ಕಂಧಾರಿ (ಗೋವಿನ ತಳಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಂಧಾರಿ
ತಳಿಯ ಹೆಸರುಕಂಧಾರಿ
ಮೂಲಹೈದರಾಬಾದ್ ಕರ್ನಾಟಕ
ವಿಭಾಗಉಭಯೋಪಯೋಗಿ ತಳಿ, ಮಧ್ಯಮ ಗಾತ್ರ, ದೊಡ್ಡ ಡುಬ್ಬ
ಬಣ್ಣಸಾಮಾನ್ಯವಾಗಿ ಕೆಂಪು, ಸ್ವಲ್ಪ ಭಾಗ ಕಪ್ಪು ಇರುವುದೂ ಇದೆ
ಮುಖಉಬ್ಬಿದ ಅಗಲ ಹಣೆ
ಕೊಂಬುಅಷ್ಟೇನೂ ಉದ್ದವಾಗಿಲ್ಲ, ಆದರೆ ದಪ್ಪ
ಕಾಲುಗಳುಶಕ್ತಿಯುತ
ಕಿವಿಕೆಳಬಾಗಿದ ಕಿವಿ

ಉತ್ತರ ಕರ್ನಾಟಕದ ಸಾವಿರದ ಆರುನೂರು ವರ್ಷಗಳಷ್ಟು ಹಳೆಯದು ಈ ತಳಿ. ಭಾರತೀಯ ಗೋ ತಳಿಗಳಲ್ಲಿ ಶೇಕಡ ತೊಂಬತ್ತು ಭಾಗದ ತಳಿಗಳ ಹೆಸರು ಬಂದಿದ್ದು ತಳಿಗಳು ಅಭಿವೃದ್ಧಿಗೊಂಡ ಪ್ರದೇಶದ ಹೆಸರಿನಿಂದಲೇ. ಅದಿಲ್ಲವಾದರೆ ಅಮೃತಮಹಲ್‌ನಂತೆ ತಳಿಯ ಹಿರಿಮೆಯನ್ನು ಕಂಡು ಅದನ್ನು ಪೋಷಿಸಿದ, ಅಭಿವೃದ್ದಿ ಪಡಿಸಿದವರು ವಿಶೇಷ ನಾಮಕರಣ ಮಾಡಿದ ಉದಾಹರಣೆಗಳು ಕೆಲವಿವೆ. ಆದರೆ ವ್ಯಕ್ತಿಯೊಬ್ಬನ ಹೆಸರೇ ತಳಿಯ ಹೆಸರು ಅಂತ ಆಗಿರುವುದು ಕಂಧಾರಿಯ ವಿಷಯದಲ್ಲಿ ಮಾತ್ರ. ಅದು ರಾಜಾ ಕನ್ಹಾರ್ ನ ಹೆಸರು. ಮರಾಠಾವಾಡೆಯ ಉಳುಮೆಯ ಮೂಲಬಲ ಕಂಧಾರಿ ತನ್ನ ವಿಶಿಷ್ಟ ಕೆಂಬಣ್ಣದಿಂದ ಲಾಲ್ (ಕೆಂಪು) ಕಂಧಾರಿ ಎಂದೇ ಜನಜನಿತ. ಈ ತಳಿಯ ಉಗಮವಾಗಿದ್ದು ಅಥವಾ ಹೆಚ್ಚಿನ ಪ್ರಚಾರ ದೊರೆಕಿದ್ದು ಸಾವಿರದ ಆರುನೂರು ವರ್ಷಗಳ ಹಿಂದಿದ್ದ ನಾಂದೇಡ್ ಪ್ರಾಂತ್ಯದ ಪ್ರಸಿದ್ಧ ದೊರೆ ರಾಜ ಸೋಮದೇವರಾಯನ ಆಸ್ಥೆ ಅಕ್ಕರೆಗಳಿಂದ. ಬರಪ್ರದೇಶದ ರೈತರಿಗೆ ಸಹಾಯವಾಗಿದ್ದ ಈ ತಳಿಯ ಕೆಲಸಗಾರಿಕೆಯ ಮಜಕೂರನ್ನು ಕಂಡ ರಾಜ ಸೋಮದೇವರಾಯ, ತನ್ನ ತಂದೆ ರಾಜ ಕನ್ಹಾರ್ ನ ಹೆಸರಲ್ಲಿ ಈ ತಳಿಯನ್ನು ಪ್ರಚುರಗೊಳಿಸಿದ. ನಂತರ ಇದು ಲಾತೂರು, ಪೋರ್ಬನಿ, ಲೋಹಾ ಪ್ರದೇಶಗಳಲ್ಲಿ ವಿಸ್ತೃತವಾಗಿ ಹರಡಿತು.

ಉಭಯೋಪಯೋಗಿ ಕಂಧಾರಿ ಮಧ್ಯಮ ಗಾತ್ರದ ಅತ್ಯಂತ ಚುರುಕಿನ ಸದೃಡ ತಳಿ. ಸಾಮಾನ್ಯವಾಗಿ ತಳಿಯ ಬಣ್ಣಕೆಂಪಾದರೂ, ಹೋರಿಗಳದ್ದು ಹೆಚ್ಚು ಗಾಡವಾದ ಕೆಂಪು. ಉದ್ದ ಕೆಳಬಗ್ಗಿದ ಕಿವಿಗಳು, ಉಬ್ಬಿದ, ಅಗಲ ಹಣೆ, ಕಪ್ಪು ವೃತ್ತದ ಮಧ್ಯದ ಹೊಳೆಯುವ ಕಡುಗಪ್ಪಿನ ಕಣ್ಣುಗಳು, ಅಷ್ಟೇನೂ ಉದ್ದವಾಗಿಲ್ಲದ ಆದರೆ ದಪ್ಪನೆಯ ಕೊಂಬುಗಳು, ದೊಡ್ಡ ಡುಬ್ಬ (ಹೋರಿಗಳಲ್ಲಿ ಗಣನೀಯವಾಗಿ ಎತ್ತರವಾಗಿರುತ್ತದೆ) ಇವು ಕಂಧಾರಿಯ ದೈಹಿಕ ಲಕ್ಷಣಗಳು.

ಸಾವಿರದ ಆರುನೂರು ವರ್ಷಗಳಷ್ಟು ಹಳೆಯದಾದ ಈ ತಳಿ ಜನರ ಉಪೇಕ್ಷೆಯಿಂದ ಮತ್ತು ಕೃತಕ ಗರ್ಭಧಾರಣೆಯ ಸಂಕರದ ಕಾರಣದಿಂದ ಧಾರ್ಡ್ಯತೆ ಕುಸಿಯುತ್ತಿದೆಯೆಂಬ ಅರಿವಿಗೆ ಬರುವಷ್ಟರಲ್ಲಿ ಶುದ್ಧ ತಳಿಗಳ ಸಂಖ್ಯೆ ಬಹಳ ಕಡಿಮೆಯಾಗಿತ್ತು. ೧೯೬೭ರಲ್ಲಿ ಎಚ್ಚರಗೊಂಡ ಸರ್ಕಾರದ ಹೈನುಗಾರಿಕಾ ಮಂತ್ರಾಲಯ, ೮ ಆಯ್ದ ಕಂಧಾರಿ ಹೋರಿಗಳನ್ನು ಹಿಂಗೋಲಿಯ ಸಾಕಣಿಕಾ ಕೇಂದ್ರದಲ್ಲಿ ಸಂರಕ್ಷಿಸಿತು. ಪರ್ಭಾನಿ ಜಿಲ್ಲೆಯ ೬ ಹಳ್ಳಿಗಳಲ್ಲಿ ಕೇಂದ್ರಗಳನ್ನು ತೆರೆದು ತಳಿಯ ಸಂರಕ್ಷಣೆಯ ಕುರಿತಾಗಿ ಕೂಡ ಪ್ರಯತ್ನ ನಡೆಯಿತು. ಈ ಪ್ರಯತ್ನಗಳು ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ರೈತರಲ್ಲಿ ಜಾಗ್ರತಿಯೊಂದನ್ನು ಮೂಡಿಸಿ ರೈತರೇ ಆಸ್ಥೆಯಿಂದ ಅದನ್ನು ರಕ್ಷಿಸುವಲ್ಲಿ ಬೇಕಾದ ಮನೋಭೂಮಿಕೆಯನ್ನು ರೂಪಿಸಿತು. ಸಂಪೂರ‍್ಣ ವಿನಾಶದ ಅಪಾಯ ತಪ್ಪಿತು. ಹಾಗೆ ಉಳಿದ ಶುದ್ಧ ತಳಿಗೆ ಈಗ ಬಾರೀ ಬೇಡಿಕೆ. ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಇವುಗಳ ಸಂಖ್ಯೆ ಒಂದೂವರೆಯಿಂದ ಎರಡು ಲಕ್ಷದಷ್ಟಿದೆ.

ಉಲ್ಲೇಖ[ಬದಲಾಯಿಸಿ]

'ಗೋವಿಶ್ವಲೋಕ' ಜಾಲತಾಣದ 'ಗೋವಿಶ್ವ' ಇ-ಪತ್ರಿಕೆ Archived 2018-11-24 ವೇಬ್ಯಾಕ್ ಮೆಷಿನ್ ನಲ್ಲಿ.