ಕಾಡುಜೀರಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೆಂಟ್ರಾಂತೀರಂ ಆಂತೆಲ್ಮಿಂಟಿಕಂ ಅಥವಾ ವರ್ನೋನಿಯ ಆಂತೆಲ್ಮಿಂಟಿಕಂ ಪ್ರಭೇದನಾಮವುಳ್ಳ ಕಂಪಾಸಿóಟೀ ಅಥವಾ ಆಸ್ಟರೇಸೀ ಕುಟುಂಬಕ್ಕೆ ಸೇರಿದ ಒಂದು ಮೂಲಿಕೆ ಸಸ್ಯ. ಇದು ಏಷ್ಯ, ಅಮೆರಿಕ ಮತ್ತು ಆಸ್ಟ್ರೇಲಿಯ ಖಂಡಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಇದನ್ನು ಸೋಮರಾಜಿ ಎನ್ನುವುದಿದೆ.[೧]

ಇದು 2'-3'ಗಳಷ್ಟು ಎತ್ತರವಾಗಿದ್ದು ಕಪ್ಪು ನೆಲದಲ್ಲಿ ಹುಲುಸಾಗಿ ಬೆಳೆಯುತ್ತದೆ. ಇದರ ಕಾಂಡ ಒರಟಾಗಿಯೂ ಗಟ್ಟಿಮುಟ್ಟಾಗಿಯೂ ಇದೆ. ರೆಂಬೆಗಳ ಮೇಲೆ ತುಪ್ಪುಳದಂಥ ರೋಮಗಳಿವೆ. ಎಲೆಗಳು ದೀರ್ಘವೃತ್ತಾಕಾರದವು, ತುದಿ ಮೊನಚು, ಅಂಚು ಗರಗಸದಂತೆ. ಎಲೆಗಳ ಮೇಲೂ ತುಪ್ಪಳದಂಥ ರೋಮಗಳಿವೆ. ಪುಷ್ಪ ಗುಚ್ಛ ಚಂಡುಮಂಜರಿ ಮಾದರಿಯದು. ಅದರಲ್ಲಿ ಸುಮಾರು 40 ಹೂಗಳಿವೆ. ಅದರ ಬುಡದಲ್ಲಿ ನೀಳವಾದ ಮೃದುವಾದ ಉಪಪತ್ರಗಳಿವೆ. ಕೆಲವು ವೇಳೆ ಇವು ವರ್ಣರಂಜಿತವಾಗಿದ್ದು ಹೂ ಗೊಂಚಲಿನ ಚೆಲುವನ್ನು ಹೆಚ್ಚಿಸುತ್ತವೆ. ಫಲ ಎಕೀನ್ ಎಂಬ ಬಗೆಯದು. ಕಾಯಿಯ ಮೇಲಿನ ಅಂಚಿನ ಸುತ್ತ ನಸುಗೆಂಪು ಬಣ್ಣದ ಬೀಜ ತುಪ್ಪುಳಿದೆ (ಪ್ಯಾಪಸ್). ಇವು ಬೀಜಪ್ರಸರಣದಲ್ಲಿ ಸಹಾಯಕವಾಗಿವೆ.

ಕಾಯಿಗಳಲ್ಲಿ ಪಾಮಿಟಿಕ್, ಓಲಿಯಿಲ್, ಲೀನೋಲಿಯಿಕ್, ಮಿರಿಸ್ಟಿಕ್, ವರ್ನೋಲೆಕ್ ಮುಂತಾದ ಫ್ಯಾಟಿ ಆಮ್ಲಗಳೂ ಹಳದಿಬಣ್ಣದ ಹರಳುರೂಪಕ್ಕೆ ಬದಲಾಗದ ಸಾಬೂನಿನಂಥ ವಸ್ತುವಿನಲ್ಲಿ ಕ್ರಿಮಿರೇಚಕ ಗುಣವಿದೆ. ಈ ಗುಣದಿಂದಾಗಿ ಇದು ಹಲವಾರು ಕ್ರಿಮಿಗಳ, ಮುಖ್ಯವಾಗಿ ಲಾಡಿಹುಳುಗಳ ವಿರುದ್ದ ಹೆಚ್ಚು ಪರಿಣಾಮಕಾರಿಯೆನಿಸಿದೆ. ಇದರ ಜೊತೆಗೆ ರಸಕರ್ಪೂರ ಮತ್ತು ಮೆಗ್ನೀಸಿಯಂ ಸಲ್ಛೇಟುಗಳನ್ನು ಬೆರೆಸಿ ಉಪಯೋಗಿಸಿದಾಗ ಇದರ ಕ್ರಿಮಿರೇಜಕ ಗುಣ ಹೆಚ್ಚಾಗುತ್ತದೆ. ಅಲ್ಲದೆ ಇದನ್ನು ಮೂತ್ರಸ್ರಾವ ಉತ್ತೇಜಕವಾಗಿಯೂ ಕೆಲವು ಚರ್ಮರೋಗಗಳಿಗೂ ಚಿಗಟ ಮತ್ತು ಹೇನುಗಳ ನಿವಾರಣೆಗೂ ಉಪಯೋಗಿಸುತ್ತಾರೆ.

ಉಲ್ಲೇಖನೆಗಳು:[ಬದಲಾಯಿಸಿ]

  1. http://spicetrekkers.com/products-page/indian-sri-lankan/wild-black-cumin-uzbekistan-2/