ಕೋಳಿಸಾಕಣೆ

ಕೋಳಿಸಾಕಣೆ ಮೊಟ್ಟೆ, ಮಾಂಸ ಪಡೆಯುವ ಉದ್ದೇಶದಿಂದ ಕೋಳಿ ವರ್ಗದ ಪಕ್ಷಿಗಳ ಶಾಸ್ತ್ರೀಯ ಪಾಲನೆ ಮತ್ತು ಪೋಷಣೆ (ಪೋಲ್ಟ್ರಿ ಫಾರ್ಮಿಂಗ್). ವಿಶಾಲಾರ್ಥದಲ್ಲಿ ಕೋಳಿಗಳು, ಬಾತುಕೋಳಿಗಳು, ಟರ್ಕಿ ಕೋಳಿ ಮೊದಲಾದ ಉಪಯುಕ್ತ ಸಾಕುಪ್ರಾಣಿಗಳನ್ನೆಲ್ಲ ಕೋಳಿವರ್ಗದ ಪಕ್ಷಿಗಳೆಂದು ಕರೆಯುವ ಪದ್ಧತಿ ಉಂಟು.ಇದು ಜಗತ್ತಿನ ಆಹಾರ ಸರಪಣಿಯಲ್ಲಿ ಒಂದು ಮುಖ್ಯ ಘಟಕವಾಗಿದ್ದು ವಾರ್ಷಿಕ ಸುಮಾರು ೬೦ ಬಿಲಿಯನ್ ಕೋಳಿಗಳನ್ನು ಆಹಾರಕ್ಕಾಗಿ ಉಪಯೋಗಿಸಲಾಗುತ್ತದೆ.[೨][೩]
ಭಾರತದಲ್ಲಿ ಕೋಳಿ ಸಾಕಣೆ
[ಬದಲಾಯಿಸಿ]ಭಾರತದಲ್ಲಿ ಕೋಳಿಸಾಕಣೆ ಒಂದು ಉಪಕಸುಬು. ಹಳ್ಳಿಗಳಲ್ಲಿ ರೈತಾಪಿ ಸಂಸಾರ ಸರಾಸರಿ 10-12 ಕೋಳಿಗಳನ್ನು ಸಾಕುವುದುಂಟು. ಆದರೆ ಇಲ್ಲಿ ಶಾಸ್ತ್ರೀಯ ವಿಧಾನವನ್ನು ಆಚರಣೆಯಲ್ಲಿ ತಂದಿಲ್ಲ. ಬಹುತೇಕವಾಗಿ ಬೇಕಾಬಿಟ್ಟಿ ಅಲೆದು ಆಹಾರ ಸಂಪಾದಿಸಿ ರಾತ್ರಿವೇಳೆ ಗೂಡುಸೇರುವ ಈ ಸಾಕುಕೋಳಿಗಳಿಂದ ರೈತರಿಗೆ ಒದಗುವ ಆರ್ಥಿಕ ಲಾಭ ತೀರ ಅಂಚಿನದಷ್ಟೆ. ಇಂಥ ಕೋಳಿಗಳಿಂದ ದೊರೆಯುವ ಉತ್ಪನ್ನ ಕಡಿಮೆ. ಅಲ್ಲದೆ ಇವು ಸ್ವತಃ ರೋಗರುಜಿನಗಳಿಗೆ ಮತ್ತು ಅವಗಡಗಳಿಗೆ ತುತ್ತಾಗಿ ಸಾಯುವುದರ ಜೊತೆಗೆ ಅಂಟುಜಾಡ್ಯಗಳ ವಾಹಕಗಳಾಗುವುದೂ ಉಂಟು. ಕೋಳಿಸಾಕಣೆಯನ್ನು ಒಂದು ವ್ಯವಸ್ಥಿತ ಕೈಗಾರಿಕೆ ಎಂದು ಪರಿಗಣಿಸಿ ಆ ರೀತಿ ನಡೆಸದಿದ್ದರೆ ಅದರಿಂದ ನಿರೀಕ್ಷಿಸಿದ ಪ್ರತಿಫಲ ದೊರೆಯಲಾರದು. ಈಚೆಗೆ ವಿಜ್ಞಾನ ಮತ್ತು ತಾಂತ್ರಿಕ ಜ್ಞಾನಗಳ ಸಹಾಯದಿಂದ ಕೋಳಿ ಸಾಕಣೆಯಲ್ಲಿ ಅದ್ಭುತ ಪ್ರಗತಿಯನ್ನು ಸಾಧಿಸಲಾಗಿದೆ. ವೈಜ್ಞಾನಿಕ ರೀತಿಯಲ್ಲಿ ಸಾಕಿ ಹೆಚ್ಚು ಲಾಭವನ್ನು ಪಡೆಯಬೇಕಾದರೆ ಸುಧಾರಿಸಿದ ಒಳ್ಳೆ ತಳಿಯ ಕೋಳಿಗಳು, ಅವುಗಳಿಗೆ ಸಾಕಷ್ಟು ಸ್ಥಳಾವಕಾಶವುಳ್ಳ ಹಿತಕರವಾದ ಮನೆ, ಯೋಗ್ಯವಾದ ಸಲಕರಣೆಗಳು ಸಮತೂಕವಾದ ಆಹಾರ ಸರಬರಾಜು ಮತ್ತು ರೋಗ ಪ್ರತಿಬಂಧಕ ಯೋಜನೆಗಳನ್ನು ಅನುಸರಿಸಬೇಕಾಗುತ್ತದೆ.
ಉತ್ತಮ ತಳಿಯ ಕೋಳಿಗಳು
[ಬದಲಾಯಿಸಿ]
ಕೋಳಿಗಳು ಹೆಚ್ಚು ಮೊಟ್ಟೆಗಳನ್ನು ಕೊಡಬೇಕೆಂದು ತಜ್ಞರು ತಳಿ ಅಭಿವೃದ್ಧಿ ಮಾಡಿದ್ದಾರೆ. ಇಂಥ ತಳಿಗಳಿಗೆ ಲೆರ್ ಹಾರ್ನ್, ಮಿನಾರ್ಕಾ, ರೋಡ್ ಐಲೆಂಡ್ ರೆಡ್ ಎಂದು ಹೆಸರು. ಹೀಗೆ ಹಲವಾರು ತಳಿಯ ಕೋಳಿಗಳಿವೆ. ಮಾಂಸಕ್ಕಾಗಿಯೇ ಕೋಳಿಗಳ ತಳಿಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಕೋಳಿಗಳ ಬೆಳೆವಣಿಗೆಯ ಗತಿ ತೀವ್ರ, ಇವುಗಳ ಮೈ ಮಾಂಸ ಬೇಗನೆ ಬೆಳೆದು ತುಂಬಿಕೊಳ್ಳುತ್ತದೆ. ರಾಕ್, ವೈಯಾನೆಟ್, ಕಾರ್ನಿಕ್ ಎಂಬ ಕೋಳಿಗಳು ಈ ಜಾತಿಗೆ ಸೇರಿದವು. ಇತ್ತಿತ್ತಲಾಗಿ ತಳಿಸುಧಾರಕರು ಅನುಕೂಲವಾದ ತಳಿಗಳಿಂದ ಅತಿ ಹೆಚ್ಚು ಲಾಭ ಕೊಡುವ ಮಿಶ್ರ ಜಾತಿಯ ಕೋಳಿಗಳನ್ನು ಒದಗಿಸುತ್ತಿದ್ದಾರೆ. ಹ್ವೈಟ್ ಲೆಗ್‍ಹಾರ್ನ್ ಮತ್ತು ರೋಡ್ ಐಲೆಂಡ್ ರೆಡ್ ಜಾತಿಯ ಕೋಳಿಗಳಿಂದ ಮಿಶ್ರ ಜಾತಿಯ ಕೋಳಿಗಳನ್ನು ಪಡೆಯುತ್ತಾರೆ. ಆಸ್ಟ್ರೇಲಿಯದಲ್ಲಿ ಆಸ್ಟ್ರೋಲಾರ್ಪ್ ಮತ್ತು ಹ್ವೈಟ್ ಲೆಗ್‍ಹಾರ್ನ್ ಜಾತಿಗಳ ಮಿಶ್ರ ತಳಿಗಳನ್ನು ಉತ್ಪಾದಿಸುವುದು ವಾಡಿಕೆಯಲ್ಲಿದೆ. ಮಿಶ್ರ ತಳಿ ಕೋಳಿಗಳು ಬಲು ಶೀಘ್ರವಾಗಿ ಬೆಳೆಯುತ್ತವೆ. ಇವು ಮಿಶ್ರತಳಿಯ ಸಾಮಥ್ರ್ಯ (ಹೈಬ್ರಿಡ್ ವಿಗರ್) ಪಡೆದಿರುವುದರಿಂದ ದೃಢವಾಗಿರುತ್ತವೆ. ಹಳ್ಳಿಗಳಲ್ಲಿಯ ಮನೆ, ತಿಂಡಿ ಮುಂತಾದ ವಾತಾವರಣಕ್ಕೆ ಸುಲಭವಾಗಿ ಹೊಂದಿಕೊಳ್ಳುತ್ತದೆ. ಮಿಶ್ರ ತಳಿಯ ಗಂಡು ಮರಿಗಳು ಬೇಗನೆ ಮೈ ತುಂಬಿಕೊಂಡು ಬೆಳೆಯುವುದರಿಂದ ಅವನ್ನು ಕೂಡಲೆ ಮಾಂಸಕ್ಕಾಗಿ ಉಪಯೋಗಿಸಬಹುದು. ಇದೇ ಜಾತಿಯ ಹೆಣ್ಣು ಕೋಳಿಗಳು ಅಂದರೆ( ಹೇಂಟೆಗಳು) ಬೇಗನೆ ಮೊಟ್ಟೆ ಇಡುವ ಸ್ಥಿತಿಗೆ ಬರುತ್ತವೆ. ಇಡೀ ವರ್ಷ ಇವು ಅಧಿಕ ಸಂಖ್ಯೆಯಲ್ಲಿ ಮೊಟ್ಟೆಗಳನ್ನು ಕೊಡುತ್ತವೆ.
ಕೋಳಿ ಮನೆಗಳು
[ಬದಲಾಯಿಸಿ]ಚಳಿ, ಮಳೆ, ಗಾಳಿ, ಕಾವಿನ ಬಾಧೆಗಳನ್ನು ತಡೆಗಟ್ಟಿ ಹಿತಕರವಾದ ವಾತಾವರಣವನ್ನು ಕಲ್ಪಿಸಲು ಯೋಗ್ಯವಾದ ಮನೆಗಳು ಬೇಕು. ಒಳ್ಳೆಯ ತಳಿಯ ಕೋಳಿಗಳನ್ನು ಆಯ್ದು ಅವುಗಳಿಗೆ ಸಮತೂಕದ ಆಹಾರವನ್ನು ಒದಗಿಸಬೇಕು. ಅವಕ್ಕೆ ಹಿತಕರವಾದ ಪರಿಸರವಿರುವ ನೆಲೆಗಳನ್ನೂ ಒದಗಿಸಿದರೆ ಮೊಟ್ಟೆಗಳ ಉತ್ಪತ್ತಿ ಹೆಚ್ಚುತ್ತದೆ. ತೇವ ಮತ್ತು ನೀರು ನಿಲ್ಲುವಂಥ ತಗ್ಗುಪ್ರದೇಶಗಳನ್ನು ಬಿಟ್ಟು ಎತ್ತರವಾದ ಜಾಗದಲ್ಲಿ ಕೋಳಿ ಮನೆಗಳನ್ನು ಕಟ್ಟಬೇಕು. ತಳಪಾಯವನ್ನು ಇಲಿ, ಹೆಗ್ಗಣ ಮುಂತಾದವು ಕೊರೆಯದಂತೆ ಸುಮಾರು 2'-3' ಆಳವಾಗಿ ಹಾಕುವುದು ಒಳ್ಳೆಯದು. ನೆಲಮಟ್ಟ ಹೊರಮಟ್ಟಕ್ಕಿಂತ ಒಂದು ಅಡಿ ಎತ್ತರವಾಗಿರಬೇಕು. ಹೊರಗಿನಿಂದ ತೇವ ಮತ್ತು ನೀರು ಒಳಗೆ ಬರದಂತೆ ಇದು ಸಹಕಾರಿ. ನೆಲದಮೇಲೆ ಒಣಗಿದ ಎಲೆಯ ಚೂರು, ಕಬ್ಬಿನ ಸಿಪ್ಪೆ, ರಾಗಿ ಉಬ್ಬಲು, ಮರದ ಹೊಟ್ಟು, ನೆಲಗಡಲೆಕಾಯಿ ಅಥವಾ ಬತ್ತದ ಹೊಟ್ಟನ್ನು ದಪ್ಪವಾಗಿ ಹಾಕಬಹುದು. ನೆಲಮಟ್ಟದಿಂದ 2.5'-3' ಎತ್ತರದ ಮತ್ತು 4.5"-9' ದಪ್ಪದ ಇಟ್ಟಿಗೆ ಅಥವಾ ಕಲ್ಲಿನ ಗೋಡೆಯನ್ನು ಕಟ್ಟಬೇಕು. ಈ ಗೋಡೆಯ ಮೇಲೆ 3' ಅಗಲದ 0.5" ಬಲೆ ಕಣ್ಣಿನ ತಂತಿಯ ಜಾಳಿಗೆಯನ್ನು ಚಾವಣಿ ವರೆಗೆ ಸಾಧ್ಯವಿದ್ದಷ್ಟು ಒಳಗಿನ ಜಾಗದಿಂದ ಗಟ್ಟಿಯಾಗಿ ಪೋಣಿಸಬೇಕು. ಮೇಲ್ಚಾವಣಿಗಾಗಿ ಹೆಂಚು ಅಥವಾ ಕಲ್ನಾರು ತಗಡುಗಳನ್ನು ಉಪಯೋಗಿಸಬಹುದು. ಹುಲ್ಲು, ತೆಂಗಿನ ಗರಿಗಳ ಅಥವಾ ಈಚಲ ಎಲೆಗಳ ಚಾಪೆಗಳನ್ನು ಸಹ ಉಪಯೋಗಿಸಬಹುದು. ಸತುವಿನ ತಗಡುಗಳನ್ನು ಉಪಯೋಗಿಸಿದರೆ ಬೇಸಗೆಯಲ್ಲಿ ಬಲು ಸೆಕೆಯಾಗಿಯೂ ಚಳಿಗಾಲದ ರಾತ್ರಿಯಲ್ಲಿ ಬಲು ಚಳಿಯಾಗಿಯೂ ಕೋಳಿಗಳ ಆರೋಗ್ಯಕ್ಕೆ ಅಪಾಯವಾಗಬಹುದು. ಮನೆ ನಡುವಿನ ಎತ್ತರ 10'ಗಳಿಗಿಂತ ಹೆಚ್ಚು ಇರಬಾರದು. ಬಿಸಿಲು ಮತ್ತು ಮಳೆಯ ನೀರು ಒಳಗಡೆ ಬರದಂತೆ ತಡೆಯಲು ಮನೆಯ ಮೇಲ್ಚಾವಣಿಯ ಸೂರನ್ನು ಎರಡು ಬದಿಗಳಲ್ಲಿಯೂ 2.5'-3' ಮುಂದಕ್ಕೆ ಚಾಚಿರಬೇಕು.
ಕೋಳಿಗಳಿಗೆ ಸ್ಥಳಾವಕಾಶ
[ಬದಲಾಯಿಸಿ]ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ 2.5-3 ಚದರಡಿಗಳಷ್ಟು ಮತ್ತು ಹೆಚ್ಚು ಮಳೆ ಬೀಳುವ ಮಲೆನಾಡು ಪ್ರದೇಶದ 3-5 ಚದರಡಿಗಳಷ್ಟು ಜಾಗ ಪ್ರತಿಯೊಂದು ಕೋಳೀಗೂ ಬೇಕು. ಉದಾಹರಣೆಗೆ 15'x20' ಇರುವ ಮನೆಯಲ್ಲಿ 75-120 ಕೋಳಿಗಳನ್ನು ಸಾಕಬಹುದು.
ಕೋಳಿಗಳನ್ನು ಬೆಳೆಸಲು ಉಪಯೋಗಿಸುವ ಉಪಕರಣಗಳು
[ಬದಲಾಯಿಸಿ]
ಇವುಗಳಿಗೆ ಒಟ್ಟಾಗಿ ಬ್ರೂಡಲ್ ಎಂದು ಹೆಸರು. ಇದೊಂದು ವಿಶಿಷ್ಟವಾದ ರಚನೆಯ ಪೆಟ್ಟಿಗೆ. ಇದರಲ್ಲಿ ಎರಡು ವಿಧ-ತಂತಿ ಜಾಳಿಗೆಯ ಮೇಲೆ ಮರಿಗಳ ಬೆಳೆವಣಿಗೆಗೆ ಅವಕಾಶವುಳ್ಳ ಬ್ರೂಡರುಗಳು (ಬ್ಯಾಟರಿ ಬ್ರೂಡರ್ಸ್) ಮತ್ತು ನೆಲಮಟ್ಟದ ಮರಿಗಳ ಬೆಳೆವಣಿಗೆಗೆ ಅವಕಾಶ ಸಲ್ಲಿಸುವ ಬ್ರೂಡರುಗಳು (ಫ್ಲೋರ್ ಬ್ರೂಡರ್ಸ್) ಬ್ರೂಡರುಗಳನ್ನು ಕಡಿಮೆ ಖರ್ಚಿನಲ್ಲಿ ಯಶಸ್ವಿಯಾಗಿ ಮನೆಯಲ್ಲಿಯೇ ತಯಾರಿಸಬಹುದು. 10"-12" ಎತ್ತರವಿರುವ ಬಹಳ ವಿಶಾಲವಾದ ಬುಟ್ಟಿಯನ್ನು ತೆಗೆದುಕೊಳ್ಳಬೇಕು. ಇದನ್ನು ಡಬ್ಬುಮಾಡಿ ಮೇಲ್ಚಾವಣಿಯಿಂದ ತೂಗುಹಾಕಬಹುದು. ಒಳಭಾಗದಲ್ಲಿ ಬುಟ್ಟಿಯ ಮಧ್ಯದಲ್ಲಿ ಒಂದೆರಡು ವಿದ್ಯುಚ್ಛಕ್ತಿ ಬಲ್ಬುಗಳನ್ನು ಹಾಕಲು ಬರುವಂತೆ ಯೋಜಿಸಬೇಕು. ಬುಟ್ಟಿಯ ಸುತ್ತಲೂ ನೆಲದ ಮೇಲೆ 10"-12" ಎತ್ತರ ಮತ್ತು 12'-15' ಉದ್ದವಿರುವ ಚಾಪೆಯನ್ನು ಅಥವಾ ಕಾರ್ಡ್‍ಬೋರ್ಡ್‍ಗಳನ್ನು ವರ್ತುಲಾಕಾರವಾಗಿ ನಿಲ್ಲಿಸಬೇಕು. ಈ ವರ್ತುಲದ ಆಕಾರವನ್ನು ದಿನವೂ ಹೆಚ್ಚಿಸುತ್ತ ಮರಿ ಸಾಕುವುದನ್ನು ಆರಂಭಿಸಿದ ದಿನದಿಂದ 4-6 ದಿವಸಗಳವರೆಗೆ ಇದನ್ನು ಇಟ್ಟು ಆಮೇಲೆ ತೆಗೆಯಬಹುದು. ವರ್ತುಲಾಕಾರದ ಉಪಕರಣಕ್ಕೆ ಮರಿಗಳ ಮಾರ್ಗದರ್ಶಿ (ಚೆಕ್ ಗಾರ್ಡ್) ಎಂದು ಹೆಸರು. ನೆಲದ ಮೇಲೆ ಹೊಟ್ಟಿನ ಹಾಸನ್ನು ಹರಡಬೇಕು ಮತ್ತು ಚಿಕ್ಕ ಚಿಕ್ಕ ತಿಂಡಿ ಮತ್ತು ನೀರಿನ ಪಾತ್ರೆಗಳನ್ನು ಯೋಗ್ಯಸ್ಥಳಗಳಲ್ಲಿ ಸಮಾಂತರವಾಗಿ ಇಡಬೇಕು. ವಿದ್ಯುತ್ತಿನ ಸೌಕರ್ಯವಿಲ್ಲದವರು ಇದೇ ಬುಟ್ಟಿಯ ಮಧ್ಯದಲ್ಲಿ ಒಂದು ತೂತನ್ನು ಮಾಡಿ ಅಲ್ಲಿ ಒಂದು ಲಾಂದ್ರವನ್ನು ಉಪಯೋಗಿಸಬಹುದು. ಲಾಂದ್ರದ ಹೊಗೆ ಸುಸೂತ್ರವಾಗಿ ಹೊರಗೆ ಹೋಗುವಂತೆ ವ್ಯವಸ್ಥೆ ಮಾಡಿರಬೇಕು. ಪಾಶ್ಚಾತ್ಯ ದೇಶಗಳಲ್ಲಿ ಉಷ್ಣತೆಯನ್ನು ನಿಯಂತ್ರಿಸುವ ಸೌಕರ್ಯವಿರುವ ದೊಡ್ಡ ದೊಡ್ಡ ಬ್ರೂಡರುಗಳಿವೆ. ಇಂಥ ಬ್ರೂಡರುಗಳಲ್ಲಿ ಸಾವಿರಾರು ಮರಿಗಳನ್ನು ಏಕಕಾಲದಲ್ಲಿ ಬೆಳೆಸಬಹುದು. ಇವುಗಳಲ್ಲಿ ಹೆಚ್ಚಾಗಿ ಮಾಂಸದ ತಳಿಯ ಕೋಳಿಮರಿಗಳನ್ನೇ ಬೆಳೆಸುತ್ತಾರೆ. ಹೇಂಟೆಗಳ ಮನೆಗಳಲ್ಲಿಯ ಉಪಕರಣಗಳು, ತಿಂಡಿಯ ಪಾತ್ರೆಗಳು :
- ಕಾಲುಗಳಿಂದ ಮೊದಲು ಕೆದರಿ ಆ ಮೇಲೆ ಆರಿಸಿ ತಿನ್ನುವ ಸ್ವಭಾವ ಕೋಳಿಗಳದು. ಇದರಿಂದ ತಿಂಡಿಯಲ್ಲಿ ಹೆಚ್ಚಿನ ಅಪವ್ಯಯವಾಗುವುದು. ಕೋಳಿ ಸಾಕಣೆಯಲ್ಲಿ ತಿಂಡಿಯ ಬಾಬತ್ತೇ 60% ಖರ್ಚು ಬರುವುದರಿಂದ ಅದು ಸದುಪಯೋಗವಾಗುವಂತೆ ನೋಡಿಕೊಳ್ಳಬೇಕು. ತಿಂಡಿಪಾತ್ರೆಗಳನ್ನು ಬಿದಿರಿನಿಂದಾಗಲೀ ಮರದ ಹಲಗೆಗಳಿಂದಾಗಲೀ ಸತುವಿನ ತಗಡುಗಳಿಂದಾಗಲೀ ತಯಾರಿಸಬಹುದು. ಕೋಳಿಗಳು ಈ ಪಾತ್ರೆಗಳಲ್ಲಿ ಕಾಲಿಡಲು ಅವಕಾಶವಾಗದಂತೆ ಮರದ ತುಂಡುಗಳಿಂದಾಗಲೀ ಅಥವಾ 1/8" ಗಾತ್ರದ ಮೆತ್ತನೆಯ ತಂತಿಯಿಂದಾಗಲೀ ಅವುಗಳಿಗೆ ಕವಚವನ್ನು ಹೊದಿಸಿರಬೇಕು. ಕೋಳಿಗಳು ತಿಂಡಿ ತಿನ್ನುವಾಗ ಹೊರಬೀಳುವ ಆಹಾರವನ್ನು ತಡೆಗಟ್ಟಲು ತಿಂಡಿ ಪಾತ್ರೆಯ ಎರಡು ಬದಿಗೆ ಒಳಭಾಗದಲ್ಲಿ ಒಂದು ಇಂಚಿನ ತಡೆಪಟ್ಟಿ ಇರಬೇಕು.
- ನೀರಿನ ಪಾತ್ರೆಗಳು : ಇವುಗಳಲ್ಲಿ ಕೋಳಿಗಳು ಕಾಲಿಡಲು ಸಾಧ್ಯವಾಗದಂತೆ ಏರ್ಪಡಿಸಿರಬೇಕು. ಸ್ವಚ್ಛವಾದ ನೀರು ಯಾವಾಗಲೂ ಕೋಳಿಗಳಿಗೆ ದೊರೆಯಬೇಕು. ಅವು ನೀರು ಕುಡಿಯುವಾಗ ನೆಲದ ಮೇಲೆ ನೀರು ಬೀಳಕೂಡದು. ನೀರಿನ ಪಾತ್ರೆಗಳ ಬದಲಾಗಿ ಮೆಲ್ಲನೆ ನೀರು ಹರಿಯುವ ಎರಡು ಅಗಲವಾದ ನಾಲೆಗಳನ್ನು ಕೋಳಿಮನೆಯಲ್ಲಿ ಒಂದು ಬದಿಗೆ ಕಟ್ಟಿಸುವುದು ಉತ್ತಮ.
- ಮೊಟ್ಟೆ ಇಕ್ಕುವ ಗೂಡುಗಳು : ಐದು ಹೇಂಟೆಗಳಿಗೆ ಒಂದು ಗೂಡಿನ ಪ್ರಮಾಣದಂತೆ ಇವು ಇರಬೇಕು. ಗೂಡುಗಳನ್ನು ಸ್ವಚ್ಛವಾಗಿ ತೊಳೆದಿಡಲು ಮತ್ತು ಕೋಳಿಗಳು ಅವುಗಳಲ್ಲಿ ಸುಲಭವಾಗಿ ಹೋಗಿಬರಲು ಅನುಕೂಲವಾಗುವಂತೆ ಅವುಗಳನ್ನು ರಚಿಸಬೇಕು. ಖಾಲಿ ಎಣ್ಣೆ ಪೀಪಾಯಿಯಿಂದ ಇಂಥ ಗೂಡನ್ನು ತಯಾರಿಸಬಹುದು.
ಕೋಳಿಯ ತಿಂಡಿಯಲ್ಲಿ ಆಹಾರ ಘಟಕಗಳು
[ಬದಲಾಯಿಸಿ]ಸಾಮಾನ್ಯವಾಗಿ ಕೋಳಿಯ ಆಹಾರದಲ್ಲಿನ ಸತ್ತ್ವ ಅದರ ಘಟಕಗಳಾದ ನೀರು, ಸಸಾರಜನಕ, ಪಿಷ್ಟ, ಮೇದಸ್ಸು ಲವಣಗಳು ಮತ್ತು ವಿಟಮಿನ್ನುಗಳನ್ನವಲಂಬಿಸಿದೆ. ಕೋಳಿಗಳಿಗೆ ಆಹಾರಕ್ಕೆಂದು ಉಪಯೋಗಿಸುವ ಖಾದ್ಯಪದಾರ್ಥಗಳಲ್ಲಿ ಸಾಮಾನ್ಯವಾಗಿ 10% ರಂತೆ ನೀರಿನ ಅಂಶವುಂಟು. ಇದಕ್ಕಿಂತ ನೀರಿನ ಅಂಶ ಹೆಚ್ಚಾಗಿದ್ದರೆ ಆ ಆಹಾರಕ್ಕೆ ಬೂಷ್ಟು ಬರುವುದುಂಟು. ಕೋಳಿ ಮಾಂಸ ಮತ್ತು ಮೊಟ್ಟೆಗಳಲ್ಲಿರುವ ಸಸಾರಜನಕ ಕೋಳಿತಿನ್ನುವ ಆಹಾರ ಪದಾರ್ಥಗಳಿಂದಲೇ ದೊರೆಯುವುದು. ಕೋಳಿ ತಿಂಡಿಯಲ್ಲು ಸಸಾರಜನಕ ಭಾಗ ಸರಿಯಾದ ಪ್ರಮಾಣದಲ್ಲಿಲ್ಲದಿದ್ದಲ್ಲಿ ಅಧಿಕ ಉತ್ಪಾದನೆ ಸಿಕ್ಕಲಾರದು. ಕೋಳಿಗಳಿಗೆ ಮುಖ್ಯವಾದ ಅರ್ಜಿನಿನ್, ಸಿಸ್ಟಿನ್, ಲ್ಯೂಸಿನ್, ಮೀಥಿಯೋನಿನ್, ಟ್ರಿಪ್ಟೋಫೆನ್, ಲೈಸೀನ್ ಎಂಬ ಅಮೈನೋ ಆಮ್ಲಗಳು ಹೆಚ್ಚು ಅವಶ್ಯಕ. ಈ ಎಲ್ಲ ಅಮೈನೋ ಆಮ್ಲಗಳೂ ಒಂದೇ ತರದ ಸಸಾರಜನಕ ಖಾದ್ಯದಲ್ಲಿಸಾಕಷ್ಟು ಸಿಕ್ಕುವುದಿಲ್ಲ. ಇವು ಸಾಕಷ್ಟು ಮೊತ್ತದಲ್ಲಿ ಸಿಕ್ಕಬೇಕಾದರೆ ಅನೇಕ ತರದ ಸಸಾರಜನಕ ಖಾದ್ಯಗಳನ್ನು ಉಪಯೋಗಿಸಬೇಕು. ಉದಾಹರಣೆಗೆ ಕಡಲೇಕಾಯಿ, ಹಿಂಡಿ, ಮೀನಿನ ಪುಡಿ, ರೇಷ್ಮೆ ಹುಳುವಿನ ಗೂಡು, ಒಣಗಿದ ಮಾಂಸದ ಪುಡಿ ಇತ್ಯಾದಿ ಪದಾರ್ಥಗಳನ್ನು ಕೂಡಿಸಿಕೊಂಡು ಆಹಾರದಲ್ಲಿ ಬೆರೆಸಬೇಕಾಗುತ್ತದೆ. ಕೋಳಿಗಳಿಗೆ ಕ್ಯಾಲ್ಸಿಯಂ, ಮೆಗ್ನೀಸಿಯಂ, ಪೊಟ್ಯಾಸಿಯಂ, ಸೋಡಿಯಂ, ಕಬ್ಬಿಣ, ಮ್ಯಾಂಗನೀಸ್ ಸತು, ತಾಮ್ರ, ಕ್ಲೋರಿನ್, ಅಯೋಡೀನ್, ಗಂಧಕ, ಕೋಬಾಲ್ಟ್ ಮೊದಲಾದ ಲವಣಗಳು ಅವಶ್ಯ. ಕೋಳಿಗಳಿಗಾಗಿ ಉಪಯೋಗಿಸುವ ಆಹಾರ ಪದಾರ್ಥಗಳಲ್ಲಿ ಸಾಮಾನ್ಯವಾಗಿ ಕ್ಯಾಲ್ಸಿಯಂ, ಫಾಸ್ಫರಸ್, ಸೋಡಿಯಂ, ಕ್ಲೋರೀನ್, ಮ್ಯಾಂಗನೀಸ್ ಲವಣಗಳು ಸಾಕಷ್ಟು ಮೊತ್ತದಲ್ಲಿ ಇರುವುದಿಲ್ಲ. ಉಳಿದ ಎಲ್ಲ ಲವಣಗಳು ಸಾಕಾಗುವಷ್ಟು ಇರುವುದು. ಕೋಳಿಯ ತಿಂಡಿಯಲ್ಲಿ ಡೈಕ್ಯಾಲ್ಸಿಯಂ, ಫಾಸ್ಫೇಟ್, ಮೂಳೆಯ ಮತ್ತು ಕಪ್ಪೆಚಿಪ್ಪಿನ ಪುಡಿಯನ್ನು ಉಪಯೋಗಿಸಿ ಕ್ಯಾಲ್ಸಿಯಂ, ಫಾಸ್ಫರುಗಳ ಅಭಾವವನ್ನು ದೂರಮಾಡುತ್ತಾರೆ. ಕ್ಲೋರೀನ್ ಮತ್ತು ಸೋಡಿಯಂ ಲವಣಗಳಿಗಾಗಿ ಅಡುಗೆಯ ಉಪ್ಪನ್ನು 0.5% ಪ್ರಮಾಣದಲ್ಲಿ ಕೋಳಿಯ ತಿಂಡಿಯಲ್ಲಿ ಉಪಯೋಗಿಸುತ್ತಾರೆ. ಮೀನಿನ ಪುಡಿಯಲ್ಲಿ ಉಪ್ಪಿನ ಅಂಶ ಹೆಚ್ಚಾಗಿದ್ದರೆ ಅಡುಗೆಯ ಉಪ್ಪಿನ ಪರಿಮಾಣವನ್ನು ಇನ್ನೂ ಕಡಿಮೆಯಾಗಿ ಉಪಯೋಗಿಸಬಹುದು. ಕೋಳಿಗಳ ಆಹಾರದಲ್ಲಿ ಮ್ಯಾಂಗನೀಸ್ ಸಲ್ಫೇಟ್ ಅಥವಾ ಮ್ಯಾಂಗನೀಸ್ ಆಕ್ಸೈಡುಗಳನ್ನು ಉಪಯೋಗಿಸಿದರೆ ಈ ಲವಣದ ಅಭಾವವನ್ನು ನೀಗಿಸಿದಂತಾಗುವುದು. ಈ ಲವಣಗಳು ಆಹಾರವನ್ನು ಶರೀರದಲ್ಲಿ ಇಂಗಿಸಿಕೊಳ್ಳಲು ಸಹಾಯ ಮಾಡುತ್ತವೆ. ಕೋಳಿಗಳಿಗೆ ಅನೇಕ ವಿಟಮಿನ್ನುಗಳು ಅವಶ್ಯಕ. ಹಸಿರು ಹುಲ್ಲು, ಕುದುರೆ ಮಸಾಲೆ, ಗೋವಿನ ಜೋಳ(ಮುಸುಕಿನ ಜೋಳ) ಮೀನಿನ ಎಣ್ಣೆಯಲ್ಲಿರುವ ವಿಟಮಿನ್ ಎ ಕೋಳಿಗಳ ಅಭಿವೃದ್ದಿಗೆ ಬಲು ಉಪಯುಕ್ತ.
ಕೋಳಿಗಳಿಗಾಗಿ ತಿಂಡಿಗಳು
[ಬದಲಾಯಿಸಿ]ಮನುಷ್ಯನಿಗೆ ನಿರುಪಯುಕ್ತವಾದ ಆಹಾರ ಪದಾರ್ಥಗಳನ್ನು ತಿಂದು ಅತಿ ಉಪಯುಕ್ತವಾದ ಮೊಟ್ಟೆ ಮತ್ತು ಮಾಂಸ ಕೊಡುವ ಒಂದು ಜೀವಯಂತ್ರ ಕೋಳಿ. ಎಲ್ಲ ಕುಕ್ಕುಟ ಕೇಂದ್ರಗಳಲ್ಲೂ ಕೋಳಿ ತಿಂಡಿ ತಯಾರಿಸುವವರು ಮುಖ್ಯವಾಗಿ ಅಕ್ಕಿತೌಡು, ಬೂಸ, ಕಡಲೆಕಾಯಿ ಹಿಂಡಿಪುಡಿ, ಮೀನಿನ ಪುಡಿ, ಗೋವಿನ ಜೋಳ, ಉಗ್ರಾಣ ಮತ್ತು ಹಿಟ್ಟಿನ ಗಿರಣಿಗಳ ಕಸ, ಲವಣತತ್ವ ಮತ್ತು ವಿಟಮಿನ್ನುಗಳನ್ನು ಬೆರಕೆಮಾಡಿ ಕೋಳಿತಿಂಡಿಯನ್ನು ತಯಾರಿಸುವರು. ಇವನ್ನು ಬೆರಕೆ ಮಾಡುವಾಗ ಆಹಾರದ ಘಟಕಗಳಾದ ಸಸಾರಜನಕ, ಕೊಬ್ಬುಪದಾರ್ಥಗಳು, ಲವಣಗಳು, ವಿಟಮಿನ್ನುಗಳು, ರೋಗನಿವಾರಕ ಔಷಧಗಳು ಸರಿಯಾದ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳುತ್ತಾರೆ. ಈ ಪ್ರಕಾರ ತಯಾರಿಸಿದ ಆಹಾರಕ್ಕೆ ಸಮತೂಕ ಆಹಾರವೆಂದು ಹೆಸರು. ಇಂಡಿಯನ್ ಸ್ಟ್ಯಾಂಡರ್ಡ್ ಇನ್‍ಸ್ಟಿಟ್ಯೂಟಿನ ಅಧಿಕಾರಿಗಳು ಕೋಳಿಗಳ ತಿಂಡಿಯಲ್ಲಿ ಕಣಗಳ ಗಾತ್ರ ಮತ್ತು ಅದರಲ್ಲಿರುವ ಘಟಕಗಳ ಪ್ರಮಾಣದ ನಿಯಂತ್ರಣಗಳನ್ನು ಹೇಳಿದ್ದಾರೆ. ಈ ಪ್ರಕಾರ ಕೋಳಿಗಳ ತಿಂಡಿಯನ್ನು ತಯಾರಿಸಿದರೆ ಕೋಳಿಸಾಕಣೆ ಉದ್ಯಮಗಾರನ ಕೆಲಸ ಎಷ್ಟೋ ಕಡಿಮೆ ಆಗುವುದಲ್ಲದೆ ಕೋಳಿಗಳ ಮೆಲ್ವಿಚಾರಣೆ ಮತ್ತು ಪಾಲನೆ ವಿಧಾನಗಳಲ್ಲಿ ಹೆಚ್ಚು ಗಮನ ಕೊಟ್ಟು ಅಧಿಕ ಉತ್ಪಾದನೆ ಪಡೆಯಲು ಸಾಧ್ಯವಾಗುವುದು.
ಭಾರತದ ಆಹಾರ ಪೂರೈಕೆಯ ದೃಷ್ಟಿಯಿಂದ ಹೇಳುವುದಾದರೆ ಕೋಳಿ ಸಾಕಣೆ ಅದರ ತೀರ ಹೊರ ಸರಹದ್ದನ್ನು ಮಾತ್ರ ಸ್ಪರ್ಶಿಸಿವೆಯಷ್ಟೆ. ವೈಜ್ಞಾನಿಕ ಕೃಷಿಯನು ಕ್ರಮಬದ್ಧವಾಗಿ ಅನುಷ್ಠಾನಿಸುವುದರಿಂದ ವೆಯಕ್ತಿಕ ಲಾಭದ ಜೊತೆಗೆ ರಾಷ್ಟ್ರೀಯ ವರಮಾನವೂ ಪೌಷ್ಟಿಕಾಹಾರಗಳ ಸರಬರಾಜೂ ಏರುವುದರಲ್ಲಿ ಸಂದೇಹವಿಲ್ಲ
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]
Media related to Poultry husbandry at Wikimedia Commons- Economics of dual-purpose breeds
ಉಲ್ಲೇಖಗಳು
[ಬದಲಾಯಿಸಿ]
- ↑ Appleby, M.C.; Hughes, B.O.; Elson, H.A. (1992). Poultry Production Systems: Behaviour, Management and Welfare. CAB International.
- ↑ "Global Animal Slaughter Statistics And Charts". Faunalytics (in ಅಮೆರಿಕನ್ ಇಂಗ್ಲಿಷ್). 2018-10-10. Retrieved 2019-11-05.
- ↑ "Compassion in World Farming – Poultry". Ciwf.org.uk. Archived from the original on April 26, 2017. Retrieved October 3, 2018.
There are more chickens in the world than any other bird. In fact, more than 50 billion chickens are reared annually as a source of food, for both their meat and their eggs.