ವಿಷಯಕ್ಕೆ ಹೋಗು

ಕಾರ್ಪಾಥಿಯನ್ ಜೀವಮಂಡಲ ಮೀಸಲು ಪ್ರದೇಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾರ್ಪೇಥಿಯನ್ ಜೀವಗೋಳ ಮೀಸಲು
ಯುನೆಸ್ಕೋ ಜೀವಗೋಳ ಮೀಸಲು (Biosphere Reserve)
ಕಾರ್ಪಾಥಿಯನ್ ಜೀವಗೋಳ ಮೀಸಲು ಪ್ರದೇಶದ ನೋಟಗಳು
ದೇಶ ಉಕ್ರೇನ್
ಸ್ಥಳ ಝಕರ್ಪಟ್ಟಿಯಾ ಒಬ್ಲಾಸ್ಟ್
ವಿಸ್ತೀರ್ಣ ಸುಮಾರು ೫೭,೦೩೬ ಹೆಕ್ಟೇರ್
ಸ್ಥಾಪನೆಯಾದ ವರ್ಷ ೧೯೬೮
ಯುನೆಸ್ಕೋ MAB ಮಾನ್ಯತೆ ೧೯೯೨
ವಿಶ್ವ ಪರಂಪರೆ ಸಂಪರ್ಕ ೨೦೦೭ (ಬೀಚ್ ಅರಣ್ಯಗಳ ತಾಣದ ಭಾಗ)

ಕಾರ್ಪಾಥಿಯನ್ ಜೀವಮಂಡಲ ಮೀಸಲು ಪ್ರದೇಶ ಉಕ್ರೇನ್‌ನಲ್ಲಿರುವ ಒಂದು ಜೀವಗೋಳ ಮೀಸಲು ಪ್ರದೇಶವಾಗಿದೆ. ಇದನ್ನು 1968 ರಲ್ಲಿ ಸ್ಥಾಪಿಸಲಾಯಿತು ಮತ್ತು 1992 ರಲ್ಲಿ ಇದನ್ನು ಯುನೆಸ್ಕೋದವರ ವಿಶ್ವ ಜೀವಗೋಳ ಮೀಸಲು ಪ್ರದೇಶಗಳ ಪಟ್ಟಿಯಲ್ಲಿ ಸೇರಿಸಲಾಯಿತು.[]

2007 ರಿಂದ, ಈ ಮೀಸಲು ಪ್ರದೇಶದ ಗಣನೀಯ ಭಾಗವನ್ನು, ಉಜ್ ನದಿ ರಾಷ್ಟ್ರೀಯ ಉದ್ಯಾನವನದ ಪ್ರದೇಶಗಳೊಂದಿಗೆ ಸೇರಿಸಿ, 'ಕಾರ್ಪಾಥಿಯನ್ಸ್ ಮತ್ತು ಯುರೋಪ್‌ನ ಇತರ ಪ್ರದೇಶಗಳ ಪ್ರಾಚೀನ ಮತ್ತು ಆದಿಸ್ವರೂಪದ ಬೀಚ್ ಕಾಡುಗಳ' ಭಾಗವಾಗಿ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಲಾಗಿದೆ.[]

ಜಕಾರ್ಪಟ್ಯಾ ರಾಜ್ಯದ ಪೂರ್ವ ಭಾಗಗಳಲ್ಲಿ ನೆಲೆಗೊಂಡಿರುವ ಈ ಮೀಸಲು ಪದೇಶ, ಒಟ್ಟು 1,62,660 ಎಕರೆ ವಿಸ್ತೀರ್ಣವನ್ನು ಹೊಂದಿದ್ದು, ಎಂಟು ಪ್ರತ್ಯೇಕವಾದ ಸಂರಕ್ಷಿತ ಪರ್ವತ ಶ್ರೇಣಿಗಳ ಭಾಗಗಳು ಮತ್ತು ಎರಡು ಸಸ್ಯಶಾಸ್ತ್ರೀಯ ಮೀಸಲು ಪ್ರದೇಶ-ಚೋರ್ನಾ ಹೋರಾ ಮತ್ತು ಯುಲಿವ್ಸ್ಕಾ ಹೋರಾ-ಗಳನ್ನು ಒಳಗೊಂಡಿದೆ.[][] ಈ ಮೀಸಲು ಪ್ರದೇಶದ ಬಹುಪಾಲು ಭಾಗವು ಹಳೆಯ ಮೂಲ ಅರಣ್ಯಗಳಿಂದ ಅಂದರೆ ನೈಸರ್ಗಿಕವಾಗಿ ಬೆಳೆದ ಪ್ರಾಚೀನ ಕಾಡುಗಳಿಂದ ಆವೃತವಾಗಿದೆ. ಇದರಲ್ಲಿ 21,000 ಹೆಕ್ಟೇರ್‌ಗಳಿಗಿಂತ ಹೆಚ್ಚು ವಿಸ್ತಾರವಾಗಿರುವ 'ಉಹೋಲ್ಸ್ಕೊ-ಶಿರೋಕೊಲುಝಾನ್ಸ್ಕಿ' ಮಾಸಿಫ್ ಕೂಡ ಸೇರಿದ್ದು, ಇದು ಯುರೋಪಿನಲ್ಲೇ ಅತಿದೊಡ್ಡ ಪ್ರಾಚೀನ ಬೀಚ್ ಕಾಡುಗಳನ್ನು ಹೊಂದಿದೆ.[] ಆಡಳಿತಾತ್ಮಕವಾಗಿ, ಈ ಜೀವಗೋಳ ಮೀಸಲು ಪ್ರದೇಶವು ಉಕ್ರೇನ್‌ನ ಜಕಾರ್ಪಟ್ಯಾ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ (ರಖಿವ್, ತ್ಯಾಚಿವ್, ಖುಸ್ಟ್ ಮತ್ತು ಬೆರೆಹಿವ್) ಹರಡಿಕೊಂಡಿದೆ.

ಇತಿಹಾಸ ಮತ್ತು ವಿಸ್ತರಣೆ

[ಬದಲಾಯಿಸಿ]

ಈ ಪ್ರಕೃತಿ ಮೀಸಲು ಪ್ರದೇಶವನ್ನು 1968 ರಲ್ಲಿ ಸ್ಥಾಪಿಸಲಾಯಿತು ಮತ್ತು 1983 ರಲ್ಲಿ ಜೀವಗೋಳ ಮೀಸಲು ಪ್ರದೇಶವನ್ನಾಗಿ ಘೋಷಿಸಲಾಯಿತು. 1992 ರಲ್ಲಿ ಈ ಮೀಸಲು ಪ್ರದೇಶವನ್ನು ಯುನೆಸ್ಕೋದ ವಿಶ್ವ ಜೀವಗೋಳ ಮೀಸಲು ಪ್ರದೇಶಗಳ ಜಾಲದ ಪಟ್ಟಿಯಲ್ಲಿ ಸೇರಿಸಲಾಯಿತು.[] 2007 ರಲ್ಲಿ, ಇಲ್ಲಿನ ಬೀಚ್ ಕಾಡುಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಗುರುತಿಸಲಾಗಿದೆ.[]

2010 ರಲ್ಲಿ, ಉಕ್ರೇನಿಯನ್ ಅಧ್ಯಕ್ಷ ವಿಕ್ಟರ್ ಯಾನುಕೋವಿಚ್ ಅವರು ಈ ಮೀಸಲು ಪ್ರದೇಶವನ್ನು ವಿಸ್ತರಿಸಲು ಆದೇಶವನ್ನು ಹೊರಡಿಸಿದರು. ಆದರೆ, ಸ್ಥಳೀಯ ಸಮುದಾಯಗಳ ವಿರೋಧ ಮತ್ತು ಗಡಿ ಗುರುತಿಸುವಿಕೆಗೆ ಬೇಕಾದ ಹಣದ ಕೊರತೆಯಿಂದಾಗಿ ಈ ವಿಸ್ತರಣೆಯು ನಡೆಯಲಿಲ್ಲ. ಸಾಂಪ್ರದಾಯಿಕ ಭೂ ಬಳಕೆ ಹಕ್ಕುಗಳ, ವಿಶೇಷವಾಗಿ ಜಾನುವಾರುಗಳನ್ನು ಮೇಯಿಸುವುದು ಮತ್ತು ಒಣಹುಲ್ಲು ತಯಾರಿಕೆಗಳಿಗೆ ನಿಯಂತ್ರಣ ಬೀಳಬಹುದು ಎಂದು ಸ್ಥಳೀಯ ಸಮುದಾಯಗಳು ಕಳವಳ ವ್ಯಕ್ತಪಡಿಸಿದ್ದವು.[]

2025 ರಲ್ಲಿ, ಈ ಮೀಸಲು ಪ್ರದೇಶವನ್ನು ಅಧಿಕೃತವಾಗಿ ಸುಮಾರು 19,000 ಹೆಕ್ಟೇರ್‌ಗಳಷ್ಟು ಹೆಚ್ಚಿಸಲಾಯಿತು, ಇದರಿಂದಾಗಿ ಇದರ ಒಟ್ಟು ವಿಸ್ತೀರ್ಣವು ಸರಿಸುಮಾರು 65,828 ಹೆಕ್ಟೇರ್‌ಗಳಿಗೆ ತಲುಪಿತು.[]

ರಷ್ಯಾದ ಆಕ್ರಮಣದ ಸಂದರ್ಭ

[ಬದಲಾಯಿಸಿ]

ಫೆಬ್ರವರಿ 2022 ರಲ್ಲಿ ಉಕ್ರೇನ್ ಮೇಲೆ ರಷ್ಯಾದ ದಾಳಿಯ ನಂತರ ದಾಳಿಗೆ ಒಳಗಾದ ಪ್ರದೇಶಗಳಿಂದ ಜನಸಾಮಾನ್ಯರು ಪಲಾಯನ ಮಾಡಲು ಆರಂಭಿಸಿದರು. ಹಾಗೆ ಪಲಾಯನಗೈದ ನೂರಾರು ಮಂದಿ ಜನರಿಗೆ ಈ ಮೀಸಲು ಪ್ರದೇಶವು ಆಶ್ರಯ ನೀಡಿತು. ಫ್ರಾಂಕ್‌ಫರ್ಟ್ ಝೂಲಾಜಿಕಲ್ ಸೊಸೈಟಿಯು ಈ ಜನರಿಗೆ ವಸತಿ, ಔಷಧಗಳು, ಬಟ್ಟೆಗಳು, ನೈರ್ಮಲ್ಯ ಉತ್ಪನ್ನಗಳು ಮತ್ತು ಆಹಾರ ಪದಾರ್ಥಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಒದಗಿಸಿತು.[]

ವಿಭಾಗಗಳು

[ಬದಲಾಯಿಸಿ]

ಈ ಜೀವಗೋಳ ಮೀಸಲು ಪ್ರದೇಶವು ಎಂಟು ಪ್ರತ್ಯೇಕ ಸಂರಕ್ಷಣಾ ಮಾಸಿಫ್‌ಗಳನ್ನು (ಪರ್ವತ ಶ್ರೇಣಿಗಳು) ಹಾಗೂ ಎರಡು ಸಸ್ಯಶಾಸ್ತ್ರೀಯ ಮೀಸಲು ಪ್ರದೇಶಗಳನ್ನು ಒಳಗೊಂಡಿದೆ. ಅವುಗಳು ಹೀಗಿವೆ-

  1. ಚೋರ್ನೋಹೋರಾ ಸಂರಕ್ಷಣಾ ಮಾಸಿಫ್ (16,375 ಹೆಕ್ಟೇರ್) – ಇದು ಪೂರ್ವ ಬೆಸ್ಕಿಡ್ಸ್ ಮತ್ತು ಉಕ್ರೇನಿಯನ್ ಕಾರ್ಪಾಥಿಯನ್ಸ್‌ನ ಅತಿ ಎತ್ತರದ ಪರ್ವತ ಶ್ರೇಣಿಯಾದ ಚೋರ್ನೋಹೋರಾದ ದಕ್ಷಿಣ ಇಳಿಜಾರಿನಲ್ಲಿ ನೆಲೆಗೊಂಡಿದೆ.
  2. ಸ್ವಿಡೋವೆಟ್ಸ್ ಸಂರಕ್ಷಣಾ ಮಾಸಿಫ್ (6,580 ಹೆಕ್ಟೇರ್) – ಸಮುದ್ರ ಮಟ್ಟದಿಂದ 600-1883 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ; ಇದು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿರುವ 3,031 ಹೆಕ್ಟೇರ್ ವಿಸ್ತೀರ್ಣದ ಬೀಚ್ (beech) ಕಾಡುಗಳನ್ನು ಒಳಗೊಂಡಿದೆ.[]
  3. ಮರ್ಮೋರೋಶ್ ಸಂರಕ್ಷಣಾ ಮಾಸಿಫ್ (8,990 ಹೆಕ್ಟೇರ್) – ಇದು ರಖಿವ್ (Rakhiv) ಪರ್ವತಗಳ ಉತ್ತರ ಇಳಿಜಾರಿನಲ್ಲಿ ಸಮುದ್ರ ಮಟ್ಟದಿಂದ 750-1940 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ.
  4. ಕುಜ಼ಿ ಸಂರಕ್ಷಣಾ ಮಾಸಿಫ್ (4,925 ಹೆಕ್ಟೇರ್) – ಇದು ಸ್ವಿಡೋವೆಟ್ಸ್ ಪರ್ವತ ಶ್ರೇಣಿಯ ದಕ್ಷಿಣ ಕವಲುಗಳಲ್ಲಿ ಸಮುದ್ರ ಮಟ್ಟದಿಂದ 350-1409 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ.
  5. ಉಹೋಲ್ಕಾ ಮತ್ತು ಶಿರೋಕಾ ಲುಝಾಂಕಾ ಸಂರಕ್ಷಣಾ ಮಾಸಿಫ್ (15,580 ಹೆಕ್ಟೇರ್) – ಕ್ರಾಸ್ನಾ ಮತ್ತು ಮೆಂಚಿಲ್ ಪರ್ವತಗಳ ದಕ್ಷಿಣ ಇಳಿಜಾರುಗಳಲ್ಲಿ ನೆಲೆಗೊಂಡಿದೆ; ಇದು ಯುರೋಪಿನಲ್ಲೇ ಅತಿದೊಡ್ಡ ಪ್ರಾಚೀನ ಬೀಚ್ ಅರಣ್ಯಗಳ ಪ್ರದೇಶವನ್ನು ಹೊಂದಿದೆ.
  6. ಸಂರಕ್ಷಣಾ ಮಾಸಿಫ್ "ಡೋಲಿನಾ ನಾರ್ಟ್ಸಿಸಿವ್ (ನಾರ್ಸಿಸಸ್ ಹೂವುಗಳ ಕಣಿವೆ) – ಇದು ಖುಸ್ಟ್ಸ್ಕೊ-ಸೊಲೊಟ್ವಿನ್ಸ್ಕಾ (Khustsko-Solotvynska) ಕಣಿವೆಯ ಪಶ್ಚಿಮ ಭಾಗದಲ್ಲಿ ಸಮುದ್ರ ಮಟ್ಟದಿಂದ 180-200 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ.
  7. ಚೋರ್ನಾ ಹೋರಾ ಸಸ್ಯಶಾಸ್ತ್ರೀಯ ಮೀಸಲು ಪ್ರದೇಶ (ಕಪ್ಪು ಪರ್ವತ) (823 ಹೆಕ್ಟೇರ್) – ಓಕ್, ಹಾರ್ನ್‌ಬೀಮ್-ಓಕ್, ಓಕ್-ಬೀಚ್ ಮತ್ತು ಬೀಚ್-ಓಕ್ ಮರಗಳ ಕಾಡುಗಳನ್ನು ಸಂರಕ್ಷಿಸಲು 1974 ರಲ್ಲಿ ಇದನ್ನು ಸ್ಥಾಪಿಸಲಾಯಿತು; 1997 ರಲ್ಲಿ ಇದು ಮೀಸಲು ಪ್ರದೇಶದ ಭಾಗವಾಯಿತು.
  8. ಯುಲಿವ್ಸ್ಕಾ ಹೋರಾ ಸಸ್ಯಶಾಸ್ತ್ರೀಯ ಮೀಸಲು ಪ್ರದೇಶ (ಜೂಲಿಯಸ್ ಪರ್ವತ) (176 ಹೆಕ್ಟೇರ್) – 1974 ರಲ್ಲಿ ಸ್ಥಾಪನೆಯಾದ ಇದು, 1997 ರಲ್ಲಿ ಮೀಸಲು ಪ್ರದೇಶದ ಭಾಗವಾಯಿತು; ಇದು ಉಕ್ರೇನಿಯನ್ ಕಾರ್ಪಾಥಿಯನ್ಸ್‌ನ ಅತ್ಯಂತ ಬೆಚ್ಚಗಿನ ಹವಾಮಾನವನ್ನು ಹೊಂದಿದ್ದು, ಉಷ್ಣತೆಯನ್ನು ಬಯಸುವ ಬಾಲ್ಕನ್ ಮತ್ತು ಮೆಡಿಟರೇನಿಯನ್ ಪ್ರಭೇದಗಳನ್ನು ಸಂರಕ್ಷಿಸುತ್ತದೆ.

ಸಸ್ಯ ಮತ್ತು ಪ್ರಾಣಿಸಂಕುಲ

[ಬದಲಾಯಿಸಿ]

ಸಸ್ಯ ಪ್ರಭೇದಗಳು

[ಬದಲಾಯಿಸಿ]

ಕಾರ್ಪಾಥಿಯನ್ ಜೀವಗೋಳ ಮೀಸಲು ಪ್ರದೇಶದಲ್ಲಿ ವೈವಿಧ್ಯಮಯವಾದ ಜೀವಸಂಕುಲಗಳನ್ನು ಕಾಣಬಹುದು. ಈ ಪ್ರದೇಶದಲ್ಲಿ 262 ವಿಧದ ಶಿಲೀಂಧ್ರ ಪ್ರಭೇದಗಳು, 392 ವಿಧದ ಕಲ್ಲುಹೂವು ಪ್ರಭೇದಗಳು, 440 ವಿಧದ ಪಾಚಿ ಪ್ರಭೇದಗಳು ಮತ್ತು 1,353 ವಿಧದ ನಾಳೀಯ ಸಸ್ಯಗಳ ಪ್ರಭೇದಗಳನ್ನು ಒಳಗೊಂಡಿದೆ. ಈ ಮೀಸಲು ಪ್ರದೇಶದಲ್ಲಿ ಒಟ್ಟು 3,022 ಪ್ರಕಾರದ ಸಸ್ಯ ಪ್ರಭೇದಗಳನ್ನು ದಾಖಲಿಸಲಾಗಿದೆ.[] ಇವೇ ಅಲ್ಲದೆ 465 ಪ್ರಭೇದಗಳ ಶೈವಲ ಅಥವಾ ಪಾಚಿಗಳನ್ನು ಕಂಡುಹಿಡಿಯಲಾಗಿದೆ. ಶಿಲೀಂಧ್ರಗಳು ಸೇರಿದಂತೆ 197 ಸಸ್ಯ ಪ್ರಭೇದಗಳನ್ನು 'ಉಕ್ರೇನ್‌ನ ರೆಡ್ ಬುಕ್', 'ಯುರೋಪಿಯನ್ ರೆಡ್ ಲಿಸ್ಟ್ಸ್' ಮತ್ತು 'ಇಂಟರ್ನ್ಯಾಷನಲ್ ರೆಡ್ ಬುಕ್' ಗಳಲ್ಲಿ ಪಟ್ಟಿ ಮಾಡಲಾಗಿದೆ.[]

ಪ್ರಾಣಿ-ಪಕ್ಷಿಗಳು

[ಬದಲಾಯಿಸಿ]

ಕಾರ್ಪಾಥಿಯನ್ ಜೀವಗೋಳ ಮೀಸಲು ಪ್ರದೇಶದಲ್ಲಿ ಒಟ್ಟು 66 ವಿಧದ ಸಸ್ತನಿ ಪ್ರಭೇದಗಳು, 195 ವಿಧದ ಪಕ್ಷಿಗಳು, 9 ವಿಧದ ಸರೀಸೃಪಗಳು, 14 ವಿಧದ ಉಭಯಚರಿಗಳು, 29 ವಿಧದ ಮೀನುಗಳು ಮತ್ತು ಒಂದು ಸೈಕ್ಲೋಸ್ಟೊಮಾಟಸ್- ದವಡೆಯಿಲ್ಲದ ಮೀನುಗಳು ಪ್ರಭೇದವನ್ನು ಗುರುತಿಸಲಾಗಿದೆ. ಹಾಗೆಯೇ ಸರಿಸುಮಾರು 15,000 ವಿಧದ ಅಕಶೇರುಕ ಪ್ರಭೇದಗಳನ್ನು ಗುರುತಿಸಲಾಗಿದೆ. 248 ವಿಧದ ಪ್ರಾಣಿ ಪ್ರಭೇದಗಳನ್ನು 'ಉಕ್ರೇನ್‌ನ ರೆಡ್ ಬುಕ್', 'ಯುರೋಪಿಯನ್ ರೆಡ್ ಲಿಸ್ಟ್ಸ್' ಮತ್ತು 'ಇಂಟರ್ನ್ಯಾಷನಲ್ ರೆಡ್ ಬುಕ್' ಗಳಲ್ಲಿ ಪಟ್ಟಿ ಮಾಡಲಾಗಿದೆ. ಇಷ್ಟು ಮಾತ್ರವಲ್ಲ, ಈ ಮೀಸಲು ಪ್ರದೇಶದಲ್ಲಿ ತೋಳ, ಕಾಡುಬೆಕ್ಕು ಮತ್ತು ಕಂದು ಕರಡಿಯಂತಹ ದೊಡ್ಡ ಮಾಂಸಾಹಾರಿ ಪ್ರಾಣಿಗಳಿಗೂ ನೆಲೆಯಾಗಿದೆ. ಯುರೋಪಿಯನ್ ಎಲೆ ಉದುರುವ ಕಾಡುಗಳಲ್ಲಿ ಕಂಡುಬರುವ ಎಲ್ಲಾ ಹತ್ತು ವಿಧದ ಮರಕುಟಿಗ ಪ್ರಭೇದಗಳು ಸ್ವಿಡೋವೆಟ್ಸ್ ಮಾಸಿಫ್‌ನಲ್ಲಿ ಕಂಡುಬರುತ್ತವೆ.[]

ಇಲ್ಲಿ B2 ಮತ್ತು B3 ಪ್ರಭೇದಗಳ ಪಕ್ಷಿ ಸಂಕುಲಗಳು ಕಂಡುಬಂದಿರುವುದರಿಂದ, ಈ ಜೀವಗೋಳ ಮೀಸಲು ಪ್ರದೇಶವನ್ನು 'ಬರ್ಡ್‌ಲೈಫ್ ಇಂಟರ್‌ನ್ಯಾಷನಲ್' ಸಂಸ್ಥೆಯು ಈ ಮೀಸಲು ಪ್ರದೇಶವನ್ನು 'ಪ್ರಮುಖ ಪಕ್ಷಿ ಪ್ರದೇಶ' ಎಂದು ಗುರುತಿಸಿದೆ.[]

ಸ್ಥಳೀಯ ಆರ್ಥಿಕತೆಯ ಬೆನ್ನೆಲುಬು

[ಬದಲಾಯಿಸಿ]

ಈ ಮೀಸಲು ಪ್ರದೇಶವು ಸ್ಥಳೀಯ ಸಮುದಾಯಗಳ ಜೀವನೋಪಾಯ ರೂಪಿಸಿಕೊಳ್ಳುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ. ಸ್ಥಳೀಯ ಜನರೇ ಇಲ್ಲಿನ ಕೃಷಿ ಭೂಮಿಯ ಮುಖ್ಯ ಬಳಕೆದಾರರಾಗಿದ್ದಾರೆ. ಇವರಲ್ಲಿ ಅನೇಕರು ಆಲ್ಪೈನ್ ಹುಲ್ಲುಗಾವಲುಗಳಲ್ಲಿ ದನ ಮತ್ತು ಕುರಿಗಳನ್ನು ಮೇಯಿಸುವ ಕಸುಬಿನಲ್ಲಿ ತೊಡಗಿಸಿಕೊಂಡಿದ್ದಾರೆ. ಅನೇಕ ಹಳ್ಳಿಗಳಲ್ಲಿ ಸಾಂಪ್ರದಾಯಿಕ ಕುರಿ ಉತ್ಪನ್ನಗಳು ಇಂದಿಗೂ ಪ್ರಮುಖ ಪಾತ್ರವನ್ನು ವಹಿಸುತ್ತವೆ.

ಸ್ಥಳೀಯ ಜನರು ಚಳಿಯಿಂದ ಬೆಚ್ಚಗಿರಲು ಮತ್ತು ನಿರ್ಮಾಣ ಕಾರ್ಯಗಳಿಗಾಗಿ ಮರಗಳನ್ನು ಮತ್ತು ಅದರ ಉತ್ಪನ್ನಗಳನ್ನು ಅವಲಂಬಿಸಿದ್ದಾರೆ. ಇಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಿರುವ ಕಾರಣ, ಸ್ಥಳೀಯವಾಗಿ ಉದ್ಯೋಗದಲ್ಲಿರುವ ಅನೇಕ ಜನರು ಅರಣ್ಯ ವಲಯದಲ್ಲಿ ಕೆಲಸ ಮಾಡುತ್ತಾರೆ. ಇದರ ಜೊತೆಗೆ, ಸಣ್ಣ ಪ್ರಮಾಣದ ಪ್ರವಾಸೋದ್ಯಮ, ಮೀನುಗಾರಿಕೆ ಮತ್ತು ಅರಣ್ಯೇತರ ಉತ್ಪನ್ನಗಳ ಮಾರಾಟದಿಂದ ಹೆಚ್ಚುವರಿ ಆದಾಯವನ್ನು ಗಳಿಸುತ್ತಾರೆ.

ಉಲ್ಲೇಖ

[ಬದಲಾಯಿಸಿ]
  1. "Carpathian | United Nations Educational, Scientific and Cultural Organization". UNESCO. July 2011. Archived from the original on 2022-04-15. Retrieved 2023-11-21.
  2. 1 2 3 4 5 6 7 "Carpathian Biosphere Reserve". UNESCO Man and the Biosphere Programme (in ಇಂಗ್ಲಿಷ್). 2026-04-02. Retrieved 2026-08-15.
  3. "Carpathian Biosphere Reserve, Ukraine". UNESCO (in ಇಂಗ್ಲಿಷ್). 2020-02-19. Retrieved 2023-11-21.
  4. 1 2 "Carpathian Biosphere Reserve". Frankfurt Zoological Society (in ಇಂಗ್ಲಿಷ್). Retrieved 2026-08-15.
  5. "Розширення меж Карпатського біосферного заповідника досі не узаконено" [Expansion of the Carpathian Biosphere Reserve borders still not legalized]. Закарпаття онлайн (in ಉಕ್ರೇನಿಯನ್). 2010-11-02. Retrieved 2026-08-15.
  6. "16% of the State Forestry Agency's forests already have protected status". Ecopolitic (in ಇಂಗ್ಲಿಷ್). 2026-06-09. Retrieved 2026-08-15.
  7. "Svydovets". European Beech Forests (in ಇಂಗ್ಲಿಷ್). Retrieved 2026-08-15.
  8. "Carpathian Biosphere Reserve". BirdLife International Data Zone (in ಇಂಗ್ಲಿಷ್). Retrieved 2026-08-15.