ವಿಷಯಕ್ಕೆ ಹೋಗು

ಕೇಪ್ ಪ್ರಾಂತ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Province of the Cape of Good Hope
Provinsie Kaap die Goeie Hoop (Afrikaans)
Province of South Africa
1910–1994
of Cape province
Coat of arms

The Cape Province as it was by 1994
CapitalCape Town
Population 
 1991
೬,೧೨೫,೩೩೫[]
LegislatureCape Provincial Council
History 
 Established
೩೧ ಮೇ ೧೯೧೦
 Disestablished
೨೭ ಏಪ್ರಿಲ್ ೧೯೯೪
Preceded by
Succeeded by
Cape Colony
Western Cape
Eastern Cape
Northern Cape
North West province


.ಕೇಪ್ ಪ್ರಾಂತ್ಯ ದಕ್ಷಿಣ ಆಫ್ರಿಕ ಗಣರಾಜ್ಯದ ನಾಲ್ಕು ಪ್ರಾಂತ್ಯಗಳಲ್ಲಿ ಒಂದು ; ಅವುಗಳ ಪೈಕಿ ಅತ್ಯಂತ ದೊಡ್ಡದು, ವಿಸ್ತೀರ್ಣ ೨,೭೭,೦೦೦ ಚ.ಮೈ.

ಭೌತ ಲಕ್ಷಣ

[ಬದಲಾಯಿಸಿ]

ಕೇಪ್ ಪ್ರಾಂತ್ಯವನ್ನು ಎರಡು ವಿಭಾಗಗಳಾಗಿ ವಿಂಗಡಿಸಬಹುದು. ಸಮುದ್ರಮಟ್ಟಕ್ಕೆ ಸರಾಸರಿ 3,000' ಎತ್ತರದಲ್ಲಿರುವುದು ಮೊದಲನೆಯದು. ಇದು ದಕ್ಷಿಣ ಆಫ್ರಿಕದ ಪ್ರಸ್ಥಭೂಮಿಗೆ ಸೇರಿದೆ. ಆರೆಂಜ್ ನದಿಯ ಬಳಿ ಈ ಪ್ರದೇಶದ ಎತ್ತರ 2,000'; ಪೂರ್ವದಲ್ಲಿ 4,000'. ಈ ಪ್ರಸ್ಥಭೂಮಿಯ ಎಲ್ಲೆಯನ್ನು ಸಮುದ್ರ ತೀರಕ್ಕೆ ಸಮಾಂತರವಾಗಿ ಸಾಗುವ ಪರ್ವತಶ್ರೇಣಿಯ ಮಹಾ ಇಳಿಜಾರಿನಿಂದ ಗುರುತಿಸಬಹುದು. ಈ ಪರ್ವತಶ್ರೇಣಿಯನ್ನು ಡ್ರಾಕೆನ್ಸ್‍ಬರ್ಗ್, ಸ್ಟಾರಂಬರ್ಗ್ ಮುಂತಾದ ಸ್ಥಳೀಯ ಹೆಸರುಗಳಿಂದ ಕರೆಯುತ್ತಾರೆ. ಈ ಪ್ರದೇಶದಲ್ಲಿ ಮಧ್ಯಾಹ್ನದ ಬಿಸಿಲು ತೀಕ್ಷ್ಣವಾಗಿರುತ್ತದೆ. ಸಂಜೆಯ ವರ್ಣರಂಜಿತ ಆಕಾಶ ಮನಮೋಹಕ; ವೆಲ್ಡಿನ (ಹುಲ್ಲುಗಾವಲು) ಸುಂದರ ನಿಶೆಯ ನೋಟ ಮನ ತಣಿಸುವಂಥದು. ಪರ್ವತಗಳ ಇಳಿಜಾರುಗಳಿಗೂ ಸಮುದ್ರಕ್ಕೂ ನಡುವೆ ಇರುವುದು ಎರಡನೆಯ ವಿಭಾಗ. ಇದರಲ್ಲಿ ಹಲವಾರು ಉಪವಿಭಾಗಗಳುಂಟು. ಅವುಗಳಲ್ಲಿ ಮೊದಲನೆಯದು ಗ್ರೇಟ್ ಕ್ಯಾರೂ ಪ್ರದೇಶ. ಇದು ಬೆಂಗಾಡು. ಇದರ ಉತ್ತರಕ್ಕೆ ಪರ್ವತಗಳ ಇಳಿಭೂಮಿಯೂ ದಕ್ಷಿಣಕ್ಕೆ ಬೆಟ್ಟದ ಸ್ತರಗಳೂ ಇವೆ. ಇದರ ಎತ್ತರ ಸಮುದ್ರಮಟ್ಟದಿಂದ 1,000'-4,000'; ಇಲ್ಲಿಯ ಭೂಪದರಗಳು ಬಲವಾದ ಮರಳುಗಲ್ಲುಗಳಿಂದ ಕೂಡಿವೆ; ಈ ಪ್ರದೇಶದ ಮೃದುವಾದ ಜೇಡಿ ಪದರಗಲ್ಲುಗಳು ಸುಲಭವಾಗಿ ಕೊರೆದುಹೋಗುವಂಥವು. ಗ್ರಾಫ್ ರೈನೆಟ್‍ಗೆ ಈಶಾನ್ಯದಲ್ಲಿರುವ ನೆಲ ಎರಡನೆಯ ಉಪವಿಭಾಗ. ಅದು ಕ್ಯಾರೂ ಮರುಭೂಮಿಯ ಬಂಡೆಗಳಿಂದ ರೂಪಗೊಂಡದ್ದು. ಅಲ್ಲಿ ಹಲವಾರು ಇಳಿಮೋಡು ಪದರಗಳುಂಟು. ಈ ಪದರಗಳು ಮರಳುಗಲ್ಲು ಹಾಗೂ ಡಾಲರೈಟ್ ಶಿಲೆಗಳಿಂದ ಕೂಡಿದವು. ಈ ವಿಭಾಗವನ್ನು ಲಿಟ್ಲ್ ಕ್ಯಾರೂ ಪ್ರದೇಶವೆಂದು ಕರೆಯುತ್ತಾರೆ. ಗ್ರಿಕ್ವಲ್ಯಾಂಡ್ ಈಸ್ಟ್ ಎಂಬ ಪ್ರದೇಶ ಶಿಲೆಗಳ ದಿಬ್ಬಸಾಲುಗಳಿಂದ ಕೂಡಿದ್ದು. ಆ ಶ್ರೇಣಿಗಳಲ್ಲಿ ಇಂಜೆಲಿ, ಕರಿ ಮತ್ತು ಇನ್‍ಸಿಜ್ವ ಬೆಟ್ಟಗಳಿವೆ. ಕ್ಯಾರೂ ಮರಳುಗಾಡು ರಚನೆಯ ಕಾಲದಲ್ಲಿ ಅನೇಕ ಪರ್ವತಶ್ರೇಣಿಗಳು ಹಲವಾರು ಅಕ್ಷರಗಳೊಡನೆ ಪದರಗಳಾಗಿ ರೂಪಗೊಂಡವು. ಕೇಪ್ ಪ್ರಾಂತ್ಯದ ಪಶ್ಚಿಮ ಭಾಗದಲ್ಲಿ ಈ ಪದರಗಳು ಉತ್ತರ-ವಾಯುವ್ಯ ಮತ್ತು ದಕ್ಷಿಣ-ಆಗ್ನೇಯ ದಿಕ್ಕುಗಳಿಗೆ ಬಾಗಿವೆ. ಸಿಯರೀಸ್ ಜಿಲ್ಲೆಯ ಕ್ಯಾರೂ ಪೋರ್ಟ್ ಬಳಿ ಈ ಪರ್ವತಗಳು ದಿಕ್ಕು ಬದಲಾಯಿಸುತ್ತವೆ. ಅವುಗಳ ಅಕ್ಷಗಳು ಬಹುಮಟ್ಟಿಗೆ ಪೂರ್ವದಿಂದ ಪಶ್ಚಿಮಕ್ಕೆ ತಿರುಗಿವೆ. ಪ್ರತಿ ಅಕ್ಷದ ಕುಳಿಭಾಗವೂ ಸಮುದ್ರತೀರದ ಕಡೆ ಇದೆ. ಉತ್ತರದಲ್ಲಿ ಈ ಸ್ತರ ವಾನ್‍ರೈನ್ಸ್ ಡ್ರಾಪ್ ಬಳಿ ನಿಂತುಹೋಗುತ್ತದೆ. ಪಶ್ಚಿಮದ ಕಡೆ ಇದು ಕೇಪ್ ಅಗುಲ್ಹಾಸ್ ಮತ್ತು ಪೆಡ್ಡಿ ಜಿಲ್ಲೆಯ ನಡುವೆ ಸಮುದ್ರಕ್ಕೆ ಇಳಿದುಹೋಗುತ್ತದೆ. ಈ ಸ್ತರಗಳ ಶಿಲೆಗಳು ಭೂಶಿರದ ಮತ್ತು ಕ್ಯಾರೂ ಬಯಲ ಶಿಲೆಗಳ ಮಾದರಿಯವು. ಟೇಬಲ್ ಪರ್ವತ ಮರಳುಗಲ್ಲು ಮತ್ತು ವಿಟ್‍ಬರ್ಗ್ ಪರ್ವತಶ್ರೇಣಿಗಳ ಶಿಲೆಗಳು ಈ ಗುಂಪಿಗೆ ಸೇರಿದವು. ಈ ಸ್ತರಶ್ರೇಣಿಗೆ ಸೇರಿದ ಪರ್ವತಗಳು ಸಿಡಾರ್‍ಬರ್ಗ್, ಗ್ರೂಟ್ ಸ್ವಾರ್ಟ್‍ಬರ್ಗ್, ಜೂರ್¨ರ್ಗ್, ಡ್ರಾಕೆನ್‍ಸ್ಟೀನ್, ಜೊಂಡರ್ ಇಂಡೆ ನದಿಯ ಪರ್ವತಗಳು, ಲಾಂಗೆಬರ್ನ್ ಮೊದಲಾದವು. ಸ್ವಾರ್ಟ್‍ಬರ್ಗ್ ಶ್ರೇಣಿಯ ಸೆವೆನ್ ವೀಕ್ಸ್ ಪೋರ್ಟ್ ಪರ್ವತ ಅತ್ಯಂತ ಎತ್ತರವಾದ್ದು (7,627'). ಅನೇಕ ಶಿಖರಗಳು 6,000' ಎತ್ತರಕ್ಕಿವೆ. ಆಲಿಫ್ಯಾಂಟ್ಸ್ ನದಿಯ ದಕ್ಷಿಣಕ್ಕೆ, ಮಹಾ ಇಳುಕಲು ಭೂಮಿ ಮತ್ತು ಸಮುದ್ರದ ನಡುವೆ ಮರಳುಗಲ್ಲುಗಳಿಂದ ರಚಿತವಾದ ಪರ್ವತಸಮೂಹಗಳಿವೆ. ತೀರಪ್ರದೇಶ ಸಮವಾಗಿಲ್ಲ. 700'-1,000' ಎತ್ತರದ ದಿಬ್ಬಗಳಿಂದ ಕೂಡಿದೆ ಆ ದಿಬ್ಬಗಳಿಂದಾಗಿ ಸಮುದ್ರದ ಅಂಚಿನಲ್ಲಿ ಪ್ರಪಾತಗಳು ಉಂಟಾಗಿವೆ.

ನದಿಗಳು

[ಬದಲಾಯಿಸಿ]

ಮಹಾ ಇಳಕಲು ಭೂಪ್ರದೇಶ ಪ್ರಮುಖ ಜಲವಿಭಜನೆಯ ನೆಲ, ಒಳನಾಡ ಪ್ರಸ್ಥಭೂಮಿಯಲ್ಲಿ ಆರೆಂಜ್ ನದಿಯೂ ಅದರ ಕೂಡುನದಿಗಳೂ ಹರಿಯುತ್ತವೆ. ಆರೆಂಜ್ ನದಿ ಹರಿಯುವುದು ಪೂರ್ವದಿಂದ ಪಶ್ಚಿಮಕ್ಕೆ, ಅದು ಅಟ್ಲಾಂಟಿಕ್ ಸಾಗರ ಸೇರುತ್ತದೆ. ಇಳಿಭೂಮಿಯ ಪ್ರದೇಶದಲ್ಲಿ ಅನೇಕ ನದಿಗಳು ಹುಟ್ಟಿ ಕ್ಯಾರೂ ಬಂಜರುಭೂಮಿಗೆ ಅಡ್ಡಲಾಗಿಯೂ ಸ್ತರಪ್ರದೇಶಗಳ ನಡುವೆಯೂ ಹರಿದು ಸಮುದ್ರಕ್ಕೆ ಬೀಳುತ್ತವೆ. ಈ ನದಿಗಳಲ್ಲಿ ಮುಖ್ಯವಾದವು ಆಲಿಫ್ಯಾಂಟ್ಸ್, ಕೈ, ಫಿಷ್, ಸಂಡೇ, ಗ್ಯಾಂಟಾಸ್, ಗ್ಯಾಂಕ್ ಮತ್ತು ಬ್ರೀಡ್, ಬೇಸಗೆಯಲ್ಲಿ ಈ ನದಿಗಳು ಸಾಕಷ್ಟು ನೀರಿಲ್ಲದೆ ಅನೇಕ ಮಡುವುಗಳಾಗಿ ಪರಿವರ್ತನೆಗೊಳ್ಳುತ್ತವೆ. ಕೇಪ್ ಪ್ರಾಂತ್ಯದ ಆಗ್ನೇಯ ಭಾಗದಲ್ಲಿ ನದಿಗಳು ಮರಳುಗಲ್ಲು ಮತ್ತು ಡಾಲರೈಟ್ ಶಿಲೆಗಳಿಂದ ಕೂಡಿದ ಭೂಮಿಯಲ್ಲಿ ಹರಿಯುತ್ತವೆ. ಮಳೆ ಕಡಿಮೆ ಇರುವಲ್ಲಿ ಸರೋವರಗಳು ಕಡಿಮೆ.

ವಾಯುಗುಣ

[ಬದಲಾಯಿಸಿ]

ಸಮುದ್ರಕ್ಕಿರುವ ದೂರ ಮತ್ತು ಪರ್ವತಗಳಿರುವ ಸ್ಥಳ-ಇವುಗಳಿಗೆ ಅನುಗುಣವಾಗಿ ಕೇಪ್ ಪ್ರಾಂತ್ಯದ ವಾಯುಗುಣದಲ್ಲಿ ವ್ಯತ್ಯಾಸ ಉಂಟು. ಕೇಪ್ ಟೌನಿನ ಸರಾಸರಿ ಮಳೆ 25.6". ಪರ್ವತ ಶ್ರೇಣಿಗಳ ನಡುವೆ ತೀರಾ ಪ್ರದೇಶಗಿಂತ ಕಡಿಮೆ ಮಳೆ. ಕ್ಯಾರೂ ಪ್ರದೇಶದಲ್ಲಿ ಕಾಣಬರುವುದು ಮರುಭೂಮಿಯ ವಾಯುಗುಣ. ಪೋರ್ಟ್ ಎಲಿಜಬೆತ್‍ನಲ್ಲಿ ಸರಾಸರಿ 22.23" ಮಳೆ. ಈಸ್ಟ್ ಲಂಡನ್‍ನಲ್ಲಿ 33.39". ನೈರುತ್ಯ ತೀರದ ಕೆಲವು ಭಾಗಗಳಲ್ಲಿ ಏಪ್ರಿಲ್‍ನಿಂದ ಸೆಪ್ಟೆಂಬರ್‍ವರೆಗೆ ಮಳೆಯಾಗುತ್ತದೆ. ಒಳನಾಡು ಸಮುದ್ರಮಟ್ಟಕ್ಕೆ ಎತ್ತರವಾಗಿರುವುದರಿಂದ ಅಲ್ಲಿಯ ವಾಯುಗುಣ ಹಿತಕರ. ಬೆಟ್ಟಗಳ ಮೇಲೆ ಮಂಜು ಮುಸುಕುವುದು ಅಪರೂಪ.

ಸಸ್ಯಗಳು

[ಬದಲಾಯಿಸಿ]

ಸ್ತರ ಪರ್ವತಗಳು, ಆಲಿಪ್ಯಾಂಟ್ಸ್ ಮತ್ತು ಸಂಡೇ ನದಿ ಇರುವ ನೈರುತ್ಯ ಪ್ರದೇಶದಲ್ಲಿ ಕುರುಚಲು ಮತ್ತು ಪೊದೆಗಳು ಹೇರಳ. ಕುರುಚಲು ಗಿಡಗಳಲ್ಲಿ ಸುಮಾರು 262 ಬಗೆಗಳುಂಟು. ಸಿಲ್ವರ್, ಏರಿಕೇಷಿಯಾ ಬೆಳೆಯುತ್ತದೆ. ವಸಂತ ಕಾಲದಲ್ಲಿ ಪರ್ವತಗಳ ಇಳಿಮೋಡುಗಳು ನಾನಾ ಬಗೆಯ ಹೂವುಗಳಿಂದ ಕೂಡಿ ವರ್ಣರಂಜಿತವಾಗಿರುತ್ತವೆ. ನದಿ ಮತ್ತು ಪ್ಲೇ ಜೌಗು ಪ್ರದೇಶದಲ್ಲಿ ಪಾಲ್ಮಿಯಿಟ್ ಮತ್ತು ಪಿಗ್‍ಲಲಿ ಗಿಡಗಳು ಬೆಳೆಯುತ್ತವೆ. ಹಳದಿ ಮರ 130' ಎತ್ತರಕ್ಕೆ ಬೆಳೆಯುವುದುಂಟು. ಸ್ಟಿಂಕ್‍ವುಡ್ ಮತ್ತು ಬ್ಲಾಕ್ ಐರನ್ ವುಡ್ ಸಹ ಉತ್ತಮ ಚೌಬೀನೇ ಮರಗಳು. ಮಳೆಗಾಲದಲ್ಲಿ ಕ್ಯಾರೂ ಪ್ರದೇಶದಲ್ಲಿ ಗೆಡ್ಡೆಯ ಗಿಡಗಳು ಬೆಳೆದು ಹೂವುಗಳು ಅರಳುತ್ತವೆ; ತರುವಾಯ ಆ ಪ್ರದೇಶ ಮರುಭೂಮಿಯ ಸ್ವರೂಪ ತಾಳುತ್ತವೆ. ಕೇಪ್ ಪ್ರಾಂತ್ಯದ ಈಶಾನ್ಯ ಭಾಗದಲ್ಲಿ ಹುಲ್ಲುಗಾವಲು ಹಾಗೂ ಅರಣ್ಯಗಳುಂಟು. ಮಹಾ ಇಳಿಭೂಮಿ ಮತ್ತು ತೀರಗಳ ನಡುವೆ ಸವನ್ನಾ ಹುಲ್ಲುಗಾವಲುಗಳಿವೆ.

ಪ್ರಾಣಿಗಳು

[ಬದಲಾಯಿಸಿ]

ಕೇಪ್ ಪ್ರಾಂತ್ಯದಲ್ಲಿ ಹಲವಾರು ಬಗೆಯ ಪ್ರಾಣಿಗಳಿದ್ದರೂ ವಸಾಹತು ದಿನಗಳಲ್ಲಿದ್ದ ಪ್ರಾಣಿಗಳಲ್ಲಿ ಹಲವು ಈ ಭಾಗದಿಂದ ಹೊರಟು ಹೋಗಿವೆ. ಕ್‍ನಿಸ್ನ ಬಳಿ ಆನೆ, ಕಾಡುಕೋಣ, ಹೇಸರಗತ್ತೆ ವಿವಿಧ ಸಾರಗಳು ಮತ್ತು ಗ್ನು ಕೋಣ, ಜಿಂಕೆ, ಚಿರತೆ, ಕತ್ತೆಕಿರುಬ, ಬಿಳಿನರಿ ವಿವಿಧ ಬಗೆಯ ಕಾಡುಬೆಕ್ಕುಗಳು, ಮುಂಗುಸಿ, ಬಬೂನ್, ನೀರುನಾಯಿ ಮೊದಲಾದ ಪ್ರಾಣಿಗಳುಂಟು. ವಿವಿಧ ಜಾತಿಯ ಹಾವುಗಳು, ಮೊಸಳೆ, ಆಮೆ, ಹಲವು ಬಗೆಯ ಪಕ್ಷಿಗಳು ಇಲ್ಲಿ ಜೀವಿಸುತ್ತವೆ. ಕಡಲಲ್ಲಿ ಶಾರ್ಕ್ ಹೆಚ್ಚು. ಸೀಲ್‍ಗಳು ಈಯುವ ಸಮಯದಲ್ಲಿ ತೀರವನ್ನು ಸಮೀಪಿಸುತ್ತವೆ.

ಜನ,ಜೀವನ

[ಬದಲಾಯಿಸಿ]

ಇದು ವಿವಿಧ ಜನಾಂಗಗಳಿರುವ ಪ್ರಾಂತ್ಯ. ಇಲ್ಲಿ ಆಂಗ್ಲರು, ಡಚ್ಚರು ಮೊದಲಾದ ಐರೋಪ್ಯ ಜನಾಂಗಗಳವರು ಆಫ್ರಿಕಾದ ಕರಿಯ ಜನರು ಏಷ್ಯಾದ ವಿವಿಧ ಜನಾಂಗಗಳವರು ಜೀವಿಸುತ್ತಾರೆ. 1960ರ ಜನಗಣತಿಯ ಪ್ರಕಾರ ಇಲ್ಲಿ 9,97,377 ಮಂದಿ ಐರೋಪ್ಯರು, 29,76,827 ಮಂದಿ ಮೂಲನಿವಾಸಿಗಳು, 13,14,392 ಮಂದಿ ಕರಿಯ ಬುಡಕಟ್ಟುಗಳಿಗೆ ಸೇರಿದ ಜನರು ಮತ್ತು 20,243 ಮಂದಿ ಏಷ್ಯಾ ದೇಶಗಳವರು ಇದ್ದರು. ಆಂಗ್ಲರು ಮುಖ್ಯವಾಗಿ ನಗರವಾಸಿಗಳು, ವಿವಿಧ ಐರೋಪ್ಯ ಜನಾಂಗಗಳವರು ವ್ಯವಸಾಯ ಭೂಮಿ ಮತ್ತು ಕೈಗಾರಿಕೆ ಕೇಂದ್ರಗಳಲ್ಲಿ ವಾಸಿಸುತ್ತಾರೆ. ಆಯಾ ಬುಡಕಟ್ಟುಗಳ ಜನ ತಂತಮ್ಮ ಭಾಷೆಗಳನ್ನು ಉಳಿಸಿಕೊಂಡಿರುವುದೇ ಈ ಪ್ರಾಂತ್ಯದ ವೈಶಿಷ್ಟ್ಯ. ವ್ಯವಸಾಯ, ಕುರಿಸಾಕಣೆ, ದ್ರಾಕ್ಷಿ ಬೆಳೆ, ಗಣಿಗೆಲಸ, ಮೀನುಗಾರಿಕೆ ಮೊದಲಾದವು ಜನರ ಮುಖ್ಯ ಕಸಬುಗಳು.ಈಗಿನ ಇಲ್ಲಿಯ ಜನಸಂಖ್ಯೆ (೧೯೯೧) 61,25,335[]

ಧರ್ಮ, ಶಿಕ್ಷಣ

[ಬದಲಾಯಿಸಿ]

ಕ್ರೈಸ್ತರಲ್ಲಿ ಡಚ್ಚರ ಧರ್ಮ ಪಂಥವನ್ನು ಅನುಸರಿಸುವವರೇ ಹೆಚ್ಚು ಮಂದಿ. ಅವರು ಸೀನಡ್‍ಗಳನ್ನು (ಧರ್ಮಾಲೋಚನಾ ಸಭೆಗಳು) ರಚಿಸಿಕೊಂಡಿದ್ದಾರೆ. ಅವರ ಸಾಮಾಜಿಕ ಜೀವನದಲ್ಲಿ ಈ ಸಭೆಗಳು ಮಾರ್ಗದರ್ಶನ ನೀಡುತ್ತವೆ. ಆಂಗ್ಲಿಕನ್ ಮೆಥಾಡಿಸ್ಟ್ ಮತ್ತು ರೋಮನ್ ಕ್ಯಾಥೋಲಿಕ್ ಧರ್ಮಗಳು ಪ್ರಚಾರದಲ್ಲಿವೆ. ಹಿಂದೂ ಧರ್ಮ ಮತ್ತು ಇಸ್ಲಾಂ ಸಹ ಆಚರಣೆಯಲ್ಲಿವೆ.

ಶಿಕ್ಷಣ

[ಬದಲಾಯಿಸಿ]

ವಿಶ್ವವಿದ್ಯಾಲಯಕ್ಕಿಂತ ಕೆಳಹಂತದ ಶಿಕ್ಷಣ ಪ್ರಾಂತೀಯ. ಬಿಳಿಯ ಜನರ ಮಕ್ಕಳ ಶಿಕ್ಷಣ ಶಾಲಾ ಮಂಡಳಿಗಳ ಆಡಳಿತಕ್ಕೆ ಒಳಪಟ್ಟಿದೆ. ಇತರ ಮಕ್ಕಳ ಶಿಕ್ಷಣ, ಧಾರ್ಮಿಕ ಸಂಸ್ಥೆಗಳಿಂದ ನಿಯಂತ್ರಿತವಾದದ್ದು. ಶಿಕ್ಷಣದಲ್ಲಿ ಬಿಳಿಯರು ಮತ್ತು ಕರಿಯರು ಎಂಬ ತಾರತಮ್ಯವಿದೆ. ಅವರಿಗೆ ಪ್ರತ್ಯೇಕ ಶಾಲೆಗಳಿವೆ. ಶಿಕ್ಷಣದ ಮಟ್ಟ, ಅದಕ್ಕಾಗಿ ಮಾಡುವ ವೆಚ್ಚ-ಎಲ್ಲಾ ವಿಚಾರಗಳಲ್ಲೂ ವರ್ಣಭೇದ ನೀತಿ ಅನುಸರಿಸಲಾಗುತ್ತಿದೆ. ವರ್ಣೀಯರ ಹಿತವನ್ನು ದುರ್ಲಕ್ಷಿಸಲಾಗುತ್ತಿದೆ.ಇತ್ತೀಚಿನ ವರ್ಷಗಳಲ್ಲಿ ಇದರಲ್ಲಿ ಸುಧಾರಣೆಯಾಗಿದೆ.

ಕೇಪ್ ಪ್ರಾಂತ್ಯದ ಬಹುಭಾಗ ಬಂಜರು ಭೂಮಿ. ಕ್ಯಾರೂ ಮತ್ತು ಸ್ತರ ಪರ್ವತಗಳ ಕಣಿವೆಗಳಲ್ಲಿ ಕೃಷಿ ನೀರಾವರಿಯನ್ನು ಅವಲಂಬಿಸಿದೆ. ಪೂರ್ವಜಿಲ್ಲೆಗಳಲ್ಲಿ ಮೆಕ್ಕೆ ಜೋಳ, ಗೋಧಿ, ಓಟ್ಸ್ ಮತ್ತು ಹಣ್ಣುಗಳನ್ನು ಬೆಳೆಯುತ್ತಾರೆ. ದ್ರಾಕ್ಷಿ ಬೆಳೆ ಹೆಚ್ಚು. ದ್ರಾಕ್ಷಾರಸ ತಯಾರಿಕೆ ಕೈಗಾರಿಕೆಯ ಅಭಿವೃದ್ಧಿ ಹೊಂದಿದೆ. ಹೊಗೆಸೊಪ್ಪು ಬೆಳೆಯೂ ಹೆಚ್ಚು. ತುಪ್ಪಟಕ್ಕಾಗಿ ಕುರಿ ಸಾಕುತ್ತಾರೆ. ಉಷ್ಟ್ರ ಪಕ್ಷಿಗಳನ್ನು ಅವುಗಳ ಬೆಲೆ ಬಾಳುವ ಗರಿಗಳಿಗಾಗಿ ಸಾಕುತ್ತಾರೆ. ಮೀನುಗಳನ್ನು ಡಬ್ಬಗಳಲ್ಲಿ ಶೇಖರಿಸಿ ಹೊರದೇಶಗಳಿಗೆ ರಫ್ತು ಮಾಡುತ್ತಾರೆ.

ಖನಿಜ ಸಂಪತ್ತು

[ಬದಲಾಯಿಸಿ]

ಕೇಪ್ ಪ್ರಾಂತ್ಯದ ಬಹುಮುಖ್ಯ ಖನಿಜ ಸಂಪತ್ತು ವಜ್ರ. ಕಿಂಬರ್ಲಿಯ ಗಣಿಗಳಲ್ಲಿ ಅಮೂಲ್ಯ ವಜ್ರಗಳು ದೊರಕುತ್ತವೆ. ಅದರ ಉತ್ಪನ್ನ ಈಗ ಏರಿಳಿತಗಳಿಗೆ ಒಳಗಾಗಿದೆ. ವಜ್ರ ಉತ್ಪನ್ನ ಸಂಘದ ಸದಸ್ಯತ್ವ ಪಡೆದ ಪ್ರತಿಯೊಂದು ಉದ್ಯಮ ಸಂಸ್ಥೆಯೂ ಮಾರುಕಟ್ಟೆಗೆ ಕಳುಹಿಸಬೇಕಾದ ವಜ್ರದ ಪ್ರಮಾಣವನ್ನು ನಿಗದಿ ಮಾಡಲಾಗಿದೆ. ಕೇಪ್ ಪ್ರಾಂತ್ಯದಲ್ಲಿ ತಾಮ್ರದ ಗಣಿಗಳೂ ಉಂಟು.

ವ್ಯಾಪಾರ

[ಬದಲಾಯಿಸಿ]

ಕೇಪ್ ಪ್ರಾಂತ್ಯದಿಂದ ರಫ್ತಾಗುವ ಸರಕುಗಳು ವಜ್ರ, ಉಣ್ಣೆ, ಮೋಹೆರ್, ಆಡಿನ ಕೂದಲು, ಹಗುರ ಬಟ್ಟೆ, ಚರ್ಮ, ಹಣ್ಣುಗಳು ಮತ್ತು ದ್ರಾಕ್ಷಾರಸ. ಮುಖ್ಯ ಆಮದುಗಳು ಹತ್ತಿ ಜವಳಿ, ಆಹಾರ ಪದಾರ್ಥಗಳು, ಹಿೃಸ್ಕಿ, ಗಾಜಿನ ಪಾತ್ರೆ ಹಾಗೂ ಸಾಮಾನುಗಳು, ಯಂತ್ರೋಪಕರಣ, ಕಲ್ಲಿದ್ದಲು ಮತ್ತು ಚೌಬೀನೆ.

ನಗರಗಳು

[ಬದಲಾಯಿಸಿ]

ಕೇಪ್ ಪ್ರಾಂತ್ಯದ ಪ್ರಮುಖ ನಗರಗಳೆಲ್ಲ ಸಮುದ್ರ ತೀರಗಳಲ್ಲಿವೆ. ಇವುಗಳಲ್ಲಿ ಪ್ರಸಿದ್ಧವಾದವು ಕೇಪ್‍ಟೌನ್, ಪೋರ್ಟ ಎಲಿಜಬೆತ್, ಈಸ್ಟ್ ಲಂಡನ್, ಮೋಸೆಲ್‍ಬೇ, ಪೋರ್ಟ್‍ಸೆಂಟ್ ಜಾನ್ಸ್‍ಸ್, ಪೋರ್ಟ್ ನೊಲ್ಲೊತ್, ಕಿಂಬರ್ಲಿ ಮುಖ್ಯ ಒಳನಾಡ ಕೇಂದ್ರ. ಕೇಪ್‍ಟೌನ್ ದಕ್ಷಿಣ ಆಫ್ರಿಕಾ ಗಣರಾಜ್ಯದ ಪಾರ್ಲಿಮೆಂಟ್ ಅಧಿವೇಶನ ಸೇರುವ ಸ್ಥಳ, ಪ್ರಸಿದ್ಧ ರೇವು ಮತ್ತು ವಿಮಾನ ನಿಲ್ದಾಣ. ರೈಲ್ವೆ ಮತ್ತು ಮೋಟಾರು ಇವು ಕೇಪ್ ಪ್ರಾಂತ್ಯದ ಪ್ರಧಾನ ಸಂಚಾರ ಸಾಧನಗಳು. ಇಲ್ಲಿಯ ಮುಖ್ಯ ಬಂದರು ಸ್ಥಳಗಳಿಂದ ಒಳನಾಡಿನ ಮೂಲಕ ಇತರ ರಾಜ್ಯಗಳಿಗೂ ಸಂಚಾರ ಸಂಪರ್ಕವಿದೆ. ಕೇಪ್ ಟೌನ್‍ನಿಂದ ಕಿಂಬರ್ಲಿ, ಜೋಹಾನಿಸ್ ಬರ್ಗ್ ಮತ್ತು ಪ್ರಿಟೋರಿಯಾ ಪಟ್ಟಣಗಳಿಗೆ ರೈಲ್ವೆ ಮತ್ತು ರಸ್ತೆಗಳುಂಟು. ಪೋರ್ಟ್ ಎಲಿಜಬೆತ್‍ನಿಂದಲೂ ಈಸ್ಟ್ ಲಂಡನ್ನಿನಿಂದಲೂ ಒಳನಾಡಿಗೆ ರೈಲು ಮಾರ್ಗವುಂಟು.

ಇತಿಹಾಸ

[ಬದಲಾಯಿಸಿ]

ಬಾರ್ತೊಲೋಮ್ಯು ಡೀಯಷ್ 448ರಲ್ಲಿ ದಕ್ಷಿಣ ಆಫ್ರಿಕಾದ ಕೇಪ್ ಪ್ರಾಂತ್ಯದ ಗುಡ್‍ಹೋಪ್ ಭೂಶಿರವನ್ನು ಕಂಡುಹಿಡಿದ. 1652ರಿಂದ ಜಾನ್‍ವಾರ್ನ್ ರೈಬೀಕನ ನಾಯಕತ್ವದಲ್ಲಿ ಈಗಿನ ಕೇಪ್ ನಗರ ಪ್ರದೇಶದಲ್ಲಿ ಡಚ್ಚರು ನೆಲೆಸತೊಡಗಿದರು. ಪ್ರಾಚ್ಯ ದೇಶಗಳೊಂದಿಗೆ ಸ್ಪೇನ್, ಪೋರ್ಚುಗಲ್‍ಗಳ ವ್ಯಾಪಾರ ಸಂಪರ್ಕ ಕ್ಷೀಣಿಸುತ್ತಿದ್ದುದರ ಫಲವಾಗಿ ಡಚ್ಚರು ಆ ದೇಶಗಳೊಂದಿಗೆ ತಮ್ಮ ವ್ಯಾಪರವನ್ನು ಬೆಳೆಸಿಕೊಳ್ಳುತ್ತಿದ್ದರು. ವ್ಯಾಪಾರಕ್ಕಾಗಿ ಪ್ರಾಚ್ಯ ದೇಶಗಳಿಗೆ ಹೋಗುವ ಡಚ್ ಹಡಗುಗಳ ಅವಶ್ಯಕತೆಯನ್ನು ಪೂರೈಸುವ ಸಲುವಾಗಿ ಈ ವಸಾಹತು ಏರ್ಪಟ್ಟಿತು. 1657ರಲ್ಲಿ ನಡೆದ ಎರಡು ಮುಖ್ಯ ಘಟನೆಗಳು ಕೇಪ್ ಪ್ರಾಂತ್ಯದ ಪರಿಸ್ಥಿತಿಯನ್ನು ಬದಲಾಯಿಸಿದುವು; ಒಂಬತ್ತು ಮಂದಿ ಕಂಪನಿ ನೌಕರರು ಕೆಲಸದಿಂದ ಬಿಡುಗಡೆಯಾಗಿ ಕಂಪನಿ ಕೊಟ್ಟ ಭೂಮಿಯಲ್ಲಿ ವ್ಯವಸಾಯವನ್ನು ಕೈಗೊಂಡು ಸ್ವತಂತ್ರ ನಾಗರಿಕರಾಗಿ ನೆಲಸಿದರು. ಅದೇ ವರ್ಷ ಜಾವ ಮತ್ತು ಮಡಗಾಸ್ಕರ್ ದ್ವೀಪಗಳಿಂದ ಮೊದಲ ತಂಡದ ಕರಿಯ ಜನರನ್ನು ದಾಸ್ಯಕ್ಕಾಗಿ ಕಂಪನಿ ಬರಮಾಡಿಕೊಂಡಿತು. ಹೀಗೆ ಕೇಪ್ ಟೌನ್ ಸ್ಥಾಪಿತವಾದ ಏಳು ವರ್ಷಗಳಲ್ಲಿ ಡಚ್ಚರು ಒಳನಾಡನ್ನು ಪ್ರವೇಶಿಸಿ ಗ್ರೊಯ್ನ್ ವೆಲ್ಟ್, ಹಾಲೆಂಡ್ಷ್‍ಟ್ವಿನ್ ಮುಂತಾದ ವ್ಯವಸಾಯ ಕೇಂದ್ರಗಳನ್ನು ಸ್ಥಾಪಿಸಿದರು. ಬೋಯರ್ ಜನರ ಮೂಲಪುರುಷರಾದ ಈ ರೈತರು ಪೂರ್ವದಲ್ಲಿ 100 ಮೈಲಿಗಳವರೆಗೆ ಪ್ರವೇಶಿಸಿ ಫಿಷ್ ನದಿಯ ಸುತ್ತಮುತ್ತ ನೆಲಸಿದರು. ಅವರು ಅಲ್ಲಿ ಬಂಟು ಜನರನ್ನೂ ಉತ್ತರದಲ್ಲಿ ಬುಷ್‍ಮನ್ ಆದಿವಾಸಿಗಳನ್ನೂ ಎದುರಿಸಬೇಕಾಯಿತು. ಸ್ಥಳದಿಂದ ಸ್ಥಳಕ್ಕೆ ಸಂಚರಿಸುತ್ತಿದ್ದದ ಬೋಯರ್ ರೈತರಿಗೆ ಕೇಪ್ ಪ್ರಾಂತ್ಯದಲ್ಲಿದ್ದ ಡಚ್ ಅಧಿಕಾರಿಗಳಿಂದ ಸಹಾಯ ದೊರಕುತ್ತಿರಲಿಲ್ಲ. ಆದಿವಾಸಿಗಳು ಅವರ ದನಕರುಗಳನ್ನು ಅಪಹರಿಸುತ್ತಿದ್ದುದರಿಂದ ಬೋಯರ್ ಜನ ಅವರನ್ನು ಕೊಲ್ಲುತ್ತಿದ್ದರು ಅಥವಾ ಕೆಲಸಕ್ಕೆ ನೇಮಿಸಿಕೊಳ್ಳುತ್ತಿದ್ದರು. 17ನೆಯ ಶತಮಾನದ ಕೊನೆಯ ಹೊತ್ತಿಗೆ ಡಚ್ ಕಂಪನಿ ಕೇಪ್ ಪ್ರಾಂತ್ಯದಲ್ಲಿ ವಸಾಹತು ಸ್ಥಾಪಿಸಲು ತೀರ್ಮಾನಿಸಿತು. 1679ರಲ್ಲಿ ಬಂದ ಸೈಮನ್ ವಾನ್ ಡೆರ್‍ಸ್ಟೆಲ್‍ನ ನಾಯಕತ್ವದಲ್ಲಿ ಡಚ್ ವಲಸೆಗಾರರೂ 1688ರಲ್ಲಿ ಫ್ರಾನ್ಸ್ ದೇಶದಿಂದ ಧಾರ್ಮಿಕ ಕಿರುಕುಳಕ್ಕೊಳಗಾಗಿದ್ದ 200 ಮಂದಿ ಹ್ಯೂಜನಾಟರೂ ಇಲ್ಲಿ ದ್ರಾಕ್ಷಿ ಬೆಳೆಯನ್ನು ಆರಂಭಿಸಿದರು. 1708ರ ಹೊತ್ತಿಗೆ ಕೇಪ್ ಪ್ರಾಂತ್ಯದಲ್ಲಿ ಡಚ್ ನಾಗರಿಕರೂ ಗುಲಾಮರೂ ಇದ್ದರು ; ಅವರ ಸಂಖ್ಯೆ ಕ್ರಮೇಣ ಏರಿತು. 1714ರಲ್ಲಿ ಬೋಯರ್ ರೈತರು ಬಲು ಸುಲಭ ಬೆಲೆಗೆ 6,000 ಎಕರೆಗಳಷ್ಟು ಭೂಮಿಯನ್ನು ಗುತ್ತಿಗೆಗೆ ಪಡೆದಿದ್ದರು; ಭೂಮಿಯ ಫಲವತ್ತು ಕಡಿಮೆಯಾದಾಗ ತಮ್ಮ ಭೂಮಿಯನ್ನು ಮಾರಿ ಫಲವತ್ತಾದ ಜಮೀನುಗಳನ್ನು ಹುಡುಕಿಕೊಂಡು ಹೋಗುತ್ತಿದ್ದರು. 1794ರಲ್ಲಿ ಫ್ರೆಂಚ್ ಕ್ರಾಂತಿ ಪಡೆಗಳು ಹಾಲೆಂಡಿನ ಮೇಲೆ ಯುದ್ಧ ಘೋಷಿಸಿದಾಗ ಡಚ್ ದೊರೆ ವಿಲಿಯಂ ಆಫ್ ಆರೆಂಜ್ ಇಂಗ್ಲೆಂಡಿಗೆ ಓಡಿದ. ಈ ಸಂಧಿಯನ್ನು ಸಾಧಿಸಿ ಬ್ರಿಟಿಷರು ಡಚ್ ದೊರೆಯಿಂದ ಸನ್ನದು ಪಡೆದು 1795ರಲ್ಲಿ ಕೇಪ್ ಟೌನ್ ನಗರವನ್ನು ಆಕ್ರಮಿಸಿಕೊಂಡರು. 7 ವರ್ಷಗಳ ಕಾಲ ಬ್ರಿಟಿಷರು ಆ ನಗರದ ಆಡಳಿತ ವಹಿಸಿದ್ದು, 1803ರಲ್ಲಿ ಫ್ರೆಂಚರೊಂದಿಗೆ ಯುದ್ಧ ಪ್ರಾರಂಭವಾದ ಕಾರಣ ತಮ್ಮ ದೇಶಕ್ಕೆ ಹಿಂದಿರುಗಿದರೂ ಕೊನೆಗೆ 1814ರಲ್ಲಿ ಆದ ಒಪ್ಪಂದದ ಮೇರೆಗೆ ಕೇಪ್ ಟೌನ್ ಬ್ರಿಟಿಷರಿಗೆ ಸೇರಿತು. ಕೇಪ್ ಪ್ರಾಂತ್ಯದಲ್ಲಿ ಬ್ರಿಟಿಷರು ತಮ್ಮ ಆಡಳಿತ ಪದ್ಧತಿಯನ್ನು ತಂದು ಸಂಚಾರ ನ್ಯಾಯಾಲಯಗಳನ್ನು ಸ್ಥಾಪಿಸಿದರು. ಲಂಡನ್ ಮಿಷನ್ ಸೊಸೈಟಿಯ ಪಾದ್ರಿಗಳು ಕ್ರೈಸ್ತಧರ್ಮದ ಪ್ರಚಾರಕ್ಕೆ ಬಂದರು. 1834ರಲ್ಲಿ ಗುಲಾಮಗಿರಿಯನ್ನು ರದ್ದು ಮಾಡಿದರು. ಭೂಮಿಯನ್ನು ಹರಾಜು ಮೂಲಕ ವಿಲೇ ಮಾಡುವ ಪದ್ಧತಿಯನ್ನು ತಂದರು. ಅವರ ಈ ಎಲ್ಲ ಕ್ರಮಗಳೂ ಬೋಯರರಿಗೆ ಅಡ್ಡಿಗಳಾಗಿದ್ದವು. ಅತೃಪ್ತರಾದ ಬೋಯರರು 1834ರ ಅನಂತರ ತಂಡತಂಡಗಳಲ್ಲಿ ಒಳನಾಡಿಗೆ ವಲಸೆ ಹೋಗಲಾರಂಭಿಸಿದರು. ಬೋಯರರ ಈ ಸಂಚಾರವನ್ನು ದಕ್ಷಿಣ ಆಫ್ರಿಕದ ಇತಿಹಾಸದಲ್ಲಿ ಮಹಾವಲಸೆ ಎಂದು ಕರೆದಿದೆ. ಟೇಬಲ್ ಕೊಲ್ಲಿಯಿಂದ ಹೀಗೆ ಸಾಗಿದ ಬೋಯರ್ ಜನ ಮೂರು ತಂಡಗಳಾಗಿ ವ್ಯವಸ್ಥೆಗೊಂಡು ವಿವಿಧ ಪ್ರದೇಶಗಳಲ್ಲಿ ನೆಲೆಸಲು ಯತ್ನಿಸಿದರು. ಅಲ್ಲಿದ್ದ ಜನರೊಂದಿಗೆ ಘರ್ಷಣೆಗಳು ಸಂಭವಿಸಿದುವು. ಕೇಪ್ ಪ್ರಾಂತ್ಯದಲ್ಲಿ ಬ್ರಿಟಿಷ್ ಕಾರ್ಯನೀತಿಯಿಂದ ಬೋಯರ್ ಯುದ್ಧ ಪ್ರಾಪ್ತವಾಯಿತು. ಬೋಯರ್ ಜನರಿಗೂ ಬ್ರಿಟಿಷರಿಗೂ ಹೊಸ ಚಿನ್ನ ಮತ್ತು ವಜ್ರದ ಗಣಿಗಳ ಬಗ್ಗೆ ವೈಷಮ್ಯ ಹೆಚ್ಚುತ್ತಿದ್ದ ವೇಳೆಯಲ್ಲಿ ಜರ್ಮನರು ದಕ್ಷಿಣ ಆಫ್ರಿಕಕ್ಕೆ ಬಂದು ಉತ್ತರದ ಮಾರ್ಗಗಳನ್ನು ತಡೆಗಟ್ಟಿದರು ಹಾಗೂ ಭಾರತ ಮತ್ತು ಕೇಪ್ ನಡುವಣ ಬ್ರಿಟಿಷರ ಸಮುದ್ರಮಾರ್ಗಕ್ಕೆ ಅಡಚಣೆಯನ್ನುಂಟು ಮಾಡಿದರು. 1884ರಲ್ಲಿ ಅವರು ಲುಡ್‍ರಿಡ್ಜ್ ಕೊಲ್ಲಿಯನ್ನು ಆಕ್ರಮಿಸಿಕೊಂಡು, ನೈಋತ್ಯ ಆಫ್ರಿಕವನ್ನು ತಮ್ಮ ಪೋಷಿತ ಸಂಸ್ಥಾನವನ್ನಾಗಿ ಮಾಡಿಕೊಂಡರು. ಟ್ರಾನ್ಸ್‍ವಾಲಿನ ಡಚ್ (ಬೋಯರ್) ಪ್ರೆಸಿಡೆಂಟ್ ಪಾಲ್ ಕ್ರೂಜರ್ ಜರ್ಮನರೊಂದಿಗೆ ಸ್ನೇಹದಿಂದ ವರ್ತಿಸುತ್ತಿದ್ದುದು ಜರ್ಮನರ ಆಕಾಂಕ್ಷೆಗಳಿಗೆ ಅನುಕೂಲವಾಗಿಯೂ ಬ್ರಿಟಿಷರ ಕಾರ್ಯನೀತಿಗೆ ವಿರುದ್ಧವಾಗಿಯೂ ಇತ್ತು. 1890ರಿಂದ 1896ರ ವರೆಗೆ ಕೇಪ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿದ್ದ ಸಿಸಿಲ್ ಜಾನ್ ರೋಡ್ಸ್, ಬ್ರಿಟಿಷರು ಆಫ್ರಿಕದಲ್ಲಿ ವ್ಯಾಪಿಸುವುದಕ್ಕೆ ಬೆಂಬಲವಿತ್ತ. ಅವನ ಪ್ರಯತ್ನಗಳಿಂದ ಈಗಿನ ರೊಡೀಷಿಯ ಮೊದಲಾದ ಪ್ರಾಂತ್ಯಗಳು ಬ್ರಿಟಿಷರ ಅಧೀನವಾಗಿ, ಪಾಲ್ ಕ್ರೂಜರನ ಟ್ರಾನ್ಸ್‍ವಾಲಿಗೂ ಜರ್ಮನರು ವಶಪಡಿಸಿಕೊಂಡಿದ್ದ ಪ್ರದೇಶಗಳಿಗೂ ನಡುವೆ ಸಂಪರ್ಕ ಕಡಿದುಹೋಯಿತು. ಗೆದ್ದುಕೊಂಡ ಹೊಸ ರಾಜ್ಯಗಳ ಬಗ್ಗೆ ರೋಡ್ಸ್ ಬ್ರಿಟಿಷ್ ದೊರೆಯಿಂದ ಸನ್ನದನ್ನು ಪಡೆದುಕೊಂಡ. 1895ರಲ್ಲಿ ಪರಕೀಯರು (ಬ್ರಿಟಿಷರು) ಅಧಿಕ ಸಂಖ್ಯೆಯಲ್ಲಿ ಟ್ರಾನ್ಸ್‍ವಾಲನ್ನು ಪ್ರವೇಶಿಸಿದರು. ಅವರ ಸಂಖ್ಯೆ ಬೋಯರ್ ಜನರ ಸಂಖ್ಯೆಗಿಂತಲೂ ಹೆಚ್ಚಾಗಿತ್ತು. ಇಷ್ಟಾದರೂ ಪಾಲ್ ಕ್ರೂಜರ್ ಪರಕೀಯರಿಗೆ ಟ್ರಾನ್ಸ್‍ವಾಲಿನಲ್ಲಿ ಮತದಾನದ ಹಕ್ಕನ್ನು ಕೊಡಲಿಲ್ಲ. 1892ರಲ್ಲಿ ಅವನು ನ್ಯಾಷನಲ್ ಯೂನಿಯನ್ ಮೂಲಕ ಬ್ರಿಟಿಷರು ಒಪ್ಪಿಸಿದ ಬೇಡಿಕೆಗಳನ್ನು ನಿರಾಕರಿಸಲು ಕೇಪ್ ಪ್ರಾಂತ್ಯದ ಬ್ರಿಟಿಷ್ ಸರ್ಕಾರ ಟ್ರಾನ್ಸ್‍ವಾಲನ್ನು ವಶಪಡಿಸಿಕೊಳ್ಳಲು ನಿರ್ಧರಿಸಿತು. ರೋಡ್ಸನ ನೆರವಿನಿಂದ ಕೇಪ್ ಸರ್ಕಾರ ಆಯುಧಗಳನ್ನು ರಹಸ್ಯವಾಗಿ ಟ್ರಾನ್ಸ್‍ವಾಲಿಗೆ ಸಾಗಿಸಿತು. ಈ ಸಂಚು 1895ರಲ್ಲಿ ವಿಷಮಘಟ್ಟ ಮುಟ್ಟಿ ಜೊಹಾನಿಸ್‍ಬರ್ಗ್‍ನಲ್ಲಿ ದಂಗೆ ಎದ್ದಿತು. ಸಿಸಿಲ್ ರೋಡ್ಸ್ ಕಳುಹಿಸಿದ ಸೈನ್ಯ ಮುನ್ನುಗ್ಗಿತು. ಆದರೆ ಈ ದಾಳಿ ವಿಫಲಗೊಂಡು ಬ್ರಿಟಿಷರು ಸೋತರು. ಬೋಯರ್ ಜನ ತಮ್ಮ ಸೈನ್ಯವನ್ನು ಬಲಗೊಳಿಸಿಕೊಂಡರು. ಕೇಪ್ ಪ್ರಾಂತ್ಯದ ರಾಜಕೀಯದಿಂದ ಟ್ರಾನ್ಸ್‍ವಾಲ್ ಬಿಕ್ಕಟ್ಟಿಗೆ ಒಳಗಾಯಿತು. ಕೇಪ್ ಪ್ರಾಂತ್ಯದ ಬ್ರಿಟಿಷ್ ಹೈ ಕಮಿಷನರ್ ಸರ್ ಆಲ್ಫ್ರೆಡ್ ಮಿಲ್ನರ್, ಬೋಯರ್ ಯುದ್ಧಗಳಲ್ಲಿ ಪ್ರಮುಖ ಪಾತ್ರ ವಹಿಸಿದ. ಮಿಲ್ನರ್ ಮತ್ತು ಕ್ರೂಜರರ ನಡುವಣ ಮಾತುಕತೆಗಳು ವಿಫಲಗೊಂಡವು. ಸೆಪ್ಟೆಂಬರ್ 1899ರಲ್ಲಿ ಕ್ರೂಜರ್ ಸೈನ್ಯಗಳನ್ನು ಜಮಾಯಿಸಿದ. ಬ್ರಿಟಿಷರ ಮತದಾನದ ಹಕ್ಕು ಟ್ರಾನ್ಸ್‍ವಾಲ್ ಸರ್ಕಾರಕ್ಕೆ ಸೇರಿದ್ದೆಂದೂ, ಇತ್ತೀಚೆಗೆ ಬಂದ ಬ್ರಿಟಿಷ್ ಸೈನ್ಯವನ್ನು ಟ್ರಾನ್ಸ್‍ವಾಲಿನಿಂದ ವಾಪಸು ಕರೆಸಿಕೊಳ್ಳಬೇಕೆಂದೂ, ಕ್ರೂಜರ್ ಮಿಲ್ಲರನಿಗೆ ಸೂಚನೆ ಕೊಟ್ಟ. ಬ್ರಿಟಿಷರು ಈ ಸೂಚನೆಯನ್ನು ನಿರಾಕರಿಸಲು ಬೋಯರ್ ಸೈನ್ಯ ಟ್ರಾನ್ಸ್‍ವಾಲಿನಿಂದ ಹೊರಟು ಕೇಪ್ ಪ್ರಾಂತ್ಯದ ಮೇಲೆ ದಾಳಿ ನಡೆಸಿತು. ಬೋಯರ್ ಸೈನ್ಯದ ನಾಯಕರಾದ ಜನರಲ್ ಪಿಯಟ್ ಮತು ಪಿಯಟ್ ಕ್ರೋಜೆ ಇವರು ನೇಟಾಲಿನ ಲೇಡಿಸ್ಮಿತ್ ದಾಳಿ, ಕಿಂಬರ್ಲಿ ದಾಳಿ ಮತು ಕೇಪ್ ಅಂಚಿನ ಮಫೆಕಿಂಗ್ ಪಟ್ಟಣದ ದಾಳಿಗಳಲ್ಲಿ ಸೋತರು. ಬ್ರಿಟಿಷ್ ಸೈನ್ಯದ ಬುಲ್ಲರ್ ಮತ್ತು ಜನರಲ್ ವಿಲಿಯಂ ಗಟಕ್ರೆ ಸಹ ಬೋಯರರನ್ನು ಎದುರಿಸಲಾರದೆ ಹಿಮ್ಮೆಟ್ಟಿದರು. ಬ್ರಿಟಿಷ್ ಸೋಲುಗಳನ್ನು ತಿದ್ದಲು ಬ್ರಿಟಿಷರು ಫೀಲ್ಡ್ ಮಾರ್ಷಲ್ ಲಾರ್ಡ್ ರಾಬಟ್ರ್ಸನನ್ನು ಕಳುಹಿಸಿದರು. ರಾಬಟ್ರ್ಸ್ 1900ರಲ್ಲಿ ಕಿಂಬರ್ಲಿ ಪಟ್ಟಣವನ್ನು ಆಕ್ರಮಿಸಿಕೊಂಡ. ಬೋಯರ್ ನಾಯಕ ಜನರಲ್ ಕ್ರೋಂಜೆ ತನ್ನ 4,000 ಸೈನಿಕರೊಡನೆ ಪಾರ್ಡೆಬರ್ಗ್ ಬಳಿ ಸೆರೆಯಾದ. ಮಾರ್ಚ್ 13ರಲ್ಲಿ ರಾಬಟ್ರ್ಸ್ ಆರೆಂಜ್ ಫ್ರೀ ಸ್ಟೇಟಿನ ರಾಜಧಾನಿ ಬ್ಲೋಯಂಪಾನ್‍ಟೇನ್ ನಗರವನ್ನು ಹಿಡಿದ. ತರುವಾಯ ಲೇಡಿಸ್ಮಿತ್ ನಗರ ವಶವಾಗಿ ಬೋಯರ್ ಜನ ನೇಟಾಲ್ ಪ್ರಾಂತ್ಯವನ್ನು ಬಿಟ್ಟು ಹೊರಟರು. ಜೋಹಾನಿಸ್‍ಬರ್ಗ್ ಮತ್ತು ಟ್ರಾನ್ಸ್‍ವಾಲಿನ ರಾಜಧಾನಿ ಪ್ರೆಟೋರಿಯ ಸಹ ರಾಬಟ್ರ್ಸ್‍ನ ವಶವಾದುವು, 1900ರ ಸೆಪ್ಟೆಂಬರ್ ತಿಂಗಳಲ್ಲಿ ಟ್ರಾನ್ಸ್‍ವಾಲ್ ರಾಜ್ಯವನ್ನು ಬ್ರಿಟಿಷರು ಪೂರ್ಣವಾಗಿ ಆಕ್ರಮಿಸಿಕೊಂಡರು. ಪಾಲ್ ಕ್ರೂಜರ ವೃದ್ಧಾಪ್ಯದಿಂದ ಕಾಯಿಲೆಗೆ ತುತ್ತಾಗಿ ಪೋರ್ಚುಗೀಸ್ ಪೂರ್ವ ಆಫ್ರಿಕ ಗಡಿಯನ್ನು ಪ್ರವೇಶಿಸಿ ಅಲ್ಲಿಂದ ಡಚ್ ಹಡಗೊಂದರಲ್ಲಿ ಯೂರೋಪಿಗೆ ಹಿಂದಿರುಗಿದ. ತರುವಾಯ 18 ತಿಂಗಳ ಕಾಲ ಸಣ್ಣಪುಟ್ಟ ಘರ್ಷಣೆಗಳು ನಡೆದು ಮೇ 31, 1902ರ ವೆರೀಂಜಿಂಗ್ ಕೌಲಿನಿಂದ ಕೇಪ್ ಪ್ರಾಂತ್ಯ ಹೂಡಿದ ಬೋಯರ್ ಯುದ್ಧ ಕೊನೆಗೊಂಡಿತು. ಟ್ರಾನ್ಸ್‍ವಾಲ್ ಮತ್ತು ಆರೆಂಜ್ ಫ್ರೀ ಸ್ಟೇಟ್‍ಗಳೆರಡೂ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟುವು. ಬೋಯರ್ ಯುದ್ಧವನ್ನು ಇಂಗ್ಲೆಂಡಿನ ಲಿಬರಲ್ ಪಕ್ಷ ಪ್ರಾರಂಭದಿಂದಲೂ ಪ್ರತಿಭಟಿಸಿತ್ತು. ಈ ಪಕ್ಷದ ಆಡಳಿತದಲ್ಲಿ ಟ್ರಾನ್ಸ್‍ವಾಲ್ ಮತ್ತು ಆರೆಂಜ್ ಫ್ರೀ ಸ್ಟೇಟ್-ಇವುಗಳೆರಡಕ್ಕೂ ಭಾಗಶ: ಸ್ವಯಮಾಡಳಿತವನ್ನು ಕೊಡಲಾಯಿತು. ತರುವಾಯ ದಕ್ಷಿಣ ಆಫ್ರಿಕದ ರಾಷ್ಟ್ರೀಯ ಸಭೆ ಆಕ್ಟ್ ಆಫ್ ಯೂನಿಯನ್ ರಚಿಸಿತು, ಆ ಮೇರೆಗೆ 1910ರಲ್ಲಿ ಬ್ರಿಟಿಷರ ಕೇಪ್ ಪ್ರಾಂತ್ಯ ಮತ್ತು ನೇಟಾಲ್ ಹಾಗೂ ಬೋಯರ್ ಗಣರಾಜ್ಯಗಳಾದ ಆರೆಂಜ್ ಫ್ರೀ ಸ್ಟೇಟ್ ಮತ್ತು ಟ್ರಾನ್ಸ್‍ವಾಲ್-ಇವು ದಕ್ಷಿಣ ಆಫ್ರಿಕ ಒಕ್ಕೂಟ ರಾಜ್ಯಗಳಾಗಿ ವ್ಯವಸ್ಥೆಗೊಂಡುವು. 1910ರಿಂದ ಕೇಪ್ ಪ್ರಾಂತ್ಯದ ಇತಿಹಾಸ ದಕ್ಷಿಣ ಆಫ್ರಿಕ ಒಕ್ಕೂಟದಲ್ಲಿ ವಿಲೀನಗೊಂಡಿತು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
  • A history of the Cape Province
  • Archives kept at Cape Town Archived 22 April 2021 ವೇಬ್ಯಾಕ್ ಮೆಷಿನ್ ನಲ್ಲಿ.
  •  Cana, Frank Richardson; Gibson, Walcot; Hillier, Alfred Peter (1911). "Cape Colony" . Encyclopædia Britannica. Vol. 5 (11th ed.). pp. 225–248. {{cite encyclopedia}}: Cite has empty unknown parameters: |separator= and |HIDE_PARAMETER= (help)
  • ಟೆಂಪ್ಲೇಟು:Cite EB1922

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. 1 2 "Census > 1991 > RSA > Variable Description > Person file > District code". Statistics South Africa – Nesstar WebView. Archived from the original on 19 ಜೂನ್ 2016. Retrieved 18 ಆಗಸ್ಟ್ 2013.