ವಿಷಯಕ್ಕೆ ಹೋಗು

ಒಣಬೇಸಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಣಬೇಸಾಯ -ಅಲ್ಪವೃಷ್ಟಿ ಅನಿಶ್ಚಿತ ವೃಷ್ಟಿ ಪ್ರದೇಶಗಳಲ್ಲಿ ಬೆಳೆ ತೆಗೆಯುವ ಸಾಗುವಳಿ ಪದ್ಧತಿ (ಡ್ರೈ ಫಾರ್ಮಿಂಗ್). ಇದಕ್ಕೆ ಅಲ್ಪವೃಷ್ಟಿ ವ್ಯವಸಾಯ, ಖುಷ್ಕಿಬೇಸಾಯ ಎಂಬ ಹೆಸರುಗಳೂ ಇವೆ. ಪಂಜಾಬ್, ರಾಜಸ್ತಾನ, ಉತ್ತರಪ್ರದೇಶ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಮಳೆಕೊರತೆಯ ಪ್ರದೇಶಗಳಲ್ಲಿ ಈ ಪದ್ಧತಿ ರೂಢಿಯಲ್ಲಿದೆ. ಭಾರತದ ಒಟ್ಟು ಸಾಗುವಳಿ ಕ್ಷೇತ್ರದ ಸು. ಶೇ.22 ರಷ್ಟು ಭಾಗ ಒಣ ಬೇಸಾಯಕ್ಕೊಳಪಟ್ಟಿದೆ. ಈ ಪ್ರದೇಶಗಳಲ್ಲಿ ಮಳೆ 15-35 ಸೆಂ.ಮೀ.ವರೆಗೆ ಬೀಳುವುದು. ದೇಶದ ವಾಯವ್ಯ ಭಾಗದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾಗಿ ಬೇಸಿಗೆ ಕಾಲದಲ್ಲಿ ಆಗುವುದು. ಕರ್ನಾಟಕ ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳ ಕೆಲ ಭಾಗಗಳಲ್ಲಿ ಹಿಂಗಾರು ಮಳೆ ಚಳಿಗಾಲದಲ್ಲಿ ಬೀಳುವುದು. ಇಲ್ಲೆಲ್ಲ ಅಲ್ಪ ಪ್ರಮಾಣದಲ್ಲಿ ಮಳೆಯಾಗುವುದಲ್ಲದೆ ಮಳೆಗಾಲದಲ್ಲಿಯೂ ಮಳೆ ಬೀಳದ ದಿನಗಳು ಹೆಚ್ಚು. ಹೀಗಾಗಿ ಮೇಲಿಂದ ಮೇಲೆ ತೀವ್ರ ಅನಾವೃಷ್ಟಿ. ದಕ್ಷಿಣದ ತಪ್ಪಲಿನ ಎರೆ ಭೂಮಿಗಳಲ್ಲಿ ನೀರು ಅಲ್ಪ ಪ್ರಮಾಣದಲ್ಲಿ ಇಂಗುವುದರಿಂದ ಬೆಳೆಗಳಿಗೆ ಮಳೆ ನೀರು ಸಾಕಾಗುವುದಿಲ್ಲ.


ಅಲ್ಪವೃಷ್ಟಿ ಪ್ರದೇಶಗಳಲ್ಲಿ ಮುಖ್ಯವಾಗಿ ಸಜ್ಜೆ, ನವಣೆ, ರಾಗಿ, ಜೋಳ, ಸಾಸಿವೆ ಮುಂತಾದುವುಗಳನ್ನು ಬೆಳೆಯುತ್ತಾರೆ. ಉತ್ತರ ಭಾರತದಲ್ಲಿ ಸಂಗ್ರಹಿಸಿಟ್ಟ ನೀರಿರುವ ಪ್ರದೇಶಗಳಲ್ಲಿ ಚಳಿಗಾಲದ ಉಪಬೆಳೆಗಾಗಿ ಕಡಲೆ, ಬಾರ್ಲಿ, ಸಾಸಿವೆ, ಎಣ್ಣೆಕಾಳು ಮತ್ತು ಗೋಧಿಗಳನ್ನು ಬೆಳೆಸುತ್ತಾರೆ. ಗೋರಿಕಾಯಿ, ಉದ್ದು, ಹೆಸರು ಮುಂತಾದ ದ್ವಿದಳಧಾನ್ಯಗಳನ್ನು ಸಜ್ಜೆಯ ಜೊತೆ ಮಿಶ್ರ ಬೆಳೆಯಾಗಿ ಬೆಳೆಸುವುದು ಸಾಮಾನ್ಯ. ಗುಜರಾತ್, ಮಹಾರಾಷ್ಟ್ರ ಮತ್ತು ದಖನ್ನಿನ ತಪ್ಪಲಿನ ಕೆಲಭಾಗಗಳಲ್ಲಿ ಸಜ್ಜೆ, ದ್ವಿದಳ ಧಾನ್ಯಗಳು ಮತ್ತು ಎಳ್ಳನ್ನು ಬೆಳೆಸುವ ಕ್ರಮವಿದೆ. ಕೆಲವು ಮಜ್ಜೆರೆ (ಹೆವಿ ಬ್ಲ್ಯಾಕ್ ಸಾಯಿಲ್) ಭೂಮಿಗಳಲ್ಲಿ ಅಗಸೆ, ಗೋಧಿ ಬೆಳೆಗಳನ್ನು ಚಳಿಗಾಲದ ಬೆಳೆಗಳಾಗಿ ತೆಗೆಯುತ್ತಾರೆ. ದಖ್ಖನ್ನಿನ ತಪ್ಪಲಿನ ಮಧ್ಯೆ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಜೋಳ, ಶೇಂಗ (ಕಡಲೆಕಾಯಿ) ಮತ್ತು ಹತ್ತಿ ಪ್ರಮುಖ ಬೆಳೆಗಳಾಗಿವೆ. ದಕ್ಷಿಣ ಕರ್ನಾಟಕದ ಅಲ್ಪ ಪ್ರದೇಶಗಳಲ್ಲಿ ರಾಗಿ ಪ್ರಧಾನ ಬೆಳೆ. ಇಟಲಿಯ ಕಿರುಧಾನ್ಯದ (ಮಿಲೆಟ್) ಪೈರನ್ನು ಕರ್ನಾಟಕ ಮತ್ತು ತಮಿಳುನಾಡಿನ ಕೆಂಪು ಭೂಮಿಯಲ್ಲಿ ಬೆಳೆಸುತ್ತಾರೆ. ತೊಗರಿ, ಉದ್ದುಗಳನ್ನು ರಾಗಿಯಂಥ ದವಸಧಾನ್ಯಗಳ ಜೊತೆಗೆ ಮಿಶ್ರ ಬೆಳೆಯಾಗಿ ಬೆಳೆಸುವರು. ಕೆಲ ಒಣ ಪ್ರದೇಶಗಳಲ್ಲಿ ಒಣಗಡಲೆಯನ್ನು ಜೋಳ ಅಥವಾ ಸಜ್ಜೆಯೊಂದಿಗೆ ಮಿಶ್ರ ಬೆಳೆಯಾಗಿ ಬೆಳೆಸುವುದಿದೆ.


ಅಲ್ಪವೃಷ್ಟಿ ವ್ಯವಸಾಯದಲ್ಲಿ ನಾಲ್ಕು ಹಂತಗಳು[ಬದಲಾಯಿಸಿ]

1. ಭೂಮಿಯಲ್ಲಿ ನೀರನ್ನು ಹಿಂಗಿಸಲು ನೇಗಿಲು ಹೊಡೆಯುವುದು

2. ಮಳೆ ನೀರನ್ನು ಭೂಮಿಯಲ್ಲಿ ಹಿಂಗಿಸಿ ಸಂಗ್ರಹಿಸುವುದು

3. ನೆಲದ ಮೇಲೆ ಸಣ್ಣಹುಡಿಮಣ್ಣಿನ ಪದರು ರಚಿಸುವುದು

4. ಬಿತ್ತನೆಗೆ ಮೊದಲು ಮತ್ತು ಬಿತ್ತನೆಯ ನಂತರದ ಸಾಗುವಳಿ ಕ್ರಮಗಳು.

ಮೇಲಿನ ನಾಲ್ಕು ಹಂತಗಳು ಬೆಳೆಗಳಿಗೆ ಮಳೆನೀರನ್ನು ಹೆಚ್ಚು ಸಮರ್ಪಕವಾಗಿ ಉಪಯೋಗಿಸಿಕೊಳ್ಳುವುದಕ್ಕೆ ಮತ್ತು ಉತ್ಪಾದನೆ ಹೆಚ್ಚಿಸಲು ನೆರವಾಗುತ್ತವೆ. ಸೋಲಾಪುರ (ಮಹಾರಾಷ್ಟ್ರ), ರೋಹಟಕ (ಪಂಜಾಬ್), ಕರ್ನಾಟಕ ರಾಜ್ಯದ ಬಿಜಾಪುರ, ರಾಯಚೂರು, ಹಗರಿ ಈ ಸ್ಥಳಗಳಲ್ಲಿ ಸ್ಥಾಪಿತವಾದ ಭಾರತೀಯ ಕೃಷಿಸಂಶೋಧನ ಕೇಂದ್ರದ ಅಲ್ಪವೃಷ್ಟಿವ್ಯವಸಾಯ ಕೇಂದ್ರಗಳಲ್ಲಿ ಈ ನಾಲ್ಕು ಹಂತಗಳ ಮೇಲೆ ಸಂಶೋಧನೆಗಳನ್ನು ಕೈಗೊಳ್ಳಲಾಗಿದೆ.


ಕ್ಷೇತ್ರ ಸಾಗುವಳಿ ಕ್ರಮಗಳು[ಬದಲಾಯಿಸಿ]

ಅಲ್ಪವೃಷ್ಟಿ ವ್ಯವಸಾಯ ಪದ್ಧತಿಗಳು ಭೂಮಿಯ ಗುಣಾನುಸಾರ ಭಿನ್ನವಾಗಿವೆ. ದಖನ್ನಿನ ತಪ್ಪಲಿನ ಕಪ್ಪುಭೂಮಿಯಲ್ಲಿ ಅನುಸರಿಸಲಾದ ವಿವಿಧ ಕ್ರಮಗಳು ಹೀಗಿವೆ:

1. ಸಮಪಾತಳಿಯ, ಒಡ್ಡು ಹಾಕುವುದು ಮತ್ತು ಭೂಮಿಯನ್ನು ಸಣ್ಣ ಭಾಗಗಳನ್ನಾಗಿ ವಿಂಗಡಿಸುವುದು

2. ಭೂಮಿಯ 20 ಸೆಂ. ಮೀ. ನಷ್ಟು ಮೇಲ್ಮೈಯನ್ನು ತಿರುವಿಹಾಕುವುದು

3. ಮಳೆಗಾಲದ ತಿಂಗಳುಗಳಲ್ಲಿ ಹಿಂಗಾರು ಪೈರಿಗಾಗಿ ಮೀಸಲಿಟ್ಟ ಭೂಮಿಯನ್ನು ಹರಗುವುದು.

4. ದನದ ಗೊಬ್ಬರವನ್ನು ತೆಳುವಾಗಿ ಭೂಮಿಯ ಮೇಲೆ ಹರಡುವುದು

5. ಬೀಜದ ಪ್ರಮಾಣ ತಗ್ಗಿಸಲು ಎರಡು ಸಾಲುಗಳ ಮಧ್ಯೆ ಸ್ವಲ್ಪ ಅಗಲವಾಗಿ ಕೂರಿಗೆಯಿಂದ ಬಿತ್ತುವುದು

6. ಎಡೆ ಹೊಡೆಯುವುದು

7. ಸುಧಾರಿಸಿದ ಮತ್ತು ತಜ್ಞರು ಶಿಫಾರಸು ಮಾಡಿದ ತಳಿ ಬೀಜಗಳನ್ನು ಬಿತ್ತುವುದು

8. ಎರಡು ವರ್ಷಕೊಮ್ಮೆ ಭೂಮಿಯನ್ನು ಪಡ ಬೀಳಿಸುವುದು.

ಈ ಪದ್ಧತಿಯನ್ನು ಅಲ್ಪ ಸ್ವಲ್ಪ ಬದಲಾಯಿಸಿ ಕೆಂಪು ಭೂಮಿಗಳಲ್ಲೂ ಉಪಯೋಗಿಸ ಬಹುದು. ಈ ಸಾಗುವಳಿ ಪದ್ಧತಿಗಳಿಂದ ಮಳೆಯ ನೀರಿನ ಸಮರ್ಪಕ ಉಪಯೋಗ, ಭೂಮಿಯ ಸಾರದ ರಕ್ಷಣೆ ಮತ್ತು ಲಾಭದಾಯಕ ಉತ್ಪನ್ನ ಮುಂತಾದ ಅನುಕೂಲಗಳಿವೆ.

ಇತ್ತೀಚೆಗೆ ಭೂಜಲ ಸಂರಕ್ಷಣಾ ಕ್ರಮಗಳ ಜೊತೆಗೆ ಅಲ್ಪ ಪ್ರಮಾಣದ ಕೃತಕ ಗೊಬ್ಬರಗಳ ಬಳಕೆಯಿಂದ ಬೆಳೆಗಳ ಉತ್ಪನ್ನವನ್ನು ಹೆಚ್ಚಿಸಲಾಗುತ್ತಿದೆ. ಕೃತಕ ಗೊಬ್ಬರ ಮತ್ತು ಬೀಜಗಳನ್ನು ಕ್ರಮವಾಗಿ ನಿರ್ದಿಷ್ಟ ಆಳಕ್ಕೆ ಹಾಕಲು ಉಪಯುಕ್ತ ಕೂರಿಗೆಗಳನ್ನು ರೂಪಿಸಲಾಗಿದೆ. ಕೃತಕ ಗೊಬ್ಬರವನ್ನು ಬೀಜದ ಪಕ್ಕಕ್ಕೆ ಅದೇ ಮಟ್ಟದಲ್ಲಿ ಹಾಕಿದರೆ ಸೂಕ್ಷ್ಮ ಸ್ವಭಾವದ ಹತ್ತಿ, ಶೇಂಗಾ (ಕಡಲೆಕಾಯಿ) ಮತ್ತು ಬಿರುಸು ಸ್ವಭಾವದ ಸಜ್ಜೆ, ರಾಗಿ, ನವಣೆ, ಜೋಳ ಮುಂತಾದುವು ಗೊಬ್ಬರ ಮತ್ತು ಲಭ್ಯವಿರುವ ತೇವ ಸರಿಯಾಗಿ ಉಪಯೋಗಿಸಿಕೊಂಡು ಉತ್ತಮವಾಗಿ ಬೆಳೆಯುತ್ತವೆ. ಪಡಭೂಮಿಗಳಲ್ಲಿ ಮಳೆ ನೀರನ್ನು ಸಂಗ್ರಹಿಸಲು ಸ್ಕೂಪರ್ (ಭೂಮಿಯಲ್ಲಿ ಸಣ್ಣ ಸಣ್ಣ ಬಟ್ಟಲಾಕಾರದ ತಗ್ಗುಗಳನ್ನು ತೋಡುವುದು) ಯಂತ್ರ ಉಪಯುಕ್ತ. ಅಲ್ಪವೃಷ್ಟಿಯ ಪ್ರದೇಶಗಳ ಹೊಲಗಳಲ್ಲಿ ಸಮಪಾತಳಿಯ ಒಡ್ಡುಗಳನ್ನು ಹಾಕಲು ಬಂಡ್ ಫಾರ್ಮರ್ (ಒಡ್ಡು ರಚಿಸುವ ಉಪಕರಣ)ಗಳನ್ನು ಉಪಯೋಗಿಸಲಾಗಿದೆ. ಭೂಮಿಯ ಮಣ್ಣನ್ನು ಆಳಕ್ಕೆ ತಿರುವು ಮುರುವು ಮಾಡಲು ಕಬ್ಬಿಣದ ನೇಗಿಲುಗಳು ತಯಾರಾಗಿವೆ. ಇವು ರೈತರ ಮೆಚ್ಚುಗೆ ಗಳಿಸಿವೆ. ಬಿತ್ತನೆ ತರುವಾಯದ ಸಾಗುವಳಿಯ ಎಡೆಗುಂಟೆ ಉಪಕರಣಗಳಿಂದ ಹೊಲದ ಕಸಕಡ್ಡಿಗಳನ್ನು ತೆಗೆಯಲು ಸಾಧ್ಯವಾಗಿದೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಒಣಬೇಸಾಯ&oldid=615320" ಇಂದ ಪಡೆಯಲ್ಪಟ್ಟಿದೆ