ಕುರುಡರ ಶಿಕ್ಷಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಜ್ಞಾನಸಂಗ್ರಹಣೆಯಲ್ಲಿ ಪ್ರಧಾನೇಂದ್ರಿಯವಾದ ದೃಷ್ಟಿ ಶೂನ್ಯವಾದಾಗ ಅಥವಾ ಸಮರ್ಪಕವಾಗಿ ಕ್ರಿಯಾಶೀಲವಾಗಲು ಅಸಮರ್ಥವಾದಾಗ ಅಂಥ ವ್ಯಕ್ತಿಗೆ ಪ್ರಧಾನವಾಗಿ ಶ್ರವಣ ಮತ್ತು ಸ್ಪರ್ಶೇಂದ್ರಿಯಗಳ ಮೂಲಕ ಒದಗಿಸುವ ಶಿಕ್ಷಣ. 1960ರಲ್ಲಿ ಮಾಡಿದ ಒಂದು ಅಂದಾಜಿನ ಪ್ರಕಾರ ಪ್ರಪಂಚದ ಕುರುಡರ ಸಂಖ್ಯೆ ಸುಮಾರು 14 ದಶಲಕ್ಷ. ಇಂದಿನವರೆಗೆ (1972) ಈ ಸಂಖ್ಯೆ ವಾರ್ಷಿಕವಾಗಿ 1.55%-2% ದರದಲ್ಲಿ ಏರಿರಬಹುದೇ ವಿನಾ ಕಡಿಮೆ ಆಗಿರಲಾರದು, ಸ್ಥಗಿತವಾಗಿಯೂ ಉಳಿದಿರಲಾರದು ಎಂದು ತಜ್ಞರ ಮತ. ಇಷು ಭಾರೀ ಸಂಖ್ಯೆಯ ಮನುಷ್ಯಶಕ್ತಿಯಲ್ಲಿ ಸುಪ್ತವಾಗಿರುವ ಪ್ರತಿಭೆ ವಿಕಸಿಸಿ ಹೊರಸೂಸಲು ಯುಕ್ತ ಸನ್ನಿವೇಶವನ್ನು ಒದಗಿಸುವುದು ಮತ್ತು ತನ್ಮೂಲಕ ಕುರುಡರ ಜೀವನವನ್ನು ಅರ್ಥಪೂರ್ಣವನ್ನಾಗಿಸುವುದು ಕುರುಡರ ಶಿಕ್ಷಣದ ಉದ್ದೇಶ. ಕುರುಡರಿಗೆ ಜೀವನನಿರ್ವಹಣೆ ಮಾಡಲು ಮೊದಲು ಇದ್ದದ್ದು ಎರಡೇ ಮಾರ್ಗಗಳು-ಜನ್ಮದಾತರನ್ನು ಮತ್ತು ಸಂಬಂಧಿಗಳನ್ನು ಆಶ್ರಯಿಸಿ ಬಾಳುವುದು; ತಿರುಪೆಯೆತ್ತಿ ಹೊಟ್ಟೆ ಹೊರೆಯುವುದು. ಉಭಯ ಮಾರ್ಗಗಳಲ್ಲೂ ಅಂತಿಮ ಫಲ ಒಂದೇ-ಸಮಾಜದ ಮೇಲೆ ಪರಾನ್ನ ಜೀವಿಗಳಾಗಿ ಹೊರೆಯಬಾಳು. ಇಂಥ ಸನ್ನಿವೇಶವನ್ನು ತಪ್ಪಿಸಿ ಕುರುಡರಿಗೆ ಸಹ ತಮ್ಮ ಅನ್ನವನ್ನು ಸ್ವಸಾಮಥ್ರ್ಯದಿಂದ ಸಂಪಾದಿಸಲು ಆಸ್ಪದ ಮಾಡಿಕೊಡುವಲ್ಲಿ ಕುರುಡರ ಶಿಕ್ಷಣದ ಪಾತ್ರ ಮಹತ್ತ್ವ ಪೂರ್ಣವಾದದ್ದು.[೧]

ಇತಿಹಾಸ[ಬದಲಾಯಿಸಿ]

ಕುರುಡರ ವಿಚಾರದಲ್ಲಿ ಸಮಾಜ ಮೊದಲಿನಿಂದಲೂ ದಯೆ, ದಾಕ್ಷಿಣ್ಯ ತೋರಿರುವುದಕ್ಕೆ ಸಾಕಷ್ಟು ಆಧಾರಗಳು ದೊರೆಯುತ್ತವೆ. ಅಶೋಕ ಸಾಮ್ರಾಟನ ಆಳ್ವಿಕೆಯಷ್ಟು ಪ್ರಾಚೀನದಲ್ಲಿಯೇ ಭಾರತದಲ್ಲಿ ಕುರುಡರ ರಕ್ಷಣಾಲಯಗಳು, ಪುನರ್ನಿವೇಶನ ವಸತಿಗಳು ಏರ್ಪಟ್ಟಿದ್ದುವು. ಕುರುಡರಲ್ಲಿ ಪ್ರತಿಭಾನ್ವಿತರಾಗಿ ಸಂಗೀತಗಾರರೋ ಕವಿಗಳೋ ಆಗಿದ್ದವರನ್ನು ರಾಜರೂ ಶ್ರೀಮಂತರೂ ಪ್ರೋತ್ಸಾಹಿಸುತ್ತಿದ್ದುದಕ್ಕೆ ಸಾಕ್ಷ್ಯಗಳಿವೆ. ಹತ್ತನೆಯ ಶತಮಾನದಿಂದೀಚೆಗೆ ಪ್ರಪಂಚದ ಬೇರೆಬೇರೆ ರಾಷ್ಟ್ರಗಳಲ್ಲಿ ಕುರುಡರ ಸೇವಾರ್ಥ ಆಸ್ಪತ್ರೆಗಳು, ಶಾಲೆಗಳು, ನಿಲಯಗಳು ಇತ್ಯಾದಿ ಆರಂಭವಾದುವು. ಆದರೆ ಕುರುಡರ ಶಿಕ್ಷಣ ಒಂದು ವ್ಯವಸ್ಥಿತ ವಿಧಾನದಲ್ಲಿ ಮೈದಳೆಯಲು ಆರಂಭವಾದದ್ದು 18ನೆಯ ಶತಮಾನದಲ್ಲಿ . ವೇಲೆಂಟೀನ್ ಆವುಈ (1745-1822) ಅಂಧಶಿಕ್ಷಣ ವ್ಯವಸ್ಥೆಯ ಪಿತಾಮಹ. ಸ್ಪರ್ಶ ಮತ್ತು ಶ್ರವಣ ಇಂದ್ರಿಯಗಳ ಮೂಲಕ ಕುರುಡರಿಗೆ ಯುಕ್ತ ಶಿಕ್ಷಣ ನೀಡಲು ಇವನು ಮೊದಲಿಗೆ 12 ಜನ ಕುರುಡರನ್ನು ಆಯ್ದು ಪ್ಯಾರಿಸಿನಲ್ಲಿ ಒಂದು ಶಾಲೆಯನ್ನು ತೊಡಗಿದ. ಆವುಈಯ ಪ್ರಥಮ ಪ್ರಯತ್ನದ ಗಮನಾರ್ಹ ಯಶಸ್ಸಿಗೆ ಯೂರೋಪ್ ಖಂಡವಿಡೀ ಪ್ರಚಾರ ಲಭಿಸಿತು. ಬೇರೆ ಬೇರೆ ಸರ್ಕಾರಗಳು ಈ ದಿಶೆಯಲ್ಲಿ ವ್ಯವಸ್ಥಿತ ಯೋಜನೆಗಳನ್ನು ರೂಪಿಸಿ ಕಾರ್ಯೋದ್ಯುಕ್ತವಾದುವು.

ಮೊದಲ ಪಾಠಶಾಲೆ[ಬದಲಾಯಿಸಿ]

ತನ್ನ ಶಾಲೆಯಲ್ಲಿದ್ದ ಓರ್ವ ವಿದ್ಯಾರ್ಥಿ ಆ ಶಾಲೆಗೆ ಬಂದಿದ್ದ ಒಂದು ಮುದ್ರಿತ ಆಹ್ವಾನ ಪತ್ರವನ್ನು ಓದಲು ಪ್ರಯತ್ನಿಸುತ್ತಿದ್ದುದು ಆವುಈಯ ಗಮನಕ್ಕೆ ಅಕಸ್ಮಾತ್ತಾಗಿ ಬಂತು. ಆ ಅಂಧ ವಿದ್ಯಾರ್ಥಿ ಮುದ್ರಿತ ಪತ್ರದ ತಳಭಾಗದಲ್ಲಿ ಬಲು ಸೂಕ್ಷ್ಮವಾಗಿ ತನ್ನ ಅಂಗೈಯನ್ನು ಆಡಿಸುತ್ತಿದ್ದ. ಅಚ್ಚಿನಲ್ಲಿ ಅಕ್ಷರಗಳ ಮೇಲೆ ಬಿದ್ದ ಹೆಚ್ಚಿನ ಒತ್ತಡದ ಪರಿಣಾಮವಾಗಿ ಕಾಗದದ ತಳಭಾಗ ಸ್ವಲ್ಪ ಉಬ್ಬಿರುವುದನ್ನೂ ಈ ಉಬ್ಬುವಿಕೆಯ ಮೇಲೆ ಕೈಯ್ಯಾಡಿಸಿ ಅಕ್ಷರಗಳ ವಿಚಾರ ಮಾಹಿತಿ ತಿಳಿಯಬಹುದೆನ್ನುವುದನ್ನೂ ಆ ವಿದ್ಯಾರ್ಥಿ ಮನಗಂಡಿದ್ದ. (ಅದಕ್ಕೆ ಮೊದಲೇ ಬಿಡಿಬಿಡಿಯಾದ ಅಕ್ಷರಗಳ ದೊಡ್ಡ ಅಚ್ಚುಗಳನ್ನು ಕುರುಡ ವಿದ್ಯಾರ್ಥಿಗಳಿಗೆ ಕೊಟ್ಟು ಅಕ್ಷರ ಪರಿಚಯವನ್ನು ಅವರಿಗೆ ಮಾಡಿಸುತ್ತಿದ್ದುದು ವಾಡಿಕೆ.) ಅಂಧ ವಿದ್ಯಾರ್ಥಿಯ ಈ ಹಸ್ತಕೌಶಲವನ್ನು ಗ್ರಹಿಸಿದ ಆವುಈಗೆ ತತ್‍ಕ್ಷಣವೇ ಕುರುಡರ ವಾಚನಾರ್ಥ ತಯಾರಿಸಬೇಕಾದ ಪುಸ್ತಕದ ರೂಪರೇಖೆ ಸ್ಫುರಿಸಿತು-ಕಾಗದದ ಹಾಳೆಗಳ ಮೇಲೆ ಉಬ್ಬಕ್ಷರಗಳಿಂದ ವಿಷಯ ನಿರೂಪಣೆ ಮಾಡಿದರೆ ಅವನ್ನು ಸ್ಪರ್ಶಿಸಿ ಕುರುಡರು ಓದಬಲ್ಲರು ಎಂಬುದೇ ಈ ತೀರ್ಮಾನ.[೨]

ಅಂಧರ ಲಿಪಿಯ ವಿಕಾಸ[ಬದಲಾಯಿಸಿ]

ಅಂಧರ ಲಿಪಿಯನ್ನು ಕುರಿತಂತೆ ಲಭ್ಯವಾಗಿರುವ ಮೊದಲ ದಾಖಲೆ 1517ನೆಯ ವರ್ಷದ್ದು. ಸ್ಪೇನಿನ ಒಬ್ಬ ಉತ್ಸಾಹಿ ಮರದ ತುಂಡುಗಳ ಮೇಲೆ ಸಾಂಪ್ರದಾಯಿಕ ಅಕ್ಷರಗಳನ್ನು ಕೊರೆದು ಕುರುಡರಿಗೆ ಓದಲು ಅನುಕೂಲವಾಗುವ ಸ್ಪರ್ಶಜ್ಞಾನವನ್ನು ಒದಗಿಸಿದ. ಆದರೆ ಇಂಥ ಒಂದು ಪುಸ್ತಕ ಒತ್ತಟ್ಟಿಗಿರಲಿ, ಒಂದು ಹಾಳೆಯನ್ನು ಸಹ ರಚಿಸುವುದು ಮತ್ತು ಕೊಂಡೊಯ್ಯುವುದು ಎಷ್ಟು ಉಪದ್ರವಕಾರಿ ಎಂಬುದನ್ನು ಉಹಿಸಿಕೊಳ್ಳಬಹುದು. ಈ ದಿಶೆಯಲ್ಲಿ ಮುಂದೆ ನಡೆದ ಸುಧಾರಣೆಗಳು ಹೀಗಿವೆ--ಚಲಿಸಬಲ್ಲ ಸೀಸದ ಅಕ್ಷರಗಳು ಉಪಯೋಗ, ಮೆತ್ತೆಗಳ ಮೇಲೆ ಚುಚ್ಚಿದ ಸೂಜಿಗಳು, ಮರದ ದೊಡ್ಡ ಅಕ್ಷರಗಳು, ಲೋಹನಿರ್ಮಿತ ದೊಡ್ಡ ಅಕ್ಷರಗಳು ಇತ್ಯಾದಿ. ಇವೆಲ್ಲ ವಿಧಾನಗಳೂ ಆವುಈ ಆವಿಷ್ಕರಿಸಿದ ಉಬ್ಬಕ್ಷರ ವಿಧಾನ ಬಳಕೆಗೆ ಬರುವ ಮೊದಲೇ ಪ್ರಚಲಿತವಿದ್ದವು. ಒಂದು ರೀತಿಯಲ್ಲಿ ಇವುಗಳ ಪರಿಣಾಮವಾಗಿಯೇ ಉಬ್ಬಕ್ಷರ ವಿಧಾನ ರೂಪುಗೊಂಡಿತು ಎನ್ನಬಹುದು. ಉಬ್ಬು ಅಕ್ಷರಗಳನ್ನು ಸ್ಪರ್ಶಿಸಿ ಕುರುಡರು ಓದುತ್ತಾರೆ. ಅಂಧರ ವಾಚನಾರ್ಥವಾಗಿ ಮೊದಲ ಪುಸ್ತಕ ಪ್ರಕಟವಾದದ್ದು ಗ್ರೇಟ್ ಬ್ರಿಟನ್ನಿನಲ್ಲಿ (1827.) ಏಡಿನ್‍ಬರೋದ ಜೇಮ್ಸ್‍ಗಾಲ್ ಎಂಬಾತ ಅದರ ನಿರ್ಮಾಪಕ. ಅಲ್ಲಿಂದ ಮುಂದೆ ಕುರುಡರ ಲಿಪಿಯಲ್ಲಿ ಸಾಕಷ್ಟು ಸುಧಾರಣೆಗಳಾದುವು. ಎದುರಿದ್ದ ಚಿತ್ರ ಭಾರತೀ ಬ್ರೇಲ್ ಲಿಪಿಯಲ್ಲಿ ಸ್ವರಗಳು ವ್ಯಂಜನಗಳು ಕಾಗುಣಿತ ಮತ್ತು ಸಂಖ್ಯೆಗಳು ಒಂದು ಮುಖ್ಯ ಸಮಸ್ಯೆ ಕುರುಡರ ಬರವಣಿಗೆ. ಸಾಂಪ್ರದಾಯಿಕ ಅಕ್ಷರಗಳನ್ನೇತದ್ವತ್ತಾಗಿ ಉಪಯೋಗಿಸಿದರೆ ಅವು ಕುರುಡರ ಎದುರೊಡ್ಡುವ ಪ್ರಾಯೋಗಿಕ ಸಮಸ್ಯೆಗಳು ಬಲು ಸಂಕೀರ್ಣ. ಮತ್ತೆ, ಒಂದೊಂದು ಭಾಷೆಯ ಲಿಪಿಯನ್ನು ಅವಲಂಬಿಸಿ ಈ ಸಮಸ್ಯೆಗಳ ರೂಪಗಳು ಬದಲಾಗುತ್ತವೆ. ಈ ದಿಶೆಯಲ್ಲಿ ಬಂದ ಉತ್ತಮ ಸುಧಾರಣೆ ಲೂಯಿ ಬ್ರೇಲ್ (1809-52) ಎಂಬಾತನದು. ಸ್ವತಃ ಅಂಧನಾಗಿದ್ದ ಈತ ಬೇರೆ ಎಲ್ಲರಿಗಿಂತ (ಅಂದರೆ ಅಂಧರಲ್ಲದವರಿಗಿಂತ) ಹೆಚ್ಚಾಗಿ ಅಂಧರ ಲಿಪಿಯಲ್ಲಿದ್ದ ಅಡಚಣೆಗಳನ್ನು ತಿಳಿದುಕೊಂಡು ಅವುಗಳಿಗೆ ಪರಿಹಾರ ಸೂಚಿಸಲು ಸಮರ್ಥನಾಗಿದ್ದ. ಉಬ್ಬು ಚುಕ್ಕಿಗಳ ನೆರವಿನಿಂದ ಅಕ್ಷರಗಳನ್ನು ಸಂಕೇತಗಳನ್ನು ಕಾಗದದ ಮೇಲೆ ಗುರುತಿಸುವುದು-ಇವು ಓದಲು ಮತ್ತು ಬರೆಯಲು ಬ್ರೇಲ್ ಸೂಚಿಸಿದ ಪರಿಹಾರಗಳು. ಇಂದು ಪ್ರಪಂಚದಾದ್ಯಂತ ಪ್ರಚಲಿತವಿರುವ ಕುರುಡರ ಲಿಪಿ ಬ್ರೇಲ್ ಲಿಪಿಯ ಆಧಾರದ ಮೇಲೆ ರಚಿತವಾದವುಗಳೇ. ಬ್ರೇಲ್ ಲಿಪಿ ಮತ್ತು ಭಾರತೀ ಬ್ರೇಲ್ ಲಿಪಿಯ ವಿವರಗಳಿಗೆ (ನೋಡಿ- ಬ್ರೇಲ್-ಲಿಪಿ)

ಕುರುಡರಿಗೆ ಸೌಕರ್ಯಗಳು[ಬದಲಾಯಿಸಿ]

ಯಂತ್ರವಿಜ್ಞಾನದ ತೀವ್ರ ಪ್ರಗತಿ ಆಗಿರುವ ಈ ಶತಮಾನದಲ್ಲಿ ಕುರುಡರ ವಿಶೇಷ ಆವಶ್ಯಕತೆಗಳನ್ನು ಪೂರೈಸುವಂಥ ಬಗೆತರದ ಸಾಧನಗಳು ತಯಾರಾಗಿವೆ. ಹೊಲಿಗೆ ಯಂತ್ರಗಳು, ಬೆರಳಚ್ಚು ಯಂತ್ರಗಳು, ವಿದ್ಯುನ್ಮಾಪನ ಯಂತ್ರಗಳು, ಗಡಿಯಾರಗಳು, ಹಲವಾರು ಸೂಕ್ಷೋಪಕರಣಗಳು-ಇವೆಲ್ಲವೂ ಕುರುಡರ ಸುಪ್ತ ಸಾಮಥ್ರ್ಯಗಳನ್ನು ಪ್ರಕಟಗೋಳಿಸಲು ಇರುವ ಸಾಧನಗಳು ಮೈಯಕ್ತಿಕ ಗಮನವನ್ನು ಕೊಡುವುದು ಕೂಡ ಈಗ ಸಾಧ್ಯವಾಗಿದೆ. ಪೂರ್ಣಾಂಧರಲ್ಲದವರಿಗೆ ಅವರ ಮಂದದೃಷ್ಟಿಯನ್ನು ಪುಷ್ಟೀಕರಿಸಲು ಸಾಕಷ್ಟುದೃಗುಪಕರಣಗಳು, ವೈದ್ಯಕೀಯ ಸಹಾಯ ಇಂದು ಲಭಿಸುತ್ತವೆ. ಸಂಗೀತ, ನೃತ್ಯ, ಶಲ್ಪ ಮುಂತಾದ ಕಲಾವಿಭಾಗಗಳಲ್ಲೂ ಬಗೆತರಹದ ಒಳಾಂಗಣ ಹಾಗೂ ಹೊರಾಂಗಣದ ಆಟಗಳಲ್ಲೂ ಕುರುಡರಿಗೋಸ್ಕರವಾಗಿಯೇ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುವ ಸಾಧ್ಯವಾಗಿದೆ. ಕುರುಡರಿಗೆ ಮಾರ್ಗದರ್ಶನ ಮಾಡಲು ವಿಶೇಷವಾಗಿ ತರಬೇತುಗೊಂಡ ನಾಯಿಗಳು ಪಾಶ್ಚಾತ್ಯ ರಾಷ್ಟ್ರಗಳಲ್ಲಿವೆ.

ಭಾರತದಲ್ಲಿ ಕುರುಡರ ಶಿಕ್ಷಣ[ಬದಲಾಯಿಸಿ]

ಅಮೃತಸರದಲ್ಲಿ ಮೊದಲ ಕುರುಡರ ಶಾಲೆಯನ್ನು ಸ್ಥಾಪಿಸಲಾಯಿತು (1887). 1905ರಲ್ಲಿ ಇದನ್ನು ಡೆಹರಾಡೂನಿಗೆ ಸ್ಥಳಾಂತರಿಸಿದರು. ತಮಿಳುನಾಡಿನ ಪಾಳೆಯಂಕೋಟಿಯಲ್ಲಿನ ಶಾಲೆ (1890) ಮೈಸೂರಿನ ಕುರುಡ ಮತ್ತು ಮೂಗರ ಶಾಲೆ (1991), ಮುಂಬಯಿಯಲ್ಲಿರುವ ದಾದರ್ ಸ್ಕೂಲ್ ಫಾರ್ ದಿ ಬ್ಲೈಂಡ್ ಮತ್ತು ವಿಕ್ಟೋರಿಯಾ ಮೆಮೋರಿಯಲ್ ಸ್ಕೂಲ್ ಫಾರ್ ದಿ ಬ್ಲೈಂಡ್ - ಇವೇ ಮುಂತಾದವು ಭಾರತದಲ್ಲಿ ಮೊದಲಾಗಿ ಸ್ಥಾಪಿಸಲಾದ ಕುರುಡರ ಶಾಲೆಗಳು. ಕ್ರಮೇಣ ಈ ಶಾಲೆಗಳ ಸಂಖ್ಯೆ ಬೆಳೆದ ಈಗ (1972) ಅವು ಭಾರತದಲ್ಲಿ ನೂರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ದೇಶಾದ್ಯಂತ ವ್ಯಾಪಿಸಿವೆ. ಇವುಗಳಲ್ಲಿ ಹೆಚ್ಚಿನವುಗಳಲ್ಲಿ ವಸತಿ, ಆಹಾರ ಮತ್ತು ವಿದ್ಯೆ ಉಚಿತವಾಗಿಯೆ ನೀಡಲಾಗುತ್ತದೆ. ವಯಸ್ಕ ಅಂಧರ ಶಿಕ್ಷಣ ಕೇಂದ್ರವೊಂದು ಡೆಹರಾಡೂನಿನಲ್ಲಿದೆ. ಆ ದರ್ಜೆಯ ಕುರುಡರಿಗೆ ವಿಶಿಷ್ಟವಾದ ಶಿಕ್ಷಣ ನೀಡುವ ಏರ್ಪಾಡು ಇಲ್ಲಿ ಉಂಟು. ಶಿಕ್ಷಣ ಸಂಸ್ಥೆಗಳ ಸೇವೆಗೆ ಪೂರಕವಾಗಿರಲು ಹಾಗೂ ಅಂಧರಿಗೆ ಇತರ ಸೌಲಭ್ಯಗಳನ್ನು ಒದಗಿಸಲು ದೇಶಾದ್ಯಂತ ಹಲವಾರು ಅಂಧ ಪರಿಹಾರ ಸಂಸ್ಥೆಗಳು ಇವೆ. ಇವು ಹೆಚ್ಚಾಗಿ ಸ್ವಸಹಾಯ ಸಂಸ್ಥೆಗಳು. ಅನುಕಂಪಪೂರಿತ ವ್ಯಕ್ತಿಗಳ ಒಕ್ಕೂಟದಿಂದ ನಿರ್ಮಿತವಾದವು. ಇವುಗಳ ಪೈಕಿ ಮದ್ರಾಸಿನ ಅಂಧಸಂಸ್ಥೆ 1920ರಲ್ಲಿ ಪ್ರಾರಂಭವಾಯಿತು. ಅದು ಅಂದಿನ ಮದ್ರಾಸು ಅಧಿಪತ್ಯವನ್ನಿಡೀ ತನ್ನ ಪರಿಧಿಯಲ್ಲಿ ಒಳಗೊಂಡಿತ್ತು. ಈಗ ಮುಂಬಯಿಯಲ್ಲಿರುವ ರಾಷ್ಟ್ರೀಯ ಅಂಧ ಸಂಸ್ಥೆ ಅಖಿಲ ಭಾರತೀಯ ಕಾರ್ಯಕ್ರಮ ರೂಪಿಸಿಕೊಂಡು ಕೆಲಸ ಮಾಡುತ್ತಿವೆ. ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಈ ಸ್ವಸಹಾಯ ಸಂಸ್ಥೆಗಳಲ್ಲಿ ಕೆಲಸಕ್ಕೆ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸುತ್ತಿವೆ.

ಭಾರತ ಸರ್ಕಾರದ ವಿದ್ಯಾ ಸಚಿವಾಲಯ[ಬದಲಾಯಿಸಿ]

ದೇಶಾದ್ಯಂತ ಅಂಧ ಶಿಕ್ಷಣವನ್ನು ವ್ಯವಸ್ಥಿತಗೊಳಿಸಲು ಯುಕ್ತ ಸಲಹೆ ನೀಡಲು ಒಂದು ಸಮಿತಿಯನ್ನು ಭಾರತ ಸರ್ಕಾರ 1943 ರಲ್ಲಿ ನೇಮಿಸಿತು. ಸಮಿತಿಯ ಸಲಹೆಗಳನ್ನು ತತ್ತ್ವಶಃ ಭಾರತ ಸರ್ಕಾರ ಅಂಗೀಕರಿಸಿ ಅವನ್ನು ಕಾರ್ಯಗತಗೊಳಿಸಲು ಉದ್ಯುಕ್ತವಾಗಿದೆ. ಭಾರತ ಸರ್ಕಾರದ ವಿದ್ಯಾ ಸಚಿವಾಲಯದಲ್ಲಿ ಕುರುಡರ ಹಾಗೂ ಇತರ ಅಂಗವಿಕಲರ ಯೋಗಕ್ಷೇಮಗಳನ್ನು ರೂಪಿಸಿ ನಿಯಂತ್ರಿಸಲು ಒಂದು ವಿಶೇಷ ಖಾತೆಯನ್ನು ರಚಿಸಲಾಗಿದೆ (1947). ಈಗ ಕಾರ್ಯಗತವಾಗಿರುವ ಕೆಲವು ಸಲಹೆಗಳು ಹೀಗಿವೆ: 1. ಡೆಹರಾಡೂನಿನಲ್ಲಿ ವಯಸ್ಕ ಅಂಧರ ಶಿಕ್ಷಣ ಕೇಂದ್ರದ ಸ್ಥಾಪನೆ. 2. ಡೆಹರಾಡೂನಿನಲ್ಲಿ ಬ್ರೇಲ್ ಮುದ್ರಣಾಲಯ. 3. ಅಂಧರ ಉಪಯೋಗಕ್ಕೋಸ್ಕರ ಒಂದು ಕೇಂದ್ರೀಯ ಪುಸ್ತಕ ಭಂಡಾರ ಸ್ಥಾಪನೆ. 4. ವಿಶೇಷ ಉಪಕರಣಗಳ ಆಮದು ಮತ್ತು ದೇಶದಲ್ಲಿ ಅವುಗಳ ನಿರ್ಮಾಣಕ್ಕೆ ಯುಕ್ತ ನಿರ್ದೇಶನ ಮತ್ತು ಪ್ರೋತ್ಸಾಹ. 5. ಸರ್ಕಾರದ ನೇತೃತ್ವದಲ್ಲಿ ದೇಶದ ಭಾಗಗಳಲ್ಲಿ ಅಂಧರ ಶಾಲೆಗಳ ಸ್ಥಾಪನೆ ಮತ್ತು ಪ್ರೌಢಶಿಕ್ಷಣವನ್ನು ಅಂಧರಿಗೆ ನೀಡುವಲ್ಲಿ ಪ್ರೋತ್ಸಾಹ.

ಕರ್ಣಾಟಕದಲ್ಲಿ ಕುರುಡರ ಶಿಕ್ಷಣ[ಬದಲಾಯಿಸಿ]

ಬ್ರಿಟಿಷ್ ಭಾರತದ ದೇಶ ಸಂಸ್ಥಾನಗಳಲ್ಲಿ ಕುರುಡರ ಶಿಕ್ಷಣಶಾಲೆ ಮೊದಲು ಪ್ರಾರಂಭವಾದ್ದು ಮೈಸೂರು ಸಂಸ್ಥಾನದಲ್ಲಿ, ಮೈಸೂರು ನಗರದಲ್ಲೇ ಪ್ರಾರಂಭವಾದ (1901) ಆ ಶಾಲೆಯ ಮೊದಲ ಪ್ರವರ್ತಕರು ಎಂ.ಶ್ರೀನಿವಾಸರಾಯರು. ಮೊದಲು ಒಬ್ಬ ಕುರುಡ ಮತ್ತು ಮೂರು ಜನ ಮೂಗರಿಂದ ಅವರ ಮನೆಯಲ್ಲಿಯೇ ತೆರೆಯಲಾದ ಈ ಶಾಲೆ ಮರುವರ್ಷವೇ (1902) ಸರ್ಕಾರದ ನೆರವು ಲಭಿಸಿತು. ಆ ವರ್ಷ ಒಬ್ಬ ಉಪಾಧ್ಯಾಯನ ನೇಮಕವನ್ನು ಸರ್ಕಾರ ಮಂಜೂರು ಮಾಡಿತು. ಏರುತ್ತಿದ್ದ ವಿದ್ಯಾರ್ಥಿಗಳ ಸೌಕರ್ಯಕ್ಕಾಗಿ 1905 ರಲ್ಲಿ ಒಂದು ವಿದ್ಯಾರ್ಥಿ ನಿಲಯವನ್ನು ಆರಂಭಿಸಿದರು. 1908ರ ಹೊತ್ತಿಗೆ ವಿದ್ಯಾರ್ಥಿಗಳ ಸಂಖ್ಯೆ 34 ಕ್ಕೆ ಏರಿತ್ತು. 1927ನೆಯ ಇಸವಿಯಲ್ಲಿ ಸರ್ಕಾರವೇ ಶಾಲೆಯನ್ನು ಪೂರ್ಣವಾಗಿ ವಹಿಸಿಕೊಂಡಿತು. 1932ರ ವರೆಗೆ ಈ ಶಾಲೆಯಲ್ಲಿ ಸಹವಿದ್ಯಾಭ್ಯಾಸ ಜಾರಿಯಲ್ಲಿತ್ತು. ಆ ವರ್ಷ ಈ ಶಾಲೆಯ ಓರ್ವ ಅಧ್ಯಾಪಕಿ ಮತ್ತು 7 ಮೂಕ ಹುಡುಗಿಯರನ್ನು ಮೈಸೂರು ನಗರದ ವೃತ್ತಿಶಿಕ್ಷಣ ಶಾಲೆಗೆ ವರ್ಗಾಯಿಸಿದರು. ಅಂದಿನಿಂದ 1968ರ ವರೆಗೆ ಈ ಶಾಲೆ ಕೇವಲ ಕುರುಡ ಬಾಲಕರಿಗಾಗಿ ಮಾತ್ರ ಇತ್ತು. 1968ರಿಂದ ಈಚೆಗೆ ಇಲ್ಲಿ ಪುನಃ ಸಹವಿದ್ಯಾಭ್ಯಾಸ ನಡೆಯುತ್ತಿದೆ. ಇಲ್ಲಿನ ವಿದ್ಯಾಥ್ಯಿಗಳ ಬೌದ್ಧಿಕ, ಶೈಕ್ಷಣಿಕ ಮತ್ತು ವೃತ್ತಿ ತರಬೇತಿಯನ್ನು ಮೂಲಪಾಠಗಳಿಂದ ತೊಡಗಿ ಪ್ರೌಢಶಾಲೆಯ ಮಟ್ಟದವರೆಗೂ ನುರಿತ ಅಧ್ಯಾಪಕರು ನೀಡುತ್ತಾರೆ. ಶಾಲೆಗೆ ಲಗತ್ತಾಗಿ ಒಂದು ವಿದ್ಯಾರ್ಥಿ ನಿಲಯ, ಶಿಕ್ಷಣ ಯಂತ್ರಾಗಾರ, ಬ್ರೇಲ್ ಮುದ್ರಾಲಯ ಮತ್ತು ಪುಸ್ತಕ ಭಂಡಾರ ಇವೆ. ಇಲ್ಲಿ ಶಿಕ್ಷಣ ಸಾಮಾನ್ಯವಾಗಿ ಉಚಿತ. ಸರ್ಕಾರದ ವತಿಯಿಂದ ಕರ್ಣಾಟಕದಲ್ಲಿ ನಡೆಯುತ್ತಿರುವ ಕುರುಡರ ಶಾಲೆಗಳು ಹುಬ್ಬಳ್ಳಿಯಲ್ಲೂ ಗುಲ್ಬರ್ಗದಲ್ಲೂ ಇವೆ. ಬೆಂಗಳೂರು ನಗರದ ಸಮೀಪದ ವೈಟ್‍ಫೀಲ್ಡಿನಲ್ಲಿ ಖಾಸಗೀ ಸಂಸ್ಥೆ ನಡೆಸುತ್ತಿರುವ ಕುರುಡ ವಿದ್ಯಾರ್ಥಿ ವಿದ್ಯಾರ್ಥಿನಿಲಯರ ಶಾಲೆ ಉಂಟು. ಇದರಲ್ಲಿ ಸಹ ಸಾಮಾನ್ಯವಾಗಿ ಶಿಕ್ಷಣ, ವಸತಿ, ಆಹಾರ ಉಚಿತ.

ಉಲ್ಲೇಖಗಳು[ಬದಲಾಯಿಸಿ]