ಕಾನ್ಸ್ಟಂಟೈನ್, ಆಫ್ರಿಕದ

ಕಾನ್ಸ್ಟಂಟೈನ್, ಆಫ್ರಿಕದ 1020-1087. ಮಧ್ಯಯುಗದಲ್ಲಿ ವೈದ್ಯಕ್ಷೇತ್ರದಲ್ಲಿ ಕೆಲಸ ಮಾಡಿದ ಒಬ್ಬ ಮುಖ್ಯ ವ್ಯಕ್ತಿ. ಅರಬ್ಬೀ ಭಾಷೆಯ ಪ್ರಮುಖ ಕೃತಿಗಳನ್ನು ಲ್ಯಾಟಿನ್‍ಗೆ ತರ್ಜುಮೆ ಮಾಡಲು ಪ್ರಾರಂಭಿಸಿದವ. ಬಹುಶಃ ಸಿಸಿಲಿಯಲ್ಲಿ ಕ್ರೈಸ್ತ ಮನೆತನವೊಂದರಲ್ಲಿ ಹುಟ್ಟಿ ಅರಬ್ಬೀ, ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳನ್ನು ಕಲಿತ. 1071ರಲ್ಲಿ ನಾರ್ಮನ್ ಶ್ರೀಮಂತ ರಾಬರ್ಟ್ ಗ್ವಿಸ್ಕಾರ್ಡನ ಸೇವೆಯಲ್ಲಿದ್ದಾಗ ಸಾಲೆರ್ನೊ ನಗರಕ್ಕೆ ಹೋದ. ಅಲ್ಲಿ ಬೆನೆಡಿಕ್ಟೈನ್ ಪಂಥಕ್ಕೆ ಸೇರಿ ಕ್ರೈಸ್ತಪಾದ್ರಿಯಾದ. ಮಾಂಟೆ ಕ್ಯಾಸಿನೋದಲ್ಲಿಯ ಮಠದಲ್ಲಿದ್ದಾಗ ಅರಬ್ಬೀ ಗ್ರಂಥಗಳನ್ನು ಲ್ಯಾಟಿನ್‍ಗೆ ಭಾಷಾಂತರಿಸಿದ. ಸಾಂಸ್ಕತಿಕ ಇತಿಹಾಸಕ್ಕೆ ಇವು ಮಹತ್ತ್ವ ಪೂರ್ಣವಾದ ಕೊಡುಗೆಗಳು. ಇವು ಯೂರೋಪಿನ ಅಂಧಕಾರಯುಗದ ಅಂತ್ಯವನ್ನೂ ವಿದ್ವದ್ಯುಗದ ಪ್ರಾರಂಭವನ್ನೂ ಸೂಚಿಸುತ್ತವೆ. ಇವನು ಭಾಷಾಂತರಿಸಿದ ಕೃತಿಗಳಲ್ಲಿ ಯೆಹೂದ್ಯ ಐಸಾಕ್ ಇಸ್ರೇಲಿಯ (855-955) ಎರಡು ದಾರ್ಶನಿಕ ಕೃತಿಗಳೂ ಪರ್ಷಿಯದ ಇಬ್ನ್ ಅಲ್ ಅಬ್ಬಾಸನ (ಮರಣ 994) ಲೈಬರ್ ರೆಜಿಯಸ್ ಎಂಬ ವೈದ್ಯಗ್ರಂಥದ ಸಂಗ್ರಹವಾದ ಪಾಂಟೆಕನ್ ಎಂಬುದೂ ಮುಖ್ಯವಾದವು. ಕೊನೆಯ ಗ್ರಂಥ ಪಾಶ್ಚಾತ್ಯರಿಗೆ ಮೊದಲ ಬಾರಿಗೆ ಗ್ರೀಕ್ ವೈದ್ಯಪದ್ಧತಿಯ ಪರಿಚಯ ದೊರಕಿಸಿಕೊಟ್ಟಿತು. ಅತಿ ಶೀಘ್ರದಲ್ಲಿ ಯೂರೋಪಿನಲ್ಲೆಲ್ಲ ಇವನ ಬರವಣಿಗೆಗಳು ಪ್ರಸಾರವಾಗಿ ಪ್ರಭಾವ ಬೀರಿದುವು. ಸಾಲೆರ್ನೊ ನಗರದ ವೈದ್ಯಕ ಶಾಲೆಯಲ್ಲಿ ಇವುಗಳ ಪ್ರಭಾವ ಹೆಚ್ಚಾಗಿತ್ತು.

ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |