ಈ ಶಸ್ತ್ರಚಿಕಿತ್ಸೆಯ ಕಾಲದಲ್ಲಿ ಉಪಯುಕ್ತವಾದ ಅಂಶಗಳಿವು :
 1. ದೇಹೋಷ್ಣತೆಯನ್ನು 30° ಸೆಂ.ವರೆಗೆ ತಗ್ಗಿಸುವುದು.
 2. ದೇಹಬಾಹಿರ ರಕ್ತಚಲನೆ ಅಂದರೆ ಕೊಳವೆಗಳ ಸಹಾಯದಿಂದ ಆಕ್ಸಿಜನ್ ವಿರಳ ರಕ್ತವನ್ನು ಮಹಾಭಿಧಮನಿಗಳಿಂದ ಹೊರತೆಗೆದು ಆಕ್ಸಿಜನ್ನನ್ನು ಕೊಳವೆಗಳ ಸಹಾಯದಿಂದ ಅದರೊಳಗೆ ಗುಳುಗುಳು ಎಂದು ಪ್ರವಹಿಸಿ ಪುನಃ ಅಪಧಮನಿಗಳಿಗೆ ಪಂಪ್ ಮಾಡುವುದು ; ಇದರಿಂದ ರಕ್ತ ಗುಂಡಿಗೆ ಮತ್ತು ಫುಪ್ಪಸಗಳಿಗೆ ಹೋಗದಂತಾಗಿ ಗುಂಡಿಗೆ ಮೇಲಿನ ಶಸ್ತ್ರಪ್ರಯೋಗದಿಂದ ರಕ್ತನಷ್ಟವಾಗದಂತೆ ತಡೆಯಲು ಸಾಧ್ಯ. ಈ ರೀತಿ ಗುಂಡಿಗೆಯನ್ನು ಬಿಚ್ಚಿ ತಡಿಕೆ ತೂತುಗಳನ್ನು ನೇರದೃಷ್ಟಿಯಲ್ಲಿ ಸರಿಪಡಿಸುವುದು 1956ರಿಂದ ಈಚೆಗೆ ಉತ್ತಮ ವಿಧಾನವಾಗಿದೆ.


ಜನನಾಂತರ ಉಂಟಾಗುವ ಕುಂದುಗಳು.[ಬದಲಾಯಿಸಿ]

ಎಡ ಅರೆಚಂದ್ರಾಕಾರದ ಕವಾಟ ಮತ್ತು ಮೈಟ್ರಲ್ ಕವಾಟಗಳ ಅಶಕ್ತತೆ ಇಲ್ಲವೆ ಚಿಕ್ಕದಾಗುವಿಕೆ

ಕೀಲು ನೋವು ಜ್ವರ (ರ್ಯೂಮ್ಯಾಟಿಕ್ ಫೀವರ್) ಬಂದಾಗ ರೋಗಾಣುಗಳ ಮಹಾಪಧಮನಿ ಮತ್ತು ಮೈಟ್ರಲ್ ಕವಾಟಗಳಲ್ಲಿ ರೋಗವನ್ನು ಉಂಟುಮಾಡುವುದರಿಂದ ಕವಾಟಗಳು ಚಿಕ್ಕವಾಗಿ ರಕ್ತ ನುಗ್ಗುವಿಕೆಗೆ ಅಡಚಣೆ, ಇಲ್ಲವೆ ದಳಗಳ ನಾಶ ಅಥವಾ ವಿಕಲತೆ ಉಂಟಾಗಿ ಅವು ಸರಿಯಾಗಿ ಕೆಲಸ ಮಾಡದೆ ರಕ್ತ ಮೈಟ್ರಲ್ ಕವಾಟದ ಮೂಲಕ ಎಡಹೃತ್ಕುಕ್ಷಿಯಿಂದ ಎಡಹೃತ್ಕರ್ಣಕ್ಕೆ ಇಲ್ಲವೆ ಮಹಾಪಧಮನಿಯಿಂದ ಎಡಹೃತ್ಕುಕ್ಷಿಗೆ ಹಿನ್ನುಗ್ಗುವಂತಾಗುವುದು. ಇದರಿಂದಾಗುವ ಮುಖ್ಯ ಕೆಡುಕೆಂದರೆ ಗುಂಡಿಗೆಗೆ ಹೆಚ್ಚು ಶ್ರಮವಾಗಿ ಕೊನೆಗೆ ಅದು ಪೂರ್ತಿ ಸೋತು ನಿಂತು ಹೋಗುವುದು. ಮೈಟ್ರಲ್ (ದ್ವಿದಳ) ಕವಾಟ ಚಿಕ್ಕದಾಗಿರುವುದರ ನಿರ್ಣಯ ಮತ್ತು ಇದನ್ನು ಶಸ್ತ್ರದಿಂದ ಸರಿಪಡಿಸುವ ಪ್ರಯತ್ನದ ವರದಿ 1922ರಲ್ಲೇ ಆಗಿದ್ದರೂ 1948ರಲ್ಲಿ ಕಾಮಿಶ್ಯೂರಾಟಮಿ ಎಂಬ ಶಸ್ತ್ರವಿಧಾನದ ಆವಿಷ್ಕಾರವಾಗುವವರಗೆ ನಿಜವಾದ ತೃಪ್ತಿಕರ ಮಾರ್ಗವಿರಲಿಲ್ಲ. ಬೆರಳು ಅಥವಾ ಶಸ್ತ್ರದಿಂದ ಚಿಕ್ಕದಾದ ಕವಾಟವನ್ನು ಹಿಗ್ಗಿಸುವುದರಿಂದ ಹಲವು ವೇಳೆ ಕವಾಟಕಾರ್ಯ ಸರಿಹೋಗಿ ರೋಗಿ ನಿರೋಗಿಯಾಗುತ್ತಾನೆ. ಶಸ್ತ್ರಕ್ರಮದ ಕಾಲದಲ್ಲಿರುವ ಕವಾಟದ ಮತ್ತು ಗುಂಡಿಗೆಯ ಸ್ಥಿತಿಗಳಿಗೆ ಅನುಸಾರವಾಗಿ ಶಸ್ತ್ರ ವೈದ್ಯದ ಅಪಾಯ ಉಂಟು. ರೋಗದ ತರುಣ ಸ್ಥಿತಿಯಲ್ಲಿ ಅಪಾಯ ಶೇ.5 ಕ್ಕಿಂತ ಕಡಿಮೆ; ರೋಗ ತೀವ್ರವಾಗಿದ್ದರೆ ಅಪಾಯ ಶೇ.25 ಅಥವಾ ಹೆಚ್ಚು ಇರಬಹುದು. 1950ರ ದಶಕದ ಕೊನೆಯ ವರ್ಷಗಳಲ್ಲಿ ಮೈಟ್ರಲ್ ಅಶಕ್ತತೆ ಮತ್ತು ಚಿಕ್ಕದಾದ ಹಾಗೂ ಅಶಕ್ತ ಕವಾಟದ ಶಸ್ತ್ರವೈದ್ಯ ಇನ್ನೂ ಬಾಲ್ಯಾವಸ್ಥೆಯಲ್ಲಿತ್ತು. ದೇಹಬಾಹಿರ ರಕ್ತಚಲನೆ ಮತ್ತು ತಗ್ಗಿಸಿದ ದೇಹೋಷ್ಣತೆಗಳಿಂದ ಗುಂಡಿಗೆಯನ್ನು ಬಿಚ್ಚಿ ಶಸ್ತ್ರವೈದ್ಯ ಮಾಡುವುದು ರೂಢಿಗೆ ಬಂದ ಮೇಲೆ ಆಶಾಭಾವನೆ ಹುಟ್ಟಿತು. ಆ ವೇಳೆಗೆ ಉಪಜ್ಞೆಗೊಂಡು ಬಳಕೆಗೆ ಬಂದ ಪ್ಲಾಸ್ಟಿಕ್ ಕವಾಟದಿಂದ ಅಶಕ್ತ ಮಹಾಪಧಮನಿಯ ಅರೆಚಂದ್ರಾಕಾರ ಕವಾಟದ ರೋಗಿಗಳಿಗೆ ಹೆಚ್ಚು ಒಳ್ಳೆಯದಾಯಿತು. ಪ್ರಯೋಗ ಶಾಲೆಯ ಪ್ರಾಣಿಗಳಲ್ಲಿ ಪ್ಲಾಸ್ಟಿಕ್, ಉಕ್ಕು ಮತ್ತು ಇತರ ಪದಾರ್ಥಗಳಿಂದ ಮಾಡಿದ ಕವಾಟಗಳು ಹೆಚ್ಚು ಕಡಿಮೆ ತೃಪ್ತಿಕರ ಫಲಗಳು ನೀಡಿದವು. 1950ರ ದಶಕದ ಕೊನೆಯ ವರ್ಷಗಳಲ್ಲಿ ಈ ಕೃತಕ ಕವಾಟಗಳಿಗಿಂತ ಶಸ್ತ್ರವೈದೈ ತನ್ನ ಕಣ್ಣೆದರು ಕವಾಟಕುಂದುಗಳನ್ನು ಸರಿಪಡಿಸುವುದು ಉತ್ತಮ ಮಾರ್ಗವೆಂದು ಕಂಡುಬಂದಿತು.

ಹಿಸುಕುವ ಹೃದಯಪೊರೆ ಉರಿತ

(ಕನ್ಸ್‌ಟ್ರಿಕ್ಟಿವ್ ಪೆಲಿಕಾರ್ಡೈಟಿಸ್): ರೋಗಕ್ರಿಮಿಗಳು ಗುಂಡಿಗೆ ಮೇಲಿನ ಪೊರೆಯೊಳಗೆ ಸೇರಿ ದೀರ್ಘಕಾಲದ ಊತವನ್ನು ಉಂಟು ಮಾಡಿ ದೃಢಗೊಂಡು ಗುಂಡಿಗೆಯನ್ನು ಬಿಗಿಯಾಗಿ ಸುತ್ತುವರಿದು ಅದರ ವಿಕಾಸಕ್ಕೆ ಆತಂಕವನ್ನು ಉಂಟುಮಾಡುತ್ತವೆ. ಕೀಲುನೋವುಜ್ವರ ಮತ್ತು ಕ್ಷಯರೋಗಕ್ರಿಮಿಗಳು ಇದಕ್ಕೆ ಬಹುಸಾಮಾನ್ಯ ಕಾರಣಗಳೆಂದು ತಿಳಿಯಲಾಗಿದೆ. ಮೇಲುಪೊರೆಯ ಬಿಗಿಹಿಡಿತದಿಂದಾಗಿ ದೇಹದ ಭಾಗಗಳಿಂದ ಆಕ್ಸಿಜನ್ವಿರಳ ರಕ್ತ ಗುಂಡಿಗೆಗೆ ಹಿಂತಿರುಗಲು ಅಡ್ಡಿಯಾಗುವುದರಿಂದ ಕೆಡಕುಂಟಾಗುವುದು. ಕ್ರಮೇಣ ಮೇಲುಪೊರೆ ಚಿಕ್ಕದಾಗುತ್ತಿರಬಹುದು. 1898ರಲ್ಲಿ ಫ್ರಾನ್ಸಿನ ಇ. ಡಿ. ಡೀಲಾರ್ಮ್ ಎಂಬಾತ ದೃಢವಾದ ಮತ್ತು ಬಿಗಿಯುವ ಈ ಮೇಲುಪೊರೆಯನ್ನು ತೆಗೆಯುವುದು ಒಳ್ಳೆಯದೆಂದು ಹೇಳಿದ. ಇದನ್ನು ತೃಪ್ತಿಕರವಾಗಿ ಮಾಡುವುದು 1920ರಲ್ಲಿ ಸಿದ್ಧಿಸಿತು. ಗುಂಡಿಗೆ ಸರಿಯೇ ಆಗಲಾರದಷ್ಟು ಕೆಟ್ಟುಹೋಗಿದ್ದರೆ ಅಂಥ ರೋಗಿಯಲ್ಲಿ ಶಸ್ತ್ರಚಿಕಿತ್ಸೆಯನ್ನು ಸರಿಯಾಗಿ ಮಾಡಿದರೆ ಬಾಳು ಮುಂದುವರಿಯಲು ತೊಂದರೆ ಆಗದು.


ಫುಪ್ಪಸಗಳ ಶಸ್ತ್ರವೈದ್ಯ.೧ ಫುಪ್ಪಸದ ಏಡಿಗಂತಿ: ದುರ್ಮಾಂಸಗಳ ಬೆಳೆವಣಿಗೆಯಲ್ಲಿ ಶೇ.10 ರಷ್ಟು ಕಾಣಿಸುತ್ತದೆ. 1925ರ ತರುವಾಯ ಇದು ಮುಂಚೆಗಿಂತ ಶೇ.40 ಮೇಲ್ಪಟ್ಟು ಹೆಚ್ಚಿತು. ಇದಕ್ಕೆ ಕಾರಣಗಳು ಸರಿಯಾಗಿ ಗೊತ್ತಿಲ್ಲದಿದ್ದರೂ ಶ್ವಾಸನಾಳ ಶಾಖೆಗಳಲ್ಲಿ ಕೆಲವು ರಾಸಾಯನಿಕ ವಸ್ತುಗಳ ಪ್ರಭಾವ ನಿಸ್ಸಂದೇಹವಾಗಿ ಈ ಬೆಳವಣಿಗೆಯನ್ನು ಉಂಟುಮಾಡುತ್ತದೆ ಎಂದು ತಿಳಿದಿದೆ. 1933ರ ವರಗೆ ಫುಪ್ಪಸದ ಏಡಗಂತಿಗೆ ಚಿಕಿತ್ಸೆಯೇ ಇರಲಿಲ್ಲ. ಆ ವರ್ಷದಲ್ಲಿ ಇ. ಎ. ಗ್ರಾಹಾಂ ಮತ್ತು ಜೆ. ಜೆ. ಸಿಂಗರ್ ಎಂಬುವರು ಏಡಿಗಂತಿ ವ್ಯಾಪಿಸಿದ್ದ ಫುಪ್ಪಸವನ್ನು ಪೂರ್ತಿಯಾಗಿ ತೆಗೆದುಹಾಕಿ ಮೊದಲ ಜಯವನ್ನು ಪಡೆದರು. ಆ ರೋಗಿ ಒಬ್ಬ ವೈದ್ಯನೇ ಆಗಿದ್ದ. ಆತ ಮುಂದೆ ಏಡಿಗಂತಿಯ ಸೂಚನೆಯೇ ಇಲ್ಲದೆ 25 ವರ್ಷ ಬದುಕಿದ್ದ. ಫುಪ್ಪಸದ ಏಡಗಂತಿ ಮತ್ತು ಅದರ ಶಸ್ತ್ರವೈದ್ಯದ ಅಧ್ಯಯನ ಬಹಳವಾಗಿ ನಡೆದಿವೆ. ಕೆಲವು ವೇಳೆ, ಅದರಲ್ಲೂ ಮುದುಕರಲ್ಲಿ ಫುಪ್ಪಸದ ಬಹುಭಾಗವನ್ನು ತೆಗೆಯುವುದರಿಂದ ಕಡಿಮೆ ಅಪಾಯ ಮತ್ತು ಹೆಚ್ಚು ಗುಣ ಕಂಡುಬಂದಿದೆ. ಎಕ್ಸ್ ಕಿರಣಗಳ ನೆರವಿನಿಂದ ಫುಪ್ಪಸದ ಏಡಗಂತಿಯನ್ನು ಆರಂಬದಲ್ಲೇ ಗುರುತಿಸುವುದು ಸಾಧ್ಯ. ಹೀಗಾಗಿ ಈ ವ್ಯಾಧಿಯಿಂದ ನರಳುವವರಿಗೆ ಯುಕ್ತ ವೇಳೆ ಸಮರ್ಪಕ ಚಿಕಿತ್ಸೆ ಮಾಡಬಹುದು. 50 ವರ್ಷಕ್ಕಿಂತ ಕಡಿಮೆ ವಯಸ್ಸಾದವರಲ್ಲಿ ಫುಪ್ಪಸದ ಶಸ್ತ್ರವೈದ್ಯದ ಅಪಾಯ ಶೇ.5 ಕ್ಕಿಂತ ಕಡಿಮೆ ; ಹೆಚ್ಚು ವಯಸ್ಸಿನವರಲ್ಲಿ ಅಪಾಯ ಸುಮಾರು ಶೇ.15.


ಫುಪ್ಪಸದ ಹುಟ್ಟುವಿಕಲತೆ

ಬುಡ್ಡೆಗಳ ರೋಗ ಹುಟ್ಟುವಾಗಲೇ ಇರಬಹುದು. ಅನೈಸರ್ಗಿಕ ಬೆಳೆವಣಿಗೆಯಿಂದ ಫುಪ್ಪಸದಲ್ಲಿ ಒಂದು ಅಥವಾ ಹೆಚ್ಚು ಸಣ್ಣ ಅಥವಾ ದೊಡ್ಡ ಬುಡ್ಡೆಗಳಾಗಬಹುದು. ಇದರಿಂದ

 1. ಬುಡ್ಡೆಗಳಲ್ಲಿ ರೋಗಕ್ರಿಮಿಗಳು ಸೇರಿ ಕೀವು ಬುಡ್ಡೆಗಳಾಗವುವು ಅಥವಾ ಶ್ವಾಸನಾಳ ಶಾಖೆಗಳು ಶಿಥಿಲಗೊಂಡು ದೊಗಳೆ ಗಾಳಿಕೊಳವೆಗಳಾಗುವುವು; ಇಲ್ಲವೆ
 2. ಬುಡ್ಡೆಗಳು ದೊಡ್ಡವಾಗಿ ಫುಪ್ಪಸದ ಗಾಳಿಕೊಳವೆಗಳನ್ನು ಅಮುಕುವುದರಿಂದ ಶ್ವಾಸ ಕಾರ್ಯಕ್ಕೆ ಆತಂಕವುಂಟಾಗುವುದು. ಈ ಹುಟ್ಟುಬುಡ್ಡೆಗಳಿಗೂ ಬೆಳೆದವರಲ್ಲಿ ಕಾಲಕ್ರಮೇಣ ಉಂಟಾಗುವ ಬುಡ್ಡೆಗಳಿಗೂ ವ್ಯತ್ಯಾಸ ಉಂಟು. ನಿಧಾನವಾಗಿ ಬೆಳೆಯುವ ಬುಡ್ಡೆಗಳು 40-50 ವರ್ಷ ವಯಸ್ಸು ದಾಟಿದವರಲ್ಲಿ ಕಾಣಬರುತ್ತವೆ. ಫುಪ್ಪಸದ ಭಾಗವನ್ನು ಅಪಾಯವಿಲ್ಲದೆ ತೆಗೆದುಹಾಕುವ ರೀತಿಯನ್ನು 1931ರಲ್ಲಿ ಕಂಡುಹಿಡಿದ ಬಳಿಕ ಈ ವೈದ್ಯವನ್ನು ಫುಪ್ಪಸದ ಬುಡ್ಡೆಗಳ ಚಿಕಿತ್ಸೆಗೂ ಉಪಯೋಗಿಸಲಾಯಿತು. ಸರಿಯಾಗಿ ಕೆಲಸ ಮಾಡುವ ಫುಪ್ಪಸದ ಭಾಗಗಳನ್ನು ಬಿಟ್ಟು ಬುಡ್ಡೆಗಳಿರುವ ಭಾಗಗಳನ್ನು ಮಾತ್ರ ತೆಗೆಯುವುದೇ ಶಸ್ತ್ರವೈದ್ಯದ ಗುರಿ. ಬುಡ್ಡೆರೋಗ ಫುಪ್ಪಸದ ಕಾಲುಭಾಗಕ್ಕಿಂತ ಕಡಿಮೆ ಭಾಗದಲ್ಲಿರುವುದರಿಂದ ಬುಡ್ಡೆ ಭಾಗವನ್ನು ಮಾತ್ರ ತೆಗೆದುಹಾಕುವುದರಿಂದ ರೋಗಿ ಸಂಪೂರ್ಣ ಗುಣ ಹೊಂದುತ್ತಾನೆ. ಹುಟ್ಟುವಿಕಲತೆ ಮುಖ್ಯವಾಗಿ ಫುಪ್ಪಸದ ರಕ್ತನಾಳಗಳಲ್ಲಿ ಮಾತ್ರ ಇರಬಹುದು. ಅಪಧಮನಿ ಅಭಿಧಮನಿ ಸಂಯೋಗ ಒಂದು ಸಾಮಾನ್ಯ ವಿಕಲತೆ. ಇದರಿಂದ ಆಕ್ಸಿಜನ್ನಿನ ಕೊರತೆ ಉಂಟಾಗುವುದು. ಈ ರಕ್ತನಾಳಗಳ ಸಂಯೋಗಗಳು ಕ್ರಮೇಣ ದೊಡ್ಡವಾಗುತ್ತ ಕೊನೆಗೆ ಒಡೆದು ರಕ್ತ ಸೋರಿ ಸಾವು ಸಂಭವಿಸಬಹುದು. ಇದಕ್ಕಿರುವ ಒಂದೇ ಮಾರ್ಗವೆಂದರೆ ವಿಕಲಭಾಗಗಳನ್ನು ತೆಗೆದುಹಾಕುವ ಶಸ್ತ್ರವೈದ್ಯ. ಈ ವಿಕಲತೆ ಅಲ್ಲದೆ ಇತರ ನ್ಯೂನತೆ ಇಲ್ಲದೆ ಇಂಥ ರೋಗಿಯಲ್ಲಿ ಶಸ್ತ್ರವೈದ್ಯದ ಅಪಾಯ ಶೇ.5 ಕ್ಕಿಂತ ಕಡಿಮೆ.


ಫುಪ್ಪಸ ಕ್ಷಯ ರೋಗ

ಎದೆಯ ಶಸ್ತ್ರವೈದ್ಯರಿಂದ ಗುಣ ಕಾಣಿಸುವ ರೋಗಗಳಲ್ಲಿ ಫುಪ್ಪಸ ಕ್ಷಯವೊಂದು. 1940ಕ್ಕಿಂತ ಮುಂಚೆ ಪಕ್ಕೆಲುಬುಗಳ ಭಾಗಗಳನ್ನು ಕತ್ತರಿಸಿಹಾಕಿ ಎದೆಯ ಭಿತ್ತಿ ಒಳಕ್ಕೆ ಹೋಗುವಂತೆ ಮಾಡುವ ಥೊರೆಕೊಪ್ಲಾಸ್ಟಿ ಎಂಬ ಶಸ್ತ್ರವೈದ್ಯ ಕ್ಷೇಮಕರ ಮತ್ತು ಪರಿಣಾಮಕಾರಿಯಾಗಿತ್ತು. ಕೆಲವು ಪ್ಯಾರಾಫಿನ್ ಮೇಣವನ್ನು ತುಂಬುವ ಪರಿಷ್ಕರಿಸಿದ ಥೊರೆಕೊಪ್ಲಾಸ್ಟಿ ಯಶಸ್ವಿ ಆಗುತ್ತಿತ್ತು. ಕ್ಷಯರೋಗಕ್ರಿಮಿಗಳನ್ನು ತಡೆಗಟ್ಟುವ ಮದ್ದುಗಳು ತಯಾರಾಗುವವರೆಗೂ ಫುಪ್ಪಸದ ರೋಗಪೀಡಿತ ಭಾಗಗಳನ್ನು ತೆಗೆದುಹಾಕುವ ಕ್ರಮ ಮುಂದುವರಿಯಲಿಲ್ಲ. ಇಡೀ ಫುಪ್ಪಸವನ್ನು ತೆಗೆದುಹಾಕುವುದರಿಂದ ಅಪಾಯ ಸುಮಾರು ಶೇ.45 ಮತ್ತು ಫುಪ್ಪಸಭಾಗವನ್ನು ತೆಗೆದುಹಾಕುವುದರಿಂದ ಸುಮಾರು ಶೇ.26ರಷ್ಟಿದ್ದಿತು (1942). ರೋಗಕ್ರಿಮಿಗಳನ್ನು ನಾಶಪಡಿಸುವ ಸ್ಟ್ರೆಪ್ಟೊಮೈಸಿನ್ 1944ರಲ್ಲೂ ಪ್ಯಾರ ಅಮೈನೊಸಾಲಿಸಿಲಿಕ್ ಆಮ್ಮ 1946ರಲ್ಲಿ ಐಸೊನಿಕೊಟಿನಿಕ್ ಆಮ್ಲ 1952ರಲ್ಲೂ ಚಾಲ್ತಿಗೆ ಬಂದ ಮೇಲೆ ಶಸ್ತ್ರವೈದ್ಯದ ಸುರಕ್ಷತೆ ಹೆಚ್ಚಿತು; ಮತ್ತು ರೋಗ ಮುಂದುವರಿದಿದ್ದಾಗಲು ಶಸ್ತ್ರಪ್ರಯೋಗ ನಡೆಸುವ ಸಾಧ್ಯತೆ ಹೆಚ್ಚಿತು. ಅಷ್ಟೇ ಅಲ್ಲದೆ ಈ ಮದ್ದುಗಳ ಉಪಯೋಗದಿಂದ ರೋಗ ಹತೋಟಿಗೆ ಬಂದು ಶಸ್ತ್ರವೈದ್ಯ ಬೇಕಾಗುವ ರೋಗಭಾಗಗಳು ಚಿಕ್ಕವಾಗಿರುವ ಸಾಧ್ಯತೆ ಅಧಿಕವಾಯಿತು. ಇಡೀ ಫುಪ್ಪಸವನ್ನು ತೆಗೆದುಹಾಕುವುದು (ಇದು 1955ರ ಬಳಿಕ ಬಹಳ ಅಪರೂಪವಾಯಿತು) ಹಾಗೂ ಫುಪ್ಪಸದ ಒಂದು ಹಾಲೆಯನ್ನು ಮಾತ್ರ ತೆಗೆದುಹಾಕುವುದು ಇವುಗಳೇ ಅಲ್ಲದೆ ರೋಗವಿರುವ ಶ್ವಾಸನಾಳದ ಶಾಖೆಗಳ ಭಾಗವನ್ನು ಮಾತ್ರ ಕತ್ತರಿಸಿ ತೆಗೆಯುವ ಶಸ್ತ್ರವೈದ್ಯವೂ ಬೆಳೆಯಿತು. ಇವೆಲ್ಲಕ್ಕಿಂತ ಮುಖ್ಯ ವಿಷಯವೆಂದರೆ ಔಷಧ ಚಿಕಿತ್ಸೆಯಿಂದಲೆ ಒಳ್ಳೆಯ ಫಲ ಸಿಗುವ ಸಾಧ್ಯತೆ ಹೆಚ್ಚಿತು. ಇಡೀ ಫುಪ್ಪಸವನ್ನು ತೆಗೆದುಹಾಕುವುದು ಬಳಕೆಗೆ ಬಂದ ಮೇಲೆ (1942) ಶೇ.41 ರಷ್ಟು ಮತ್ತು ಫುಪ್ಪಸದ ಹಾಲೆಯನ್ನು ಮಾತ್ರ ತೆಗೆದುಹಾಕಿದ ಮೇಲೆ ಶೇ.69 ರಷ್ಟು ತೃಪ್ತಿ ಲಭಿಸುತ್ತಿತ್ತು. ರೋಗವಿರುವ ಶ್ವಾಸನಾಳ ಶಾಖೆಗಳ ಭಾಗ ಅಥವಾ ಒಂದು ಹಾಲೆಯನ್ನು ತೆಗೆಯುವುದು 1955ರಲ್ಲಿ ಬಳಕೆಗೆ ಬಂದ ಬಳಿಕ ಶೇ.95 ರಷ್ಟು ಮತ್ತು ಪುರ್ತಿ ಫುಪ್ಪಸವನ್ನು ತೆಗೆಯುವುದರಿಂದ ಶೇ.85-ಶೇ.90 ರಷ್ಟು ಒಳ್ಳೆಯ ಫಲ ಸಿಕ್ಕುವಂತಾಯಿತು. ಇಂದು ವ್ಯಾಪಕವಾಗಿ ಕ್ಷಯರೋಗ ಚಿಕಿತ್ಸೆಗೆ ಪ್ರಬಲ ಔಷಧಗಳು ಲಭ್ಯವಿದ್ದು, ಅವುಗಳ ಬಳಕೆಯಿಂದ ರೋಗವನ್ನು ಹತೋಟಿಗೆ ತರಲಾಗುತ್ತದೆ. ಹಾಗಾಗಿ ಫುಪ್ಪಸದ ಮೇಲೆ ಕೈಗೊಳ್ಳುವ ಶಸ್ತ್ರಚಿಕಿತ್ಸೆ ಅಪರೂಪವೆನಿಸಿದೆ.


ಶ್ವಾಸನಾಳ ಶಾಖೆಗಳ ಹಿಗ್ಗುರೋಗ

ರೋಗಕ್ರಿಮಿಗಳು ಗಾಳಿಕೊಳವೆಗಳ ಭಿತ್ತಿಗಳನ್ನು ಶಿಥಿಲಗೊಳಿಸಿ ಕೊಳವೆಗಳು ದೊಗಳೆಯಾಗುವಂತೆ ಮಾಡಿ ಅವುಗಳ ಸುತ್ತಲಿನ ಫುಪ್ಪಸ ಭಾಗಗಳನ್ನು ಸೇರುತ್ತವೆ. ತರುವಾಯ ಫುಪ್ಪಸವನ್ನು ತೆಗೆದುಹಾಕುವುದರಿಂದ ಆಗುವ ಅಪಾಯ 1930ರ ಅನಂತರ ಕಡಿಮೆಯಾದ್ದರಿಂದ ಈ ಹಿಗ್ಗುರೋಗಕ್ಕೆ ಶಸ್ತ್ರಚಿಕಿತ್ಸೆಯೊಂದೇ ದಾರಿಯಾಗಿತ್ತು. 1945ರ ಬಳಿಕ ಶಸ್ತ್ರತಂತ್ರದ ಅಪಾಯ ಶೇ.2 ಕ್ಕಿಂತ ಕಡಿಮೆಯಾಯಿತು. ಈಗ ರೋಗವಿರುವ ಶಾಖಾಭಾಗಗಳನ್ನು ಮಾತ್ರ ತೆಗೆಯುವುದು ಸಾಮಾನ್ಯ ಕ್ರಮವಾಗಿದೆ. ರೋಗ ಹಲವು ವೇಳೆ ಬಲ ಎಡ ಫುಪ್ಪಸಗಳೆರಡರಲ್ಲೂ ವ್ಯಾಪಿಸಿರುವುದರಿಂದ ಈ ಹಂತಗಳಲ್ಲಿ ಒಂದೊಂದು ಫುಪ್ಪಸ ಭಾಗವನ್ನು ತೆಗೆಯುವುದು ತೃಪ್ತಿಕರ ಫಲವನ್ನು ಕೊಡುತ್ತದೆ.


ಫುಪ್ಪಸ ಕುರು

ಸುಲ್ಫೋನಮೈಡ್ ಮತ್ತಿತರ ಬೂಷ್ಟು ಮದ್ದುಗಳ ಉಪಯೋಗ ಪ್ರಾರಂಭವಾದ ಬಳಿಕ ಫುಪ್ಪಸ ಕುರು ಬಹಳ ಅಪರೂಪವಾಗಿದೆ. ಇದೇ ಅಲ್ಲದೆ ಬಾಯಿ ಮೂಗು ಗಂಟಲು ಶಸ್ತ್ರವೈದ್ಯ ಮುಂದುವರಿದು ಯೋಗ್ಯ ಚಿಕಿತ್ಸೆಯಾಗುತ್ತಿರುವುದು ಫುಪ್ಪಸ ಕುರು ಅಪರೂಪವಾಗುವುದಕ್ಕೆ ಕಾರಣವಾಗಿದೆ; ಮತ್ತು ಈಗಿನ ಮದ್ದುಗಳಿಂದಲೇ ಫುಪ್ಪಸ ಕುರುಗಳು ಕರಗುತ್ತವೆ. ಮದ್ದುಗಳಿಗೆ ಜಗ್ಗದ ಕುರುಗಳಿಗೆ ಶಸ್ತ್ರವೈದ್ಯ ಬೇಕು. ಇದು ಕೀವನ್ನು ಕೊಳವೆ ಇತ್ಯಾದಿಗಳ ಸಹಾಯದಿಂದ ಆಚೆಗೆ ಸೋರುವಂತೆ ಮಾಡುವುದು ಅಥವಾ ಫುಪ್ಪಸದ ರೋಗ ಪೀಡಿತ ಭಾಗವನ್ನು ತೆಗೆದುಹಾಕುವುದರಿಂದ ನಡೆಯುತ್ತದೆ. ಈ ಶಸ್ತ್ರವೈದ್ಯದ ಅಪಾಯ ಶೇ. 5 ಕ್ಕೂ ಕಡಿಮೆ. ಇದರಿಂದ ಬಹು ತೃಪ್ತಿಕರ ಫಲವನ್ನು ಹೊಂದಬಹುದು.