ಓಫ್ರಿಸ್

ವಿಕಿಪೀಡಿಯ ಇಂದ
Jump to navigation Jump to search

ಓಫ್ರಿಸ್: ಆರ್ಕಿಡೇಸಿ ಕುಟುಂಬಕ್ಕೆ ಸೇರಿದ ಒಂದು ಸಸ್ಯಜಾತಿ. ಇದರಲ್ಲಿ ಸು. ೩೦ ಪ್ರಭೇದಗಳಿವೆ. ಇವು ಪಶ್ಚಿಮ ಏಷ್ಯ, ಉತ್ತರ ಆಫ್ರಿಕ ಪ್ರದೇಶಗಳ ವಾಸಿಗಳು. ಭೂಮಿಯ ಮೇಲೆ ಮೂಲಿಕೆಗಳ ರೂಪದಲ್ಲಿ ಬೆಳೆಯುತ್ತವೆ. ಇವುಗಳಲ್ಲಿ ಎಲೆಗಳು ಗಿಡದ ಬುಡದಲ್ಲಿ ನೆಲದ ಮೇಲೆ ಹರಡಿಕೊಂಡಂತೆ ವರ್ತುಲಾಕಾರದಲ್ಲಿ ಜೋಡಣೆಗೊಂಡಿರುತ್ತವೆ. ಮಧ್ಯದಿಂದ ಉದ್ದವಾದ ಕಾವುಳ್ಳ (ದಿಂಡು) ಹೂಗೊಂಚಲು ಹೊರಟಿರುತ್ತದೆ. ಎಲ್ಲ ಆರ್ಕಿಡ್ ಸಸ್ಯಗಳ ಪುಷ್ಪಗಳ ಗುಣಗಳೂ ಈ ಜಾತಿಯ ಗಿಡದ ಪುಷ್ಪದಲ್ಲೂ ಕಂಡುಬರುತ್ತವೆ. ಈ ಜಾತಿಯ ಗಿಡಗಳಲ್ಲಿ ಸ್ವಪರಾಗಸ್ಪರ್ಶಕ್ರಿಯೆಯನ್ನು ಕಾಣಬಹುದು. ಕೀಟಗಳ ಮುಖಾಂತರ ಪರಾಗ ಪ್ರಸಾರವಾಗದಿದ್ದರೆ ಕೇಸರದಿಂದ ಪರಾಗ ಅದೇ ಹೂವಿನ ಅಂಡಕೋಶದ ಮೇಲ್ಭಾಗಕ್ಕೆ ನೇರವಾಗಿ ಬಿದ್ದು ಶಲಾಕಾಗ್ರಕ್ಕೆ ತಗಲಿಕೊಳ್ಳುತ್ತದೆ. ಹೀಗೆ ಗಟ್ಟಿಯಾಗಿ ತಗಲಿಕೊಳ್ಳುವುದರಿಂದ ಜೋರಾಗಿ ಗಾಳಿ ಬೀಸಿದರೂ ಬಿದ್ದುಹೋಗುವುದಿಲ್ಲ. ಇದರ ಕೆಲವು ಪ್ರಭೇದಗಳಾದ ಓ.ಏಪಿಫೆರ, ಓ.ಅರಾನಿಫೆರ ಮತ್ತು ಓ.ಮಸ್ಸಿಫೆರಗಳ ಹೂಗಳು ಜೇನ್ನೊಣ, ಜೇಡ, ಮುಂತಾದ ಕೀಟಗಳನ್ನು ಹೋಲುವುದರಿಂದ ಅವನ್ನು ಕ್ರಮವಾಗಿ ಬೀ ಆರ್ಕಿಡ್, ಸ್ಪೈಡರ್ ಆರ್ಕಿಡ್ ಹಾಗೂ ಫ್ಲೈ ಆರ್ಕಿಡ್ ಎಂದೂ ಕರೆಯುವ ವಾಡಿಕೆಯಿದೆ. ಇವುಗಳನ್ನು ತೋಟಗಳಲ್ಲಿ ಅಲಂಕಾರ ಸಸ್ಯಗಳನ್ನಾಗಿ ಬೆಳೆಸುತ್ತಾರೆ.

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಓಫ್ರಿಸ್&oldid=632710" ಇಂದ ಪಡೆಯಲ್ಪಟ್ಟಿದೆ