ಒಳಪಟ್ಟು ಕಟ್ಟಡ

ವಿಕಿಪೀಡಿಯ ಇಂದ
Jump to navigation Jump to search
Hardcastle Street, Belfast - geograph.org.uk - 597097.jpg

ಒಳಪಟ್ಟು ಕಟ್ಟಡ : ಕಟ್ಟಡದ ಉದ್ದದಲ್ಲೂ ಅಡ್ಡದಲ್ಲೂ ನಿರ್ದಿಷ್ಟ ಅಂತರಗಳಲ್ಲಿ ಕಂಬಗಳನ್ನು ನಿಲ್ಲಿಸಿ ಅವನ್ನು ತೊಲೆಗಳಿಂದ ಸೇರಿಸಿ ಮಾಡುವ ರಚನೆ (ಫ್ರೇಮ್ಡ್‌ ಸ್ಟ್ರಕ್ಚರ್). ಕಂಬಗಳನ್ನು ಮತ್ತು ತೊಲೆಗಳನ್ನು ಒಂದು ಅಂತಸ್ತಿನಿಂದ ಮತ್ತೊಂದು ಅಂತಸ್ತಿಗೆ ಏರಿಸಿ ಅನೇಕ ಅಂತಸ್ತುಗಳಿರುವ ಕಟ್ಟಡಗಳನ್ನು ಕಟ್ಟಬಹುದು. ಇಂಥ ಅಂತಸ್ತುಗಳು ೬-೧೨೦ರ ವರೆಗೂ ಇರುವುದುಂಟು. ಅಳತೆಯ ದೃಷ್ಟಿಯಿಂದ ಆರು ಅಂತಸ್ತುಗಳಿಗಿಂತ ಕಡಿಮೆ ಇರುವ ಕಟ್ಟಡಗಳು ಲಾಭದಾಯಕವಲ್ಲ.[೧]

ಕಂಬಗಳನ್ನು ಪ್ರಬಲಿತ ಕಾಂಕ್ರೀಟಿನಿಂದ ಕಟ್ಟುತ್ತಾರೆ. ತೊಲೆಗಳನ್ನು ಈ ಕಂಬಗಳ ಮೇಲೆ ಅಳವಡಿಸಿದಾಗ ಕಟ್ಟಡದ ಹಂದರದ ನಿರ್ಮಾಣ ಪುರ್ಣವಾಗುತ್ತದೆ. ಅಂತಸ್ತುಗಳ ಮತ್ತು ಗೋಡೆಗಳ ಭಾರವನ್ನು ತೊಲೆಗಳು ಈ ಕಂಬಗಳಿಗೆ ಸಾಗಿಸಿ ಅವುಗಳ ಮೂಲಕ ಭೂಮಿಗೆ ವರ್ಗಾಯಿಸುತ್ತವೆ. ಇಂಥ ಕಟ್ಟಡದ ಒಂದು ವೈಶಿಷ್ಟ್ಯ ಕಂಬ ಹಾಗೂ ತೊಲೆಗಳಲ್ಲಿಯೇ ಇದರ ಪುರ್ಣ ಭಾರ ವಿತರಣೆಗೊಂಡಿರುವುದು. ಈ ಕಾರಣದಿಂದ ಗೋಡೆಗಳ ದಪ್ಪ ಸಾಂಪ್ರದಾಯಿಕ ಕಟ್ಟಡಗಳ ಗೋಡೆಗಳಿಗಿಂತ (ಇಲ್ಲಿ ಇವೇ ಭಾರವನ್ನು ಹೊರಬೇಕಾದುವು) ಕಡಿಮೆ ಇರುತ್ತದೆ. ಹೀಗಾಗಿ ಕಟ್ಟಡದ ಒಳಗಿನ ಜಾಗ ಹೆಚ್ಚು ದೊರೆತು ಲಾಭವಾಗುವುದು. ಅಲ್ಲದೆ ಬೇಕೆಂದಾಗ ಯಾವ ಗೋಡೆಯನ್ನಾಗಲಿ ತೆಗೆದುಬಿಟ್ಟರೂ ಕಟ್ಟಡಕ್ಕೆ ಯಾವ ತೊಂದರೆಯೂ ಆಗದು.

ಒಳಪಟ್ಟು ಕಟ್ಟಡದ ಭಾರ ಎಲ್ಲ ಕಂಬಗಳ ಮೂಲಕ ಭೂಮಿಗೆ ಸರಿಸಮಾನವಾಗಿ ಹಂಚಿ ಹೋಗುವುದರಿಂದ ಈ ಕಟ್ಟಡಕ್ಕೆ ವಿಶೇಷ ಭದ್ರತೆ ಒದಗುತ್ತದೆ. ಬಿರುಗಾಳಿ ಮುಂತಾದ ಬಾಹ್ಯ ಬಲಗಳ ಪ್ರಹಾರ, ಭೂಕಂಪನ ಮುಂತಾದವುಗಳಿಂದ ಉಂಟಾಗುವ ನೆಲದ ಅದಿರುವಿಕೆ-ಇವುಗಳಿಂದ ಕಟ್ಟಡಕ್ಕೆ ಸಂಭವಿಸುವ ಅಪಾಯ ಅತ್ಯಲ್ಪ. ಆದ್ದರಿಂದ ಭೂಕಂಪನದ ಸಾಧ್ಯತೆಯಿರುವ ಸ್ಥಳಗಳಲ್ಲಿ, ನಿವೇಶನದ ಬೆಲೆ ಹೆಚ್ಚು ಇರುವ ಮಹಾನಗರಗಳಲ್ಲಿ, ಒಳಪಟ್ಟು ಕಟ್ಟಡಗಳ ನಿರ್ಮಾಣ ಪ್ರಯೋಜನಕಾರಿ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ, ಅದರಲ್ಲೂ ಅಮೆರಿಕದಲ್ಲಿ ಬಹಳ ಹಿಂದಿನಿಂದಲೂ ಇಂಥ ಕಟ್ಟಡಗಳನ್ನು ಕಟ್ಟುತ್ತ ಬಂದಿದ್ದಾರೆ. ಈಚೆಗೆ ಬೆಂಗಳೂರು, ಚೆನ್ನೈ, ಮುಂಬಯಿ, ಕೋಲ್ಕತ್ತ, ಚಂಡೀಘರ್, ದೆಹಲಿ ಮುಂತಾದ ಮಹಾನಗರಗಳಲ್ಲಿ ಇವುಗಳ ಬಳಕೆ ಸಾಧಾರಣವಾಗುತ್ತಿದೆ, ಬೆಂಗಳೂರಿನಲ್ಲಿ ಕೆಂಪೇಗೌಡ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಕಟ್ಟಡ, ಬೆಂಗಳೂರಿನ ಮಹಾತ್ಮಗಾಂಧಿ ರಸ್ತೆಯಲ್ಲಿರುವ ೧೦೬ಮೀ ಎತ್ತರದ ೨೪ ಅಂತಸ್ತಿನ ಯುಟಿಲಿಟಿ ಬಿಲ್ಡಿಂಗ್ ಈ ಮಾದರಿಯ ಕಟ್ಟಡಕ್ಕೆ ಒಳ್ಳೆಯ ನಿದರ್ಶನ ನೋಡಿ: ಗಗನಚುಂಬಿ ಕಟ್ಟಡಗಳು. (ಜೆ.ಟಿ.ಜಿ.; ಎಂ.ಜಿ.ಎಸ್.) [೨]

ಬೆಂಗಳೂರಿನ ಮಹಾತ್ಮಗಾಂಧಿ ರಸ್ತೆಯಲ್ಲಿರುವ 106ಮೀ ಎತ್ತರದ 24 ಅಂತಸ್ತಿನ ಯುಟಿಲಿಟಿ ಬಿಲ್ಡಿಂಗ್

ಉಲ್ಲೇಖಗಳು[ಬದಲಾಯಿಸಿ]

  1. http://www.understandconstruction.com/concrete-frame-structures.html
  2. https://www.britannica.com/technology/framed-building