ವಿಷಯಕ್ಕೆ ಹೋಗು

ಕುಂದಾಪುರ ಕುಷ್ಠ ಗಾಣಿಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುಂದಾಪುರ ಕುಷ್ಠ ಗಾಣಿಗ (ಜನನ: 6 ಸೆಪ್ಟೆಂಬರ್ 1947 – ಮರಣ: 12 ಜೂನ್ 2025), ಮೂಲ ಹೆಸರು ಕೋಡಿ ಕೃಷ್ಣ ಗಾಣಿಗ, ಅವರು ಯಕ್ಷಗಾನದ ತೆಂಕುತಿಟ್ಟು ಮತ್ತು ಬಡಗುತಿಟ್ಟು ಎರಡೂ ಶೈಲಿಗಳಲ್ಲಿ ಪ್ರಸಿದ್ಧರಾಗಿದ್ದ ಹಿರಿಯ ಸ್ತ್ರೀವೇಷಧಾರಿ ಕಲಾವಿದರಾಗಿದ್ದರು. ದೇವಿ ಪಾತ್ರದ ಅಭಿನಯದ ಮೂಲಕ ಅವರು ವಿಶಿಷ್ಟ ಖ್ಯಾತಿ ಗಳಿಸಿದ್ದು, "ಕುಷ್ಟರ ದೇವಿ" ಎಂಬ ಜನಪ್ರಿಯ ಅಭಿವ್ಯಕ್ತಿ ಯಕ್ಷಗಾನಾಭಿಮಾನಿಗಳಲ್ಲಿ ಪ್ರಚಲಿತವಾಗಿತ್ತು.[೧]

ಆರಂಭಿಕ ಜೀವನ

[ಬದಲಾಯಿಸಿ]

ಕುಷ್ಠ ಗಾಣಿಗ ಅವರು 1947ರ ಸೆಪ್ಟೆಂಬರ್ 6ರಂದು ಲಕ್ಷ್ಮಣ ಗಾಣಿಗ ಮತ್ತು ಮಂಜಿ ದಂಪತಿಯ ಪುತ್ರರಾಗಿ ಜನಿಸಿದರು. ಬಡಗುತಿಟ್ಟಿನ ಪ್ರಸಿದ್ಧ ಕಲಾವಿದ ಹೇರಂಜಾಲು ವೆಂಕಟರಮಣ ಗಾಣಿಗ ಅವರಲ್ಲಿ ಬಡಗುತಿಟ್ಟಿನ ನಾಟ್ಯಾಭ್ಯಾಸವನ್ನು ಪಡೆದರು. ನಂತರ ಪಡ್ರೆ ಚಂದು ಅವರಿಂದ ತೆಂಕುತಿಟ್ಟಿನ ನಾಟ್ಯಾಭ್ಯಾಸವನ್ನು ಕಲಿತರು.[೧]

ಯಕ್ಷಗಾನ ಜೀವನ

[ಬದಲಾಯಿಸಿ]

ಅವರು ಅಮೃತೇಶ್ವರಿ ಮೇಳ, ಮಾರಣಕಟ್ಟೆ ಮೇಳ, ಕಲಾವಿಹಾರ ಮೇಳ ಮತ್ತು ರಾಜರಾಜೇಶ್ವರಿ ಮೇಳಗಳಲ್ಲಿ ಸೇವೆ ಸಲ್ಲಿಸಿದರು. 1970ರಲ್ಲಿ ಕಟೀಲು ಮೇಳವನ್ನು ಸೇರಿ ಮೊದಲಿಗೆ ಕಟೀಲು ಒಂದನೇ ಮೇಳದಲ್ಲಿ, ಆ ಬಳಿಕ ಕಟೀಲು ಎರಡನೇ ಮೇಳದಲ್ಲಿ ಮತ್ತು ಕೊನೆಗೆ ಕಟೀಲು ಮೂರನೇ ಮೇಳದಲ್ಲಿ ಒಟ್ಟಿಗೆ ಸರಿ ಸುಮಾರು 21 ವರ್ಷಗಳ ಕಾಲ ನಿರಂತರವಾಗಿ ಕಲಾಸೇವೆ ಮಾಡಿದರು.[೧]

ದೇವಿ, ನಂದಿನಿ, ಸುಭದ್ರೆ, ಮಂಡೋದರಿ, ದ್ರೌಪದಿ, ಕಯಾದು, ಸೀತೆ, ಅಂಬೆ, ದಮಯಂತಿ, ಮಾಯಾಪೂತನಿ, ಮಾಯಾಶೂರ್ಪನಖಿ ಹಾಗೂ ಚಂದ್ರಮತಿ ಮೊದಲಾದ ಸ್ತ್ರೀಪಾತ್ರಗಳಲ್ಲಿ ಅವರು ವಿಶಿಷ್ಟ ಛಾಪು ಮೂಡಿಸಿದರು. ಪರಶುರಾಮ, ವಿಷ್ಣು ಮತ್ತು ಕೃಷ್ಣ ಮೊದಲಾದ ಪುರುಷ ಪಾತ್ರಗಳಲ್ಲಿಯೂ ಅಭಿನಯಿಸಿದರು.[೨]

ವಿಶೇಷವಾಗಿ ಶ್ರೀದೇವಿ ಮಹಾತ್ಮೆ ಪ್ರಸಂಗದಲ್ಲಿನ ದೇವಿ ಪಾತ್ರ ಹಾಗೂ ಕಟೀಲು ಕ್ಷೇತ್ರಮಹಾತ್ಮೆ ಪ್ರಸಂಗದಲ್ಲಿನ ನಂದಿನಿ ಪಾತ್ರಗಳು ಅವರಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟವು.[೧]

ಪ್ರಶಸ್ತಿಗಳು ಮತ್ತು ಗೌರವಗಳು

[ಬದಲಾಯಿಸಿ]

ಕುಷ್ಠ ಗಾಣಿಗ ಅವರಿಗೆ ಉಡುಪಿ ಕಲಾರಂಗ ಪ್ರಶಸ್ತಿ, ಯಕ್ಷಗಾನ ಅಕಾಡೆಮಿಯ ಯಕ್ಷಸಿರಿ ಪ್ರಶಸ್ತಿ (2022), ಹಾರಾಡಿ ರಾಮ ಗಾಣಿಗ ಪ್ರಶಸ್ತಿ, ಯಕ್ಷಧ್ರುವ ಪಟ್ಲ ಪ್ರತಿಷ್ಠಾನ ಪ್ರಶಸ್ತಿ ಹಾಗೂ ಡಾ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಲಭಿಸಿವೆ.[೧]

2025ರ ಮೇ 31ರಂದು ಹಿರಿಯ ಕಲಾವಿದರಿಗೆ ನೀಡಲಾಗುವ ಸುವರ್ಣ ಪುರಸ್ಕಾರಕ್ಕೂ ಅವರು ಭಾಜನರಾಗಿದ್ದರು.[೩]

ಕುಷ್ಠ ಗಾಣಿಗ ಅವರು 2025ರ ಜೂನ್ 12ರಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕೋಡಿಯಲ್ಲಿರುವ ತಮ್ಮ ನಿವಾಸದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ಪತ್ನಿ, ಮೂವರು ಪುತ್ರರು ಮತ್ತು ಒಬ್ಬ ಪುತ್ರಿಯನ್ನು ಅಗಲಿದರು.[೪][೫]

ಉಲ್ಲೇಖಗಳು

[ಬದಲಾಯಿಸಿ]
  1. 1 2 3 4 5 "ದೇವಿ ಪಾತ್ರಕ್ಕೆ ಹೆಸರಾಗಿದ್ದ ಯಕ್ಷಗಾನ ಕಲಾವಿದ ಕೋಡಿ ಕುಷ್ಟ ಗಾಣಿಗ ಇನ್ನಿಲ್ಲ". Yakshagana.in. Retrieved 15 June 2026.
  2. ↑ "Kodi Krishna Ganiga – Senior Yakshagana artiste of Tenku-Badagu". Daijiworld. Retrieved 15 June 2026.
  3. ↑ "ಪ್ರಸಿದ್ಧ ಯಕ್ಷಗಾನ ಸ್ತ್ರೀವೇಷಧಾರಿ ಕೋಡಿ ಕುಷ್ಟ ಗಾಣಿಗ ನಿಧನ". ಏಷ್ಯಾನೆಟ್ ಸುವರ್ಣ ನ್ಯೂಸ್. Retrieved 15 June 2026.
  4. ↑ "ಕುಂದಾಪುರ: ಯಕ್ಷಗಾನ ಕಲಾವಿದ ಕೋಡಿ ಕುಷ್ಟ ಗಾಣಿಗ ನಿಧನ". ಪ್ರಜಾವಾಣಿ. Retrieved 15 June 2026.
  5. ↑ "Yakshagana artist Kodi Kusta Ganiga passes away". The Hindu. Retrieved 15 June 2026.