ವಿಷಯಕ್ಕೆ ಹೋಗು

ಎನ್ ಜಿ ಪಟವರ್ಧನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾರಾಯಣ ಗೋವಿಂದ ಪಟವರ್ಧನ್ (19 ಜುಲೈ 1943 - 1 ಜುಲೈ 2024), ಸಾಮಾನ್ಯವಾಗಿ ಎನ್. ಜಿ. ಪಟವರ್ಧನ್ ಎಂದು ಪರಿಚಿತರಾಗಿದ್ದವರು, ಕನ್ನಡದ ಕವಿ, ಕಥೆಗಾರ, ಕಾದಂಬರಿಕಾರ, ಪ್ರಬಂಧಕಾರ, ವಿಮರ್ಶಕ, ಅನುವಾದಕ, ಸಂಪಾದಕ ಹಾಗೂ ಶಿಕ್ಷಣತಜ್ಞರಾಗಿದ್ದರು. ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅವರು ಗಮನಾರ್ಹ ಸಾಹಿತ್ಯಸೃಷ್ಟಿ ಮಾಡಿದರು. ಸುಮಾರು ಮೂರು ದಶಕಗಳ ಕಾಲ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿ ಹಾಗೂ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು.[೧]

ಆರಂಭಿಕ ಜೀವನ ಮತ್ತು ಶಿಕ್ಷಣ

[ಬದಲಾಯಿಸಿ]

ಪಟವರ್ಧನ್ ಅವರು 1943ರ ಜುಲೈ 19ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆಯಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಆಗಷ್ಟೇ ಮಂಗಳೂರಿನಲ್ಲಿ ಆರಂಭಗೊಂಡಿದ್ದ ಸ್ನಾತಕೋತ್ತರ ಕೇಂದ್ರ 'ಮಂಗಳ ಗಂಗೋತ್ರಿ' ಯಲ್ಲಿ ಕನ್ನಡ ವಿಷಯದಲ್ಲಿ ಎಂ.ಎ. ಪದವಿ ಪಡೆದರು. ನಂತರ ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್, ಮಂಗಳೂರಿನಲ್ಲಿ ಕೆಲಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಬಳಿಕ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಆರಂಭಿಸಿ, ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು.

ಸಾಹಿತ್ಯಸಾಧನೆ

[ಬದಲಾಯಿಸಿ]

ಪಟವರ್ಧನ್ ಅವರು ಕಾವ್ಯ, ಕಥೆ, ಕಾದಂಬರಿ, ಲಲಿತ ಪ್ರಬಂಧ, ವೈಚಾರಿಕ ಪ್ರಬಂಧ, ವಿಮರ್ಶೆ, ಅನುವಾದ, ಆತ್ಮಕಥನ ಹಾಗೂ ಸಂಪಾದನೆ ಸೇರಿದಂತೆ ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಪುಸ್ತಕಗಳನ್ನು ಬರೆದರು.

ಅವರ ಕಾವ್ಯಸಂಕಲನಗಳಲ್ಲಿ ಪ್ರೇಮಲಹರಿ, ಅಕ್ಷಯ, ಮಾನಸ, ಚಿಲುಮೆ, ಸಿಂಚನ, ತುಂತುರು, ಇನ್ನೂರು ಮುಕ್ತಕಗಳು, ಹೂಮಳೆ ಹಾಗೂ ಐವತ್ತೆಂಟು ಕವನಗಳು ಪ್ರಮುಖವಾಗಿವೆ.

ಲಲಿತ ಪ್ರಬಂಧ ಸಂಕಲನಗಳಲ್ಲಿ ಮೃತ್ಯುಂಜಯದ ಮಡಿಲಲ್ಲಿ, ಮುಗುಳ್ನಗೆ, ಹೂಹಾರ, ತೆರೆದ ಮನ, ಅಮೃತಬಳ್ಳಿಯ ಸನ್ನಿಧಿ ಮತ್ತು ಇತರ ಪ್ರಬಂಧಗಳು ಸೇರಿವೆ.

ಅವರ ವಿಚಾರ ವಿಹಾರ ವೈಚಾರಿಕ ಪ್ರಬಂಧ ಸಂಕಲನವಾಗಿದ್ದು, ಸಾಹಿತ್ಯ ಕ್ಷೇತ್ರಕ್ಕೆ ಬೆಳ್ತಂಗಡಿ ತಾಲೂಕಿನ ಕೊಡುಗೆ ವಿಮರ್ಶಾ ಗ್ರಂಥವಾಗಿದೆ. ಛಂದಸ್ಸಾರ ಛಂದಸ್ಸಿನ ಕುರಿತ ಅಧ್ಯಯನ ಗ್ರಂಥವಾಗಿದ್ದು, ಮೂರು ಮುದ್ರಣಗಳನ್ನು ಕಂಡಿದೆ. ಅದ್ಭುತ ರಾಮಾಯಣ ಅವರ ಅನುವಾದ ಕೃತಿಯಾಗಿದೆ. ಅಬ್ಬಲಿಗೆ ಹಾಗೂ ಬಿ. ರಾಮಚಂದ್ರ ಭಟ್ಟರ ಸಮಗ್ರ ಕೃತಿಗಳು ಅವರ ಸಂಪಾದಿತ ಗ್ರಂಥಗಳಾಗಿವೆ.

ಕಥಾಸಂಕಲನಗಳಲ್ಲಿ ಸ್ಥಿತ್ಯಂತರ ಮತ್ತು ಇತರ ಕಥೆಗಳು, ಕೊರಡು ಕೊನರಿತು ಹಾಗೂ ಮರೀಚಿಕೆ ಪ್ರಮುಖವಾಗಿವೆ. ಬಾಳ ಪಯಣ ಅವರ ಆತ್ಮಕಥನವಾಗಿದೆ.

ಅವರ ಪ್ರಮುಖ ಕಾದಂಬರಿಗಳಲ್ಲಿ ಶಾರದಾ, ರಾಗಲೀಲೆ ಹಾಗೂ ಆಟ ಸೇರಿವೆ.

ಸಾಹಿತ್ಯದ ವೈಶಿಷ್ಟ್ಯ

[ಬದಲಾಯಿಸಿ]

ಪಟವರ್ಧನ್ ಅವರ ಸಾಹಿತ್ಯದಲ್ಲಿ ಗ್ರಾಮೀಣ ಬದುಕು, ಮಾನವ ಸಂಬಂಧಗಳು, ಶಿಕ್ಷಣ, ಸಾಮಾಜಿಕ ಮೌಲ್ಯಗಳು ಹಾಗೂ ಸಾಂಸ್ಕೃತಿಕ ಸಂವೇದನೆಗಳು ಪ್ರಮುಖವಾಗಿ ವ್ಯಕ್ತವಾಗುತ್ತವೆ. ಸಾಹಿತ್ಯದ ಜೊತೆಗೆ ಸಂಗೀತ, ವಾಲಿಬಾಲ್ ಮತ್ತು ಕ್ರಿಕೆಟ್ ಅವರ ವಿಶೇಷ ಆಸಕ್ತಿಯ ಕ್ಷೇತ್ರಗಳಾಗಿದ್ದವು. ಈ ಆಸಕ್ತಿಗಳು ಅವರ ಸಾಹಿತ್ಯದಲ್ಲಿಯೂ ಪ್ರತಿಫಲಿಸಿವೆ. ರಾಗಲೀಲೆ ಸಂಗೀತವನ್ನು ಕೇಂದ್ರವಾಗಿಸಿಕೊಂಡ ಕಾದಂಬರಿಯಾಗಿದ್ದು, ಆಟ ಕ್ರಿಕೆಟ್ ಅನ್ನು ಮುಖ್ಯ ವಸ್ತುವಾಗಿಸಿಕೊಂಡ ಕಾದಂಬರಿಯಾಗಿದೆ.

ಪ್ರಭಾವ ಬೀರಿದ ವ್ಯಕ್ತಿಗಳು

[ಬದಲಾಯಿಸಿ]

ಎನ್. ಜಿ. ಪಟವರ್ಧನ್ ಅವರು ತಮ್ಮ ಆತ್ಮಕಥನ "ಬಾಳ ಪಯಣ" ದಲ್ಲಿ ತಮ್ಮ ಮೇಲೆ ಪ್ರೊ. ಎಸ್. ವಿ. ಪರಮೇಶ್ವರ ಭಟ್ಟ ಅವರು ಬೀರಿದ ಪ್ರಭಾವದ ಬಗ್ಗೆ ಬರೆದಿದ್ದಾರೆ. ಅವರ ಜೊತೆ ಪ್ರೊ. ಗುಂಡ್ಮಿ ಚಂದ್ರಶೇಖರ ಐತಾಳ, ಪ್ರೊ. ಲಕ್ಕಪ್ಪ ಗೌಡ ಮೊದಲದವರನ್ನೂ ನೆನಪಿಸಿದ್ದಾರೆ.

ವಿಮರ್ಶೆ

[ಬದಲಾಯಿಸಿ]

ಪಟವರ್ಧನ್ ಅವರ ಸಹಪಾಠಿ ಮತ್ತು ಅಚ್ಚುಮೆಚ್ಚಿನ ಸ್ನೇಹಿತ ಪ್ರೊ. ಬಿ. ಎ. ವಿವೇಕ ರೈ ಅವರು "ಆಟ" ಕೃತಿಗೆ ಮುನ್ನುಡಿಯಲ್ಲಿ ಹೀಗೆ ಬರೆಯುತ್ತಾರೆ: [೨]

"ಪ್ರೊ. ಎನ್ ಜಿ ಪಟವರ್ಧನ್ ಅವರು ಕನ್ನಡ ಪ್ರಾಧ್ಯಾಪಕರಾಗಿ , ಕವಿಗಳಾಗಿ , ಸಣ್ಣಕತೆಗಾರರಾಗಿ , ಪ್ರಬಂಧಕಾರರಾಗಿ ಕನ್ನಡಸಾಹಿತ್ಯದಲ್ಲಿ ಕಳೆದ ೫೩ವರ್ಷಗಳಿಂದ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡು ಬಂದಿದ್ದಾರೆ .ಅವರ  ಹನಿಕವನಗಳು , ಮುಕ್ತಕಗಳು ಬಹಳ ಜನಪ್ರಿಯವಾಗಿವೆ . ಅವರ ಆತ್ಮಕಥನ 'ಬಾಳಪಯಣ' ವನ್ನು ಓದಿ  ನಾನು ಬಹಳ ಮೆಚ್ಚಿಕೊಂಡಿದ್ದೇನೆ . ಅವರ 'ಶಾರದಾ 'ಕಾದಂಬರಿಯು ಅವರ ಸಮುದಾಯವಾದ  ಕರಾವಳಿ    ಚಿತ್ಪಾವನರ  ಬದುಕಿನ ಸಾಂಸ್ಕೃತಿಕ ಸಂಕಥನ . ಇತ್ತೀಚಿಗೆ ಅವರ ಎರಡನೆಯ ಕಾದಂಬರಿ 'ರಾಗಲೀಲೆ ' ಬೆಳಕು ಕಂಡಿದೆ .ಅದರಲ್ಲಿ ಅವರು ಸಾಮಾನ್ಯ ವ್ಯಕ್ತಿಯೊಬ್ಬ ಸಂಗೀತಗಾರನಾಗಿ ಪ್ರಸಿದ್ಧಿ ಪಡೆಯುವ ಮತ್ತು ಅವನ ಸುತ್ತ ಆವರಿಸುವ ಪ್ರೇಮದ ಸೆಳೆತಗಳ ಸಂಕೀರ್ಣತೆಯನ್ನು ಚಿತ್ರಿಸಿದ್ದಾರೆ .ಇದಕ್ಕಾಗಿ ಅವರು ಸಂಗೀತಗ್ರಂಥಗಳ ವಿಶೇಷ ಅಧ್ಯಯನವನ್ನು ನಡೆಸಿದ್ದಾರೆ . ಪ್ರೊ.ಪಟವರ್ಧನ್   ಅವರ ಹೊಸ ಕಾದಂಬರಿ 'ಆಟ ' ವು ಕ್ರಿಕೆಟ್ ಆಟವನ್ನೇ ಕೇಂದ್ರವಸ್ತುವನ್ನಾಗಿ ಇರಿಸಿಕೊಂಡು ಕಥೆಯನ್ನು ಹೆಣೆದ ವಿಶಿಷ್ಟ ಪ್ರಯೋಗ .ಕ್ರಿಕೆಟ್ ಬಗ್ಗೆ ಅವರಿಗೆ ಇರುವ ಅಪಾರ ಅನುಭವ ಮತ್ತು ತಿಳುವಳಿಕೆಯು ಈ ಕಾದಂಬರಿಯ ಪುಟಪುಟಗಳಲ್ಲಿ ಅನಾವರಣಗೊಂಡಿದೆ . ಒಂದು ಅರ್ಥದಲ್ಲಿ ಈ ಕೃತಿಯನ್ನು ಕ್ರಿಕೆಟ್ ಆಟದ ಕಥನ ರೂಪ ಎಂದು ಭಾವಿಸಬಹುದು . ಕ್ರಿಕೆಟ್ ನ ಸಾಧನಗಳು , ನಿಯಮಗಳು ವೈವಿಧ್ಯಗಳು , ಒಳಸುಳಿಗಳು , ಆಟಗಾರರ ಅಭಿಮಾನಿಗಳ ಪ್ರತಿಕ್ರಿಯೆಗಳು , ಅಂತಹ ಅಭಿಮಾನಗಳು ಪ್ರೇಮಪ್ರಕರಣಗಳಾಗಿ ರೂಪಾಂತರಗೊಳ್ಳುವುದು , ಪ್ರೇಮಿಗಳ ನಡುವಿನ ಸ್ಪರ್ಧೆ ಅಸೂಯೆಗಳ ತಾಕಲಾಟ -ಹೀಗೆ ಕ್ರಿಕೆಟ್ ಆಟವು ಬದುಕಿನ ಆಟದ ಜೊತೆಗೆ ಸಂಕೀರ್ಣ ಸಂಬಂಧಗಳನ್ನು ಹೊಂದುತ್ತದೆ." [೩]

ಮುಂದುವರೆಸಿ,

"ಪ್ರೊ. ಎನ್ ಜಿ ಪಟವರ್ಧನ್ ಮತ್ತು ನಾನು ಮಂಗಳೂರು ಸ್ನಾತಕೋತ್ತರ ಕೇಂದ್ರದಲ್ಲಿ ೧೯೬೮-೭೦ ರಲ್ಲಿ ಕನ್ನಡ ಎಂಎ ಮಾಡುತ್ತಿದ್ದಾಗ ಎರಡು ವರ್ಷ ಸಹಪಾಠಿಗಳು .ಮತ್ತೆ ಕಳೆದ ೫೩ ವರ್ಷಗಳಿಂದ ಆಪ್ತ ಸ್ನೇಹಿತರು .ಅವರ ಈ  ಕೃತಿಗೆ ನನ್ನಿಂದ ಮುನ್ನುಡಿ ಬರೆಯಿಸಿದ ಅವರ ಪ್ರೀತಿ ವಿಶ್ವಾಸಗಳಿಗೆ ಅಭಿಮಾನದ ವಂದನೆಗಳು." ಎಂದು ಬರೆದಿದ್ದಾರೆ.[೩]

ಪ್ರಶಸ್ತಿಗಳು ಮತ್ತು ಗೌರವಗಳು

[ಬದಲಾಯಿಸಿ]

ಲಲಿತ ಪ್ರಬಂಧ, ಕವನ, ಹನಿಕವನ ಹಾಗೂ ಕಥೆ ವಿಭಾಗಗಳಲ್ಲಿ ನಡೆದ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳಲ್ಲಿ ಅವರು ಹಲವು ಬಹುಮಾನಗಳನ್ನು ಪಡೆದಿದ್ದರು.

2007ರಲ್ಲಿ ಬೆಳ್ತಂಗಡಿಯಲ್ಲಿ ನಡೆದ ಪ್ರಥಮ ತಾಲೂಕು ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 2008ರಲ್ಲಿ ಬೆಳ್ತಂಗಡಿಯಲ್ಲಿ ನಡೆದ ಎಂಟನೇ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 2013ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದು, ಅದೇ ಸಂದರ್ಭದಲ್ಲಿ ಅವರಿಗೆ "ಜ್ಞಾನ ಸಿಂಧು" ಬಿರುದು ಪ್ರದಾನವಾಯಿತು.

2013ರಲ್ಲಿ ದೆಹಲಿಯಲ್ಲಿ ದೆಹಲಿ ಕನ್ನಡಿಗ ಪತ್ರಿಕೆ ಆಯೋಜಿಸಿದ್ದ 30ನೇ ರಾಷ್ಟ್ರೀಯ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯಸೇವೆಗಾಗಿ ಸನ್ಮಾನಿಸಲ್ಪಟ್ಟರು ಹಾಗೂ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದರು. 2007ರಲ್ಲಿ ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಅವರ ವಿಚಾರ ವಿಹಾರ ಕೃತಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಲಭಿಸಿತು. ರಾಜ್ಯ ಚುಟುಕು ಸಾಹಿತ್ಯ ಪರಿಷತ್ತಿನಿಂದ ಚುಟುಕು ಭಾರ್ಗವ ರಾಜ್ಯ ಪ್ರಶಸ್ತಿ ದೊರೆಯಿತು. ಲಯನ್ಸ್ ಸಂಸ್ಥೆಯಿಂದ ಜಿಲ್ಲಾ ಶ್ರೇಷ್ಠ ಕಾರ್ಯದರ್ಶಿ ಪ್ರಶಸ್ತಿ, ಗವರ್ನರ್ ಪ್ರಶಸ್ತಿ ಹಾಗೂ ಅಂತಾರಾಷ್ಟ್ರೀಯ ಕೀ ಪ್ರಶಸ್ತಿಗಳಿಗೂ ಅವರು ಭಾಜನರಾಗಿದ್ದರು.

ವೈಯಕ್ತಿಕ ಜೀವನ

[ಬದಲಾಯಿಸಿ]

ಪಟವರ್ಧನ್ ಅವರಿಗೆ ಸಂಗೀತ, ವಾಲಿಬಾಲ್ ಮತ್ತು ಕ್ರಿಕೆಟ್ ಬಗ್ಗೆ ವಿಶೇಷ ಆಸಕ್ತಿ ಇತ್ತು. ಸಾಹಿತ್ಯ ಮತ್ತು ಅಧ್ಯಾಪನದ ಜೊತೆಗೆ ಈ ಆಸಕ್ತಿಗಳನ್ನು ಜೀವನದುದ್ದಕ್ಕೂ ಉಳಿಸಿಕೊಂಡಿದ್ದರು. ಪಟವರ್ಧನ್ ಅವರ ಪತ್ನಿಯ ಹೆಸರು ವಿಜಯಲಕ್ಷ್ಮಿ.

ಪಟವರ್ಧನ್ ಅವರು 2024ರ ಜುಲೈ 1 ರಂದು ಉಜಿರೆಯಲ್ಲಿ ನಿಧನರಾದರು. ಅವರ ನಿಧನಕ್ಕೆ ಸಾಹಿತ್ಯ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ವಲಯದ ಅನೇಕ ಗಣ್ಯರು ಸಂತಾಪ ಸೂಚಿಸಿದರು.[೪]

ಉಲ್ಲೇಖಗಳು

[ಬದಲಾಯಿಸಿ]
  1. ↑ "Beltangady: Former S D M College principal N G Patwardhan passes away". Daiji World Media. Retrieved 12 July 2026.
  2. ↑ ಪಟವರ್ಧನ್, ಎನ್. ಜಿ. (2020). ಬಾಳ ಪಯಣ (First ed.). ಉಜಿರೆ, ಕರ್ನಾಟಕ: ಹಂಸಧ್ವನಿ ಪ್ರಕಾಶನ.{{cite book}}: CS1 maint: date and year (link)
  3. 1 2 ಪಟವರ್ಧನ್, ಎನ್. ಜಿ. (2023). ಆಟ (1 ed.). ಮೈಸೂರು: ವಿಜಯಲಕ್ಷ್ಮಿ ಪ್ರಕಾಶನ. pp. ಮುನ್ನುಡಿ.{{cite book}}: CS1 maint: date and year (link)
  4. ↑ "Renowned Kannada Writer Prof. N.G. Patwardhan's Literary and Personal Contributions Celebrated". SDM College, Ujire. Retrieved 12 July 2026.