ವಿಷಯಕ್ಕೆ ಹೋಗು

ಕುದುರೆ ಕೋಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುದುರೆ ಕೋಲ ಒಂದು ಜಾನಪದ ಕಲೆ ಮತ್ತು ಆರಾಧನಾ ಪದ್ಧತಿ. ಈ ಕಲೆಯು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬಂಟ್ವಾಳ, ಸುಳ್ಯ ತಾಲೂಕುಗಳಲ್ಲಿ ಕಂಡುಬರುತ್ತದೆ. ಇದು ಒಂದು ಆರಾಧನಾತ್ಮಕ ಕಲೆಯಾಗಿದ್ದು, ಇದನ್ನು ನಲಿಕೆ(ನಲ್ಕೆ) ಜನಾಂಗದವರು ನಡೆಸುತ್ತಾರೆ.[] [] ಈ ಕುಣಿತವನ್ನು ಸುಗ್ಗಿ ಆರಂಭಕ್ಕೆ ಮುನ್ನ ನಡೆಸುತ್ತಾರೆ. ಬಿತ್ತನೆಗಾಗಿ ಗದ್ದೆಯನ್ನು ಸ್ವಚ್ಛಗೊಳಿಸಿ ಉಳುಮೆಯ ಕೆಲಸವನ್ನು ಪೂರ್ತಿಗೊಳಿಸುವ ದಿನವನ್ನು 'ಕಂಡದ ಕೋರಿ' ಎನ್ನುತ್ತಾರೆ. 'ಕಂಡದ ಕೋರಿ'ಎನ್ನುವುದು ತುಳುನಾಡಿನಲ್ಲಿ ಗದ್ದೆ ಉಳುಮೆ ಮಾಡುವಾಗ ಆಚರಿಸಲಾಗುವ ಆಚರಣೆ. ಬಿತ್ತನೆ ಮಾಡುವ ಮೊದಲು ಗದ್ದೆಯ ಮಧ್ಯದಲ್ಲಿ ಕಂಬವನ್ನು ನೆಟ್ಟು, ಭೂಮಿಯನ್ನು ವಧುವಾಗಿಯೂ, ಕಂಬವನ್ನು ವರನಾಗಿಯೂ ಭಾವಿಸಿ ವಿವಾಹದ ಸಂಕೇತವಾಗಿ ಆಚರಿಸುತ್ತಾರೆ. ಹಿಂದಿನ ಬೆಳೆಯನ್ನು ಕೊಯ್ದ ಬಳಿಕ ಗದ್ದೆಯನ್ನು ಉಳುಮೆ ಮಾಡಿ ಆ ಗದ್ದೆಯಲ್ಲಿ ಕಂಡುಬರುವ ಏರುತಗ್ಗುಗಳನ್ನು ಸಮಗೊಳಿಸುತ್ತಾರೆ. ಇದನ್ನು 'ಕೋರುನೆ' ಅಥವಾ 'ಗೋರುನೆ' ಎಂದು ಕರೆಯುತ್ತಾರೆ. ಈ ಪದದಿಂದ 'ಕಂಡದ(ಗದ್ದೆಯ)ಕೋರಿ'[] ಎಂಬ ಹೆಸರು ಬಂದಿದೆ.

ಹಿನ್ನೆಲೆ

[ಬದಲಾಯಿಸಿ]

ಈ ಆಚರಣೆಯನ್ನು ಹಿಂದಿನಿಂದಲೂ ಆಚರಿಸುತ್ತಾ ಬರಲಾಗುತ್ತಿದ್ದು, ದೊಡ್ಡ ದೊಡ್ಡ ಬೇಸಾಯಗಾರರಾದ ಅರಸರು, ಬಲ್ಲಾಳರು, ಬೂಡಿನವರು, ಗುತ್ತಿನವರು ಇದನ್ನು ಆಚರಿಸುತ್ತಾರೆ. ಗದ್ದೆ ಕೋರಿ ಆದ ನಂತರ ಗದ್ದೆಯ ಮಧ್ಯದಲ್ಲಿ ಪೊಕರೆ ಹಾಕುವ ಪದ್ಧತಿ ಇದೆ (ಪೊಕರೆ ಎಂದರೆ ಅಡಿಕೆ ಮರದ ಸುತ್ತ ಅಂಕಣ ಅಂಕಣವಾಗಿ ಸಲಿಕೆಯ ತುಂಡುಗಳನ್ನು ಜೋಡಿಸಿ ಐಫೆಲ್‌ ಮಾದರಿಯ ಗೋಪುರಾಕೃತಿಯಲ್ಲಿ ಕಟ್ಟಿದ ಆಕೃತಿ). ಪೊಕರೆ ಹಾಕುವುದು ಎಂದರೆ ಊರಿನ ಸಮಸ್ತ ಜನರ ಸಮ್ಮುಖದಲ್ಲಿ ಕೊಂಬು ಹಾಗೂ ಓಲಗದ ಹಿಮ್ಮೇಳದ ಸಮೇತ ಹೋಗಿ ಗದ್ದೆಯ ಮಧ್ಯೆ ನೆಡುವ ಕ್ರಮವಾಗಿದೆ. ಗದ್ದೆಯ ಕೋರಿ ಮುಗಿದ ನಂತರ ಪೊಕರೆ ಹಾಕುವ ಮುನ್ನ ನಡೆಸುವ ಪದ್ಧತಿಯೇ ಕುದುರೆ ಕೋಲ. ಈ ಪದ್ಧತಿಯು ಸಾಮಾನ್ಯವಾಗಿ ಡಿಸೆಂಬರ್‌ ತಿಂಗಳಲ್ಲಿ ನಡೆಸಲಾಗುತ್ತದೆ.

ವಿಶೇ‍‍‍‌ಷತೆ

[ಬದಲಾಯಿಸಿ]

ಕುದುರೆಕೋಲ ಒಂದು ವಿಶೇಷ ಪದ್ಧತಿಯಾಗಿದ್ದು, ಇಲ್ಲಿ ನಾಗಬ್ರಹ್ಮನು ಕುದುರೆಯ ಮೇಲೆ ಕುಳಿತು ಬರುವ ದೃಶ್ಯವನ್ನು ಕಾಣಬಹುದು. ಗದ್ದೆಕೋರಿಯನ್ನು ಸಾಮಾನ್ಯವಾಗಿ 'ಬಾರೆತಿಮರು' ಎಂಬ ವಿಶಾಲವಾದ ಗದ್ದೆಗಳಲ್ಲಿ ನಡೆಸುತ್ತಾರೆ. ಈ ಗದ್ದೆಗಳ ಪಕ್ಕದಲ್ಲಿ ಒಂದು ನಾಗಬನವಿರುತ್ತದೆ.ಆ ನಾಗಬನದಲ್ಲಿಯೇ ನಾಗಬ್ರಹ್ಮನು ವೇಷವನ್ನು ಧರಿಸುವುದು.

ನಾಗಬ್ರಹ್ಮ

[ಬದಲಾಯಿಸಿ]

ನಾಗಬ್ರಹ್ಮನ ವೇಷಧಾರಿಗಳು ಸೊಂಟಕ್ಕೆ ನೆರಿಗೆ ಹಾಕಿದ ಸೀರೆಯನ್ನು ಕಟ್ಟಿಕೊಳ್ಳುತ್ತಾರೆ. ಮೈಗೆ ಕೆಂಪು ಬಣ್ಣದ ಉದ್ದ ತೋಳಿನ ಅಂಗಿ ಧರಿಸಿರುತ್ತಾರೆ. ಮುಖಕ್ಕೆ ಅರದಾಳ ಹಾಕಿ ಸಾತ್ವಿಕ ಮುಖವರ್ಣಿಕೆ ಮಾಡಿಕೊಳ್ಳುತ್ತಾರೆ. ಕೆಂಪಿನ ಮಧ್ಯೆ ಬಿಳಿ ನಾಮ ಹಾಕಿರುತ್ತಾರೆ. ತಲೆಗೆ ತಲೆಮಣಿ, ಹೂವಿನ ದಂಡೆ ಕಟ್ಟಿ ಮೇಲೆ ಕಿರೀಟ ಕಟ್ಟಿಕೊಳ್ಳುತ್ತಾರೆ. ಕಾಲಿಗೆ ಗಗ್ಗರವಿರುತ್ತದೆ. ಬಿದಿರಿನ ಸಲಿಕೆಗಳಿಂದ ಮಾಡಿದ ಕುದುರೆಯ ದೇಹದ ಆಕೃತಿಯೊಂದು ಇರುತ್ತದೆ. ಅದರ ಮುಖಕ್ಕೆ ಕಂಗಿನ ಹಾಳೆಯಿಂದ ಮಾಡಿದ ಮುಖವಾಡ ಕಟ್ಟಿರುತ್ತಾರೆ. ಹಿಂದೆ ತೆಂಗಿನ ತಿರಿಯಿಂದ ಮಾಡಿದ ಬಾಲದ ರಚನೆ ಇರುತ್ತದೆ. ಈ ಆಕೃತಿಯನ್ನು ನಾಗಬ್ರಹ್ಮ ವೇಷಧಾರಿ ತನ್ನ ಸೊಂಟಕ್ಕೆ ಕಟ್ಟುತ್ತಾನೆ. ಆಕೃತಿಯು ಆತನ ಸೊಂಟವನ್ನು ಸುತ್ತುವರಿಯುವುದರಿಂದ ಆತ ಕುದುರೆಯ ಮೇಲೆ ಕುಳಿತಂತೆ ಕಾಣುತ್ತದೆ.ಕುದುರೆಯ ದೇಹದ ಇತರ ಭಾಗವನ್ನು ಬಟ್ಟೆಯಿಂದ ಮುಚ್ಚಲಾಗುತ್ತದೆ. ಇದು ಕೀಲುಕುದುರೆ ಕುಣಿತವನ್ನು ಹೋಲುತ್ತದೆ.

ನಾಗಬ್ರಹ್ಮನ ಜೊತೆಗೆ ಅವನ ಸಾರಥಿ ಇರುತ್ತಾನೆ. ಅವನನ್ನು'ಉರುವ' (ಉರಗ/ಹಾವು) ಎಂದು ಕರೆಯಲಾಗುತ್ತದೆ. ಮಕ್ಕಳು ಸಾಮಾನ್ಯವಾಗಿ ಉರುವನ ವೇಷವನ್ನು ಧರಿಸುತ್ತಾರೆ. ಉರುವನು ನಾಗಬ್ರಹ್ಮನಂತೆ ಸೊಂಟಕ್ಕೆ ನೆರಿಗೆ ಹಿಡಿದ ಸೀರೆಯನ್ನು ಲಂಗದ ರೀತಿಯಲ್ಲಿ ಕಟ್ಟಿರುತ್ತಾನೆ ಹಾಗೂ ಕೆಂಪು ನಿಲುವಂಗಿ ತೊಟ್ಟಿರುತ್ತಾರೆ.ಕೈಗೆ ಕೇಪುಳ ಹೂವಿನ ದಂಡೆ, ತಲೆಗೆ ಕೇಪುಳ ಹೂವಿನ ತಲೆಪಟ್ಟಿ ಇರುತ್ತದೆ. ಇವನು ಕೈಯಲ್ಲಿ ಚಾಟಿಯನ್ನು ಹಿಡಿದು ನಾಗಬ್ರಹ್ಮನನ್ನು ಹಿಂಬಾಲಿಸುತ್ತಾನೆ.

ಪದ್ದತಿ

[ಬದಲಾಯಿಸಿ]

ಬಲ್ಲಾಳರ ಒಡ್ಡೋಲಗ ಆದ ನಂತರ ಕುದುರೆ ನಡಿಗೆಯಲ್ಲಿ ಕುಣಿಯುತ್ತಾ ನಾಗಬ್ರಹ್ಮನು ನಾಗಬನದಿಂದ ಹೊರಟು ಬಾರೆತಿಮರು ಗದ್ದೆಗೆ ಬರುತ್ತಾನೆ. ಗದ್ದೆಯನ್ನು ಸುತ್ತು ಬಂದ ಮೇಲೆ ಬಲ್ಲಾಳನ ಎದುರಲ್ಲಿ ನಿಲ್ಲುತ್ತಾನೆ. ಈ ಸಂಪೂರ್ಣ ಪ್ರಕ್ರಿಯೆ ನಡೆಯುವವರೆಗೂ ಉರುವ ನಾಗಬ್ರಹ್ಮನನ್ನು ಹಿಂಬಾಲಿಸುತ್ತಾ ಇರುತ್ತಾನೆ.ನಾಗಬ್ರಹ್ಮನು ಗದ್ದೆಯನ್ನು ಸುತ್ತುವ ಮುನ್ನ ಒಂದು ಬಾರಿ ಉರುವ ಸುತ್ತುತ್ತಾನೆ. ನಂತರ ನಾಗಬ್ರಹ್ಮನ ಜೊತೆಗೂಡಿ ಮತ್ತೊಮ್ಮೆ ಗದ್ದೆಯನ್ನು ಸುತ್ತುತಾನೆ. ತೆಂಬರೆಯವರು ಇವರ ಜೊತೆಗೆ ಇರುತ್ತಾರೆ. ನಾಗಬ್ರಹ್ಮನು ಕುದುರೆಯ ಹೆಜ್ಜೆಯನ್ನು ಅನುಕರಿಸುವಂತೆ, ತೆಂಬರೆಯ ಬಡಿತಕ್ಕೆ ಅನುಗುಣವಾಗಿ ಕುಣಿಯುತ್ತಾನೆ. ಈ ಕುಣಿತಕ್ಕೆ ಯಾವುದೇ ಸಾಹಿತ್ಯವಿಲ್ಲ. ಮನೆಯ ಯಜಮಾನ(ಬಲ್ಲಾಳ)ನ ಎದುರಲ್ಲಿ ಈ ಕುಣಿತ ನಡೆಯುತ್ತದೆ. ಕುಣಿತ ಮುಗಿದ ನಂತರ ಕುದುರೆಯನ್ನು ಕಳಚಿಟ್ಟು ಅಣಿಯನ್ನು ಕಟ್ಟಿಕೊಳ್ಳುತ್ತಾನೆ. ನಂತರ ನಾಗಬ್ರಹ್ಮನ ನೇಮ(ಕೋಲ) ನಡೆಯುತ್ತದೆ.

ಉಪಸಂಹಾರ

[ಬದಲಾಯಿಸಿ]

ಕುದುರೆಕೋಲವು ಭೂತರಾಧನೆಯಂತೆ[] ಇರುವುದರಿಂದ ಅಲ್ಲಿ ಅನ್ವಯವಾಗುವ ಎಲ್ಲಾ ಕಟ್ಟುಪಾಡುಗಳನ್ನು ಕುಣಿತದವರು ಪಾಲಿಸುತ್ತಾರೆ.ಕಲಾವಿದರಿಗೆ ಸಂಭಾವನೆ ಕೊಡುವ ಜವಾಬ್ಧಾರಿ ಮನೆಯ ಯಜಮಾನನದ್ದೇ ಆಗಿರುತ್ತದೆ. ಗದ್ದೆಕೋರಿಯ ಸಮಾರಂಭದ ಆರಂಭಕ್ಕೂ ಮುನ್ನ ನಾಗಬ್ರಹ್ಮನ ಆರಾಧನೆ ನಡೆಯುತ್ತದೆ. ಕಲಾವಿದನು ಕುದುರೆಯ ಮೇಲೆ ಕುಳಿತು ಕುಣಿಯುತ್ತಾ ಬರುವುದರಿಂದ ಇದನ್ನು ಕುದುರೆಕೋಲ ಎಂದು ಕರೆಯುತ್ತಾರೆ. ಕುದುರೆಕೋಲಕ್ಕಿಂತ ಮೊದಲು ನಾಗತಂಬಿಲ ನಡೆಯುತ್ತದೆ. ಈ ಎಲ್ಲಾ ದೃಷ್ಠಿಯಿಂದ ಇದು ನಾಗಬ್ರಹ್ಮನ ಆರಾಧನೆಯಂತೆ ಕಂಡುಬರುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. ಗೊ.ರು.ಚೆನ್ನಬಸಪ್ಪ.ಕರ್ನಾಟಕ ಜನಪದ ಕಲೆಗಳು.ಕನ್ನಡ ಸಾಹಿತ್ಯ ಪರಿಷತ್ತು,೧೯೭೭
  2. ಹಿ.ಚಿ.ಬೋರಲಿಂಗಯ್ಯ.ಕರ್ನಾಟಕ ಜನಪದ ಕಲೆಗಳ ಕೋಶ.ಪ್ರಸಾರಾಂಗ.ಕನ್ನಡ ವಿಶ್ವವಿದ್ಯಾಲಯ.ಹಂಪಿ,೧೯೯೬
  3. https://udayavani.com/dakshina-kannada-news/tulavara-special-land-worship-gaddekori?lang=kn
  4. https://peepalmedia.com/cultural-transition-of-tulunad-bhootha-worship/