ಕಪ್ಪುವಜ್ರ
| Carbonado | |
|---|---|
Three carbonados from the Central African Republic | |
| General | |
| ವರ್ಗ | Native minerals |
| ರಾಸಾಯನಿಕ ಸೂತ್ರ | C |
| Identification | |
| ಮೋಲಾರ್ ದ್ರವ್ಯರಾಶಿ | 12.01 Da |
| ಬಣ್ಣ | Typically black, can be grey, various shades of green and brown sometimes mottled. |
| ಸ್ಫಟಿಕ ಗುಣಲಕ್ಷಣ | Polycrystalline |
| ಸ್ಫಟಿಕ ಪದ್ಧತಿ | Isometric-hexoctahedral (cubic) |
| ಬಿರಿತ | Irregular torn surfaces |
| ಮೋಸ್ ಮಾಪಕ ಗಡಸುತನ | 10 |
| ಹೊಳಪು | Adamantine |
| ಪುಡಿಗೆರೆ | White |
| ವಿಶಿಷ್ಟ ಗುರುತ್ವ | 3.52±0.01 |
| ಸಾಂದ್ರತೆ | 3.5–3.53 g/cm3 |
| ಉಜ್ಜುವಿಕೆ ಹೊಳಪು | Adamantine |
| ದ್ಯುತಿ ಗುಣಗಳು | None |
| ದ್ವಿವಕ್ರೀಭವನ | None |
| ಬಹುವರ್ಣಕತೆ | None |
ಕಪ್ಪುವಜ್ರ ಮಚ್ಚೆಗಳು ಮತ್ತು ರೇಖೆಗಳಿಂದ ಕೂಡಿರುವ, ಈ ಕಾರಣದಿಂದ ಒಡವೆ ಆಭರಣಗಳಿಗೆ ಯೋಗ್ಯವಲ್ಲದ, ಆದರೆ ಕೈಗಾರಿಕೆಗಳಲ್ಲಿ ಉಪಯೋಗವಿರುವ, ವಜ್ರಪ್ರಭೇದ. ಕೈಗಾರಿಕಾವಜ್ರ, ಒರಟುವಜ್ರ, ಪರ್ಯಾಯಪದಗಳು. ಕಪ್ಪುವಜ್ರದಲ್ಲಿ ಎರಡು ಬಗೆಗಳಿವೆ: ಕಾರ್ಬನೆಡೊ, ಬೋರ್ಟ್, ಕಾರ್ಬನೆಡೊ ಬಹು ಗಟ್ಟಿಯಾದ ಗಡುಸಾದ ಬೂದು ಅಥವಾ ಕಂದು ಬಣ್ಣದ ಹರಳು ವಜ್ರ. ಬೋರ್ಟ್ ಅಂದರೆ ಸ್ವಚ್ಛವಾಗಿರದೆ ಮಸಕು ಬಣ್ಣದ ಹಾಗೂ ಮಚ್ಚೆ ರೇಖೆಗಳಿಂದ ಕೂಡಿದ ಸಣ್ಣ ಸಣ್ಣ ಹರಳು ಚೂರುಗಳ ಬೆಲೆಯಲ್ಲಿ ಕಾರ್ಬನೆಡೊಗಳಿಗಿಂತ ಕಡಿಮೆಯಾದುದರಿಂದ ಕೈಗಾರಿಕೆಗಳಲ್ಲಿ ಬೋರ್ಟನ್ನು ಹೆಚ್ಚಾಗಿ ಅಪೇಕ್ಷಿಸುತ್ತಾರೆ.
ಉಪಯೋಗಗಳು
[ಬದಲಾಯಿಸಿ]ಕಪ್ಪುವಜ್ರಗಳನ್ನು ಬಹು ಹಿಂದಿನಿಂದಲೂ ಗಾಜನ್ನು ಕತ್ತರಿಸುವುದಕ್ಕೆ ಉಪಯೋಗಿಸುವುದು ಬಳಕೆಯಲ್ಲಿದೆ. ಇದಕ್ಕೆ ಕಾರಣ ಬಳಕೆಯಲ್ಲಿರುವ ವಸ್ತುಗಳಲ್ಲೆಲ್ಲ ವಜ್ರಕ್ಕಿರುವ ಕಾಠಿಣ್ಯ ಮತ್ತೊಂದಕ್ಕಿಲ್ಲ. ಅತಿ ಕಠಿಣ ಎಂದೇ ಕಲ್ಲು ಕೊರೆಯುವ ಬೈರಿಗೆ ಮೂತಿಯಾಗಿ ಉಪಯೋಗಿಸುತ್ತಾರೆ. ಅಮೂಲ್ಯವಾದ ವಜ್ರದ ಹರಳುಗಳನ್ನು ಕತ್ತರಿಸುವುದಕ್ಕೂ ಸಾಣೆ ಹಿಡಿಯುವುದಕ್ಕೂ ಮೆರುಗು ಕೊಡುವುದಕ್ಕೂ ಕಪ್ಪುವಜ್ರವಾಗಲಿ ಅದರ ಪುಡಿಯಾಗಲಿ ಬೇಕೇ ಬೇಕು. ಆಧುನಿಕ ಯಂತ್ರ ಯುಗದಲ್ಲಿ ಕಪ್ಪುವಜ್ರದ ಉಪಯುಕ್ತತೆ ಬಹುಮುಖವಾಗಿದೆ. ತಂತಿಗಳನ್ನು ಎಳೆಯಲು ಉಪಯೋಗಿಸುವ ಅಚ್ಚುಗಳಲ್ಲಿಯೂ ಅದುರು ಮತ್ತು ಪೆಟ್ರೋಲ್ ಅನ್ವೇಷಣೆಯಲ್ಲಿ ಬೇಕಾಗುವ ಕೊರೆಯುವ ಉಪಕರಣಗಳಲ್ಲಿಯೂ ಸಾಣೆ ಹಿಡಿಯುವುದಕ್ಕೆ ಸಹಾಯಕವಾದ ಘರ್ಷಕ ಚಕ್ರಗಳನ್ನು ತಯಾರಿಸುವ ಸಲಕರಣೆಗಳಲ್ಲಿಯೂ ಕಾರ್ಬನೆಡೊ ಬಗೆಯ ಕಪ್ಪುವಜ್ರ ಅಗತ್ಯವಾಗಿ ಬೇಕೇ ಬೇಕು. ಬೋರ್ಟನ್ನು ಮೋಟಾರು ಕಾರುಗಳ ಮತ್ತು ವಿಮಾನಗಳ ಎಂಜಿನ್ನುಗಳ ಮತ್ತು ಗಡಿಯಾರಗಳ ತಯಾರಿಕೆಯಲ್ಲಿ ವಿಶೇಷವಾಗಿ ಬಳಸುತ್ತಾರೆ. ಬಂಡೆ, ಉಕ್ಕು ಇತ್ಯಾದಿಗಳನ್ನು ಕೊಯ್ಯುವ ಮತ್ತು ಕೊರೆಯುವ ಉಪಕರಣಗಳ ತಯಾರಿಕೆಯಲ್ಲಿ ವಜ್ರದ ಮೊನೆ ಬಹಳ ಆವಶ್ಯಕ. ಇಂಥ ಕೊರೆಯುವ ಒಂದೊಂದು ಉಪಕರಣದಲ್ಲೂ ಸುಮಾರು 7 ಕ್ಯಾರಟ್ ತೂಕವಿರುವ 150-180 ಸಣ್ಣ ಸಣ್ಣ ಬೋರ್ಟ್ ಬಗೆಯ ಕಪ್ಪುವಜ್ರಗಳಿರುತ್ತವೆ. ಅಲ್ಲದೆ ಕಪ್ಪುವಜ್ರವನ್ನು ಚೆನ್ನಾಗಿ ಅರೆದು ತಯಾರಿಸಿದ ವಜ್ರದ ಪುಡಿಯನ್ನು ಘರ್ಷಕ ವಸ್ತುವಾಗಿ ಅಮೂಲ್ಯ ರತ್ನಗಳನ್ನು ಹಾಗೂ ಇತರ ಗಡುಸಾದ ಖನಿಜಗಳನ್ನು ಸಾಣೆ ಹಿಡಿಯಲು ಉಪಯೋಗಿಸುತ್ತಾರೆ; ಪುಡಿಪುಡಿಯಾದ ವಜ್ರದ ಅತಿ ಸಣ್ಣಚೂರುಗಳು ಸಹ ಕರ್ತನಚಕ್ರಗಳನ್ನು (ಕಟಿಂಗ್ ವ್ಹೀಲ್ಸ್ ) ತಯಾರಿಸಲು ಬೇಕಾಗುತ್ತದೆ.
ಉಪಲಬ್ದತೆ
[ಬದಲಾಯಿಸಿ]ಪ್ರಕೃತಿಯಲ್ಲಿ ವಜ್ರ ಮುಖ್ಯವಾಗಿ ದೊರಕುವುದು ಕಿಂಬರ್‍ಲೈಟ್ ಎಂಬ ಅಗ್ನಿ ಶಿಲೆಗಳಲ್ಲಿ ಅಥವಾ ಸಿಲಿಕಾಂಶ ಕಡಿಮೆ ಪ್ರಮಾಣದಲ್ಲಿರುವ (ಅಲ್ಟ್ರಾ ಬೇಸಿಕ್ಸ್) ಅಗ್ನಿ ಶಿಲೆಗಳಲ್ಲಿ. ಕಪ್ಪುವಜ್ರದ ಉತ್ಪತ್ತಿಯಲ್ಲಿ ಪ್ರಮುಖ ಸ್ಥಾನವನ್ನು ಪಡೆದಿರುವ ದೇಶಗಳೆಂದರೆ ಆಫ್ರಿಕಖಂಡದ ಬೆಲ್ಜಿಯನ್ ಕಾಂಗೋ, ದಕ್ಷಿಣ ಆಫ್ರಿಕ, ಘಾನ, ಗೋಲ್ಡ್ ಕೋಸ್ಟ್, ಅಂಗಾಲಾ, ಸಿಯಾರಾ ಲಿಯೊನ್ ಮತ್ತು ರಷ್ಯದೇಶದ ಸೈಬೀರಿಯ. 1968ನೆ ಇಸವಿಯ ವಿಶ್ವದ ಅಂಕೆ-ಅಂಶಗಳ ಪ್ರಕಾರ ಕಪ್ಪುವಜ್ರದ ಉತ್ಪತ್ತಿ ಸುಮಾರು 2.58 ಕೋಟಿ ಕ್ಯಾರೆಟ್‍ಗಳು. ಅದರಲ್ಲಿ 44%ರಷ್ಟು ಬೆಲ್ಜಿಯನ್ ಕಾಂಗೋದಿಂದಲೂ 22%ರಷ್ಟು ಸೈಬೀರಿಯದಿಂದಲೂ 16%ರಷ್ಟು ದಕ್ಷಿಣ ಆಫ್ರಿಕದಿಂದಲೂ 9%ರಷ್ಟು ಘಾನದಿಂದಲೂ ಉತ್ವತ್ತಿಯಾಗಿವೆ. ವಿಶ್ವದ ಕಪ್ಪುವಜ್ರದ ನಿಕ್ಷೇಪ ಸುಮಾರು 60 ಕೋಟಿ ಕ್ಯಾರೆಟ್‍ಗಳೆಂದೂ ಅದರಲ್ಲಿ 50 ಕೋಟಿ ಕ್ಯಾರೆಟ್ ಕಾಂಗೋ ದೇಶವೊಂದರಲ್ಲಿಯೇ ಇದೆಯೆಂದು ಅಂದಾಜು ಮಾಡಲಾಗಿದೆ. ಭಾರತದಲ್ಲಿ ವಿಶ್ವದ ಅಂಕೆ-ಅಂಶಗಳಿಗೆ ಅಳವಡಿಸಿಕೊಳ್ಳುವಷ್ಟು ವಜ್ರದ ಉತ್ವತ್ತಿಯಿಲ್ಲದಿದ್ದರೂ ಅಮೂಲ್ಯ ವಜ್ರಗಳ ಜೊತೆಯಲ್ಲಿ ಕಪ್ಪುವಜ್ರವೂ ದೊರೆಯುವ ಸ್ಥಳಗಳಿವೆ. ಮಧ್ಯಪ್ರದೇಶದ ಪನ್ನಾ ಎಂಬ ಸ್ಥಳದಲ್ಲೂ ಆಂಧ್ರಪ್ರದೇಶದ ವಜ್ರಕರೂರು ಎಂಬ ಸ್ಥಳದಲ್ಲೂ ವಜ್ರದ ಗಣಿಗಳಿವೆ. ಸ್ವಾಭಾವಿಕವಾಗಿ ದೊರೆಯುತ್ತಿರುವ ಕಪ್ಪುವಜ್ರದ ಪ್ರಮಾಣ, ದಿನೇ ದಿನೇ ವೃದ್ಧಿಯಾಗುತ್ತಿರುವ ಕೈಗಾರಿಕೆಗಳ ಆವಶ್ಯಕತೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಇದರಿಂದ 1955 ರಿಂದೀಚೆಗೆ ಕಪ್ಪುವಜ್ರಗಳನ್ನು ಕೃತಕವಾಗಿ ತಯಾರಿಸಿ ಬೇಕಾದ ಕೈಗಾರಿಕೆಗಳಿಗೆ ಒದಗಿಸಲಾಗುತ್ತಿದೆ.
ಉಲ್ಲೇಖಗಳು
[ಬದಲಾಯಿಸಿ]
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |