ಕ್ಯಾಮರೂನ್
ಕ್ಯಾಮರೂನ್ ಗಣರಾಜ್ಯ | |
|---|---|
| Motto: Paix, Travail, Patrie (ಫ್ರೆಂಚ್ ಭಾಷೆಯಲ್ಲ : ಶಾಂತಿ, ದುಡಿಮೆ, ಪಿತೃಭೂಮಿ) | |
| Anthem: [Chant de Ralliement] Error: {{Lang}}: text has italic markup (help) | |
![]() | |
| ರಾಜಧಾನಿ | ಯೋಂದೇ |
| Largest city | Douala |
| ಅಧಿಕೃತ ಭಾಷೆಗಳು | ಫ್ರೆಂಚ್ ಮತ್ತು ಆಂಗ್ಲ |
| Government | |
| ಪಾಲ್ ಬಿಯಾ | |
| ಎಫ್ರೇಮ್ ಇನೋನಿ | |
| ಸ್ವಾತಂತ್ರ್ಯ ಫ್ರಾನ್ಸ್ & ಯುನೈಟೆಡ್ ಕಿಂಗ್ಡಮ್ಗಳಿಂದ | |
• ಸ್ವಾತಂತ್ರ್ಯದ ದಿನ | ಜನವರಿ ೧, ೧೯೬೦ |
• Water (%) | 1.3 |
| ಜನಸಂಖ್ಯೆ | |
| 16,380,005 (೫೯ನೇ ಸ್ಥಾನ) | |
| 15,746,179 | |
| GDP (PPP) | 2005 estimate |
• Total | $32.35 billion (೯೧ನೇ ಸ್ಥಾನ) |
• Per capita | $2,176 (140th) |
| HDI (2003) | 0.497 low · ೧೪೮ನೇ ಸ್ಥಾನ |
| Currency | CFA franc (XAF) |
| Time zone | UTC+1 |
| Calling code | 237 |
| Internet TLD | .cm |
ಕ್ಯಾಮರೂನ್ - ಆಫ್ರಿಕಾ ಖಂಡದಲ್ಲಿನ ದೇಶಗಳಲ್ಲೊಂದು.ಪಶ್ಚಿಮ ಆಫ್ರಿಕದ ಒಂದು ಸಂಯುಕ್ತರಾಜ್ಯ. ಪೂರ್ವ ಪಶ್ಚಿಮ ಕ್ಯಾಮರೂನ್‍ಗಳನ್ನೊಳಗೊಂಡಿದೆ. "ಶಾಂತಿ, ದುಡಿಮೆ, ಪಿತೃಭೂಮಿ" ಎಂಬ ಧ್ಯೇಯವಾಕ್ಯವನ್ನು ಹೊಂದಿರುವ ಈ ದೇಶದ ರಾಜಧಾನಿ ಯೋಂದೇ.
ಭೌಗೋಳಿಕ
[ಬದಲಾಯಿಸಿ]ಪಶ್ಚಿಮದಲ್ಲಿ ಅಟ್ಲಾಂಟಿಕ್ ಸಾಗರ, ವಾಯವ್ಯದಲ್ಲಿ ನೈಜೀರಿಯ, ಪೂರ್ವದಲ್ಲಿ ಚಾಡ್ ಮತ್ತು ಮಧ್ಯ ಆಫ್ರಿಕ ಗಣರಾಜ್ಯ, ದಕ್ಷಿಣದಲ್ಲಿ ಕಾಂಗೋ ಗಣರಾಜ್ಯ, ಗ್ಯಾಬಾನ್ ಮತ್ತು ರೀಯೊ ಮೂನಿ-ಇವು ಇದರ ಮೇರೆಗಳು. ಇದರ ಸಮುದ್ರತೀರದ ಉದ್ದ 220 ಮೈ. ಕ್ಯಾಮರೂನ್ ಸಂಯುಕ್ತರಾಜ್ಯದ ವಿಸ್ತೀರ್ಣ 2,00,876 ಚ.ಮೈ.
ಜನಸಂಖ್ಯೆ
[ಬದಲಾಯಿಸಿ]ಜನಸಂಖ್ಯೆ ೨೨,೫೩೪,೫೩೨ (೨೦೧೩ರ ಅಂದಾಜು). ರಾಜಧಾನಿ ಯಾವೂಂಡೇ.
ಸ್ವಾತಂತ್ರ್ಯ
[ಬದಲಾಯಿಸಿ]
ಕ್ಯಾಮರೂನ್ ದೇಶವು ೧೯೬೦ರ ಜನವರಿ ೧ರಂದು ಫ್ರಾನ್ಸ್ ಮತ್ತು ಯುನೈಟೆಡ್ ಕಿಂಗ್‍ಡಮ್ ದೇಶಗಳಿಂದ ಸ್ವಾತಂತ್ರ್ಯ ಪಡೆಯಿತು.
ಭೌತಲಕ್ಷಣ
[ಬದಲಾಯಿಸಿ]ಕ್ಯಾಮರೂನಿನ ಮಧ್ಯ ದಕ್ಷಿಣಭಾಗಗಳು ಪ್ರಸ್ಥಭೂಮಿ ಪ್ರದೇಶ. ಇದರ ಎತ್ತರ ಸಾಮಾನ್ಯವಾಗಿ 2,000'. ವಾಯವ್ಯ ಭಾಗ ಪರ್ವತಮಯ. ಬೇನ್ವಾ ನದಿಗೆ ಉತ್ತರದಲ್ಲಿರುವ ಮ್ಯಾಂಡರ ಪರ್ವತ ಸುಮಾರು 5,000' ಎತ್ತರವಾಗಿದೆ. ದಕ್ಷಿಣಕ್ಕೆ ಬಂದಂತೆ ಇದರ ಎತ್ತರ ಏರುತ್ತದೆ. ವೋಗೆಲ್ ಮತ್ತು ಮ್ಯಾಂಗಿಲ ಪರ್ವತಗ್ರಂಥಿಗಳು 6,000' ಎತ್ತರವಾಗಿಯೂ ಬಮೆಂಡ 8,000' ಎತ್ತರವಾಗಿಯೂ ಉಂಟು.
ಬಮೆಂಡದಿಂದ ಇನ್ನೊಂದು ಪರ್ವತಶ್ರೀಣಿ ಪೂರ್ವಕ್ಕೆ ಕವಲೊಡೆದು ಪೂರ್ವದ ಗಡಿಯ ಬಳಿ ಯೇಡ್ ಗ್ರಂಥಿಯಾಗಿ ಪರಿಣಮಿಸಿದೆ. ಇದರಲ್ಲೂ 6,000' ಗಿಂತ ಎತ್ತರವಾದ ಶಿಖರಗಳುಂಟು. ಪಶ್ಚಿಮದಲ್ಲಿ ಸಮುದ್ರದ ಬಳಿ ಇರುವ ಶ್ರೇಣಿ ಕ್ಯಾಮರೂನ್ ಪರ್ವತ. ಪಶ್ಚಿಮ ಆಫ್ರಿಕದ ಜೀವಂತ ಜ್ವಾಲಾಮುಖಿ ಇದೊಂದೇ. ಸಮುದ್ರದಿಂದ ಥಟ್ಟನೆ ಮೇಲೇರುವ ಈ ಪರ್ವತ 13,350'ನ್ನು ತಲುಪುತ್ತದೆ. ಇದರ ಪಶ್ಚಿಮಭಾಗ ಪ್ರಪಂಚದ ಅತಿ ಹೆಚ್ಚಿನ ಮಳೆ ಪ್ರದೇಶಗಳಲ್ಲೊಂದು. ಇದರ ನೈಋತ್ಯಕ್ಕಿರುವ ಜ್ವಾಲಾಮುಖಿಯ ದ್ವೀಪಗಳ ಪೈಕಿ ಅತ್ಯಂತ ಹತ್ತಿರದಲ್ಲಿರುವುದು ಫರ್ನಾಂಡೊ ಪೊ. ಈ ಪರ್ವತದ ಆಗ್ನೇಯದಲ್ಲಿ ಕ್ಯಾಮರೂನ್ಸ್ ಅಳಿವೆಯಿದೆ. ಇದರ ಗರಿಷ್ಠ ಅಗಲ 20 ಮೈ.ಗಳಿಗೂ ಹೆಚ್ಚು.
ಮೇಲೆ ಹೇಳಿದ ಎರಡು ಪರ್ವತಪಂಕ್ತಿಗಳ ನಡುವೆ ಬೇನ್ವಾ ನದಿಯೂ ಲೋಗೋನ್ ನದಿಯ ಕೆಲವು ಉಪನದಿಗಳೂ ಉಗಮಿಸುತ್ತವೆ. ಉತ್ತರಕ್ಕೆ ಹರಿದು ಚಾಡ್ ಸರೋವರವನ್ನು ಸೇರುವ ಲೋಗೋನ್ ನದಿ ಸ್ವಲ್ಪದೂರ ಕ್ಯಾಮರೂನಿನ ಪೂರ್ವದ ಎಲ್ಲೆಯಾಗಿ ಪರಿಣಮಿಸಿದೆ. ಬೇನ್ವಾದ ಒಂದು ಮುಖ್ಯ ಉಪನದಿ ಮೇಯೊ ಕೆಬ್ಬಿ. ದಕ್ಷಿಣದಲ್ಲಿರುವ ನದಿಗಳ ಪೈಕಿ ಮುಖ್ಯವಾದವು ನಿಯಾಂಗ್ ಮತ್ತು ಸಾನಗ, ಆಗ್ನೇಯದ ಕೊನೆಯಲ್ಲಿರುವುದು ಸಾಂಗ ನದಿ ವ್ಯವಸ್ಥೆ.
ವಾಯುಗುಣ
[ಬದಲಾಯಿಸಿ]ಕ್ಯಾಮರೂನಿನದು ಉಷ್ಣವಲಯದ ವಾಯುಗುಣ. ಪರ್ವತ ಪ್ರದೇಶದಲ್ಲಿ ಉಷ್ಣತೆ ಕಡಿಮೆ. ಮಧ್ಯಕ ವಾರ್ಷಿಕ ಉಷ್ಣತೆ ದಕ್ಷಿಣದಲ್ಲಿ 750-800 ಫ್ಯಾ., ಅತ್ಯಂತ ಉತ್ತರದಲ್ಲಿ 900 ಫ್ಯಾ. ಉತ್ತರದಲ್ಲಿ ನವೆಂಬರಿನಿಂದ ಏಪ್ರಿಲ್‍ನವರೆಗೆ ಬೀಸುವ ಈಶಾನ್ಯ ಮಾರುತ ಶುಷ್ಕವಾಗಿಯೂ ತಂಪಾಗಿಯೂ ಧೂಳಿನಿಂದ ಕೂಡಿಯೂ ಇರುತ್ತದೆ. ದಕ್ಷಿಣದಲ್ಲಿ ಈ ಮಾರುತದ ಅವಧಿ ಕಡಿಮೆ. ವರ್ಷದ ಉಳಿದ ಕಾಲದಲ್ಲಿ ನೈಋತ್ಯದಿಂದ ಬೀಸುವ ಗಾಳಿ ಅಟ್ಲಾಂಟಿಕ್ ಸಾಗರದಿಂದ ಮೋಡಗಳನ್ನು ಹೊತ್ತು ತಂದು ಮಳೆ ಸುರಿಸುತ್ತದೆ. ವಾರ್ಷಿಕ ಮಳೆ ವಿಕ್ಟೋರಿಯದಲ್ಲಿ 163", ಚಾಡ್ ಸರೋವರದ ಬಳಿ 15". ಕ್ಯಾಮರೂನ್ ಪರ್ವತದ ಪಶ್ಚಿಮದಲ್ಲಿರುವ ಡಿಬುಂಡ್ಷದಲ್ಲಿ 400" ಮಳೆಯಾಗುತ್ತದೆ.
ಸಸ್ಯ, ಪ್ರಾಣಿಗಳು
[ಬದಲಾಯಿಸಿ]ಉತ್ತರ ಅಕ್ಷಾಂಶ 40-60 ಗಳಲ್ಲಿರುವ ಮೈದಾನಗಳು ಮಳೆಗಾಡುಗಳಿಂದ ಆವೃತವಾಗಿವೆ. ಇಲ್ಲಿಯ ಕೆಲವು ಮರಗಳು 200' ವರೆಗೂ ಎತ್ತರವಾಗಿರುವುದುಂಟು. ಜವುಗು ಪ್ರದೇಶದಲ್ಲಿ ತಾಳೆ ಜೊಂಡುಗಳೂ ಕರಾವಳಿಯಲ್ಲಿ ಗುಲ್ಮ ವೃಕ್ಷಗಳೂ ಉಂಟು. 4,000'-8,000' ಎತ್ತರದ ಪ್ರದೇಶಗಳ ನಿತ್ಯ ಹಸಿರು ವೃಕ್ಷಗಳು ಮೈದಾನದವಕ್ಕಿಂತ ಭಿನ್ನವಾದವು. ಅವುಗಳ ಎತ್ತರ ಕಡಿಮೆ. ಇನ್ನೂ ಎತ್ತರದಲ್ಲಿ ಇತರ ಬಗೆಯ ಮರಗಳೂ ಹುಲ್ಲೂ ಬಿದಿರೂ ಬೆಳೆಯುತ್ತವೆ. ಮಳೆಗಾಡುಗಳ ಉತ್ತರಕ್ಕೆ ಸವಾನ ಕಾಡುಗಳುಂಟು.
ದಟ್ಟವಾದ ಮಳೆಗಾಡುಗಳಲ್ಲಿ ಗೊರಿಲ್ಲ, ಚಿಂಪಾಂಜಿ, ಬಗೆಬಗೆಯ ಕೋತಿಗಳು ಇವೆ. ಹುಲ್ಲುಬೆರೆತ ಕಾಡುಗಳಲ್ಲಿ ಆನೆ, ಬಬೂನ್, ಜಿಂಕೆಗಳುಂಟು. ಉತ್ತರದಲ್ಲಿ ಜಿರಾಫೆಗಳನ್ನೂ ಖಡ್ಗಮೃಗಗಳನ್ನೂ ಕಾಣಬಹುದು. ಬಾವಲಿ, ಸಣ್ಣ ಮಾಂಸಾಹಾರಿ ಪ್ರಾಣಿಗಳು ಮತ್ತು ಬಗೆ ಬಗೆಯ ಹಕ್ಕಿಗಳು ಇವೆ. ಹಾವು, ಹಲ್ಲಿ, ಕಪ್ಪೆಗಳೂ ಕಡಿಮೆಯಿಲ್ಲ. ಅಪಾಯಕಾರಿಗಳಾದ ಟ್ಸೆಟ್ಸಿ ನೊಣಗಳು ಕಾಡುಗಳಲ್ಲೂ ಹುಲ್ಲುಗಾಡುಗಳಲ್ಲೂ ವ್ಯಾಪಕವಾಗಿವೆ. ಅತ್ಯಂತ ಉತ್ತರದಲ್ಲಿ ದನಗಳನ್ನು ಸಾಕುತ್ತಾರೆ. ಕುದುರೆ, ಕತ್ತೆ, ಒಂಟೆಗಳು ಹೇರುಪ್ರಾಣಿಗಳು, ಹುಲ್ಲುಗಾಡುಗಳಲ್ಲಿ ಜೇನು ಒಂದು ವಿಶೇಷ.
ಕೃಷಿ, ಕೈಗಾರಿಕೆ
[ಬದಲಾಯಿಸಿ]ಆಫ್ರಿಕದ ಉಷ್ಣವಲಯ ರಾಷ್ಟ್ರಗಳ ಪೈಕಿ ಕ್ಯಾಮ ರೂನಿನಲ್ಲಿಯ ತಲಾ ವರಮಾನ ಅತ್ಯಂತ ಹೆಚ್ಚು. ಆದರೆ ಅದರ ಅರ್ಥವ್ಯವಸ್ಥೆಗೆ ಈಗಲೂ ಕೃಷಿಯೇ ತಳಹದಿ. ಮುಖ್ಯವಾದ ನಗದು ಬೆಳೆಗಳು ಕೋಕೋ, ಕಾಫಿ, ರಬ್ಬರ್ ಮತ್ತು ತಾಳೆ ಎಣ್ಣೆ. ಬನಾವವೂ ಮುಖ್ಯವಾಗಿತ್ತು. ಕಳೆದ ಕೆಲವು ವರ್ಷಗಳಲ್ಲಿ ಅದರ ಪ್ರಾಮುಖ್ಯ ಕಡಿಮೆಯಾಗಿದೆ. ಹತ್ತಿಯ ಉತ್ಪಾದನೆಯೂ ಈಚೆಗೆ ಅಭಿವೃದ್ಧಿಯಾಗುತ್ತಿದೆ. ಸಾರ್ಗಂ, ಮೆಕ್ಕೆಜೋಳ, ಬತ್ತ, ಕಬ್ಬು, ನೆಲಗಡಲೆ, ಹುರುಳಿ, ಎಳ್ಳು, ತರಕಾರಿ ಇವು ಇತರ ಬೆಳೆಗಳು. ಪಶ್ಚಿಮ ಕ್ಯಾಮರೂನಿನಲ್ಲಿ ಪ್ಲಾಂಟೇಷನ್ ಬೇಸಾಯ ವೃದ್ಧಿಯಾಗಿದ್ದರೆ ಪೂರ್ವ ಕ್ಯಾಮರೂನಿನಲ್ಲಿ ಕೈಗಾರಿಕೆ ಬೆಳೆಯುತ್ತಿದೆ. ಅಲ್ಯೂಮಿನಿಯಂ ಮತ್ತು ರಾಸಾಯನಿಕ ಕೈಗಾರಿಕೆಗಳು ಮುಖ್ಯವಾದವು. ಈಡೀಯಿ ಅಲ್ಯೂಮಿನಿಯಂ ಆಧಾರಿತ ಕೈಗಾರಿಕಾ ಕೇಂದ್ರ. ಡೌಲ ಮುಖ್ಯ ವಾಣಿಜ್ಯ ಕೇಂದ್ರ.
ಇತಿಹಾಸ
[ಬದಲಾಯಿಸಿ]
ಕ್ಯಾಮರೂನಿನ ಇತಿಹಾಸ ಕ್ಯಾಮರೂನ್ ಪ್ರದೇಶವನ್ನು 15ನೆಯ ಶತಮಾನದ ಅಂತ್ಯದಲ್ಲಿ ಪೋರ್ಚುಗೀಸ್ ನಾವಿಕ ಫರ್ನಾವೊ ಡೋಪೋ ಕಂಡುಹಿಡಿಯುವವರೆಗೂ ಅದರ ಇತಿಹಾಸವೇನೂ ತಿಳಿದುಬಂದಿರಲಿಲ್ಲ. 17ನೆಯ ಶತಮಾನದಲ್ಲಿ ಐರೋಪ್ಯರು ಇಲ್ಲಿ ವ್ಯಾಪಾರ ಕೋಠಿಗಳನ್ನು ನಿರ್ಮಿಸಿದರು. ಇಲ್ಲಿಯ ಆದಿವಾಸಿಗಳು ಪರಕೀಯರನ್ನು ದೇಶದ ಒಳಭಾಗಗಳಿಗೆ ಹೋಗದಂತೆ ಅಡ್ಡಿಪಡಿಸುತ್ತಿದ್ದುದ್ದರಿಂದ ಬಿಳಿಯರು ದೇಶೀಯ ಮಧ್ಯಸ್ಥಗಾರರಿಗೆ ತಮ್ಮ ಸರಕುಗಳನ್ನು ಕೊಡುತ್ತಿದ್ದರು[೧] . ಅವರು ಒಳಭಾಗಗಳಲ್ಲಿ ವ್ಯಾಪಾರ ಮಾಡಿ, ಅಲ್ಲಿಯ ದಂತ, ರಬ್ಬರು ಮತ್ತು ಗುಲಾಮರನ್ನು ತಂದು ಇವರಿಗೆ ಕೊಡುತ್ತಿದ್ದರು. ಡೂಆಲ ಜನಾಂಗದ ಅಕ್ವ ಮತ್ತು ಬೆಲ್ ಪಂಗಡಗಳ ರಾಜರು ಈ ವಿಧದ ಮಧ್ಯವರ್ತಿ ವ್ಯಾಪಾರದಿಂದ ಸಿರಿವಂತರಾದರು. 1800ರ ವೇಳೆಗೆ ತೀರಪ್ರದೇಶಗಳಲ್ಲಿ ಬ್ರಿಟಿಷರ ಪ್ರಭಾವ ಹರಡಿದುದಲ್ಲದೆ 1837ರಲ್ಲಿ ಬಿಂಬಿಯಾದ ರಾಜ ತನ್ನ ಪ್ರದೇಶಗಳಲ್ಲಿ ಕೆಲವನ್ನು ಬ್ರಿಟನಿಗೆ ಬಿಟ್ಟುಕೊಂಡುವಂತಾಯಿತು. ಆಫ್ರಿಕ ಮತ್ತು ಅಮೆರಿಕಗಳ ನಡುವೆ ಗುಲಾಮರ ವ್ಯಾಪಾರ ಭರದಿಂದ ಸಾಗುತ್ತಿದ್ದಾಗ 1845ರಲ್ಲಿ ಬ್ಯಾಪ್ಟಿಸ್ಟ್ ಮಿಷನ್ ಸೊಸೈಟಿಯ ಆಲ್ಫ್ರೆಡ್ ಸೇಕರ್ (1814-80) ಕ್ಯಾಮರೂನಿನಲ್ಲಿ ತನ್ನ ಸಂಸ್ಥೆಯನ್ನು ಸ್ಥಾಪಿಸಲು ಆಕ್ವ ರಾಜನಿಂದ ಒಪ್ಪಿಗೆ ಪಡೆದ. 1848ರಲ್ಲಿ ಈತ ಬಿಂಬಿಯದಲ್ಲೂ ತನ್ನ ಸಂಸ್ಥೆಯನ್ನು ಸ್ಥಾಪಿಸಿದ. 1858ರಲ್ಲಿ ಬ್ಯಾಪ್ಟಿಸ್ಟರನ್ನು ಫರ್ನಾಂಡೊ ಪೋದಿಂದ ಓಡಿಸಲಾಯಿತು. ಆಗ ಸೇಕರ್ ಅಂಬಾಸ್ ಕೊಲ್ಲಿಯಲ್ಲಿ ವಿಕ್ಟೋರಿಯ ಎಂಬ ಹೆಸರಿನಿಂದ ತನ್ನ ಸಂಸ್ಥೆಯ ಶಾಖೆಯನ್ನು ನೆಲೆಗೊಳಿಸಿದ. 1868ರಲ್ಲಿ ಜರ್ಮನಿಯ ವ್ಯೋರ್‍ಮನ್ ಮೊದಲ ಜರ್ಮನ್ ಕೋಠಿಯನ್ನು ಆ ಪ್ರದೇಶದಲ್ಲಿ ಸ್ಥಾಪಿಸಿದ.[೨] 1876ರಲ್ಲಿ ತನ್ನ ದೇಶಕ್ಕೆ ಹಿಂದಿರುಗುವ ಮುನ್ನ ಸೇಕರ್ ಡೂಆಲ ಭಾಷೆಗೆ ಬರೆವಣಿಗೆಯನ್ನು ಅಳವಡಿಸಿದನಲ್ಲದೆ, ಅಲ್ಲಿಯ ಗುಲಾಮ ವ್ಯಾಪಾರ ಪದ್ಧತಿಯನ್ನು ನಿರ್ಮೂಲಗೊಳಿಸುವ ಕಾರ್ಯದಲ್ಲಿ ಯಶಸ್ವಿಯಾದ.

1832ರ ಸುಮಾರಿನಲ್ಲಿ ಡೂಆಲದ ನಾಯಕರು ತಮ್ಮ ಪ್ರದೇಶವನ್ನು ಬ್ರಿಟನಿಗೆ ವಶಪಡಿಸಿಕೊಳ್ಳಬೇಕೆಂದು ಮಾಡಿದ ಬೇಡಿಕೆಗೆ ಸರಿಯಾದ ಪ್ರತಿಕ್ರಿಯೆ ಬ್ರಿಟನಿನಿಂದ ದೊರಕಲಿಲ್ಲ. ಅದರಿಂದ ಉತ್ತೇಜಿತರಾದ ಜರ್ಮನರು 1884ರಲ್ಲಿ ಕ್ಯಾಮರೂನ್ ಪ್ರದೇಶವನ್ನು ವಶಪಡಿಸಿಕೊಂಡರು. ಒಡನೆ ಬ್ರಿಟಿಷರೂ ಫ್ರೆಂಚರೂ ಧಾವಿಸಿದರು. ಆದರೆ ಏನೂ ಪ್ರಯೋಜನವಾಗಲಿಲ್ಲ. ಬ್ರಿಟಿಷರು ಕ್ಯಾಮರೂನ್ ಮೇಲೆ ಜರ್ಮನರ ಅಧಿಕಾರವನ್ನು ಒಪ್ಪಿಕೊಂಡರು. ವಿಕ್ಟೋರಿಯದ ಬ್ಯಾಪ್ಟಿಸ್ಟ್ ಮಿಷನ್ ಸಹ ಜರ್ಮನರ ವಶವಾಗಿ ಅಲ್ಲಿ ಬಾಸೆಲ್ ಮಿಷನ್ನಿನವರು ನೆಲಸಿದರು. ಜರ್ಮನರ ಅಧಿಕಾರ ನಿಧಾನವಾಗಿ ಒಳಪ್ರದೇಶಗಳಿಗೂ ಹರಡಿ, ಜರ್ಮನರ ನೇರ ಆಡಳಿತ ಕ್ರಮೇಣ ಸ್ಥಾಪಿತವಾಯಿತು. ವಸಾಹತಿನ ಪ್ರಾಕೃತಿಕ ಸಿರಿಯನ್ನು ರೂಢಿಸಿಕೊಳ್ಳುವುದು ಜರ್ಮನರಿಗೆ ಸುಲಭ ಸಾಧ್ಯವಾಗಿರಲಿಲ್ಲ. ವ್ಯಾಪಾರ ಮೊದಲ ಆಕರ್ಷಣೆಯಾಗಿತ್ತು. ಕಾಡುಗಳಲ್ಲಿ ದೊರೆಯುತ್ತಿದ್ದ ರಬ್ಬರು ಮತ್ತು ತಾಳೆ ಎಣ್ಣೆಗಳೂ ದಂತವೂ ಕ್ರಮೇಣ ಕಡಿಮೆಯಾದುವು. ಆದ್ದರಿಂದ ದೊಡ್ಡ ತೋಟಗಳನ್ನು ಬೆಳೆಸಿ, ರಬ್ಬರ್, ಕೋಕೋ ತಾಳೆ ಮುಂತಾದವನ್ನು ಬೆಳೆಯಲಾರಂಭಿಸಿದರು. 1909-1913ರಲ್ಲಿ 195 ಮೈಲಿಗಳ ರೈಲುಮಾರ್ಗವನ್ನು ನಿರ್ಮಿಸಿ ಸಾರಿಗೆ ಪದ್ಧತಿಯನ್ನು ಸುಲಭಗೊಳಿಸಿದರೂ ನದಿಗಳ ಮೂಲಕ ಸಾರಿಗೆ ಸಾಧ್ಯವಿಲ್ಲದಿದ್ದುದರಿಂದ ಜನರ ತಲೆಗಳ ಮೇಲೆ ಸರಕುಗಳನ್ನು ಹೊರಿಸಿ ಸಾಗಿಸಬೇಕಾಗಿತ್ತು. 1912ರ ವೇಳೆಗೆ 54,000 ಎಕರೆಗಳಷ್ಟು ತೋಟಗಳಿದ್ದರೂ ಅವು ವ್ಯಾಪಾರದ ಐದನೆಯ ಒಂದರಷ್ಟು ಸರಕುಗಳನ್ನು ಮಾತ್ರ ಒದಗಿಸುತ್ತಿದ್ದುವು. 1911ರಲ್ಲಿ ಜರ್ಮನಿ ಮೊರಾಕೋ ಮೇಲೆ ಫ್ರೆಂಚರ ರಕ್ಷಣೆಯ ಹಕ್ಕನ್ನು ಒಪ್ಪಿಕೊಂಡದ್ದರ ಫಲವಾಗಿ ಭೂಮಧ್ಯರೇಖೆಯ ಬಳಿ ಫ್ರೆಂಚ್ ವಶದಲ್ಲಿದ್ದ 1,07,000 ಚ.ಮೈ. ಪ್ರದೇಶವನ್ನು ಪಡೆದುಕೊಂಡಿತು. ಆದರೆ 1919ರ ವರ್ಸೇಲ್ಸ್ ಶಾಂತಿ ಒಪ್ಪಂದದ ರೀತ್ಯ ಆ ಭಾಗವನ್ನು ಫ್ರಾನ್ಸಿಗೆ ಹಿಂದಿರುಗಿಕೊಡಬೇಕಾಯಿತು. ಒಂದನೆಯ ಮಹಾಯುದ್ಧದ ಕಾಲದಲ್ಲಿ ಫ್ರೆಂಚ್ ಮತ್ತು ಬ್ರಿಟಿಷ್ ಸೈನ್ಯಗಳು ಕ್ಯಾಮರೂನನ್ನು ಗೆದ್ದುವು. ಅದರ ಹೆಚ್ಚಿನ ಭಾಗವನ್ನು ಫ್ರಾನ್ಸೂ ನೈಜೀರಿಯದ ಪಕ್ಕದ ಅಲ್ಪಪ್ರದೇಶವನ್ನು ಬ್ರಿಟನ್ನೂ ವಶಪಡಿಸಿಕೊಂಡುವು. ಆ ಪ್ರದೇಶಗಳ ಆಡಳಿತ ನಡೆಸುವ ಹಕ್ಕನ್ನು ಲೀಗ್ ಆಫ್ ನೇಷನ್ಸ್ ಫ್ರಾನ್ಸ್ ಮತ್ತು ಬ್ರಿಟನ್‍ಗಳಿಗೆ ವಿಧ್ಯುಕ್ತವಾಗಿ ಒಪ್ಪಿಸಿತು. ದ್ವಿತೀಯ ಮಹಾಯುದ್ಧದ ಅನಂತರ ಈ ವ್ಯವಸ್ಥೆಯನ್ನು ಮುಂದುವರಿಸುವಂತೆ ವಿಶ್ವಸಂಸ್ಥೆ ಆದೇಶ ನೀಡಿತು.[೩] ಬ್ರಿಟಿಷರ ಆಡಳಿತಕ್ಕೊಳಪಟ್ಟ ದಕ್ಷಿಣ ಮತ್ತು ಉತ್ತರ ಕ್ಯಾಮರೂನ್ ಎಂಬ ಎರಡು ವಿಭಾಗಗಳಲ್ಲಿ ದಕ್ಷಿಣ ವಿಭಾಗ ಒಬ್ಬ ಕಮಿಷನರ್ ಅಧಿಕಾರಕ್ಕೊಳಪಟ್ಟಿತ್ತು. ಆತ ನೈಜೀರಿಯದ ಬ್ರಿಟಿಷ್ ಗವರ್ನರ್-ಜನರಲ್‍ನ ಅಧಿಕಾರಕ್ಕೊಳಪಟ್ಟಿದ್ದ. ಸ್ಥಳೀಯ ಆಡಳಿತವನ್ನು ದೇಶೀಯ ನಾಯಕರು ಮತ್ತು ಅಧಿಕಾರಿಗಳಿಗೆ ವಹಿಸಲಾಗಿತ್ತು. 1954ರಿಂದ ದಕ್ಷಿಣ ಕ್ಯಾಮರೂನ್ ಸ್ವಯಮಾಡಳಿತ ಪ್ರಾಂತ್ಯವಾಯಿತು. ಉತ್ತರ ಕ್ಯಾಮರೂನ್ ಉತ್ತರ ನೈಜೀರಿಯ ಪ್ರದೇಶದ ಆಡಳಿತಕ್ಕೊಳಪಟ್ಟಿತ್ತು. ನೈಜರೀಯಕ್ಕೆ ಸ್ವಾತಂತ್ರ್ಯ ದೊರಕುವ ಮುನ್ನ 1959ರಲ್ಲಿ ನಡೆದ ಜನಮತಗಣನೆಯಲ್ಲಿ ಉತ್ತರ ಕ್ಯಾಮರೂನ್ ನೈಜೀರಿಯದೊಂದಿಗೆ ಸೇರುವ ಇಚ್ಛೆಯನ್ನು ಪ್ರಕಟಿಸಿತು. ಮತ್ತೆ 1961ರ ಜನಮತಗಣನೆಯಲ್ಲೂ ಉತ್ತರ ಕ್ಯಾಮರೂನ್ ಅದೇ ಇಚ್ಛೆಯನ್ನು ಪ್ರಕಟಿಸಿ ನೈಜೀರಿಯದೊಂದಿಗೆ ಸೇರಿತು. ದಕ್ಷಿಣ ಕ್ಯಾಮರೂನ್ ಈ ಎರಡು ಜನಮತಗಣನೆಗಳಲ್ಲೂ ಕ್ಯಾಮರೂನ್ ಗಣರಾಜ್ಯದೊಂದಿಗೆ ಐಕ್ಯವಾಗುವ ಇಚ್ಛೆಯನ್ನು ಪ್ರಕಟಿಸಿ 1961ರ ಅಕ್ಟೋಬರ್ 1ರಂದು ಅದರೊಂದಿಗೆ ಲೀನವಾಯಿತು. ಫ್ರೆಂಚರು ತಮ್ಮ ಆಡಳಿತಕ್ಕೊಳಪಟ್ಟಿದ್ದ ಪ್ರದೇಶಗಳಿಗೆ ರಾಜಕೀಯ ಮತ್ತು ಆರ್ಥಿಕ ಸ್ವಯಮಾಡಳಿತವನ್ನು ನೀಡಿದ್ದರು. ದ್ವಿತೀಯ ಯುದ್ಧಕಾಲದಲ್ಲಿ ಸ್ವತಂತ್ರ ಫ್ರೆಂಚ್ ಚಳವಳಿಗೆ ಸೇರಿದ ಈ ಪ್ರಾಂತ್ಯ ಜನರಲ್ ಚಾಲ್ರ್ಸ್ ಡ ಗಾಲನ ಕೇಂದ್ರ ಕಾರ್ಯಸ್ಥಾನವಾಗಿತ್ತು. 1960ರ ಜನವರಿ 1ರಂದು ಕ್ಯಾಮರೂನ್ ಗಣರಾಜ್ಯವಾಯಿತು[೪].
ಆಡಳಿತ
[ಬದಲಾಯಿಸಿ]ಕ್ಯಾಮರೂನಿನ ಕೇಂದ್ರ ಸರ್ಕಾರದ ಅಧ್ಯಕ್ಷನೂ ಉಪಾಧ್ಯಕ್ಷನೂ ಸಂಯುಕ್ತ ವಿಧಾನಸಭೆಯ ಸದಸ್ಯರೂ ನೇರ ಸಾರ್ವತ್ರಿಕ ಚುನಾವಣೆಗಳಲ್ಲಿ ಆಯ್ಕೆಯಾಗುತ್ತಾರೆ. ಕೇಂದ್ರ ಮಂತ್ರಿಮಂಡಲವನ್ನು ಅಧ್ಯಕ್ಷ ನೇಮಕಮಾಡುತ್ತಾನೆ. ಕ್ಯಾಮರೂನಿನ ಪೂರ್ವಪಶ್ಚಿಮ ಪ್ರಾಂತ್ಯಗಳಿಗೆ ಪ್ರತ್ಯೇಕವಾದ ಪ್ರಧಾನಿಗಳೂ ಸಂಪುಟಗಳೂ ವಿಧಾನಸಭೆಗಳೂ ಇರುತ್ತವೆ.
ಸಾರಿಗೆ
[ಬದಲಾಯಿಸಿ]ಪೂರ್ವ ಕ್ಯಾಮರೂನಿಗೂ ಫ್ರೆಂಚ್ ಸಮಭಾಜಕ ವೃತ್ತೀಯ ರಾಜ್ಯಗಳಿಗೂ ಸಾರಿಗೆ ಸಂಪರ್ಕವುಂಟು. ಪಶ್ಚಿಮ ಕ್ಯಾಮರೂನಿನ ಮಾರ್ಗಗಳು ನೈಜೀರಿಯದೊಂದಿಗೆ ಸಂಪರ್ಕ ಕಲ್ಪಿಸಿವೆ. ಡೌಲ-ಯಾವೂಂಡೇ ಮತ್ತು ಯಾವೂಂಡೇ-ಬೆಲಾಬೊ ರೈಲುಮಾರ್ಗಗಳು ಮುಖ್ಯವಾದವು. ಬೆಲಾಬೊದಿಂದ ನ್ಗಾವೂಂಡೇರೆಗೆ ರೈಲುಮಾರ್ಗ ನಿರ್ಮಾಣವಾಗುತ್ತಿದೆ. ಪೂರ್ವ ಪಶ್ಚಿಮ ಪ್ರಾಂತ್ಯಗಳನ್ನು ಸೇರಿಸುವ ಮುಖ್ಯ ರಸ್ತೆಯೊಂದುಂಟು. ಡೌಲ (2,00,000) ಮತ್ತು ವಿಕ್ಟೋರಿಯ ಮುಖ್ಯ ರೇವುಪಟ್ಟಣಗಳು. ಕ್ಯಾಮರೂನಿನ ಹಲವು ಭಾಗಗಳೊಂದಿಗೂ ಇತರ ದೇಶಗಳೊಂದಿಗೂ ಸಂಪರ್ಕ ಕಲ್ಪಿಸುವ ವಿಮಾನ ಸಂಚಾರ ವ್ಯವಸ್ಥೆಯೂ ಉಂಟು. ಕ್ಯಾಮರೂನ್ ಸಂಯುಕ್ತ ರಾಜ್ಯಕ್ಕೂ ಪೂರ್ವ ಕ್ಯಾಮರೂನಿಗೂ ರಾಜಧಾನಿ ಯಾವೂಂಡೇ (1,10,000). ಪಶ್ಚಿಮ ಕ್ಯಾಮರೂನಿನ ರಾಜಧಾನಿ ಬೂಯೇಯ.
ಉಲ್ಲೇಖಗಳು
[ಬದಲಾಯಿಸಿ]
- ↑ Fanso, V. G. (1989). Cameroon History for Secondary Schools and Colleges, Vol. 1: From Prehistoric Times to the Nineteenth Century. Hong Kong: Macmillan Education Ltd., p. 84, ISBN 0333471210.
- ↑ "historyworld". Archived from the original on 7 April 2019. Retrieved 17 April 2019.
- ↑ Dupraz, Yannick (September 2019). "French and British Colonial Legacies in Education: Evidence from the Partition of Cameroon" (PDF). The Journal of Economic History (in ಇಂಗ್ಲಿಷ್). 79 (3): 628–668. doi:10.1017/S0022050719000299. ISSN 0022-0507.
- ↑ Ngoh, Victor Julius, "The political evolution of Cameroon, 1884-1961" (1979). Dissertations and Theses. Paper 2929.
