ಕೌಶಾಂಬಿ
ಕೌಶಾಂಬಿ | |
|---|---|
ನಗರ | |
Kosambi cast copper coin. 1st century BCE. Inscribed 𑀓𑁄𑀲𑀩𑀺 Kosabi in the Brahmi script at the top. British Museum. | |
| Coordinates: 25°20′20″N 81°23′34″E / 25.338984°N 81.392899°E | |
| ದೇಶ | ಭಾರತ |
| ರಾಜ್ಯ | [ಉತ್ತರ ಪ್ರದೇಶ]] |
| ಜಿಲ್ಲೆ | Kaushambi district |
ಕೌಶಾಂಬಿ ಅಲಹಾಬಾದಿನ ಬಳಿ, ಗಂಗಾ-ಯಮುನಾ ಸಂಗಮಸ್ಥಾನದಲ್ಲಿ, ಯಮುನಾನದಿಯ ಎಡದಂಡೆಯ ಮೇಲಿದ್ದ ಇತಿಹಾಸಪ್ರಸಿದ್ಧ ನಗರ, ಪ್ರಾಕ್ತನ ನೆಲೆ. ಈ ಸ್ಥಳದ ಈಗಿನ ಹೆಸರು ಕೋಸಂ. ಪುರಾಣಪ್ರಸಿದ್ಧ ಪುರೂರವನ ವಂಶೀಯರಲ್ಲಿ ಹತ್ತನೆಯವನಾದ ಕುಶಾಂಬ ಇದರ ಸಂಸ್ಥಾಪಕನೆಂದೂ ಗಂಗಾನದಿಯ ಪ್ರವಾಹದಿಂದಾಗಿ ಪಾಂಡವರ ರಾಜಧಾನಿ ಹಸ್ತಿನಾಪುರ ಕೊಚ್ಚಿಹೋದಾಗ, ಪರೀಕ್ಷಿತನಿಂದ ಈಚೆಗೆ ಐದನೆಯ ತಲೆಮಾರಿನವನೂ ಇಕ್ಷ್ವಾಕು ವಂಶದವನೂ ಆದ ನಿಚಕ್ಷು ಕೌಶಾಂಬಿಯನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡನೆಂದೂ ಐತಿಹ್ಯಗಳುಂಟು[೧]. ಶತಪಥಬ್ರಾಹ್ಮಣದಲ್ಲಿ ಕೌಶಾಂಬೀಯ ಎಂಬ ಶಬ್ದ ಬರುವುದರಿಂದ ಈ ನಗರದ ಪ್ರಾಚೀನತೆಯನ್ನು ಕ್ರಿ.ಪೂ 1000ಕ್ಕೂ ಹಿಂದಕ್ಕೆ ಕೊಂಡೊಯ್ಯಬಹುದಾಗಿದೆ. ರಾಮಾಯಣ ಮಹಾಭಾರತಗಳಲ್ಲಿ ಇದರ ಬಗ್ಗೆ ಉಲ್ಲೇಖಗಳುಂಟು.

ಬೌದ್ಧ ಧರ್ಮದಲ್ಲಿ
[ಬದಲಾಯಿಸಿ]ಬುದ್ಧನ ಕಾಲದ ಕೆಲವು ಪ್ರಖ್ಯಾತ ಪಟ್ಟಣಗಳಲ್ಲಿ ಕೌಶಾಂಬಿಯೂ ಒಂದು,[೨][೩]. ಇಲ್ಲಿಯ ಗಣ್ಯ ನಾಗರಿಕರು ಬುದ್ಧಾನುಯಾಯಿಗಳಾಗಿ, ಬೌದ್ಧಸಂನ್ಯಾಸಿಗಳ ಉಪಯೋಗಕ್ಕಾಗಿ ಘೋಷಿತರಾಮ, ಕುಕ್ಕುಟಾರಾಮ, ಬದರಿಕಾರಾಮ, ಪವರಿಕಂಬಬನ ಎಂಬ ನಾಲ್ಕು ಮಠಗಳನ್ನು ಕಟ್ಟಿಸಿಕೊಟ್ಟರು. ಬುದ್ಧ ಸ್ವಲ್ಪ ಕಾಲ ಇಲ್ಲಿ ವಾಸಿಸುತ್ತಿದ್ದು, ಒಂಬತ್ತನೆಯ ವರ್ಷಾಕಾಲದ ಧರ್ಮೋಪದೇಶ ನಡೆಯಿಸಿದ. ಇಲ್ಲಿ ಆಳಿದ ಉದಯನ ರಾಜ ಬುದ್ಧನ ಸಮಕಾಲೀನ, ಅವನ ಭಕ್ತ. ಅವನು ವತ್ಸರಾಜ್ಯದ ಒಡೆಯ. ಆತ ಮಾಡಿಸಿದ್ದ ರಕ್ತಚಂದನದ ಬುದ್ಧಪ್ರತಿಮೆಯನ್ನೂ ಪಾಳುಬಿದ್ದಿದ್ದ ಬೌದ್ಧಮಠಗಳನ್ನೂ ತಾನು ಕಂಡದ್ದಾಗಿ 7ನೆಯ ಶತಮಾನದ ಚೀನೀ ಪ್ರವಾಸಿ ಹ್ಯೂಯೆನ್ ತ್ಸಾಂಗ್ ಬರೆದಿದ್ದಾನೆ. ಇಲ್ಲಿ ಜೈನತೀರ್ಥಂಕರ ಪದ್ಮಪ್ರಭನ ದೇವಾಲಯವಿದೆ. ಕೌಶಾಂಬಿ ಆತನ ಜನ್ಮಸ್ಥಳವೆಂದೂ ಖ್ಯಾತ ಪ್ರಾಕೃತವ್ಯಾಕರಣಕಾರ ವರರುಚಿಯೂ ಇದೇ ಸ್ಥಳದವನೆಂದೂ ಹೇಳಲಾಗಿದೆ. ಮಗಧದಲ್ಲಿ ಸಾಮ್ರಾಜ್ಯೋದಯವಾಗಿ ನಂದ ಮೌರ್ಯರ ಪ್ರಭುತ್ವ ಊರ್ಜಿತವಾದಾಗ ಕೌಶಾಂಬಿಯ ಪ್ರಾಮುಖ್ಯ ಕುಗ್ಗಿತು. ಆದರೂ ಆ ಕಾಲದಲ್ಲೂ ಅನಂತರ ಆಳಿದ ಶುಂಗ, ಕುಷಾಣ ಮತ್ತು ಗುಪ್ತರ ಕಾಲದಲ್ಲೂ ಕೌಶಾಂಬಿ ಒಂದು ಪ್ರಮುಖ ನಗರವಾಗಿ ಉಳಿದುಕೊಂಡಿತ್ತು.
ಭೂಶೋಧನೆಗಳು
[ಬದಲಾಯಿಸಿ]
ಪುರಾತತ್ವಜ್ಞರು ನಡೆಸಿರುವ ಭೂಶೋಧನೆಗಳಿಂದ ಕೌಶಾಂಬಿಯ ವಿಚಾರವಾಗಿ ಅನೇಕ ಚಾರಿತ್ರಿಕ ಮತ್ತು ಪ್ರಾಗ್ ಚಾರಿತ್ರಿಕ ಸಂಗತಿಗಳು ಹೊರಬಿದ್ದಿವೆ. ಈಗಿನ ಕೋಸಂ ಗ್ರಾಮವೇ ಪ್ರಾಚೀನ ಕೌಶಾಂಬಿ ಇದ್ದ ಸ್ಥಳವೆಂದು ಕಳೆದ ಶತಕದಲ್ಲಿ ನಿರ್ಧರಿಸಿದವನು ಅಲೆಕ್ಸಾಂಡರ್ ಕನಿಂಗ್‍ಹ್ಯಾಂ. ಇದರ ಬಳಿಯಲ್ಲೇ ಅಶೋಕನ ಮತ್ತು ಸಮುದ್ರಗುಪ್ತನ ಶಾಸನಗಳಿದ್ದ ಸ್ತಂಭವೊಂದಿತ್ತು[೪][೫]. ಅದೀಗ ಅಲಹಾಬಾದ್ ಕೋಟೆಯಲ್ಲಿದೆ. 1937-38ರಲ್ಲಿ ಭಾರತ ಸರ್ಕಾರದ ಪ್ರಾಕ್ತನ ಇಲಾಖೆಯೂ ಅನಂತರ 1949ರಿಂದ ಅಲಹಾಬಾದ್ ವಿಶ್ವವಿದ್ಯಾಲಯವೂ ಇಲ್ಲಿ ಭೂಶೋಧನೆ ನಡೆಸಿವೆ.
ಚಾರಿತ್ರಿಕ ಸಂಗತಿಗಳು
[ಬದಲಾಯಿಸಿ]
ಇಲ್ಲಿ ಜನವಸತಿ ಆರಂಭವಾದ್ದು ಕ್ರಿ.ಪೂ. 1200ರ ಸುಮಾರಿನಲ್ಲಿ-ಕೆಂಪು-ಕಪ್ಪು ಮಡಕೆಗಳನ್ನುಪಯೋಗಿಸುತ್ತಿದ್ದ ಜನರಿಂದ, ಅನಂತರ ಇಲ್ಲಿ ಬೂದುಬಣ್ಣದ ವರ್ಣ ಚಿತ್ರದ ಮಡಕೆಗಳ (ಪೆಯಿಂಟೆಡ್ ಗ್ರೇವೇರ್) ಸಂಸ್ಕೃತಿಯೂ ತರುವಾಯ ಉತ್ತರ ಭಾರತದ ಕಪ್ಪು ಹೊಳಪಿನ ಮಡಕೆಗಳ ಸಂಸ್ಕೃತಿಯೂ ತಲೆದೋರಿದುವು. ಈ ಕೊನೆಯ ಸಂಸ್ಕೃತಿಯ ಕಾಲದಲ್ಲಿ, ಕ್ರಿ.ಪೂ. 700ಕ್ಕೂ ಮೊದಲು, ಇಲ್ಲಿ ಮಹತ್ತರವಾದ ಮಣ್ಣಿನ ಕೋಟೆಯೊಂದನ್ನು ಕಟ್ಟಿದ್ದರು. ಹೊರಮುಖವನ್ನು ಸುಟ್ಟ ಇಟ್ಟಿಗೆಗಳಿಂದ ಇಳಿಜಾರಾಗಿ ಕಟ್ಟಲಾಗಿತ್ತು. ಈ ಗೋಡೆಗಳು ಹರಪ್ಪದ ಕೋಟೆಗಳನ್ನು ಹೋಲುತ್ತವೆ. ಅನಂತರಕಾಲದಲ್ಲಿ ಕೋಟೆಯ ಬುರುಜುಗಳ ಮೇಲೆ ಆಯಾಕಾರದ ಗೋಪುರಗಳನ್ನು ನಿರ್ಮಿಸಲಾಗಿತ್ತು. ಅನೇಕ ಸಲ ರಿಪೇರಿಯಾದ ಈ ಕೋಟೆಯ ಒಳಭಾಗದಲ್ಲಿ ಕಲ್ಲಿನ ಅರಮನೆ, ಗೌತಮಬುದ್ಧ ಉಪದೇಶ ನೀಡಿದ ಸ್ಥಳವಾದ ಘೋಷಿತರಾಮ ಕಟ್ಟಡ. ಉದಯನ ಚಕ್ರವರ್ತಿಯ ಅರಮನೆ ಮತ್ತು ವಾಸಗೃಹಗಳ ಅವಶೇಷಗಳು ಪತ್ತೆಯಾಗಿವೆ. ಆ ನಗರದ ಸಂಪದ್ಯುಕ್ತ ಜನಜೀವನದ ಪರಿಚಯ ಮಾಡಿಕೊಡುವ ಅನೇಕ ಅವಶೇಷಗಳು-ಚ್ಯೇನಚಿತಿ ಮತ್ತು ಪುರುಷಮೇಧ ಯಜ್ಞಗಳ ಅವಶೇಷಗಳು ಕೂಡ-ದೊರಕಿವೆ. ಅರಮನೆ ಸುಮಾರು 1,024' ಉದ್ದ 490'ಅಗಲ ವಿಸ್ತಾರವಾಗಿ 8' ಎತ್ತರದ ಜಗತಿಯ ಮೇಲೆ ನಿರ್ಮಿತವಾಗಿತ್ತು. ಗೋಡೆಯ ದ್ವಿಮುಖಗಳಿಗೂ ಸುಣ್ಣದ ಮೆತುಗಾರೆ ಲೇಪಿಸಲಾಗಿತ್ತು. ಅರಮನೆ ಗೋಡೆಗಳ ಮೂಲೆಗಳಲ್ಲಿ ಸುಮಾರು 25' ವ್ಯಾಸದ ಚಕ್ರಾಕಾರದ ಗೋಪುರಗಳನ್ನು ಕಟ್ಟಲಾಗಿತ್ತು. ಒಳಭಾಗ ಬಹಳ ಸುವ್ಯವಸ್ಥಿತವಾಗಿತ್ತು. ಕೋಟೆಯ ಹೊರಭಾಗದಲ್ಲಿದ್ದ ಕಂದಕದ ಚಾವಣಿ ಮುನ್‍ಚಾಚಿದ ಕಟ್ಟಡದ ರೀತಿಯ ಕಮಾನಿನಾಕಾರದಲ್ಲಿತ್ತು (ಕಾರ್ಬೆಲ್ಡ್ ಆರ್ಚ್). ಒಟ್ಟಿನಲ್ಲಿ ಕ್ರಿ.ಪೂ 700ರಿಂದ ಒಂದು ಸಾವಿರ ವರ್ಷಗಳಿಗೂ ಹೆಚ್ಚು ಕಾಲ ಇದು ಉಚ್ಛ್ರಾಯಸ್ಥಿತಿಯಲ್ಲಿತ್ತೆಂದು ಭೂಶೋಧನೆಗಳಿಂದ ತಿಳಿದುಬಂದಿದೆ. ವಿವಿಧ ಕಾಲಗಳಿಗೆ ಸೇರಿದ ನಾಣ್ಯಗಳು, ಸುಟ್ಟಮಣ್ಣಿನ ಗೊಂಬೆಗಳು ಮತ್ತಿತರ ಕಲಾವಸ್ತುಗಳು ಸಹ ಉತ್ಖನನದಲ್ಲಿ ಸಿಕ್ಕಿವೆ.
ಬಾಹ್ಯ ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]
- ↑ Rohan L. Jayetilleke (5 ಡಿಸೆಂಬರ್ 2007). "The Ghositarama of Kaushambiern". Daily News. Archived from the original on 4 ಜೂನ್ 2011. Retrieved 29 ಅಕ್ಟೋಬರ್ 2008.
- ↑ A. L. Basham (2002). The Wonder That Was India. Rupa and Co. p. 41. ISBN 0-283-99257-3.
- ↑ Ariel Glucklich (2008). The Strides of Vishnu. Oxford University Press. p. 46. ISBN 978-0-19-531405-2.
- ↑ Romila Thapar (1997). Aśoka and the Decline of the Mauryas. Oxford University Press, New Delhi. pp. 290–291. ISBN 0-19-564445-X.
- ↑ Krishnaswamy, C.S.; Ghosh, Amalananda (October 1935). "A Note on the Allahabad Pillar of Aśoka". The Journal of the Royal Asiatic Society of Great Britain and Ireland. 4 (4): 697–706. JSTOR 25201233.