ಕಡಲ ಹಂದಿ

ವಿಕಿಪೀಡಿಯ ಇಂದ
Jump to navigation Jump to search
ಕಡಲ ಹಂದಿ
ಕಡಲ ಹಂದಿ

ಕಡಲ ಹಂದಿ[ಬದಲಾಯಿಸಿ]

ಸಿಟೇಸಿಯ ಗಣದ ಫೋಸೀನ ಜಾತಿಯ ಜಲವಾಸಿ ಸ್ತನಿ (ಸೀ ಹಾಗ್). ಇಂಗ್ಲಿಷಿನಲ್ಲಿ ಪಾರ್ಪಾಯಿಸ್ ಎನ್ನುತ್ತಾರೆ. ತಿಮಿಂಗಿಲ ಮತ್ತು ಡಾಲ್ಫಿನ್ನುಗಳ ಹತ್ತಿರ ಸಂಬಂಧಿ. ದೇಹದ ಆಕಾರ ಡಾಲ್ಫಿನಿನಂತೆಯೇ. ಆದರೆ ಅದರಂತೆ ಮೂತಿ ಚೂಪಾಗಿಲ್ಲ. ದೇಹದ ಉದ್ದ ಸು. 1.2-1.8 ಮೀ. ಬಣ್ಣ ಸಾಮಾನ್ಯವಾಗಿ ಕಪ್ಪು. ಹೊಟ್ಟೆಯ ಭಾಗ ಬಿಳಿ. ತಲೆ ಗುಂಡಗಿದೆ. ಬಾಯಿ ಅಗಲ. ಒಂದೊಂದು ದವಡೆಯಲ್ಲಿ 32-56 ಹಲ್ಲುಗಳಿವೆ. ಕುತ್ತಿಗೆಯ ಕಸೇರುಗಳು ಒಂದರೊಡನೊಂದು ಕೂಡಿಕೊಂಡಿವೆ. ಮುಂಗಾಲುಗಳು ಜಾಲಪಾದಗಳಾಗಿ ಮಾರ್ಪಟ್ಟು ಈಜಲು ನೆರವಾಗಿವೆ. ಬೆನ್ನಿನ ಮೇಲೆ ತ್ರಿಕೋಣಾಕಾರದ ಬೆನ್ನಿನ ಈಜುರೆಕ್ಕೆಯೊಂದಿದೆ. ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಸಾಗರಗಳ ತೀರಪ್ರದೇಶದಲ್ಲಿ ಕಾಣಬರುವ ಇದು ಸಾಮಾನ್ಯವಾಗಿ ದೊಡ್ಡ ದೊಡ್ಡ ಗುಂಪುಗಳಲ್ಲಿ ವಾಸಿಸುತ್ತದೆ. ಒಂದೊಂದು ಗುಂಪಿನಲ್ಲೂ 20-100 ಪ್ರಾಣಿಗಳಿರುತ್ತವೆ ಸಾಧಾರಣವಾಗಿ ಸಮುದ್ರದಲ್ಲೇ ವಾಸಿಸಿದರೂ ಕೆಲವೊಮ್ಮೆ ದೊಡ್ಡ ನದಿಗಳಿಗೆ ವಲಸೆ ಬರುವುದೂ ಉಂಟು. ಹೆರ್ರಿಂಗ್ ಮೀನು. ಬಂಗಡೆ, ಸ್ಕ್ವಿಡ್ ಮುಂತಾದುವು ಇದರ ಆಹಾರ. ಋತುಕಾಲ ಬೇಸಗೆ. ಹೆಣ್ಣು ಒಂದು ಸಲಕ್ಕೆ ಒಂದೇ ಮರಿಯನ್ನು ಈಯುತ್ತದೆ. ಗರ್ಭಧಾರಣೆ ಕಾಲ ಸು. 1 ವರ್ಷ. ತಾಯಿ ಒಂದು ಕಡೆ ವಾಲಿಕೊಂಡು ಈಜುತ್ತ ಮರಿಗೆ ಹಾಲುಣಿಸುವುದು ಇದರ ಸೋಜಿಗ. ಪ್ರಪಂಚದ ಹಲವೆಡೆ ಇದರ ಮಾಂಸವನ್ನು ತಿನ್ನುತ್ತಾರೆ. ಇಂಗ್ಲೆಂಡಿನ ರಾಜ ಎಂಟನೆಯ ಹೆನ್ರಿ ಕಾಲದಲ್ಲಿ ಇದರ ಮಾಂಸವನ್ನು ರಾಜಭೋಜನಕೂಟಗಳಲ್ಲಿ ಮಾತ್ರ ಉಪಯೋಗಿಸುತ್ತಿದ್ದರಂತೆ.[೧][೨]

ಇದೇ ಗಣಕ್ಕೆ ಸೇರಿದ ಫೋಸಿನಾಯ್ಡಿಸ್ ಮತ್ತು ನಿಯೋಫೋಸೀನ ಎಂಬ ಜಾತಿಯ ಪ್ರಾಣಿಗಳನ್ನೂ ಕಡಲ ಹಂದಿಗಳೆಂದೇ ಕರೆಯುವುದುಂಟು.

ಫೋಸಿನಾಯ್ಡಿಸ್[ಬದಲಾಯಿಸಿ]

ಉತ್ತರ ಪೆಸಿಫಿಕ್ ಸಾಗರದ ಅಲ್ಯೂಷಿಯನ್ ದ್ವೀಪಗಳಲ್ಲಿ ವಾಸಿಸುತ್ತದೆ.

ನಿಯೋಫೋಸೀನ[ಬದಲಾಯಿಸಿ]

ಭಾರತ, ಬೋರ್ನಿಯೊ ಮತ್ತು ಜಪಾನಿನ ತೀರ ಪ್ರದೇಶಗಳಲ್ಲಿ ಕಾಣಬರುತ್ತದೆ. ಇದರ ಬಣ್ಣ ಕಪ್ಪು. ಬೆನ್ನಿನ ಈಜುರೆಕ್ಕೆ ಇಲ್ಲ. ಸಾಮಾನ್ಯವಾಗಿ ಸಮುದ್ರತೀರಗಳಲ್ಲಿ ವಾಸಿಸಿದರೂ ಕೆಲವೊಮ್ಮೆ ಇರವಾಡಿ ಮುಂತಾದ ಪುರ್ವ ಏಷ್ಯದ ನದಿಗಳಲ್ಲಿ ನೂರಾರು ಮೈಲಿ ದೂರ ಒಳಕ್ಕೆ ಸಾಗಿ ಬರುವುದುಂಟು.[೩][೪]

  1. http://onlinelibrary.wiley.com/doi/10.1002/ar.20541/full
  2. http://www.huffingtonpost.com/2013/10/31/japan-dolphin-hunts_n_4179972.html
  3. http://www.huffingtonpost.com/2013/10/31/japan-dolphin-hunts_n_4179972.html
  4. http://articles.latimes.com/1988-04-17/opinion/op-1956_1_tuna-fishing
"https://kn.wikipedia.org/w/index.php?title=ಕಡಲ_ಹಂದಿ&oldid=908364" ಇಂದ ಪಡೆಯಲ್ಪಟ್ಟಿದೆ