ವಿಷಯಕ್ಕೆ ಹೋಗು

ಕುಡುಬಿಯರ ಕುಣಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕುಡುಬಿಯರ ಕುಣಿತ

ಕುಡುಬಿಯರ ಕುಣಿತ ಇದು ಒಂದು ಜನಪದ ನೃತ್ಯ ರೂಪದ ಆಚರಣೆಯಾಗಿದೆ. ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕುಡುಬಿ ಜನಾಂಗದವರ ಆಚರಣೆಯಾಗಿದೆ.[][] ಇವರು ಜಾತಿಸೂಚಕವಾಗಿ ಕಲುವಾಡಿ ಎಂಬ ಹೆಸರನ್ನೇ ಬಳಸಿಕೊಳ್ಕುತ್ತಾರೆ.

ಪ್ರದರ್ಶನ ಕಲೆ

[ಬದಲಾಯಿಸಿ]

ಕುಡುಬಿಯರ ಕುಣಿತವು ಪ್ರತಿ ವರ್ಷ ಶಿವರಾತ್ರಿಯ ಮುಂದಿನ ಏಕಾದಶಿಯ ದಿನ ಆರಂಭವಾಗುತ್ತದೆ. ಈ ಆಚರಣೆಯು "ಮೇಳನ ಮನೆ" ಅಂದರೆ ಹಾಡಿಯ ಹಿರಿಯನ ಮನೆಯಲ್ಲಿ ನಡೆಯುತ್ತದೆ. ಏಕಾದಶಿಯ ದಿನ ಸಾಯಂಕಾಲ ಆ ಕೇರಿಯ ಗಂಡಸರು ಸ್ನಾನ ಮಾಡಿಕೊಂಡು ತಮ್ಮ ತಮ್ಮ ಪೆಟ್ಟಿಗೆಗಳೊಂದಿಗೆ ವೇಷದ ಮನೆಯಲ್ಲಿ ಸಿದ್ಧರಾಗುತ್ತಾರೆ. ಈ ಮನೆಯ ಯಜಮಾನನಿಗೆ ವಾಡೆ ಬುದ್ಯಂತ ಎನ್ನುತ್ತಾರೆ. ಈತ ತನ್ನ ಮನೆಗೆ ಬಂದವರಿಗೆಲ್ಲ ವಾಡೆ ಬುದ್ಯಂತ ಊಟ ಉಪಚಾರ ನಡೆಸಬೇಕು. ಊಟದಲ್ಲಿ ಮಾಂಸ ಮೀನು ನಿಷಿದ್ಧ. ಈ ಮೇಳದ ಮಂಡ್ಕಾರ ಅಂದರೆ ಮೇಳದ ಅರ್ಚಕ. ಇವರು ಮನೆಯ ಮುಂದಿನ ತುಳಸಿ ಕಟ್ಟೆಯ ಎದುರು ಗೋವೆ ದೇವರನ್ನಿಟ್ಟು ಕಾಲು ದೀಪ ಹೊತ್ತಿಸಿ, ಮಂಗಳಾರತಿ ಮಾಡುವರು. ಅಷ್ಟರಲ್ಲಿ ಮೇಳದ ಸದಸ್ಯರೆಲ್ಲಾ ಮಂಡಲಾಕಾರದಲ್ಲಿ ನಿಲ್ಲುತ್ತಾರೆ.

ಮೇಳದವರ ವೇಷಭೂಷಣ

[ಬದಲಾಯಿಸಿ]

ಕಾಲಿಗೆ ಗೆಜ್ಜೆ, ಸೊಂಟದ ಕೆಳಗೆ ಇಜಾರ್, ಅದರ ಮೇಲೆ ಬಣ್ಣದ ಚೌಕಳಿ ಸೀರೆಯನ್ನು ಕತ್ತರಿಯಾಗಿ ಉಡುತ್ತಾರೆ, ಮೇಲೆ ನೆರಿಯಂಗಿ, ಕೊರಳಿಗೆ ಬೆಳ್ಳಿಯ ನೇವಾಳದ ಸರ. ಬಿಳಿಯ ನೆರಿಯಂಗಿಯ ಮೇಲೆ ಬಿಗಿದ ಶಾಲು. ಕೈಗೆ ಬಳೆ, ತಲೆಗೆ ಕೆಂಪು ಪಟ್ಟೆಯ ಬಿಳಿ ಮುಂಡಾಸು. ಅದರ ಮೇಲೆ ಕನಕಾಂಬರ ಹೂವಿನ ದಂಡೆ. ಮುಂಡಸಿಗೆ ಸಿಕ್ಕಿದ ಸೊಗಸಾದ ಹೆಂಟೆಗೊದ್ದದ ಗರಿ ಇವಿಷ್ಟು ಅವರ ಅಲಂಕಾರ. ಇಷ್ಟು ದಿನ ತೂಗು ಹಾಕಿದ್ದ ಮಣ್ಣಿನ ಮಡಿಕೆಯಾಕೃತಿಯ ಗುಮಟೆ ಈಗ ಸಾಲು ಸಾಲಾಗಿ ಅಂಗಳದ ಬದಿಯಲ್ಲಿ ಸೇರ್ಪಡುತ್ತವೆ.

ನೃತ್ಯದ ಶೈಲಿ

[ಬದಲಾಯಿಸಿ]

ಎಲ್ಲರ ಕೈಯಲ್ಲೂ ಕಾಡು ಸುರಗಿ ಮರದ ಎರಡು ಕೋಲುಗಳು. ಮಂಡ್ಕಾರ ಆರತಿ ಎತ್ತಿ ಪೂಜೆ ಮುಗಿಸಿದೊಡನೆ ಕೋಲಾಟಕ್ಕೆ ತೊಡಗುತ್ತಾರೆ. ನರ್ತನದೊಂದಿಗೆ ಹಾಡು ಹೇಳುತ್ತಾರೆ. ಮಂಡಲಾಕಾರದಲ್ಲಿ ಒಳಗೊಂದು ಸುತ್ತು ಹೊರಗೊಂದು ಸುತ್ತು ತೆಗೆಯುತ್ತಾರೆ, ಎದುರೆದವರು ಬಂದವರು ಕೋಲು ಬಡಿಯುತ್ತಾ ನಿಲ್ಲದೆ ಸಾಗುತ್ತಿರುತ್ತಾರೆ. ಕೊಂಕಣಿ ಭಾಷೆಗೆ ತೀರ ಸಮೀಪವಾಗಿರುವ ಈ ಹಾಡಿನಲ್ಲಿ ಗೋವೆಯ ಹತ್ತಾರು ದೇವರ ಸ್ತುತಿ ಇದೆ. ಜೊತೆಗೆ ಸುತ್ತಲಿನ ಮಂದಾರ್ತಿ, ಕೊಲ್ಲೂರು ಮುಂತಾದ ದೇವರ ಹೊಗಳಿಕೆಯು ಇರುತ್ತದೆ. ಹೊತ್ತು ಸಾಗಿದಂತೆ ಭಕ್ತಿಯ ಆವೇಶ-ಉಬ್ಬರ ಏರಿದಂತೆ ಹೆಜ್ಜೆಯ ಗತಿ ತೀವ್ರಕೊಳ್ಳುತ್ತದೆ. ಕೋಲಿನ ನುಡಿತ-ಬಡಿತ ತೀವ್ರವಾಗುತ್ತದೆ. ಇದಾದ ಮೇಲೆ ಎಲ್ಲರೂ ಅವರವರ ಗುಮಟೆಯನ್ನು ಕೈಗೆತ್ತಿಕೊಳ್ಳುತ್ತಾರೆ. ಒಂದೇ ಸಾಲಿನಲ್ಲಿ ಎಲ್ಲರೂ ಉದ್ದಕ್ಕೆ ನಿಲ್ಲುವುದು ವಾಡಿಕೆ. ಗುಮಟೆ ಗುರ್ಕಾರ ಮಧ್ಯದಲ್ಲಿ ನಿಲ್ಲುತ್ತಾನೆ. ಸಾಮಾನ್ಯವಾಗಿ ಹಾಡಿನ ವಸ್ತು ಪಾಂಡವರ ವನವಾಸ ಅಥವಾ ಸೀತಾದೇವಿ ರಾಮಲಕ್ಷ್ಮಣರೊಂದಿಗೆ ಅರಣ್ಯದಲ್ಲಿದ್ದ ಭಾಗವಾಗಿರುತ್ತದೆ.

ಹಾಡುವ ಶೈಲಿ

[ಬದಲಾಯಿಸಿ]

ಕೊಂಕಣಿ ಭಾಷೆಯಲ್ಲಿರುವ ಈ ಹಾಡನ್ನು ಗುಮ್ಮಟಿಯ ಗುರ್ಕಾರ ಹೇಳಿದೊಡನೆ ಉಳಿದವರೆಲ್ಲರೂ ಗುಮಟೆ ನುಡಿಸುತ್ತಾ ಕುಣಿಯುತ್ತಾ ಮತ್ತೆ ಹಾಡನ್ನು ಪುನಾರಾವರ್ತಿ ಮಾಡುತ್ತಾ ಹೋಗುತ್ತಾರೆ. ಹೆಜ್ಜೆಯ ಗತಿಯಲ್ಲಿ, ತೀವ್ರತೆಯಲ್ಲಿ ನಾಲ್ಕು ಬಗೆಯ ವೈವಿಧ್ಯಗಳಿವೆ.

ಕುಡುಬಿ ನೃತ್ಯದ ಹಾಡು

[ಬದಲಾಯಿಸಿ]

ಪಲ್ಲವಿ:

ಕುಡುಬಿ ನೆಲದ ಸುವಾಸನೆ,

ಎಲ್ಲರೂ ಬನ್ನಿ ಕುಣಿಯೋಣ.

ತಾಳದ ಹೊಳಪಲ್ಲಿ, ಚಿಮ್ಮರಿ ನಾದದಲ್ಲಿ,

ನಮ್ಮ ಹಬ್ಬದ ಸಡಗರವನು ತೋರಿಯೋಣ.


ಚರಣ:

ಬೆಟ್ಟದ ತಿರುವು ಹೊತ್ತು ನೃತ್ಯ ಮಾಡೋಣ,

ಹೆಂಗಸುಗಳು ಚೆಲುವೆಲಿ ಕುಣಿಯೋಣ.

ಗಂಡಸು ಡೊಳ್ಳು ತಾಳ ಬೀಸುತ್ತಾ,

ಹೆಮ್ಮೆಯ ಕುಡುಬಿ ಹಬ್ಬದ ಹಾಡು ಹಾಡುತ್ತಾ.


ಮುಗಿಯುವ ಭಾಗ:

ಹೋಯ್ ಹೋಯ್ ಕುಡುಬಿ ನೃತ್ಯಾ,

ನಮ್ಮ ಸಂಸ್ಕೃತಿ, ನಮ್ಮ ಪ್ರೀತಿ ತೋರಿಯೋಣ.


ಆ ರಾತ್ರಿಯಿಂದಲೇ ಊರುಕೇರಿಯ ಸ್ವಜಾತಿ ಬಾಂಧವರ ಮನೆಗಳಿಗೆಲ್ಲಾ 'ಮೇಳ' ಹೋಗುತ್ತದೆ. ಮನೆಮನೆಯ ಅಂಗಳದಲ್ಲಿ ನೃತ್ಯಸೇವೆ ಜರುಗುತ್ತದೆ. ಪ್ರತಿ ಮನೆಯಲ್ಲಿ ಜೋಡು ತೆಂಗಿನ ಕಾಯಿ, ಒಂದು ಸೇರು ಅಕ್ಕಿ ಸಂದಾಯವಾಗಬೇಕು. ಪೂರ್ವ ನಿಶ್ಚಿತ ಮನೆಯಲ್ಲಿ ಊಟದ ಏರ್ಪಾಡಿರುತ್ತದೆ. ದಿನದ ತಿರುಗಾಟ ಮುಗಿದೊಡನೆ ಮೇಳದೊಡನೆ ಮೇಳದವರು ಹೊರಟ ಮನೆಗೆ ಬಂದು ಸೇರುತ್ತಾರೆ. ಕುಟುಂಬದಲ್ಲಿ ಹುಟ್ಟು ಸಾವುಗಳ ಸೂತಕ ಏರ್ಪಟ್ಟಾಗಲೂ ಈ ಐದು ದಿನ ಅವರ ಮನೆಗೆ ಹೋಗುವಂತಿಲ್ಲ. ಮೇಳದವರು ಮನೆಯ ಎದುರಿನ ಅಂಗಳದಲ್ಲಿ ಅಥವಾ ಗದ್ದೆಯಲ್ಲಿ ತಮ್ಮ ವೇಷಭೂಷಣ, ಗಮ್ಟಿ, ಕೋಲಾಟದ ಕೋಲು ಎಲ್ಲವನ್ನೂ ವ್ಯವಸ್ಥಿತವಾಗಿ ಇರಿಸಿ ಸ್ನಾನ ಮಾಡಿಕೊಂಡು ಬರುತ್ತಾರೆ. ಪ್ರತಿಯೊಬ್ಬನೂ ತನ್ನ ತನ್ನ ವೇಷಭೂಷಣಗಳ ಎದುರು ಒಂದೊಂದು ತೆಂಗಿನಕಾಯಿ ಒಡೆದು ನಮಸ್ಕರಿಸುತ್ತಾರೆ. ಆ ದಿನ ರಾತ್ರಿ ಸಾಮೂಹಿಕ ಬೇಟೆ. ಕೈಯಲ್ಲಿ ಕೋಲು, ಈಟಿ, ಬಲೆ, ಕತ್ತಿ- ಇವಿಷ್ಟು ಸಲಕರಣೆಗಳು. ದೊರೆತ ಬೇಟೆಯನ್ನು ಅಟ್ಟು, ಸಾಮೂಹಿಕ ಭೋಜನ ಜರುಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. ಗೊ.ರು ಚೆನ್ನಬಸಪ್ಪ.ಕರ್ನಾಟಕ ಜನಪದ ಕಲೆಗಳು.ಕನ್ನಡ ಸಾಹಿತ್ಯ ಪರಿಷತ್ತು. ೧೯೭೭
  2. ಹಿ.ಚಿ.ಬೋರಲಿಂಗಯ್ಯ, ಕರ್ನಾಟಕ ಜನಪದ ಕಲೆಗಳ ಕೋಶ,ಪ್ರಸಾರಾಂಗ. ಕನ್ನಡ ವಿಶ್ವವಿದ್ಯಾಲಯ ಹಂಪಿ. ೧೯೯೬