ಕೊರಗರ ಕುಣಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೊರಗರ ವೇಷಭೂಷಣ
ಕೊರಗರ ಡೋಲು ನಲಿಕೆ
2021ರ ದೀಪಾವಳಿಯಂದು ಕರ್ನಾಟಕದ ಕರಾವಳಿಯ ಮನೆಯೊಂದರಲ್ಲಿ ಕೊರಗ ಕುಣಿತ

ಕೊರಗರ ಕುಣಿತವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರದರ್ಶನಗೊಳ್ಳುವಂತಹ ಹವ್ಯಾಸಿ ಕಲೆಯಾಗಿರುವುದು. ನವರಾತ್ರಿಯ ಸಮಯದಲ್ಲಿ ನಡೆಯುವಂತಹ ಈ ಕುಣಿತವು ಹರಿಜನರ ಒಂದು ವರ್ಗವಾದ ಕೊರಗರಲ್ಲಿ ರೂಡಿಯಲ್ಲಿದೆ. ದಟ್ಟ ಕಪ್ಪು ಬಣ್ಣದ ಕೊರಗರು ಗುಂಗುರು ಕೂದಲು, ಚಪ್ಪಟೆ ಮೂಗು, ಅಗಲವಾದ ಹಣೆ, ಹರಿತ ಕಣ್ಣು, ದಪ್ಪ ತುಟಿ, ಬಲಿ‌ಶ್ಟ ದೇಹ ಹೊಂದಿರುವವರು. ದವಡೆ ಸ್ವಲ್ಪ ಮುಂದೆ ಚಾಚಿಕೊಂಡಿದ್ದು ಕೆನ್ನೆಯ ಎಲುಬು ಎತ್ತರವಾಗಿರುತ್ತದೆ.[೧]

ಕೊರಗರ ಒಳಪಂಗಡಗಳು[ಬದಲಾಯಿಸಿ]

  • ಸೊಪ್ಪು ಕೊರಗರು
  • ಚಿಪ್ಪಿ ಕೊರಗರು
  • ಅಂಡೆ ಕೊರಗರು
  • ಮುಂಡು ಕೊರಗರು
  • ಬಾಕುಡ ಕೊರಗರು

ಇದು ಪ್ರಾಚೀನ ವಿಂಗಡಣೆಯೇ ಹೊರತು, ಇಂದಿನ ಪ್ರಸ್ತುತದಲ್ಲಿ ಗಮನಿಸುವುದಿಲ್ಲ. ಕೊರಗರು 'ಕೊರಗ ಭಾಷೆ'ಯನ್ನಾಡುತ್ತಾರೆ. ಇದು ತುಳು ಭಾ‌‌‌ಷೆಗೆ ಸಮೀಪವಾದುದು.

ಕೊರಗಜ್ಜ ಭೂತ ಕುಣಿತ

ಕೊರಗರ ವಸ್ತ್ರದ ಮಾದರಿ[ಬದಲಾಯಿಸಿ]

ಸುಗ್ಗಿ ಹುಣ್ಣಿಮೆಯ ಕಾಲದಲ್ಲಿ ಕೊರಗರ ವೇಶವು ಕಂಡುಬರುವುದು. 'ಕೊರಗ' ಪದವು ಜಾತಿಸೂಚಕ ಪದವಾದರೂ ಕೊರಗ ವೇಶವು ಜಾತಿ ಸಂಬಂದಿಯಲ್ಲ. ಯಾವುದಾದರೂ ಕಾರಣಗಳಿಂದ 'ಹರಕೆ' ಮಾಡಿಕೊಂಡಂತಹ ವ್ಯಕ್ತಿಯು ಯಾವುದೇ ಜಾತಿಯಾದರೂ ಕೂಡ ಕೊರಗ ವೇಶವನ್ನು ಹಾಕಬಹುದು. ಸಾಮಾನ್ಯವಾಗಿ ಮೇರ, ಮನ್ಸ, ಮಾಯಿಲ, ನಾಯಕ, ಗೌಡ ಮೊದಲಾದ ಜಾತಿಯವರು ಈ ವೇ‌ಶವನ್ನು ಹಾಕುವುದು ಕಂಡುಬರುತ್ತದೆ. ಕೊರಗ ವೇಶವನ್ನು ಹಾಕಿಕೊಳ್ಳುವಂತಹ ವ್ಯಕ್ತಿಯು ಮೈ ತುಂಬಾ ಮಸಿಯನ್ನು ಬಳಿದುಕೊಂಡಿರುತ್ತಾನೆ. ಇದ್ದಿಲನ್ನು ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ಮೈಗೆ ಹಾಕಿಕೊಂಡಾಗ ಹೊಳಪು ಹೆಚ್ಚಾಗುತ್ತದೆ. ವೇಶವನ್ನು ಬಿಚ್ಚುವ ತನಕ ಸ್ನಾನ ಮಾಡುವಂತಿಲ್ಲ. ಸೊಂಟಕ್ಕೆ ಮಾತ್ರ ಒಂದು ತುಂಡು ಬಟ್ಟೆಯಿದ್ದು ಉಳಿದಂತೆ ಬರೀ ಮೈಯಲ್ಲೇ ಇರಬೇಕು. ತಲೆಗೆ 'ಗೋಂಪಾರ್'(ಟೊಪ್ಪಿ) ಇರುತ್ತದೆ. ಇದನ್ನು ಕಂಗಿನ ಮರದ ಹಾಳೆಯಿಂದ ತಯಾರಿಸಲಾಗುತ್ತದೆ. ಇದನ್ನು 'ಮುಟ್ಟಾಳೆ'ಎಂದೂ ಕರೆಯಲಾಗುತ್ತದೆ. ಮುಟ್ಟಾಳೆಗೆ ಮುಂಬದಿಯಲ್ಲಿ ಒಂದು 'ಕೊಂಕು' ಇದ್ದರೆ ಹಿಂಬದಿಗೂ, 'ಕೊಂಕು' ಇರುವುದು ಗೋಂಪಾರಿನ ಗುಣವಾಗಿರುವುದು. ಕಾಲಿಗೆ ಗೆಜ್ಜೆ, ಕೈಯಲ್ಲಿ ಕೊಳಲು ಹಾಗೂ ಉದ್ದನೆಯ ದೊಣ್ಣೆಯೂ ಇರುತ್ತದೆ. ಈ ವೇಶದಲ್ಲಿಯೆ ಮನೆಮನೆಗಳಿಗೆ ಹೋಗಿ ಕುಣಿಯುತ್ತಾರೆ. ಈ ಶಬ್ದವು ಇವರ ಬರುವಿಕೆಯ ಸಂಕೇತವಾಗಿರುವುದು. ಕೊರಗ ವೇಶವನ್ನು ಹಾಕುವ ಮೊದಲು ಪೂಜೆಯು ನಡೆಯುತ್ತದೆ. ಈ ಪೂಜೆಯು 'ಚನಿಯ ಕೊರಗ' ಎನ್ನುವ ಕೊರಗತನಿಯ ಭೂತದ ಹೆಸರಿನಲ್ಲಿ ನಡೆಯುತ್ತದೆ. ಪ್ರಸ್ತುತದಲ್ಲಿ ಗುಡಿಗಳನ್ನು ಕಟ್ಟಿರುವರು. ಇಲ್ಲಿಯೆ ಪೂಜೆಯನ್ನು ಸಲ್ಲಿಸಿ ತೆಂಗಿನಕಾಯಿ ಒಡೆದು 'ಪಾರಿ'ನುಡಿದು ಪೂಜೆಯನ್ನು ಮುಗಿಸುವರು. ನಂತರ ಕುಣಿತವು ಪ್ರಾರಂಭವಾಗುವುದು. ಇದರ ಬಳಿಕ ಇತರ ಮನೆಗಳಿಗೆ ಹೋಗುವುದು ಸಂಪ್ರದಾಯವಾಗಿರುವುದು. ಕೊರಗ ವೇಶದವರು 'ಪಾಡ್ದನ'ವನ್ನು ಹೇಳುತ್ತ ಕುಣಿಯುತ್ತಾರೆ. ಕೆಲವರು 'ಚನಿಯ ಕೊರಗ' ಎಂಬ ಭೂತದ ಪಾಡ್ದನವನ್ನು ಹೇಳಿದರೆ, ಕೆಲವರು ಪ್ರತ್ಯೇಕವಾದ ಪಾಡ್ದನವನ್ನು ಹೇಳುವರು. ತುಳು ಜಾನಪದದಲ್ಲಿ ಇಬ್ಬರ ಕೊರಗರ ಉಲ್ಲೇಖಗಳು ಕಂಡುಬರುತ್ತದೆ. ಒಬ್ಬನ ಹೆಸರು 'ಅಂಗಾರ' ನೆಂದರೆ ಮತ್ತೊಬ್ಬ 'ಚನಿಯ'. ಈ 'ಚನಿಯ ಕೊರಗ' ಭೂತಕ್ಕೆ ವಿಸ್ತಾರವಾದ ಪಾಡ್ದನವಿದ್ದು , ಈಗ ತುಳುನಾಡಿನ ಮುಖ್ಯ ಭೂತಗಳಲ್ಲೊಂದಾಗಿ ನೇಮ, ಕೋಲಗಳನ್ನು ಪಡೆಯುತ್ತದೆ. ಆದರೆ 'ಅಂಗಾರ' ಎನ್ನುವ ಕೊರಗನೂ ಭೂತವೇ ಆದರೂ ಅದಕ್ಕೆ ಆ ಮಾದರಿಯ 'ಪಾಡ್ದನ'ವಿರುವುದಿಲ್ಲ. ಇದನ್ನು 'ಅಂಗಾರ ಬಾಕುಡ' ಎಂದು ಕರೆಯುತ್ತಾರೆ. 'ಬಾಕುಡ'ವು ಕೊರಗ ಜಾತಿಯ ಹೆಸರಾದರೆ 'ಅಂಗರ'ಎನ್ನುವುದು ಆ ಜಾತಿಯಲ್ಲಿ ಭೂತವಾದ ವ್ಯಕ್ತಿಯ ಹೆಸರು. ದನ ಕರುಗಳು ರಕ್ಶಕನೆಂದು ಈ ಭೂತವನ್ನು ಪೂಜಿಸುತ್ತಾರೆ. ದನ ಕರುಗಳಿಗೆ ಕಾಯಿಲೆ ಬಂದಾಗ, ದನ ತಪ್ಪಿಸಿಕೊಂಡಾಗ, ಕರು ಬಿಡುವಾಗ ಹಸು ಅಡ್ಡಿ ಮಾಡಿದ ಸಂದರ್ಭದಲ್ಲಿ ಈ ಪೂಜೆಯನ್ನು ಮಾಡಲಾಗುತ್ತದೆ. ಈ ಪೂಜೆಯನ್ನು ಮೇರ, ಮನ್ಸ ಮೊದಲಾದ ಜಾತಿಯ ಗಂಡಸರು, ಇಲ್ಲವೇ ಮಕ್ಕಳು ನಡೆಸುತ್ತಾರೆ. ಕೊರಗ ವೇಶದವರು ಹೇಳುವಂತಹ ಪಾಡ್ದನವೊಂದರಲ್ಲಿ 'ಅಂಗಾರ' ಭೂತದ ಬಗೆಗೆ ವಿವರಗಳಿವೆ. ಆ ಪಾಡ್ದನದ ಮಾದರಿಯು ಹೀಗಿದೆ.

ಲೇs ಲೇs ಲೇs ಲೇs ಲೇs ಲೇs ಲಂs ಗಾs ರಾ
ಲೇs ಲೇs ಲೇs ಲೇs ಲೇs ಲೇs ಲಂs ಗಾs ರಾ
ಅಂಗರನ ದಿಕ್ಕಾಳ್s ಸಿಂಗರೋಡಿಲೇ
ಸಾರಕೆತಲೆಣ್ಣೆಲಿದ್ಯತೆ ಸರೆಮುಡಿಪಯಳ್
ಅಂಗಾರೆs ಅಂಗಾರೆ ಬಾಣರಂಗಾ ರೇ
ಬಾನೊ ಬೂರುಂಡಂಗಾs ರ ಅಂಗಯೊಡ್ದೋ ನೂ
ಆಕ್ ಸೊಟರಂತಡೇ ಭೂಯಿಟ್ ಬೈಕುಡೇ
ಮಾsಯೀsರು ಕೆಲೆತ್ತ್ ನಂ ಕೇಲಡರುಳ್ಳಯಾ
ಕೊಟ್ಯಾsದ್ ನೂರುನಾs ಮಾಲ್ಯೊಲೆಲ್ಲ್ ಗ್
ಪಂಜೀsದ್ ಸರೆಕsಡ್ ತ್ತನ ಗಾನs ತೆರೂನೂ

ಈ ವೇಶ ಹಾಕಿದ ಸಂದರ್ಭದಲ್ಲಿ ಮನೆಮನೆಗೆ ಹೋಗಿ ಕುಣಿಯಲೇಬೇಕು. ಮೇಲ್ಜಾತಿಯ ವ್ಯಕ್ತಿಯು ಆಗಿದ್ದರು ಕೂಡ ಎಲ್ಲ ವರ್ಗದ ಮನೆಗೆಲ್ಲ ಹೋಗುವುದು ಸಂಪ್ರದಾಯ. ನವರಾತ್ರಿಯ ಒಂಭತ್ತು ದಿನಗಳವರೆಗೆ ಈ ಕುಣಿತವು ನಡೆಯುವುದು. ಕೊನೆಯ ದಿನ ದೇವಸ್ತಾನಕ್ಕೆ ಹೋಗಿ ವೇಶ ಕಳಚುವುದು ರೂಡಿಯಲ್ಲಿದೆ. ತಮಗೆ ಬಂದಂತಹ ಕಾಣಿಕೆಯಲ್ಲಿ ಒಂದಶ್ಟು ದೇವರಿಗೆ ಹಾಕುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. ಕರ್ನಾಟಕ ಜನಪದ ಕಲೆಗಳ ಕೋಶ: ಸಂಪಾದಕ-ಹಿ.ಚಿ.ಬೋರಲಿಂಗಯ್ಯ, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ, ೧೯೯೬

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಕೊರಗರ ಬಗ್ಗೆ ಹಿರಿಯ ಕವಿ ಕೆ.ವಿ.ತಿರುಮಲೇಶ್ ಬರೆದ ಲೇಖನ Archived 2014-08-26 ವೇಬ್ಯಾಕ್ ಮೆಷಿನ್ ನಲ್ಲಿ.