ಕೇಸೀನ್
ಕೇಸೀನ್ ಸ್ತನಿಗಳ ಹಾಲಿನಲ್ಲಿ ಕ್ಯಾಲ್ಸಿಯಂ ಕೇಸಿನೇಟ್ ಎಂಬ ಲವಣದ ರೂಪದಲ್ಲಿರುವ ಒಂದು ಪ್ರಮುಖ ಪ್ರೋಟೀನು; ಫಾಸ್ಫೋಪ್ರೋಟೀನುಗಳ ಒಂದು ಬಗೆ; ಇದರ ಪ್ರಮಾಣ ಹಾಲಿನಲ್ಲಿನ ಒಟ್ಟು ಪ್ರೋಟೀನುಗಳ 80% ರಷ್ಟು[೧] . ಕೇಸೀನಿನಲ್ಲಿ ಹೆಚ್ಚು ಕಡಿಮೆ ಎಲ್ಲಾ ಬಗೆಯ ಅಮೈನೋಆಮ್ಲಗಳು ಇರುವುದರಿಂದ ಇದು ಹಾಲಿನ ಪ್ರಧಾನ ಪೌಷ್ಟಿಕಾಂಶಗಳಲ್ಲಿ ಒಂದು ಎನ್ನಿಸಿದೆ.
ಬೇರ್ಪಡಿಕೆ
[ಬದಲಾಯಿಸಿ]
ಇದನ್ನು ಹಾಲಿನಿಂದ ಬೇರ್ಪಡಿಸಿ ಶುದ್ಧೀಕರಿಸಿ ಬಿಳಿ ಇಲ್ಲವೇ ಕೆನೆ ಬಣ್ಣದ ಪುಡಿಯಾಗಿ ಪಡೆಯಬಹುದು. ಕೇಸೀನನ್ನು ಹಾಲಿನಿಂದ ನೇರವಾಗಿ ಪಡೆಯುವುದಿಲ್ಲ. ಕೆನೆ ತೆಗೆದ ಹಾಲಿಗೆ (ಸ್ಕಿಮ್ಡ್ ಮಿಲ್ಕ್) ಹೈಡ್ರೋಕ್ಲೋರಿಕ್ ಇಲ್ಲವೆ ಸಲ್ಫ್ಯೂರಿಕ್ ಆಮ್ಲವನ್ನು ಸೇರಿಸಿ ಅಥವಾ ಕರುಗಳ ಜಠರದಿಂದ ಪಡೆಯಲಾಗುವ ರೆನೆಟ್ ಎಂಬ ವಸ್ತುವನ್ನು ಸೇರಿಸಿ ಆ ಹಾಲು ಗರಣೆಗಟ್ಟುವಂತೆ ಮಾಡುತ್ತಾರೆ. ಈ ಕ್ರಿಯೆಗೆ ನಿಗದಿಯಾದ ಒತ್ತಡ ಮತ್ತು ಉಷ್ಣತೆ ಬೇಕು. ಹೀಗೆ ತಯಾರಾಗುವ ಗರಣೆಯೇ ಕೇಸೀನ್ ಸಂಯುಕ್ತ. ಗರಣೆಗಟ್ಟಿ ಉಳಿಯುವ ದ್ರವಾಂಶದಿಂದ ಗರಣೆಯನ್ನು ಬೇರ್ಪಡಿಸಿ, ಹಲವಾರು ಬಾರಿ ತೊಳೆದು ಬಿಸಿಗಾಳಿಯ ಸಹಾಯದಿಂದ ಒಣಗಿಸಿ, ಪುಡಿಮಾಡಿ, ಚೀಲಗಳಲ್ಲಿ ಶೇಖರಿಸುತ್ತಾರೆ. ಆಮ್ಲವನ್ನು ಸೇರಿಸಿ ಪಡೆಯುವ ಕೇಸೀನಿಗೆ ಆಮ್ಲಿಯ ಕೇಸೀನೆಂದೂ ರೆನೆಟ್ ಬಳಸಿ ಪಡೆಯುವ ಕೇಸೀನಿಗೆ ರೇನೆಟ್ ಕೇಸೀನೆಂದು ಹೆಸರು.ಶುದ್ಧರೂಪದ ಕೇಸೀನ್ ನೀರಿನಲ್ಲಾಗಲಿ ಸಾವಯವ ವಿಲೀನಕಗಳಲ್ಲಾಗಲೀ ಕರಗುವುದಿಲ್ಲ. ಆದರೆ ಕೆಲವು ಲವಣಗಳ ರೂಪದಲ್ಲಿ ಕರಗುತ್ತವೆ. ಆಮ್ಲಗಳೊಂದಿಗೂ ಕ್ಷಾರಗಳೊಂದಿಗೂ ವರ್ತಿಸಿ ಹಲವಾರು ಬಗೆಯ ಸಂಯುಕ್ತಗಳಾಗಿ ಪರಿವರ್ತಿತವಾಗುತ್ತದೆ.
ಉಪಯೋಗಗಳು
[ಬದಲಾಯಿಸಿ]
ಕೇಸೀನಿಗೆ ಹಲವಾರು ಕೈಗಾರಿಕಾ ಉಪಯೋಗಗಳಿವೆ. ಇವುಗಳಲ್ಲಿ ಮುಖ್ಯವಾದವು ಕಾಗದ, ಬಣ್ಣ, ಗೋಂದು, ಕೃತಕ ರೇಷ್ಮೆ ಹಾಗೂ ಪ್ಲಾಸ್ಟಿಕ್ ಕೈಗಾರಿಕೆಗಳು. ಕಾಗದದ ಮೇಲೆ ಕೇಸೀನಿನ ತೆಳುವಾದ ಲೇಪಕೊಡುವುದರಿಂದ ಅದರ ಮೇಲೆ ಛಾಯಾಚಿತ್ರಗಳನ್ನು ಮುದ್ರಿಸುವುದು ಸುಲಭವಾಗುತ್ತದೆ. ವಿವಿಧ ಬಗೆಯ ಬಣ್ಣಗಳಿಗೆ ಕೇಸೀನನ್ನು ಸೇರಿಸಿ ಅವನ್ನು ಉತ್ತಮಗೊಳಿಸುವುದು ರೂಢಿಯಲ್ಲಿದೆ. ಆಮ್ಲೀಯ ಕೇಸೀನನ್ನು ಸುಣ್ಣ, ಸೋಡಿಯಮ್ ಸಂಯುಕ್ತ ಮತ್ತು ಯಾವುದಾದರೂ ಒಂದು ಬೂಷ್ಟು ನಿರೋಧಕ ವಸ್ತುವಿನೊಂದಿಗೆ ಸೇರಿಸಿ ಮರದ ಸಾಮಾನುಗಳನ್ನು ಬಂಧಿಸಲು ಬಳಸುವ ಗೋಂದನ್ನು ತಯಾರಿಸಬಹುದು.[೩] ಉಣ್ಣೆಯನ್ನು ಹೋಲುವ ಹಲವಾರು ರೀತಿಯ ಕೃತಕ ರೇಷ್ಮೆ ಎಳೆಗಳನ್ನು ತಯಾರಿಸುವುದಕ್ಕೂ ಕೇಸೀನನ್ನು ಉಪಯೋಗಿಸುತ್ತಾರೆ. ರೆನೆಟ್ ಕೇಸೀನನ್ನು ಪ್ಲಾಸ್ಟಿಕ್ ತಯಾರಿಕೆಯಲ್ಲಿ ವಿಪುಲವಾಗಿ ಬಳಸುತ್ತಾರೆ. ಕೊಂಬು, ದಂತ ಮುಂತಾದವನ್ನು ಈ ಪ್ಲಾಸ್ಟಿಕ್ ಹೋಲುತ್ತದೆ. ಇದನ್ನು ಮುಖ್ಯವಾಗಿ ಗುಂಡಿ, ಬ್ರಷ್ಯುಗಳ ಎಳೆಗಳು, ಬಿಲಿಯರ್ಡ್ ಚಂಡುಗಳು ಮುಂತಾದವುಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. ಮೇಲೆ ಹೇಳಿದ ಬಳಕೆಗಳಲ್ಲದೆ ಕೇಸೀನನ್ನು ಔಷಧಿ ಹಾಗೂ ಅಲಂಕಾರ ವಸ್ತುಗಳ ಉತ್ಪಾದನೆಯಲ್ಲೂ ಚರ್ಮ ಹದಗೊಳಿಸುವುದಕ್ಕೂ ಬಿಳಿಯ ಪಾದರಕ್ಷೆಗಳನ್ನು ಶುಭ್ರಗೊಳಿಸುವ ಹಾಗೂ ಹೊಳಪುಕೊಡುವ ವಸ್ತುಗಳ ತಯಾರಿಕೆಯಲ್ಲೂ ಸಾಬೂನು ಮತ್ತು ಕೀಟನಾಶಕ ವಸ್ತುಗಳ ತಯಾರಿಕೆಯಲ್ಲೂ ಉಪಯೋಗಿಸುವುದುಂಟು.
ಉಲ್ಲೇಖಗಳು
[ಬದಲಾಯಿಸಿ]
- ↑ Kunz C, Lönnerdal B (January 1990). "Human-milk proteins: analysis of casein and casein subunits by anion-exchange chromatography, gel electrophoresis, and specific staining methods". The American Journal of Clinical Nutrition. 51 (1): 37–46. doi:10.1093/ajcn/51.1.37. PMID 1688683.
- ↑ Horne, David S. (2006-06-01). "Casein micelle structure: Models and muddles". Current Opinion in Colloid & Interface Science. 11 (2–3): 148–153. doi:10.1016/j.cocis.2005.11.004. ISSN 1359-0294. Retrieved 2024-10-09..
- ↑ "Turning milk into homemade moo glue". Cornell Center for Teaching Innovation. Ask A Scientist!. Cornell University. 24 Sep 1998. Archived from the original on 28 September 2011. Retrieved 29 Sep 2011.