ವಿಷಯಕ್ಕೆ ಹೋಗು

ಕಾಂತ ಮುದ್ರಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಂತ ಮುದ್ರಣ

ಕಾಂತೀಕರಿಸಿದ ಫೆರ್ರೋ ಕಾಂತೀಯ ಚೂರ್ಣಲೇಪಿತ ಕಾಗದದ ಇಲ್ಲವೇ ಪ್ಲಾಸ್ಟಿಕ್ ಆಧಾರಿತ ಪಟ್ಟಿಯ ಮೇಲೆ ಅಥವಾ ಕಾಂತೀಕರಿಸಿದ ತಂತಿಯ ಮೇಲೆ ಸಮಾಚಾರವನ್ನು ಮುದ್ರಿಸುವ ವಿಧಾನ (ಮ್ಯಾಗ್ನೆಟಿಕ್ ರೆಕಾರ್ಡಿಂಗ್). ಧ್ವನಿಮುದ್ರಣದಲ್ಲಿ ಇದರ ಬಳಕೆ ಅಧಿಕ. ಗಣಕಯಂತ್ರಗಳ ದತ್ತಾಂಶಗಳಿಗೆ, ಟಿಲಿವಿಷóನ್ ಚಿತ್ರಗಳಿಗೆ ಹಾಗೂ ರೇಡಿಯೋ ಸಂದೇಶಗಳಿಗೆ ಸಂಬಂಧಿಸಿದ ಸಂಜ್ಞೆಗಳನ್ನು ಮುದ್ರಿಸುವಲ್ಲಿ ಸಹ ಈ ವಿಧಾನದ ಉಪಯೋಗ ಗಮನಾರ್ಹವಾಗಿದೆ. ಇಂಥ ಎಲ್ಲ ಮುದ್ರಣಗಳನ್ನೂ ಬೇಕೆಂದಾಗ ಮರುನುಡಿಸಬಹುದು (ಪ್ಲೇ ಬ್ಯಾಕ್).[]

ಅಮೆರಿಕದ ಪ್ರಖ್ಯಾತ ಯಂತ್ರವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್ ಪೊನೋಗ್ರಾಫನ್ನು ನಿರ್ಮಿಸಿದಾಗಲೇ (1877) ಧ್ವನಿಮುದ್ರಣ ಕಾರ್ಯವೂ ಪ್ರಾರಂಭವಾಯಿತು. ಮನುಷ್ಯ ಅಥವಾ ಯಾವುದಾದರೂ ಆಕರದ ಶಬ್ದವನ್ನು ಒಂದು ಸೂಜಿಯ ಕಂಪನಗಳನ್ನಾಗಿ ಪರಿವರ್ತಿಸಿ ಆ ಮೂಲಕ ಅದನ್ನು ಒಂದು ಉರುಳೆಯ (ಸಿಲಿಂಡರ್) ಮೇಲೆ ಮುದ್ರಣ ಮಾಡಿ ಮತ್ತೆ ಸೂಜಿಯನ್ನು ಆ ಮುದ್ರಣದ ಮೇಲೆಯೇ ಓಡಿಸುವುದರಿಂದ ಮೊದಲಿನ ಧ್ವನಿಯನ್ನೇ ಎಡಿಸನ್ ಪುನಃ ಸೃಷ್ಟಿಸಿದ. ಡಿಕ್ಟಾಪೋನ್ ಎಂದು ಮೊದಲಾಗಿ ಹೆಸರುಗಳನ್ನುಳ್ಳ ಅನೇಕ ಧ್ವನಿಮುದ್ರಣ ಯಂತ್ರಗಳಲ್ಲಿ ಇದೇ ತತ್ತ್ವವನ್ನು ಬಳಸಲಾಗಿದೆ.

ಎಡಿಸನ್ನನ ಉಪಜ್ಞೆ (ಇನ್‍ವೆನ್ಷನ್) ಆದ (21) ವರ್ಷಗಳ ತರುವಾಯ ಡೆನ್ಮಾರ್ಕಿನ ವಾಲ್ಡೆ ಮಾರ್ ಪೌಲ್ಸನ್ ಟೆಲಿಗ್ರಾಫೋನ್ ಎಂಬ ಯಂತ್ರವನ್ನು ನಿರ್ಮಿಸಿದ (1898). ಇದೇ ಇಂದಿನ ತಂತಿ ಮತ್ತು ಪಟ್ಟಿ ಮುದ್ರಿಕೆಗಳ ಮೂಲವಾಗಿದೆ. ಪೌಲ್ಸನನ ಯಂತ್ರದಲ್ಲಿ ಒಂದು ಪೀಪಾಯಿಯ ಸುತ್ತಲೂ ಉಕ್ಕಿನ ತಂತಿಯನ್ನು ಸುತ್ತಲಾಗಿತ್ತು. ಕಾಂತಶಿರದಲ್ಲಿ (ಮ್ಯಾಗ್ನೆಟಿಕ್ ಹೆಡ್) ಒಂದು ತಂತಿಯ ಸುರುಳಿಯೊಳಗೆ ಕಬ್ಬಿಣದ ತೆಳ್ಳನೆಯ ಪದರಗಳು (ಲ್ಯಾಮಿನೇಷನ್ಸ್) ಇದ್ದುವು. ಪೀಪಾಯಿಗೆ ಸಮಾಂತರವಾಗಿ ಶಿರ ಚಲಿಸುತ್ತಿತ್ತು. ಸೂಕ್ಷ್ಮಧ್ವನಿವರ್ಧಕದಿಂದ ಬಂದ ಧ್ವನಿರೂಪದ ವಿದ್ಯುತ್ಪ್ರವಾಹ ಸುರುಳಿಯಲ್ಲಿ ಹರಿದಾಗ ಅದಕ್ಕನುಗುಣವಾಗಿ ಪದರಗಳಿಗೆ ಅಂದರೆ ಪಟಲ ಬಂಧನಕ್ಕೆ ತಗಲಿಕೊಂಡಿದ್ದ ಉಕ್ಕಿನ ತಂತಿ ಕಾಂತೀಕೃತವಾಗುತ್ತಿತ್ತು. ಪೀಪಾಯಿ ಸುತ್ತಿದಾಗ ಶಿರವೂ ಮುಂದೆ ಚಲಿಸುತ್ತಿತ್ತು. ಧ್ವನಿಯನ್ನು ಪುನಃ ಕೇಳಬೇಕಾದಾಗ ಅದೇ ಸುರುಳಿಗೆ ಒಂದು ಹೆಡ್‍ಫೋನನ್ನು ಜೋಡಿಸಲಾಗುತ್ತಿತ್ತು. ಈ ಯಂತ್ರ ನಯವಾಗಿರಲಿಲ್ಲ. ಇದರಲ್ಲಿ ಆಧುನಿಕ ಕಾಂತಧ್ವನಿಮುದ್ರಣದಲ್ಲಿರುವ ತತ್ತ್ವದ ಉಪಯೋಗವನ್ನು ಕಾಣಬಹುದು.

ಉಲ್ಲೇಖನೆಗಳು:

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]