ವಿಷಯಕ್ಕೆ ಹೋಗು

ಗಿಡತಿಗಣೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೆಮಿಪ್ಟರ ಗಣದ ನಾಲ್ಕು ಉಪಗಣಗಳ ಒಂದೊಂದು ಪ್ರಭೇದ, ಮೇಲೆ ಎಡಗಡೆಯಿಂದ ಪ್ರದಕ್ಷಿಣಾಕಾರವಾಗಿ:ಅಕ್ಯಾಂತೊಸೋಮಾ ಲ್ಯಾಬಿಡುರಾಯ್ಡೆಸ್ (ಹೆಟಿರಾಪ್ಟರ),ಕ್ಸೀನೋಫ಼ಾಯೀಸ್ ಫ಼ೋರ್‌ಸ್ಟೆರಿ (ಕೋಲಿಯೊರಿಂಕಾ), ಮ್ಯಾಜಿಕಿಕಾಡಾ ಸೆಪ್ಟೆಂಡೆಸಿಮ್ (ಆಕೆನೊರಿಂಕಾ),ಮತ್ತು ಸಸ್ಯಹೇನು (ಸ್ಟರ್ನೊರಿಂಕಾ).

ಗಿಡತಿಗಣೆಗಳು ಹೆಮಿಪ್ಟರ ಗಣ ಮತ್ತು ಹೆಟಿರಾಪ್ಟರ ಉಪಗಣಗಳ ಹಲವಾರು ಕುಟುಂಬಗಳಿಗೆ ಸೇರಿದ ಕೀಟಗಳು (ಪ್ಲಾಂಟ್‌ಬಗ್ಸ್). ತಿಗಣೆ, ಹೇನು ಮುಂತಾದ ಕೀಟಗಳಿಗೆ ಬಲು ಹತ್ತಿರ ಸಂಬಂಧಿಗಳು. ಹಲವಾರು ಬಗೆಯ ಸಸ್ಯಗಳ ಕಾಂಡ, ಎಲೆ, ಹೂ ಮುಂತಾದ ಅಂಗಗಳ ಮೇಲೆ ಪರಾವಲಂಬಿಗಳಾಗಿದ್ದು ಅವುಗಳ ರಸವನ್ನು ಕುಡಿದು ಬದುಕುವುದರಿಂದ ಇವಕ್ಕೆ ಈ ಹೆಸರು ಬಂದಿದೆ.[][]

ದೇಹಲಕ್ಷಣಗಳು

[ಬದಲಾಯಿಸಿ]

ಗಿಡತಿಗಣೆಗಳ ದೇಹಲಕ್ಷಣಗಳು ಬಗೆಯಿಂದ ಬಗೆಗೆ ಸ್ವಲ್ಪ ವ್ಯತ್ಯಾಸವಾದರೂ ಎಲ್ಲಕ್ಕೂ ಸಮಾನವಾದ ಕೆಲವು ಗುಣಲಕ್ಷಣಗಳನ್ನು ಗುರುತಿಸಬಹುದು. ಈ ಕೆಳಗಿನವುಗಳು ಹೀಗಿವೆ:

  1. ರೆಕ್ಕೆಗಳು ಎರಡು ಜೊತೆ ಇವೆ. ಮುಂದಿನ ಜೊತೆ ಬುಡಭಾಗ ದಪ್ಪವಾಗಿಯೂ ಚರ್ಮಿಲವಾಗಿಯೂ ಇದೆ. ತುದಿಭಾಗ ಪೊರೆಯಂತಿದೆ. ಇದರಿಂದಾಗಿ ಈ ಬಗೆಯ ರೆಕ್ಕೆಯನ್ನು ಹೆಮೆಲಿಟ್ರಾನ್ ಮಾದರಿಯದು ಎಂದು ಕರೆಯಲಾಗುತ್ತದೆ. ಹಿಂದಿನ ರೆಕ್ಕೆಗಳು ಸಂಪೂರ್ಣವಾಗಿಯೇ ಎಲೆಗಳ ರೂಪದಂತಿವೆ. ರೆಕ್ಕೆಗಳನ್ನು ಮಡಚಿದಾಗ ಅವು ಉದರ ಭಾಗದ ಮೇಲೆ ಚಪ್ಪಟೆ ಆಕಾರವಾಗಿ ಕುಳಿತುಕೊಳ್ಳುತ್ತವೆ. ಕೆಲವು ಕೀಟಗಳಿಗೆ ರೆಕ್ಕೆಯೇ ಇಲ್ಲ.
  2. ಕುಡಿಮೀಸೆಗಳು (ಆಂಟೆನೀ) ಉದ್ದವಾಗಿವೆ ಹಾಗೂ 4-5 ತುಂಡುಗಳಿಂದ ಕೂಡಿವೆ.[]
  3. ಕಣ್ಣುಗಳು ಸಂಯುಕ್ತಮಾದರಿಯವು.
  4. ಬಾಯಿಯ ಭಾಗಗಳು ಸಸ್ಯಭಾಗಗಳನ್ನು ಚುಚ್ಚಿ, ರಸವನ್ನು ಹೀರಲು ಅನುಕೂಲವಾಗಿವೆ. ತಲೆಯ ಮುಂಭಾಗದಲ್ಲಿ ಒಂದು ರೀತಿಯ ತೆಳುವಾದ ಕೊಕ್ಕಿನಂಥ ರಚನೆಯಿದೆ. ಇದು ಹಿಮ್ಮುಖವಾಗಿ ಬುಡದವರೆಗೂ ಚಾಚಿದೆ. ಇದರೊಳಗೆ ಚುಚ್ಚುಸಾಧನಗಳಾದ 2 ಮ್ಯಾಂಡಿಬಲ್‌ಗಳೂ 2 ಮ್ಯಾಕ್ಸಿಲಗಳೂ ಇವೆ. ಮ್ಯಾಕ್ಸಿಲಗಳು ಒಂದರೊಡನೊಂದು ಕೂಡಿಕೊಂಡು ಆಹಾರ ಮತ್ತು ಜೊಲ್ಲು ಸಾಗಣೆಗೆ ಅನುಕೂಲವಾದ ಕಾಲುವೆಗಳಾಗಿ ಪರಿವರ್ತಿತವಾಗಿವೆ.
  5. ಬಹುಪಾಲು ಗಿಡತಿಗಣೆಗಳಲ್ಲಿ ವಾಸನೆಯನ್ನು ಉಂಟುಮಾಡುವ ಗ್ರಂಥಿಗಳಿವೆ. ಇವು ವಿಶಿಷ್ಟ ರೀತಿಯ ಹಾಗೂ ಅಸಹ್ಯವಾದ ವಾಸನೆಯನ್ನು ಹೊರಸೂಸುತ್ತವೆ.
  6. ಗಿಡತಿಗಣೆಗಳು ಸರಳ ರೀತಿಯ ರೂಪಾಂತರತೆಯನ್ನು ಪ್ರದರ್ಶಿಸುತ್ತವೆ.[]

ವ್ಯಾಪ್ತಿ, ವರ್ತನೆ

[ಬದಲಾಯಿಸಿ]

ಗಿಡತಿಗಣೆಗಳ ಸಂಖ್ಯೆ ಅಗಾಧ ಮತ್ತು ವ್ಯಾಪ್ತಿ ಬಲು ವಿಸ್ತಾರ. ಪ್ರಪಂಚದಾದ್ಯಂತ ಸುಮಾರು 55,000 ಬಗೆಯ ಗಿಡತಿಗಣೆಗಳಿವೆ. ಭಾರತದಲ್ಲಿ ಸುಮಾರು 4500 ಬಗೆಗಳು ಕಾಣಬರುತ್ತವೆ. ಇವುಗಳಲ್ಲಿ ಹೆಚ್ಚಿನವು ನೆಲವಾಸಿಗಳು. ಕೆಲವು ಜಲವಾಸಿಗಳೂ ಹೌದು. ಸಸ್ಯಗಳ ರಸವನ್ನು ಹೀರಿ ಬದುಕುವ ಇವು ಕೃಷಿ ಸಸ್ಯಗಳಿಗೆ ತೀವ್ರ ಸ್ವರೂಪದ ಹಾನಿಯುಂಟು ಮಾಡುತ್ತವೆ. ಆದರೆ ಅವುಗಳಲ್ಲೂ ಕೆಲವು ಉಪಕಾರಿ ಕೀಟಗಳಿಲ್ಲದೇ ಇಲ್ಲ. ಇಂಥವು ಇತರ ಬಗೆಯ ಹಾನಿಕಾರಕ ಕೀಟಗಳನ್ನು ತಿಂದು ಮಾನವನಿಗೆ ಉಪಕಾರಿಗಳೆನಿಸಿವೆ.

ವರ್ಗೀಕರಣ

[ಬದಲಾಯಿಸಿ]

ಕುಡಿಮೀಸೆಗಳ ಲಕ್ಷಣಗಳ ಆಧಾರದ ಮೇಲೆ ಗಿಡತಿಗಣೆಗಳ ಗಣವನ್ನು ಕ್ರಿಪ್ಟೊಸೆರೇಟ ಮತ್ತು ಜಿಮ್ನೊಸೆರೇಟ ಎಂಬ ಎರಡು ಉಪಗಣಗಳಾಗಿ ವಿಂಗಡಿಸಲಾಗಿದೆ.  ಇದೊಂದು ಉಪಗಣವನ್ನೂ ಅದರಲ್ಲಿನ ಕೀಟಗಳ ರೆಕ್ಕೆ, ಕಾಲು ಮತ್ತು ಕೊಕ್ಕುಗಳ ಗಣಗಳನ್ನು ಆಧರಿಸಿ ಹಲವಾರು ಕುಟುಂಬಗಳಾಗಿ ವಿಂಗಡಿಸಲಾಗಿದೆ. ಇವುಗಳಲ್ಲಿ ಮುಖ್ಯವಾದ ಕುಟುಂಬಗಳನ್ನೂ, ಅವುಗಳ ಪ್ರರೂಪೀ ಕೀಟಗಳನ್ನೂ ಮುಂದೆ ವಿವರಿಸಲಾಗಿದೆ.

  1. ಕಾರಿಕ್ಸಿಡೀ-ಉದಾ: ಕಾರಿಕ್ಸಾ.
  2. ನೋಟೋನೆಕ್ಟಿಡೀ ಉದಾ: ನೋಟೋನೆಕ್ಟ.
  3. ನೇಪಿಡೀ-ಉದಾ: ನೇಪ, ರೆನೇಟ್ರ,
  4. ಬೆಲಾಸ್ಟೊಮಾಟಿಡೀ-ಉದಾ: ಬೆಲಾಸ್ಟೋಮ.
  5. ಜೆರಿಡೀ-ಉದಾ: ಜೆರಿಸ್.
  6. ಮಿರಿಡೀ-ಉದಾ: ಹಾಲ್ಟಿಕಸ್, ಲೈಗಸ್, ಲೈಗೀಡಿಯ ಇತ್ಯಾದಿ.
  7. ಫೈಮ್ಯಾಟಿಡೀ-ಉದಾ: ಫೈಮೇಟ,
  8. ಪೆಂಟಟೋಮಿಡೀ-ಉದಾ: ಬೆಗ್ರಾಡ.
  9. ಲೈಗೀಯಿಡೀ-ಉದಾ: ಬ್ಲಿಸಸ್, ಆಕ್ಸಿಕೆರೀನಸ್, ಫೇನಸ್ ಇತ್ಯಾದಿ.
  10. ಕೋರಿಯಿಡೀ-ಉದಾ ಲೆಪ್ಟೊಕೊರಿಸ.

ಉಲ್ಲೇಖಗಳು

[ಬದಲಾಯಿಸಿ]
  1. Ruppert, Edward E.; Fox, Richard, S.; Barnes, Robert D. (2004). Invertebrate Zoology, 7th edition. Cengage Learning. pp. 728, 748. ISBN 978-81-315-0104-7.{{cite book}}: CS1 maint: multiple names: authors list (link)
  2. Gullan, P.J.; Cranston, P.S. (2014). The Insects: An Outline of Entomology, 5th Edition. Wiley. pp. 80–81, 790–. ISBN 978-1-118-84616-2.
  3. "Hemiptera". Discover Life. Retrieved 13 July 2015.
  4. Gullan, Penny; Kosztarab, Michael (1997). "Adaptations in scale insects". Annual Review of Entomology. 42: 23–50. doi:10.1146/annurev.ento.42.1.23. PMID 15012306.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: