ವಿಕಿಪೀಡಿಯ:ಕೇಶಿರಾಜ -ಕವಿ,ಕಾಲ,ಕೃತಿ ಪರಿಚಯ

ವಿಕಿಪೀಡಿಯ ಇಂದ
(ಕೇಶಿರಾಜ -ಕವಿ,ಕಾಲ,ಕೃತಿ ಪರಿಚಯ ಇಂದ ಪುನರ್ನಿರ್ದೇಶಿತ)
Jump to navigation Jump to search

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕೇಶಿರಾಜನಿಗೆ ವಿಶಿಷ್ಟವಾದ ಸ್ಥಾನವಿದೆ.ಕನ್ನಡದ ಪ್ರಥಮ ವೈಯಾಕರಣನೆಂಬ ಖ್ಯಾತಿ ಇವನಿಗೆ ಸಲ್ಲುತ್ತದೆ. ಇವನ ಕಾಲ ಕ್ರಿ.ಶ. ೧೨೬೦ . ಹದಿಮೂರನೆಯ ಶತಮಾನದ ಉತ್ತರಾರ್ಧ ಎಂದು ರಂ..ಶ್ರೀ .ಮುಗಳಿಯವರು ತಮ್ಮ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ತಿಳಿಸಿದ್ದು ಹೆಚ್ಚು ಸಮರ್ಪಕವೆನಿಸುತ್ತದೆ.. ಕೇಶಿರಾಜನೇ ತನ್ನ ಶಬ್ದಮಣಿ ದರ್ಪಣದಲ್ಲಿ ತಿಳಿಸಿರುವಂತೆ ಇವನ ತಂದೆ ಚಿದಾನಂದ ಮಲ್ಲಿಕಾರ್ಜುನ.ಅಜ್ಜ ಕವಿಸುಮನೋಬಾಣ.ಸೋದರಮಾವ ಜನ್ನ. ಕವಿ. ಹೀಗೆ ಸಾಹಿತ್ಯಿಕ ಕುಠುಂಬದಲ್ಲಿ ಹುಟ್ಟಿದ ಈತ, ಕನ್ನಡ ಸಾಹಿತ್ಯವನ್ನು ಕಲಿತು, ಕವಿಯೂ ಪಂಡಿತನೂ ಆಗಿ ಬೆಳೆದ. ಸ್ವತಃ ಕವಿಯಾಗಿದ್ದ ಇವನು ಬರೆದಿರುವ ಚೋಳಪಾಲ ಚರಿತೆ, ಚಿತ್ರಮಾಲೆ,ಸುಭದ್ರಾಪಹರಣ, ಕಿರಾತ ಎಂಬ ಕಾವ್ಯಗಳು ಇನ್ನೂ ಲಭ್ಯವಾಗದಿರುವುದು ಕನ್ನಡ ಸಾರಸ್ವತ ಲೋಕದ ದುರ್ಭಾಗ್ಯವೇ ಸರಿ. ಶಬ್ದಮಣಿ ದರ್ಪಣ ಒಂದೇ ಈಗ ದೊರಕಿರುವ ಕೃತಿ . ಕನ್ನಡ ಸಾಹಿತ್ಯದ ಸುವರ್ಣ ಕಾಲದವರಾದ ಪಂಪ,ರನ್ನ,,ಜನ್ನ ಮೊದಲಾದವರ ಉತ್ಕೃಷ್ಟ ಕೃತಿಗಳು ಹಾಗೂ ಇವನೇ ಹೆಸರಿಸಿರುವ ಗಜಗ,ಗುಣನಂದಿ,ಅಸಗ,ಮನಸಿಜ,ಚಂದ್ರಭಟ್ಟ, , ಗುಣವರ್ಮ,ಶ್ರೀವಿಜಯ, ಪೊನ್ನ ಮೊದಲಾದವರ ಕಾವ್ಯಗಳ ಆಧಾರದ ಮೇಲೆ ತನ್ನ ಈ ಶಬ್ದಮಣಿ ದರ್ಣಪವನ್ನು ರಚಿಸಿದ್ದೇನೆ ಎಂದು ಹೇಳಿ ಕೊಂಡಿದ್ದಾನಾದರೂ, ಶ್ರೀ ವಿಜಯನ ' ಕವಿರಾಜ ಮಾರ್ಗ' ಒಂದನ್ನು ಬಿಟ್ಟು ಬೇರೆ ಯಾರ ಕೃತಿಗಳೂ ನಮಗೆ ಇನ್ನೂ ದೊರಕಿಲ್ಲ. ಸ್ವತಃ ಕವಿಯಾಗಿದ್ದ ಈತ ನೀರಸವಾಗಬಹುದಾದ ವ್ಯಾಕರಣವನ್ನೂ ರಸವತ್ತಾಗಿ ನಿರೂಪಿಸುವ ಪ್ರಯತ್ನ ಮಾಡಿದ್ದಾನೆ. ಅದರಲ್ಲಿ ಯಶಸ್ಸನ್ನೂ ಪಡೆದಿದ್ದಾನೆ ಎನ್ನಬಹುದು."ಕರಡೆಯ ಗಿರ್ಗಿಟದ ದನಿಯಪೊಲ್, ಸಂಚರಿಸುವ ನೊಳವುಂ,ಕೈವಾರಮಂ ಬೀಸಿದಂತೆ, ಕಡಲುಡುಗೆಯಾದ ಪೃಥ್ವಿ - ಎಂಬಿವುಗಳಲ್ಲಿ ಕಾವ್ಯೋಚಿತ ರೀತಿ ಕಾಣುತ್ತದೆ. ಅವನ ಸಹೃದಯತೆಯೂ, ಅಭಿರುಚಿಯೂ ಅವನು ಕೊಟ್ಟಿರುವ ಪ್ರಯೋಗಗಳಲ್ಲಿ ಚೆನ್ನಾಗಿ ಮೈಗೊಂಡಿವೆ. ಕಾಮನ ಗರಟಗೆ ವರ್ಪಂತೆ ಸುತ್ತಿ ಬರ್ಪುವು ಗಿಳಿಗಳ್, ಪೋಲ್ತಂ ಕಿಸುಸಂಜೆ ಕವಿದ ನೀಲಾಚಲಮಂ, ನೇಸರ್ ಮೂಡಿದುದು ಬಕಂಗೆ ಮಿಳ್ತು ಮೂಡುವ ತೆರದಿಂ , ಪ್ರಾಯಂ ಕೂಸಾದೊಡಭಿಪ್ಆಯಂ ಕೂಸಕ್ಕುಮೆ - ಇವೇ ಮುಂತಾದ ಪ್ರಯೋಗಗಳು ಇದಕ್ಕೆ ಉದಾಹರಣೆಗಳು ಎಂದು ಡಿ. ಎಲ್. ನರಸಿಂಹಾಚಾರ್ಯರು ತಮ್ಮ ಪ್ರಸ್ತಾವನೆಯಲ್ಲಿ ಹೇಳಿರುವುದು ನಿಜವೆನಿಸುತ್ತದೆ. " ಈ ಕವಿ ಮನಕ್ಕಿಂತ ಕೇಶಿರಾಜನ ಶಾಸ್ತ್ರೀಯಮನ ಹೆಚ್ಚಿನ ಪ್ರಶಂಸನೀಯ. ನಿರಾಧಾರವಾಗಿ ಏನನ್ನೂ ಹೇಳದೆ ಪ್ರಯೋಗ ಬಲವನ್ನು ಅವಲಂಬಿಸಿರುವ ಶಾಸ್ತ್ರಪ್ರಜ್ಞೆ , ಪ್ರಾಮಾಣಿಕತೆಗಳು , ಸಂದೇಹ ಬಂದಲ್ಲಿ ಹಾಗೆಂದು ಒಪ್ಪುವುದು, ವಿಷಯವನ್ನು ನಿರ್ಣಾಯಕವಾಗಿ ಹೇಳಲಾಗದಿದ್ದಾಗ ತೋರುವ ತಾಟಸ್ತ್ಯ,, ತನಗೆ ಒಪ್ಪಿಗೆಯಲ್ಲದುದನ್ನು ಕಂಠೋಕ್ತವಾಗಿ ನಿಷೇಧಿಸುವುದು, ಗುಣದೋಷಗಳೆರಡಕ್ಕೂ ಒಬ್ಬನೇ ಕವಿಯ ಪ್ರಯೋಗಗಳನ್ನು ಕೊಡುವುದರಲ್ಲಿ ಕಾಣಿಸಿರುವ ನಿಸ್ಪಕ್ಷಪಾತ ದೃಷ್ಟಿ, ,ಆತ್ಮವಂಚನೆ, ಪರವಂಚನೆಗಳ ಅಭಾವ- ಇವೆಲ್ಲ ಕೇಶಿರಾಜನ ವೈಜ್ಙಾನಿಕ ಮನೋಧರ್ಮವನ್ನು ತೋರುತ್ತದೆ " ಎನ್ನುವ ಡಿ.ಎಲ್. ಎನ್. ಅಭಿಪ್ರಾಯ ಸೂಕ್ತವೇ ಎನಿಸುತ್ತದೆ. ಕೇಶಿರಾಜನ ಮನೋಧರ್ಮ ಅವನ ವ್ಯಾಕರಣದಲ್ಲಿ "ಮನದೊಳೋವರಿಯಿಲ್ಲ, ಬುದ್ಧಿಯೊಳ್ ವಿಸಂಚವಿಲ್ಲ" ಎಂಬಂತೆ ಸ್ಪಷ್ಟವಾಗಿ ಪ್ರತಿಫಲಿಸಿದೆ .