ಕಮೆಲಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಕಮೆಲಿಯ : ತಿಯೇಸೀ ಕುಟುಂಬಕ್ಕೆ ಸೇರಿದ ಹಲವಾರು ಪ್ರಭೇದಗಳನ್ನೊಳಗೊಂಡ ಅಲಂಕಾರ ಸಸ್ಯ ಜಾತಿ. ಇದರಲ್ಲಿ ಸು. 45 ಪ್ರಭೇದಗಳಿವೆ. ಎಲ್ಲವೂ ನಿತ್ಯ ಹರಿದ್ವರ್ಣದ ಪೊದೆಗಳು ಮತ್ತು ಮರಗಳು. ಏಷ್ಯದ ಉಷ್ಣ ವಲಯಗಳಲ್ಲಿ ಇವು ಹೇರಳ. ಮುಖ್ಯವಾದ ಪ್ರಭೇದಗಳು 4-ಕ.ಜಪಾನಿಕ, ಕ.ಕಾಡೇಟ, ಕ.ಡ್ರುಪಿಫೆರ ಮತ್ತು ಕ.ಸೈನೆನ್ಸಿಸ್. ಕ.ಜಪಾನಿಕ ಉದ್ಯಾನ ಪ್ರಾಮುಖ್ಯ ಪಡೆದಿರುವ ಪೊದೆ ಸಸ್ಯ. ಕೆಲವೊಮ್ಮೆ ಮರದಂತೆ ಬೆಳೆಯುವುದು ಉಂಟು. ಸಾಮಾನ್ಯವಾಗಿ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುವ ಇದನ್ನು ಅಲಂಕಾರಕ್ಕಾಗಿ ಉದ್ಯಾನಗಳಲ್ಲಿ ಬೆಳೆಸುತ್ತಾರೆ. ಇದರಲ್ಲಿ ನುಣುಪಾದ, ಹೊಳೆಯುವ ಎಲೆಗಳಿವೆ. ಪರ್ಯಾಯವಾಗಿ ಜೋಡಣೆಗೊಂಡಿರುವ ಇವು ಅಂಡಾಕಾರವಾಗಿವೆ. ಇವುಗಳ ಅಂಚು ಗರಗಸದ ಹಲ್ಲಿನಂತೆ. ಹೂಗಳು ಒಂಟಿ ಪುಷ್ಪಗಳು; ಎಲೆಗಳ ಕಂಕುಳಲ್ಲೋ ರೆಂಬೆಗಳ ತುದಿಯಲ್ಲೋ ಅರಳುತ್ತವೆ. ಅವುಗಳ ಬಣ್ಣ ಬಿಳಿ, ಕೆಂಪು, ಗುಲಾಬಿ, ಪಾಟಲ-ಹೀಗೆ ವಿವಿಧ ಬಗೆಯದು. ಪುಷ್ಪಪತ್ರಗಳು, ದಳಗಳು ಐದೈದು ಇದೆ. ಕೇಸರಗಳು ಅನೇಕ. ಅಂಡಾಶಯ ಮೂರು-ಐದು ಕೋಣೆಗಳುಳ್ಳದ್ದು. ಫಲ ಒಡೆಯುವ ಸಂಪುಟಮಾದರಿಯದು. ಕಮೇಲಿಯ ಜಪಾನಿಕದಲ್ಲಿ ಹಲವಾರು ತಳಿಗಳಿವೆ. ಇವುಗಳಲ್ಲಿ ಅಬಿ ವೈಲ್ಡ್‌ರ್, ಲೂಸಿಡ, ಡೌನಿಂಗ್, ಪ್ರೆಸಿಡೆಂಟ್ ಕ್ಲಾರ್ಕ್ ಮುಂತಾದುವು ಮುಖ್ಯವಾದುವು. ಇದನ್ನು ಸಾಮಾನ್ಯವಾಗಿ ಬೀಜತುಂಡು ಹಾಗೂ ಲೇಯರುಗಳ ಮುಖಾಂತರ ವೃದ್ಧಿ ಮಾಡುತ್ತಾರೆ. ಇನ್ನೆರಡು ಪ್ರಭೇದಗಳಾದ ಕ.ಡ್ರೂಪಿಫೆರ ಮತ್ತು ಕ.ಕಾಡೇಟಾಗಳನ್ನು ಕೆಲಮಟ್ಟಿಗೆ ಉದ್ಯಾನಗಳಲ್ಲಿ ಬೆಳೆಸುತ್ತಾರೆ. ಕ.ಸೈನೆನ್ಸಿಸ್ ಎಂಬುದೇ ಎಲ್ಲರಿಗೂ ಪರಿಚಿತವಿರುವ ಟೀ ಗಿಡ.

"https://kn.wikipedia.org/w/index.php?title=ಕಮೆಲಿಯ&oldid=658442" ಇಂದ ಪಡೆಯಲ್ಪಟ್ಟಿದೆ