ವಿಷಯಕ್ಕೆ ಹೋಗು

ಕೆಲಂಚೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೆಲಂಚೊ
Kalanchoe blossfeldiana
Scientific classification e
Unrecognized taxon (fix): Kalanchoe
Subgenera[]
  • Kalanchoe
  • Bryophyllum (Salisb.) Koorders
  • Kitchingia (Baker) Gideon F.Sm. & Figueiredo
Synonyms

Bryophyllum

ಕೆಲಂಚೊ ಕ್ರ್ಯಾಸ್ಯುಲೇಸೀ ಕುಟುಂಬಕ್ಕೆ ಸೇರಿದ ಒಂದು ಅಲಂಕಾರ ಸಸ್ಯಜಾತಿ; ಸು.125 ಪ್ರಭೇದಗಳನ್ನೊಳಗೊಂಡಿದೆ. ಇವು ಸದಾ ಹಸಿರಾಗಿರುವುದರಿಂದಲೂ ಇವುಗಳ ಎಲೆಗಳು ರಸಭರಿತವಾಗಿದ್ದು ಆಕಾರವೈವಿಧ್ಯವನ್ನು ಪ್ರದರ್ಶಿಸುವುದರಿಂದಲೂ ಈ ಜಾತಿಯ ಸಸ್ಯಗಳನ್ನು ಉದ್ಯಾನಗಳ ಸೊಗಸಿಗಾಗಿ ಕುಂಡಸಸ್ಯಗಳನ್ನಾಗಿಯೊ ಇಲ್ಲವೆ ಕಲ್ಲೇರಿಸಸ್ಯಗಳನ್ನಾಗಿಯೊ ಬೆಳೆಸುತ್ತಾರೆ.

ಭೌಗೋಳಿಕ ಹರಡುವಿಕೆ

[ಬದಲಾಯಿಸಿ]

ಬಹುಪಾಲು ಪ್ರಭೇದಗಳು ಮೂಲತಃ ಆಫ್ರಿಕಖಂಡ ಮತ್ತು ಮಡಗಾಸ್ಕರ್ ದ್ವೀಪದ ನಿವಾಸಿಗಳು.

ಸಸ್ಯ ಲಕ್ಷಣಗಳು

[ಬದಲಾಯಿಸಿ]

ಇದು ದೃಢಕಾಯದ ಸಸ್ಯ: ಸುಮಾರು 2'-4' ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳು ಅಭಿಮುಖವಾಗಿ ಜೋಡಣೆಗೊಂಡಿವೆ; ರಸಭರಿತವಾಗಿವೆ. ಅವುಗಳ ಅಂಚು ನಯವಾಗಿರಬಹುದು. ಗರಗಸದಂತಿರಬಹುದು, ಇಲ್ಲವೆ ಹಲವಾರು ಸೀಳುಗಳಾಗಿರಬಹುದು. ಹೂಗೊಂಚಲು ಮಧ್ಯಾರಂಭಿ ಮಾದರಿಯದು; ಬಹುವಾಗಿ ಕವಲೊಡೆಯುವ ಇದು ಕಾಂಡದ ತುದಿಯಲ್ಲಿ ಹುಟ್ಟುತ್ತದೆ. ಹೂಗಳು ಚಿಕ್ಕವು; ಬಣ್ಣ ಹಳದಿ, ಊದಾ, ಕಡುಗೆಂಪು ಮುಂತಾಗಿ ವೈವಿಧ್ಯಮಯ. ಪ್ರತಿಹೂವಿನಲ್ಲಿ 4 ಪುಷ್ಪ ಪತ್ರಗಳು, 4 ದಳಗಳು, 8 ಕೇಸರಗಳು ಮತ್ತು 4 ಕಾರ್ಪೆಲುಗಳಿಂದ ಕೂಡಿದ ಅಂಡಾಶಯ ಉಂಟು. ಫಲ ಬಹುಬೀಜಗಳುಳ್ಳ ಫಾಲಿಕಲ್ ಮಾದರಿಯದು.

ಪ್ರಭೇದಗಳು

[ಬದಲಾಯಿಸಿ]

ಕ್ಯಾಲ್ಯಾಂಕೋಯಿ ಜಾತಿಯ ವಿವಿಧ ಪ್ರಭೇದಗಳಲ್ಲಿ ಮುಖ್ಯವಾದವನ್ನು ಕೆಳಗೆ ವಿವರಿಸಲಾಗಿದೆ.

ಕ್ಯಾ.ಡೈಗ್ರಿಮೊಂಟಿಯಾನ
  1. ಕ್ಯಾ.ಡೈಗ್ರಿಮೊಂಟಿಯಾನ : ಕ್ಯಾಲ್ಯಾಂಕೋಯಿ ಪ್ರಭೇದಗಳಲ್ಲೆಲ್ಲ ಹೆಚ್ಚು ಸುಲಭವಾಗಿಯೂ ದೃಢಕಾಯವಾಗಿಯೂ ಬೆಳೆಯುವಂಥದು. ಸುಮಾರು 3' ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳ ಆಕಾರ ತ್ರಿಕೋನದಂತೆ; ಬಣ್ಣ ನೀಲಿ ಮಿಶ್ರಿತ ಹಸಿರು. ಮೇಲೆ ಕಡುಗೆಂಪು ಬಣ್ಣದ ಮಚ್ಚೆಗಳಿವೆ. ಹೂಗೊಂಚಲು ಬೂದಿ ಮಿಶ್ರಿತ ನೀಲಿ ಬಣ್ಣದ್ದು.
  1. ಕ್ಯಾಲ್ಯಾಂಕೋಯಿ ಲ್ಯಾಕ್ಸಿಫ್ಲೋರ : ಇದನ್ನು ಬ್ರಯೊಫಿಲಮ್ ಕ್ರಿನೆಟಮ್ ಎಂದು ಕರೆಯುವುದೂ ಉಂಟು. ಕಾಂಡ ಕವಲುಗಳಿಲ್ಲದೆ ಸುಮಾರು 2' ಎತ್ತರ ಬೆಳೆದು ಬುಡದಲ್ಲಿ ತೊಡಕು ಬೇರುಗಳನ್ನು ಬಿಡುತ್ತದೆ. ಉದ್ದವಾದ ತೊಟ್ಟಿರುವ ದೀರ್ಘ ವೃತ್ತಾಕಾರದ ನೀಲಿಮಿಶ್ರಿತ ಹಸಿರು ಎಲೆಗಳಿವೆ. ತೊಟ್ಟಿನ ಬಳಿ ನಿರ್ದಿಷ್ಟವಾಗಿ ಭಾಗವಾಗಿದೆ. ಹೂಗೊಂಚಲಿನ ಬಣ್ಣ ಕಿತ್ತಳೆಮಿಶ್ರಿತ ನಸುಗೆಂಪು.
  2. ಕ್ಯಾಲ್ಯಾಂಕೋಯಿ ಪಿನ್ನೇಟ : ಇದಕ್ಕೆ ಬ್ರಯೊಫಿಲಮ್ ಕ್ಯಾಲಿಸಿನಮ್ ಎಂಬ ಹೆಸರೂ ಬಳಕೆಯಲ್ಲಿದೆ. ಇದು ದೃಢಕಾಯವಾಗಿ ಸುಮಾರು 3' ಎತ್ತರಕ್ಕೆ ಬೆಳೆಯುತ್ತದೆ. ಇದರ ಎಳೆಯ ಎಲೆ ಸರಳವಾಗಿದ್ದು ದೀರ್ಘವೃತ್ತಾಕಾರವಾಗಿರುತ್ತದೆ; ಬಲಿತ ಅನಂತರ ಅದರ ಅಂಚುಗಳು ಆಳವಾಗಿ ಸೀಳುವುದರಿಂದ ಸಣ್ಣ ಗರಿರೂಪದ ಸಂಯುಕ್ತ ಪತ್ರವಾಗುತ್ತದೆ. ಉಪಪತ್ರಗಳ ಬಣ್ಣ ನೀಲಿ ಮಿಶ್ರಿತ ಹಸಿರು, ಇಲ್ಲವೆ ಕೆಂಪು. ಉದ್ದವಾದ, ಗಂಡೆಯಾಕಾರದ ಹೂಗಳಿರುವ ಹೂಗೊಂಚಲು ಸಸ್ಯದ ತುದಿಯಿಂದ ಹೊರಬರುತ್ತದೆ. ಈ ಸಸ್ಯ ಇತರ ಪ್ರಭೇದಗಳಿಗಿಂತ ಹೆಚ್ಚಾಗಿ ವಿಶ್ವದ ಎಲ್ಲ ಭಾಗಗಳಲ್ಲೂ ಬೇಸಾಯದಲ್ಲಿದೆ.
  3. ಕ್ಯಾಲ್ಯಾಂಕೋಯಿ ಸೆರೇಟ : ಇದು ಹೆಚ್ಚು ಕವಲೊಡೆದು ನಿಬಿಡವಾದ ಎಲೆಗಳಿಂದ ಕೂಡಿದ್ದು ಹರಡಿಕೊಂಡು ಬೆಳೆಯುತ್ತದೆ. ಚಿಕ್ಕ ತೊಟ್ಟಿರುವ ಕಿರಿದಾದ ಇದರ ಎಲೆ, ಗರಗಸದ ಅಂಚಿನಿಂದ ಕೂಡಿದೆ. ಹೂಗಳ ಬಣ್ಣ ಕಿತ್ತಳೆ.
  4. ಕ್ಯಾಲ್ಯಾಂಕೋಯಿ ಟ್ಯೂಬಿಫ್ಲೋರ : ಸುಮಾರು 5' ಎತ್ತರ ಬೆಳೆಯುವ ಪ್ರಭೇದ ಇದು. ಕವಲೊಡೆಯದ ನೇರವಾಗಿ ಬೆಳೆಯುತ್ತದೆ. ಎಲೆಗಳು ಕೊಳವೆಯಾಕಾರದಲ್ಲಿದ್ದು, ಮೇಲುಭಾಗದಲ್ಲಿ ಕಾಲುವೆಯಿಂದ ಕೂಡಿರುತ್ತವೆ. ಇದು ಕೆಂಪು ಅಥವಾ ಊದಾ ಬಣ್ಣದ ಗಂಟೆಯಾಕಾರದ ಹೂಗಳನ್ನು ಬಿಡುತ್ತದೆ.
  5. ಕ್ಯಾಲ್ಯಾಂಕೋಯಿ ಬೆಹರೆನ್‍ಸಿಸ್ : ಈ ಪ್ರಭೇದದ ಸಸ್ಯದ ಎಳೆಯ ಕಾಂಡ ಮತ್ತು ಎಲೆಗಳ ಮೇಲೆ ನಿಬಿಡವಾದ ನವುರಾದ ರೋಮಗಳಿವೆ. ಸಸ್ಯದ ತುದಿಯಿಂದ ಹೊಸ ಎಲೆಗಳು ಹೊರಬಂದಂತೆಲ್ಲ ತಳಭಾಗದಲ್ಲಿರುವ ಹಳೆಯ ಎಲೆಗಳು ಉದುರಿ ಹೋಗಿ ಅವುಗಳ ಕಲೆಗಳು ಮಾತ್ರ ಉಳಿಯುತ್ತವೆ. ಹೂಗೊಂಚಲು ಉಳಿದ ಪ್ರಭೇದಗಳಿಗೆ ಹೋಲಿಸಿದರೆ ಅಷ್ಟು ಸುಂದರವಾಗಿಲ್ಲ.
  6. ಕ್ಯಾಲ್ಯಾಂಕೋಯಿ ಮಾರ್ಮೊರೇಟ : ಇದು ಅತ್ಯಂತ ಸುಂದರವಾದ ಪ್ರಭೇದಗಳಲ್ಲಿ ಒಂದು. ತೊಟ್ಟಿಲ್ಲದ ವಿರುದ್ಧ ಕರನೆಯಾಕಾರದ ಇದರ ಎಲೆಯ ಅಂಚು ಹಲ್ಲುಗಳಾಗಿ ಒಡೆದಿದೆ; ಮೇಲ್ಭಾಗದಲ್ಲಿ ನೀಲಿ ಮಿಶ್ರಿತ ಬೂದಿ ಬಣ್ಣದ ಚುಕ್ಕೆಗಳಿರುವುದರಿಂದ ನೋಡಲು ಬಹಳ ಸುಂದರವಾಗಿ ಕಾಣುತ್ತದೆ. ಇದು ಹೂಬಿಡುವುದು ಬಹುವಿರಳ.
  7. ಕ್ಯಾಲ್ಯಂಕೋಯಿ ಟೊಮೆಂಟೋಸ: ಇದು ಬಹು ಸುಂದರವಾದುದು ಎಂದು ಪ್ರಸಿದ್ಧಿಯಾಗಿದೆ. ಇದರ ಕಾಂಡ ದಪ್ಪ. ಬುಡದಲ್ಲಿ ಕವಲೊಡೆದು ಸುಮಾರು 2' ಎತ್ತರ ಬೆಳೆಯುತ್ತದೆ. ಇದರ ಮೇಲೆ ನಿಬಿಡವಾದ ರೋಮಗಳಿವೆ. ಇದರ ಎಲೆಯ ಆಕಾರ ದೀರ್ಘ ವೃತ್ತದಂತೆ. ಇದು ದಪ್ಪ ಮತ್ತು ಮೆದುವಾಗಿರುತ್ತದೆ. ಅಂಚು ಹಲ್ಲು ಹಲ್ಲಾಗಿ ಒಡೆದು ತುದಿ ಗುಂಡಾಗಿರುತ್ತದೆ. ಇಡೀ ಸಸ್ಯವನ್ನು ಬಿಳುಪು ಮಿಶ್ರಿತ ಬೂದಿ ಬಣ್ಣದ ರೋಮಗಳು ನಿಬಿಡವಾಗಿ ಅವರಿಸಿರುತ್ತವೆ. ಎಲೆಗಳ ತುದಿಯ ಭಾಗದ ಅಂಚಿನಲ್ಲಿ ಕಂದು ಬಣ್ಣದ ಚುಕ್ಕೆಗಳಿರುವುದರಿಂದ ಈ ಸಸ್ಯ ಬಹಳ ರಮ್ಯವಾಗಿ ಕಾಣುತ್ತದೆ.

ಛಾಯಾಂಕಣ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. Smith & Figueiredo 2018.
"https://kn.wikipedia.org/w/index.php?title=ಕೆಲಂಚೊ&oldid=1343243" ಇಂದ ಪಡೆಯಲ್ಪಟ್ಟಿದೆ