ಉಪ್ಪು ಮಣ್ಣುಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕರಲು ಇಂದ ಪುನರ್ನಿರ್ದೇಶಿತ)

ಉಪ್ಪು ಮಣ್ಣುಗಳು: ಅಧಿಕ ಪ್ರಮಾಣದಲ್ಲಿ ದ್ರಾವ್ಯ ಉಪ್ಪುಗಳನ್ನೂ (ಚೌಳುಪ್ಪು), ವಿನಿಮಯಿಸಬಹುದಾದ ಸೋಡಿಯಮನ್ನೂ ಒಳಗೊಂಡಿರುವಂಥವು (ಸಾಲ್ಟೆಡ್ ಸಾಯಿಲ್ಸ್‌). ಬಟ್ಟೆ ಸ್ವಚ್ಚ ಮಾಡಲು ಬಳಸುವ ಉಪ್ಪು ಅಥವಾ ಚೌಳು ಬೇಸಾಯದ ಭೂಮಿಗಳಲ್ಲಿ ಅಲ್ಲಲ್ಲಿ ಉದ್ಭವಿಸಿ ಭೂಮಿಯ ಫಲವತ್ತತೆಯನ್ನು ಕುಂಠಿಸುವುದುಂಟು. ಮರುಭೂಮಿಗಳಲ್ಲಿ ಶುಷ್ಕಪ್ರದೇಶಗಳಲ್ಲಿ ಅದರಲ್ಲೂ ಉಳಿದ ಭಾಗಗಳಿಂದ ನೀರು ಹರಿದು ಮುಂದಕ್ಕೆ ಹೋಗಲು ಅವಕಾಶವಿಲ್ಲದಿರುವ ತಗ್ಗು ಪ್ರದೇಶಗಳಲ್ಲಿ ಉಪ್ಪಿನ ಶೇಖರಣೆ ಸಾಮಾನ್ಯ. ನೀರಾವರಿ ಪ್ರದೇಶಗಳಲ್ಲಿ ಕೆರೆ ಅಚ್ಚುಕಟ್ಟಿನಲ್ಲಿ ನಾಲಾ ಬಯಲುಗಳಲ್ಲಿ ಕೆಳಪದರಗಳಿಂದ ಉಪ್ಪು ಮೇಲಕ್ಕೆ ಉಕ್ಕಿ ಭೂಮಿ ಉಪ್ಪಾಗುವುದು ತರಿಬೇಸಾಯದಲ್ಲಿನ ಒಂದು ತೀವ್ರ ಸಮಸ್ಯೆ. ತೀರಪ್ರದೇಶದ ಕೆಲವು ಜಮೀನುಗಳಲ್ಲಿ ಸಮುದ್ರದ ನೀರು ನುಗ್ಗಿ ಇಲ್ಲವೆ ಅದರ ಸಿಂಪಡಣೆಯಿಂದ ಭೂಮಿ ಉಪ್ಪಾಗುತ್ತದೆ. ಕರ್ನಾಟಕ ರಾಜ್ಯದಲ್ಲಿ ಮೈದಾನ ಪ್ರದೇಶದ ಎಲ್ಲ ಕೆರೆ ಅಚ್ಚುಕಟ್ಟಿನಲ್ಲೂ ಅದೆಷ್ಟೋ ಜಮೀನು ಚೌಳಿನಿಂದ ಹಾಳಾಗಿರುವುದನ್ನು ನೋಡಬಹುದು. ಹಾಗೆಯೇ ಚಿತ್ರದುರ್ಗ ಜಿಲ್ಲೆಯ ವಾಣೀವಿಲಾಸ ಸಾಗರದ ಅಚ್ಚುಕಟ್ಟಿನಲ್ಲಿ ತುಂಗಭದ್ರಾ ನೀರಾವರಿ ಪ್ರದೇಶದಲ್ಲಿ, ವಿಶ್ವೇಶ್ವರಯ್ಯ ನಾಲಾ ಬಯಲಿನಲ್ಲಿ ಅನೇಕ ಸಾವಿರ ಎಕರೆ ಭೂಮಿ ಇಂಥ ಉಪ್ಪಿನಿಂದಾಗಿ ಹಾಳು ಬಿದ್ದಿದೆ. ಮಳೆ ಕಡಿಮೆ ಇರುವ ಪ್ರದೇಶಗಳಾದ ಬಿಜಾಪುರ, ಧಾರವಾಡ ಮತ್ತಿತರ ಎರೆ ಪ್ರದೇಶಗಳಲ್ಲಿ ಕರಲು ಮಣ್ಣು ಎಂದು ಹೇಳುವ ಉಪ್ಪು ಭೂಮಿಗಳಿವೆ.

ನೀರು, ಗಾಳಿ, ಬಿಸಿಲು ಇವುಗಳ ಕ್ರಿಯೆಯಿಂದ ಶಿಲೆ ಮತ್ತು ಖನಿಜಗಳು ಶಿಥಿಲವಾಗಿ ಕ್ರಮೇಣ ಮಣ್ಣು ರೂಪುಗೊಳ್ಳುತ್ತದೆ. ಆಗ ಅವುಗಳಲ್ಲಿರುವ ಸಿಲಿಕ, ಮ್ಯಾಗ್ನೀಸಿಯಂ, ಪೊಟ್ಯಾಸಿಯಂ, ಸೊಡಿಯಂ, ಕ್ಯಾಲ್ಸಿಯಂ, ಕಬ್ಬಿಣ, ಅಲ್ಯುಮಿನಿಯಂ ಮತ್ತು ಅನೇಕ ಲವಣಗಳು ಬಿಡುಗಡೆಯಾಗುತ್ತವೆ. ಸಾಕಷ್ಟು ಮಳೆ ಇರುವೆಡೆ ಇವು ಕರಗಿ ಹರಿದುಹೋಗುತ್ತವೆ: ಮಳೆ ಕಡಿಮೆ ಇರುವ ಸ್ಥಳಗಳಲ್ಲಿ ಸಂಗ್ರಹವಾಗತೊಡಗುತ್ತವೆ. ನೀರಾವರಿ ಪ್ರದೇಶಗಳಲ್ಲಿ ಭೂಮಿಯ ಒಳನೀರಿನ ಮಟ್ಟ ಮೇಲಕ್ಕೆ ಏರುತ್ತದೆ. ಅದು ಮಣ್ಣಿನ ಮೇಲ್ಮೈನಿಂದ 6' ಒಳಗೆ ಬಂದಾಗ, ಕೆಳಪದರಗಳಲ್ಲಿರಬಹುದಾದ ಉಪ್ಪು ನೀರಿನೊಡನೆ ಮೇಲಕ್ಕೆ ಬಂದು ನೀರು ಆರಿದಾಗ ಮೇಲ್ಮಣ್ಣಿನಲ್ಲಿ ಶೇಖರಣೆಯಾಗುತ್ತ ಹೋಗುತ್ತದೆ. ಇದಲ್ಲದೆ ಎಲ್ಲ ಕೆರೆ, ಬಾವಿ, ನದಿ ಮುಂತಾದವುಗಳ ನೀರಿನಲ್ಲೂ ಸ್ವಲ್ಪ ಅಂಶ ಉಪ್ಪು ಮಣ್ಣಿಗೆ ಸೇರಿ ಅದರ ಉಪ್ಪಿನ ಅಂಶ ವೃದ್ಧಿಸುವುದು ಅನಿವಾರ್ಯವಾಗುತ್ತದೆ. ಹೀಗೆ ಏರುತ್ತ ಹೋದ ಉಪ್ಪಿನ ಅಂಶ 0.20%ಕ್ಕಿಂತ ಹೆಚ್ಚಾದಲ್ಲಿ ಬೆಳೆಗೆ ತೊಂದರೆಯುಂಟು. ಇಂಥ ಮಣ್ಣಿನ ಮೇಲೆ ನೀರು ಆರಿದಾಗ ಬೂದು ಉಪ್ಪು ಸಂಗ್ರಹಣೆಗೊಂಡಿರುವುದನ್ನು ಕಾಣಬಹುದು. ಇದರ ಬಹ್ವಂಶ ಸೋಡಿಯಂ ಕ್ಲೋರೈಡ್ (ಅಡಿಗೆ ಉಪ್ಪು); ಸ್ವಲ್ಪ ಸೋಡಿಯಂ ಸಲ್ಫೇಟ್, ಕ್ಯಾಲ್ಸಿಯಂ ಕ್ಲೋರೈಡ್, ಕ್ಯಾಲ್ಸಿಯಂ ಸಲ್ಫೇಟ್, ಮೆಗ್ನಿಷಿಯಂ ಕ್ಲೋರೈಡ್, ಮೆಗ್ನೀಷಿಯಂ ಸಲ್ಫೇಟ್ ಇರಬಹುದು. ಲವಣಾಂಶ ಒಂದು ಮಟ್ಟಕ್ಕಿಂತ (0.02%) ಮೇಲೇರಿದಾಗ ಅನೇಕ ಪೈರುಗಳಿಗೆ ತೊಂದರೆಯಾದರೂ ಮಣ್ಣಿಗೆ ಹೆಚ್ಚು ಹಾನಿಯಾಗುವುದಿಲ್ಲ. ಬದಲಾಗಿ ಮಣ್ಣಿನ ಕಣಜೋಡಣೆಯನ್ನು ಕುದುರಿಸಿ ನೀರು ಬಸಿಯುವುದಕ್ಕೆ ಗಾಳಿ ತೂರುವುದಕ್ಕೆ ಸಹಾಯಕವಾಗುತ್ತದೆ. ಆದರೆ ಲವಣಗಳು ಹೆಚ್ಚಿದರೆ ನೀರು ಬಸಿದಾಗ ಸೋಡಿಯಂ ಅಂಶ ಮಣ್ಣಿನ ಜೇಡಿಯಲ್ಲಿ ವಿನಿಮಯಕ್ರಿಯೆಯಿಂದ ಸೇರಿ ಕಣಜೋಡಣೆ ವ್ಯತ್ಯಾಸವಾಗಿ ನೀರು ಇಳಿಯದೆ ಮಣ್ಣು ಹಾಳಾಗುತ್ತದೆ.

ವರ್ಗೀಕರಣ[ಬದಲಾಯಿಸಿ]

ಜೇಡಿಯಲ್ಲಿನ ಸೋಡಿಯಂ ಅಂಶ ಮಿತಿಯಲ್ಲಿದ್ದು ಕೇವಲ ಸೋಡಿಯಂ ಕ್ಲೋರೈಡಿನಂಥ ಲವಣಗಳು ಹೆಚ್ಚಿರುವ ಭೂಮಿಗಳಿಗೆ ಉಪ್ಪು ಮಣ್ಣುಗಳೆಂದು (ಸೆಲೈನ್ ಸಾಯಿಲ್ಸ್‌) ಹೆಸರು. ಇಂಥವುಗಳ ರಸಸಾರಸ್ಥಿತಿ (Pಊ) 7-8.5ರ ಒಳಗಿರುವುದು. ಮಣ್ಣಿನ ಜೇಡಿಯಲ್ಲಿ ಸೋಡಿಯಂ ಹೆಚ್ಚಿದಂತೆಲ್ಲ ಅದು ವಿಕರಣವಾಗುತ್ತದೆ. ಇದಲ್ಲದೆ ಸೋಡಿಯಂ ಹೈಡ್ರಾಕ್ಸೈಡ್ ಉತ್ಪತ್ತಿಯಾಗಿ ಮಣ್ಣಿನ Pಊ 8.5 ಕ್ಕಿಂತ ಜಾಸ್ತಿಯಾಗುತ್ತದೆ. ಪೈರಿಗೂ ಸೂಕ್ಷ್ಮ ಜೀವಿಗಳಿಗೂ ಇದು ಪ್ರತಿಕೂಲ, ಮಣ್ಣಿನಲ್ಲಿರುವ ಸಾವಯವಾಂಶ ಕರಗಿ ಕಪ್ಪು ಅಥವಾ ಕಂದು ಕಲೆಗಳು ಅಲ್ಲಲ್ಲಿ ಕಾಣುತ್ತವೆ. ಇಂಥ ಮಣ್ಣುಗಳ ಹೆಸರು ಕ್ಷಾರ ಮಣ್ಣುಗಳೂ (ಆಲ್ಕಲಿ ಸಾಯಿಲ್ಸ್‌). ಕೆಲವು ಸಂದರ್ಭಗಳಲ್ಲಿ ಸೋಡಿಯಂ ಕೆಳಪದರಗಳಿಗೆ ಇಳಿದು ಜೇಡಿಯ ಗಟ್ಟಿಪದರ ಉಂಟಾಗಿ ನೀರು ಇಳಿಯುವುದಕ್ಕೆ ಹಾನಿಯಾಗುವುದುಂಟು.

ಉಪ್ಪು ಮಣ್ಣುಗಳ ಸುಧಾರಣೆ[ಬದಲಾಯಿಸಿ]

ಈ ದಿಸೆಯಲ್ಲಿ ಮೊದಲ ಹೆಜ್ಜೆ ನೀರು ಚರಂಡಿಗಳನ್ನು ಹೊಡೆದು ಸಿಹಿ ನೀರನ್ನು ಕಟ್ಟಿ ಉಪ್ಪನ್ನು ಕರಗಿಸಿ ಬಸಿಯುವುದು: ತರುವಾಯ ಸಾವಯವ ವಸ್ತುಗಳಾದ ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್‌ ಹಸುರೆಲೆ ಗೊಬ್ಬರ ಮುಂತಾದುವುವನ್ನು ಧಾರಾಳವಾದ ಪ್ರಮಾಣದಲ್ಲಿ ಮಿಶ್ರಣ ಮಾಡಿ ಪರಿಸ್ಥಿತಿಯನ್ನು ಸುಧಾರಿಸಬೇಕು. ಮಣ್ಣಿನ ಜೇಡಿಯ ಸೋಡಿಯಂ ಹೆಚ್ಚಳದಿಂದ ತೊಂದರೆಯಿದ್ದಾಗ ಜಿಪ್ಸಂ, ಗಂಧಕ ಮುಂತಾದ ವಸ್ತುಗಳನ್ನು ಮಿಶ್ರಣ ಮಾಡಿ ಮಣ್ಣುಗಳನ್ನು ಉತ್ತಮಗೊಳಿಸವುದು ಅಗತ್ಯ. ಉಪ್ಪು ಮಣ್ಣುಗಳ ಸುಧಾರಣೆ (ಅದರಲ್ಲೂ ನೀರಾವರಿ ಬಯಲುಗಳಲ್ಲಿ) ನೀರು ಬಳಸುವ ಪ್ರದೇಶದ ಎಲ್ಲ ರೈತರುಗಳ ಸಹಕಾರದಿಂದಲೇ ಸಾಧ್ಯ. ಎಲ್ಲರೂ ವಿವೇಚನೆಯಿಂದ ನೀರು ಬಳಸಿ ಚರಂಡಿ ವ್ಯವಸ್ಥೆಯಿಂದ ಹೆಚ್ಚು ನೀರನ್ನು ಹೊರಸಾಗಿಸುವ ಕ್ರಮವನ್ನು ಅನುಸರಿಸಿದಲ್ಲಿ ಹಾನಿಯ ಪರಿಮಾಣವನ್ನು ತಗ್ಗಿಸುವುದು ಸಾಧ್ಯ. (ಬಿ.ವಿ.ವಿ.)