ವಿಷಯಕ್ಕೆ ಹೋಗು

ಕಾಮಂದಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಮಂದಕಿ ಕಾಮಂದಕೀಯ ಎಂಬ ನೀತಿಶಾಸ್ತ್ರದ ಕರ್ತೃ. ಕಮಂದಕ ಋಷಿಯ ಮಗ.

ಕ್ರಿ. ಪೂ. 320-80ರ ನಡುವೆ ಇದ್ದನೆಂದು ತಿಳಿದು ಬರುತ್ತದೆ. ಈತನ ರಾಜನೀತಿಶಾಸ್ತ್ರ ವಿಷಯಕವಾದ ನೀತಿಸಾರ ಕೌಟಿಲ್ಯಅರ್ಥಶಾಸ್ತ್ರದ ಧಾಟಿಯಲ್ಲಿದೆ. ಕರ್ತೃವೇ ಒಂದು ಕಡೆ ಹೇಳುವಂತೆ ಗ್ರಂಥದ ಬಹುಪಾಲು ಕೌಟಿಲ್ಯನ ರಚನೆಗಳಿಂದ ಆಯ್ದ ಸಾರಾಂಶವನ್ನು ಉಳ್ಳದ್ದಾಗಿದೆ. ಈ ಗ್ರಂಥ ಪದ್ಯರೂಪದಲ್ಲಿ ಬರೆದಿರುವ ಪ್ರಥಮ ರಾಜನೀತಿಶಾಸ್ತ್ರವೆಂದು ಹೇಳಲಾಗಿದೆ.ಇದರಲ್ಲಿರುವ ವಿಷಯಗಳು.

  1. ರಾಜಾಧಿಕಾರ ಮತ್ತು ಸಮಾಜ ವ್ಯವಸ್ಥೆಯ ಕಾನೂನಿನ ಮೂಲ;
  2. ರಾಜನ ಕರ್ತವ್ಯಗಳು ಮತ್ತು ಅಧಿಕಾರದ ಉಪಯೋಗ;
  3. ರಾಜ್ಯ ಮತ್ತು ಸರ್ಕಾರದ ರಚನೆಯ ವಿವರಗಳು;
  4. ಸರ್ಕಾರದ ನೀತಿ ಮತ್ತು ಕರ್ತವ್ಯಗಳ ವಿವರಗಳು;
  5. ರಾಜನ ಮತ್ತು ಸಮುದಾಯದ ರಕ್ಷಣೆಯ ವಿಚಾರಗಳು;
  6. ರಾಜ್ಯರಾಜ್ಯಗಳ ನಡುವಿನ ಸಂಬಂಧಗಳು;
  7. ರಾಜನೀತಿಗೆ ಸಂಬಂಧಪಟ್ಟ ವಿಚಾರಗಳು- ಹೀಗೆ ಇಲ್ಲಿನ ವಿಷಯಾನುಕ್ರಮಣಿಕೆ ಇದೆ.

ಈತನೂ ದಂಡನೀತಿಯ ಅಂಶವನ್ನು ಎತ್ತಿ ಹಿಡಿದಿದ್ದಾನೆ. ಆ ಮೂಲಕ ಸಂಪ್ರದಾಯದ ಸಾಮಾಜಿಕ ಮತ್ತು ನೈತಿಕ ತತ್ತ್ವಗಳನ್ನು ಗುರುತಿಸಿದ್ದಾನೆ. ರಾಜ್ಯದ ಅಂತಿಮ ಧ್ಯೇಯ ಮತ್ತು ಗುರಿಗಳ ಬಗ್ಗೆ ಚರ್ಚಿಸಿದ್ದಾನೆ. ಪ್ರಜೆಗಳ ಮತ್ತು ಪ್ರಭುಗಳ ಆಸಕ್ತಿಗಳು ಒಂದೇ ಆಗಿರುತ್ತವೆ ಎಂದು ಹೇಳಿದ್ದಾನೆ. ರಾಜನಲ್ಲಿಯ ನೈತಿಕ ಶಿಸ್ತು ಮತ್ತು ಕರ್ತವ್ಯಗಳ ಬಗ್ಗೆ ವಿವರಣೆ ನೀಡುವುದರೊಂದಿಗೆ ಕ್ರೂರ ಮತ್ತು ಅನೈತಿಕ ಗುಣಗಳಿಂದಾಗಿ ನಾಶ ಹೊಂದಿದ ರಾಜರುಗಳನ್ನು ಕುರಿತೂ ಬರೆದಿದ್ದಾನೆ. ಯುವರಾಜನ ವಿದ್ಯೆ ಮತ್ತು ತರಬೇತಿಯ ವಿಚಾರದಲ್ಲಿ ಸಾಕಷ್ಟು ವಿಪುಲವಾಗಿ ಚರ್ಚಿಸಿದ್ದಾನೆ. ಅನುಜೀವಿಗಳು (ರಾಜಸೇವಕರು) ರಾಜನಿಗೆ ಸಲ್ಲಿಸಬೇಕಾದ ಸೇವೆಯನ್ನು ಕುರಿತ ವಿವರಗಳನ್ನು ಕೊಟ್ಟಿದ್ದಾನೆ.

ವಿಶೇಷತೆಗಳು

[ಬದಲಾಯಿಸಿ]

ಕಂಟಕಶೋಧನ ಅಥವಾ ಅಪರಾಧಗಳ ಪತ್ತೆಯ ಬಗ್ಗೆ ಅನೇಕ ಮಹತ್ತ್ವದ ವಿಷಯಗಳನ್ನು ಇಲ್ಲಿ ಸೂಚಿಸಲಾಗಿದೆ. ಸಪ್ತಾಂಗಗಳ ಪ್ರಸ್ತಾಪವಿಲ್ಲಿದೆ. ಸೈನ್ಯವನ್ನು ಹತೋಟಿಯಲ್ಲಿಟ್ಟುಕೊಳ್ಳುವುದಕ್ಕೆ ಮುಖ್ಯ ಗಮನ ಕೊಡಬೇಕೆಂದು ಕಾಮಂದಕಿಯ ಮತ. ಮಂಡಲ ವ್ಯವಸ್ಥೆಯ ಬಗ್ಗೆಯೂ ವಿವರಣೆಯಿದೆ. ಕೌಟಿಲ್ಯ ಗ್ರಾಮಗಣ ರಾಜ್ಯಗಳ ಬಗ್ಗೆ ಪ್ರತ್ಯೇಕವಾಗಿ ಬರೆದಿರುವಂತೆ ಈತ ಬರೆದಿಲ್ಲ. ಬಹುಶಃ ಈತನ ಕಾಲದಲ್ಲಿ ಅಂಥ ವ್ಯವಸ್ಥೆಗಳಿಲ್ಲದೆ ಇರಬಹುದು. ಹಾಗೆಯೇ ಅರ್ಥಶಾಸ್ತ್ರದಲ್ಲಿ ಕೌಟಿಲ್ಯ ಪ್ರಜೆಯ ನಾಗರಿಕ ಮತ್ತು ಆಪರಾಧಿಕ ಕಾನೂನುಗಳನ್ನು ಚರ್ಚಿಸಿರುವಂತೆ ಇಲ್ಲಿ ಆ ವಿಷಯಗಳ ಬಗ್ಗೆ ಹೆಚ್ಚು ಗಮನವಿತ್ತಂತಿಲ್ಲ. ಇಲ್ಲಿನ ಬರೆಹಗಳಲ್ಲಿ ಹೆಚ್ಚಾಗಿ ರಾಜನ ಮತ್ತು ಆತನ ಸೇನಾಧಿಕಾರಿಗಳ ಬಗ್ಗೆ ವಿವರಣೆಗಳು ಸಿಕ್ಕುತ್ತವೆಯೇ ಹೊರತು ಬೇರಾವ ಆಡಳಿತ ಅಥವಾ ಕಾನೂನು ಪಾಲನೆಯ ವಿವರಣೆಗಳೂ ದೊರಕುವುದಿಲ್ಲ.

ಹೆಚ್ಚಿನ ಓದು

[ಬದಲಾಯಿಸಿ]
  • Kāmandaki (2021). Knutson, Jesse (ed.). The Essence of Politics. Translated by Knutson, Jesse. Cambridge, MA: Harvard University Press. ISBN 9780674975767.
  • Manmatha Nath Dutt, ed. (1896). Kamandakiya Nitisara or The Elements of Polity (in ಇಂಗ್ಲಿಷ್). Calcutta: Elysium Press.
  • Raja Rajendra Lala Mitra, ed. (2008). The Nitisara by Kamandaki. Translated by Sisir Kumar Mitra. The Asiatic Society.

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕಾಮಂದಕಿ&oldid=1342008" ಇಂದ ಪಡೆಯಲ್ಪಟ್ಟಿದೆ