ವಿಷಯಕ್ಕೆ ಹೋಗು

ಖಿಲಾಫತ್ ಚಳವಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಖಿಲಾಫತ್ ಚಳವಳಿ ಎನ್ನುವುದು ಮುಸ್ಲಿಂ ವಿಶ್ವದಲ್ಲಿ ತುರ್ಕಿಯ ಸುಲ್ತಾನನಿಗೆ ಇದ್ದ ಮತೀಯ ಗೌರವವನ್ನು ಉಳಿಸಿಕೊಳ್ಳಲು, ತುರ್ಕಿಯ ರಾಜಕೀಯ ಔನ್ನತ್ಯವನ್ನು ರಕ್ಷಿಸಲೂ ಭಾರತೀಯ ಮುಸ್ಲಿಮರು ಕೈಗೊಂಡ ಚಳವಳಿ.[][][] ತುರ್ಕಿ ದೇಶದ ಸುಲ್ತಾನನಿಗೆ ಖಲೀಫ ಎಂಬ ಹೆಸರಿತ್ತು. ಅವನು ರಾಜ್ಯಾಡಳಿತ ನಡೆಸುವುದರ ಜೊತೆಗೆ ವಿಶ್ವದ ಮುಸ್ಲಿಂ ಜನಾಂಗದ ಧರ್ಮಗುರುವೂ ಆಗಿದ್ದ. ಅವನ ಸ್ಥಾನಮಾನಕ್ಕೆ ಸಂಬಂಧಿಸಿದ್ದಾದ್ದರಿಂದ ಇದು ಭಾರತದಲ್ಲಿ ಖಿಲಾಫತ್ ಎಂದು ಪ್ರಸಿದ್ಧವಾಯಿತು (ಇಂಗ್ಲಿಷಿನಲ್ಲಿ ಕಲೀಫೇಟ್). 20ನೆಯ ಶತಮಾನದ ಆದಿಯ ದಶಕದಲ್ಲಿ ಇಂಗ್ಲೆಂಡ್, ಫ್ರಾನ್ಸ್ ಮೊದಲಾದ ಐರೋಪ್ಯ ರಾಜ್ಯಗಳು ಇಸ್ಲಾಮೀ ರಾಜ್ಯಗಳ ಬಗೆಗೆ, ಅದರಲ್ಲಿಯೂ ತುರ್ಕಿಯ ಖಲೀಫನ ಬಗೆಗೆ ನಡೆದುಕೊಳ್ಳುತ್ತಿದ್ದ ರೀತಿಯಿಂದ ಭಾರತದ ಮುಸ್ಲಿಮರಲ್ಲೂ ಅತೃಪ್ತಿ ಉಂಟಾಗಿತ್ತು. ಈ ಅತೃಪ್ತಿಯನ್ನು ಇಕ್ಬಾಲ್, ಷಿಬ್ಲಿ ಮೊದಲಾದ ಕವಿಗಳೂ, ಅಬುಲ್ ಕಲಾಂ ಆಜ಼ಾದ್, ಮಹಮ್ಮದ್ ಅಲೀ ಮೊದಲಾದ ಪತ್ರಿಕೋದ್ಯಮಿಗಳೂ ತಮ್ಮ ಬರಹಗಳಲ್ಲಿ ವ್ಯಕ್ತಪಡಿಸಿದ್ದರು.[][]

ಹಿನ್ನೆಲೆ

[ಬದಲಾಯಿಸಿ]

1914ರಲ್ಲಿ ಒಂದನೆಯ ಮಹಾಯುದ್ಧ ಆರಂಭವಾಯಿತು. ತುರ್ಕಿಯ ಸುಲ್ತಾನ ಮುಸ್ಲಿಮರ ಖಲೀಫ್, ಜರ್ಮನಿಯ ಕೈಸರ್ ಚಕ್ರವರ್ತಿಯೊಂದಿಗೆ ಸೇರಿ, ಮಿತ್ರ ರಾಷ್ಟ್ರಗಳಿಗೆ ವಿರೋಧಿಯಾಗಿದ್ದ. ಭಾರತದ ಸೈನ್ಯದಲ್ಲಿ ಬಹಳ ಮಂದಿ ಮುಸ್ಲಿಮರಿದ್ದುದರಿಂದ, ಯುದ್ಧದಲ್ಲಿ ಅವರ ಪೂರ್ಣ ನೆರವನ್ನು ಪಡೆದುಕೊಳ್ಳುವುದಕ್ಕಾಗಿ ಭಾರತ ಸರ್ಕಾರ ಕಾತರವಾಗಿತ್ತು. ಬ್ರಿಟನಿನ ಪ್ರಧಾನಿ ಮತ್ತು ಭಾರತದ ವೈಸ್‍ರಾಯ್ ಇಬ್ಬರೂ ಅರೇಬಿಯ, ಮೆಸೊಪೊಟೇಮಿಯ ಮತ್ತು ಜೆಡ್ಡಾಗಳಲ್ಲಿದ್ದ ಮುಸ್ಲಿಂ ಪವಿತ್ರ ಸ್ಥಳಗಳನ್ನು ರಕ್ಷಣೆ ಮಾಡುವುದಾಗಿ ಬಹಿರಂಗವಾಗಿ ಘೋಷಿಸಿದ್ದರು. ಆ ಕಾಲದಲ್ಲಿ ಕೆಲವು ದಿನ ಇಂಗ್ಲೆಂಡಿನಲ್ಲಿದ್ದ ಗಾಂಧೀಜಿ ಭಾರತೀಯ ಮುಸ್ಲಿಮರ ರಾಜಕೀಯ ಪ್ರಜ್ಞೆಯ ವಿಷಯವಾಗಿ ಸ್ಥೂಲವಾಗಿ ಅರಿತಿದ್ದರು. 1915ರಲ್ಲಿ ಅವರು ಭಾರತಕ್ಕೆ ಹಿಂದಿರುಗಿ ಬಂದ ಮೇಲೆ, ಮೂರು ವರ್ಷಗಳ ಕಾಲ ಯಾವ ರಾಜಕೀಯ ವಿವಾದದಲ್ಲಿಯೂ ಭಾಗವಹಿಸದೆ ಇದ್ದರು. ಆಗ ಮುಸ್ಲಿಂ ನಾಯಕರು ಖಿಲಾಫತ್ ಸಮಸ್ಯೆಗೆ ಸಂಬಂಧಿಸಿದಂತೆ ಅವರ ಸಲಹೆ ಕೇಳುತ್ತಿದ್ದರು. ಗಾಂಧೀಜಿ ಅವರಿಗೆ ತಾಳ್ಮೆಯನ್ನು ಬೋಧಿಸಿ, ಹಿಂಸಾಕೃತ್ಯಗಳಿಂದ ದೂರವಿರಬೇಕೆಂದು ಸೂಚಿಸುತ್ತಿದ್ದರು. ಅವರು ಖಿಲಾಫತ್ ನಾಯಕರೊಂದಿಗೆ, ಅದರಲ್ಲಿಯೂ ಸೆರೆಮನೆಯಲ್ಲಿದ್ದ ಮಹಮ್ಮದ್ ಅಲೀಯೊಂದಿಗೆ ಪತ್ರವ್ಯವಹಾರ ನಡೆಸಿದ್ದರು. 1918ರಲ್ಲಿ ಅವರು ದೆಹಲಿಯ ಸಮರ ಸಮ್ಮೇಳನದಲ್ಲಿ (Delhi war conference) ಭಾಗವಹಿಸಲು ಹೋದಾಗ ಮಹಮ್ಮದ್ ಅಲೀಯ ಬಿಡುಗಡೆಗೂ, ತುರ್ಕಿಯ ಭವಿಷ್ಯದ ವಿಷಯದಲ್ಲಿ ಮುಸ್ಲಿಮರ ಆಶೋತ್ತರಗಳನ್ನು ಈಡೇರಿಸುವ ಬಗೆಗೂ ಸರ್ಕಾರದಿಂದ ಆಶ್ವಾಸನವನ್ನು ಬೇಡಿದ್ದರು.

ಚಳವಳಿಯ ಆರಂಭ

[ಬದಲಾಯಿಸಿ]

1918ರ ನವೆಂಬರ್ ತಿಂಗಳಲ್ಲಿ ಯುದ್ಧ ಮುಕ್ತಾಯವಾದಾಗ, ಖಿಲಾಫತ್ ಪ್ರಶ್ನೆ ಮತ್ತೆ ತಲೆಯೆತ್ತಿತ್ತು. ತುರ್ಕಿಯ ಸಾಮ್ರಾಜ್ಯ ಚೂರುಚೂರಾಗುವ ಸ್ಥಿತಿ ಬಂದಿತ್ತು. ತುರ್ಕಿಯ ಸುಲ್ತಾನ ಖಲೀಫನಾಗಿ ಮುಂದುವರಿಯದಂತೆ ಆಯಿತು. ಬ್ರಿಟಷರು ತಮ್ಮ ಕಡೆಯವನಾಗಿದ್ದ, ಮೆಕ್ಕಾದ ಷರೀಫ್ ಷೇಕ್ ಹುಸೇನನನ್ನು ಹೊಸ ಖಲೀಫನನ್ನಾಗಿ ನೇಮಿಸಿದರು. ಈ ವೇಳೆಗೆ ಸರಿಯಾಗಿ (ಡಿಸೆಂಬರ್, 1919) ಮಹಮ್ಮದ್ ಅಲೀ ಮತ್ತು ಆತನ ಸಹೋದರ ಷೌಕತ್ ಅಲೀ ಬಿಡುಗಡೆಯಾದುದರಿಂದ ಖಿಲಾಫತ್ ಆಂದೋಲನಕ್ಕೆ ಹೊಸ ಚೈತನ್ಯ ಬಂತು. ವೈಸ್‍ರಾಯ್ ಲಾರ್ಡ್ ಚೆಮ್ಸ್‌ಫರ್ಡ್ ಅವರಿಗೆ ಮಾಡಿಕೊಂಡ ಮನವಿ ವಿಫಲವಾಯಿತು. ಖಿಲಾಫತ್ ನಾಯಕರು 1920ರ ಫೆಬ್ರವರಿ ತಿಂಗಳಲ್ಲಿ ಸಮ್ಮೇಳನ ಸೇರುವ ವೇಳೆಗೆ, ತುರ್ಕಿ ದೇಶದೊಂದಿಗೆ ಬ್ರಿಟನ್ ಮಾಡಿಕೊಂಡ ಒಪ್ಪಂದ ಪ್ರಕಟವಾಗಿ, ನಾಯಕರಿಗೆ ಇನ್ನೂ ನಿರಾಶೆಯಾಯಿತು. ಅವರು ತಮ್ಮ ಅತೃಪ್ತಿಯನ್ನು ವ್ಯಕ್ತಪಡಿಸಲು ಮಾರ್ಗ ಯೋಚಿಸುತ್ತಿದ್ದಾಗ, ಗಾಂಧೀಜಿ ಸೂಚಿಸಿದ ಅಸಹಕಾರ ಚಳವಳಿಯನ್ನು ಅಂಗೀಕರಿಸಿದರು.[] ಗಾಂಧೀಜಿ ಚಳವಳಿಯ ನಾಯಕತ್ವವನ್ನು ವಹಿಸಿಕೊಂಡು ನಡೆಸಲು ಅಧಿಕಾರ ನೀಡಿದರು. ಗಾಂಧೀಜಿ ವೈಸ್‍ರಾಯನಿಗೆ ಪತ್ರ ಬರೆದ ಬ್ರಿಟಿಷರು ತುರ್ಕಿಯೊಡನೆ ಮಾಡಿಕೊಂಡಿದ್ದ ಒಪ್ಪಂದವನ್ನು ಹದಿನೈದು ದಿವಸಗಳೊಳಗೆ ಬದಲಾಯಿಸಿ, ಮುಸ್ಲಿಮರಿಗೆ ಕೊಟ್ಟ ಮಾತಿನಂತೆ ನಡೆಯದಿದ್ದರೆ ಹಿಂದುಗಳೂ ಖಿಲಾಫತ್ ಚಳವಳಿಯನ್ನು ಸೇರಲು ಕರೆ ನೀಡುವುದಾಗಿ ತಿಳಿಸಿದರು. ಪಂಜಾಬಿನ ಅತ್ಯಾಚಾರಗಳು, ಯುದ್ಧದ ತರುವಾಯ ಮಾಡಿದ ರಾಜಕೀಯ ಸುಧಾರಣೆಗಳ ಅಸಮರ್ಪಕತೆ, ಇವುಗಳಿಂದ ರಾಷ್ಟ್ರದಲ್ಲಿ ಉಂಟಾಗಿದ್ದ ಅಸಮಾಧಾನಕ್ಕೆ ಖಿಲಾಫತ್ ಪ್ರಶ್ನೆಯೂ ಜೊತೆಗೂಡಿತು. ಗಾಂಧೀಜಿ ಮನವಿಯೊಂದನ್ನು ಹೊರಡಿಸಿ, ಹಿಂದುಗಳು ತಮ್ಮ ಕರ್ತವ್ಯ ಸಲ್ಲಿಸಬೇಕು. ಮುಸ್ಲಿಮರ ದುಃಖ ನಮ್ಮ ದುಃಖ ಎಂದು ಹೇಳಿದರು. ಸೆಪ್ಟೆಂಬರ್ ತಿಂಗಳಲ್ಲಿ ಸಮಾವೇಶಗೊಂಡ ರಾಷ್ಟ್ರೀಯ ಕಾಂಗ್ರೆಸ್ಸಿನ ವಿಶೇಷ ಅಧಿವೇಶನ ಅಸಹಕಾರ ಚಳವಳಿಯ ಕಾರ್ಯಕ್ರಮವನ್ನು ಅಂಗೀಕರಿಸಿತು.[] ಹೀಗೆ ಗಾಂಧೀಜಿ ಖಿಲಾಫತ್ ಚಳವಳಿ ಹಾಗೂ ರಾಷ್ಟ್ರೀಯ ಹೋರಾಟದ ನಾಯಕರಾದರು.

ಅಲೀ ಸಹೋದರರೊಡನೆ ಗಾಂಧೀಜಿ ದೇಶಾದ್ಯಂತ ಪ್ರವಾಸ ಮಾಡಿ ರಾಷ್ಟ್ರೀಯ ಹೋರಾಟದ ಪ್ರಚಾರ ಮಾಡಿದರು. ಹಿಂದು-ಮುಸ್ಲಿಂ ಸೌಹಾರ್ದ ಶಿಖರಕ್ಕೇರಿತು.[] ಸಭೆಗಳಲ್ಲಿ ನೆರೆಯುತ್ತಿದ್ದ ಹಿಂದು-ಮುಸ್ಲಿಮರಿಬ್ಬರೂ ಗಾಂಧೀಜಿಯ ಮಾತನ್ನು ಆಸಕ್ತಿಯಿಂದಲೂ ಪೂಜ್ಯಭಾವದಿಂದಲೂ ಕೇಳುತ್ತಿದ್ದರು. ಪುರುಷರಿಗೆ ಅವಕಾಶವೇ ಇಲ್ಲದಿದ್ದ ಮುಸ್ಲಿಂ ಮಹಿಳಾ ಸಭೆಗಳಲ್ಲಿ ಕೂಡ ಗಾಂಧೀಜಿಗೆ ವಿಶೇಷ ಅವಕಾಶವಿರುತ್ತಿತ್ತು. ಅವರು ಅಷ್ಟೊಂದು ಪೂಜ್ಯರೆಂದು ಪರಿಗಣಿತರಾದರು. ಇಂಥ ವಿಶಿಷ್ಟವಾದ ಐಕ್ಯಭಾವದಿಂದ ಅಹಿಂಸಾತ್ಮಕವಾದ ರಾಷ್ಟ್ರೀಯ ಹೋರಾಟ ನಡೆಯಿತು. ಒಂದು ವರ್ಷದಲ್ಲಿ ಸ್ವರಾಜ್ಯ-ಎಂದು ಗಾಂಧೀಜಿ ಘೋಷಿಸಿದರು.

ಅಸಹಕಾರ ಚಳವಳಿ ಅಂತ್ಯವಾದದ್ದು

[ಬದಲಾಯಿಸಿ]

ಆದರೆ ಚೌರಿಚೌರ ಎಂಬಲ್ಲಿ ಹಿಂಸಾಕೃತ್ಯಗಳು ನಡೆದುದನ್ನು ಕೇಳಿದ ಗಾಂಧಿ ಅಸಹಕಾರ ಚಳವಳಿಯನ್ನೇ ನಿಲ್ಲಿಸುವ ಆಜ್ಞೆ ಮಾಡಿದರು.[] ಇದರಿಂದ ಹಿಂದೂ ಮುಸ್ಲಿಂ ನಾಯಕರಿಗೆಲ್ಲ ಅಗಾಧ ನಿರಾಶೆಯಾಯಿತು. ಜೊತೆಗೆ ಮಲಬಾರಿನಲ್ಲೂ, ಮುಂಬಯಿ ಮತ್ತಿತರ ಕಡೆಗಳಲ್ಲೂ ಹಿಂದು-ಮುಸ್ಲಿಂ ಕಲಹಗಳು ನಡೆದವು. ಇದು ಹಿಂದುಗಳ ಸ್ವಾಭಿಮಾನವನ್ನು ಕೆರಳಿಸಿತು. ಅವರು ಶುದ್ಧಿ, ಸಂಘಟನೆ ಎಂದು ಆಂದೋಲನ ಆರಂಭಿಸಿದರು. ಖಿಲಾಫತ್ ಚಳವಳಿಯಿಂದಾಗಿ ಎರಡೂ ಕೋಮುಗಳಿಗೆ ತಾತ್ಕಾಲಿಕವಾಗಿ ಉಂಟಾಗಿದ್ದ ಐಕ್ಯಭಾವ ಇದರಿಂದ ಮಾಯವಾಯಿತು. ಮುಸ್ಲಿಮರ ಆತಂಕ ಖಿಲಾಫತ್ತಿನ ಬಗೆಗಾಗಿದ್ದರೆ, ಹಿಂದುಗಳು ಸ್ವರಾಜ್ಯದ ಬಗೆಗೆ ಕಳವಳಗೊಂಡರು.

ಉಪಸಂಹಾರ

[ಬದಲಾಯಿಸಿ]

ಭಾರತದಲ್ಲಿ ಈ ಪರಿಸ್ಥಿತಿಯಿದ್ದಾಗ, 1922ರಲ್ಲಿ, ತುರ್ಕಿಯಲ್ಲೇ ಕ್ರಾಂತಿಕಾರಕ ಬದಲಾವಣೆಯಾಯಿತು. ಕೆಮಾಲ್ ಆಟಾಟುರ್ಕ್ ನಾಯಕತ್ವದಲ್ಲಿ ಸುಲ್ತಾನ್ ಖಲೀಫನ ಅಧಿಕಾರಕ್ಕೆ ಚ್ಯುತಿಯಾಯಿತು.[೧೦] ತುರ್ಕಿ ಜಾತ್ಯತೀತ ಗಣರಾಜ್ಯವೆಂದು ಘೋಷಿಸಲಾಯಿತು.[೧೧] ಭಾರತದಲ್ಲಿ ಅಬುಲ್ ಕಲಾಂ ಆಜ಼ಾದ್ ಮೊದಲಾದವರು ಮುಸ್ಲಿಮರ ಕೋಮುವಾರು ರಾಜಕೀಯದಲ್ಲಿ ಭಾಗವಹಿಸದೆ, ತಟಸ್ಥರಾದರು. ಮಹಮದ್ ಅಲೀಯ ನಾಯಕತ್ವದಲ್ಲಿದ್ದ ಮುಸ್ಲಿಮರು ಪ್ರತ್ಯೇಕವಾಗಿ ಉಳಿದರು. ಹೀಗೆ ಭಾರತದಲ್ಲಿ ಹಿಂದು-ಮುಸ್ಲಿಂ ಕೋಮುಗಳಲ್ಲಿ ಐಕಮತ್ಯವನ್ನು ಸ್ವಲ್ಪ ಕಾಲವಾಗಿ ಮೂಡಿಸಿದ್ದ ಖಿಲಾಫತ್ ಚಳವಳಿ ತಾನಾಗಿ ಕೊನೆಗೊಂಡಿತು. ಹಿಂದು-ಮುಸ್ಲಿಂ ಐಕ್ಯಕ್ಕೆ ಮಾರಕವಾದಂಥ ಮುಸ್ಲಿಂ ರಾಜಕಾರಣ ಬೆಳೆಯಿತು. ಭಾರತೀಯ ಮುಸ್ಲಿಮರು ಖಿಲಾಫತ್ ಬಗೆಗೆ ಆತಂಕಗೊಳ್ಳದಿದ್ದರೆ, ಅವರ ವಿಷಯಕ್ಕೆ ಗಾಂಧೀಜಿ ಪ್ರವೇಶಿಸುತ್ತಲೇ ಇರಲಿಲ್ಲ. ಆದರೆ, ಸ್ವರಾಜ್ಯ ಪಡೆಯಲು ಇವೆರಡು ಕೋಮುಗಳ ಪರಸ್ಪರ ಸಾಮರಸ್ಯದ ಅವಶ್ಯಕತೆಯನ್ನು ಅರಿತಿದ್ದ ಗಾಂಧೀಜಿ, ಬ್ರಿಟಿಷರ ವಿಭಜಿಸಿ ಆಳುವ ತತ್ತ್ವವನ್ನು ನಿರ್ನಾಮಗೊಳಿಸುವುದಕ್ಕಾಗಿ ಖಿಲಾಫತ್ ಚಳವಳಿಗೆ ಪೂರ್ಣ ಬೆಂಬಲವಿತ್ತರು.

ಉಲ್ಲೇಖಗಳು

[ಬದಲಾಯಿಸಿ]
  1. Hutchinson, J.; Smith, A.D. (2000). Nationalism: Critical Concepts in Political Science. Routledge. p. 926. ISBN 978-0-415-20112-4. Retrieved 2023-02-09. Khilafat movement which was primarily designed to prevent the allied dismemberment of Turkey after World War One.
  2. Ali, A.; Sahni, J.; Sharma, M.; Sharma, P.; Goel, P. (2019). IAS Mains Paper 1 Indian Heritage & Culture History & Geography of the world & Society 2020. Arihant Publications India limited. p. 273. ISBN 978-93-241-9210-3.
  3. Vipul, S. (2009). Longman History & Civics Icse 10. Pearson Education. p. 88. ISBN 978-81-317-2042-4.
  4. "Khilafat movement | Indian Muslim movement | Britannica.com". Archived from the original on 8 December 2018. Retrieved 4 January 2019.
  5. "Muhammad Ali Jauhar and the Mutiny Trial". Oxford University Press. Archived from the original on 29 October 2014. Retrieved 5 December 2013.
  6. Carl Olson (2007). The Many Colors of Hinduism: A Thematic-historical Introduction. Rutgers University Press. p. 29.
  7. "Noncooperation movement." Encyclopædia Britannica, December 15, 2015. Retrieved 2021-08-10.
  8. Tejani, S. (2021). Indian Secularism: A Social and Intellectual History, 1890-1950. Indiana University Press. p. 145. ISBN 978-0-253-05832-4.
  9. Nehru. An Autobiography (1936). p.81
  10. Finkel 2007, p. 545
  11. Axiarlis, Evangelia (2014). Political Islam and the Secular State in Turkey: Democracy, Reform and the Justice and Development Party. I.B. Tauris. p. 11.


ಗ್ರಂಥಸೂಚಿ

[ಬದಲಾಯಿಸಿ]
  • Finkel, Caroline (2007). Osman's Dream: The History of the Ottoman Empire. Basic Books.

ಹೆಚ್ಚಿನ ಓದಿಗೆ

[ಬದಲಾಯಿಸಿ]



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: