ಕೂಟ ಶಾಸನಗಳು

ವಿಕಿಪೀಡಿಯ ಇಂದ
Jump to navigation Jump to search


ಕೂಟ ಶಾಸನ ಎಂದರೆ ಕೃತಕ ಶಾಸನ ಅಥವಾ ನಕಲು ಶಾಸನ ಎಂದರ್ಥ. ವಿಶೇಷವಾದ ಗೌರವವನ್ನೋ, ಆಸ್ತಿಯನ್ನೋ ಸಾಧಿಸುವುದರ ಸಲುವಾಗಿ ಕೃತಕ ತಾಮ್ರಪಟಗಳನ್ನು ಸೃಷ್ಟಿಸಿ ಅವುಗಳನ್ನು ಅಧಿಕೃತ ದಾಖಲೆಯೆಂದು ರಾಜರ ಮುಂದೆ ಅಥವಾ ಊರ ಹಿರಿಯರ ಮುಂದೆ ಹಾಜರು ಮಾಡಿ ಅನವಶ್ಯಕ ಸವಲತ್ತುಗಳನ್ನು ಪಡೆಯುತ್ತಿದ್ದರು.

ಇತಿವೃತ್ತ[ಬದಲಾಯಿಸಿ]

ಪ್ರಾಚೀನ ವಿಗ್ರಹಗಳಿಗೆ ಉತ್ತಮ ಮಾರುಕಟ್ಟೆ ಇರುವುದನ್ನು ಗಮನಿಸಿ ಕೆಲವರು ನಕಲಿ ವಿಗ್ರಹಗಳನ್ನು ತಯಾರಿಸಿ, ಅವುಗಳ ಮಹತ್ವವನ್ನು ಹೆಚ್ಚಿಸುವ ಸಲುವಾಗಿ ಅವುಗಳ ಮೇಲೆ ಪ್ರಾಚೀನ ಲಿಪಿಯನ್ನು ಬರೆಯುತ್ತಿದ್ದಾರೆ. ಕಪಿಲೇಶ್ವರದ ಕಲ್ಲಿನ ಹಲಗೆಯ ಮೇಲೆ ಅಶೋಕನ ಸ್ತಂಭ ಶಾಸನದ ನಕಲು ದೊರೆಕಿದ್ದುದನ್ನು ನೆನಪಿಸಿಕೊಳ್ಳಬಹುದು. ಮುಂಬಯಿಯ ಪ್ರಿನ್ಸ್ ಆಫ್ ವೇಲ್ಸ್ ಮ್ಯೂಜಿಯಂನಲ್ಲಿ ಕಲ್ಲಿನ ಬಟ್ಟಲಿನ ಮೇಲಿದ್ದ ಶಾಸನವೊಂದು ನಕಲು ಎಂಬುದೂ ಗಮನಾರ್ಹ. ಜೆ.ಎಫ್.ಫ್ಲೀಟ್ ಅವರು ತಲಕಾಡು ಗಂಗ ಮನೆತನದ ಕೂಟ ಶಾಸನಗಳ ಪಟ್ಟಿಯನ್ನೇ ಕೊಟ್ಟಿದ್ದಾರೆ. ಕೂಟ ಶಾಸನಗಳನ್ನು ಗುರುತಿಸುವುದು ಕಷ್ಟವಾಗಿರುತ್ತದೆ. ಅವುಗಳನ್ನು ಗುರುತಿಸಲು ಕೆಲವು ಸಾಮಾನ್ಯ ತತ್ವಗಳನ್ನು ಅವಲಂಬಿಸಬೇಕಾಗುತ್ತದೆ.

ಹಿನ್ನೆಲೆ[ಬದಲಾಯಿಸಿ]

ಕೂಟ ಶಾಸನಗಳಲ್ಲಿ ಸಮುದ್ರಗುಪ್ತನ ಕಾಲದ (ಕ್ರಿ.ಶ. 335-76) ನಳಂದಾ ಮತ್ತು ಗಯಾ ತಾಮ್ರಶಾಸನಗಳು ಮೊದಲಿನವು. ಕೃತಕ ಶಾಸನದ ಬಗೆಗೆ ಬಿಹಾರ ರಾಜ್ಯದ ಸಾಸರಮ್ ಎಂಬಲ್ಲಿ ದೊರೆತ ಕ್ರಿ.ಶ.1169ರ ಬಂಡೆಗಲ್ಲು ಶಾಸನವು ಮಹತ್ವದ ಮಾಹಿತಿಯನ್ನು ತಿಳಿಸುತ್ತದೆ. ಕನೋಜದ ಗಾಹಡವಾಲ ರಾಜನಾದ ವಿಜಯಚಂದ್ರನ (ಕ್ರಿ.ಶ. ಸುಮಾರು 1155-70) ಒಬ್ಬ ಅಧಿಕಾರಿಗೆ ಲಂಚ ಕೊಟ್ಟು ಒಂದು ಕೃತಕ ಶಾಸನದ ಮೂಲಕ ಎರಡು ಹಳ್ಳಿಗಳನ್ನು ಪಡೆದದ್ದನ್ನು ಮತ್ತು ತನ್ನ ಮನೆತನದ ಮುಂದಿನ ರಾಜರು ಅಂತಹ ಕೃತಕ ಶಾಸನಗಳ ಬಗೆಗೆ ಜಾಗರೂಕತೆಯಿಂದ ಇರಬೇಕೆಂದು ಸ್ಥಳೀಯ ರಾಜನಾದ ಪ್ರತಾಪಧವಳನು ಹೇಳಿರುವ ಸಂಗತಿಯನ್ನು ಬಿಹಾರದ ಸಾಸರಮ್ ಎಂಬಲ್ಲಿ ದೊರೆತಿರುವ ಶಾಸನ ತಿಳಿಸುತ್ತದೆ. ಗಾಹಡವಾಲ ವಿಜಯಚಂದ್ರನು ಕೊಟ್ಟನೆಂದು ಹೇಳಿಕೊಂಡ ಶಾಸನವು ಸಾಸರಮ್ ಹತ್ತಿರದ ಹಳ್ಳಿಯೊಂದರ ಬ್ರಾಹ್ಮಣ ಮನೆತನದಲ್ಲಿ ದೊರೆತಿದೆ.