ವಿಷಯಕ್ಕೆ ಹೋಗು

ಕೌಷೀತಕೀ ಉಪನಿಷತ್ತು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ಧರ್ಮಗ್ರಂಥಗಳು

Aum

ಋಗ್ವೇದ · ಯಜುರ್ವೇದ · ಸಾಮವೇದ · ಅಥರ್ವವೇದ

ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ · ಕೌಷೀತಕೀ

ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ

ಮಹಾಭಾರತ · ರಾಮಾಯಣ

ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ

ಕೌಷೀತಕೀ ಉಪನಿಷತ್ತು ಋಗ್ವೇದದ ಕೌಷೀತಕೀ ಬ್ರಾಹ್ಮಣಕ್ಕೆ ಸೇರಿದ ಉಪನಿಷತ್ತು[] [] . ಕೌಷೀತಕೀ ಬ್ರಾಹ್ಮಣೋಪನಿಷತ್ತು ಎಂದೂ ಹೆಸರಾಗಿದೆ.[]

ಪ್ರಾಮುಖ್ಯತೆ

[ಬದಲಾಯಿಸಿ]

ಬೃಹದಾರಣ್ಯಕ ಮತ್ತು ಛಾಂದೋಗ್ಯಗಳಂತೆ ಇದೂ ವೈದಿಕಗದ್ಯ ರೂಪದಲ್ಲಿದೆ. ಇದರಲ್ಲಿ ಬರುವ ಕೆಲವು ಸಂಶಯಾತ್ಮಕ ವಾಕ್ಯಗಳ ಅರ್ಥವನ್ನು ನಿರ್ಣಯಿಸುವುದಕ್ಕಾಗಿಯೇ ವೇದಾಂತಸೂತ್ರಗಳ ಕೆಲವು ಅಧಿಕರಣಗಳು ಬಂದಿವೆ ಎಂದು ಶಂಕರ ಮತ್ತು ರಾಮಾನುಜರು ಅಭಿಪ್ರಾಯ ಪಡುತ್ತಾರೆ. ಈ ಕಾರಣಗಳಿಂದ ಇದು ಪ್ರಾಚೀನ ಉಪನಿಷತ್ತುಗಳ ವರ್ಗಕ್ಕೆ ಸೇರಿದ್ದೆಂದು ಹೇಳಲಾಗಿದೆ.

ಭಾಷ್ಯಗಳು

[ಬದಲಾಯಿಸಿ]

ಇದರ ಮೇಲೆ ಶಂಕರಾಚಾರ್ಯರದೆನ್ನಲಾದ ಒಂದು ಭಾಷ್ಯವಿದೆ. ರಂಗರಾಮಾನುಜರ ಒಂದು ಸಂಕ್ಷಿಪ್ತವಾದ ಭಾಷ್ಯವೂ ಇದೆ. ಆಚಾರ್ಯರುಗಳ ದೃಷ್ಟಿಯಲ್ಲಿ ಇದು ಮುಖ್ಯವಾದ ಉಪನಿಷತ್ತು. ವೇದಾಂತಸೂತ್ರಕಾರರೂ ಇದಕ್ಕೆ ಮಹತ್ತ್ವ ಕೊಟ್ಟಿದ್ದಾರೆಂದು ಅವರ ಅಭಿಪ್ರಾಯ. ಪದೇ ಪದೇ ಇದರಿಂದ ಆಧಾರ ವಾಕ್ಯಗಳನ್ನು ಭಾಷ್ಯಕಾರರು ಪ್ರಮಾಣತ್ವೇನ ಸ್ವೀಕರಿಸಿದ್ದಾರೆ.

ಗಾತ್ರ

[ಬದಲಾಯಿಸಿ]

ಗಾತ್ರದಲ್ಲಿ ಈಶ ಮತ್ತು ಕೇನಗಳಷ್ಟು ಈ ಉಪನಿಷತ್ತು ಅತಿ ಹ್ರಸ್ವವೂ ಅಲ್ಲ, ಬೃಹದಾರಣ್ಯಕ, ಛಾಂದೋಗ್ಯಗಳಷ್ಟು ಅತಿ ದೀರ್ಘವೂ ಅಲ್ಲ.

ಸಾರಾಂಶ

[ಬದಲಾಯಿಸಿ]

ಇದರಲ್ಲಿ ನಾಲ್ಕು ಅಧ್ಯಾಯಗಳಿವೆ. ಮೊದಲ ಅಧ್ಯಾಯ ಪರ್ಯಂಕ ವಿದ್ಯೆ ಎಂದು ಪ್ರಸಿದ್ಧ. ಇದರಲ್ಲಿ ಜೀವನ ಸಂಸಾರಗತಿಯನ್ನು ಹೇಳಿ, ಬ್ರಹ್ಮನಿಷ್ಠನಾದವ ಹೇಗೆ ಪರಬ್ರಹ್ಮನನ್ನು ಹೊಂದುತ್ತಾನೆಂಬುದನ್ನು ವಿಲಕ್ಷಣರೀತಿಯಲ್ಲಿ ಚಿತ್ರಿಸಿದೆ. ಮೂರನೆಯ ಅಧ್ಯಾಯದಲ್ಲಿ ಅತ್ಯಂತ ಪ್ರಸಿದ್ಧವಾದ ಪ್ರತರ್ದನವಿದ್ಯೆ ಬಂದಿದೆ. ದಿವೋದಾಸನ ಮಗನಾದ ಪ್ರತರ್ದನನಲ್ಲಿ ಪ್ರೀತನಾದ ಇಂದ್ರ ಯಾವುದಾದರೂ ವರವನ್ನು ಕೇಳೆಂದು ಹೇಳುತ್ತಾನೆ. ಪ್ರವರ್ದನ ಮನುಷ್ಯನಿಗೆ ಹಿತತಮವೆಂದು ನೀನು ಏನನ್ನು ಭಾವಿಸುತ್ತೀಯೋ ಅದನ್ನು ಕೊಡೆಂದು ಕೇಳುತ್ತಾನೆ. ಆಗ ಇಂದ್ರ ತನ್ನನ್ನು ಕುರಿತು ಉಪಾಸನೆ ಮಾಡೆಂದು ಹೇಳಿ, ತಾನೇ ಪ್ರಾಣ, ತಾನೇ ಪ್ರಜ್ಞಾತ್ಮ, ತಾನೇ ಪರಬ್ರಹ್ಮದಲ್ಲಿ ಉಪದೇಶಿಸುತ್ತಾನೆ. ಇಂದ್ರ ತನ್ನ ವಿಷಯವನ್ನು ಹೇಳುತ್ತ ಪರಬ್ರಹ್ಮದಲ್ಲಿ ತಾದಾತ್ಮ್ಯವನ್ನು ಅನುಸಂಧಾನ ಮಾಡುತ್ತ ಅ ಪರತತ್ತ್ವದ ಸ್ವರೂಪವನ್ನು ಹೇಳುತ್ತಾನೆ. ಪ್ರಾಣ ಮತ್ತು ಇಂದ್ರ ಮೊದಲಾದ ಅವರ ತತ್ತ್ವಗಳೆಲ್ಲ ಬ್ರಹ್ಮತತ್ತ್ವದಲ್ಲಿ ಪರ್ಯವಸಾನ ಹೊಂದುತ್ತವೆಂಬುದು ಅವನ ಮಾತಿನ ಅಭಿಪ್ರಾಯ. ಈ ಕಾರಣದಿಂದ ಬ್ರಹ್ಮನನ್ನು ಪ್ರಾಣದ ಮೂಲಕ, ಇಂದ್ರಾದಿ ಜೀವದ ಮೂಲಕ, ಅಥವಾ ಸಾಕ್ಷಾತ್ತಾಗಿ ಉಪಾಸನೆ ಮಾಡಬಹುದು. ಒಟ್ಟಿನಲ್ಲಿ ನಾನಾತ್ವ ಅನೇಕತತ್ತ್ವಗಳ ಕಲ್ಪನೆ ಸರಿಯಲ್ಲ. ನೋ ಏತನ್ನಾನಾ, ರಥದ ನೇಮಿ ಅರಗಳನ್ನು ಆಶ್ರಯಿಸಿರುವಂತೆ, ಅರಗಳು ನಾಭಿಯನ್ನು ಆಶ್ರಯಿಸುವಂತೆ, ಅಚೇತನ ವಸ್ತುಗಳೆಲ್ಲ ಚೇತನತತ್ತ್ವವನ್ನು ಆಶ್ರಯಿಸಿವೆ. ಚೇತನಗಳೆಲ್ಲ ಪ್ರಾಣನೆನಿಸಿಕೊಳ್ಳುವ ಪರಮಾತ್ಮನಲ್ಲಿ ಅರ್ಪಿತ-ಎಂಬುದು ಕೊನೆಯ ಸಿದ್ಧಾಂತ. ಹೀಗೆ ಕೌಷೀತಕೀ ಉಪನಿಷತ್ತು ವೇದಾಂತದ ಪ್ರಧಾನ ಸಿದ್ಧಾಂತವನ್ನು ಪ್ರತಿವಾದಿಸುತ್ತದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. Paul Deussen, Sixty Upanishads of the Veda, Volume 1, Motilal Banarsidass, ISBN 978-8120814684, pages 21–23
  2. Hume, Robert Ernest (1921), The Thirteen Principal Upanishads, Oxford University Press, page xi
  3. Max Müller, The Upanishads, p. PR98, at Google Books, Oxford University Press, pages xcviii to ci