ವಿಷಯಕ್ಕೆ ಹೋಗು

ಕೃಷಿಪೀಡಕಗಳು ಮತ್ತು ಅವುಗಳ ನಿಯಂತ್ರಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಲಿ, ಮಂಗ, ಹಂದಿ ಮೊದಲಾದ ಸಸ್ತನಿಗಳು, ಹಲವಾರು ಬಗೆಯ ಪಕ್ಷಿಗಳು, ಕೀಟಗಳು, ರೋಗಾಣುಗಳು ಕಳೆಗಳು, ಮುಂತಾದವು ಕೃಷಿಪೀಡಕಗಳು. ಇವುಗಳ ಪೀಡನೆಯಿಂದ ಪೈರುಗಳಿಗೆ ಅಪಾರ ನಷ್ಟ ಉಂಟಾಗುತ್ತದೆ. ಕೃಷಿಗೆ ನಷ್ಟಕಾರಿಗಳಾದ ಕೆಲವು ಮುಖ್ಯ ಕೀಟಗಳನ್ನೂ ಅವುಗಳ ನಿವಾರಣೋಪಾಯಗಳನ್ನೂ ಮುಂದೆ ಚರ್ಚಿಸಿದೆ.

ರಸಹೀರಿ ನಷ್ಟಪಡಿಸುವ ಕೀಟಗಳು

[ಬದಲಾಯಿಸಿ]

ಈ ಪಂಗಡದ ಕೀಟಗಳಲ್ಲಿ ಸಸ್ಯ ಹೇನುಗಳು ಮುಖ್ಯ. ಇವುಗಳಿಂದ ಬಾಧಿಸಲ್ಪಡದ ಸಸ್ಯವೇ ಇಲ್ಲವೆನ್ನಬಹುದು. ಇವು ವಿಶ್ವವ್ಯಾಪಿ, ಅಸಂಖ್ಯಾತ, ಸಣ್ಣ, ಮೃದು, ವಿವಿಧ ಬಣ್ಣದವು-ಹಸಿರು, ಕಪ್ಪು, ಬೂದು, ಪಾಟಲ- ಹೀಗೆ ಈ ಹೇನುಗಳಿಗೆ ಸಾಮಾನ್ಯವಾಗಿ ರೆಕ್ಕೆಗಳಿಲ್ಲ. ಹಿಂಭಾಗದ ಇಕ್ಕೆಲಗಳಲ್ಲಿ ಒಂದೊಂದು ಮಯಣದ ನಾಳಗಳು (ಕಾರ್ನಿಕಲ್) ಇವೆ. ಸಸ್ಯದ ಚಿಗುರ ಸುಳಿ ಹೂ ಮುಂತಾದ ಎಳೆಯ ಭಾಗಗಳಿಗೆ ತಮ್ಮ ಮೂತಿಯನ್ನು ಚುಚ್ಚಿ ರಸವನ್ನು ಹೀರುತ್ತವೆ. ಆದ್ದರಿಂದ ಸಸ್ಯಗಳು ಬಾಡಿ ಒಣಗುತ್ತವೆ. ಜೊತೆಯಲ್ಲೇ ಹೇನುಗಳು ವಿಸರ್ಜಿಸುವ ಸಿಹಿ ಅಂಟು ಎಲೆಗಳ ಮೇಲೆ ಬಿದ್ದು ಅದರ ಮೇಲೆ ಕಪ್ಪು ಬೂಷ್ಟು ಬೆಳೆದು ದ್ಯುತಿಸಂಶ್ಲೇಷಣ ಕಾರ್ಯವೂ ನಿಂತು ನಷ್ಟವಾಗುತ್ತದೆ. ಹಲವು ಬಗೆ ಸಸ್ಯ ಹೇನುಗಳು ನಂಜು ರೋಗಗಳನ್ನು ಹರಡುತ್ತವೆ. ಸಸ್ಯಹೇನುಗಳಿಂದ ನಷ್ಟಪಡುವ ಬೆಳೆಗಳು ಮುಖ್ಯವಾಗಿ ಹತ್ತಿ, ಜೋಳ, ರಾಗಿ, ಅವರೆ, ಅಲಸಂದೆ, ಕೋಸು ಮುಂತಾದ ತರಕಾರಿಗಳು, ನೆಲಗಡಲೆ, ಕಿತ್ತಳೆ ಜಾತಿ ಗಿಡಮರಗಳು ಮಾವು, ಹಲಸು, ದಾಳಿಂಬ ಇತ್ಯಾದಿ ಹಣ್ಣಿನ ಮರಗಳು, ಹೊಗೆಸೊಪ್ಪು, ಗುಲಾಬಿ ಹೂ ಗಿಡಗಳು, ತೋಟದ ಬೆಳೆಗಳು ಇತ್ಯಾದಿ. ಸಸ್ಯ ಹೇನುಗಳು ಅನಿಷೇಚಕ ಜನನದಿಂದ ಸಂತಾನೋತ್ಪತ್ತಿ ಮಾಡುವುದರಿಂದ ವಿಶೇಷವಾಗಿ ಹೆಚ್ಚುತ್ತವೆ. ಇವುಗಳಲ್ಲಿ ರೆಕ್ಕೆಗಳುಳ್ಳ ಹೇನುಗಳೂ ತಲೆದೋರುವುದುಂಟು. ಈ ಪ್ರಾಣಿಗಳ ಹತೋಟಿಗೆ ಅವುಗಳ ನೈಸರ್ಗಿಕ ಶತ್ರುಗಳು ಸಹಾಯಕ. ಗುಲಗಂಜಿಹುಳಗಳು, ಸಿರ್ಫಿಡ್ ನೊಣಗಳು, ಕ್ರೈಸೊಪಿಡ್ ಕೀಟಗಳು ಸಾಕಷ್ಟಿದ್ದರೆ ರಾಸಾಯನಿಕಗಳು ಬೇಕಾಗುವುದಿಲ್ಲ. ಅವಿಲ್ಲದಿದ್ದಾಗ ಹೊಂಗೆ ಎಣ್ಣೆ, ರಾಳದ ಸಾಬೂನು, ಹೊಗೆಸೊಪ್ಪಿನ ಕಷಾಯ ಅಥವಾ ಯಾವುದಾದರೂ ರಂಜಕ ಕ್ರಿಮಿನಾಶಕವನ್ನು ಉಪಯೋಗಿಸಬಹುದು.[೧]

ಬೂಷ್ಟುತಿಗಣೆಗಳು ಶಲ್ಕಕೀಟಗಳು ಬಿಳಿನೊಣಗಳು (ಅಲೆರೋಡಿಡ್)

[ಬದಲಾಯಿಸಿ]

ಇವು ಸಹ ರಸವನ್ನು ಹೀರುವ ಕೀಟಗಳೇ. ಈ ಪಂಗಡದ ಕೀಟಗಳೂ ಸಸ್ಯ ಹೇನುಗಳಂತೆ ಅಸಂಖ್ಯಾತವಾಗಿ ಒಟ್ಟಾಗಿದ್ದು ರಸವನ್ನು ಸದಾ ಹೀರಿ ವೈರಿಗೆ ಸಾವು ಉಂಟು ಮಾಡುತ್ತವೆ. ರಚನೆಯಲ್ಲಿ ಒಂದೊಂದಕ್ಕೂ ವ್ಯತ್ಯಾಸವಿದೆ. ಲೈಂಗಿಕ ವ್ಯತ್ಯಾಸವೂ ಉಂಟು. ಮರಿಗಳು ಒಂದೆರಡು ದಿನ ಹರಿದಾಡಿ ಸೂಕ್ತವಾದೆಡೆ ನೆಲೆಸಿದ ಮೇಲೆ ಮತ್ತೆ ಚಲಿಸುವುದಿಲ್ಲ. ವಿಶ್ವವ್ಯಾಪಿಯಾದರೂ ಉಷ್ಣವಲಯದಲ್ಲಿ ಹೆಚ್ಚು. ಇವು ತೋಟದ ಬೆಳೆಗಳು ಮತ್ತು ಹಣ್ಣಿನ ಗಿಡ ಮರಗಳ ಕೆಟ್ಟ ಶತ್ರುಗಳು. ಬೂಷ್ಟು ತಿಗಣೆ ಮತ್ತು ಶಲ್ಕ ಕೀಟಗಳಲ್ಲಿ ಗಂಡುಗಳು ಆಗಾಗ ಮಾತ್ರ ಕಾಣಿಸಿಕೊಳ್ಳುತ್ತವೆ. ರೆಕ್ಕೆಗಳು ಒಂದೇ ಜೊತೆ. ಬೂಷ್ಟು ತಿಗಣೆಹೆಣ್ಣು ಗುಂಡು, ಅದರ ಹಿಂಭಾಗದಲ್ಲಿ ಹತ್ತಿಯಂಥ ಅಂಡಕೋಶ ಬೆಳೆದು ಅದರೊಳಗೆ ಮೊಟ್ಟೆ ಮರಿಗಳಿರುತ್ತವೆ. ಚಲನೆ ಇಲ್ಲ. ಶಲ್ಕ ಕೀಟಗಳ ಹೆಣ್ಣುಗಳೂ ಗುಂಡು. ಅವುಗಳ ಮೈಮೆಲೆ ತೆಳುವಾದ ಗಟ್ಟಿಯಾದ ಚಿಪ್ಪಿರುತ್ತದೆ. ಕೆಲವು ಮೃದು ಶಲ್ಕಗಳು ಕೆಲವು ಗಡಸು ಶಲ್ಕಗಳು. ಬಿಳಿ ನೊಣಗಳ ಮೈ ರೆಕ್ಕೆಗಳ ಮೇಲೆ ಮಯಣದ ಪುಡಿ ತುಂಬಿರುತ್ತದೆ. ಹೆಣ್ಣು ಗಂಡುಗಳೆರಡಕ್ಕೂ ನಾಲ್ಕು ರೆಕ್ಕೆಗಳಿವೆ; ಎರಡೂ ಚಲಿಸಿ ಹಾರಾಡಿ ರಸವನ್ನು ಹೀರುತ್ತವೆ; ಅಲ್ಲದೆ ನಂಜು ರೋಗವನ್ನು ಸಹ ಹರಡುತ್ತವೆ. ಈ ಪಂಗಡದ ಶತ್ರುಗಳು ಕಬ್ಬಿನ ಬೂಷ್ಟು ತಿಗಣೆ ಮತ್ತು ಬಿಳಿತಿಗಣೆ, ಬತ್ತದ ಬೂಷ್ಟೆ ತಿಗಣೆ, ಕಿತ್ತಳೆ ಜಾತಿ ಗಿಡಮರಗಳ ಬಿಳಿ ತಿಗಣೆ, ಕಾಫಿಯ ಹಸಿರು ತಿಗಣೆ, ಕ್ರೋಟನ್ ಗಿಡಗಳ ಬೂಷ್ಟು ತಿಗಣೆ, ಹುಣಸೆ, ಮೆಣಸು ಮೊದಲಾದ ಗಿಡಮರಗಳ ಶಲ್ಕ ಕೀಟಗಳು, ಮಾವಿನ ಬೂಷ್ಟು ತಿಗಣೆ, ಹರಳಿನ ಬಿಳಿ ತಿಗಣೆ, ಇತ್ಯಾದಿ. ಈ ಕೀಟಗಳ ಹತೋಟಿಗೆ ಅವು ಹೆಚ್ಚಾಗಿ ಮುತ್ತಿರುವ ಸಸ್ಯ ಭಾಗಗಳನ್ನು ಕತ್ತರಿಸಿ ನಾಶಮಾಡಬೇಕು. ಆಮೇಲೆ ಸಸ್ಯಹೇನುಗಳಿಗೆ ಮಾಡಿದಂತೆ ಸ್ಪರ್ಶ ಕೀಟನಾಶಕವನ್ನು ಉಪಯೋಗಿಸಬಹುದು. ಈ ಕೀಟಗಳನ್ನು ಹರಡುವ ಇರುವೆಗಳಿದ್ದಲ್ಲಿ ಅವುಗಳ ಗೂಡನ್ನು ನಾಶಮಾಡಬೇಕು. ನೈಸರ್ಗಿಕ ಶತ್ರುಗಳ ಉಪಯೋಗದಿಂದ ಅವನ್ನು ಹತೋಟಿಯಲ್ಲಿಡಬಹುದು.[೨]

ಸಸ್ಯತಿಗಣೆಗಳು

[ಬದಲಾಯಿಸಿ]

ಇವು ಸಹ ರಸವನ್ನು ಹೀರುವ ತಿಗಣೆಗಳೇ. ಇವು ಹಲವಾರು ಕುಲಗಳಿಗೆ ಸೇರಿವೆ. ವಾಸನೆ ತಿಗಣೆಗಳು, ಸೊಳ್ಳೆ ತಿಗಣೆಗಳು, ಜರತಾರಿ ತಿಗಣೆಗಳು, ನೆಗೆಯುವ ತಿಗಣೆಗಳು, ನೊರೆತಿಗಣೆಗಳು ಮತ್ತು ಎಲೆ ಜಿಗಿಗಳು ಇತ್ಯಾದಿ. ವಾಸನೆ ತಿಗಣೆಗಳು ಗಾತ್ರದಲ್ಲಿ ದಪ್ಪ ಮತ್ತು ಮಧ್ಯಸ್ಥ. ಇವು ಅನೇಕ ಬಗೆಯ ಬೆಳೆಗಳಿಗೆ ಬಿದ್ದು ರಸವನ್ನು ಹೀರುತ್ತವೆ; ದುರ್ಗಂಧವನ್ನು ಹೊರಸೂಸುತ್ತವೆ. ಉದಾಹರಣೆಗೆ, ನೀರ ವಿರಿಡುಲ ಎಂಬ ದಪ್ಪ ಹಸಿರು ತಿಗಣೆ ಹಲವು ಬೆಳೆಗಳಿಗೆ ಬೀಳುತ್ತದೆ. ಕೋಸಿನ ಬೆಗ್ರಾಡ ಕ್ರೂಸಿಫೆರೇರಂ, ಬತ್ತದ ಪಟ್ಟೆ ತಿಗಣೆ, ಟೆಟ್ರೋಡ ಹಿಸ್ಟೆರಾಯ್ಡಿಸ್, ಅವರೆಯ ಕೋಪ್ಟೊಸೋಮ ಕ್ರಿಬ್ರೇರಿಯ, ಕುಂಬಳದ ಅಸ್ಪಾಂಗೋಪಸ್ ಜಾನಸ್, ಬತ್ತದ ಗಂಧಿ ತಿಗಣೆ, ಲೆಪ್ಪೊಕೋರಿಸ ಅಕ್ಯೂಟ, ಹತ್ತಿ ಕೆಂಪು ತಿಗಣೆ, ಡಿಸ್ಟೆರ್ಕಸ್ ಸಿಂಗುಲೇಟಸ್ ಮತ್ತು ಮಬ್ಬುತಿಗಣೆ ಆಕ್ಸಿಕೆರೀನಸ್ ಲೀಟಸ್- ಇವು ಪೆಂಟಟೋಮಿಡಿ, ಕೊರಿಯಿಡಿ, ಲೈಗಿಯಿಡಿ, ಪೈರ್ಹೊಕೋರಿಡಿ ಕುಟುಂಬಗಳ ಉದಾಹರಣೆಗಳು. ಸೊಳ್ಳೆ ತಿಗಣೆಗಳು ಚುರುಕು, ಶರೀರ ಕಿರಿದು, ಕಾಲುಗಳು ಉದ್ದ; ಕೆಲವು ಕೆಟ್ಟ ಶತ್ರುಗಳು. ಜೋಳದ ಆರುಕಾಲು ಚಿಟ್ಟೆ- ಕ್ಯಾಲೊಕೋರಿಸ್ ಆಂಗಸ್ಟೇಟಸ್, ವೀಳ್ಯದೆಲೆ ತಿಗಣೆ-ಡಿಸ್ಫಿಂಕ್ಟಸ್ ಪೊಲೈಟಸ್, ಟಿಸೊಳ್ಳೆ-ಹೆಲೊಪೆಲ್ಟಿಸ್ ಆಂಟೊನೈ. ಇವು ಕ್ಯಾಪ್ಸಡೀ (ಮಿರಿಡೀ) ಕುಲಕ್ಕೆ ಸೇರಿವೆ. ಜರತಾರಿ ತಿಗಣೆಗಳು ಬಹಳ ಸಣ್ಣ, ಸಸ್ಯಗಳ ಚಿಗುರು, ಎಳೆಯ ರೆಂಬೆಗಳ ಮೇಲೆ ಇವು ಅಸಂಖ್ಯಾತವಾಗಿರುತ್ತವೆ. ಅವುಗಳ ರೆಕ್ಕೆಗಳು ಬಹಳ ನವಿರು ಜರತಾರಿ ಮಾದರಿಯಂತೆ; ಆದ್ದರಿಂದ ಆ ಹೆಸರು, ಬದನೆ, ಬಾಳೆ, ಮಲ್ಲಿಗೆ, ಸ್ಫಟಿಕ ಇತ್ಯಾದಿ ಗಿಡಗಳಲ್ಲಿ ಈ ಬಗೆಯ ತಿಗಣೆಗಳಿದ್ದು ಆಯಾ ಗಿಡದ ರಸವನ್ನು ಹೀರುತ್ತವೆ. ನೊರೆತಿಗಣೆಗಳ ಮರಿಗಳು ದಪ್ಪ. ಇವು ಸಸ್ಯಗಳ ಮೇಲೆ ಉಗುಳಿನಂಥ ನೊರೆಯನ್ನು ಸ್ರವಿಸಿ ಅದರೊಳಗಿದ್ದು ಸಸ್ಯ ರಸವನ್ನು ಹೀರುತ್ತವೆ. ಹಲಸಿನ ಮರಗಳ ಮೇಲೆ ರೆಂಬೆ ಕೊಂಬೆಗಳ ಮೇಲೆ ನೊರೆ ತುಂಬಿದ್ದು ಅದರೊಳಗೆ ಮರಿ ತಿಗಣೆಗಳಿರುತ್ತವೆ. ಈ ಜಾತಿ ತಿಗಣೆಗಳಲ್ಲಿ ಹಲಸಿನ ಕಾಸ್ಮೊಕಾರ್ಟರಿಲೇಟ ಎಂಬುದು ಮಾತ್ರ ನಷ್ಟಪಡಿಸುವ ಶತ್ರು. ಎಲೆಜಿಗಿಗಳು ಫಲ್ಗೋರಿಡಿ, ಜಾಸಿಡಿ (ಸಿಕಡೆಲ್ಲಿಡಿ) ಕುಲಗಳಿಗೆ ಸೇರಿವೆ. ರಸ ಹೀರುವ ಈ ಕೀಟಗಳ ಗಾತ್ರಗಳಲ್ಲಿ ವ್ಯತ್ಯಾಸ ಉಂಟು. ಬಹು ಸಣ್ಣ ಗಾತ್ರದಿಂದ ಮಧ್ಯಸ್ಥಗಾತ್ರದವರೆಗೂ ಇವೆ. ಗಿಡಗಳ ಮೇಲೆ ಇವು ಎಲ್ಲ ಸ್ಥಳಗಳಲ್ಲೂ ಇರುತ್ತವೆ. ಮುಖ್ಯವಾದವು ಮಾವಿನ ಹೂಗೊಂಚಲನ್ನು ಒಣಗಿಸುವ ಇಡಿಯೊಸಿರಸ್ ಬಗೆಗಳು, ಕಬ್ಬಿನ ಪೈರಿಲ ಪರ್‍ಪ್ಯೂಸಿಲ; ಬತ್ತದ ನಿಫೊಟೆ ಟಿಕ್ಸ್, ಟೆಟ್ಟೆಗೋನಿಯಲ್ಲ; ಹತ್ತಿಯ ಎಂಪೊವಾಸ್ಕ ಡಿವಾಸ್ಟೆನ್ಸ್, ಜೋಳದ ಕಾಂಡದ ತಿಗಣೆ, ಪೆರಿಗ್ರೈನಸ್ ಮೈಡಿಸ್-ಇವು ಆಗಾಗ ವಿಶೇಷವಾಗಿ ಹೆಚ್ಚಿ ನಷ್ಟಪಡಿಸುತ್ತವೆ. ಈ ಕೀಟಗಳ ನಡತೆಯನ್ನು ಅನುಸರಿಸಿ ಹತೋಟಿ ಕ್ರಮಗಳನ್ನು ನಿರೂಪಿಸಬೇಕು. ಕೆಲವನ್ನು ದೀಪಕ್ಕೆ ಆಕರ್ಷಿಸಿ ಕೊಲ್ಲಬಹುದು. ಸಾಧ್ಯವಿಲ್ಲದಿದ್ದರೆ ಬಲೆಯನ್ನು ಬೀಸಿ ಹಿಡಿದು ಇವನ್ನು ಕೊಲ್ಲಬಹುದು. ಕೀಟನಾಶಕಗಳ ಉಪಯೋಗದಿಂದ ಇವುಗಳ ಹತೋಟಿ ಸುಲಭ.

ಥ್ರಿಪ್ಸ್

[ಬದಲಾಯಿಸಿ]

ಇವು ಥೈಸನಾಪ್ಟರ ತರಗತಿಯ ಕೀಟಗಳು. ಗಾತ್ರದಲ್ಲಿ ಸಣ್ಣ. ತಮ್ಮ ಮೂತಿಯಿಂದ ಸಸ್ಯಭಾಗಗಳನ್ನು ಉಜ್ಜಿ ಹೊರಸೂಸಿದ ರಸವನ್ನು ಹೀರುತ್ತವೆ. ಕೆಲವು ಸಸ್ಯಗಳ ಮೇಲೆ ಗಂಟುಗಳನ್ನು ಮಾಡುತ್ತವೆ. ಇವುಗಳಿಂದಾಗುವ ನಷ್ಟ ಸ್ವಲ್ಪ ಹೆಚ್ಚು ಕಡಿಮೆ ಸಸ್ಯ ಹೇನುಗಳು ಮತ್ತು ಬೂಷ್ಟು ತಿಗಣೆಗಳಿಂದಾಗುವಂತೆಯೇ. ಕೆಲವು ಥ್ರಿಪ್ಸ್‍ಗಳಿಂದ ಅಷ್ಟೇನೂ ನಷ್ಟವಾಗದಿದ್ದರೂ ಅವು ಪೀಡೆಗಳಂತೂ ಹೌದು. ಉದಾಹರಣೆಗೆ ಬತ್ತದ ಥ್ರಿಪ್ಸ್ ಒರೈಜಿ, ನೀರುಳ್ಳಿ ಬೆಳ್ಳುಳ್ಳಿಗಳ ಥ್ರಿಪ್ಸ್ ಟಬಾಸಿ, ಮೆಣಸೆಮುರ್ಡರೋಗದ ಸರ್ಟೊಥ್ರಿಪ್ಸ್ ಡಾರ್ಸಾಲಿಸ್; ಅರಿಸಿನದ ಪ್ಯಾಂಕಿಟೊಥ್ರಿಪ್ಸ್, ದ್ರಾಕ್ಷಿಯ ರ್ಹಿಪಿಪೋರೊಥ್ರಿಪ್ಸ್; ಕೋಕೋ ಮೇಲಿನ ಸೆಲನೊಥ್ರಿಪ್ಸ್ ಇತ್ಯಾದಿ. ಹೊಗೆಸೊಪ್ಪಿನ ಕಷಾಯದಂಥ ಸ್ಪರ್ಶನಾಶಕದಿಂದ ಥ್ರಿಪ್ಸ್ ಕೀಟಗಳನ್ನು ಹತೋಟಿಗೊಳಿಸಬಹುದು.

ಕೊರೆಯುವ ಕೀಟಗಳು

[ಬದಲಾಯಿಸಿ]

ಇವು ಸಸ್ಯಗಳ ಬೇರು, ಕಾಂಡ, ರೆಂಬೆ, ಮೊಗ್ಗು, ಹಣ್ಣು ಬೀಜಗಳನ್ನು ಕೊರೆದು ಅಂಗಾಂಶವನ್ನು ತಿನ್ನುತ್ತವೆ. ಲೆಪಿಡಾಪ್ಟರ, ಕೋಲಿಯಾಪ್ಟರ ಮತ್ತು ಡಿಪ್ಟರ ಗಣಗಳಿಗೆ ಸೇರಿವೆ. ಇವುಗಳ ಮರಿಗಳು ಕ್ಯಾಟರ್‍ಪಿಲ್ಲರ್, ಗ್ರಬ್ ಮತ್ತು ಮ್ಯಾಗಟ್. ಇವು ಸಸ್ಯಗಳನ್ನು ಕೊರೆಯಲು ತೊಡಗುತ್ತವೆ. ತಾಯಿ ಕೀಟಗಳು ತಮ್ಮ ಮೊಟ್ಟೆಗಳನ್ನು ಆಸರೆ ಸಸ್ಯಗಳ ಮೇಲೆ ಅಥವಾ ತೊಗಟೆ ಕೆಳಗೆ ಇಡುತ್ತವೆ. ಮೊಟ್ಟೆಗಳಿಂದ ಬಂದ ಮರಿಗಳು ಕಾಂಡ, ಎಲೆ ಇತ್ಯಾದಿ ಭಾಗಗಳನ್ನು ಕೊರೆದು ಒಳಗಡೆಯೇ ಬೆಳೆದು ಕೋಶಗಳಾಗಿ ಆಮೇಲೆ ರೆಕ್ಕೆಬಂದ ಕೀಟಗಳಾಗಿ ಹೊರಕ್ಕೆ ಬರುತ್ತವೆ. ಈ ಪಂಗಡದ ಕೀಟಗಳಲ್ಲಿ ಮುಖ್ಯವಾದವು ಬತ್ತದ ಕಾಂಡವನ್ನು ಕೊರೆಯುವ ಷೀನೊಬಿಯಸ್ ಇನ್‍ಸೆರ್ಟುಲಾಸ್, ಮಾವಿನ ಕಾಂಡವನ್ನು ಕೊರೆಯುವ ದುಂಬಿ, ಬ್ಯಾಟೊಸಿರ ರೂಫೊಮ್ಯಾಕ್ಯುಲೇಟಸ್, ಕಿತ್ತಳೆ ರೆಂಬೆ, ತೊಗಟೆಯನ್ನು ಕೊರೆಯುವ ಇಂಡಾರ್ಬೆಲ ಟೆಟ್ರೋನಿಸ್, ಜೋಳದ ಕಾಂಡದ ನೊಣ, ಎಥಿರಿಗೋನ ಇಂಡಿಕ, ಶೇಂಗದ ಬೇರಿನ ಭಾಗವನ್ನು ಕೊರೆಯುವ ಸ್ಫೆನಾಪ್ಟಿರ ಪೆರೊಟೆಟ್ಟಿ, ದ್ರಾಕ್ಷಿಯ ಕಾಂಡವನ್ನು ಸತ್ತು ಕೊರೆಯುವ ಸ್ಥೆನಿಯಾಸ್ ಗ್ರೈಸೇಟರ್, ಕಬ್ಬಿನ ಪೈರನ್ನು ಕೊರೆಯುವ ಕೈಲೊಟ್ರಿಯ ಇನ್‍ಫಸ್ಕಟೆಲ್ಲಸ್ ಬದನೆ ಸುಳಿ, ಕಾಯನ್ನು ಕೊರೆಯುವ ಲೂಸಿನೋಡಿಸ್ ಆರ್ಬೊನಾಲಿಸ್, ಹತ್ತಿ ಕಾಯಿಗಳ ಪ್ಲಾಟಿಡ್ರ ಗಾಸಿಪಿಯೆಲ್ಲ, ಎರಿಯಾಸ್ ಬಗೆಗಳು ಇತ್ಯಾದಿ. ಕೊರೆಯುವ ಕೀಟಗಳ ಹತೋಟಿ ಸುಲಭವಲ್ಲ. ಅಂಗಾಂಶದೊಳಗಿರುವ ಕೀಟಗಳಿಗೆ ಕೀಟನಾಶಕಗಳು ತಗಲುವುದಿಲ್ಲ. ಅವುಗಳ ನಿವಾರಣೆ ಮುಖ್ಯ. ಅವುಗಳ ತಾಯಿ ಕೀಟಗಳ ಮೊಟ್ಟೆಗಳನ್ನಿಡುವುದನ್ನು ತಪ್ಪಿಸಬೇಕು. ಅದಕ್ಕಾಗಿ ಕೀಟನಾಶಕಗಳನ್ನು ಬಳಸಬಹುದು. ಕೊರೆದ ಭಾಗಗಳನ್ನು ಹುಳುಗಳ ಸಹಿತ ಕತ್ತರಿಸಿ ಸುಡಬೇಕು.

ಮೇಲ್ಮೈ ಕೀಟಗಳು

[ಬದಲಾಯಿಸಿ]

ಬೀಜಗಳು ಮೊಳೆತು ಮೇಲಕ್ಕೆ ಬರುತ್ತಿರುವ ಸಸಿಗಳನ್ನು ಇವು ನಷ್ಟಪಡಿಸುತ್ತವೆ. ಆಗಾಗ ಬೆಳೆದ ಗಿಡಗಳಿಗೂ ಕೆಲವು ಬೀಳುತ್ತವೆ. ಅವು ಭೂಮಿಯ ಮೇಲಿರುತ್ತವೆ; ಹಗಲಿನಲ್ಲಿ ಸಾಮಾನ್ಯವಾಗಿ ಅಡಗಿರುತ್ತವೆ. ಕತ್ತರಿಸುವ ಹುಳುಗಳು, ಮಿಡತೆಗಳು, ಮೇಲ್ಮೈ ದುಂಬಿಗಳು ಈ ಗುಂಪಿಗೆ ಸೇರಿವೆ. ಕತ್ತರಿಸುವ ಹುಳುಗಳು ರಾತ್ರಿಯಲ್ಲಿ ಹರಿದಾಡಿ ಸಸಿಗಳ ಬುಡವನ್ನು ಕಡಿಯುತ್ತವೆ. ಹಿಂದಿನ ಸಾಯಂಕಾಲ ಸರಿಯಾಗಿದ್ದ ಗಿಡಗಳು ಮಾರನೇ ಬೆಳಗ್ಗೆ ಮುರಿದುಬಿದ್ದಿರುವ ದೃಶ್ಯ ಸಾಮಾನ್ಯ. ಅದು ಕತ್ತರಿಸುವ ಹುಳುಗಳಿಂದಾದದ್ದು. ಈ ಬಗೆಯ ಹುಳುಗಳು ವರ್ತುಳ, ಮೃದು, ದಪ್ಪ, ಅವುಗಳ ತಾಯಿ ಪತಂಗಗಳು ಬೂದು-ಕಪ್ಪು, ಹುಳುಗಳಿಗೆ ತೊಂದರೆಯಾದರೆ ಉಂಗುರಗಳಂತೆ ಸುತ್ತಿಕೊಳ್ಳುತ್ತವೆ. ಕೋಸು, ಮೆಣಸು, ನೀರುಳ್ಳಿ, ಬದನೆ ಮುಂತಾದ ಗಿಡಗಳಿಗೆ ಬೀಳುತ್ತವೆ. ಸಂಖ್ಯೆಯಲ್ಲಿ ಹೆಚ್ಚಿದ್ದಾಗ ಒಟ್ಟಾಗಿ ಸ್ಥಳದಿಂದ ಸ್ಥಳಕ್ಕೆ ಹರಿದು ಹೋಗುತ್ತವೆ. ಬೆಳೆದ ಹುಳುಗಳು ಭೂಮಿಯೊಳಗೆ ಕೋಶಗಳಾಗಿ ಆಮೇಲೆ ಚಿಟ್ಟೆಗಳು ಹೊರಕ್ಕೆ ಬರುತ್ತವೆ. ಉದಾಹರಣೆಗೆ ಹೊಗೆಸೊಪ್ಪಿನ ಪ್ರೊಡಿನಿಯ, ರಾಗಿಯ ಲ್ಯಾಫಿಗ್ಮ, ಬತ್ತದ ಸಿರ್ಫಿಸ್ ಮತ್ತು ಸ್ಪೊಡಾಪ್ಟಿರ, ಆಲೂಗಡ್ಡೆಯ ಯುಕ್ಸೋವ ಇತ್ಯಾದಿ. ಕೆಲವು ಮಿಡತೆಗಳು, ದುಂಬಿಗಳು ಕತ್ತರಿಸುವ ಹುಳಗಳಂತೆ ವರ್ತಿಸಿದರೂ ಅವುಗಳಿಂದ ಆಗುವ ನಷ್ಟ ಕಡಿಮೆ. ಈ ಕೀಟಗಳು ಬಣ್ಣದಲ್ಲಿ ಅವುಗಳ ಸನ್ನಿವೇಶಕ್ಕೆ ಹೊಂದಿಕೊಂಡು ಸುಲಭವಾಗಿ ಕಾಣಿಸದೆ ತಪ್ಪಿಸಿಕೊಳ್ಳುತ್ತವೆ. ಮಿಡತೆಗಳಲ್ಲಿ ಕ್ರೋಟೊಗೋನಸ್, ಈಲೋಪಸ್, ಅಟ್ರ್ಯಾಕ್ಟೊಮಾರ್ಫ, ಆಥ್ರ್ಯಾಕ್ರಿಸ್, ಹೈರೊಗ್ಲಿಫಸ್, ಕೋಲ್ಮೇನಿಯ ಮೊದಲಾದವು ಮುಖ್ಯ. ದುಂಬಿಗಳಲ್ಲಿ ಚಿಕ್ಕಟದುಂಬಿಗಳು, ಮೂತಿ ಹುಳುಗಳು, ಗೋನೊಸಿಫ್ಯಾಲಂ, ಓಪಟ್ರೋನ್ ಮೊದಲಾದವು ದ್ರಾಕ್ಷಿ, ಹೊಗೆಸೊಪ್ಪು, ಆಲೂಗಡ್ಡೆಗಳಿಗೆ ಬೀಳುತ್ತವೆ. ಈ ಬಗೆಯ ಕೀಟಗಳ ಹತೋಟಿಗೆ ವಿಷಬೆರೆತ ಆಹಾರವನ್ನು ಹಾಕಿ ಅವು ಅದನ್ನು ತಿಂದು ಸಾಯುವಂತೆ ಮಾಡಬಹುದು. ಬಲೆ ಚೀಲ ಮೊದಲಾದ ಸಾಧನಗಳಿಂದ ಅವನ್ನು ಹಿಡಿದು ನಾಶಮಾಡಬೇಕು.

ಭೂಮಿಯೊಳಗಿನ ಕೀಟಗಳು

[ಬದಲಾಯಿಸಿ]

ಈ ಬಗೆಯ ಕೀಟಗಳಲ್ಲಿ ಮುಖ್ಯವಾದವು ಚಿಮ್ಮಂಡೆಗಳು, ಗೆದ್ದಲು, ಇರುವೆಗಳು, ತಂತಿಹುಳುಗಳು ಮತ್ತು ಗೊಬ್ಬರದ ಹುಳುಗಳು, ಚಿಮ್ಮಂಡೆಗಳು ತೇವವಿರುವ ಸ್ಥಳಗಳು, ತೋಟಗಳು ಮತ್ತು ತರಕಾರಿ ತಾಕುಗಳಲ್ಲಿದ್ದು ರಾತ್ರಿ ಹೊರಕ್ಕೆ ಬಂದು ಸಸ್ಯಗಳ ಬೇರುಗಳನ್ನು ಕಡಿಯುತ್ತವೆ. ಆಗಾಗ ರಾತ್ರಿ ದೀಪಕ್ಕೆ ಮನೆಗಳಿಗೆ ಬರುವುದೂ ಉಂಟು. ಅವು ಜಿರ್ ಜಿರ್ ಎಂದು ಜೀರುವುದನ್ನು ಕೇಳಬಹುದು. ತಂತಿ ಹುಳುಗಳು ರಿಬ್ಬನ್ನಿನಂತೆ ಉದ್ದ, ಕ್ಲಿಕ್ ದುಂಬಿ ಮರಿಗಳು ಆಗಾಗ ಕೆಲವು ಸಸ್ಯಗಳ ಬೇರುಗಳನ್ನು ಮತ್ತು ಆಲೂಗಡ್ಡೆಗಳನ್ನು ನಷ್ಟ ಪಡಿಸಿದರೂ ಈ ದೇಶದಲ್ಲಿ ಅವು ಸಾಮಾನ್ಯವಲ್ಲ. ಗೆದ್ದಲು ಹುಳಗಳು ಮರಮುಟ್ಟು ಮತ್ತು ಒಣಗಿದ ವಸ್ತುಗಳನ್ನು ತಿಂದು ವಿಶೇಷ ನಷ್ಟಪಡಿಸುತ್ತವೆ. ಕೆಲವು ಸ್ಥಳಗಳಲ್ಲಿ ಕಬ್ಬು, ಶೇಂಗ, ದ್ರಾಕ್ಷಿ, ಗೋಧಿ ಮೊದಲಾದ ಸಸ್ಯಗಳಿಗೆ ಗೆದ್ದಲು ಬಿದ್ದು ನಷ್ಟಪಡಿಸುತ್ತದೆ. ಇರುವೆಗಳು ಮನೆಗಳಲ್ಲಿ ಪೀಡೆಗಳು. ಬೆಳೆಗಳಿಗೆ ಬೀಳುವುದು ಕಡಿಮೆ. ಸಣ್ಣ ಕೆಂಪಿರುವೆಗಳು ಬದನೆ ಕಬ್ಬು ಇತ್ಯಾದಿ ಸಸಿಗಳ ಬುಡವನ್ನು ಕಚ್ಚಿ ಸ್ವಲ್ಪ ನಷ್ಟಪಡಿಸುತ್ತವೆ. ಅವು ಸಸ್ಯ ಹೇನು, ಶಲ್ಕಕೀಟ, ಬೂಷ್ಟು ತಿಗಣೆ, ಮುಂತಾದ ಸಿಹಿ ಅಂಟನ್ನು ವಿಸರ್ಜಿಸುವ ತಿಗಣೆಗಳಂಥ ರಸವನ್ನು ಹೀರುವ ಕೀಟಗಳನ್ನು ಹರಡುತ್ತವೆ. ಕೆಂಜಿಗವಂತೂ ಹಣ್ಣಿನ ಮರಗಳು, ಕಾಫಿ ಗಿಡಗಳ ಮೇಲಿದ್ದು ರಸಹೀರುವ ಕೀಟಗಳನ್ನು ಹರಡುವುದಲ್ಲದೆ ಕೆಲಸಗಾರರಿಗೂ ಉಪದ್ರವಕಾರಿಗಳಾಗುತ್ತವೆ. ಗೊದ್ದಗಳು ಸಸ್ಯಗಳ ಬುಡಗಳಲ್ಲಿ ಕೊರೆದು ಹತ್ತಿ ಜೋಳ ರಾಗಿ ಮುಂತಾದ ಬೆಳೆಗಳಿಗೆ ಸಸ್ಯಹೇನುಗಳನ್ನು ಹರಡುತ್ತವೆ. ಗೊಬ್ಬರದ ಹುಳುಗಳು ಸಸ್ಯಗಳು ಬೇರುಗಳನ್ನು ತಿಂದು ನಷ್ಟಪಡಿಸುತ್ತವೆ. ಕಾಕಷೇಫರ್ ದುಂಬಿಗಳ ಮರಿಗಳು. ಇವು ಗೊಬ್ಬರದ ಗುಂಡಿ ಮತ್ತು ಭೂಮಿಯೊಳಗಿರುತ್ತವೆ. ಬಣ್ಣದಲ್ಲಿ ಮಾಸಲು ಬಿಳುಪು, ಶರೀರ ಬಗ್ಗಿರುತ್ತದೆ; ದಪ್ಪ, ಮಾಂಸಲ; ಹೊಲಗಳನ್ನು ಉತ್ತಾಗ ಅವನ್ನು ನೇಗಿಲ ಸಾಲಿನಲ್ಲಿ ಆಗಾಗ ಕಾಣಬಹುದು; ಕಾಗೆ, ಮೈನ ಮೊದಲಾದ ಪಕ್ಷಿಗಳು ಅವನ್ನು ತಿನ್ನುತ್ತವೆ. ಗುಲಾಬಿ, ದ್ರಾಕ್ಷಿ, ಕಬ್ಬು, ಹುರುಳಿ, ಕಾಫಿ ಮುಂತಾದ ಹಲವಾರು ಬೆಳೆಗಳಿಗೆ ಇವು ಶತ್ರುಗಳು. ಹಸಿರು ಮೈದಾನಕ್ಕಂತೂ ಇವುಗಳಿಂದ ತೀವ್ರ ನಷ್ಟ. ದುಂಬಿಗಳು ಏಪ್ರಿಲ್, ಮೇ ತಿಂಗಳುಗಳಲ್ಲಿ ಮಳೆ ಬಿದ್ದ ಅನಂತರ ದೀಪದ ಬೆಳಕಿಗೆ ಬರುತ್ತವೆ. ಇವುಗಳ ಹತೋಟಿಕ್ರಮಗಳು ವಿವಿಧ. ಆಳವಾಗಿ ಉಳುವುದು, ಹುತ್ತಗಳನ್ನು ಅಗೆದು ರಾಣಿ ಗೆದ್ದಲನ್ನು ಕೊಲ್ಲುವುದು, ದೀಪದ ಬೆಳಕಿನಲ್ಲಿ ತಾಯಿದುಂಬಿಗಳನ್ನು ಹಿಡಿಯುವುದು ಮೊದಲಾದ ಕ್ರಮಗಳಿಂದ ಉಪಯೋಗ ಉಂಟು.

ಎಲೆಗಳನ್ನು ತಿನ್ನುವ ಕ್ಯಾಟರ್‍ಪಿಲ್ಲರುಗಳು

[ಬದಲಾಯಿಸಿ]

ಇವು ಬಹುಮಟ್ಟಿಗೆ ಬೆಳೆದ ಗಿಡಗಳ ಎಲೆಗಳನ್ನು ತಿನ್ನುತ್ತವೆ. ಅವು ವಿವಿಧ. ಕೆಲವು ಮೈತುಂಬ ಕರಡಿಯಂತೆ ಕೂದಲು ಇರುವ ಕಂಬಳಿಹುಳುಗಳು. ಕೆಲವು ಮೃದು; ಕೆಲವಕ್ಕೆ ಮೈಮೇಲೆ ಮುಳ್ಳುಗಳು, ಕೊಂಬು, ಮೊದಲಾದ ರಚನೆಗಳಿವೆ. ಕೆಂಪುತಲೆ ಕಂಬಳಿಹುಳು ಶೇಂಗ, ಹತ್ತಿ, ರಾಗಿ, ಜೋಳ, ಕಳೆಗಿಡಗಳು ಮೊದಲಾದ ಸಸ್ಯಗಳಿಗೆ ವಿಶೇಷ ನಷ್ಟಪಡಿಸುತ್ತದೆ. ಅದು ಸರ್ವಭಕ್ಷಕ. ಅದೇ ರೀತಿ ಕಪ್ಪುತಲೆ ಕಂಬಳಿಹುಳುಗಳು ತಂಪಾಗಿರುವ ಕಡೆಗಳಲ್ಲಿದ್ದು ಚಳಿಗಾಲದಲ್ಲಿ ಹೆಚ್ಚಿ ಸಿಕ್ಕಿದ ಸಸ್ಯಗಳನ್ನೆಲ್ಲ ತಿನ್ನುತ್ತವೆ. ಇವಲ್ಲದೆ ಯಸ್ಟಿಗ್‍ಮೆನ್ ಲ್ಯಾಕ್ಟಿನಿಯ, ಪೆರಿಕ್ಯಾಲಿಯ ರಿಸಿನಿ, ಯುಟೆಥೈಸ್ ಲೂರಿಕ್ಸ್, ಇವೆಲ್ಲವೂ ಕಂಬಳಿಹುಳುಗಳೇ. ಕುಚ್ಚು ಕಂಬಳಿ ಹುಳುಗಳಾದ ಯೂಪ್ರಾಕ್ಟಿಸ್ ಬಗೆಗಳು ತೊಗರಿ, ಗೋಗು, ಹರಳು, ಗುಲಾಬಿ ಇತ್ಯಾದಿ ಬೆಳೆಗಳಿಗೆ ಬೀಳುತ್ತವೆ. ತುರುಚೆ ಹುಳುಗಳ ಮುಳ್ಳು ಕೂದಲುಗಳು ತಗುಲಿದ ಕಡೆ ಬಹಳ ನವೆಯುಂಟಾಗುತ್ತದೆ. ಇವೆಲ್ಲ ಪತಂಗದ ಮರಿಗಳು. ಇವಲ್ಲದೆ ಚಿಟ್ಟೆಮರಿಗಳೂ ಕ್ಯಾಟರ್‍ಪಿಲ್ಲರ್‍ಗಳೇ. ಅವುಗಳ ಮೈಮೇಲೂ ಮುಳ್ಳು ಕೊಂಬುಗಳಿರುತ್ತವೆ. ಉದಾಹರಣೆಗೆ ಬತ್ತದ ಮೆಲನೈಟಿಸ್ ಇಸ್ಮೆನ್, ಹರಳಿನ ಎರ್ಗೋಲಿಸ್ ಮೆರಿಯೋನಿ, ಮಾವಿನ ಯೂಥ್ಯಾಲಿಯ ಗರುಡ. ಎಲೆಗಳನ್ನು ತಿನ್ನುವ ಬೇರೆ ಕ್ಯಾಟರ್‍ಪಿಲ್ಲರ್‍ಗಳ ನಡತೆ ವಿವಿಧ-ಕೆಲವು ಎಲೆಗಳನ್ನು ಸುರುಳಿಸುತ್ತಿ ಕೆಲವು ಎಲೆಗಳನ್ನು ಮಡಿಸಿ, ಕೆಲವು ಎಲೆಗಳನ್ನು ಕೊರೆದು ಮತ್ತೆ ಕೆಲವು ಎಲೆಗಳನ್ನು ಹೆಣೆದು ತಿನ್ನುತ್ತವೆ. ಹತ್ತಿಯ ಸೈಲೆಪ್ಟ ಡೆರೋಗೇಟ, ಬದನೆಯ ಯೂಬ್ಲೆಮ ಓಲಿವೇಶಿಯ, ಶೇಂಗದ ಸ್ಟೋಮಾಪ್ಟೆರಿಕ್ಸ್ ಬಗೆ ಮುಂತಾದವು ಉದಾಹರಣೆಗಳು. ಇವಲ್ಲದೆ ಡೇಗೆ ಪಂಗಡದ ಮರಿಗಳಾದ-ಆಕಿರೊನ್ಷಿಯ, ಹೆರ್ಸ್ ಕನವಾಲ್ವುಲೈ. ಡೈಲೆಫೈಲ ನಿರಿಯೈ ದಪ್ಪವಾಗಿವೆ. ಇವುಗಳ ಮೈಮೇಲೆ ಹಿಂಭಾಗದಲ್ಲಿ ಒಂದು ಕೊಂಬಿದೆ. ಅವರೆ, ಗೆಣಸು, ಕಣಗಿಲು ಗಿಡಗಳ ಎಲೆಗಳನ್ನು ಇವು ವಿಶೇಷವಾಗಿ ತಿನ್ನುತ್ತವೆ. ಪತಂಗಗಳನ್ನು ದೀಪಕ್ಕೆ ಆಕರ್ಷಿಸಿ ನಾಶಮಾಡಬಹುದು. ಮೊಟ್ಟೆಗಳನ್ನು ಆರಿಸಿ ಆಸರೆ ಸಸ್ಯಗಳನ್ನು ನಾಶಮಾಡಿ ಭೂಮಿಯನ್ನು ಉತ್ತು ಅಗೆದು ಕೋಶಗಳನ್ನು ಹೊರಗೆಡವಿ ಪತಂಗಗಳನ್ನು ಕಡಿಮೆ ಮಾಡಬಹುದು. ಸುತ್ತಿರುವ ಮತ್ತು ಮಡಿಸಿರುವ ಎಲೆಗಳನ್ನು ಹುಳುಗಳ ಸಹಿತ ಕಿತ್ತು ನಾಶಮಾಡಬೇಕು.

ದುಂಬಿಗಳು

[ಬದಲಾಯಿಸಿ]

ಈ ಕೀಟಗಳೂ ಎಲೆಗಳನ್ನು ತಿನ್ನುತ್ತವೆ. ಸಾಮಾನ್ಯವಾದವು ಕಾಕ್‍ಷೇಫರ್‍ಗಳು ಮೂತಿದುಂಬಿಗಳು, ಗುಲಗಂಜಿ ಹುಳುಗಳು, ಬೊಬೆ ದುಂಬಿಗಳು, ಚಿಕ್ಕಟದುಂಬಿಗಳು, ಮಿಲ್ಲೊಸಿರಸ್ ಬಗೆ, ಮೂತಿದುಂಗಿಗಳು, ಜೋಳ, ರಾಗಿ ಶೇಂಗ ಇತ್ಯಾದಿ ಹಲವಾರು ಸಸ್ಯಗಳ ಎಲೆಗಳನ್ನು ತಿನ್ನುತ್ತವೆ. ಇತರ ದುಂಬಿಗಳಲ್ಲಿ ಮುಖ್ಯವಾದವು ತೆಂಗಿನ ರ್ಹೈನಾಸಿರಸ್, ರಿಂಕೊಫೋರಸ್, ಕುಂಬಳದ ಆಲಕೊಫೋರ, ದ್ರಾಕ್ಷಿಯ ಸ್ಕೆಲೆಡೋಂಟ, ಬತ್ತದ ಹಿಸ್ಟ, ಮಾವಿನ ರ್ಹಿಂಕೀನಸ್ ಇತ್ಯಾದಿ, ಈ ಕೀಟಗಳ ಹತೋಟಿಗೆ ಬೆಳೆ ಮತ್ತು ಕೀಟದ ನಡತೆಗಳ ಮೇಲೆ ಹೊಟ್ಟೆ ಪಾಷಾಣವನ್ನು ಎಚ್ಚರಿಕೆಯಿಂದ ಉಪಯೋಗಿಸಬೇಕು.

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2016-11-05. Retrieved 2016-11-01.
  2. "ಆರ್ಕೈವ್ ನಕಲು". Archived from the original on 2015-04-16. Retrieved 2016-11-01.