ಕುಠಿ
ಭಾರತದ ಕಟ್ಟಕಡೆಯ ಓಂದು ಸಣ್ಣ ಹಳ್ಳಿಯು ಹಿಮಾಲಯ ಪರ್ವತದ ಶಿವಾಲಿಕಾ ಎಂಬ ಪರ್ವತ ಶ್ರೇಣಿಯಲ್ಲಿದೆ. ಇಲ್ಲಿಗೆ ಹೋಗಬೇಕಾದರೆ ದೆಹಲಿಯಿಂದ ಒಂದು ಸಾವಿರ ಕಿ.ಮೀ. ದೂರದಲ್ಲಿರುವ ದಾರ್ಚುಲ ಎಂಬ ಊರಿನ ವರೆಗೆ ವಾಹನದಲ್ಲಿ ಹೋಗಿ, ಅಲ್ಲಿಂದ ೧೧೩ ಕಿ.ಮೀ. ಕಾಲ್ನಡಿಗೆಯಲ್ಲಿ ಹೋಗಬೇಕು. ಈ ಸಣ್ಣ ಹಳ್ಳಿಯ ಜಿಲ್ಲಾ ಕೇಂದ್ರ ಪಿತೋರ್ಗಡ. ಶಿವಾಲಿಕಾ ಪರ್ವತ ಶ್ರೇಣಿಯಲ್ಲಿ ಏರುತ್ತಾ ಸಾಗುವ ಈ ಕುಠಿ ಹಳ್ಳಿಗೆ ಈ ಹೆಸರು ಬಂದದ್ದು ಪಾಂಡವರನ್ನು ಕೌರವರಿಂದ ರಕ್ಷಿಸಲು ಕುಂತಿ ಹಸ್ತಿನಾಪುರದಿಂದ ಇಲ್ಲಿಗೆ ಬಂದು ನೆಲೆಸಿದ್ದಳು ಎನ್ನುವ ಪುರಾಣದ ಕತೆಯ ಆಧಾರದಿಂದ. ದಾರ್ಚುಲಾದಿಂದ ಕಾಲ್ನಡಿಗೆಯಲ್ಲಿ ಸಾಗುವಾಗ ದಾರಿಯಲ್ಲಿ ಸಿರ್ಖಾ,ಗಾಲ, ಬುಧಿ ಮತ್ತು ಗುಂಜಿ ಎಂಬ ಹಳ್ಳಿಗಳು ಸಿಗುತ್ತವೆ. ಮೊನ್ನೆ ನಡೆದ ಜಲ ಪ್ರಳಯದಲ್ಲಿ ಈ ದಾರಿಯೂ ಸಂಪೂರ್ಣ ಕೊಚ್ಚಿ ಹೋಗಿರುತ್ತದೆ. ಇಲ್ಲಿರುವ ಬುಧಿ ಗ್ರಾಮವು ಕುಠಿ ಮತ್ತು ದಾರ್ಚುಲಾದ ಮಧ್ಯ ಭಾಗ ಎನ್ನಬಹುದು. ಕುಠಿಯನ್ನು ತಲಪುವ ವರೆಗೆ ದಾರಿಯಲ್ಲಿ ಅನ್ನಪೂರ್ಣಾ, ಮಹಾದೇವ ಹಾಗೂ ಶೇಷನಾಗ ಮುಂತಾದ ಪರ್ವತಶ್ರೇಣಿಗಳಿವೆ. ಜೋಲೀಂಗ್ ಕಾಂಗ್ ಎನ್ನುವ ಪರ್ವತ ಪ್ರದೇಶಕ್ಕೆ ಸೇರಿದ ಇಲ್ಲಿನ ಬುಡಕಟ್ಟು ಜನಾಂಗ ಜೋಗ್ ಕಾಂಗ್.
ಜನಜೀವನ
[ಬದಲಾಯಿಸಿ]ಕುಠಿ ಹಳ್ಳಿಯ ಜನಸಂಖ್ಯೆ ಸಾಧಾರಣ ೪೫೦. ಇಲ್ಲಿಯ ಜನರು ತಮ್ಮ ದಿನನಿತ್ಯದ ಜೀವನಕ್ಕಾಗಿ ಬೇಕಾಗುವ ಇಲ್ಲಿ ಲಭ್ಯವಿಲ್ಲದ ಸಾಮಾಗ್ರಿಗಳನ್ನು ತರಲು ಕಾಲ್ನಡಿಗೆಯಲ್ಲಿಯೇ ಹೋಗಿ, ಹೊತ್ತುಕೊಂಡು ಒಂದು ವಾರಕಾಲ ಕಡಿದಾದ ಪರ್ವತವನ್ನು ಏರುತ್ತಾ ಸಾಗಬೇಕಾಗುತ್ತದೆ. ಇಂತದ ದುರ್ಗಮವಾದ ಹಾದಿಯಲ್ಲಿ ಕ್ರಮಿಸಿ ಮನೆಗೆ ಬೇಕಾದ ಸಾಮಾನು ಸೇರಿದಂತೆ ಸರ್ವಸ್ವವನ್ನು ಹೊತ್ತುಕೊಂಡು ತಂದು ಮದುವೆ, ಬಸಿರು, ಬಾಣಂತನ, ಕೆಲವೊಮ್ಮೆ ಕಾಡುವ ಕಾಯಿಲೆ ಇತ್ಯಾದಿಗಳಿಂದ ಏಗುವ ಇವರು ಆ ನೆಲದ ಬಗ್ಗೆ ಅರೆಪಾವಿನಷ್ಟು ಬೇಸರಿಸದೇ ಅಲ್ಲೇ ಬದುಕು ಸಾಗಿಸಿ ತಮ್ಮ ಊರೆಂದರೆ ಸ್ವರ್ಗವೆಂದೂ, ಇದಕ್ಕೆ ಸಮನಾದ ಊರು ಬೇರಿಲ್ಲವೆಂದು ಸಂತಸದಿಂದ ಜೀವನ ನಡೆಸುತ್ತಾರೆ. ವೈದ್ಯರ ಅಗತ್ಯವೇ ಅವರಿಲ್ಲ. ಸಣ್ಣ ಸಣ್ಣ ಕಾಯಿಲೆ, ಕೈ-ಕಾಲು ಮುರಿತದಂತಹ ಅನಾಹುತಗಳಿಗೆ ಕಾಡು ಉತ್ಪನ್ನದಲ್ಲೇ ಔಷದಿಗಳಿವೆ. ಅದಕ್ಕಿಂತ ದೊಡ್ಡರೋಗ ಇಲ್ಲಿಯವರೆಗೆ ಅವರನ್ನು ಬಾಧಿಸಿಲ್ಲಾ. ಮಾರಣಾಂತಿಕ ರೋಗಗಳಾದ ಕ್ಯಾನ್ಸರ್ ಇತ್ಯಾದಿ ಅವರಿಗೆ ಗೊತ್ತೇ ಇಲ್ಲಾ. ಬಸಿರು ಬಾಣಂತಿಯರು, ಮಕ್ಕಳು ತೀರಿ ಹೋಗಿರುವ ದಾಖಲೆಗಳಿಲ್ಲಾ. ಮರದ ದಿಮ್ಮಿಗಳ ಅಥವಾ ಕಲ್ಲು ಬಂಡೆಗಳ ಮೇಲೆ ಎತ್ತರಕ್ಕೆ ಕಟ್ಟಿದ ಮನೆಗಳ ಸಮೂಹ. ತಂಪು ಹವೆಯಿಂದ ರಕ್ಷಿಸುವ ಮತ್ತು ಹಿಮಪಾತದಲ್ಲೂ ಬೆಚ್ಚಗಿರಿಸುವ ಮರದ ಮನೆಗಳ ವಿನ್ಯಾಸವು ಆಕರ್ಷಕ ಹಾಗೂ ಅದ್ಭುತ. ಪ್ರತಿ ಮನೆಯ ಕಿಟಿಕಿಗೂ ಒಂದೊಂದು ವಿನ್ಯಾಸ, ಆಕಾರ, ಮನೆಯ ಬಾಗಿಲಿಗಿಂತ ಕಿಟಿಕಿಯ ಚಂದವೇ ಬೇರೆ. ಊರಿಗೊಂದು ಕಮಾನು, ಅದರ ಸುತ್ತ ಕಲ್ಲಿನ ಆವರಣ. ಅದರ ಸುತ್ತ ಹಸುರು ಆವೃತ ಹಿಮಗಿರಿ. ಮೇಲೆ ಬೆಳ್ಳನೆಯ ಆಕಾಶ ಒಂದು ಮಾಡಿರುವ ಪರ್ವತಾಗ್ರಗಳು. ಸಾರಿಗೆ ಸಹಾಯಕನಾಗಿ ಕುದುರೆಯೂ ಅಲ್ಲದ, ಅತ್ತ ಕತ್ತೆಯೂ ಅಲ್ಲದ "ಕಜ್ಜರ" ಎಂಬ ಕುಕತ್ತೆಯನ್ನು ಬಳಸುತ್ತಾರೆ.
ಆದಾಯ
[ಬದಲಾಯಿಸಿ]ಇಲ್ಲಿ ಲಭ್ಯವಿರುವ ಒಂದು ಬಗೆಯ ಹುಳ, ಶಿಲ್ಲಿ, ಪಲ್ತು, ಸಜ್ಜೆ ಸೇರಿದಂತೆ ಹಲವು ದವಸಧಾನ್ಯಗಳು,ಜಿಂಕರ, ಜೀನ್, ತಂಪಾಲ್ಕುಗಳ ಆಹಾರ ಕಣಜಗಳು, ಎಲ್ಲಿಯೂ ಸಿಗದ ಶಿಲ್ಲಿಕುರ ಎಂಬ ತಿನಿಸು, ಫೈನ್, ಆಕ್ರೋಟ್ ಮುಂತಾದ ಕಾಡುತ್ಪತ್ತಿಯೇ ಇವರ ಆದಾಯ ಮೂಲಗಳು.
ಸಮಬಾಳು-ಸಮಪಾಲು
[ಬದಲಾಯಿಸಿ]ಎತ್ತರದ ಪರ್ವತದ ಪ್ರದೇಶದ ಕೊರಕಲಿನ ಕುರುಚಲು ಕಾಡಿನ ಬುಡ ಅಗೆದು ಹುಳುಗಳನ್ನು ಹುಡುಕುವ ಕೆಲಸಕ್ಕೆ ದಿನ ಒಟ್ಟಾಗಿ ಹೋಗುತ್ತಾರೆ. ಈ ಹುಳಗಳ ಬೆಲೆಯು ಅಪಾರವಾಗಿದೆ. ಒಂದು ಕೆ.ಜಿ. ಇಂತಹ ಹುಳಗಳಿಗೆ ಕನಿಷ್ಟ ಏಳರಿಂದ, ಒಂಬತ್ತು ಲಕ್ಷ ರೂಪಾಯಿ ವರೆಗೆ ಇದೆ. ಅದಕ್ಕಾಗಿ ವರ್ಷದ ಕಾಲಮಾನಕ್ಕನುಗುಣವಾಗಿ ಹಿಮ ಕರಗಿ ಹಿಂದೆ ಸರಿಯುತ್ತಿದ್ದಂತೆ ಹುಳು ಆರಿಸುವ ಕೆಲಸ ಆರಂಭವಾಗುತ್ತದೆ. ಪುನಃ ಹಿಮ ಮುಚ್ಚಿಕೊಳ್ಳುವ ವರೆಗೆ ಅದರ ಸಂತಾನಾಭಿವೃದ್ಧಿ ನೋಡಿಕೊಂಡು ಹುಳು ಆರಿಸುವಿಕೆ ನಿಲ್ಲುತ್ತದೆ.ವರ್ಷದಲ್ಲಿ ನಾಲ್ಕು ಬಾರಿ ಮಾತ್ರ ಹೀಗೆ ಹುಳುಗಳ ಬೇಟೆ ನಡೆದು ಅದಕ್ಕೆ ಮಾರುಕಟ್ಟೆ ಕುದುರಿಸಲು ದೂರದ ಟಿಬೆಟ್ಟಿಗೆ ಕುದುರೆ ಏರಿ ದೌಡಾಯಿಸುತ್ತಾರೆ. ಹೀಗೆ ಬಂದ ಹಣ ಸಮಾಜದ ಸಮ್ಮುಖದಲ್ಲಿ ಊರ ಜನರಿಗೆಲ್ಲಾ ಪಾಲಾಗುತ್ತದೆ. ಈ ಕಾಯಕದಲ್ಲಿ ಎಲ್ಲರೂ ಸಾಮೂಹಿಕವಾಗಿ ಭಾಗವಹಿಸಿ, ತಮ್ಮಿಂದಾದ ಸಹಾಯ ನೀಡುತ್ತಾರೆ. ವಯಸ್ಕರು ಹುಳುಗಳು ಕರೆಗಟ್ಟದಂತೆ, ನೈಸರ್ಗಿಕ ಔಷಧಿಯನ್ನು ತಯಾರಿಸುವ ಕೆಲಸಕ್ಕೆ ತೊಡಗಿ ಅದರ ಪ್ಯಾಕಿಂಗ ಮತ್ತು ಸಾಗಾಟಕ್ಕೆ ಅನುಕೂಲ ಒದಗಿಸಿದರೆ, ಹೆಂಗಸರೆಲ್ಲಾ ಅದಕ್ಕೆ ಅಗತ್ಯ ಇರುವ ಒಣಭೋಜ ಪತ್ರಗಳ ಸಂಗ್ರಹ ಇತ್ಯಾದಿಗಳ ಮೂಲಕ ತಮ್ಮ ಸೇವೆ ಸಲ್ಲಿಸುತ್ತಾರೆ. ಊರ ಆಯ್ದ ಹುಡುಗರು ಮತ್ತು ಕೆಲವು ಹಿರಿಯರು ಈ ಕೆಲಕ್ಕೆ ವಾರಗಟ್ಟಲೆ ಬೆಟ್ಟ ಹತ್ತಿ ಹುಳಗಳ ಸಂಗ್ರಹ ಮಾಡುತ್ತಾರೆ. ಆ ಸಮಯದಲ್ಲಿ ಅವರಿಗೆ ಅವಶ್ಯವಿರುವ ಸಾಮಾನು ಸರಂಜಾಮುಗಳ ಪೂರೈಕೆ, ಆಹಾರ ಇತ್ಯಾದಿಗಳ ತಲಪಿಸುವಿಕೆ, ಇದಕ್ಕಾಗಿ ಇನ್ನೊಂದು ತಂಡ ನೆರವು ನೀಡುತ್ತದೆ. ಹೀಗೆ ಹಂಚಿಕೊಂಡು ಮಾಡುವ ಈ ಸಾಮೂಹಿಕ ಕಾರ್ಯದಲ್ಲಿ ಬರುವ ಹಣದ ವಿಲೆವಾರಿಯೂ ಸಮಾನವಾಗಿ ನಡೆದು ವರ್ಷದ ಪ್ರಮುಖ ಉತ್ಪಾದನೆಯ ಕೆಲಸ ಸಾಂಗವಾಗಿ ಜರಗುತ್ತದೆ. ಅದರಂತೆ ಮುಂದಿನ ಋತುಮಾನದ ವರೆಗೆ ಹುಳುವಿನ ಸಹಜ ನೈಜ ಬೆಳವಣಿಗೆಗೆ ಅನುಕೂಲವಾಗುವಂತಹ ವಾತಾವರಣ ಕಲ್ಪಿಸಿ ಬೆಟ್ಟ ಇಳಿಯುವ ಈ ಹಳ್ಳಿಗರ ಜೀವನ ಶೈಲಿ ತುಂಬಾ ಉಚ್ಚ ಸ್ಥರದಲ್ಲಿದೆ.
ಕಷ್ಟ ಜೀವಿಗಳು
[ಬದಲಾಯಿಸಿ]ಉಳಿದ ಸಮಯದಲ್ಲಿ ತಂತಮ್ಮ ವೈಯಕ್ತಿಕ ಸಂಪಾದನೆ ಮಾಡಿಕೊಳ್ಳುವ ಅವಕಾಶವಿದೆ. ಅದಕ್ಕಾಗಿ ಪ್ರವಾಸಿಗರನ್ನು ಕುದುರೆ ಮೂಲಕ ಕೈಲಾಸ-ಮಾನಸ ಸರೋವರ, ಅನ್ನಪೂರ್ಣೆ ಸೇರಿದಂತೆ ಇತರ ಸ್ಥಳಗಳ ದರ್ಶನ ಮಾಡಿಸಿ ಅವರಿಂದ ಹಣವನ್ನು ಪಡೆಯುತ್ತಾರೆ. ಹುಡುಗರು ಜೂನ್ ನಿಂದ ಸೆಪ್ಟಂಬರ್ ವರೆಗೆ ಚಾರಣಿಗರ ಹಿಂಬಾಲಕರಾಗಿ ಮೇಲು ಸಂಪಾದನೆ ಮಾಡುತ್ತಾರೆ. ಲಭ್ಯವಿರುವ ಜಾಗದಲ್ಲಿ ಆಹಾರೋತ್ಪನ್ನಕ್ಕಾಗಿ ಕೃಷಿಯನ್ನು ಮಾಡುತ್ತಾರೆ. ಜೋಗ್ ಕಾಂಗ್ರಿಗೆ ದುಡಿಮೆಯೇ ಮೂಲಮಂತ್ರ ಮತ್ತು ಸಾಮಾಜಿಕ ಸಮರಸವೇ ಜೀವನದ ಪ್ರಮುಖ ಅಂಶ. ಸ್ತ್ರೀಯರು ಮನೆಯಲ್ಲಿ ಹಣೆದ ಕಾರ್ಪೆಟ್ಗಳನ್ನು ಟಿಬೆಟ್, ನೇಪಾಳದ ಮೂಲಕ ಮಾರುಕಟ್ಟೆಗೆ ಸಾಗಿಸುತ್ತಾರೆ. ಈ ಕಾಯಕದಿಂದ ಮಹಿಳೆಯರು ಒಂದೊಂದು ಕಾರ್ಪೆಟ್ಗೆ ಸಾವಿರದಿಂದ ಒಂದೂವರೆ ಸಾವಿರದ ವರೆಗೆ ಸಂಪಾದಿಸುತ್ತಾರೆ. ಈ ಕಾಯಕದ ನಡುವೆ ಇತರ ಮನೆಗೆಲಸಗಳನ್ನು ಮಾಡಿ ನಿಭಾಯಿಸುತ್ತಾರೆ.
ಆಧಾರ - ೨೫ ಜುಲೈ ೨೦೧೩ರ ತರಂಗ ವಾರಪತ್ರಿಕೆಯಲ್ಲಿ ಬಂದ ಸಂತೋಷಕುಮಾರ ಮೆಹಂದಳೆ ಇವರ ವಿಹಾರ ಲೇಖನದಿಂದ ಆಯ್ದುಕೊಂಡಿದೆ