ಕೊಡವರ ಮದುವೆ

ವಿಕಿಪೀಡಿಯ ಇಂದ
Jump to navigation Jump to search

ಕೊಡಗು ಸೌಂದರ್ಯದ ತವರೂರು, ವೀರನಾಡು, ಎರಡನೇ ಕಾಶ್ಮೀರವೆಂದೇ ಖ್ಯಾತಿ ಹೊಂದಿದೆ. ಬೆಟ್ಟ, ಗುಡ್ಡ, ಹಳ್ಳ ,ಶಿಖರ, ಪರ್ವತ ಶ್ರೇಣಿ, ಕೆರೆ ಬಾವಿ ಅಳವಾದ ಕಣಿವೆಗಳು, ಸದಾ ನಿರಂತರವಾಗಿ ಹರಿಯುವ ನದಿಗಳಿದ್ದು ಫಲವತ್ತಾದ ಭೂ ಪ್ರದೇಶವನ್ನೊಳಗೊಂಡಿದೆ. ಕೊಡಗು ಎಂದ ತಕ್ಷಣ ನೆನಪಾಗುವುದೇ ಅಲ್ಲಿನ ವಾತಾವರಣ, ಸಾಂಪ್ರದಾಯ, ಸುಂದರ ಪ್ರೇಕ್ಷಣಿಯ ಸ್ಥಳಗಳು. ಕೊಡವರಿಗೆ ಅವರದ್ದೇ ಆದ ಭಾಷೆ, ಸಾಹಿತ್ಯ, ನುಡಿಗಟ್ಟು, ಆಚರಣೆ, ವೇಷಭೂಷಣಗಳು,ಊಟೋಪಚಾರ, ವಿವಾಹ, ಸಂಪ್ರದಾಯ, ಸಂಗೀತ, ವಾದ್ಯ ಹೀಗೆ ಹಲವಾರು ಆಚರಣೆಗಳು ವೈವಿಧ್ಯವಾಗಿದೆ. ಇದರಲ್ಲಿ ವಿಶೇಷವಾಗಿ ಕೊಡವರ ಮದುವೆ ಇತರ ಸಾಂಪ್ರದಾಯಗಳಿಗಿಂತ ವಿಭಿನ್ನವಾಗಿದೆ. ವಿವಾಹ ಎಂಬ ಶಬ್ದ ತನ್ನದೇ ಆದ ಮೌಲ್ಯ, ವ್ಯಾಪ್ತಿ, ಮತ್ತು ಶಕ್ತಿ ಪಡೆದಿದೆ. ಸರ್ವಸಾಮಾನ್ಯವಾಗಿ ಪ್ರತಿಯೊಂದು ಜಾತಿ,ವರ್ಣ, ಜನಾಂಗ, ವರ್ಗ, ವಿಶೇಷವರ್ಗ ಮತ್ತು ಬುಡಕಟ್ಟಗಳಲ್ಲಿಯೂ ಅನೇಕ ದಶಕಗಳಿಂದಲೂ ರೂಢಿಸಿಕೊಂಡು ಬಂದಿರುವಂತದ್ದು. ಪ್ರತಿಯೊಂದು ಜನಾಂಗಗಳಲ್ಲಿ ವೈವಿಧ್ಯಮಯವಾದ ವಿವಾಹ ಆಚರಣೆಗಳಿವೆ. ಹಾಗೆಯೇ ಇವರಲ್ಲಿ ಹಲವಾರು ಬಗೆಯ ವಿವಾಹ ಪದ್ಧತಿಯಿದೆ.

ಕನ್ನಿಮಂಗಲ[ಬದಲಾಯಿಸಿ]

ಸಾಂಪ್ರದಯಿಕ ವಿವಾಹಕ್ಕೆ ಕೊಡವರಲ್ಲಿ ಕನ್ನಿಮಂಗಲ ಎನ್ನುವರು. ಹುಡುಗ ಮತ್ತು ಹುಡುಗಿ ಪ್ರಾಯಕ್ಕೆ ಬಂದ ನಂತರವೇ ಏರ್ಪಡಿಸುವುದಾಗಿರುತ್ತದೆ. ಸಾಮಾನ್ಯವಾಗಿ ಹುಡುಗಿಯನ್ನು ಪ್ರಾರಂಭದಲ್ಲಿ ನೋಡುವುದು ಕುಟುಂಬದ ಹಿರಿಯರಾಗಿರುತ್ತಾರೆ. ಇವರು ಹುಡುಗಿ ಹಾಗೂ ಕುಟುಂಬದವರ ನಡೆ,ನುಡಿ,ಗೌರವ ಅಲ್ಲದೇ ಹುಡುಗಿಯ ಎಲ್ಲಾ ರೀತಿಯ ಅಂಶಗಳನ್ನು ಗಮನಿಸಿ ಹುಡುಗನಿಗೆ ಇಷ್ಟವಾದರೆ ಮಾತ್ರ ವಿವಾಹಕ್ಕೆ ಸಿದ್ಧರಾಗುವರು ಇಲ್ಲದಿದ್ದರೆ ಇಲ್ಲ. ಹಾಗೆಯೇ ಹುಡುಗಿಯ ಕಡೆಯವರು ಹುಡುಗನನ್ನು ಹಾಗೂ ಮನೆಯವರು ಇಷ್ಟಪಟ್ಟರೆ ಈ ವಿವಾಹ ನೆರೆವೇರುವುದು ಇಲ್ಲವಾದರೆ ನಡೆಯುವುದಿಲ್ಲ. ಅಲ್ಲದೇ ಇಬ್ಬರ ಜಾತಕಗಳು ಕೂಟ ಸರಿಹೊಂದಬೇಕು. ಜಾತಕ ಸರಿಹೊಂದಿದಾಗ ಎರಡು ಮನೆಯವರು ಮನೆಯ ನಡುಮನೆಯಲ್ಲಿ ಸೇರಿಕೊಳ್ಳುವರು. ಅಲ್ಲಿ ನೆಕ್ಕಿನಡುಬಾಡೆಯನ್ನು ವಿಜೃಂಭಣೆಯಿಂದ ಅಲಂಕರಿಸಿ ಜ್ಯೋತಿ ಹತ್ತಿಸುತ್ತಾರೆ. ಆಗ ಮಾತ್ರ ಮದುವೆಗೆ ಮುಂದಿನ ತಯಾರಿ ಸಿದ್ಧ ಪಡಿಸುತ್ತಾರೆ.

ಬಳೆಹಾಕುವ ಕ್ರಮ[ಬದಲಾಯಿಸಿ]

ಇವರಲ್ಲಿ ಮೊದಲಿಗೆ ಬಳೆಹಾಕುವ ಕ್ರಮ; ಚಪ್ಪರದ ದಿನ ಸಂಜೆ ಸ್ನಾನ ಮಾಡಿ ವಧು ಸೀರೆ ಧರಿಸಿ ಮನೆ ಕೋಣೆಯೊಳಗೆ ಚಾಪೆ ಹಾಕಿ ಒಂದು ಕುಕ್ಕೆಯಲ್ಲಿ ಬಾಳೆಹಣ್ನು ಮತ್ತೂಂದರಲ್ಲಿ ಅಕ್ಕಿ, ಎಲೆ ಅಡಿಕೆ, ಕುಂಕುಮ ಇನ್ನೂ ಮುಂತಾದವುಗಳನ್ನು ಇಡುವರು. ವಧು ಬಳೆ ತೊಟ್ಟುಕೊಳ್ಳುವ ಸಂದರ್ಭದಲ್ಲಿ ಭೋಜಕಾರಿಯು ಪಕ್ಕದಲ್ಲಿ ಆಸೀನಳಾಗುವಳು. ವಧು ಒಂದು ಜೊತೆ ಬಳೆಗಳನ್ನು ತೊಟ್ಟು ನಂತರ ಉಳಿದ ಬಳೆಗಳನ್ನು ಮುಟ್ಟಿ ನಮಸ್ಕರಿಸಬೇಕು. ಅನಂತರ ಇಬ್ಬರು , ಮೂವರು ಅಥವಾ ಐದು ಜನ ಮುತ್ತೈದೆಯರು ಬಳೆ ತೊಡಿಸಿಕೊಳ್ಳುವರು. ವಧು ಕುಳಿತಿರುವ ಚಾಪೆ ಹಾಗೂ ಹಣವನ್ನು ಬಲೆ ತೊಡುವವನಿಗೆ ಕೊಡುವ ಪದ್ಧತಿಯಿದೆ. ಮರುದಿನ ವಧು- ವರರು ಸ್ನಾನ ಮುಗಿಸಿದ ನಂತರ ಶೃಂಗಾರಕ್ಕೆ ಆಣಿಯಾಗುವುದು. ಇಬ್ಬರ ಜೊತೆಗೂ ಭೋಜಕಾರ ಹಾಗೂ ಭೋಜಕಾರಿ ಜೊತೆಗೆ ಕೆಲವರು ಸೇರಬಹುದು. ವರನು ಬಿಳಿ ಕುಪ್ಪಸ, ಸೊಂಟಕ್ಕೆ ದಟ್ಟಿ, ತಲೆಗೆ ಪಾನಿಮಂಡೆತುಣಿ ಸೊಂಟಕ್ಕೆ ಪೀಚೆ ಕತ್ತಿ, ತೊಡಂಗ್, ಒಡಿಕತ್ತಿ, ಕೊರಳಿಗೆ ಚಿನ್ನದ ಸರ ಹಾಗೂ ಕೈಗೆ ಚಿನ್ನದ ಬಳೆ ಹವಳದ ಮಾಲೆ, ಕೈ ಬೆರಳಿಗೆ ಉಂಗುರ ಧರಿಸುವರು.[೧] ವಧುವಿಗೆ ಕೆಂಪು ಸೀರೆ, ಮೊನ ಕೈವರೆಗೆ ರವಿಕೆ ತೊಡಿಸುವರು.ಕೊರಳಿಗೆ ಬೆಲೆಬಾಳುವ ಕರಿಮಣಿಸರ ಪತ್ತಾಕ್, ಕಿವಿಯೋಲೆ, ಜಡೆಬಿಲ್ಲೆ, ಕುತ್ತಿಗೆಗೆ ಕೊಕ್ಕೆತಲಿ, ಕೈಗಳಿಗೆ ಗಾಜಿನ ಬಳೆಗಳು, ಹಾಗೂ ಕಡಗ ತೊಡಿಸುವರು. ಕಾಲುಗಳಿಗೆ ಕಾಲುಂಗರ ಮತ್ತು ಇತರ ಆಭರಣಗಳಾದ ಸರ,ಕಡಗ ಧರಿಸುವರು. ಇದರಲ್ಲಿ ಪತ್ತಾಕ್ ಶ್ರೇಷ್ಠವಾಗಿದ್ದು. ಹೆಣ್ಣಿಗೆ ಕೆಂಪು ಬಣ್ಣದ ರೇಷ್ಮೆ ಮುಸುಕನ್ನು ಹಾಕಲಾಗುತ್ತದೆ. ಪ್ರಾದೇಶಿಕವಾಗಿ ಭಿನ್ನತೆ ಇರಬಹುದಾಗಿದೆ. ಈ ಅಲಂಕಾರಗಳು ಮುಗಿದ ಮೇಲೆ ವಧುವರರಿಬ್ಬರೂ ವಿಭೂತಿ ಧರಿಸಿ ಅನಂತರ ವೀಳ್ಯದೆಲೆ ಹಾಕಿಕೊಳ್ಳುವರು. ನಂತರ ಮನೆಯಿಂದಲೇ ವಾದ್ಯ ಘೋಷಣೆ ಮಾಡುತ್ತಾ ಮದುವೆಯ ಮಂಟಪದ ಹತ್ತಿರ ಬರುವರು. ಅವರ ಹಿಂದೆ ವರನಿದ್ದು ಜೊತೆಯಲ್ಲಿ ಭೋಜ ಕಾರನಿರುತ್ತಾನೆ. ಕೈಯಲ್ಲಿ ಗೆಜ್ಜೆ ಕೋಲು ಊರಿಕೊಂಡು ಬರುವನು. ಇವನು ವರನಿಗೆ ಬಿಳಿ ಛತ್ರಿಯನ್ನು ಹಿಡಿದುಕೊಂಡು ಬರಬೇಕು. ಹಾಗೆಯೇ ವಧುವಿನ ಪಕ್ಕದಲ್ಲಿ ಭೋಜಕರಿಯು ಜೊತೆಯಲ್ಲಿ ಬರುವಳು. ಮಂಗಲಬಟ್ಟೆಪಾಟ್ ಅನ್ನು ನಾಲ್ಕು ಜನ ದುಡಿ ಹಿಡಿದುಕೊಂಡು ಹಾಡುತ್ತಾ ಮದುವೆ ಮಂಟಪಕ್ಕೆ ವಧುವರರನ್ನು ಕರೆತರುತ್ತಾರೆ. ಧಾರೆಗೆ ಸಿದ್ಧಪಡಿಸಿದ ಸ್ಥಳದಲ್ಲಿ ಉತ್ತರ ದಕ್ಷಿಣಕ್ಕೆ ಅಭಿಮುಖವಾಗಿ ಎರಡು ಚಾಪೆ ಹಾಸಿ ಅದರ ಮೇಲೆ ಶುಭ್ರವಾದ ವಸ್ತ್ರವನ್ನು ಹಾಸುವರು. ಇದರ ಮಧ್ಯ ಮೂರು ಕಾಲಿನ ಮಣೆ ಇಟ್ಟು ಒಂದೊಂದು ತಟ್ಟೆಯಲ್ಲಿ ಚಿಕ್ಕ ರೇಷ್ಮೆಚೀಲ, ಅಕ್ಕಿ ಇಡಲಾಗಿರುತ್ತದೆ. ಧಾರೆಗೆ ಕುಳಿತುಕೊಳ್ಳವ ಮೊದಲು ಗಂಡು ಹೆಣ್ಣು ಮಂಟಪವನ್ನು ಮೂರು ಸುತ್ತು ಸುತ್ತಿ ಅಲ್ಲಿ ಇಟ್ಟಿರುವ ಮೂರು ಕಾಲಿನ ಮಣೆಗೆ ನಮಸ್ಕರಿಸಿದ ನಂತರ ಬಲಗಾಲನ್ನು ಮುಂದೆ ಇಟ್ಟು ಅದರ ಮೇಲೆ ಕುಳಿತುಕೊಳ್ಳುವುದು ವಾಡಿಕೆ. ಆಗ ಸೊಂಟಕ್ಕೆ ಕೆಂಪು ವಸ್ತ್ರವನ್ನು ಧರಿಸುತ್ತಾರೆ.

ಧಾರೆ[ಬದಲಾಯಿಸಿ]

ಧಾರೆಗೆ ಸಿದ್ಧವಾದ ಮೇಲೆ ವಿವಾಹಕ್ಕೆ ಆಗಮಿಸಿದವರು ಹೆಣ್ಣು ಗಂಡಿಬ್ಬರೂ ಅಕ್ಕಿ ಕಾಲಿನಿಂದ ತಯಾರಿಸಿದ ಅಕ್ಷತೆ ಹಾಕಿ ಹಾಲು ಹಾಕುವರು. ಅನಂತರ ಮದುವೆಗೆ ಬಂದವರು ಖುಷಿಯಿಂದ ಮುಯ್ಯಿ ಮಾಡುವಾಗ ಕೆಲವು ನಿಯಮಾವಳಿಗಳಿವೆ. ವಧುವರರ ಮೇಲೆ ಮೂರುಬಾರಿ ಹಾಕುವರು. ರಕ್ತ ಸಂಬಂಧಿಗಳಾದರೆ ಅವರಿಬ್ಬರ ಮೊಣಕಾಲು , ಹೆಗಲು ಮುಟ್ಟಿ , ಅನಂತರ ತಲೆಯ ಮೇಲೆ ಅಕ್ಕಿ ಹಾಕಿ ಗಿಂಡಿಯಲ್ಲಿರುವ ಹಾಲನ್ನು ಅವರಿಬ್ಬರಿಗೂ ಕುಡಿಸುವರು.[೨] ಕೊಡಗಿನ ಗ್ರಾಮ ಪ್ರದೇಶಗಳಲ್ಲಿ ಇಂದಿಗೂ ಕೆಲವು ಸಂಪ್ರದಾಯಗಳು ಕಣ್ಮರೆಯಾಗಿಲ್ಲ. ಮದುವೆಗೆ ಬಂದವರ ಅಥವಾ ಹೊರಗಡೆಯವರಿಂದ ದೃಷ್ಟಿ ಆಗಬಾರದೆಂದು ವಧುವಿನ ಅತ್ತಿಗೆ ವಧುವಿನ ಉಗುರು ಕತ್ತರಿಸಿ ಒಂದು ಚಿಕ್ಕ ಹಾಲಿನ ಪಾತ್ರೆಗೆ ಹಾಕಿ ಅದನ್ನು ಹಾಲು ಬರುವ ಮರದ ಬುಡಕ್ಕೆ ಚೆಲ್ಲುವಳು. ಇದನ್ನು ಕೊಡುವ ಭಾಷೆಯಲ್ಲಿ ಕೊರಂಗೂಡಿ ಮುರಿಪ ಎಂದು ಕರೆಯುತ್ತಾರೆ. ಎಲ್ಲಾ ಕೆಲಸ ಕಾರ್ಯಗಳು ಮುಗಿದ ನಂತರ ವಧು ವರರನ್ನು ಭೋಜನಕಾರಿ ಹಾಗೂ ಭೋಜನಕಾರನು ಮದುವೆ ಮಂಟಪದಿಂದ ಕರೆದುಕೊಂಡು ಮನೆಗೆ ಬರುವರು. ಗ್ರಾಮದ ಪೂಜಾರಿಯು ತಂದ ಪ್ರಸಾದ ಮತ್ತು ತೀರ್ಥವನ್ನು ಅವರಿಬ್ಬರು ಸ್ವೀಕರಿಸಿದ ನಂತರವೇ ಬ್ರಾಹ್ಮಣರಿಗೆ ಕಾಣಿಕೆ ಕೊಡುವರು. ಎಲ್ಲವೂ ಬೆಳಗ್ಗಿನಿಂದ ಮಧ್ಯಾಹ್ನದ ಒಳಗೆ ಮುಕ್ತಾಯವಾಗುತ್ತದೆ. ಮದುವೆ ಆದಾಗ ಅವರ ರಕ್ತಸಂಬಂಧಿಕರು ಹಾಗೂ ನೆಂಟರಿಷ್ಟರು ಮದುವೆ ಆಗುವಂತಹ ಮನೆಗೆ ತಮ್ಮ ತಮ್ಮ ಮನೆಗಳಿಂದ ಆಹಾರ ಸಾಮಗ್ರಿಗಳನ್ನು ಸಂಪೂರ್ಣವಾಗಿ ಒದಗಿಸುವುದಕ್ಕೆ ಕೇಟಾಮೆ ಎನ್ನುತ್ತಾರೆ. ಅನೇಕ ವರ್ಷಗಳ ಹಿಂದೆ ತಪ್ಪದೇ ನಡೆಯುತ್ತಿತ್ತು. ಆದರೆ ಇತ್ತೀಚೆಗೆ ಹೆಚ್ಚಾಗಿ ಈ ಪದ್ಧತಿ ಕಂಡುಬರುತ್ತಿಲ್ಲವೆನ್ನಬಹುದು. ವಿವಾಹದ ಮನೆಗೆ ಕೇಟಾಮೆ ತಂದು ಕೊಟ್ಟವರಿಗೂ ಸೋದರತ್ತೆ ಮಾವನಿಗೂ ಬಾಳೆಬಿರುದು ಕೊಡುವುದು ಸಾಂಪ್ರದಾಯ. ಸುಮಾರು ಮೂರು ಅಡಿ ಉದ್ದವಿರುವ ಬಾಳೆಕಂಬಗಳನ್ನು ಕತ್ತರಿಸಿ ಸಾಲಾಗಿ ಗೂಟಗಳಿಗೆ ಚುಚ್ಚಿ ನಿಲ್ಲಿಸಿರಲಾಗುತ್ತದೆ. ಅವುಗಳ ಮೇಲೆ ಬಾಳೆನಾರು ಹಾಗೂ ಅದರದೇ ಆದ ಹೂವಿನಿಂದ ಶೃಂಗರಿಸಲಾಗಿರುತ್ತದೆ. ನೆಂಟರು, ರಕ್ತ ಸಂಬಂಧಿಗಳು, ಹಾಗೂ ಸಹಾಯಕ ಕುಟುಂಬದವರು ವಾದ್ಯ ಸಮೇತದೊಂದಿಗೆ ಚುಚ್ಚಲಾಗಿರುವ ಬಾಳೆಕಂಬದ ಹತ್ತಿರ ಬರುವರು. ಆ ಕಂಬಗಳ ಹತ್ತಿರ ಹಾಸಿರುವ ಚಾಪೆ ಮೇಲೆ ಬಿಂದಿಗೆಯಲ್ಲಿ ನೀರು, ವೀಳ್ಯದೆಲೆ ಇಟ್ಟಿರುತ್ತಾರೆ. ಅಲ್ಲಿ ಬಂದವರು ಕೈಕಾಲು ತೊಳೆದು ಚಾಪೆ ಮೇಲೆ ಕುಳಿತುಕೊಳ್ಳುತ್ತಾರೆ. ಅರುವರು ಎಲೆ ಅಡಿಕೆಗಳನ್ನು ನೆಂಟರಿಷ್ಟರಿಗೆ ಕೊಡುವರು. ಅವುಗಳನ್ನು ಬಂಧುಗಳು ಸ್ವೀಕರಿಸಿ ಹಣ ಇಟ್ಟು ವಾಪಸು ಅರುವರಿಗೆ ಕೊಡುವರು. ಅರುವನು ಅದನ್ನು ತೆಗೆದುಕೊಂಡು ಮೂರು ಬಾಳೆಕಂಬಗಳನ್ನು ತೋರಿಸಿ ಚುಚ್ಚಲಾಗಿದ್ದ ಬಾಳೆಕಂಬಗಳನ್ನು ಒಡಿ ಕತ್ತಿಯಿಂದ ಕತ್ತರಿಸುವಂತೆ ಹೇಳುವರು. ಯಾರಾದರೊಬ್ಬ ಹಿರಿಯ ತನ್ನ ತಲೆ ಮೇಲಿನ ರುಮಾಲನ್ನು ತೆಗೆದಿರಿಸಿ ನೆಡಲಾಗಿದ್ದ ಬಾಳೆ ಕಂಬಗಳನ್ನು ಮೂರು ಪ್ರದಕ್ಷಿಣೆ ಬಂದು ಕೊಡುವ ಭಾಷೆಯಲ್ಲಿ ಬಾಳೆಬೇಂಗುಲುವಾ ಅಂದರೆ ಬಾಳೆಕತ್ತರಿಸಬಹುದೇ ಎಂದು ಹೇಳಿ ಬಾಳೆಕಂಬಗಳನ್ನು ಒಂದೊಂದೇ ಸಾರಿ ಕತ್ತರಿಸುತ್ತಾನೆ. ಇದನ್ನು ಬಾಳೆಬಿರುದು ಎನ್ನುತ್ತಾರೆ. ನಂತರ ವಾದ್ಯಮೊಳಗುವುದರೊಂದಿಗೆ ನೆಂಟರನ್ನು ಮದುವೆ ಮನೆಗೆ ಕರೆದೊಯ್ಯುತ್ತಾರೆ. ಧಾರೆ ಮುಗಿದ ನಂತರ ಊಟೋಪಚಾರ ಕಾರ್ಯಕ್ರಮ ನಡೆಯುತ್ತದೆ. ಇನ್ನೂ ಮುಂತಾದ ಆಚರಣೆಗಳಾದ ಪೋಳಿಯ, ದಿಬ್ಬಣ,ದಂಪತಿಗಳ ಧಾರೆ, ಊರಿನ ದಾರಿ ತಡೆಯುವುದು, ವಧುವಿನ ಕೈಯಿಂದ ನೀರು ತರಿಸುವುದು, ಆಟ ಆಡಿಸುವುದು, ಹೆಸರು ಹೇಳಿಸುವುದು, ತಮಾಷೆಯಾಗಿ ವಸ್ತುಗಳನ್ನು ಕೊಡುವುದು, ತೆಗೆದುಕೊಳ್ಳುವುದು ಮುಂತಾದ ಅಂಶಗಳು ಅಡಕವಾಗಿವೆ.

ಮದುವೆ ಊಟ[ಬದಲಾಯಿಸಿ]

ಮದುವೆ ಎಂದ ಮೇಲೆ ಊಟದ ಸಂಭ್ರಮ ಅಲ್ಲಿ ಬಡವ, ಶ್ರೀಮಂತ ಎಂಬ ತಾರತಮ್ಮವಿರುವುದಿಲ್ಲ. ಮದುವೆಗೆ ಬಂದ ಬಂಧು ಬಳಗದವರು, ನೆಂಟರು ಹಾಗೂ ದೂರದ ಊರುಗಳಿಂದ ಬಂದವರು ಮೊದಲು ಕುಳಿತು ಊಟ ಮಾಡುವುದು ಕ್ರಮ. ಅನಂತರ ಅದೇ ಊರಿನವರು, ಮನೆಯವರು ಮತ್ತು ಇತರರು ಊಟ ಮಾಡುವರು. ಎಲೆಗೆ ಊಟ ಬಡಿಸಿದ ತಕ್ಷಣವೇ ಊಟ ಮಾಡುವುದಿಲ್ಲ. ಅವರಲ್ಲಿ ಒಬ್ಬ ಹಿರಿಯ ವ್ಯಕ್ತಿ ಕೊಡವ ಭಾಷೆಯಲ್ಲಿ ಉಂಗನಾ ಎಂದರೆ ಊಟ ಮಾಡೋಣ ಎಂದು ಹೇಳುತ್ತಾರೆ. ಅದಕ್ಕೆ ಎಲ್ಲರೂ ಸಮ್ಮತಿಸಿದ ನಂತರವೇ ಊಟ ಮಾಡುವರು. ಇವರ ವಿವಾಹಗಳಲ್ಲಿ ಮಾಂಸದ ಊಟ ಕಡ್ಡಾಯ. ಇಲ್ಲದಿದ್ದರೆ ಗುರುವಿಗೆ ಮತ್ತು ತಮಗೆ ಸಮಾಜದಲ್ಲಿ ಗೌರವ ಕಡಿಮೆ ಎಂಬ ಭಾವನೆ ಇದೆ. ಸಾಂಪ್ರದಾಯಿಕವಾಗಿ ಉಡುಪು ಧರಿಸಿದ ಪುರುಷರ ಜೊತೆಯಲ್ಲಿ ಮಕ್ಕಳು ಹಾಗೂ ಇತರರು ಕುಳಿತು ಊಟ ಮಾಡುವ ಪರಿಪಾಠವಿಲ್ಲ. ಊಟ ಮುಗಿದ ಕೂಡಲೇ ಏಳುವ ಹಾಗಿಲ್ಲ. ಇನ್ನೊಬ್ಬ ಹಿರಿಯ ವ್ಯಕ್ತಿ ಊಟ ಮಾಡುವ ಸಾಕಾಯಿತಾ ಎಂದು ಕೇಳಿದ ನಂತರದಲ್ಲೇ ಎಲ್ಲರೂ ಏಳುವರು. ಇಂದು ಇವರಲ್ಲೇ ಅನೇಕ ಸಾಂಪ್ರದಾಯಿಕ ಅಂಶಗಳು ದಿನ ದಿನಕ್ಕೆ ಕ್ಷೀಣಿಸುತ್ತಿವೆ. ಅಲ್ಲದೆ ವಧು, ವರರು ಮತ್ತು ಅವರ ಆಪ್ತ ಸ್ನೇಹಿತ ನಿರ್ಧರಿಸಲಾದ ಕೋಣೆಯಲ್ಲಿಯೇ ಊಟ ಮಾಡುವರು. ಧಾರೆ ಮುಹೂರ್ತ ಮತ್ತು ಊಟ ಮುಗಿದ ನಂತರ ಈ ಪದ್ಧತಿ ಆರಂಭವಾಗುತ್ತದೆ. ಒಣಗಿದ ಬೆತ್ತದಿಂದ ಮಾಡಿದ ಒಂದು ಕುಕ್ಕೆ ಇದರ ಮೇಲ್ಭಾಗ ತೆರೆದುಕೊಂಡಿರುತ್ತದೆ. ಇದನ್ನೆ ಕೊಡವ ಭಾಷೆಯಲ್ಲಿ ಪೋಳಿಯ ಎನ್ನುವರು. ಆ ಕುಕ್ಕೆ ಒಳಗೆ ಮೂರು ಅಥವಾ ಐದು ಸೇರು ಅಕ್ಕಿ , 3,4 ತೆಂಗಿನಕಾಯಿ ಒಂದು ಕವಳಿಗೆ ಎಲೆ, ಅಡಿಕೆ ಒಂದು ಪಾತ್ರೆಯಲ್ಲಿ ಹಾಲು, ಹುರಿಗಾಳು, ಹೀಗೆ ಎಲ್ಲವನ್ನು ತುಂಬಿಸುವರು. ಮದುವೆ ಹೊರಡುವಾಗ ಆ ಪೋಳಿಯವನ್ನು ವರನ ಮನೆಯವರು ವಧುವಿನ ಮನೆಗೆ ತೆಗೆದುಕೊಂಡು ಹೋಗುವರು. ಅದರೊಳಗಿರುವ ಹಾಲನ್ನು ವಧುವಿಗೆ ಕೊಡುವುದು ಪದ್ಧತಿ.

ಮದುವೆ ದಿಬ್ಬಣ[ಬದಲಾಯಿಸಿ]

ಧಾರೆ ಹಾಗೂ ಊಟದ ಕಾರ್ಯಕ್ರಮದ ನಂತರ ಗಂಡಿನ ಮನೆಯಿಂದ ಹೆಣ್ಣಿನ ಮನೆಗೆ ಹೋಗುವುದು ಕ್ರಮ. ದಿಬ್ಬಣ ಹೊರಟಾಗ ಗ್ರಾಮದಲ್ಲಿ ವಾಸವಾಗಿರುವ ಕುಟುಂಬದಿಂದ ಒಂದು ಹೆಣ್ಣು, ಗಂಡು ಭಾಗಿಗಳಾಗುವರು. ವರನನ್ನು ಕೋಣೆಯಿಂದ ಭೋಜಕಾರನು ಕೈ ಹಿಡಿದು ಕರೆದುಕೊಂಡು ಬರುವನು. ವರನು ಅಲ್ಲಿರುವ ನೆಲಕ್ಕಿ ನಡುಬಾಡೆಯ ಹತ್ತಿರವಿರುವ ದೀಪಕ್ಕೆ ಅಕ್ಕಿ ಹಾಕಿ, ನಮಸ್ಕಾರ ಮಾಡಿ, ಅನಂತರ ಅಲ್ಲಿರುವ ಹಿರಿಯರ ಪಾದಗಳಿಗೆ ನಮಸ್ಕಾರ ಮಾಡುವನು. ಕೈಮಡಕ್ಕೆ ಹೋಗಿಅಕ್ಷತೆ ಹಾಕಿ ಮೂಲ ಪುರುಷರ ಪೋಟೊಗೆ ನಮಸ್ಕರಿಸುವರು. ದಿಬ್ಬಣಕ್ಕೆ ಅಣಿಯಾಗುತ್ತಿದ್ದಂತೆ ಆ ಮನೆಯ ಯಜಮಾನರು ಅವನ ಜೊತೆಯಲ್ಲಿ ಹೋಗುವವರಿಗೆ ಕೆಲವು ಹಿತನುಡಿಗಳನ್ನು ಹೇಳಿ ಅದರಂತೆ ನಡೆದುಕೊಳ್ಳಬೇಕೆಂದು ಹೇಳಿ ಆಶೀರ್ವದಿಸುತ್ತಾರೆ. ದಿಬ್ಬಣ ಹೋಗುವಾಗ ಹಾಡು ಹೇಳಿಕೊಂಡು ದುಡಿ ಮತ್ತು ತಾಳವನ್ನು ಬಡಿಯುತ್ತಾರೆ. ಅವರು ಸಾಂಪ್ರದಾಯಿಕವಾದ ಕಪ್ಪು ಉಡುಗೆಯನ್ನು ಧರಿಸಿರುವರು. ಹೀಗೆ ಮೆರವಣಿಗೆಯು ದಾರಿಯಲ್ಲಿ ಹೋಗುವಾಗ ಬ್ರಾಹ್ಮಣ ಸಿಕ್ಕಿ ತೀರ್ಥ ಪ್ರಸಾದವನ್ನು ಕೊಟ್ಟರೆ ವರ ಸ್ವೀಕರಿಸಿ, ಕಾಣಿಕೆಯಾಗಿ ಹಣವನ್ನು ಕೊಡುವನು. ಹೀಗೆ ಸಾಗುವಾಗ ಎದುರು ಬದಿರು ಮತ್ತೊಂದು ಮದುವೆ ದಿಬ್ಬಣ ಎದುರಾಗಬಾರದು. ಆಕಸ್ಮಿಕವಾಗಿ ಬೇರೆ ಮದುವೆ ದಿಬ್ಬಣ ಬರುತ್ತಿದೆ ಎಂದು ಯಾರಾದರೂ ತಿಳಿದುಕೊಂಡು ವರನಿಗೆ ತಿಳಿಸದೆ ಬೇರೆ ದಾರಿಯಲ್ಲಿ ಕರೆದುಕೊಂಡು ಹೋಗುವ ಪದ್ಧತಿಯಿದೆ. ವಧುವಿನ ಮನೆ ಹತ್ತಿರ ಸಮೀಸುತ್ತಿದ್ದಂತೆಯೇ ಕೊಂಬುಕೊಟ್ಟವಾಲಗ, ದುಡಿ ಬಾರಿಸುವಿಕೆ ಮತ್ತು ಹಾಡುಗಳು ತ್ವರಿತ ಗತಿಯಲ್ಲಿ ಅವುಗಳ ನಾದಸ್ವರ ಹೆಚ್ಚಾಗುತ್ತದೆ. ಈ ಮೊದಲೇ ಹೆಣ್ಣಿನ ಮನೆಯವರು ಬಾಳೆಕಂಬಗಳನ್ನು ನೆಟ್ಟಿರುವ ಸ್ಥಳದಲ್ಲಿ ಮದುವೆ ದಿಬ್ಬಣ ನಿಲ್ಲಬೇಕು. ಈ ಬಾಳೆ ಬಿರುದಿನ ಪಕ್ಕದಲ್ಲಿ ವರನಕಡೆಯವರು ಇರುವರು. ವರನ ಕಡೆ ಮೂರು ಮಂದಿ ಹಿರಿಯರು ವಧುವಿನ ಮನೆಗೆ ಬಂದು ನಾವು ಬಂದಿರುವೆವು ಎಂದು ವಿಷಯವನ್ನು ತಲುಪಿಸುವರು. ಆಗ ವಧುವಿನ ಕಡೆಯವರು ದುಡಿ, ತಾಳ, ಮತ್ತು ವಾದ್ಯ ಬಾರಿಸುತ್ತಾ ವರನಿರುವಲ್ಲಿಗೆ ಬರುವರು. ವಧುವಿನ ತಂದೆ ವರನ ಹತ್ತಿರ ಸಂಭಾಷಣೆಯಲ್ಲಿ ತೊಡಗಿ ಅನಂತರ ಹಿರಿಯರಿಗೆ ನಮಸ್ಕರಿಸುವರು. ನಂತರ ದಿಬ್ಬಣವು ವಧುವಿನ ಮನೆಯ ಮುಂದೆ ಬರುವುದು. ಅಲ್ಲಿ ವರನ ಹಾಗೂ ಬೋಜನಕಾರನ ಪಾದಗಳನ್ನು ವಧುವಿನ ಕಡೆಯ ಕನ್ಯೆಯು ತೊಳೆಯುತ್ತಾಳೆ. ಆನಂತರ ಮಡಿ ಬಟ್ಟ ಮೇಲೆ ವರ ಮನೆ ಒಳಗೆ ಬರುವಾಗ ಅಕ್ಷತೆ ಹಾಕಿ ಬರಮಾಡಿಕಳ್ಳುವರು. ವರ ನಡುಮನೆಯಲ್ಲಿರುವ ನೆಲ್ಲಕ್ಕಿಬಾಡೆಗೆ ನಮಸ್ಕರಿಸಿ ಕುಳಿತುಕೊಳ್ಳುವನು. ಇತರರು ಪಕ್ಕದಲ್ಲಿ ಕುಳಿತಿಕೊಳ್ಳುತ್ತಾರೆ.

ವಧು ವರರ ಮುಹೂರ್ತ[ಬದಲಾಯಿಸಿ]

ಕೊಡವರ ಪ್ರತಿಯೊಂದು ಮನೆಯಲ್ಲಿ ನೆಲಕ್ಕಿನಡುಬಾಡೆ ಇರುತ್ತದೆ. ಎಡಬದಿಯಲ್ಲಿ ವಧು ಹಾಗೂ ಬಲಗಡೆಯಲ್ಲಿ ವರನನ್ನು ಮೂರು ಕಾಲಿನ ಮಣೆ ಹಾಕಿ ಕೂರಿಸಿ, ಸಾಂಪ್ರದಾಯಿಕ ರೀತಿಯ ಶಾಸ್ತ್ರವನ್ನು ಮಾಡುವರು ಅದಕ್ಕೆ ದಂಪತಿಗಳ ಮೂಹೂರ್ತ ಎನ್ನುವರು. ವರನ ಮನೆಯವರು ಪೋಳಿಯದ ಒಳಗೆ ಇಟ್ಟಿರುವ ಹಾಲನ್ನು ಮೂಹೂರ್ತ ನಡೆಯುವಾಗ ವಧುವಿಗೆ ಕೊಡುವರು. ಆ ಸಂದರ್ಭದಲ್ಲಿ ಎರಡೂ ಕಡೆಯವರಲ್ಲಿ ಹಣ ಅಥವಾ ಇನ್ನಿತರ ರೂಪದಲ್ಲಿ ಬಹುಮಾನ ಕೊಡುವ ತೆಗೆದುಕೊಳ್ಳುವ ಕೆಲಸ ನಡೆಯುತ್ತದೆ. ಅಲ್ಲದೇ ಎರಡು ಕಡೆಯ ಹಿರಿಯರು ದುಡಿ ವಾದ್ಯವನ್ನು ಬಾರಿಸುತ್ತಾ ಹಾಡನ್ನು ಹಾಡುತ್ತಾರೆ.[೩] ವರನ ಕಡೆಯ ಹಿರಿಯವ್ಯಕ್ತಿ ಅಥವಾ ಂiÀiಜಮಾನ ಸ್ವಲ್ಪ ಅಕ್ಕಿ ಐದು ಹಣವನ್ನು ಕೊಡವ ಭಾಷೆಯಲ್ಲಿ ಪಲಯ ಪಣವೆಂದು ಸಂಭೋದಿಸಿ ತಳಿಯಕ್ಕಿ ಬೊಳಕಿಗೆ ಹಾಕುವನು. ಬೋಜಕಾರನು ವರನ ಕೈಹಿಡಿದು ಮೂಹುರ್ತದಿಂದ ಏಳಿಸುವನು. ಅನಂತರ ವರ ವಧುವಿನ ತಲೆಯ ಮೇಲೆ ಅಕ್ಕಿ ಅಕ್ಷತೆ ಹಾಕಿ ಹಾಲನ್ನು ಕುಡಿಯಲು ಕೊಡುವನು. ಆಮೇಲೆ ಚಿನ್ನ ಮತ್ತು ಬೆಳ್ಳಿ ನಾಣ್ಯವನ್ನು ಚಿಕ್ಕ ಚೀಲಕ್ಕೆ ಹಾಕಿ ಕೊಡುವನು. ವಧು ಸ್ವೀಕರಿಸಿದ ಮೇಲೆ, ವಧುವಿನ ಕೈಹಿಡಿದು ಏಳಿಸುವನು. ವಧುವಿನ ಬೋಜಕಾರಿಯು ವರ ಕೊಟ್ಟ ಚೀಲವನ್ನು ಅವಳ ಬಲ ಸೊಂಟಕ್ಕೆ ಸಿಕ್ಕಿಸುವಳು. ಅನಂತರ ಸಂಬಂಧ ಅಡುಕುವ ನಡೆಯುತ್ತದೆ.ಅಂದರೆ ವರನ ಮನೆಯವರು ಸಾಂಪ್ರದಾಯಿಕ ರೀತಿಯಾದ ಅಧಿಕಾರವನ್ನು ವಹಿಸಿ ಕೊಡುವುದಾಗಿರುತ್ತದೆ. ವಧು- ವರರ ಆರುವ ಸಂಬಂಧದ ನಂತರ ವಧುವಿನ ಅರುವನು ಮಾತನ್ನು ಆರಂಭಿಸುವನು. ನಮ್ಮ ಮನೆಯ ಹೆಣ್ಣನ್ನು ನಿಮ್ಮ ಮನೆಯಲ್ಲಿ ಬಾಳಿ ಬದುಕಲು ಕಳುಹಿಸುತ್ತಿದ್ದೇವೆ ನೀವು ಮನೆ ಮಗಳಂತೆ ಕಂಡುಕೊಂಡು ಅವಳಿಗೆ ತಮ್ಮಲ್ಲಿರುವ ಎಲ್ಲಾ ಸಾಮಗ್ರಿಗಳನ್ನು ಬಳಸಲು ತಮ್ಮ ಪೂರ್ಣ ಸಮ್ಮತಿ ಕೊಡಬೇಕೆಂದು ಕೇಳಿಕೊಳ್ಳುವನು ಅದಕ್ಕೆ ವರನ ಕಡೆಯ ಅರುವನು ಸಮ್ಮತಿಸಿ ಪ್ರತಿಯಾಗಿ ಹೀಗೆ ಹೇಳುವನು. ವಧುವನ್ನು ನಮ್ಮ ಮಗಳೆಂದು ಭಾವಿಸಿ ಆಕೆ ಕುಟುಂಬರನ್ನು ಹೊಂದಿಕೊಂಡು ಹೋಗಬೇಕೆಂದು ಹೇಳುವರು. ಇದು ಕೊಡವ ಜನರ ಸಾಂಪ್ರದಾಯಿಕ ಮದುವೆ.

ಉಲ್ಲೇಖ[ಬದಲಾಯಿಸಿ]

  1. https://www.youtube.com/watch?v=CB88MWh17Dc/
  2. https://www.youtube.com/watch?v=EUqtnpmYXec/
  3. http://kanaja.in/?p=105599