ವಿಷಯಕ್ಕೆ ಹೋಗು

ಕಾಡುಗೊಲ್ಲರ ಗಣೇಪದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಡುಗೊಲ್ಲರ ಗಣೇಪದ ಕಾಡುಗೊಲ್ಲರ ವಿಶಿಷ್ಟವಾದ ಒಂದು ಕಲೆಯಾಗಿದೆ. ಇವರು ಕರ್ನಾಟಕದ ಬುಡಕಟ್ಟು ಜನಾಂಗದವರು[]. ಇವರು ಗೊಲ್ಲ ಸಮುದಾಯದ ಒಂದು ಭಾಗವಾಗಿದ್ದು, ತಮ್ಮ ವಿಶಿಷ್ಟ ಆರಾಧನೆ, ಸಾಮಾಜಿಕ ಆಚರಣೆಗಳು ಮತ್ತು ಕಲೆಗಳ ಮೂಲಕ ಇತರ ಸಮುದಾಯಗಳಿಗಿಂತ ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. [][][].ಇವರು ಅರಣ್ಯ ಪ್ರದೇಶಗಳಲ್ಲಿ ವಾಸಿಸುವುದರಿಂದ ಇವರನ್ನು ಕಾಡುಗೊಲ್ಲರು ಎಂದು ಕರೆಯಲಾಗುತ್ತದೆ.

ಪರಿಚಯ

[ಬದಲಾಯಿಸಿ]

ಇದು ಕಾಡುಗೊಲ್ಲರ ವಿಶಿಷ್ಟವಾದ ಜನಪದ ಕಲೆ. ಈ ಕಲೆಯು ಗಣೆ ಎಂಬ ವಾದ್ಯಕ್ಕೆ ಸಂಬಂಧಿಸಿದೆ.[].

ಕಾಡುಗೊಲ್ಲರ ಜನಾಂಗ

[ಬದಲಾಯಿಸಿ]

ಕಾಡುಗೊಲ್ಲರು ಕರ್ನಾಟಕದ ತುಮಕೂರು, ಚಿತ್ರದುರ್ಗ, ಬೆಂಗಳೂರು, ಬಳ್ಳಾರಿ, ಹಾಸನ ಜಿಲ್ಲೆಗಳಲ್ಲಿ ಗಣೇಪದವನ್ನು ಪ್ರದರ್ಶಿಸುತ್ತಾರೆ. ಕಾಡುಗೊಲ್ಲರು ಆಂಧೃಪ್ರದೇಶಗಳಲ್ಲಿಯೂ ಕಾಣಸಿಗುವುದರಿಂದ ಅಲ್ಲಿನ ಮಡಕಸಿರಾ, ಕಲ್ಯಾಣದುರ್ಗಾ ಹಾಗೂ ರಾಯದುರ್ಗಾ ಜಿಲ್ಲೆಯಲ್ಲಿಯೂ ಈ ಕಲೆ ಅಸ್ತಿತ್ವದಲ್ಲಿದೆ. ಗೋವುಗಳ ಸಂರಕ್ಷಣೆ ಹಾಗೂ ಬೆಣ್ಣೆ ತುಪ್ಪಗಳನ್ನು ಮಾರಿ ಜೀವಿಸುವುದು ಈ ಜನಾಂಗದ ಮುಖ್ಯ ಕಸಬು. ಪ್ರತ್ಯೇಕ ನೆಲೆಗಳಲ್ಲಿ ವಾಸಿಸುವ ಇವರು ಮುಖ್ಯ ಗ್ರಾಮವೊಂದರ ಸಮೀಪದಲ್ಲಿ ಹಟ್ಟಿಯೊಂದನ್ನು ಕಟ್ಟಿಕೊಂಡು ವಾಸಿಸುತ್ತಾರೆ.[].

ಹಿನ್ನೆಲೆ

[ಬದಲಾಯಿಸಿ]

ಗಣೆಯು ಕಾಡುಗೊಲ್ಲರ ಕಲೆಯಾಗಿದೆ. ಈ ಕಲೆಯು ಗಣೆ ಎನ್ನುವ ವಾದ್ಯಕ್ಕೆ ಸಂಬಂಧಿಸಿದೆ. ಗಳೆ ಪದವನ್ನು ಗಣೆಯಾಗಿ ವರ್ಣಪಲ್ಲಟಿಸಿದೆ. ಕಾಡುಗೊಲ್ಲರ ದೇವರಾದ ಜುಂಜಪ್ಪನಿಗೂ ಈ ಕಲೆಗೂ ಸಂಬಂಧವಿದೆ. ಜುಂಜಪ್ಪನು ದನ ಕಾಯುತ್ತಾ ಗಣೆಯನ್ನು ಊದುತ್ತಿದ್ದ, ಮುಂದೆ ಅವನು ಸತ್ತ ನಂತರ ಅವನ ಪರಂಪರೆಯವರು ಅದನ್ನು ಮುಂದುವರೆಸಿದರು. ಆತನ ಮಹಿಮೆಯನ್ನು ಗಣೆಯ ಮೂಲಕ ಹಾಡಿದರು ಎಂದು ಹೇಳಲಾಗುತ್ತದೆ. ಆದ್ದರಿಂದಲೇ ಇದನ್ನು ಜುಂಜಪ್ಪನ ಗಣೆಯೆಂದು ಕರೆಯುವುದು ವಾಡಿಕೆಯಾಗಿದೆ.

ಗಣೆಯ ಆಕರ

[ಬದಲಾಯಿಸಿ]

ಇದು ಕೊಳಲಿಗಿಂತ ಆಕರದಲ್ಲಿ ದೊಡ್ಡದಾಗಿದ್ದರೂ ರಚನೆಯಲ್ಲಿ ಕೊಳಲನ್ನೇ ಹೋಲುವ ವಾದ್ಯವಾಗಿದೆ. ಬಿದಿರುಕೋಲನ್ನು ಗಳೆ ಎಂದು ಕರೆಯುತ್ತಾರೆ. ಗಣೆಯು ಮೂರಡಿ ಉದ್ದವಿರುವ ಕೋಲು. ಅದರ ಮಧ್ಯದಲ್ಲಿ ಮೂರು ಗೆಣ್ಣುಗಳಿರುತ್ತವೆ. ಮಧ್ಯದ ಗೆಣ್ಣನ್ನು ತೆಗೆದು ಮೇಲ್ಭಾಗವನ್ನು ಮೇಣದಿಂದ ಮುಚ್ಚಲಾಗುತ್ತದೆ. ಈ ಮೂಲಕ ಗಣೆಯೊಳಗೆ ಗಾಳಿಯಾಡುವಂತಿರುತ್ತದೆ. ಆಗ ಉಳಿದ ಎರಡೂ ತುದಿಗಳ ಗೆಣ್ಣುಗಳು ಹಾಗೆಯೇ ಉಳಿದಿರುತ್ತದೆ.

ವೇಷಭೂಷಣಗಳು

[ಬದಲಾಯಿಸಿ]

ಕಲಾವಿದರು ಗಣೇಪದ ನುಡಿಸುವಾಗ ಉದ್ದನೆಯ ಚಡ್ಡಿ ಅಥವಾ ಪಂಚೆ, ಬನಿಯನ್, ತಲೆಗೆ ರುಮಾಲು, ಹೆಗಲ ಮೇಲೆ ಕರಿಯ ಕಂಬಳಿ ಧರಿಸುತ್ತಾರೆ.

ಗಣೇಯ ಕಲಾವಿದರು

[ಬದಲಾಯಿಸಿ]

ಸಾಮಾನ್ಯವಾಗಿ ಇಬ್ಬರು ಕಲಾವಿದರಿರುತ್ತಾರೆ. ಒಬ್ಬರು ಹಾಡನ್ನು ಹಾಡಿದಾಗ ಮತ್ತೊಬ್ಬರು ಗಣೆಯನ್ನು ನುಡಿಸುತ್ತಾರೆ. ಕೆಲವೆಡೆ ಜೋಡಿ ಗಣೆಯನ್ನು ಬಳಸುವುದಿದೆ. ಕಲಾವಿದರು ಊರಾಡುವಾಗ ಒಂದು ಬಿದಿರಿನ ಕೋಲಿನ ಮೂಲಕ ಒಡವೆ ವಸ್ತ್ರಗಳನ್ನು ಹೆಗಲಿನ ಮೇಲೆ ಹೊತ್ತು ಕೊಂಡಿರುತ್ತಾರೆ. ಇದು ಜುಂಜಪ್ಪನ ಕಾಣಿಕೆ. ಇವರನ್ನು ಕಾಣಿಕೆಯವರು ಎಂದು ಕರೆಯುತ್ತಾರೆ. ಗಣೆಯವರಲ್ಲಿ ಇನ್ನೊಂದು ರೀತಿಯ ಕಲಾವಿದರಿರುತ್ತಾರೆ. ಅವರು ದೇವರ ಎದುರು ಮಾತ್ರ ಗಣೆಯನ್ನು ನುಡಿಸುತ್ತಾರೆ. ಹೀಗೆ ನುಡಿಸುವಾಗ ಗಣೆಯ ನಾದ ಸರಾಗವಾಗಿದ್ದರೆ ಶುಭವೆಂದು ಇಲ್ಲದಿದ್ದರೆ ಅಶುಭವೆಂದು ಕರೆಯಲಾಗುತ್ತದೆ.

ಗಣೇಪದದ ಮಾದರಿ ಹಾಡು

[ಬದಲಾಯಿಸಿ]

ಸ್ವಾಗೆಲು ಬೆಟ್ಟಾದ ಸ್ವಲುಕೆ ಸ್ವಾನನುಗೊಂದಿ

ಸ್ವಾಗೆಗಣ್ಣಿನ ಬಿದುರೆ ತಾಳೊಡೆದು|ರೆಕ್ಕೊಡೆದು

ಸೋಬಾನ ಪಾಡಮ್ಮ ನಮ್ಮೊಂದಿಗೆ

ತೆಂಕ್ಲಾಗೆ ಬೀಸಿದುರೆ ಬಡಗ್ಲಾಗೆ ಬಳುಕೋಳು

ಬಡಗ್ಲಾಗೆ ಬೀಸಿದುರೆ ಪಡ್ಲುಗೆ ಬಳುಕೋಳು

ಪಡುಗ್ಲಾಗೆ ಬೀಸಿದುರೆ ಮೂಡ್ಲಾಗೆ ಬಳುಕೋಳು

ಉಯ್ಯಾಲೆಪಾಡಿ ಜೋಕೊಡದು ಬಿದರಮ್ಮ

ಸೋಬಾನ ಪಾಡಮ್ಮ ನಮ್ಮೀಗೆ

ಮೂಡ್ಲುಗಿರಿ ತಿಮ್ಮಪ್ಪಗೆ ಮೂತ್ತಿನರಮನ್ಯಾಗೆ

ಬೆಟ್ಟದ ತಿಮ್ಮಪ್ಪಗೆ ಕಟ್ಟಿದೊಂದರಮನೆಯಾಗೆ

ಇನ್ಯಾರಿಗಲ್ಲದೋಳ ಬಿದರಮ್ಮ

ಆಡಕಾವಣ್ಣಂಗೆ ಆರುಗಣ್ಣಿನ ಕೋಲಾದೆ

ಕುರಿಯ ಕಾವಣ್ಣಂಗೆ ಜಾವಜೂಜಿ ಕೋಲಾದೆ

ದೊಂಬಾಗೆ ಗಣೆಯಾದೆ ವಡ್ಡಾಗೆ ಗುಡ್ಲಾದೆ

ಮಾಡಾಕೆ ಮರುವಾದೆ ತೂಗಕು ತೊಟ್ಟುಲೂ ಆದೇ...

ಗಾಯನ ಸಂಪ್ರದಾಯ

[ಬದಲಾಯಿಸಿ]

ಅವರಿಗೆ ಅತ್ಯಂತ ಪ್ರಮುಖವಾದ ಹಾಲು ಹೊಯ್ಯುವ ಹಬ್ಬದಂದು ದೇವರ ಮುಂದೆ ದೊಡ್ಡದಾದ ಬಯಲಿನಲ್ಲಿ ಕರಿ ಕಂಬಳಿ ಹಾಸಿಕೊಂಡು ಗಣೆ ನುಡಿಸುತ್ತಾರೆ.[]. ಕೃಷ್ಣ, ಜುಂಜಪ್ಪ ದೇವರ ಹಾಡನ್ನಲ್ಲದೆ ಕಾಟಮದೇವರು, ಕ್ಯಾತಪ್ಪ, ಈರಬಡಪ್ಪ ಹಾಗೂ ಅನೇಕ ದೇವರುಗಳ ಕಾವ್ಯವನ್ನು ಹಾಡುತ್ತಾರೆ. ಮಲೆ ಮಹದೇಶ್ವರ, ಮಂಟೇಸ್ವಾಮಿ ಹಾಗೂ ಮೈಲಾರಲಿಂಗನ ಸಂಪ್ರದಾಯದಂತೆ ಕಾಡುಗೊಲ್ಲರ ಜುಂಜಪ್ಪನ ಸಂಪ್ರದಾಯವೂ ಒಂದು ಮುಖ್ಯವಾದ ಗಾಯನ ಪರಂಪರೆಯಾಗಿ ಉಳಿದುಕೊಂಡಿದೆ.

ಉಲ್ಲೇಖಗಳು

[ಬದಲಾಯಿಸಿ]
  1. https://kannadapustakapradhikara.com/book_detail.php?bookID=144
  2. https://www.bookbrahma.com/book/kadugollara-sampradayagalu-mattu-nambhikegalu
  3. ಗೊ.ರು.ಚನ್ನಬಸಪ್ಪ,ಕರ್ನಾಟಕ ಜನಪದ ಕಲೆಗಳು,ಕನ್ನಡ ಸಾಹಿತ್ಯ ಪರಿಷತ್ತು,೧೯೭೭.
  4. ಹಿ.ಚಿ.ಬೋರಲಿಂಗಯ್ಯ,ಕರ್ನಾಟಕ ಜನಪದ ಕೋಶ,ಪ್ರಸಾರಾಂಗ,ಕನ್ನಡ ವಿಶ್ವವಿದ್ಯಾಲಯ ಹಂಪಿ,೧೯೯೬.
  5. https://www.prajavani.net/district/chitradurga/veeranna-is-a-promoter-of-wildlife-culture-712685.html
  6. https://kanaja.karnataka.gov.in/ebook/%E0%B2%95%E0%B2%BE%E0%B2%A1%E0%B3%81%E0%B2%97%E0%B3%8A%E0%B2%B2%E0%B3%8D%E0%B2%B2/
  7. https://vijaykarnataka.com/news/chitradurga/kadugollara-songbag-is-a-delight-to-kannada-literature/articleshow/67542524.cms