ವಿಷಯಕ್ಕೆ ಹೋಗು

ಒಂಡೆಲ್-ಒಂಡೆಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಂಡೆಲ್-ಒಂಡೆಲ್
ಒಂಡೆಲ್-ಒಂಡೆಲ್ ಇಂಡೋನೇಷ್ಯಾದ ಜಕಾರ್ತದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸುವ ದೊಡ್ಡ ಆಕಾರದ ಬೊಂಬೆ
ಶೈಲಿಸಾಂಪ್ರದಾಯಿಕ ಗೊಂಬೆ
ಸೃಜನಕಾರಬೆಟಾವಿ ಜನ
ಮೂಲಇಂಡೋನೇಷ್ಯಾ

 

ಒಂಡೆಲ್-ಒಂಡೆಲ್ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುವ ಬೆಟಾವಿ ಜಾನಪದ ಪ್ರದರ್ಶನದಲ್ಲಿ ಕಾಣಸಿಗುವ ಒಂದು ದೊಡ್ಡ ಬೊಂಬೆ. ಜಕಾರ್ತಾದ ಸಾಂಪ್ರದಾಯಿಕ ಗುರುತಾಗಿ, ಒಂಡೆಲ್-ಒಂಡೆಲ್ ಅನ್ನು ಹಬ್ಬಗಳಲ್ಲಿ ರಂಜಿಸಲು ಅಥವಾ ಗೌರವಾನ್ವಿತ ಅತಿಥಿಗಳನ್ನು ಸ್ವಾಗತಿಸಲು ಬಳಸಲಾಗುತ್ತದೆ. ಇದು ಆಧುನಿಕತೆಯಿಂದ ಉಳಿದುಕೊಂಡಿರುವ ಮತ್ತು ಇನ್ನೂ ನಿಯಮಿತವಾಗಿ ಪ್ರದರ್ಶಿಸಲ್ಪಡುತ್ತಿರುವ ಕೆಲವು ಇಂಡೋನೇಷ್ಯಾದ ಜಾನಪದ ಪ್ರದರ್ಶನಗಳಲ್ಲಿ ಒಂದಾಗಿದೆ.

ಒಂಡೆಲ್-ಒಂಡೆಲ್ ಪ್ರದರ್ಶನದ ಸಂಗೀತದ ಪಕ್ಕವಾದ್ಯವು ಆಯಾ ಪ್ರಾಂತ್ಯ, ಸಂದರ್ಭ ಮತ್ತು ತಂಡಗಳನ್ನು ಆಧರಿಸಿ ವಿಭಿನ್ನವಾಗಿರುತ್ತದೆ.

ಇತಿಹಾಸ

[ಬದಲಾಯಿಸಿ]

ಪ್ರಾಚೀನ ಮತ್ತು ವಸಾಹತುಶಾಹಿ ಅವಧಿ

[ಬದಲಾಯಿಸಿ]
ವಸಾಹತುಶಾಹಿ ಅವಧಿಯಲ್ಲಿನ, ಹೋಟೆಲ್ ಡೆಸ್ ಇಂಡೆಸ್‌ನ ಹೊಸ ವಿಭಾಗದ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ನೀಡಿದ ಒಂಡೆಲ್-ಒಂಡೆಲ್

ಆಸ್ಟ್ರೋನೇಷಿಯನ್ ಸಂಸ್ಕೃತಿಯ (ಇದು ಹಿಂದೂ ಧರ್ಮ ಇಲ್ಲಿ ಪಸರಿಸುವ ಬಹಳ ಹಿಂದಿನ ಈ ಪ್ರದೇಶದ ಸಂಸ್ಕೃತಿ) ಪ್ರಕಾರ ಪ್ರಕೃತಿಯಲ್ಲಿ (ಗಾಳಿ,ಬೆಂಕಿ,ಮರ, ಇತ್ಯಾದಿಗಳಲ್ಲಿ) ತಮ್ಮನ್ನು ರಕ್ಷಿಸುವ ಆತ್ಮವಿರುತ್ತದೆ ಎಂದು ನಂಬುತ್ತಿದ್ದರು. ಆ ಆತ್ಮವನ್ನು ಬರೋಂಗ್ ಎನ್ನುತ್ತಾರೆ. ಸಾಂಪ್ರದಾಯಿಕವಾಗಿ, ಒಂಡೆಲ್-ಒಂಡೆಲ್ ಗೊಂಬೆಯನ್ನು, ಬರೋಂಗನ್ ಎನ್ನುತ್ತಾರೆ. ವಿಪತ್ತುಗಳಿಂದ ರಕ್ಷಿಸಲು ಅಥವಾ ಅಲೆದಾಡುವ ದುಷ್ಟಶಕ್ತಿಗಳನ್ನು ದೂರವಿಡಲು, ಈ ದೊಡ್ಡ ಗೊಂಬೆಯನ್ನು, ಹಳ್ಳಿಗಳ ಸುತ್ತಲೂ ಪ್ರದರ್ಶಿಸಲಾಗುತ್ತಿತ್ತು. ಇದನ್ನು ಗ್ರಾಮವನ್ನು ರಕ್ಷಿಸುವ ಪೂರ್ವಜರ ಪ್ರತೀಕ ಎಂದು ಭಾವಿಸಲಾಗಿತ್ತು. [೧]

ಬಟಾವಿಯಾದ "ಬರೋಂಗ್ ನೃತ್ಯ"

ಬ್ರಿಟಿಷ್ ವ್ಯಾಪಾರಿ ವಿಲಿಯಂ ಸ್ಕಾಟ್ ಒಂಡೆಲ್-ಒಂಡೆಲ್‌ನ ಕುರಿತು 1605 ರಲ್ಲಿ ದಾಖಲಿಸಿದ್ದಾನೆ. 10 ವರ್ಷದ ರಾಜಕುಮಾರ ಅಬ್ದುಲ್ ಮಫಖೀರ್‌ನ ಸುನ್ನತ್ ಅನ್ನು ಆಚರಿಸಲು ರಾಜಕುಮಾರ ಜಯಕರ್ತ ವಿಜಯಕ್ರಮ ನೇತೃತ್ವದ ಮೆರವಣಿಗೆಯಲ್ಲಿಎಯೆನ್ ರಯಸ್ ರಾಕ್ಸಸಾ ("ಒಂದು ದೊಡ್ಡ ರಾಕ್ಷಸ ") ಸಹ ಸೇರಿಸಲಾಗಿತ್ತು. [೨]

ಆಧುನಿಕ ವಸಾಹತುಶಾಹಿ ಅವಧಿಯವರೆಗೆ, ಬಾಲಿಯ ಬರೋಂಗ್ ಅಥವಾ ರಂಗ್ಡಾ ಆಕೃತಿಯಂತೆಯೇ, ಒಂಡೆಲ್-ಒಂಡೆಲ್ ಆಕೃತಿಯು, ದೊಡ್ಡ ಕೋರೆಹಲ್ಲುಗಳು ಮತ್ತು ದೊಡ್ಡ ಕಣ್ಣುಗಳಂತಹ, ಭಯಾನಕ ಮುಖದ ವೈಶಿಷ್ಟ್ಯವನ್ನು ಹೊಂದಿತ್ತು ಎಂದು ದಾಖಲಿಸಲಾಗಿದೆ. ಒಂಡೆಲ್-ಒಂಡೆಲ್ ಅನ್ನು ಬೀದಿಗಳಲ್ಲಿ ಪ್ರದರ್ಶಿಸುತ್ತ, ದಾರಿಹೋಕರಿಂದ ಅಫೀಮು ಕೇಳಲಾಗುತ್ತಿತ್ತು. ಡಚ್ ಈಸ್ಟ್ ಇಂಡೀಸ್‌ ಪ್ರಾಂತ್ಯದಲ್ಲಿ ಅಫೀಮು ನಿಷೇಧಿಸಿದಾಗ, ಒಂಡೆಲ್-ಒಂಡೆಲ್ ಬದಲಿಗೆ ಸಿಗಾರ್‌ಗಳನ್ನು ದಕ್ಷಿಣೆಯಾಗಿ ಕೇಳುತ್ತಿದ್ದರು. ಈ ಅವಧಿಯಲ್ಲಿ, ಸ್ಥಳೀಯ ಬೆಟಾವಿ ಜನರು ಸಿಡುಬಿನಂತಹ ರೋಗಗಳಿಂದ, ಒಂಡೆಲ್-ಒಂಡೆಲ್ ತಮ್ಮ ಹಳ್ಳಿಯನ್ನು ರಕ್ಷಿಸಬಹುದು ಎಂದು ನಂಬಿದ್ದರು. 19 ನೇ ಶತಮಾನದ ಅಂತ್ಯದಲ್ಲಿ ಬಟಾವಿಯಾಕ್ಕೆ ಭೇಟಿ ನೀಡಿದ ಅಮೇರಿಕನ್ ಬರಹಗಾರ, ಇ.ಆರ್. ಸ್ಕಿಡ್‌ಮೋರ್ ಅವರು ಒಂಡೆಲ್-ಒಂಡೆಲ್ ಪ್ರದರ್ಶನವನ್ನು ದಾಖಲಿಸಿದ್ದಾರೆ. [೩]

ಒಂಡೆಲ್-ಒಂಡೆಲ್ ನಿರ್ಮಾಣಕ್ಕೆ ಒಂದು ನಿರ್ದಿಷ್ಟ ಆಚರಣೆಯಿದೆ. ಒಂಡೆಲ್-ಒಂಡೆಲ್ ನಿರ್ಮಾಣದ ಮೊದಲು, ತಯಾರಕರು ಧೂಪದ್ರವ್ಯ, ಕೆಂಬಾಂಗ್ ತುಜುಹ್ ರೂಪ ಮತ್ತು ಅಕ್ಕಿ ಗಂಜಿ ನೈವೇದ್ಯಗಳನ್ನು ಅರ್ಪಿಸಬೇಕು. ಬೊಂಬೆ ತಯಾರಿಸುವ ಪ್ರಕ್ರಿಯೆಯು ಸುಗಮವಾಗಿ ಸಾಗಿ, ಆಕೃತಿಯಲ್ಲಿ ಪರೋಪಕಾರಿ ಮನೋಭಾವನೆಯ ಪ್ರವೇಶಕ್ಕೆ ಅವಕಾಶ ನೀಡುವುದು ಈ ಅರ್ಪಣೆಯ ಉದ್ದೇಶವಾಗಿತ್ತು. [೪]

ಆಧುನಿಕ ಪದ್ಧತಿ

[ಬದಲಾಯಿಸಿ]
ಜಕಾರ್ತಾದ ವಯಾಂಗ್ ಮ್ಯೂಸಿಯಂನಲ್ಲಿರುವ ಸಾಂಪ್ರದಾಯಿಕ ಗಂಡು ಮತ್ತು ಹೆಣ್ಣು ಬೊಂಬೆಗಳು

ಇಂಡೋನೇಷ್ಯಾದ ಸ್ವಾತಂತ್ರ್ಯದ ನಂತರ, ಒಂಡೆಲ್-ಒಂಡೆಲ್ ಕಾರ್ಯವನ್ನು ತಮ್ಮನ್ನು ಕಾಯುವ ದೈವರೂಪದಿಂದ, ಮನರಂಜನೆಯ ಪ್ರತಿಮಾರೂಪವಾಗಿ ಬದಲಾಯಿಸಲಾಯಿತು. ಜಕಾರ್ತಾದ ಗವರ್ನರ್ ಅಲಿ ಸಾದಿಕಿನ್ (1966-1977), ಆಧುನಿಕ ಜಕಾರ್ತಾವನ್ನು ಪರಿಚಯಿಸುವ ಪ್ರಯತ್ನದಲ್ಲಿ, ಕೆಲವು ಭಯಾನಕ ಅಂಶಗಳನ್ನು ತೆಗೆದುಹಾಕಿ ಅವುಗಳನ್ನು ಹೆಚ್ಚು ಸ್ನೇಹಪರವಾಗಿ ಕಾಣುವಂತೆ ಮಾಡುವ ಮೂಲಕ ಒಂಡೆಲ್-ಒಂಡೆಲ್ ಅನ್ನು ಆಧುನೀಕರಿಸಿದರು. ಈ ಅವಧಿಯಲ್ಲಿ, ಒಂಡೆಲ್-ಒಂಡೆಲ್ ಅನ್ನು ಜಕಾರ್ತಾದ ಗುರುತಾಗಿ, (ಮಾಸ್ಕಾಟ್) ಮಾಡಲಾಯಿತು ಮತ್ತು ಹೊಸ ಕಟ್ಟಡಗಳ ಉದ್ಘಾಟನೆ, ಗೌರವಾನ್ವಿತ ಅತಿಥಿಗಳ ಸ್ವಾಗತ ಅಥವಾ ವಿವಾಹ ಸಮಾರಂಭಗಳಂತಹ ಕಾರ್ಯಕ್ರಮಗಳಲ್ಲಿ ಸೇರಿಸಿಕೊಳ್ಳಲಾಗುತ್ತಿತ್ತು. ಇಂತಹ ಒಂಡೆಲ್-ಒಂಡೆಲ್ ಪ್ರದರ್ಶನವು ಯಾವಾಗಲೂ ತಂಜಿದೋರ್ ಅಥವಾ ಗ್ಯಾಂಬಾಂಗ್ ಕ್ರೊಮೊಂಗ್‌ನಂತಹ ಬೆಟಾವಿ ಸಂಗೀತದೊಂದಿಗೆ ಇರುತ್ತದೆ. [೩]

ಬಾಲಿಯ ಬರೋಂಗ್ ಲ್ಯಾಂಡಂಗ್ ಬೆಟಾವಿ ಒಂಡೆಲ್-ಒಂಡೆಲ್ ಅನ್ನು ಹೋಲುತ್ತದೆ

ಆಕೃತಿ

[ಬದಲಾಯಿಸಿ]
ಇಂಡೋನೇಷ್ಯಾದ ಸೆಂಟ್ರಲ್ ಜಕಾರ್ತಾದ ಜಲನ್ ಛೆಂಪಕಾ ಪುತಿಹ್ ಟೆಂಗಾಹ್ 22A ನಲ್ಲಿ ಒಂಡೆಲ್-ಒಂಡೆಲ್ ಬೀದಿ ಪ್ರದರ್ಶನ. ಒಂಡೆಲ್-ಒಂಡೆಲ್ ಬೀದಿ ಪ್ರದರ್ಶನವು ಸಾಮಾನ್ಯವಾಗಿ ಜಕಾರ್ತಾ ಕ್ಯಾಂಪಂಗ್‍ಗಳ ( ನಗರ ಗ್ರಾಮಗಳು ) ಬೀದಿಗಳಲ್ಲಿ ಪ್ರಯಾಣಿಸುತ್ತ, ದಾರಿಹೋಕರಿಂದ ಹಣದ ಕೊಡುಗೆಯನ್ನು ಕೇಳುತ್ತದೆ. ಗಂಡು ಮತ್ತು ಹೆಣ್ಣು ಒಂಡೆಲ್-ಒಂಡೆಲ್ ನೃತ್ಯವು ಗ್ಯಾಂಬಾಂಗ್ ಕ್ರೊಮೊಂಗ್ ಜೊತೆಗೆ ಬೆಟಾವಿ ಸಾಂಪ್ರದಾಯಿಕ ಸಂಗೀತವನ್ನು ಒಳಗೊಂಡಿರುತ್ತದೆ.

ಒಂಡೆಲ್-ಒಂಡೆಲ್ ಸುಮಾರು 2.5 ಮೀಟರ್ ಎತ್ತರದ ಟೊಳ್ಳಾದ ಆಕೃತಿಯಾಗಿದ್ದು, ಪ್ರಕಾಶಮಾನವಾದ ಶಾಲುಗಳನ್ನು ( ಕಎನ್ ಸೆಲೆಂಪಾಂಗ್ ದಾದಾ ) ಮತ್ತು ಬಣ್ಣದ ಉಡುಪುಗಳನ್ನು ಧರಿಸುತ್ತಾರೆ. ಒಂಡೆಲ್-ಒಂಡೆಲ್‌ನ ತಲೆಯನ್ನು ಸಾಮಾನ್ಯವಾಗಿ ಮರದಿಂದ ತಯಾರಿಸಲಾಗುತ್ತದೆ. ಒಂಡೆಲ್-ಒಂಡೆಲ್ ಕಂಬಾಂಗ್ ಕಲಾಪಿ (ತೆಂಗಿನ ಹೂವು) ಎಂದು ಕರೆಯಲ್ಪಡುವ ಕಿರೀಟವನ್ನು ಧರಿಸುತ್ತಾರೆ. ಕಿರೀಟವನ್ನು ಒಣಗಿದ ತೆಂಗಿನ ಎಲೆಗಳಿಂದ, ವರ್ಣರಂಜಿತ ಕಾಗದದಿಂದ ಸುತ್ತಿ ಮಾಡಲಾದ ಕಡ್ಡಿಗಳಿಂದ ಅಲಂಕರಿಸಲಾಗುತ್ತದೆ. ಒಂಡೆಲ್-ಒಂಡೆಲ್ ಅನ್ನು ಯಾವಾಗಲೂ ಗಂಡು ಮತ್ತು ಹೆಣ್ಣು ಜೋಡಿಯಾಗಿ ಪ್ರದರ್ಶಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ಗಂಡು ಬೊಂಬೆಯ ಮುಖ ಕೆಂಪು ಬಣ್ಣ ಮತ್ತು ಹೆಣ್ಣು ಬೊಂಬೆಯನ್ನು ಬಿಳಿ ಬಣ್ಣ ಹೊಂದಿರುತ್ತದೆ. ಒಂಡೆಲ್-ಒಂಡೆಲ್‌ನ ದೇಹವು ಬಿದಿರಿನಿಂದ ನಿರ್ಮಿಸಲ್ಪಟ್ಟಿದೆ. ಬೊಂಬೆಯ ಒಳಗಿನಿಂದ ಒಬ್ಬ ವ್ಯಕ್ತಿಯಿಂದ ಎತ್ತಲ್ಪಡುವಷ್ಟು ಹಗುರವಾಗಿರುತ್ತದೆ.

ಇದೇ ರೀತಿಯ ಪ್ರದರ್ಶನಗಳು

[ಬದಲಾಯಿಸಿ]

ಇಂಡೋನೇಷ್ಯಾದ ಇತರ ಭಾಗಗಳಲ್ಲಿ ಒಂಡೆಲ್-ಒಂಡೆಲ್ ಅನ್ನು ಹೋಲುವ ಜಾನಪದ ಪ್ರದರ್ಶನದ ಒಂದು ರೂಪವನ್ನು ಅಭ್ಯಾಸ ಮಾಡಲಾಗುತ್ತದೆ. ಪಸುಂದನ್ (ಪಶ್ಚಿಮ ಜಾವಾ) ಪ್ರದೇಶದಲ್ಲಿ ಇದನ್ನು ಬಡಾವಾಂಗ್ ಎಂದು ಕರೆಯಲಾಗುತ್ತದೆ, ಆದರೆ ಮಧ್ಯ ಜಾವಾದಲ್ಲಿ ಇದನ್ನು ಬರೊಂಗನ್ ಬುಂಚಿಸ್ ಎಂದು ಕರೆಯಲಾಗುತ್ತದೆ. ಬಾಲಿಯಲ್ಲಿ ಇದನ್ನು ಬರೊಂಗ್ ಲ್ಯಾಂಡಂಗ್ ಎಂದು ಕರೆಯಲಾಗುತ್ತದೆ.

ಸಹ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ↑ "Sejarah Ondel-Ondel Betawi" [History of Batavian Ondel-Ondel]. Jakartapedia - Ensiklopedia Warga Jakarta (in ಇಂಡೋನೇಶಿಯನ್). Badan Perpustakaan dan Arsip Daerah Provinsi DKI Jakarta. 2015. Archived from the original on April 20, 2016. Retrieved June 17, 2016.
  2. ↑ "Ondel-ondel". Jakarta.go.id - Portal Resmi Provinsi DKI Jakarta (in ಇಂಡೋನೇಶಿಯನ್). Dinas Komunikasi, Informatika dan Kehumasan Pemprov DKI Jakarta. 2015. Archived from the original on June 17, 2016. Retrieved June 17, 2016.
  3. 1 2 "Sejarah Ondel-Ondel Betawi" [History of Batavian Ondel-Ondel]. Jakartapedia - Ensiklopedia Warga Jakarta (in ಇಂಡೋನೇಶಿಯನ್). Badan Perpustakaan dan Arsip Daerah Provinsi DKI Jakarta. 2015. Archived from the original on April 20, 2016. Retrieved June 17, 2016.
  4. ↑ "Sejarah Ondel-Ondel Betawi" [History of Batavian Ondel-Ondel]. Jakartapedia - Ensiklopedia Warga Jakarta (in ಇಂಡೋನೇಶಿಯನ್). Badan Perpustakaan dan Arsip Daerah Provinsi DKI Jakarta. 2015. Archived from the original on April 20, 2016. Retrieved June 17, 2016."Sejarah Ondel-Ondel Betawi" [History of Batavian Ondel-Ondel]. Jakartapedia - Ensiklopedia Warga Jakarta (in Indonesian). Badan Perpustakaan dan Arsip Daerah Provinsi DKI Jakarta. 2015. Archived from the original Archived 2016-04-20 ವೇಬ್ಯಾಕ್ ಮೆಷಿನ್ ನಲ್ಲಿ. on April 20, 2016. Retrieved June 17, 2016.

ಬಾಹ್ಯ ಕೊಂಡಿಗಳು

[ಬದಲಾಯಿಸಿ]