ಕರಡು:ಲೇಖನದ ಶೀರ್ಷಿಕೆ

ವಿಕಿಪೀಡಿಯ ಇಂದ
Jump to navigation Jump to search

ಒಂದು ಲೇಖನದ ಶೀರ್ಷಿಕೆ ಅಥವಾ ಶಿರೋನಾಮೆಯು ಆ ಲೇಖನದ ಮೇಲೆ ಕಾಣುವ ದೊಡ್ಡ ತಲೆಬರಹ ಹಾಗು ಲೇಖನದ ಪುಟದ ಹೆಸರು ಮತ್ತು ಯುಆರ್‌ಎಲ್‌ನ ಅಥವಾ ವೆಬ್ ಅಡ್ರೆಸ್‌ನ ಮೂಲವಾಗಿರುತ್ತದೆ. ಶೀರ್ಷಿಕೆಯು ಒಂದು ಲೇಖನ ಯಾವುದರ ಬಗೆಗೆ ಎಂದು ಸೂಚಿಸುತ್ತದೆ ಮತ್ತು ಅದನ್ನು ಇತರ ಲೇಖನಗಳಿಂದ ಬೇರ್ಪಡಿಸುತ್ತದೆ. ಸಾಮಾನ್ಯವಾಗಿ ಶೀರ್ಷಿಕೆಯು ಲೇಖನದಲ್ಲಿರುವ ವಿಷಯದ ಹೆಸರಾಗಿರಬಹುದು ಅಥವಾ ವಿಷಯದ ವಿವರಣೆಯಾಗಿರಬಹುದು. ಯಾವುದೇ ಎರಡು ಲೇಖನಗಳಿಗೆ ಒಂದೇ ಹೆಸರು ಇರುವಂತಿಲ್ಲ, ಆದ್ದರಿಂದ ಕೆಲವೊಮ್ಮೆ ಲೇಖನದ ಕುರಿತು ವಿಶೇಷ ಮಾಹಿತಿಯನ್ನು ವಿವರಣೆಯ ರೂಪದಲ್ಲಿ ಶೀರ್ಷಿಕೆಯ ಪಕ್ಕ, ಆವರಣಗಳಲ್ಲಿ (ಬ್ರಾಕೆಟ್) ನೀಡುವುದು ಅಗತ್ಯ. ಸಾಮಾನ್ಯವಾಗಿ ಲೇಖನದ ಶೀರ್ಷಿಕೆಗಳು ನಂಬಲರ್ಹ ಆಕಾರಗಳಲ್ಲಿ ಆ ವಿಷಯನ್ನು ಏನೆಂದು ಕರೆಯಲಾಗುತ್ತದೆಯೊ ಆದರ ಆಧಾರದ ಮೇಲೆ ಇರುತ್ತದೆ. ಇದು ಅನೇಕ ಸಾಧ್ಯತೆಗಳನ್ನು ಸೂಚಿಸಿದಾಗ ಸಂಪಾದಕರು ಅವುಗಳಲ್ಲಿ ಒಂದನ್ನು ಆಯ್ಕೆ ಮಾಡಲು ಹಲವು ನಿಯಮಗಳನ್ನು ಪರಿಗಣಿಸುತ್ತಾರೆ. ‌ಲೇಖನದ ಆದರ್ಶ ಶಿರೋನಾಮೆಯು ಅಂತಹುದೇ ಲೇಖನಗಳ ಶಿರೋನಾಮೆಯನ್ನು ಹೋಲುತ್ತದೆ ಮತ್ತು ಕರಾರುವಕ್ಕಾಗಿ ವಿಷಯವನ್ನು ಗುರುತಿಸುತ್ತದೆ. ಸಣ್ಣದಾಗಿ ಹೇಳುವುದಾದರೆ ಅದು ಸಹಜ, ವಿಶಿಷ್ಟ ಮತ್ತು ಗುರುತಿಸುವಂತೆ ಇರುತ್ತದೆ.

ಈ ಪುಟವು ಲೇಖನದ ಹೆಸರುಗಳನ್ನು ಯಾವ ಆಧಾರದ ಮೇಲೆ ಪರಿಗಣಿಸಲಾಗುತ್ತದೆ ಎಂಬುದನ್ನು ವಿವರವಾಗಿ ಚರ್ಚಿಸುತ್ತದೆ ಅಥವಾ ಹೆಸರಿಸುವಿಕೆ ಸಂಪ್ರದಾಯದ ಬಗೆಗೆ ಹೇಳುತ್ತದೆ (ಆದರೆ, ಇದು ವರ್ಗಗಳಂತಹ ಇತರ ಹೆಸರಿನಸ್ಥಳಗಳ ಶಿರೋನಾಮೆಯ ಬಗೆಗೆ ಹೇಳುವುದಿಲ್ಲ). ಇದಕ್ಕೆ ಇತರ ಹೆಚ್ಚು ನಿರ್ಧಿಷ್ಟ ಮಾರ್ಗದರ್ಶನಗಳು ಪೂರಕವಾಗಿದ್ದು, ಇತರ ನೀತಿಗಳೊಂದಿಗೆ ವಿಶೇಷವಾಗಿ ಮಾಹಿತಿಯ ಬಗೆಗೆನ ಪ್ರಮುಖ ನೀತಿಗಳಾದ ಪರಿಶೀಲನಾರ್ಹತೆ, ಸ್ವಂತ ಸಂಶೋಧನೆ ಸಲ್ಲದು ಮತ್ತು ತಟಸ್ಥ ದೃಷ್ಟಿಕೋನಗಳೊಂದಿಗೆ ಸೇರಿಸಿ ಅರ್ಥೈಸಬೇಕು. ಅಗತ್ಯವಿದ್ದಲ್ಲಿ, ಪುಟ ಸರಿಸುವಿಕೆಯಿಂದ ಲೇಖನದ ಶೀರ್ಷಿಕೆಯನ್ನು ಬದಲಾಯಿಸಬಹುದು.

ಲೇಖನ ಶೀರ್ಷಿಕೆ ನಿರ್ಧರಿಸುವುದು[ಬದಲಾಯಿಸಿ]

ನಂಬಲರ್ಹ ಕನ್ನಡದ ಆಕರಗಳು ಲೇಖನದ ವಿಷಯದ ಬಗೆಗೆ ಏನೆಂದು ಉಲ್ಲೇಖಿಸುತ್ತವೆ ಎಂಬುದರ ಮೇಲೆ ಲೇಖನದ ಶಿರೋನಾಮೆ ಆಧಾರಪಟ್ಟಿರುತ್ತದೆ. ಕೆಲವೊಮ್ಮೆ ಒಂದು ಲೇಖನಕ್ಕೆ ಒಂದ್ದಕ್ಕಿಂತ ಹೆಚ್ಚು ಸೂಕ್ತ ಶೀರ್ಷಿಕೆಗಳಿರುತ್ತವೆ. ಅಂತಹ ಸ೦ಧರ್ಭದಲ್ಲಿ ಸಂಪಾದಕರು ಒಮ್ಮತದಿಂದ ಅತ್ಯುತ್ತಮ ಶೀರ್ಷಿಕೆಯನ್ನು ಆರಿಸಿ ಲೇಖನಕ್ಕೆ ನೀಡಬೇಕು.

ಒಂದು ಒಳ್ಳೆಯ ವಿಕಿಪೀಡಿಯ "ಲೇಖನ ಶೀರ್ಷಿಕೆ"ಗೆ ಈ ಕೆಳಗಿನ ಐದು ಗುಣಲಕ್ಷಣಗಳಿರುತ್ತವೆ:

 1. ಗುರುತಿಸುವಿಕೆ: ಲೇಖನದ ಶೀರ್ಷಿಕೆಯು, ವಿಕಿಪೀಡಿಯದ ಬಳಕೆದಾರರಿಗೆ ಪರಿಚಿತವಾಗಿರಬೇಕು ಅಥವಾ ಗುರುತಿಸುವಂತಿರಬೇಕು.
 2. ಸಹಜತೆ: ಶೀರ್ಷಿಕೆಯು ಓದುಗರು ನೋಡುವ ಅಥವಾ ಹುಡುಕುವ ಸಾಧ್ಯತೆಗಳಿರುವ ಹೆಸರಾಗಿರಬೇಕು. ಸಂಪಾದಕರು ಶೀರ್ಷಿಕೆಯನ್ನು, ಲೇಖನಕ್ಕೆ ಸಂಪರ್ಕ ಕೊಂಡಿಯನ್ನು ನೀಡಲು ಬಳಸುತ್ತಾರೆ. ಇಂತಹ ಶೀರ್ಷಿಕೆಯು ಸಾಮಾನ್ಯವಾಗಿ ವಿಷಯವನ್ನು ವಾಸ್ತವದಲ್ಲಿ ಕನ್ನಡದಲ್ಲಿ ಏನೆಂದು ಕರೆಯುತ್ತಾರೆ ಅದಾಗಿರ ಬೇಕು.
 3. ನಿಖರತೆ: ಶೀರ್ಷಿಕೆಯು ಅನುಮಾನವಿಲ್ಲದೆ ಲೇಖನದ ವಿಷಯವನ್ನು ಗುರುತಿಸುವಂತೆಯೂ ಮತ್ತು ಇತರ ವಿಷಯಗಳಿಂದ ಅದನ್ನು ಬೇರ್ಪಡಿಸುವಂತೆಯೂ ಇರಬೇಕು.
 4. ಚಿಕ್ಕದು: ಶೀರ್ಷಿಕೆ, ಲೇಖನದ ವಿಷಯವನ್ನು ಗುರುತಿಸುವ ಮತ್ತು ಇತರ ಲೇಖನಗಳಿಂದ ಬೇರ್ಪಡಿಸುವ ಅಗತ್ಯಕ್ಕಿಂತ ದೊಡ್ಡದಾಗಿರ ಬಾರದು.
 5. ಹೊಂದಿಕೊಳ್ಳುವಿಕೆ: ಲೇಖನ ಶೀರ್ಷಿಕೆಯು ಅಂತಹುದೇ ಲೇಖನಗಳ ಶಿರೋನಾಮೆಗೆ ಹೊಂದಿಕೊಳ್ಳುವಂತೆ ಇರಬೇಕು. ಈ ರೀತಿಯ ಅನೇಕ ಮಾದರಿಗಳನ್ನು ಮೇಲಿನ ಡಬ್ಬದಲ್ಲಿ ಲೇಖನದ ಶಿರೋನಾಮಗೆ ವಿಷಯ ನಿರ್ದಿಷ್ಟವಾದ ಹೆಸರಿಸುವಿಕೆ ಸಂಪ್ರದಾಯದಲ್ಲಿ ಪಟ್ಟಿ ಮಾಡಲಾಗಿದೆ.

ಇವುಗಳನ್ನು ನಿಯಮಗಳೆಂದಲ್ಲದೆ ಧ್ಯೇಯ ಅಥವಾ ಉದ್ಧೇಶಗಳು ಎಂದು ಪರಿಗಣಿಸಬೇಕು. ಬಹಳಷ್ಟು ವಿಷಯಗಳಿಗೆ ಈ ಧ್ಯೇಯಗಳನ್ನು ತೃಪ್ತಿಕರವಾಗಿ ಈಡೇರಿಸುವ ಶಿರೋನಾಮೆ ಇರುತ್ತದೆ, ಹಾಗಿದ್ದಲ್ಲಿ, ಅದನ್ನು ನೇರವಾಗಿ ಆಯ್ಕೆಮಾಡಿ ಬಳಸಿ. ಕೆಲವು ಸಂದರ್ಭಗಳಲ್ಲಿ ಆಯ್ಕೆಯು ಅಷ್ಟು ಸುಲಭವಿರುವುದಿಲ್ಲ. ಉಲ್ಲೇಖಿಸಿದ ಮಾರ್ಗದರ್ಶನ ಪುಟಗಳನ್ನು ನೋಡಿ. ಈ ಧ್ಯೇಯಗಳೊಳಗೆ ಇತರ ಧ್ಯೇಯಗಳಿಗಿಂತ ಒಂದು ಅಥವಾ ಹೆಚ್ಚು ಧ್ಯೇಯಗಳ ಪರವಾಗಿ ಒಲವು ಸೂಚಿಸ ಬೇಕಾದ ಅಗತ್ಯ ಉಂಟಾಗಬಹುದು. ಇದನ್ನು ಒಮ್ಮತದಿಂದ ಮಾಡಲಾಗುತ್ತದೆ. ಉದಾಹರಣೆಗೆ ಗುರುತಿಸಬಹುದಾದ, ಸಹಜ ಮತ್ತು ಚಿಕ್ಕ ಶೀರ್ಷಿಕೆ "ಯುನೈಟೆಡ್ ಕಿಂಗ್‌ಡಮ್‌"ನ್ನು ಹೆಚ್ಚು ಕರಾರುವಕ್ಕಾದ ಶಿರೋನಾಮೆ "ಯುನೈಟೆಡ್ ಕಿಂಗ್‌ಡಮ್ ಆಫ್ ಗ್ರೇಟ್ ಬ್ರಿಟನ್ ಅಂಡ್ ನಾರ್ಥನ್ ಐರ್ಲೆಂಡ್" ಶಿರೋನಾಮೆಯ ಮೇಲೆ ಆದ್ಯತೆ ನೀಡಲಾಗಿದೆ.

ನಿರ್ದಿಷ್ಟ ಕ್ರೇತ್ರಗಳಲ್ಲಿ ಲೇಖನಗಳ ಅಥವಾ ನಿರ್ದಿಷ್ಟ ಸಮಸ್ಯೆಯ ಬಗೆಗೆ ಶಿರೋನಾಮೆಗಳನ್ನು ರಚಿಸುತ್ತಿರುವಾಗ ಹಿಂದಿನ ಒಮ್ಮತದ ಪೂರ್ವನಿದರ್ಶನಗಳನ್ನು ಬಳಸಬಹುದು. ಉಲ್ಲೇಖಿಸಿದ ಮಾರ್ಗದರ್ಶನ ಪುಟಗಳನ್ನು ನೋಡಿ. ಹಿಂದೆ ಒಮ್ಮತದ ನಿದರ್ಶನ ಇರದಿದ್ದಲ್ಲಿ, ಮೇಲಿನ ಪ್ರಶ್ನೆಗಳನ್ನು ಗಮನದಲ್ಲಿಟ್ಟುಕೊಂಡು, ಹೊಸ ಒಮ್ಮತಕ್ಕೆ ಚರ್ಚೆಯ ಮೂಲಕ ಬನ್ನಿ. ಲೇಖನದ ಶಿರೋನಾಮೆಯು ಆಯ್ಕೆಯಲ್ಲಿ ಸಂಪಾದಕರ ಆಸಕ್ತಿಗಳಿಗಿಂತ ಓದುಗರ ಆಸಕ್ತಿಗೆ ಆದ್ಯತೆ ಇರಬೇಕು; ಹಾಗೆಯೇ ತಜ್ಞರ ಆಸಕ್ತಿಯ ಮೇಲೆ ಸಾಮಾನ್ಯ ಓದುಗರ ಆಸಕ್ತಿ ಆದ್ಯತೆ ಪಡೆಯಬೇಕು. ಲೇಖನಗಳನ್ನು ಎರಡು ಅಥವಾ ಹೆಚ್ಚು ಹೆಸರುಗಳನ್ನು ಬಳಸಿ (ಉದಾಹರಣೆಗೆ - ಭಿನ್ನ ಕಾಗುಣಿತಗಳು ಅಥವಾ ಹಿಂದಿನ ಹೆಸರುಗಳು) ಹುಡುಕುವ ಸಾಧ್ಯತೆ ಇದ್ದರೆ ಅವಕ್ಕೆ ಸೂಕ್ತ ಮರುನಿರ್ದೇಶನ ನೀಡಬೇಕು. ಇದಕ್ಕೆ ವಿರುದ್ಧವಾಗಿ ಒಂದು ಹೆಸರು ಹಲವು ಭಿನ್ನ ಲೇಖನಗಳಿಗೆ ಸಂಬಂಧಿಸಿದ್ದರೆ ದ್ವಂದ್ವನಿವಾರಣೆ ಸಂದೇಶ ಹಾಕಬೇಕು.

ಸಾಮಾನ್ಯವಾಗಿ ಗುರುತಿಸಬಹುದಾದ ಹೆಸರುಗಳನ್ನು ಬಳಸಿ[ಬದಲಾಯಿಸಿ]

ಲೇಖನದ ಶೀರ್ಷಿಕೆಯು ಸಾಮಾನ್ಯವಾಗಿ ವ್ಯಕ್ತಿಯ ಹೆಸರು, ಅಥವಾ ಸ್ಥಳ, ಅಥವಾ ಲೇಖನದ ಮುಖ್ಯ ವಿಷಯವಾಗಿರುತ್ತದೆ. ಆದರೆ ಕೆಲವು ವಿಷಯಗಳಿಗೆ ಅನೇಕ ಹೆಸರುಗಳಿರುತ್ತವೆ. ಇದು ಲೇಖನದ ಶೀರ್ಷಿಕೆಗೆ ಯಾವ ಹೆಸರು ನೀಡಬೇಕೆಂಬ ಗೊಂದಲಕ್ಕೆ ಕಾರಣವಾಗುತ್ತದೆ. ವಿಕಿಪೀಡಿಯ ಸಾಮಾನ್ಯವಾಗಿ ಹೆಚ್ಚಾಗಿ ಬಳಕೆಯಲ್ಲಿರುವ ಹೆಸರುಗಳಿಗೆ ಆದ್ಯತೆ ನೀಡುತ್ತದೆ. ಯಾವಾಗ ವಿಷಯಕ್ಕೆ ಒಂದು ಸ್ಪಷ್ಟ ಅಥವಾ ಹೆಚ್ಚಾಗಿ ಬಳಸುವ ಹೆಸರು ಇರುವುದಿಲ್ಲವೋ, ಆಗ ಸಂಪಾದಕರೆಲ್ಲಾ ಒಮ್ಮತದಿಂದ ಈ ಮೇಲ್ಕಂಡ ಮಾನದಂಡಗಳನ್ನು ಪರಿಗಣಿಸಿ ಲೇಖನಕ್ಕೆ ಒಂದು ಸೂಕ್ತ ಶೀರ್ಷಿಕೆಯನ್ನು ನೀಡಬೇಕು.

ವಿಕಿಪಿಡಿಯ ಒಂದು ವಿಷಯದ ಅಧಿಕೃತ ಹೆಸರನ್ನು ಅಗತ್ಯವಾಗಿ ಅದರ ಲೇಖನದ ಶೀರ್ಷಿಕೆಯನ್ನಾಗಿ ಬಳಸುವುದಿಲ್ಲ ಬದಲಾಗಿ ಅದು ಸಾಮಾನ್ಯವಾಗಿ ಕನ್ನಡದ ವಿಶ್ವಾಸಾರ್ಹ ಆಕರಗಳಲ್ಲಿ ಈ ವಿಷಯವನ್ನು ಉಲ್ಲೇಖಿಸಲು ಹೆಚ್ಚಾಗಿ ಬಳಸುವ ಹೆಸರಿಗೆ ಆದ್ಯತೆ ನೀಡುತ್ತದೆ. ಇದು ಲೇಖನದಲ್ಲಿ ಉಲ್ಲೇಖಗಳಾಗಿ ಬಳಸಿದ ಆಕರಗಳಲ್ಲಿನ ಬಳಕೆಯನ್ನೂ ಒಳಗೊಳ್ಳುತ್ತದೆ.

ಸಂಪಾದಕರು ಮೇಲೆ ನಿರೂಪಿಸಿದ ಮಾನದಂಡಗಳನ್ನು ಸಹ ಪರಿಗಣಿಸಬೇಕು. ವಿಶ್ವಾಸಾರ್ಹ ಮೂಲಗಳಲ್ಲಿಯೂ ಲೇಖನದಲ್ಲಿನ ವಿಷಯವು ಅಸ್ಪಷ್ಟ ಅಥವಾ ಅಸಮರ್ಪಕ ಹೆಸರಿನಲ್ಲಿದ್ದರೆ, ಸಾಮಾನ್ಯವಾಗಿ ಅಂತಹ ಹೆಸರುಗಳನ್ನು ಬಳಸುವುದಿಲ್ಲ. ತಟಸ್ಥತೆಯನ್ನು ಸಹ ಪರಿಗಣಿಸಬೇಕು; ತಟಸ್ಥ ಶೀರ್ಷಿಕೆಗಳ ಕುರಿತು ನಮ್ಮ ನೀತಿ ಮತ್ತು ಶೀರ್ಷಿಕೆಗಳಲ್ಲಿ ತಟಸ್ಥತೆ ಎಂದರೇನು ಎನ್ನುವುದರ ಬಗೆಗಿನ ಮಾಹಿತಿಗೆ ಮುಂದಿನ ಭಾಗಗಳನ್ನು ನೋಡಿ. ಲೇಖನದ ಶೀರ್ಷಿಕೆಯು ಅಸಭ್ಯವಾಗಿ ಅಥವಾ ನೀರಸವಾಗಿ ಇರಬಾರದು. ಕೆಲವೊಮ್ಮೆ ಒಂದು ವಿಷಯಕ್ಕೆ ಅನೇಕ ಹೆಸರುಗಳಿದ್ದು, ಎಲ್ಲಾ ಹೆಸರುಗಳನ್ನೂ ಸರ್ವೇಸಾಮಾನ್ಯವಾಗಿ ಬಳಸುತ್ತಿದ್ದಲ್ಲಿ, ಅದರಲ್ಲಿ ಹೆಚ್ಚಾಗಿ ಬಳಸುವಂತ ಹೆಸರನ್ನು ನಿರ್ಣಯಿಸುವುದು ಕಷ್ಟವಾದಲ್ಲಿ, ಅವುಗಳಲ್ಲಿ ಯಾವುದಾದರೊಂದನ್ನು ಆಯ್ದುಕೊಳ್ಳುವುದು ಯೋಗ್ಯ ನಿರ್ಣಯ.

ಆದರೂ ಅಧಿಕೃತ, ವೈಜ್ಞಾನಿಕ, ಜನನ, ಮೂಲದಂತ ಹೆಸರುಗಳನ್ನೇ ಸಾಮಾನ್ಯವಾಗಿ ಲೇಖನದ ಶೀರ್ಷಿಕೆಯನ್ನಾಗಿ ಬಳಸಿದರೂ, ವಿಶ್ವಾಸಾರ್ಹ ಆಕರಗಳಲ್ಲಿ ಬಳಕೆಯಾಗಿರುವ ಪದ ಅಥವಾ ಹೆಸರುಗಳಿಗೇ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಇತರ ವಿಶ್ವಕೋಶಗಳು ಯಾವ ಶೀರ್ಷಿಕೆಗಳನ್ನು ಬಳಸುತ್ತವೆ ಎಂಬುದು ಆಕರವಾಗ ಬಹುದಾಗಿದ್ದು ವಿಶ್ವಕೋಶಗಳ ದಾಖಲೆಗಳಲ್ಲಿ ಏನಿದೆ, ಯಾವ ಹೆಸರು ಸಾಮಾನ್ಯವಾಗಿ ಬಳಕಯಲ್ಲಿದೆ ಎಂದು ಅರಿಯಲು ಸಹಾಯಕ.

ಈ ಕೆಳಗಿನ ಕೆಲವು ಗುರುತಿಸುವಿಕೆಗೆ ಬೆಂಬಲವಾಗಿರುವ ಸಾಮಾನ್ಯವಾಗಿ ಬಳಸುವ ಹೆಸರುಗಳ ಉದಾಹರಣೆಗಳು:

ಜನರು
ಸ್ಥಳಗಳು
ವೈಜ್ಞಾನಿಕ, ನಿಸರ್ಗದ ಮತ್ತು ಇತರ ಹೆಸರುಗಳ ಬಗೆಗೆ
 • ಇಂಟರ್‌ಪೋಲ್ (ಇಂಟರನ್ಯಾಶ್ನಲ್ ಕ್ರಿಮಿನಲ್ ಪೊಲೀಸ್ ಕಮಿಶನ್ ಅಲ್ಲ)
 • ಉಪ್ಪು (ಸೋಡಿಯಮ್ ಕ್ಲೋರೈಡ್ ಅಲ್ಲ)
 • ನಬಾರ್ಡ್ (ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ ಅಲ್ಲ)
 • ಮಲ್ಲಿಗೆ (ಜಾಸ್ಮಿನಮ್ ಒಫಿಶಿನಾಲ್ ಅಲ್ಲ)
 • ಫಿಫಾ (ಅಂತರರಾಷ್ಟ್ರೀಯ ಫುಟ್ಬಾಲ್ ಫೆಡರೇಷನ್ ಅಲ್ಲ)

ಹಲವು ಪರ್ಯಾಯ ಹೆಸರುಗಳಲ್ಲಿ ಯಾವುದು ಹೆಚ್ಚಿಗೆ ಬಳಕೆಯಲ್ಲಿದೆ ಎಂದು ನಿರ್ಧರಿಸುವಾಗ, ಪ್ರಮುಖ ಕನ್ನಡ ಮಾಧ್ಯಮಗಳು, ಗುಣಮಟ್ಟದ ವಿಶ್ವಕೋಶಗಳು, ಭೌಗೋಳಿಕ ಹೆಸರುಗಳು, ಪ್ರಮುಖ ವೈಜ್ಞಾನಿಕ ಸಂಸ್ಥೆಗಳು, ಮತ್ತು ಗಮನಾರ್ಹ ವೈಜ್ಞಾನಿಕ ಪತ್ರಿಕೆಗಳಲ್ಲಿನ ಪದಗಳ ಬಳಕೆಯನ್ನು ಗಮನಿಸುವುದು ಸಹಾಯಕ. ಹುಡುಕಾಟದ ಎಂಜಿನ್ ಈ ಮಾಹಿತಿ ಸಂಗ್ರಹಿಸುವಲ್ಲಿ ಸಹಾಯಮಾಡುತ್ತದೆ. ಹುಡುಕಾಟದ ಎಂಜಿನ್‌ನನ್ನು ಬಳಸುವಾಗ "ವಿಕಿಪಿಡಿಯ" ಎಂಬ ಪದವನ್ನು ಬಿಟ್ಟು ಕನ್ನಡದಲ್ಲಿ ಬರೆಯಲಾದ ಪುಟಗಳನ್ನು ಮಾತ್ರ ಪರಿಗಣಿಸಬೇಕು. ಹುಡುಕಾಟದ ಎಂಜಿನ್ನ ಫಲಿತಾಂಶಗಳು ನಿರ್ದಿಷ್ಟ ಪೂರ್ವಗ್ರಹಗಳನ್ನು ಮತ್ತು ತಾಂತ್ರಿಕ ಮಿತಿಗಳನ್ನು ಒಳಗೊಂಡಿರುತ್ತವೆ. ಹುಡುಕು ಇಂಜಿನ್‌ಗಳನ್ನು ಬಳಸಲು ಮತ್ತು ಪಲಿತಾಂಶಗಳನ್ನು ವಿಶ್ಲೇಷಿಸುವ ಬಗೆಗಿನ ಹೆಚ್ಚಿನ ಮಾಹಿತಿಗೆ ನೋಡಿ

ಹೆಸರಿನ ಬದಲಾವಣೆಗಳು[ಬದಲಾಯಿಸಿ]

ಕೆಲವೊಮ್ಮೆ, ಲೇಖನದ ವಿಷಯದಲ್ಲಿ ಹೆಸರಿನ ಬದಲಾವಣೆ ಉಂಟಾಗಬಹುದು. ಇದು ಸಂಭವಿಸಿದಾಗ 'ಸಾಮಾನ್ಯ ಹೆಸರು' ಇನ್ನೂ ಅನ್ವಯಿಸುತ್ತದೆ. ಆದರೆ ಹೆಸರು ಬದಲಾವಣೆ ಘೋಷಣೆಯಾದ ನಂತರ ಬರೆಯಲಾದ ಆಕರಗಳಿಗೆ ಹೆಚ್ಚಿನ ತೂಕ ನೀಡಲಾಗುತ್ತದೆ. ಬದಲಾವಣೆಯ ನಂತರ ಬರೆದ ಆಕರಗಳು ವಾಡಿಕೆಯಂತೆ ಹೊಸ ಹೆಸರನ್ನು ಬಳಸಿದ್ದಲ್ಲಿ, ವಿಕಿಪೀಡಿಯ ಅದಕ್ಕೆ ಅನುಸಾರವಾಗಿ ಸಂಬಂಧಿತ ಶೀರ್ಷಿಕೆಗಳನ್ನು ಬದಲಾಯಿಸಬೇಕು. ಆದರೆ ಒಮ್ಮೊಮ್ಮೆ, ಹೆಸರು ಬದಲಾವಣೆ ಘೋಷಿತವಾದ ನಂತರ ಬರೆದ ಮೂಲಗಳು, ಹಳೆಯ ಹೆಸರನ್ನೇ ಉಪಯೋಗಿಸುತ್ತಾ ಮುಂದುವರೆದರೆ, ವಿಕಿಪೀಡಿಯ ಸಹ ಹಳೆಯ ಹೆಸರನ್ನೇ ಉಪಯೋಗಿಸುತ್ತಾ ಮುಂದುವರಿಯಬಹುದು.

ಈಗ ಬಳಕೆಯಲ್ಲಿರುವ ಮತ್ತು ಹಿಂದೆ ಬಳಕೆಯಲ್ಲಿದ್ದ ಹೆಸರುಗಳು ನಮಗೆ ತಿಳಿದಿವೆ ಹಾಗೂ ಓದುಗರಿಗೆ ಪರಿಚಿತವಾಗಿರುತ್ತವೆ. ಆದರೆ ಮುಂದೆ ಭವಿಷ್ಯದಲ್ಲಿ ಯಾವ ಪದ ಅಥವಾ ಹೆಸರು ಬಳಕೆಯಾಗುತ್ತದೆ ಎಂದು ಹೇಳ ಬರುವುದಿಲ್ಲ. ಆದರೆ ಸಾಮಾನ್ಯ ಜ್ಞಾನವನ್ನು ಬಳಸಬಹುದು - ಒಂದು ಲೇಖನದ ವಿಷಯದ ಹೆಸರು ಬದಲಾವಣೆಯಾದರೆ, ಬದಲಾವಣೆಯ ನಂತರದ ಬಳಕೆಯನ್ನು ಪರಿಗಣಿಸುವುದು ಸಮಂಜಸವಾಗಿರುತ್ತದೆ. ಇದು ವಿವರಣಾತ್ಮಕ ಶೀರ್ಷಿಕೆಗಳು ಹೆಸರಿನ ಭಾಗವಾದವುಗಳಿಗೂ ಅನ್ವಯಿಸುತ್ತದೆ.

ಲೇಖನಗಳಲ್ಲಿನ ತಟಸ್ಥತೆ[ಬದಲಾಯಿಸಿ]

ಕೆಲವೊಮ್ಮೆ ಲೇಖನದ ಶೀರ್ಷಿಕೆಯು ವಿಕಿಪೀಡಿಯದ "ತಟಸ್ಥ ದೃಷ್ಟಿಕೋನ" ನೀತಿಗೆ ಅನುಸಾರವಾಗಿದೆಯೇ ಎಂಬ ಅನುಮಾನ ಉಂಟಾಗಬಹುದು. ಅಂತಹ ಸಂದರ್ಭದಲ್ಲಿ ಲೇಖನದ ಶೀರ್ಷಿಕೆಯನ್ನು ವಿಶ್ವಾಸಾರ್ಹ ಆಕರಗಳಿಂದ ತೆಗೆದುಕೊಳ್ಳಲಾಗಿದೆಯೇ ಅಥವಾ ವಿಕಿಪೀಡಿಯದ ಸಂಪಾದಕರು ವಿವರಣಾತ್ಮಕ ಶೀರ್ಷಿಕೆಯನ್ನು ಸೃಷ್ಟಿಸಿದ್ದಾರೆಯೇ ಎನ್ನುವುದರ ಮೇಲೆ ಪರಿಹಾರ ಅಧಾರಪಟ್ಟಿರುತ್ತದೆ.

ತಟಸ್ಥ ಅಲ್ಲದ ಆದರೆ ಸಾಮಾನ್ಯ ಹೆಸರುಗಳು[ಬದಲಾಯಿಸಿ]

ಒಂದು ಲೇಖನವನ್ನು ಪ್ರಮುಖ, ಬಹುಸಂಖ್ಯಾತ ಕನ್ನಡದ ನಂಬಲರ್ಹ ಆಕರಗಳಲ್ಲಿ, ಒಂದೇ ಸಾಮಾನ್ಯ ಹೆಸರಿನಲ್ಲಿ ಕರೆಯಲಾಗುತ್ತದೆ ಎಂದಾದರೆ ವಿಕಿಪೀಡಿಯ ಸಾಮಾನ್ಯವಾಗಿ ಆ ಆಕರಗಳನ್ನು ಅನುಸರಿಸುತ್ತದೆ ಮತ್ತು ಅದೇ ಹೆಸರನ್ನು ಲೇಖನದ ಶಿರೋನಾಮೆಗೆ ಕೊಡುತ್ತದೆ (ಇತರ ಹೆಸರಿಸುವಿಕೆಯ ಮಾನದಂಡಗಳನ್ನೂ ಗಣೆನೆಗೆ ತೆಗೆದುಕೊಂಡು). ಕೆಲವೊಮ್ಮೆ ಈ ಸಾಮಾನ್ಯ ಹೆಸರು ವಿಕಿಪೀಡಿಯ ಸಾಮಾನ್ಯವಾಗಿ ಬಳಸದ- ತಟಸ್ಥವಲ್ಲದ ಪದಗಳನ್ನು ಹೊಂದಿರ ಬಹುದು (ಉದಾಹರಣೆಗೆ ಸಿಖ್ ನರಮೇಧ ಅಥವಾ ಗುಜರಾತ್ ಗಲಭೆ, ಹವಾಲ ಹಗರಣ ಅಥವಾ ಕಲ್ಲಿದ್ದಲು ಹಗರಣ). ಇಂತಹ ಸಂದರ್ಭದಲ್ಲಿ ವಾಡಿಕೆಯಲ್ಲಿರುವ ಹೆಸರು ಅಥವಾ ನಿರ್ದಿಷ್ಟ ವಿವರಣೆಯು ಪರಿಣಾಮಕಾರಿಯಾಗಿ ನಾಮಪದವಾದಾಗ (ಮತ್ತು ಆ ನಾಮಪದ ಘಟನೆಯ ಬಗೆಗಿನ ಸಾಮಾನ್ಯ ಪದವಾದಾಗ) ಸಾಮಾನ್ಯವಾಗಿ ಇದು ವಿಕಿಪೀಡಿಯ ವಿವಾದದ ಒಂದು ಪಕ್ಷದ ಪರ ವಹಿಸುತ್ತದೆ ಎಂಬ ಕಾಳಜಿಯನ್ನು ಹಿಂತಳ್ಳುತ್ತದೆ.

ತಟಸ್ಥತೆಯ ಕೊರತೆಯಿಂದ ಸಾಮಾನ್ಯ ಹೆಸರನ್ನು ವಿಕಿಪೀಡಿಯದಲ್ಲಿ ಬಳಸದಿರುವ ಗಮನಾರ್ಹ ಸಂದರ್ಭಗಳು:

 1. ವರುಷಗಳ ನಂತರ ನಿರ್ದಿಷ್ಟ ವಿವಾದಾಂಶಕ್ಕೆ ಸಂಬಂಧಿಸಿ ನೆನಿಪಿಟ್ಟುಕೊಳ್ಳಲು ಸಾಧ್ಯ ಇರಲಾರದವು ಆಗಿರಬಹುದಾದ ಫ್ಯಾಶನ್ನಿನ ಘೋಷಣೆಗಳು ಮತ್ತು ಅಡ್ಡ ಹೆಸರುಗಳು.
 2. ಆಡುಮಾತುಗಳು-ಅವುಗಳಿಗೆ ಹೆಚ್ಚು ಸರಿಯಾದ, ಸ್ಪಷ್ಟ, ವಿಶ್ವಕೋಶಕ್ಕೆ ತಕ್ಕುದಾದ ಬದಲಿ ಪದಗಳು ಇರುವಾಗ.

ಲೇಖನದ ಶಿರೋನಾಮೆಗಳು ಮತ್ತು ಮರುನಿರ್ದೇಶನಗಳು ಓದುಗರು ಏನನ್ನು ಮೊದಲು ಊಹೆಯಾಗಿ ಟೈಪಿಸುತ್ತಾರೆ ಎಂಬುದನ್ನು ಮುಂಗಾಣಬೇಕು ಮತ್ತು ಅದನ್ನು ಓದುಗರು ಯಾವುದಕ್ಕೆ ಅದು ತೆಗೆದುಕೊಂಡು ಹೋಗುತ್ತದೆ ಎಂದು ಭಾವಿಸುತ್ತಾರೆ ಎಂಬುದರೊಂದಿಗೆ ಸಮತೋಲನ ಸಾಧಿಸಬೇಕು. "ಪಿಂಕ್ ಸಿಟಿ"ಯು ಜೈಪುರಕ್ಕೆ ಮರುನಿರ್ದೇಶನ ಪಡೆಯಬೇಕು. "26/11"ನ್ನು ಟೈಪಿಸುವುದು 2008ರ ಮುಂಬೈ ದಾಳಿಗೆ ಮರುನಿರ್ದೇಶನ ಪಡೆಯುತ್ತದೆ ಮತ್ತು ಇದು ಮೇಲಿನ #1 ಪಾಯಿಂಟ್‌ಗೆ ಉದಾರಹರಣೆಯಾಗ ಬಹುದು. ಹಾಗೆಯೇ "ನಿರ್ಭಯ ಪ್ರಕರಣ"ವು ದೆಹಲಿ ಗ್ಯಾಂಗ್ ರೇಪ್ ಪ್ರಕರಣಕ್ಕೆ ಮರುನಿರ್ದೇಶನ ಪಡೆಯಬೇಕಾಗಬಹುದು.

ತೀರ್ಪು ನೀಡದ ವಿವರಣಾತ್ಮಕ ಶೀರ್ಷಿಕೆ[ಬದಲಾಯಿಸಿ]

ಕೆಲವೊಮ್ಮೆ ವಿವರಣಾತ್ಮಕ ನುಡಿಗಟ್ಟು ಒಳ್ಳೆಯ ಶೀರ್ಷಿಕೆಯಾಗಿರುತ್ತದೆ. ಅವನ್ನು ವಿಶೇಷವಾಗಿ ಲೇಖನಗಳಿಗೆಂದೇ ಆವಿಷ್ಕಾರ ಮಾಡಲಾಗಿರುತ್ತದೆ ಮತ್ತು ಅವು ಸಂಪಾದಕ ಅಭಿಪ್ರಾಯವನ್ನು ಸೂಚಿಸದೆ ತಟಸ್ಥ ದೃಷ್ಟಿಕೋನವನ್ನು ಬಿಂಬಿಸಬೇಕಾಗಿರುತ್ತದೆ. ತೀರ್ಪು ಸೂಚಿಸುವ ಮತ್ತು ತಟಸ್ಥ ಅಲ್ಲದ ಪದಗಳ ಬಳಕೆ ಮಾಡಬಾರದು. ಅಪಾದನೆ ತಪ್ಪುಮಾಡಿರುವ ಸಾಧ್ಯತೆಯನ್ನು ಸೂಚಿಸುತ್ತಿದ್ದು ವಿವರಣಾತ್ಮಕ ಶಿರೋನಾಮೆಯಲ್ಲಿ ಬಳಸಬಾರದು. (ಅಪವಾದ: ಲೇಖನದ ವಿಷಯವು ವಾಸ್ತವದಲ್ಲಿ ಕಾನೂನಿನ ಕೆಳಗಿನ ಉಲ್ಲಂಘನೆಯ ಅಪಾದನೆಯಾಗಿದ್ದಲ್ಲಿ, ಮತ್ತು ನಂಬಲರ್ಹ ಆಕರಗಳು ಹಾಗೆ ಚರ್ಚಿಸುತ್ತಿದ್ದಲ್ಲಿ ನ್ಯಾಯಾಲದಲ್ಲಿ ಅದು ಇನ್ನೂ ಸಿದ್ಧವಾಗದಿದ್ದಾಗ್ಯೂ ಹಾಗೆ ಬಳಸಬಹುದು. ಇವನ್ನು ಸೂಕ್ತವಾಗಿ "ಅಪಾದನೆಗಳು" ಎಂದು ವಿವರಿಸಬೇಕು.)

ಆದರೆ, ತಟಸ್ಥವಲ್ಲದ ಆದರೆ ಸಾಮಾನ್ಯ ಹೆಸರುಗಳನ್ನು (ಹಿಂದಿನ ಉಪವಿಭಾಗ ನೋಡಿ) ವಿವರಣಾತ್ಮಕ ಶಿರೋನಾಮೆಯ ಒಳಗೆ ಬಳಸಬಹುದು. ವಿವರಣಾತ್ಮಕ ಶಿರೋನಾಮೆಗಳು ಸಹ ಆಕಾರಗಳ ಆಧಾರದ ಮೇಲೆಯೆ ಇರುತ್ತವೆ ಮತ್ತು ಆ ಆಕರಗಳು ಸಾಮಾನ್ಯವಾಗಿ ಬಳಸುವ ಹೆಸರುಗಳು ಮತ್ತು ನುಡಿಗಟ್ಟುಗಳನ್ನು ಒಳಗೊಳ್ಳ ಬಹುದು. (ಉದಾಹರಣೆಗೆ – "ಸಿಖ್ ನರಮೇಧ" ಅಥವಾ "ಗುಜರಾತ್ ಗಲಭೆ"ಗಳನ್ನು ಶಿರೋನಾಮೆಗಳಾಗಿ ಬಳಸ ಬಹುದಾದ್ದರಿಂದ ಅವು ಭಾಗವಾದ ವಿವರಣಾತ್ಮಕ ಶಿರೋನಾಮೆ "ಸಿಖ್ ನರಮೇಧದ ರಾಜಕೀಯ ಪರಿಣಾಮ" ಸಹ ಹಾಗೆಯೇ ಒಪ್ಪಿಕೊಳ್ಳ ಬಹುದು.)

ಸ್ಪಷ್ಟ ಸಂಪ್ರದಾಯ[ಬದಲಾಯಿಸಿ]

ವಿಕಿಪೀಡಿಯ ನಿರ್ದಿಷ್ಟ ವಿಷಯದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅನೇಕ ನಾಮಕರಣ ಸಂಪ್ರದಾಯಗಳನ್ನು ಹೊಂದಿದೆ. ಅಪರೂಪದ ಸಂದರ್ಭಗಳಲ್ಲಿ, ಸಾಮಾನ್ಯ ಹೆಸರಾಗಿರದಂತಹ ನುಡಿಗಟ್ಟುಗಳನ್ನು ಶೀರ್ಷಿಕೆಯನ್ನಾಗಿ ಬಳಸುವಂತೆ ಶಿಫಾರಸು ಮಾಡುತ್ತದೆ (ಔಷಧಗಳ ವಿಷಯದಲ್ಲಿನ ಸಂಪ್ರದಾಯದಂತೆ). ವಿಶೇಷ ಹೆಸರುಗಳನ್ನು ಶೀರ್ಷಿಕೆಯನ್ನಾಗಿ ಬಳಸುವ ಅಭ್ಯಾಸವು ಅನೇಕವೇಳೆ ವಿವಾದಾಸ್ಪದವಾಗಿದೆ, ಅದು ಸಾಮಾನ್ಯ ಹೆಸರಿಗಿಂತ ಹೆಚ್ಚಿನ ಪ್ರಯೋಜನವನ್ನು ಒದಗಿಸುವುದಿಲ್ಲವಾದಲ್ಲಿ ಅಂತಹ ಹೆಸರುಗಳನ್ನು ಬಳಸಬಾರದು. ಬಳಸಿದ್ದೇ ಆದಲ್ಲಿ, ಅದು ತಟಸ್ಥ ಹಾಗು ವಿಷಯಕ್ಕೆ ಅನುಗುಣವಾಗಿರಬೇಕು.

ನಿಖರತೆ ಮತ್ತು ದ್ವಂದ್ವ ನಿವಾರಣೆ[ಬದಲಾಯಿಸಿ]

ನಿಖರತೆ[ಬದಲಾಯಿಸಿ]

ಸಾಮಾನ್ಯವಾಗಿ ಶೀರ್ಷಿಕೆಯು ಲೇಖನದ ವಿಷಯದ ಹರಹನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುವಷ್ಟು ನಿಖರವಾಗಿದ್ದರೆ ಸಾಕು. ಕಲ್ಕತ್ತಾದ ಮದರ್ ತೆರೇಸಾ ಎಂಬ ಶೀರ್ಷಿಕೆ ತುಂಬಾ ನಿಖರವಾಯಿತು, ಏಕೆಂದರೆ ಮದರ್ ತೆರೇಸಾದಲ್ಲಿರುವ ನಿಖರತೆ ವಿಷಯವನ್ನು ಸೂಚಿಸಲು ಸಾಕು. ಪ್ರಿಯಾಂಕ ಎಂಬ ಶೀರ್ಷಿಕೆಯಲ್ಲಿರುವ ನಿಖರತೆ ಸಾಲುವುದಿಲ್ಲ, "ಪ್ರಿಯಾಂಕ ಚೋಪ್ರಾ"ಎಂಬ ಶೀರ್ಷಿಕೆ ಬೇಕಾಗುತ್ತದೆ. ನಿಖರತೆಯ ಮಾನದಂಡಗಳಿಗೆ ಅಪವಾದಗಳು ಕೆಲವೊಮ್ಮೆ ಇತರ ಹೆಸರಿಸುವಿಕೆ ಮಾನದಂಡಗಳನ್ನು ಅನ್ವಯಿಸುವುದರಿಂದ ಉಂಟಾಗಬಹುದು. ಬಹಳಷ್ಟು ಇಂತಹ ಅಪವಾದಗಳನ್ನು ನಿರ್ದಿಷ್ಟ ವಿಕಿಪೀಡಿಯ ಮಾರ್ಗದರ್ಶನ ಅಥವಾ ಪ್ರಾಥಮಿಕ ವಿಷಯಗಳು, ಭೂಗೋಳಿಕ ಹೆಸರುಗಳು ಅಥವಾ ರಾಜ ಮತ್ತು ರಾಜಕುಮಾರರ ಹೆಸರುಗಳು ಮುಂತಾದ ವಿಕಿಪೀಡಿಯ ಯೋಜನೆಗಳಲ್ಲಿ ವಿವರಿಸಲಾಗಿದೆ. ಕೆಲವು ಉದಾಹರಣೆಗಳನ್ನು ಕೆಳಗೆ ಕೊಡಲಾಗಿದೆ:

 1. "ಜೋಗ ಜಲಪಾತ" ಎಂಬ ಶೀರ್ಷಿಕೆಯು ನಿಸ್ಸಂದೇಹವಾಗಿರಲು ಬೇಕಿರುವ ನಿಖರತೆಯನ್ನು ಹೊಂದಿದ್ದರೂ ನಾವು "ಜೋಗ ಜಲಪಾತ, ಕರ್ನಾಟಕ"ಎಂಬ ಹೆಸರನ್ನು ಹುಡುಕಲು ನೀಡುತ್ತೇವೆ.
 2. ಶಕ್ತಿ ಎಂಬ ಶೀರ್ಷಿಕೆಯಲ್ಲಿ ನಿಖರತೆಯಿಲ್ಲ, ಆದುದರಿಂದ "ಶಕ್ತಿ (ಭೌತವಿಜ್ಞಾನ)" ಎಂಬ ಶೀರ್ಷಿಕೆಯನ್ನು ನೀಡಬೇಕು.
 3. "ಎಂ-೧೮೫"ಎಂಬ ಶೀರ್ಷಿಕೆಯು ನಿಸ್ಸಂದೇಹವಾಗಿರಲು ಬೇಕಿರುವ ನಿಖರತೆಯನ್ನು ಹೊಂದಿದ್ದರೂ, ವಿಕಿಪೀಡಿಯ:ಹೆಸರಿಸುವ ಸಂಪ್ರದಾಯವು (ಅಮೇರಿಕಾದ, ರಾಜ್ಯ ಮತ್ತು ಪ್ರದೇಶದ ಹೆದ್ದಾರಿಗಳು) "ಎಂ-೧೮೫ (ಮಿಚಿಗನ್ ಹೆದ್ದಾರಿ)" ಎಂದು ವಿಶೇಷಕವನ್ನು ಸೇರಿಸುವಂತೆ ಮತ್ತು "ಎಂ-೧೮೫"ನಿಂದ ಅದಕ್ಕೆ ಮರುನಿರ್ದೇಶನ ನೀಡುವಂತೆ ಸೂಚಿಸುತ್ತದೆ.

ದ್ವಂದ್ವ ನಿವಾರಣೆ[ಬದಲಾಯಿಸಿ]

ಈ ನೀತಿಯ ವಿಭಾಗವನ್ನು ದ್ವಂದ್ವ ನಿವಾರಣೆ ಮಾರ್ಗದರ್ಶಿಯ ಸಂಯೋಗದೊಂದಿಗೆ ಓದಬೇಕು.

ಒಮ್ಮೊಮ್ಮೆ ಆ ಶೀರ್ಷಿಕೆಗೆ ಬೇರೆಯೆ ಅರ್ಥವಿರುವ ಕಾರಣಕ್ಕೆ ಖಚಿತವಾದ ಶೀರ್ಷಿಕೆಯನ್ನು ಬಳಸಲು ಸಾದ್ಯವಾಗುವುದಿಲ್ಲ ಮತ್ತು ಆ ಶೀರ್ಷಿಕೆಯನ್ನು ಮೊದಲೇ ಬೇರೆ ಲೇಖನಕ್ಕೆ ಬಳಸಲಾಗಿರುತ್ತದೆ. ನಿಖರ ಮಾನದಂಡದ ಪ್ರಕಾರ, ಒಂದು ಲೇಖನದ ವಿಷಯವನ್ನು ಇನ್ನೊಂದರಿಂದ ಪ್ರತ್ಯೇಕಿಸಲು ಹೆಚ್ಚು ವಿವರವಾದ ಶೀರ್ಷಿಕೆ ಅಗತ್ಯವಾದಲ್ಲಿ ಎಷ್ಟು ಹೆಚ್ಚುವರಿ ವಿವರ ಅಗತ್ಯವೋ ಅಷ್ಟನ್ನೇ ಬಳಸಬೇಕು.

ಸಾಮಾನ್ಯ ನಿಯಮದಂತೆ, ಒಂದು ವಿಷಯದ ಆದ್ಯತೆಯ ಶೀರ್ಷಿಕೆ ಒಂದಕ್ಕಿಂತ ಹೆಚ್ಚು ವಿಷಯವನ್ನು ಸೂಚಿಸಿದಾಗ :

 • ಅಸ್ಪಷ್ಟ ಹೆಸರನ್ನು ಸೂಚಿಸುವ ಲೇಖನವು ಪ್ರಾಥಮಿಕ ವಿಷಯದ ಬಗೆಗೆ ಇದ್ದಾಗ, ಸದರೀ ಹೆಸರನ್ನು, ಅದು ಇತರ ಎಲ್ಲಾ ನೀತಿಗಳು ಪ್ರಕಾರ ಇದ್ದಲ್ಲಿ, ಬದಲಾವಣೆ ಇಲ್ಲದಯೆ ಶೀರ್ಷಿಕೆಯಾಗಿ ಕೊಡಬಹುದು.
 • ವಿಷಯವು ಪ್ರಾಥಮಿಕ ವಿಷಯವಲ್ಲದ ಸಂದರ್ಭದಲ್ಲಿ ಅಸ್ಪಷ್ಟ ಹೆಸರನ್ನು ಬಳಸುವ ಹಾಗೆ ಇಲ್ಲ ಮತ್ತು ದ್ವಂದ್ವ ನಿವಾರಣೆ ಲಿಂಕ್‌ಗಳನ್ನು ಕೊಡಬೇಕು.

ಯಾವ ದ್ವಂದ ನಿವಾರಣೆಯ ಪದ್ಧತಿಗಳನ್ನು ಬಳಸಬೇಕು ಎಂದು ನಿರ್ಧರಿಸುವಾಗ, ಲೇಖನದ ಶಿರೋನಾಮೆಯ ಎಲ್ಲಾ ಮಾನದಂಡಗಳನ್ನು ಪರಿಗಣಿಸಲಾಗುತ್ತದೆ:

 1. ಸಹಜ ದ್ವಂದ್ವ ನಿವಾರಣೆ: ಕನ್ನಡದ ನಂಬಲರ್ಹ ಆಕರಗಳಲ್ಲಿ ವಿಷಯಕ್ಕೆ ಬದಲೀ ಅಥವಾ ಪರ್ಯಾಯ ಹೆಸರು ಇದ್ದು, ಅದು ಆದ್ಯತೆಯ ಆದರೆ ಅಸ್ಪಷ್ಟ ಶಿರೋನಾಮೆ ಅಷ್ಟಲ್ಲದಿದ್ದರೂ, ಸಾಮಾನ್ಯವಾಗಿ ಕರೆಯುವ ಹೆಸರಾದರೆ ದ್ವಂದ್ವ ನಿವಾರಣೆ ಅಗತ್ಯ. ಆದರೆ ಅಸ್ಫುಟ ಮತ್ತು ನೀವೇ ಸೃಷ್ಟಿಸಿದ ಪದಗಳನ್ನು ಬಳಸಬೇಡಿ.
 2. ಅಲ್ಪವಿರಾಮದಿಂದ ಬೇರ್ಪಡಿಸಲಾದ ದ್ವಂದ್ವ ನಿವಾರಣೆ: ಸ್ಥಳನಾಮ ದ್ವಂದ ನಿವಾರಣೆಗೆ ಹೆಚ್ಚಿನ ಆಡಳಿತ ವಿಭಾಗವನ್ನು ಬಳಸುತ್ತಿದ್ದಲ್ಲಿ ಅದನ್ನು ಆವರಣದಲ್ಲಿ ಇರಿಸುವ ಬದಲು ಅಲ್ಪವಿರಾಮದಿಂದ ಬೇರ್ಪಡಿಸ ಬಹುದು.
 3. ಆವರಣಗಳ ದ್ವಂದ್ವ ನಿವಾರಣೆ: ಅಸ್ಪಷ್ಟ ಹೆಸರಿನ ನಂತರ ಆವರಣದಲ್ಲಿ ಸ್ಪಷ್ಟನೆ ನೀಡುವ ಹೆಸರನ್ನು ಸೇರಿಸುವುದು, ಬೇರೆ ಯಾವುದೇ ಪರಿಹಾರವು ಯೋಗ್ಯ ಲೇಖನ ಶಿರೋನಾಮೆ ದೊರೆಯದಿದ್ದಲ್ಲಿ, ವಿಕಿಪೀಡಿಯದ ಪ್ರಮಾಣಿತ ದ್ವಂದ ನಿವಾರಣೆಯ ತಂತ್ರ.
 4. ವಿವರಣಾತ್ಮಕ ಶೀರ್ಷಿಕೆ: ಒಂದು ವಿಷಯಕ್ಕೆ ಯಾವುದೇ ಸ್ವೀಕಾರಾರ್ಹ ಹೆಸರು ದೊರಕದಿದ್ದಾಗ, ನಿಮ್ಮದೇ ಪರಿಕಲ್ಪನೆಯ ಶೀರ್ಷಿಕೆ ಅಗತ್ಯವಾಗಿರುತ್ತದೆ, ಮತ್ತು ವಿವರಣಾತ್ಮಕ ಮತ್ತು ವಿಶಿಷ್ಟ ಶೀರ್ಷಿಕೆಗಳನ್ನು ರೂಪಿಸಲು ಇಲ್ಲಿ ಹೆಚ್ಚು ಸ್ವತಂತ್ರ ಲಭಿಸುತ್ತದೆ.
 5. ಮೇಲಿನವುಗಳ ಸಂಯೋಜನೆ: ಮೇಲಿನ ನಾಲ್ಕನ್ನೂ ಬಳಸುವುದು. ಇದು ತೀರ ವಿರಳವಾಗಿರ ಬೇಕು ಸಾಧ್ಯವಾದಷ್ಟೂ ಹಾಗೆ ಬಳಸಬಾರದು.

ಲೇಖನದ ಶಿರೋನಾಮೆಯಲ್ಲಿ ಸ್ಪಷ್ಟನೆಯ ಪದಗಳನ್ನು ಬೇರ್ಪಡಿಸಲು ಬಳಸಬಹುದಾದ ಚಿಹ್ನೆಗಳು (ಕ್ಯಾರಕ್ಟರ್‌ಗಳು) ಅಲ್ಪವಿರಾಮ ಮತ್ತು ದುಂಡು ಆವರಣಗಳು (ರೌಂಡ್ ಬ್ರಾಕೆಟ್) ಮಾತ್ರ. ವಿವರಣ ಚಿಹ್ನೆ ":" (ಕೋಲನ್) ಒಂದು ಮಿತಿಯಲಷ್ಟೇ ಬಳಸ ಬಹುದು (ಉದಾಹರಣೆಗೆ ಕೆಲವು ಸೃಜನಾತ್ಮಕ ಕೃತಿಗಳಲ್ಲಿನ ಉಪಶೀರ್ಷಿಕೆಗಳಿಗೆ).

ಒಂದು ಕಾಗುಣಿತದ ವ್ಯತ್ಯಾಸ ವಿಶಿಷ್ಟ ವಿಷಯವನ್ನು ಸೂಚಿಸುವಾಗ[ಬದಲಾಯಿಸಿ]

ಬರೆಯುವಿಕೆಯ ಒಂದೇ ರೀತಿಯ ಅಥವಾ ಬಹುತೇಕ ಒಂದೇ ರೀತಿಯ ಅಭಿವ್ಯಕ್ತಿಗಳು ಭಿನ್ನ ಅರ್ಥಗಳನ್ನು ಕೊಡುತ್ತಿದ್ದಾಗ ದ್ವಂದ್ವಾರ್ಥತೆ (ಅನೇಕ ಅರ್ಥಗಳ ಸಾಧ್ಯತೆ) ಹುಟ್ಟುತ್ತದೆ. ಸಾಮಾನ್ಯ ವಿಧಾನವೆಂದರೆ ಓದುಗರು ಏನನ್ನೇ ಹುಡುಕಲು ನಮೂದಿಸಲಿ, ಮೇಲ್‌ಟಿಪ್ಪಣಿ (ಹ್ಯಾಟ್‌ನೋಟ್ಸ್) ಮತ್ತು ದ್ವಂದ್ವ ನಿವಾರಣೆ ಪುಟಗಳ ಸಹಾಯದಿಂದ, ಅವರು ಹುಡುಕುತ್ತಿರುವ ಅಥವಾ ನಿರೀಕ್ಷಿಸುತ್ತಿರುವ ವಿಷಯಕ್ಕೆ ಸಾಧ್ಯವಾದಷ್ಟು ವೇಗವಾಗಿ ನಿರ್ದೇಶಿಸಲ್ಪಡುವುದು. ಇಂತಹ ಸಂಚರಣೆ ಅಥವಾ ನ್ಯಾವಿಗೇಶನ್‌ನ ಅನುಕೂಲ ಇದ್ದಾಗ ಒಂದು ವಿಷಯವನ್ನು ಇನ್ನೊಂದರಿಂದ ಪ್ರತ್ಯೇಕಿಸಲು ಸಣ್ಣ ವಿವರಗಳು ಸಾಕಾಗುತ್ತವೆ. ಕೆಲವೊಮ್ಮೆ ಸಹಜವಾಗಿ ಲೇಖನಗಳನ್ನು ಪ್ರತ್ಯೇಕಿಸಲು ಒಂದು ಪದದ ಬಹುವಚನ ರೂಪಗಳನ್ನು ಸಹ ಬಳಸಬಹುದು.

ಚಿಕ್ಕದಾಗಿಸುವಿಕೆ[ಬದಲಾಯಿಸಿ]

ಚಿಕ್ಕದಾಗಿಸುವಿಕೆಯ ಉದ್ಧೇಶವು ಹ್ರಸ್ವಗೊಳಿಸುವುದು ಮತ್ತು ಆ ವಿಷಯದ ಬಗೆಗೆ ಪರಿಚಯವಿದ್ದ ವ್ಯಕ್ತಿಯು ವಿಷಯಗಳನ್ನು ಗುರುತಿಸುವಷ್ಟು ಅಗತ್ಯ ಮಾಹಿತಿಯನ್ನು ಅಡಕಗೊಳಿಸುವುದರ ನಡುವಿನ ಸಮತೋಲನ. ಇದಕ್ಕೆ ಕೆಲವು ಅಪವಾದಗಳನ್ನು ಹೆಸರಿಸುವಿಕೆ ಸಂಪ್ರದಾಯದಲ್ಲಿ ನೋಡಬಹುದು (ಉದಾಹರಣೆಗೆ ಶೀರ್ಷಿಕೆಯ ಬಳಕೆ ಜೀನ್-ಪಾಲ್ ಸಾರ್ತ್ರೆ ಎಂದು –ಜೆ. ಪಿ. ಸಾರ್ತ್ರೆ ಅಲ್ಲ).

ಲೇಖನ ಶೀರ್ಷಿಕೆ ಸ್ವರೂಪಣೆ[ಬದಲಾಯಿಸಿ]

ಈ ಕೆಳಗಿರುವ ಅಂಶಗಳನ್ನು ಅನುಸರಿಸುವುದು ಒಂದೇ ಹೆಸರಿರುವ ಒಂದಕ್ಕೂ ಹೆಚ್ಚು ಲೇಖನಗಳನ್ನು ತಪ್ಪಿಸಲು ಸಹಾಯಕ:

ಏಕವಚನ ರೂಪ ಬಳಸಿ[ಬದಲಾಯಿಸಿ]

ಲೇಖನದ ಶೀರ್ಷಿಕೆಯು ಸಾಮಾನ್ಯವಾಗಿ ಏಕವಚನ ರೂಪದಲ್ಲಿರುತ್ತದೆ (ಉದಾಹರಣೆಗೆ: ಕುದುರೆ, ಕುದುರೆಗಳು ಅಲ್ಲ). ಯಾವಾಗಲೂ ಬಹುವಚನದಲ್ಲಿರುವ ನಾಮಪದಗಳಿಗೆ ಮತ್ತು ವಸ್ತುಗಳ ಗುಂಪಿನ ಹೆಸರಿಗೆ ವಿನಾಯಿತಿ ನೀಡಲಾಗಿದೆ (ಉದಾಹರಣೆಗೆ: ಅರೇಬಿಕ್ ಅಂಕಿಗಳು).

ಅಸ್ಪಷ್ಟ ಸಂಕ್ಷೇಪಣಗಳನ್ನು ಬಳಸುವಂತಿಲ್ಲ[ಬದಲಾಯಿಸಿ]

ಸಂಕ್ಷೇಪಣ (ಮೊಟಕುಗೊಳಿಸುವಿಕೆ) ಮತ್ತು ಮೊದಲಕ್ಕರಿ (ಪದಗಳ ಮೊದಲ ಅಕ್ಷರಗಳನ್ನು ಸೇರಿಸಿ ಆದ ಪದ) ಸಾಮಾನ್ಯವಾಗಿ ಅಸ್ಪಷ್ಟವಾಗಿರುತ್ತವೆ. ಒಂದು ಲೇಖನವು ತನ್ನ ಮೊಟಕುಗೊಂಡ ರೂಪದಲ್ಲಿ ಹೆಚ್ಚು ಪರಿಚಿತವಾಗಿದ್ದು ಹಾಗು ಅದು ವಿಷಯಕ್ಕೆ ಹೆಚ್ಚಾಗಿ ಸಂಬಂಧಿತವಾಗಿದ್ದ ಸಂದರ್ಭವನ್ನು ಹೊರತುಪಡಿಸಿ ಸಂಕ್ಷೇಪಣಗಳನ್ನು ಬಳಸುವಂತಿಲ್ಲ (ಉದಾಹರಣೆಗೆ:ಇಸ್ರೊ). ಶೀರ್ಷಿಕೆಯೊಂದಿಗೆ ಅದರ ಸಂಕ್ಷಿಪ್ತ ಅಥವಾ ಮೊದಲಕ್ಕರಿಯನ್ನು ಸೇರಿಸುವುದು ಸಹ ಅನವಶ್ಯಕ.

ನಾಮಪದಗಳನ್ನು ಬಳಸಿ[ಬದಲಾಯಿಸಿ]

ನಾಮಪದಗಳನ್ನು ಮತ್ತು ನಾಮಪದದ ನುಡಿಗಟ್ಟುಗಳನ್ನು ಸಾಮಾನ್ಯವಾಗಿ ಲೇಖನಗಳ ಶೀರ್ಷಿಕೆಯನ್ನಾಗಿ ಬಳಸಬೇಕು. ಇಂತಹ ಶೀರ್ಷಿಕೆಯು ಲೇಖನದ ಮೊದಲ ವಾಕ್ಯದ ವಿಷಯವಾಗಿರಬಹುದು. ಒಂದು ಲೇಖನದ ಶೀರ್ಷಿಕೆಗಳಿಗಿರುವ ಪ್ರಮುಖ ವಿನಾಯಿತಿಯೆಂದರೆ ಉದ್ಧರಣಗಳು ಅಥವಾ ಕೃತಿಗಳ ಶಿರೋನಾಮೆಗಳು. ವಿಶೇಷಣ ಮತ್ತು ಕ್ರಿಯಾಪದ ರೂಪದಲ್ಲಿನ ಪದಗಳಿಗೆ, ಅವುಗಳ ಸಂವಾದಿ ನಾಮಪದದ ಶೀರ್ಷಿಕೆಯಿರುವ ಲೇಖನಗಳಿಗೆ ಮರುನಿರ್ದೇಶನ ಕೊಡಬೇಕು.

ಶೀರ್ಷಿಕೆಗಳಿಗೆ ಉದ್ದರಣ ಚಿಹ್ನೆ ಬಳಸಬಾರದು[ಬದಲಾಯಿಸಿ]

ಉದ್ಧರಣವು (ಕೋಟ್) ಲೇಖನದ ಶೀರ್ಷಿಕೆಯಾಗಿದ್ದಾಗ, ಅದನ್ನು ಉದ್ಧರಣ ಚಿಹ್ನೆಯ ಒಳಗೆ ಬರೆಯಬಾರದು. ಉದ್ಧರಣ ಚಿಹ್ನೆಗಳು ಲೇಖನದ ಶೀರ್ಷಿಕೆಯ ಅಥವಾ ಹೆಸರಿನ ಭಾಗವಾಗಿದ್ದಾಗ ಮಾತ್ರ ಅದನ್ನು ಬಳಸಬಹುದು.

ವ್ಯಕ್ತಿಗಳ ಹೆಸರುಗಳಿಗೆ ವಿಶ್ವಾಸಾರ್ಹ ಮೂಲಗಳನ್ನು ಅನುಸರಿಸಬೇಕು[ಬದಲಾಯಿಸಿ]

ಮಧ್ಯದ ಹೆಸರು ಅಥವಾ ಹೆಸರಿನ ಮೊದಲಕ್ಷರಗಳನ್ನು ಬಳಸಬೇಕೆಂದು ನಿರ್ಧರಿಸುವಾಗ ಮಧ್ಯ ಹೆಸರುಗಳ ಬಗೆಗಿನ ಮಾರ್ಗದರ್ಶನಗಳನ್ನು ಅನುಸರಿಸಿ. ಅಂದರೆ ವಿಶ್ವಾಸಾರ್ಹ ಆಕರಗಳಲ್ಲಿ ಸಾಮಾನ್ಯವಾಗಿ ಬಳಸಲಾಗುವ ಹೆಸರು ಇದಾಗಿರಬೇಕು.

ವಿಶೇಷ ಅಕ್ಷರಗಳು ಮತ್ತು ಚಿಹ್ನೆಗಳು[ಬದಲಾಯಿಸಿ]

ಕೆಲವು ವಿಶೇಷ ಅಕ್ಷರ ಅಥವಾ ಚಿಹ್ನೆಗಳನ್ನು ಪುಟದ ಶೀರ್ಷಿಕೆಯಲ್ಲಿ ಬಳಸಲು ತಾಂತ್ರಿಕ ನಿರ್ಬಂಧಗಳಿವೆ. ಈ ವಿಶೇಷ ಚಿಹ್ನೆಗಳನ್ನು ಶಿರೋನಾಮೆಯಲ್ಲಿ ಬಳಸಲೇಬಾರದು: #<>[]|{}_. ತಾಂತ್ರಿಕವಾಗಿ, ಎಲ್ಲಾ ಇತರ ಯುನಿಕೋಡ್ ಅಕ್ಷರಗಳನ್ನು ಪುಟದ ಶೀರ್ಷಿಕೆಗಳಲ್ಲಿ ಬಳಸಬಹುದು.

ಪ್ರಮಾಣಿತ ಕೀಲಿಮಣೆಯಲ್ಲಿರದ ಅಕ್ಷರಗಳು (ಪುನರ್ನಿರ್ದೇಶನಗಳನ್ನು ಬಳಸಿ): ಕೆಲವೊಮ್ಮೆ ಸೂಕ್ತ ಶೀರ್ಷಿಕೆಯು, ಉಚ್ಚಾರಚಿಹ್ನೆಗಳನ್ನು (ಡೈಯಾಕ್ರಿಟಿಕ್), ಗೆರೆಗಳನ್ನು ಅಥವಾ ಪ್ರಮಾಣಿತ ಕೀಲಿಮಣೆಯಲ್ಲಿ ಇಲ್ಲದೆ ಇರುವ ಅಕ್ಷರಗಳನ್ನು ಹೊಂದಿರಬಹುದು. ಅಂತಹ ಸಂದರ್ಭಗಳಲ್ಲಿ, ಪ್ರಮಾಣಿತ ಕೀಲಿಮಣೆಯಲ್ಲಿನ ಅಕ್ಷರಗಳನ್ನು ಮಾತ್ರ ಉಪಯೋಗಿಸಿದ ಶೀರ್ಷಿಕೆಯ ಆವೃತ್ತಿಗೆ ಮರುರ್ನಿರ್ದೇಶನ ಕೊಡಿ. ಆದರೆ ಒಟ್ಟಾರೆ ವೈಶಿಷ್ಟವಾದ ಹಾಗೂ ಟೈಪಿಸಲು ಕಷ್ಟವಾದ ಮತ್ತು ಪಕ್ಕದಲ್ಲಿನ ಅಕ್ಷರಗಳೊಂದಿಗೆ ಹಸ್ತಕ್ಷೇಪ ಮಾಡುವ ಚಿಹ್ನೆಗಳನ್ನು ಬಳಸದಿರುವುದು ಸೂಕ್ತ.

ಉದ್ಧರಣ ಮತ್ತು ಇತರ ಚಿಹ್ನೆಗಳು ಬೇಡ: ಜೋಡಿ ( "...") ಮತ್ತು ಏಕ ಉದ್ಧರಣಾ ಚಿಹ್ನೆಗಳು ( '...'), ಹಾಗೂ ಅವುಗಳ ಭಿನ್ನ ರೂಪಗಳು (“...”), ಕೆಳ ಮತ್ತು ಮೇಲಿನ ಉದ್ಧರಣಾ ಚಿಹ್ನೆಗಳು („...“), ಗುಲ್ಲಿಮೆಟ್ ಚಿಹ್ನೆ ( «...»), ಬ್ಯಾಕ್‌ಟಿಕ್‌ಗಳು (`...´),<q> ಹೆಚ್‌ಟಿಎಮ್‌ಎಲ್ ಟ್ಯಾಗ್ (<q>...</q>) ಶೀರ್ಷಿಕೆಗಳಲ್ಲಿ ಬಳಸಬಾರದು. ಇವು ಖುದ್ಧ ಶೀರ್ಷಿಕೆಯ ಭಾಗವಾಗಿದ್ದರೆ ಅಥವಾ ಆರ್ಥೋಗ್ರಾಫಿ (ಭಾಷೆಯೊಂದರ ಬರೆಯುವಿಕೆ ಸಂಪ್ರದಾಯ) ಅಗತ್ಯವಾಗಿದ್ದಲ್ಲಿ ಇದಕ್ಕೆ ವಿನಾಯತಿ ಇದೆ.

ಹಾಗೆಯೇ ವಿವಿಧ ಅಪಾಸ್ಟ್ರಫಿ ಅಥವಾ ಲೋಪಚಿಹ್ನೆಗಳು ಮತ್ತು ಅದರ ರೂಪಾಂತರಗಳನ್ನು (ʻ ʾ ʿ ᾿ ῾ ‘ ’ c) ಸಹ ಪುಟದ ಶೀರ್ಷಿಕೆಗಳಲ್ಲಿ ಉಪಯೋಗಿಸಬಾರದು. ಸಾಮಾನ್ಯವಾಗಿ ಈ ಲೋಪಚಿಹ್ನೆಗೆ (') ಮಾತ್ರ ವಿನಾಯಿತಿ ನೀಡಲಾಗಿದೆ. ಕೆಲವೊಮ್ಮೆ ಜಾಹೀರಾತುಗಳು ಅಥವಾ ಲೋಗೊಗಳಲ್ಲಿ ಕಂಡುಬರುವಂತ "♥" ಚಿಹ್ನೆಯನ್ನು ಲೇಖನದ ಶೀರ್ಷಿಕೆಗಳಲ್ಲಿ ಬಳಸಲೇಬಾರದು. ಸಮಂಜಸ ಪರ್ಯಾಯವಿದ್ದಲ್ಲಿ; ಅಪರೂಪದ ಅಕ್ಷರಗಳನ್ನು ಬಳಸಬೇಡಿ. ಏಕೆಂದರೆ ಹಲವು ಬ್ರೌಸರ್‌ಗಳು ಅವುಗಳನ್ನು ತೋರಿಸುವುದಿಲ್ಲ.

ಇಟಾಲಿಕ್ಸ್ ಮತ್ತು ಇತರ ಸ್ವರೂಪಣೆ[ಬದಲಾಯಿಸಿ]

ಒಂದು ಲೇಖನದಲ್ಲಿ ಇಟಾಲಿಕ್ಸ್ ಅಥವಾ ಓರೆಅಕ್ಕರ ಶೈಲಿಯನ್ನು ಬಳಸಬಹುದು. ಉದಾಹರಣೆಗೆ, ವೈಜ್ಞಾನಿಕ ವರ್ಗೀಕರಣದ ಹೆಸರುಗಳು, ಹಡಗುಗಳ ಹೆಸರುಗಳು, ಪುಸ್ತಕಗಳ ಶೀರ್ಷಿಕೆಗಳು, ಚಿತ್ರಗಳು, ಮತ್ತು ಇತರ ಸೃಜನಾತ್ಮಕ ಕೃತಿಗಳ ಮತ್ತು ವಿದೇಶಿ ನುಡಿಗಟ್ಟುಗಳನ್ನು ಓರೆಅಕ್ಕರ ಶೈಲಿಯಲ್ಲಿ ಬರೆಯಬಹುದು. ಇಟಾಲಿಕ್ ಶೈಲಿಯು ಒಂದು ಪುಟದ ನಿಜವಾದ ಶೀರ್ಷಿಕೆಯ ಭಾಗವಾಗಿರಲು ಸಾಧ್ಯವಿಲ್ಲ; ಒಂದು ಪುಟದ ಶೀರ್ಷಿಕೆಯಲ್ಲಿ ಒಂದು ಉದ್ಧರಣ ಚಿಹ್ನೆ (') ಬಳಸಿದರೆ ಅದು ಯುಆರ್‌ಎಲ್‌ನ ಭಾಗವಾಗುತ್ತದೆಯೇ ಹೊರತು ಅಕ್ಷರ ಶೈಲಿ ಬದಲಾಯಿಸುವುದಿಲ್ಲ. ಶೀರ್ಷಿಕೆ ಅಥವಾ ಅದರ ಭಾಗವನ್ನು ಇಟಾಲಿಕ್ಸ್ ಶೈಲಿ ಮಾಡಲು ಮ್ಯಾಜಿಕ್ ಪದ ಶೀರ್ಷಿಕೆಪ್ರದರ್ಶನ ಅಥವಾ ಇಟಾಲಿಕ್ ಶೀರ್ಷಿಕೆ ಟೆಂಪ್ಲೇಟ್ ಬಳಸಬಹುದು. ಕೆಲವು ಟೆಂಪ್ಲೇಟ್‌ಗಳು ಉದಾಹರಣೆಗೆ:

 • ಟೆಂಪ್ಲೇಟು: Infobox ಪುಸ್ತಕ,
 • ಟೆಂಪ್ಲೇಟು: Infobox ಚಲನಚಿತ್ರ, ಮತ್ತು

ಅವು ಕಾಣಿಸಿಕೊಳ್ಳುವ ಪುಟಗಳ ಶೀರ್ಷಿಕೆಗಳನ್ನು ಪೂರ್ವನಿಯೋಜಿತವಾಗಿ ಓರೆಅಕ್ಷರ ಮಾಡುತ್ತವೆ. ಹೆಚ್ಚಿನ ವಿವರಗಳಿಗಾಗಿ ತಾಂತ್ರಿಕ ನಿರ್ಬಂಧಗಳು ಪುಟದಲ್ಲಿ ಇಟಾಲಿಕ್ಸ್ ಮತ್ತು ಸ್ವರೂಪಣೆ (ಫಾರ್ಮ್ಯಾಟಿಂಗ್) ನೋಡಿ.

ಸ್ವರೂಪಣೆಯ ಇತರ ಬಗೆಗಳನ್ನು (ದಪ್ಪ ರೀತಿಯ ಮತ್ತು ಮೇಲ್ಬರ ಮಾಹಿತಿ) ತಾಂತ್ರಿಕವಾಗಿ ಅದೇ ರೀತಿಯಲ್ಲಿ ಸಾಧಿಸಬಹುದು, ಆದರೆ ಸಾಮಾನ್ಯವಾಗಿ ಇವುಗಳನ್ನು ವಿಕಿಪೀಡಿಯ ಲೇಖನಗಳ ಶೀರ್ಷಿಕೆಗಳಲ್ಲಿ ಬಳಸುವಂತ್ತಿಲ್ಲ (ಗಣಿತ ಲೇಖನಗಳು ಹೊರತುಪಡಿಸಿ). ಉದ್ಧರಣಾ ಚಿಹ್ನೆಗಳನ್ನು ಪ್ರದರ್ಶಿಸಲು ವಿಶೇಷ ತಂತ್ರಗಳ ಅವಶ್ಯಕತೆ ಇಲ್ಲ, ಆದರೂ ಸಹ ಅವುಗಳನ್ನು ಲೇಖನದ ಶೀರ್ಷಿಕೆಯಲ್ಲಿ ಬಳಸುವಂತಿಲ್ಲ.

"ಮತ್ತು" ಹೊಂದಿರುವ ಶೀರ್ಷಿಕೆ[ಬದಲಾಯಿಸಿ]

ಕೆಲವೊಮ್ಮೆ ಒಂದೇ ಲೇಖನವು ಒಂದು ಅಥವಾ ಹೆಚ್ಚು ನಿಕಟ ಸಂಬಂಧವನ್ನು ಹೊಂದಿರುವ ಅಥವಾ ಪೂರಕ ಪರಿಕಲ್ಪನೆಗಳನ್ನು ಒಳಗೊಂಡಿರುತ್ತದೆ. ಇಂತಹ ಸಂದರ್ಭದಲ್ಲಿ ಒಂದು ಸೂಕ್ತ ಶೀರ್ಷಿಕೆ ದೊರಕದಿದ್ದಾಗ "ಮತ್ತು"ವಿನ ಬಳಕೆ ಮಾಡಿ ಆ ಪರಿಕಲ್ಪನೆಗಳನ್ನು ಸೇರಿಸಿ ಲೇಖನಕ್ಕೆ ಶೀರ್ಷಿಕೆಯನ್ನು ನೀಡಬಹುದು. ಸಾಮಾನ್ಯವಾಗಿ ಇಂತಹ ಶಿರೋನಾಮೆ ಒಳಗೊಂಡ ಬಿಡಿ ಪದಗಳನ್ನು ವರ್ಣಮಾಲೆಯ ಅನುಕ್ರಮದಲ್ಲಿ ಜೋಡಿಸುವುದು ಸೂಕ್ತ. ಇಲ್ಲಿ ಬಳಸಿದ ಬಿಡಿ ಪದಗಳಿಗೆ ಎಲ್ಲವನ್ನೂ ಬೆಸದ ಒಂದೇ ಲೇಖನಕ್ಕೆ ಮರುನಿರ್ದೇಶನ ನೀಡಬೇಕು. ಶೀರ್ಷಿಕೆಯಲ್ಲಿ "ಮತ್ತು" ಇರುವ ಕೆಲವು ಲೇಖನಗಳು ತಟಸ್ಥತೆ ಸಮಸ್ಯೆ ಇರುವ ಅಥವಾ ಸ್ವಂತ ಸಂಶೋಧನೆಯಲ್ಲಿ ತೊಡಗಿರುವ ಅಪಾಯ ಸೂಚಕಗಳೂ ಸಹ. "ಮತ್ತು" ಪದ ಬಳಕೆಯನ್ನು ಪಕ್ಷಪಾತ ಪೂರಿತವಲ್ಲದ ರೀತಿಯಲ್ಲಿ ಬಳಸಿ. ಉದಾಹರಣೆಗೆ ಇಸ್ಲಾಮಿ ಭಯೋತ್ಪದನೆ ಎಂದು ಬಳಸಿ "ಇಸ್ಲಾಂ ಮತ್ತು ಭಯೋತ್ಪಾದನೆ" ಎಂದು ಅಲ್ಲ: ಆದರೆ "ಮಾಧಮದ ಇಸ್ಲಾಂ ಮತ್ತು ಭಯೋತ್ಪಾದನೆಯ ಬೆಸಯುವಿಕೆ" ಬಳಸಲು ಅಡ್ಡಿಯಿಲ್ಲ. ನಂಬಲರ್ಹ ಆಕರಗಳಲ್ಲಿ ಸಾಮಾನ್ಯವಾಗಿ "ಮತ್ತು" ಮೂಲಕ ಬೆಸೆಯದ ಪರಿಕಲ್ಪನೆಗಳನ್ನು ಬೆಸೆಯುವುದನ್ನು ಮಾಡಬೇಡಿ.

ಶೀರ್ಷಿಕೆಯ ಬದಲಾವಣೆಯ ಪರಿಗಣನೆ[ಬದಲಾಯಿಸಿ]

ಒಂದು ವಿವಾದಾತ್ಮಕ ಶೀರ್ಷಿಕೆಯನ್ನು ಚರ್ಚೆಯ ಮೂಲಕ ಸಂಪಾದಕರ ಒಮ್ಮತಕ್ಕೆ ಬರದೆ ಇನ್ನೊಂದು ವಿವಾದಾಸ್ಪದ ಶೀರ್ಷಿಕೆಗೆ ಬದಲಾಯಿಸುವುದನ್ನು ಬಲವಾಗಿ ವಿರೋಧಿಸಲಾಗುತ್ತದೆ. ಒಂದು ಲೇಖನದ ಶೀರ್ಷಿಕೆಯು ದೀರ್ಘಕಾಲ ಸ್ಥಿರವಾಗಿದ್ದಲ್ಲಿ ಮತ್ತು ಅದನ್ನು ಬದಲಾಯಿಸಲು ಒಂದು ಒಳ್ಳೆಯ ಕಾರಣ ಇಲ್ಲದಿರುವಾಗ, ಅದನ್ನು ಬದಲಾಯಿಸಬಾರದು. ಶೀರ್ಷಿಕೆಯನ್ನು ಬದಲಾಯಿಸಲು ಒಳ್ಳೆಯ ಕಾರಣ ಇದೆಯೆ ಎಂಬುದನ್ನು ಸಂಪಾದಕರ ಒಮ್ಮತವು ನಿರ್ಧರಿಸುತ್ತದೆ. ಲೇಖನದ ಶೀರ್ಷಿಕೆಯು ಯಾವಾಗಲೂ ಸ್ಥಿರವಾಗಿರಲಿಲ್ಲ ಅಥವಾ ದೀರ್ಘಕಾಲದ ವರೆಗೂ ಅಸ್ಥಿರವಾಗಿದ್ದರೆ ಮತ್ತು ಅದರ ಶೀರ್ಷಿಕೆಯ ಬಗೆಗೆ ಒಮ್ಮತಕ್ಕೆ ಬರಲಾಗದಿದ್ದರೆ ಆ ಲೇಖನವು ಚುಟುಕುನಿಂದ ಮೇಲ್ದರ್ಜೆಗೆ ಏರಿದ ನಂತರ ಮೊದಲ ಪ್ರಮುಖ ಕೊಡುಗೆ ಕೊಟ್ಟವರು ಬಳಸಿದ ಶೀರ್ಷಿಕೆ ಉಳಿಸಿಕೊಳ್ಳಲಾಗುತ್ತದೆ.

ಯಾವುದೇ ವಿವಾದಕ್ಕೆ ಗುರಿಯಾಗುವ ಸಾಧ್ಯತೆ ಇರುವ ಶೀರ್ಷಿಕೆ ಬದಲಾಣೆಯ ಪ್ರಸ್ತಾಪವನ್ನು ಸ್ಥಳಾಂತರದ ಕೋರಿಕೆಯಲ್ಲಿ ಮಾಡಬೇಕು ಮತ್ತು ಯಾವುದೇ ಬದಲಾವಣೆಗೂ ಮುನ್ನ ಒಮ್ಮತ್ತಕ್ಕೆ ಬರಬೇಕು. ವಿವಾದಾಸ್ಪದ ಶೀರ್ಷಿಕೆಗಳ ಬಗೆಗಿನ ಚರ್ಚೆ ಸಾಮಾನ್ಯವಾಗಿ ಉಪಯುಕ್ತವಲ್ಲ ಮತ್ತು ವಿಕಿಪೀಡಿಯ ಸುಧಾರಿಸಲು ಅನೇಕ ಇತರ ಮಾರ್ಗಗಳಿವೆ. ವಿಕಿಪೀಡಿಯದ ಶೀರ್ಷಿಕೆ ಒಮ್ಮತ್ತವನ್ನು ಬೇಡುತ್ತಿದ್ದಾಗ್ಯೂ ಎರಡು ದೃಷ್ಟಿಕೋನಗಳ ನಡುವಿನ ರಾಜಿಯಾಗಿ ಹೊಸ ಹೆಸರನ್ನು ಕಂಡುಹಿಡಿಯ ಬೇಡಿ ಅಥವಾ ತೀರಾ ಸಾಮಾನ್ಯವಲ್ಲದ ಹೆಸರನ್ನು ಬಳಸಬೇಡಿ. ವಿಕಿಪೀಡಿಯ ಸದ್ಯದ ಬಳಕೆಯನ್ನು ವಿವರಿಸುತ್ತದೆ ಆದರೆ ನಿರ್ದಿಷ್ಟ ಹೆಸರನ್ನು ಶಿಫಾರಸು ಮಾಡುವುದಿಲ್ಲ ಅಥವಾ ಹೊಸ ಹೆಸರನ್ನು ಕಂಡುಹಿಡಿಯುವುದಿಲ್ಲ.


ಟೆಂಪ್ಲೇಟು:ವಿಕಿಪೀಡಿಯ ಕಾರ್ಯನೀತಿಗಳು ಮತ್ತು ಮಾರ್ಗದರ್ಶನ ಸೂತ್ರಗಳು