ಐತಿಹಾಸಿಕ ತಲಕಾಡು

ವಿಕಿಪೀಡಿಯ ಇಂದ
Jump to navigation Jump to search


ಪರಿಚಯ[ಬದಲಾಯಿಸಿ]

ಎತ್ತ್ತ್ತನೋಡಿದರತ್ತ್ತ ಮರಳರಾಶಿ, ಗಗನಚುಂಬಿಸುವ೦ಥ ಮರಳಗುಡ್ಡೆಗಳು, ಊರುತುಂಬ ಮರಳಿನದೇ ರಂಗವಲ್ಲಿ. ಗುಡಿ-ಗೋಪುರಗಳು, ಮನೆಮಠಗಳು, ಕಾಡು-ಮೇಡುಗಳು,ನಡೆವ ರಸ್ತೆ ಎಲ್ಲಕ್ಕೂ ಮರಳಿನದೇ ನಂಟು. ಇದು ತಲಕಾಡಿನ ಪರಿ. ಕಾಲಿಟ್ಟಲ್ಲಿ ಮರಳು ಕೈಚಾಚಿದಲ್ಲಿ ಮರಳು! ಇದು ತಲಕಾಡು ಇರುವ ರೀತಿ. ಇದರ ಹಿಂದೊಂದು ಶಾಪದ ಕಥೆ ಹೀಗಿದೆ. ವಿಜಯನಗರದ ಪ್ರತಿನಿಧಿಯಾಗಿ ಶ್ರೀರಂಗಪತಟ್ಟಣದಲ್ಲಿ ಆಳುತ್ತಿದ್ದ ಕಾಲದಲ್ಲಿ ಆತನಿಗೆ ಬೆನ್ನುಫಣಿ ರೋಗಬರುತ್ತದೆ.ಅದರ ನಿವಾರಣೆಗಾಗಿ ಆತ ತನ್ನ ಪತ್ನಿ ಅಲಮೇಲಮ್ಮನ ಜೊತೆ ತಲಕಾಡಿನ ಶ್ರೀ ವೈದ್ಯನಾಥೇಶ್ವರ ದೇವಸ್ಥಾನಕ್ಕೆ ಪೂಜೆಗಾಗಿ ಬರುತ್ತಾನೆ. ಆ ಸಂದರ್ಭದಲ್ಲಿ ರೋಗ ಉಲ್ಬಣಗೊಂಡು ಶ್ರೀರಂಗರಾಯ ತಲಕಾಡಿನಲ್ಲೇ ಸಾವಿಗೀಡಾಗುತ್ತಾನೆ. ಈ ಸಂದರ್ಭ ಉಪಯೋಗಿಸಿಕೊಂಡು ಮೈಸೂರಿನ ರಾಜಒಡೆಯರು ಶ್ರೀರಂಗಪಟ್ಟಣವನ್ನು ಆಕ್ರಮಿಸಿಕೊಳ್ಳುತ್ತಾರೆ. ಆಗ ಶ್ರೀರಂಗರಾಯನ ಪತ್ನಿ ಅಲಮೇಲಮ್ಮ ತಲಕಾಡಿನ ಪಕ್ಕದಲ್ಲಿರುವ ಮಾಲಂಗಿ ಗ್ರಾಮದಲ್ಲಿ ನೆಲೆಸುತ್ತಾಳೆ. ಆದರೆ ಅಮೂಲ್ಯವಾದ ಮುತ್ತಿನ ಮೂಗುತಿಯೊಂದು ಸೇರಿದಂತೆ ಎಲ್ಲಾ ಒಡವೆಗಳನ್ನು ಕಿತ್ತುಕೊಳ್ಳಲು ರಾಜಒಡೆಯರು ಪ್ರಯತ್ನಿಸಿದಾಗ ಕೋಪಗೊಂಡ ಅಲಮೇಲಮ್ಮ"ತಲಕಾಡು ಮರಳಾಗಿ ಮಾಲಂಗಿ ಮಡುವಾಗಿ ಮೈಸೂರು ರಾಜರಿಗೆ ಮಕ್ಕಳಾಗದಿರಲಿ" ಎಂದು ಶಾಪಹಾಕಿ ಒಡೆವೆಗಳೊಡನೆ ಕಾವೇರಿನದಿಗೆ ಹಾರಿ ಪ್ರಾಣಬಿಡುತ್ತಾಳೆ. ಇಂಥ ಅದೆಷ್ಟೋ ಕಥೆಗಳ ಸಹಿತ ತನ್ನ ಗ``ರ್ಭದಲ್ಲಿ ಹಲವು ಅದ್ಬುತಗಳನ್ನು ತುಂಬಿಕೊಂಡು ಮೈತುಂಬ ಮರಳರಾಶಿಯನ್ನು ಹೊದ್ದು ಮಲಗಿರುವ ತಲಕಾಡು ಪೌರಾಣಿಕವಾಗಿ, ಚಾರಿತ್ರಿಕವಾಗಿ,ಜಾನಪದವಾಗಿ,ಸಾಂಸ್ಕ್ರತಿಕವಾಗಿ,ಧಾರ್ಮಿಕವಾಗಿ ಬಹು ಮಹತ್ವದ ಸ್ಥಳ. ಸಿದ್ದಾರಣ್ಯಕ್ಷೇತ್ರ,ಗಜಾರಣಕ್ಷೇತ್ರ,ತಲವನಪುರ,ರಾಜಪುರ ಮುಂತಾದ ಹೆಸರುಗಳಿಂದಲೂ ಪುರಾಣದಲ್ಲಿ,ಇತಿಹಾಸದಲ್ಲಿ ಕರೆಸಿಕೊಂಡಿರುವ ತಲಕಾಡು ಕ್ರಿ.ಶ.೨೪೭ರ ಕಾಲದಲ್ಲೇ ಗಂಗರಸರ ಸಾಮ್ರಾಜ್ಯದ ರಾಜಧಾನಿಯಾಗಿ ಅಪಾರ ಕೀರ್ತಿಗಳಿಸಿ ಮೆರೆದ ಭವ್ಯನಾಡಾಗಿತ್ತು. ಗಂಗರಲ್ಲದೆ ಹೊಯ್ಸಳರು,ಚೋಳರು,ರಾಷ್ಟ್ರಕೂಟರು,ವಿಜಯನಗರದರಸರು,ಮೈಸೂರಿನ ಒಡೆಯರು ಮುಂತಾದ ರಾಜ ವಂಶಸ್ಥರ ನಾಡಗಿತ್ತು.

ಪರಿವಿಡಿ[ಬದಲಾಯಿಸಿ]

   ೧ ಪಂಚಲಿಂಗಗಳ ಪುಣ್ಯಧಾಮ
   ೨ ವೈದ್ಯನಾಥೇಶ್ವರ
   ೩ ಅ`ರ್ಕನಾಥೇಶ್ವರ
   ೪ ಪಾತಾಳೇಶ್ವರ
   ೫ ಮರಳೇಶ್ವರ
   ೬ ಅಪರೂಪದ ಅಪೂರ್ವದರ್ಶನ

ಪಂಚಲಿಂಗಗಳ ಪುಣ್ಯಧಾಮ[ಬದಲಾಯಿಸಿ]

ದಕ್ಷಿಣ ಕಾಶಿ ಎಂದೂ ಹೆಸರಾಗಿರುವ ತಲಕಾಡಿನಲ್ಲಿ ಜರುಗುವ ಪಂಚಲಿಂಗದರ್ಶನವು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಷ್ಟೇ ಪ್ರಸಿದ್ದಿ ಪಡೆದಿದೆ. ಈ ಧಾರ್ಮಿಕ ಸಂಭ್ರಮದಲ್ಲಿ ದೇಶ-ವಿದೇಶದಿಂದ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಇಲ್ಲಿ ಪರಶಿವನ ಐದು ಮುಖಗಳು ಸ್ವತಃ ಉದ್ಭವವಾಗಿರುವುದನ್ನು ನೋಡಬಹುದು.ಈ ಐದು ಶಿವಲಿಂಗಳಿಗೆ ಪಂಚಲಿಂಗದರ್ಶನ ಮಹೋತ್ಸವದಲ್ಲಿ ವಿಶೇಷವಾಗಿ ಪೂಜಿಸುತ್ತಾರೆ. ತತ್ಪುರುಷ ಮುಖದಿಂದ ಕಾವೇರಿಯ ಉತ್ತರವಾಹಿನಿಯ ಬಳಿ ಅರ್ಕೇಶ್ವರನಾಗಿ, ಪೂರ್ವ ವಾಹಿನಿಯ ಬಳಿ ಅಘೋರ ಮುಖದಿಂದ ಪಾತಾಳೇಶ್ವರನಾಗಿ, ದಕ್ಷಿಣವಾಹಿನಿಯ ಬಳಿ ಸದ್ಯೋಜಾತ ಮುಖದಿಂದ ಮರಳೇಶ್ವರನಾಗಿ, ಪಶ್ಚಿಮವಾಹಿನಿಯ ಬಳಿ ವಾಮದೇವ ಮುಖದಿಂದ ಮಲ್ಲಿಕಾರ್ಜುನೇಶ್ವರನಾಗಿ ಮತ್ತು ಮಧ್ಯದಲ್ಲಿ ಈಶಾನ್ಯ ಮುಖದಿಂದ ವೈದ್ಯನಾಥೇಶ್ವರನಾಗಿ ಪಂಚಬ್ರಹ್ಮಮಯನಾದ ಪರಶಿವನು ತಲಕಾಡಿನಲ್ಲಿ ನೆಲೆಸಿದ್ದಾನೆ ಎಂಬ ವಿಚಾರವನ್ನು ಪುರಾಣದಿಂದ ತಿಳಿಯಬಹುದು.

ವೈದ್ಯನಾಥೇಶ್ವರ[ಬದಲಾಯಿಸಿ]

ಸೋಮದತ್ತ ಮಹರ್ಷಿ ಮತ್ತು ಅವರ ಶಿಷ್ಯರಿಗೆ ಹಾಗೂ ತಲ ಮತ್ತು ಕಾಡ ಎಂಬ ಬೇಡರಿಗೆ ಮೋಕ್ಷಪ್ರಧಾನಿಸಿದ ಪರಮೇಶ್ವರ ತಾನೇ ಸ್ವಯಂ ವೈದ್ಯ ಮಾಡಿಕೊಂಡು ವೈದ್ಯನಾಥೇಶ್ವರನಾಗಿರುವುದೇ ಈ ದೇವಾಲಯದ ವಿಶೇಷ. ಇಲ್ಲಿ ಪೂಜೆ ಮಾಡಿಸಿದರೆ ಸಕಲ ರೋಗಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ. ವೈಶಾಖ ಶುದ್ಧ ಪೂರ್ಣಿಮೆ ದಿವಸವು ವೈದ್ಯನಾಥೇಶ್ವರನ ಪೂಜೆ ಶ್ರೇಷ್ಠವಾಗಿರುತ್ತದೆ.

ಅರ್ಕನಾಥೇಶ್ವರ[ಬದಲಾಯಿಸಿ]

ಗ್ರಹಗಳಿಗೆಲ್ಲಾ ಅಧಿಪತಿಯಾಗಲು ಪುರಾಣದಲ್ಲಿ ಸೂರ್ಯನಿಂದ ಪೂಜಿಸಲ್ಪಟ್ಟ ಶಿವಲಿಂಗವೇ ಅರ್ಕನಾಥೇಶ್ವರನೆಂದು ಪ್ರಸಿದ್ಧಿಯಾಗಿದೆ. ಇದು ವೈದ್ಯನಾಥೇಶ್ವರ ದೇಗುಲದ ಪೂರ್ವ ದಿಕ್ಕಿಗೆ ಮೂರು ಮೈಲಿ ದೂರದ ವಿಜಯಪುರದಲ್ಲಿದ್ದು ಸಕಲ ಸಂಕಷ್ಟ ನಿವಾರಕ ಲಿಂಗವೆನಿಸಿದೆ. ಅರ್ಕನಾಥೇಶ್ವರನ ಪೂಜೆಗೆ ಮಾಘ ಶುದ್ದ ಸಪ್ತಮಿ ದಿನವು ಬಹಳ ಶ್ರೇಷ್ಠವಾಗಿದೆ.

ಪಾತಾಳೇಶ್ವರ[ಬದಲಾಯಿಸಿ]

ನಾಗಲೋಕದ ಚಕ್ರಾಧಿಪತ್ಯಕ್ಕಾಗಿ ವಾಸುಕಿಯಿಂದ ಪೂಜಿತಗೊಂಡಿರುವ ಈ ಶಿವಲಿಂಗವೇ ಪಾತಾಳೇಶ್ವರ. ವಾಸುಕೀಶ್ವರನೆಂಬುದುವುದು ಇದರ ಮತ್ತೊಂದು ಹೆಸರು. ಈ ದೇಗುಲ ವೈದ್ಯನಾಥೇಶ್ವರ ದೇಗುಲದ ಪೂರ್ವ ದಿಕ್ಕಿಗೆ ಅರ್ಧ ಮೈಲಿ ದೂರದಲ್ಲಿದೆ. ಇದು ಬಹಳ ಹಳ್ಳದಲ್ಲಿರುವುದರಿಂದ ಪಾತಾಳೇಶ್ವರನೆಂದೇ ಹೆಸರಾಗಿದೆ. ಇದರ ಪೂಜೆಗೆ ಶ್ರಾವಣ ಶುದ್ಧ ಪಂಚಮಿ ಅತ್ಯಂತ ಶ್ರೇಷ್ಠ ದಿವಸವಾಗಿದೆ. ಈ ಲಿಂಗವು ಪ್ರತಿದಿನ ಐದು ಬಣ್ಣಗಳಲ್ಲಿ ಹೊಳೆಯುತ್ತದೆಂದು ಹೇಳಲಾಗಿದೆ.

ಮರಳೇಶ್ವರ[ಬದಲಾಯಿಸಿ]

ಈ ದೇಗುಲದಲ್ಲಿ ಬ್ರಹ್ಮದೇವನನ್ನು ಪೂಜಿಸುತ್ತಾರೆ. ಸೈಕತೇಶ್ವರನೆಂಬ ಇನ್ನೊಂದು ಹೆಸರೂ ಉಂಟು. ಈ ದೇವಾಲಯ ಭಕ್ತರಿಗೆ ವರನೀಡುವುದರಲ್ಲಿ ಹೆಚ್ಚು ಪ್ರಸಿದ್ಧ. ಮರಳೇಶ್ವರನ ದರ್ಶನಕ್ಕೆ ಮಾಘಮಾಸ ಚತುರ್ದಶಿಯ ದಿನ ಹೆಚ್ಚು ಶ್ರೇಷ್ಠ.

ಮಲ್ಲಿಕಾರ್ಜುನೇಶ್ವರ[ಬದಲಾಯಿಸಿ]

ಕೇಳಿದ್ದು ಕೊಂಡುವಂತಹ ಶಕ್ತಿಯನ್ನು ಪಡೆಯುವುದಕ್ಕಾಗಿ ಕಾಮಧೇನುವಿನಿಂದ ಪೂಜೆಗೊಳ್ಳುತ್ತಿದ್ದ ಶಿವಲಿಂಗವೇ ಮಲ್ಲಿಕಾರ್ಜುನೇಶ್ವರ. ವೈದ್ಯನಾಥೇಶ್ವರನ ಉತ್ತರಕ್ಕೆ ಮೂರು-ನಾಲ್ಕು ಮೈಲಿಗಳ ದೂರದಲ್ಲಿ ಮುನ್ನೂರು ಅಡಿ ಎತ್ತರದ ಮುಡುಕುತೊರೆ ಬೆಟ್ಟದಲ್ಲಿರುವ ಈ ಶಿವಲಿಂಗನ ದರ್ಶನಕ್ಕೆ ಕಾರ್ತೀಕ ಶುದ್ಧ ಅಷ್ಟಮಿ ದಿವಸವು ಶ್ರೇಷ್ಠವಾಗಿರುತ್ತದೆ. ಇದು ದಕ್ಷಿಣದ ಶ್ರೀಶೈಲವೆಂದೇ ಖ್ಯಾತಿಯಾಗಿದೆ. ಇಲ್ಲಿ ಕಾವೇರಿ ನದಿಯು ನಾಲ್ಕು ದಿಕ್ಕುಗಳಲ್ಲಿಯೂ ಹರಿಯುವುದರಿಂದ ಈ ಸ್ಥಳದಲ್ಲಿಯೇ ಪಂಚಲಿಂಗ ದರ್ಶನ ಘಟಿಸುತ್ತದೆ. ತಲಕಾಡಿನಲ್ಲಲ್ಲದೆ ಬೇರಲ್ಲೂ ಇಂಥ ಮಹತ್ವವನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ.

ಅಪರೂಪದ ಅಪೂರ್ವದರ್ಶನ[ಬದಲಾಯಿಸಿ]

ಪಂಚಲಿಂಗ ದರ್ಶನಕ್ಕೆ ಕಾರ್ತೀಕ ಮಾಸದ ಅಮಾವಾಸ್ಯೆಯ ಸೋಮವಾರ ಸೂರ್ಯ ಚಂದ್ರರಿಬ್ಬರೂ ವೃಶ್ಚಿಕ ರಾಶಿಯಲ್ಲಿ ಸೇರಿದಾಗ ಆ ದಿನ ಉಷಾಃ ಕಾಲದಲ್ಲಿ ಬರುವ ಕುಹೂಯೋಗ ಅಥವಾ ಪದ್ಮಕಯೋಗವು ಅತ್ಯಂತ ಫಲಪ್ರದವಾದ ಪರ್ವಕಾಲ. ಇಂಥ ದಿನ ಸುಮಾರು ೩ ರಿಂದ ೧೪ ವರ್ಷಗಳ ಸಮಯದಲ್ಲಿ ಒಮ್ಮೆ ಬರುತ್ತದೆ. ಆಗ ತಲಕಾಡು ಕ್ಷೇತ್ರದಲ್ಲಿ ಸಂಭವಿಸುವ ಪಂಚಲಿಂಗದರ್ಶನ ಮಹೋತ್ಸವದಲ್ಲಿ ಯಾರು ನಿರ್ಮಲ ಮನಸ್ಸಿನಿಂದ ಪೂಜಿಸುವರೋ ಅವರು ಮುಂದೆ ಶಿವಸಾಯುಜ್ಯವನ್ನು ಪಡೆಯುತ್ತಾರೆಂದು ಸ್ಕಂದ ಪುರಾಣದಲ್ಲಿ ಹೇಳಲಾಗಿದೆ.

ಪಂಚಲಿಂಗದರ್ಶನದ ಪೂಜಾವಿಧಾನ[ಬದಲಾಯಿಸಿ]

ಮೊದಲಿಗೆ ಇಲ್ಲಿರುವ ಕಾವೇರಿ ನದಿಗಿಂತಲೂ ಅನಾದಿಯಾಗಿರತಕ್ಕಂತಹ "ಗೋಕರ್ಣ ತೀರ್ಥದಲಿ" ಮಿಂದು ಗೋಕರ್ಣೇಶ್ವರ ದರ್ಶನಮಾಡಿ, ಅಲ್ಲಿಂದ ಉತ್ತರಕ್ಕಿರುವ ಚೌಡೇಶ್ವರಿ ದೇವಿಯನ್ನು ಪೂಜಿಸಿ ನಂತರ ವೈದ್ಯನಾಥೇಶ್ವರ ಸನ್ನಿಧಿಗೆ ಬಂದು ಪಂಚಲಿಂಗದರ್ಶನ ಯಾತ್ರೆಗೆ ಅಪ್ಪಣೆ ಕೋರಿ, ಉತ್ತರವಾಹಿನಿಯಲ್ಲಿ ಮಿಂದು, ಅರ್ಕೇಶ್ವರ ದರ್ಶನಮಾಡಿ ಮತ್ತೆ ವೈದ್ಯನಾಥೇಶ್ವರನಲ್ಲಿಗೆ ಬಂದು ವರದಿ ಸಲ್ಲಿಸಬೇಕು. ಆನಂತರ ದಕ್ಷಿಣ ವಾಹಿನಿಯಲ್ಲಿ ಮಿಂದು ಮರಳೇಶ್ವರನ ದರ್ಶನಮಾಡಿ ಯಥಾ ಪ್ರಕಾರ ವೈದ್ಯನಾಥೇಶ್ವರನಲ್ಲಿಗೆ ಬಂದು ವರದಿ ಒಪ್ಪಿಸಿ ಭಕ್ತ್ತಿಯಿಂದ ಪೂಜಿಸಿ ಪುನೀತರಾಗುವುದು. ಎಲ್ಲಕಡೆ ಸುತ್ತಿ ಇವಿಷ್ಟನ್ನು ಮಾಡಲು ಸಾಧ್ಯವಾಗದವರು ಗೋಕರ್ಣ ತೀರ್ಥದಲ್ಲಿ ಸ್ನಾನಮಾಡಿ ಗೋಕರ್ಣೇಶ್ವರ, ಚೌಡೇಶ್ವರಿ ಮತ್ತು ಪಂಚಲಿಂಗಗಳಲ್ಲಿ ಪ್ರಧಾನವಾದ ವೈದ್ಯನಾಥೇಶ್ವರನ ದರ್ಶನ ಮಾಡಿ ತೀರ್ಥ ಪ್ರಸಾದ ಪಡೆದರೂ ಪಂಚಲಿಂಗ ದರ್ಶನದ ಪುಣ್ಯ ಫಲ ದೊರೆಯುತ್ತದೆ.

ಗೋಕರ್ಣ ತೀರ್ಥ[ಬದಲಾಯಿಸಿ]

ಪಂಚಲಿಂಗದರ್ಶನ ಪೂಜೆಗೆ ಇದೇ ಮೂಲವಾಗಿದ್ದು ಮೊದಲು ಇಲ್ಲಿ ಮಿಂದು ಆನಂತರ ಮುಂದಿನ ಪೂಜಾಕೈಂಕರ್ಯಕ್ಕೆ ಅಣಿಯಾಗಬೇಕು. ಸಕಲ ಪಾಪತೊಳೆಯುವ ಪುಣ್ಯಪುಷ್ಕರಣಿ ಇದು. ಪ್ರತೀ ವರ್ಷ ತುಲಾಸಂಕ್ರಮಣ ಕಾಲದಲ್ಲಿ ಅಂದರೆ ಅಕ್ಟೋಬರ್-ನವೆಂಬರ್ ಮಾಸದಲ್ಲಿ ಕಾಶಿಯಿಂದ ಪವಿತ್ರಗಂಗೆ ಇಲ್ಲಿಗೆ ಹರಿದು ಬರುತ್ತಾಳೆಂದು ಪ್ರತೀತಿ ಇದೆ. ಹಾಗಾಗಿ ಗೋಕರ್ಣ ತೀರ್ಥ ಸ್ನಾನ ಅತ್ಯಂತ ಶ್ರೇಷ್ಠವೆನಿಸಿದೆ. ಇಲ್ಲಿ ಮಿಂದು ಪುನೀತರಾಗಲು ಭಕ್ತಸಮೂಹ ತುದಿಗಲಲ್ಲಿ ನಿಂತಿರುತ್ತದೆ.

ಇದುವರೆಗಿನ ಪಂಚಲಿಂಗ ದರ್ಶನಗಳು[ಬದಲಾಯಿಸಿ]

ಕ್ರಿ.ಶ.೨೪೭ ರಿಂದ ೨೬೬ರವರೆಗೆ ತಲಕಾಡನ್ನು ಆಳಿದ ಗಂಗರ ದೊರೆ ಹರಿವರ್ಮ ಕಾಲದಲ್ಲೇ ತಲಕಾಡಿನಲ್ಲಿ ಪಂಚಲಿಂಗ ದರ್ಶನ ಆಚರಣೆಯಲ್ಲಿತ್ತೆಂಬುದು ಇತಿಹಾಸವಾದರು ಇದರ ಬಗ್ಗೆ ಖಚಿತವಾದ ಮಾಹಿತಿ ಲಭ್ಯವಿಲ್ಲ. ಆದರೆ ಕಳೆದ ೨೦ನೇ ಶತಮಾನದಿಂದೀಚೆಗೆ ೧೯೦೮, ೧೯೧೫, ೧೯೨೫, ೧೯೩೮, ೧೯೫೨, ೧೯೫೯, ೧೯೬೬, ೧೯೭೯, ೧೯೮೬, ೧೯೯೩ರಲ್ಲಿ ಪಂಚಲಿಂಗ ದರ್ಶನ ನಡೆದಿದ್ದು ೨೧ನೇ ಶತಮಾನದ ಮೊದಲ ಪಂಚಲಿಂಗದರ್ಶನವಾಗಿ ೨೦೦೬ ನವೇಂಬರ್ ೨೦ ರಂದು ನಡೆದಿದ್ದು, ಆ ನಂತರ ೨೦೦೯ನೇ ನವೆಂಬರ್ ೧೬ರಂದು ನಡೆದಿದೆ, ಈ ವರ್ಷ ೨೦೧೩ರಲ್ಲಿ ಡಿಸೆಂಬರ್ ೨ ರಂದು ಪಂಚಲಿಂಗ ದರ್ಶನ ಮಹೋತ್ಸವ ಜರುಗುತ್ತಿದೆ. ಸಾಮಾನ್ಯವಾಗಿ ೧೨ ವರ್ಷಗಳಿಗೊಮ್ಮೆ ಮಾತ್ರ ಪಂಚಲಿಂಗ ದರ್ಶನ ನಡೆಯುತ್ತದೆಂಬ ತಪ್ಪುಕಲ್ಪನೆ ಜನರಲ್ಲಿದೆ. ಅದು ಸರಿಯಲ್ಲ. ಕಾರ್ತೀಕಮಾಸ, ಅಮಾವಾಸ್ಯೆ, ಐದು ಸೋಮವಾರ, ವೃಶ್ಚಿಕರಾಶಿ, ಕಹೂಯೋಗ ಈ ಅಂಶಗಳು ಒಟ್ಟಾಗಿ ಬಂದಾಗ ಎಷ್ಟು ವರ್ಷಗಳಿಗೆ ಬೇಕಾದರೂ ಪಂಚಲಿಂಗ ದರ್ಶನ ಬರಬಹುದು. ಇದುವರೆಗೆ ನಡೆದುಕೊಂಡು ಬಂದಿರುವ ಪಂಚಲಿಂಗದರ್ಶನಗಳಲ್ಲಿ ಇದನ್ನು ಕಾಣಬಹುದಾಗಿದೆ.

ತಲಕಾಡಿನ ಪೌರಾಣಿಕ ಹಿನ್ನಲೆ[ಬದಲಾಯಿಸಿ]

ಹಿಂದೊಮ್ಮೆ ವಸಿಷ್ಠ ಕುಲದ ಸೋಮದತ್ತನೆಂಬ ಋಷಿಯು ಸಶರೀರ ಮೋಕ್ಷ ಬಯಸಿ ವಾರಣಾಸಿಯಲ್ಲಿ ತಪಸ್ಸು ಮಾಡುತ್ತಿದ್ದಾಗ ಕಾಶಿವಿಶ್ವೇಶ್ವರ ಪ್ರತ್ಯಕ್ಷನಾಗಿ ನಿನ್ನ ಉದ್ದೇಶ ಫಲಿಸಬೇಕೆಂದರೆ ಕಾಶಿಗಿಂತಲೂ ಮಿಗಿಲಾದ ದಕ್ಷಿಣ ಗಂಗೆಯೆಂದು ಹೆಸರಾಗಿರುವ ಕಾವೇರಿ ನದಿತೀರದ ತಲವನಪುರದ ಸಿದ್ದಾರಣ್ಯ ಕ್ಷೇತ್ರಕ್ಕೆ ಹೋಗುವಂತೆ ಹೇಳುತ್ತಾನೆ. ಆಗ ಸೋಮದತ್ತನು ತನ್ನ ಶಿಷ್ಯರೊಡಗೂಡಿ ಸಿದ್ದಾರಣ್ಯ ಕ್ಷೇತ್ರಕ್ಕೆ ಬರುತ್ತಿದ್ದಂತೆಯೇ ಆನೆಗಳ ಹಿಂಡಿಗೆ ಸಿಲುಕಿ ಭಯಭೀತರಾಗಿ. 'ಆನೆ...ಆನೆ...' ಎಂದು ಕೂಗಿಕೊಂಡೇ ಗುರು ಶಿಷ್ಯರೆಲ್ಲಾ ಸಾವಿಗೀಡಾಗುತ್ತಾರೆ. ಸಾಯುವ ಸಮಯದಲ್ಲಿ ಆನೆಯ ಸ್ಮರಣೆಗೈದ ಅವರು ಮುಂದೆ ಸಿದ್ದಾರಣ್ಯ ಕ್ಷೇತ್ರದಲ್ಲೇ ಆನೆಗಳಾಗಿ ಜನ್ಮತಾಳುತ್ತಾರೆ. ಈ ಆನೆಗಳು ಪ್ರತಿದಿನ ಗೋಕರ್ಣ ತೀರ್ಥದಲ್ಲಿ ಮಿಂದು ಕಮಲಪುಷ್ಪಗಳನ್ನು ಸೊಂಡಿಲಿನಿಂದ ತೆಗೆದುಕೊಂಡು ಹೋಗಿ ಅಲ್ಲಿಯೇ ಸಮೀಪದಲ್ಲಿದ್ದ ಶಾಲ್ಮಲ ವೃಕ್ಷ(ಬೂರಗದಮರ) ದ ಪೊದೆಯೊಂದಕ್ಕೆ ನಿತ್ಯ ಪೂಜೆ ಮಾಡುತ್ತಿರುತ್ತವೆ. ಇದನ್ನು ಕಂಡು ಕುತೂಹಲಗೊಂಡ ತಲ ಮತ್ತು ಕಾಡ ಎಂಬ ಬೇಡರು ತಮ್ಮ ಕೊಡಲಿಗಳಿಂದ ಬೂರಗದ ಮರದ ಪೊದೆಯನ್ನು ಕತ್ತರಿಸಿದಾಗ ಕೊಡಲಿ ತಾಗಿ ಅಲ್ಲಿದ್ದ ಲಿಂಗದಿಂದ ರಕ್ತ ಚಿಮ್ಮುತ್ತದೆ. ಇದರಿಂದ ಭಯಗೊಂಡ ಬೇಡರು ನಡುಗತೊಡಗುತ್ತಾರೆ. ಆಗ ಅಶರೀರವಾಣಿಯೊಂದು ಕೇಳಿಬರುತ್ತದೆ. ಆಶರೀರವಾಣಿಯ ಆಣತಿಯಂತೆ ಆ ಬೇಡರು ಬೂರಗದ ಮರದ ಎಲೆ ಮತ್ತು ಕಾಯಿಗಳನ್ನು ಜಜ್ಜಿ ಅರೆದು ಲಿಂಗಕ್ಕೆ ಹಚ್ಚಿದಾಗ ರಕ್ತ ಚಿಮ್ಮುತ್ತದೆ. ಅದನ್ನು ಕುಡಿದ ತಲ ಮತ್ತು ಕಾಡರು ಹಾಗೂ ಆನೆ ಜನ್ಮ ತಾಳಿದ ಸೋಮದತ್ತ ಋಷಿ ಮತ್ತು ಅವನ ಶಿಷ್ಯರು ಮೋಕ್ಷ ಪಡೆಯುತ್ತಾರೆ. ಅಂದಿನಿಂದ ತಲ-ಕಾಡರೆಂಬ ಬೇಡರಿಂದಾಗಿ ತಲವನಪುರ "ತಲಕಾಡು" ಎಂದು ಹೆಸರಾದರೆ ಆನೆ ಜನ್ಮತಾಳಿ ಇಲ್ಲಿ ಮುಕ್ತ್ತಿಹೊಂದಿದ ಸೋಮದತ್ತ ಋಷಿಯಿಂದ ಸಿದ್ದಾರಣ್ಯ ಕ್ಷೇತ್ರವು ಗಜಾರಣ್ಯ ಕ್ಷೇತ್ರವಾಗಿ ಪ್ರಸಿದ್ಧಿಯಾಗುತ್ತದೆ. ಹಾಗೆಯೇ ತನಗೆ ತಾನೆ ವೈದ್ಯ ಮಾಡಿಕೊಂಡ ಪರಶಿವನು ವೈದ್ಯನಾಥೇಶ್ವರನಾಗಿ ಇಲ್ಲಿ ನೆಲೆಗೊಂಡಿದ್ದಾನೆಂಬುದು ಪುರಾಣ ಪ್ರಸಿದ್ಧ ಕಥೆ.

ತಲಕಾಡಿನ ಚಾರಿತ್ರಿಕ ಒಳನೋಟ[ಬದಲಾಯಿಸಿ]

ತಲಕಾಡಿನ ವಿಷಯವಾಗಿ ವಿಶೇಷವಾಗಿ ಗಂಗರಿಗೆ ಹೆಚ್ಚಿನ ಪ್ರಾಧಾನ್ಯವಿದೆ. ಇವರು ತಲಕಾಡಿನ ಗಂಗರೆಂದೇ ಪ್ರಸಿದ್ಧರು. ತಲಕಾಡುನ್ನು ಬಹು ವೈಭವದಿಂದ ಮೆರೆಸಿದ ಕೀರ್ತಿಕೂಡ ಇವರದೇ. ಕ್ರಿ.ಶ. ೨೪೭-೨೬೬ರಲ್ಲಿ ಗಂಗರಸ ಹರಿವರ್ಮನು ಇಂದಿನ ತಲಕಾಡನ್ನು ತಲವನಪುರ ಹೆಸರಿನಲ್ಲಿ ಆಳ್ವಿಕೆ ನಡೆಸಿದ್ದು ಮುಂದೆ ಈತನ ವಂಶಕ್ಕೆ ತಲಕಾಡು ರಾಜಧಾನಿಯಾಗಿ ಮುಂದುವರಿದು ೮ನೇ ಶತಮಾನದಲ್ಲಿ ಗಂಗರಾಜ ಶ್ರೀಪುರುಷನು ಅತ್ಯಂತ ವೈಭವದಿಂದ ತಲಕಾಡನ್ನು ಆಳಿದ್ದನೆಂದು ಚರಿತ್ರೆ ಸಾರುತ್ತದೆ. ನಂತರ ಗಂಗರು, ರಾಷ್ಟ್ರಕೂಟರ ಸಾಮಂತರಾಗಬೇಕಾಗುತ್ತದೆ. ೧೧ನೇ ಶತಮಾನದ ಆರಂಭದಲ್ಲಿ ಗಂಗರ ಕೈಬಿಟ್ಟು ತಲಕಾಡು ಚೋಳರ ಕೈವಶವಾಗಿ ರಾಜಪುರ ಎಂಬ ಹೊಸ ಹೆಸರು ಹೊಂದುತ್ತದೆ. ಆದರೆ ಹೆಚ್ಚು ಕಾಲ ಚೋಳರು ಇಲ್ಲಿ ನೆಲೆಗೊಳ್ಳಲು ಹೊಯ್ಸಳರು ಅವಕಾಶ ಕೊಡುವುದಿಲ್ಲ. ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನ ಚೋಳರ ಮೇಲೆ ಯುದ್ಧ ಮಾಡಿ ಅವರನ್ನು ತಮಿಳುನಾಡಿಗೆ ಅಟ್ಟಿ ತಲಕಾಡಿನ್ನು ವಶಪಡಿಸಿಕೊಂಡು 'ತಲಕಾಡುಗೊಂಡ' ಎಂಬ ಅಭಿದಾನಕ್ಕೆ ಪಾತ್ರನಾಗುತ್ತಾನೆ. ಅದೇ ಸಮಯಕ್ಕೆ ಕೀರ್ತಿನಾರಾಯಣ ದೇವಸ್ಥಾನವನ್ನು ಅದ್ಭುತವಾಗಿ ನಿರ್ಮಿಸುತ್ತಾನೆ. ಈಗಲೂ ತಲಕಾಡಿನಲ್ಲಿ ಎಲ್ಲಾ ದೇವಾಲಯಗಳಿಗಿಂತಲೂ, ಹೊಯ್ಸಳ ಶೈಲಿಯ ದೇವಾಲಯಗಳು ಹೆಚ್ಚು ಆಕರ್ಷಣೀಯ. ೧೪ನೇ ಶತಮಾನದ ತನಕವೂ ತಲಕಾಡು ಹೊಯ್ಸಳರ ಆಳ್ವಿಕೆಯಲ್ಲಿ ಮೆರೆದು ತದನಂತರ ವಿಜಯನಗರದ ಅರಸರ ಅಧಿಪತ್ಯಕ್ಕೆ ಒಳಪಡುತ್ತದೆ. ಮುಂದೆ ಕ್ರಿ.ಶ.೧೬೩೪ರಲ್ಲಿ ಇದು ಮೈಸೂರು ಅರಸರ ಪಾಲಾಗುತ್ತದೆ. ಕ್ರಿ.ಶ.೧೮೬೮ರ ವರೆಗು ತಲಕಾಡು ತಾಲ್ಲೂಕು ಕೇಂದ್ರವಾಗಿಯಿತ್ತು. ೧೮೮೨ನಲ್ಲಿ ತಾಲ್ಲೂಕು ಕೇಂದ್ರ ಟಿ.ನರಸೀಪುರಕ್ಕೆ ವರ್ಗಾವಣೆಯಾಗಿದೆ.

[೧]

ಉಲ್ಲೇಖ[ಬದಲಾಯಿಸಿ]

  1. ಕರ್ಮವೀರ :- ಬನ್ನೂರು ಕೆ.ರಾಜು.