ಎಂ. ಎಚ್. ಕೃಷ್ಣ.

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೈಸೂರುಹಟ್ಟಿ ಕೃಷ್ಣ ಅಯ್ಯಂಗಾರ್ ಅವರು ಮೈಸೂರು ಮಹಾರಾಜರ ಕಾಲದ ಪ್ರಸಿದ್ಧ ಇತಿಹಾಸ ತಜ್ಞ, ಇಂಡಾಲಜಿ ಪರಿಣಿತ, ಪುರಾತತ್ವ ಮತ್ತು ನಾಣ್ಯಶಾಸ್ತ್ರ ಪರಿಣಿತರು. ಇಪ್ಪತ್ತನೇ ಶತಮಾನದ ಪೂರ್ವಾರ್ಧದಲ್ಲಿ ಗಣನೀಯ ಕಾರ್ಯ ಮಾಡಿದ ಸಾಧಕ. ಅತ್ಯುತ್ತಮ ಶೈಕ್ಷಣಿಕ ಹಿನ್ನೆಲೆ, ಧಾರಾಳ ಅವಕಾಶ ಮತ್ತು ದಣಿವರಿಯದ ಪರಿಶ್ರಮ ಅವರ ಯಶಸ್ಸಿಗೆ ಕಾರಣ. ಉತ್ಖನನದಲ್ಲಿ ತರಭೇತಿಯನ್ನು ವಿದೇಶದಲ್ಲಿ ಪಡೆದ ಮೊದಲ ಕನ್ನಡಿಗರು.

ಮೂಲ ಹಿನ್ನೆಲೆ[ಬದಲಾಯಿಸಿ]

ಕೃಷ್ಣ ಅವರ ಪೂರ್ವಿಕರು ಕಳಲೆಯ ದಳವಾಯಿಗಳ ಆಶ್ರಿತರು. ಅವರ ತಂದೆ ರಂಗಯ್ಯಂಗಾರ್ ಖ್ಯಾತ ಸಂಸ್ಕೃತ ವಿದ್ವಾಂಸರು. ಮೈಸೂರು ಅರಮನೆಯ ಪಾಠಶಾಲೆಯಲ್ಲಿ ಸಂಸ್ಕೃತ ಪಂಡಿತರು. ಅವರು ಮಹಾರಾಜ ನಾಲ್ಮಡಿ ಕೃಷ್ಣರಾಜ ಒಡೆಯರಿಗೆ ಸಂಸ್ಕೃತ ಕಲಿಸಿದ ಗುರುಗಳು. ಅಷ್ಟು ಮಾತ್ರವಲ್ಲ ಅರಸರಿಗೆ ಬಹಳ ಆಪ್ತರು. ಅದರಿಂದ ಅವರು ಅರಮನೆಯ ಮುಖ್ಯಸ್ಥರಾಗಿದ್ದರು. ರಾಜಕಾರ್ಯ ನಿರ್ವಹಿಸಲು ಸದಾ ದೊರೆಗಳ ಅವಸರಕ್ಕೆ ಒದಗಬೇಕಿತ್ತು. ಅದಕೆಂದೆ ಅವರು ಅರಮನೆಯ ಹತ್ತಿರದ ಹಟ್ಟಿಯಲ್ಲೇ ವಾಸವಿದ್ದರು. ಹಾಗಾಗಿ ಅವರ ಮನೆತನಕ್ಕೆ 'ಮೈಸೂರು ಹಟ್ಟಿ' ಎಂಬ ಉಪಾಧಿ ಬಂದಿತು.

ಜನನ/ಬಾಲ್ಯ/ವಿದ್ಯಾಭ್ಯಾಸ[ಬದಲಾಯಿಸಿ]

  • ಕೃಷ್ಣ ಅವರು ಹುಟ್ಟಿದುದು ೧೮೯೨ ನೇ ಆಗಷ್ಟ ೧೯ ರಂದು. ಅರಮನೆಯ ಪಕ್ಕದ ಹಟ್ಟಿಯಲ್ಲಿ. ಬಾಲಕ ಕೃಷ್ಣನ ಶಿಕ್ಷಣ ಮೈಸೂರಲ್ಲಿಯೇ ಆಯಿತು. ಹೈಸ್ಕೂಲ ವಿದ್ಯಾಭ್ಯಾಸವನ್ನು ವೆಸ್ಲಿ ಹೈಸ್ಕೂಲಲ್ಲಿ ಮುಗಿಸಿ ಮಹಾರಾಜ ಕಾಲೇಜಿನಲ್ಲಿ ಪದವಿ ಶಿಕ್ಷಣಕ್ಕಾಗಿ ಸೇರಿದರು.
  • ಮೊದಲಿನಿಂದಲೂ ಇತಿಹಾಸ, ಪುರಾತತ್ತ್ವ ಮತ್ತು ನಾಣ್ಯ ಶಾಸ್ತ್ರಗಳಲ್ಲಿ ಆಸಕ್ತಿ. ಅವೇ ವಿಷಯಗಳನ್ನು ಕಾಲೇಜಿನಲ್ಲೂ ಅಧ್ಯಯನ ಮಾಡಿ ೧೯೧೩ ರಲ್ಲಿ ಪದವಿ ಪಡೆದರು. ನಂತರ ಮಹಾರಾಜಾ ಕಾಲೇಜಿನಲ್ಲೇ ಅಧ್ಯಾಪಕರಾದರು. ಅವರ ಅಧ್ಯಯನದ ಆಸಕ್ತಿಯಿಂದಾಗಿ ಮದ್ರಾಸಿಗೆ ಹೋಗಿ ಎಂ.ಎ. ಓದಿದರು. ಅಲ್ಲಿ ಇತಿಹಾಸದಲ್ಲಿ ಎಂ. ಎ. ಪದವಿಯನ್ನು ಪಡೆದರು.
  • ಅವರು ಅಧ್ಯಾಪನದ ಪ್ರಾರಂಭ ಮಾಡಿದ ಹೊಸದರಲ್ಲೇ ರಚಿಸಿದ ‘ಹಿಸ್ಟರಿ ಅಫ್ ಇಂಡಿಯಾ' ಪುಸ್ತಕಕ್ಕೆ ಪ್ರಶಸ್ತಿ ಬಂದಿತು.
  • ಎರಡು ವರ್ಷ ಮೈಸೂರು ವಿಶ್ವವಿದ್ಯಾನಿಲಯದಿಂದ ವಸ್ತು ಸಂಗ್ರಹಾಲಯಕ್ಕೆ ಎರವಲು ಸೇವೆಯ ಮೇಲೆ ಹೋದರು. ಅಲ್ಲಿರುವ ನಾಣ್ಯಗಳ ಅಧಿಕೃತ ಪಟ್ಟಿಯನ್ನು ಮೊದಲ ಬಾರಿಗೆ ಮಾಡಿದರು.

ವಿದೇಶ ಪ್ರವಾಸ[ಬದಲಾಯಿಸಿ]

  • ಅವರಿಗೆ ೧೯೨೧ರಲ್ಲಿ ರಾಯಲ್ ನ್ಯೂ ಮಾಸ್ಮೆಟಿಕ್ಸೊಸೈಟಿಯ ಸದಸ್ಯತ್ವ ದೊರಕಿತು. ಅವರನ್ನು ಹೆಚ್ಚಿನ ತರಬೇತಿಗಾಗಿ ಲಂಡನ್ ಗೆ ವಿಶ್ವವಿದ್ಯಾನಿಲಯದ ಕುಲಪತಿ -ಡಾ. ಬೃಜೇಂದ್ರನಾಥ್ ಸೀಲ್ ಕಳುಹಿಸಿದರು. ಅಲ್ಲಿ ಲಂಡನ್ ವಿಶ್ವ ವಿದ್ಯಾಲಯದಲ್ಲಿ ವಿ.ಇ.ಗಾರ್ಡಿನ ರ್ಮಾರ್ಗದರ್ಶನದಲ್ಲಿ ೧೯೨೩ ಪುರಾತನ ಮೂರ್ತಿ ಶಿಲ್ಪ, ವಾಸ್ತು ಶಿಲ್ಪ, ನಾಣ್ಯ ಶಾಸ್ತ್ರ , ಸಮಾಜಶಾಸ್ತ್ರ,ಇತಿಹಾಸಗಳ ಅಧ್ಯಯನ ಮುಂದುವರಿಯಿತು. ಅವರಿಗೆ ಉತ್ಖನನದಲ್ಲಿ ತರಬೇತಿ ದೊರೆತುದುದೂ ಆಗಲೇ.
  • ಖ್ಯಾತ ಪುರಾತತ್ತ್ವ ತಜ್ಞ ಪ್ಲಿಂಡರ್ಸ್ ಪೀತ್ರೆಯವರ ಜೊತೆ ಈಜಿಪ್ಟಿನಲ್ಲಿ ನಡೆಯುತಿದ್ದ ಉತ್ಖನನದಲ್ಲಿ ಭಾಗವಹಿಸಿದರು. ಅಲ್ಲಿ ಪಡೆದ ಪಿರಮಿಡ್ಡುಗಳಿರುವ ಪ್ರದೇಶದ ಉತ್ಖನನದ ಅನುಭವ ಅವರಿಗೆ ಬಹಳ ಉಪಯುಕ್ತವಾಯಿತು. ಈಜಿಪ್ಟನಲ್ಲಿ ವೈಜ್ಞಾನಿಕವಾಗಿ ಉತ್ಖನನ ಮಾಡುವ ವಿಧಾನವನ್ನು ಅರಿತರು.
  • ಆಕ್ಸಫರ್ಡ್, ಕೇಂಬ್ರಿಡ್ಜ್, ಪ್ಯಾರಿಸ್ ಬರ್ಲಿನ್ ವಿಶ್ವ ವಿದ್ಯಾಲಯಗಳ ಮ್ಯೂಜಿಯಂಗಳಲ್ಲಿನ ನಾಣ್ಯಗಳನ್ನು ಅಧ್ಯಯನ ಮಾಡಿ "ಡೆಕ್ಕನ್ನ್ಯುಮಾಸ್ಟಿಕ್ಸ್" ಮಹಾಪ್ರಬಂಧ ರಚಿಸಿದರು. ಅದಕ್ಕೆ ಅವರಿಗೆ ೧೯೨೬ ರಲ್ಲಿ ಡಿ. ಲಿಟ್ ಪದವಿ ದೊರೆಯಿತು. ಲಂಡ ವಿಶ್ವವಿದ್ಯಾಲಯದಲ್ಲಿ ಆ ಕುರಿತು ಏಳು ಉಪನ್ಯಾಸ ಮಾಡಲು ಆಹ್ವಾನ ಬಂದಿತು. ಈ ಗೌರವ ದೊರೆತ ಭಾರತೀಯರಲ್ಲಿ ಅವರೇ ಮೊದಲಿಗರು.
  • ಇಂಗ್ಲೆಂಡಿನಿಂದ ಹಿಂತಿರುಗಿದ ಮೇಲೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇರಿದರು. ಮೊದಲು ಇತಿಹಾಸದ ಸಹಾಯಕ ಪ್ರಾಧ್ಯಾಪಕರು, ನಂತರ ಪ್ರಾಧ್ಯಾಪಕರು. ಪ್ರಾಧ್ಯಾಪಕರಾಗಿದ್ದಾಗ-ಸನಾತನ ಭಾರತದ ಇತಿಹಾಸ, ಮಾನವಶಾಸ್ತ್ರ, ಸಾಂಸ್ಕೃತಿಕ ಇತಿಹಾಸ ಪುರಾತತ್ತ್ವ ಶೋಧ ವಿಷಯ ಗಳಲ್ಲಿ ಶ್ರೀ ಜಯಚಾಮರಾಜ ಒಡೆಯರ್, ಜಿ.ಎಸ್ ದೀಕ್ಷಿತ್,ಪಿ.ಎನ್ ಲಕ್ಷ್ಮೀನಾರಾಯಣ, ಷೇಕ್ಅಲಿ ಅವರಂತಹ ಘಟಾನುಘಟಿಗಳನ್ನು ತಯಾರು ಮಾಡಿದರು.

ಪ್ರಾಚ್ಯ ವಸ್ತುಗಳ ಸಂಗ್ರಹ, ಸಂರಕ್ಷಣೆ[ಬದಲಾಯಿಸಿ]

  • ಪುರಾತತ್ತ್ವ ಇಲಾಖೆ ತಮಿಳುನಾಡಿನ ಉದಕಮಂಡಲದಲ್ಲಿ ಬಹು ವರ್ಷಗಳ ಕಾಲ ಇದ್ದಿತು. ಅಲ್ಲಿ ದಕ್ಷಿಣದ ಎಲ್ಲ ಭಾಷೆಗಳ ಪ್ರಾಚ್ಯ ವಸ್ತುಗಳ ಸಂಗ್ರಹ, ಸಂರಕ್ಷಣೆ, ವಿಶ್ಲೇಷಣೆ ಪ್ರಕಟಣೆಯ ಕೆಲಸ ಅಲ್ಲಿ ನಡೆದಿತ್ತು. ಅದು ಮೈಸೂರಿನಲ್ಲಿ ತನ್ನ ಕಾರ್ಯ ಪ್ರಾರಂಭ ಮಾಡಿದಾಗ ಮುಖ್ಯಸ್ಥರಾಗಿ ಮುನ್ನಡಿಸಿದವರು ಎಂ.ಎಚ್ ಕೃಷ್ಣ.
  • ಮೈಸೂರು ಸರ್ಕಾರದ ಪುರಾತತ್ವ ಇಲಾಖೆಯಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದರು. ಅವರು ಇಪ್ಪತ್ತು ವರ್ಷಗಳ ಕಾಲ ಪುರಾತತ್ವ ಇಲಾಖೆಯ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಶಾಸ್ತ್ರೀಯ ವಿಧಾನದಿಂದ ಉತ್ಖನನ ಮಾಡುವಲ್ಲಿ ಹೊಸಶಕೆ ಪ್ರಾರಂಭಿಸಿದರು. ಮೈಸೂರು ಸಂಸ್ಥಾನದಲ್ಲಿ ಪುರಾತತ್ವ ಕಾರ್ಯ ಪ್ರಾರಂಭ ಮಾಡಿದ್ದೇ ಎಂ. ಎಚ್. ಕೃಷ್ಣ . ಅವರು ಬ್ರಹ್ಮ ಗಿರಿಯಲ್ಲಿ (1940) ಮತ್ತು ಚಂದ್ರವಳ್ಳಿಯಲ್ಲಿ (1939) ಮಾಡಿದ ವೈಜ್ಞಾನಿಕ ಉತ್ಖನನವು ಸಂಶೋಧನೆಗಳಿಗೆ ನಾಂದಿ ಹಾಡಿದವು.
  • ಚಿತ್ರದುರ್ಗದ ಹತ್ತಿರವಿರುವ ಚಂದ್ರವಳ್ಳಿಯ ಉತ್ಖನನದಿಂದ ೧೯೩೯ ರಲ್ಲಿ ಅದು ಶಾತವಾಹನರ ಕಾಲದ ಪಟ್ಟಣವಾಗಿತ್ತೆಂದೂ ಮತ್ತು ರೋಮ್ ಚಕ್ರಾಧಿಪತ್ಯದ ಜೊತೆ ವ್ಯಾಪಾರ ಸಂಬಂಧ ಹೊಂದಿತ್ತೆಂದೂ ಸಿದ್ಧ ಪಡಿಸಿದರು. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕಿನ ಸಿದ್ಧಾಪುರ ಗ್ರಾಮದಲ್ಲಿರುವ ಬ್ರಹ್ಮಗಿರಿ ಬೆಟ್ಟದಲ್ಲಿನ ಅಶೋಕನ ಶಾಸನಗಳು I ಮತ್ತು II ರಲ್ಲಿ ಉಲ್ಲೇಖೀಸಿದ " ಇಸಿಲ" ಪಟ್ಟಣದ ಅವಶೇಷಗಳನ್ನು ಶೋಧಿಸಿದರು. ೧೯೪೦ ರಲ್ಲಿ ಮಾಡಿದ ಉತ್ಖನನದಿಂದ ವಿವಿಧ ಸಾಂಸ್ಕೃತಿಕ ಪದರುಗಳನ್ನು ಗುರುತಿಸಿದರು.

ಪ್ರಾಗೈತಿಹಾಸ ಮತ್ತು ಇತಿಹಾಸ ಸಂಸ್ಕೃತಿ[ಬದಲಾಯಿಸಿ]

  • ಬೂದು ಬಣ್ಣದ ಮಣ್ಣಿನ ಪಾತ್ರೆ, ಮಸೆದ ಕೊಡಲಿಗಳು, ಕಬ್ಬಿಣದ ಉಪಕರಣದ ಚೂರು, ಕೆಂಪು ಮತ್ತು ಕಪ್ಪು ಮಣ್ಣಿನ ಪಾತ್ರೆಗಳ ಚೂರುಗಳು ದೊರೆತವು. ಅವುಗಳ ಮೇಲೆ ಬಿಳಿಬಣ್ಣದಲ್ಲಿ ರೇಖಾಚಿತ್ರ ಇದ್ದಿತು. ಅದು ಜನ ವಸತಿ ಇದ್ದ ಪ್ರದೇಶ ಎಂದು ಸಿದ್ಧ ಮಾಡಿದರು. ಕೊಪ್ಪದ ನೆಲೆಯಲ್ಲಿ ಕೆಲವು ಕಲ್ಲ ಗೋರಿಗಳನ್ನು ಪದರು ಶಾಸ್ತ್ರ ವಿಧಾನದಲ್ಲಿ ಉತ್ಖನನ ಮಾಡಿ
  • ೧. ಸೂಕ್ಷ್ಮ ಶಿಲಾಯುಗಸಂಸ್ಕೃತಿ,
  • ೨. ನವಶಿಲಾಯುಗ ಸಂಸ್ಕೃತಿ,
  • ೩. ಕಬ್ಬಿಣ ಯುಗದ ಬೃಹತ್ ಶಿಲಾಸಂಸ್ಕೃತಿ
  • ೪. ಇಸಿಲ ಸಂಸ್ಕೃತಿ,
  • ೫. ಸಾತವಾಹನ ಸಂಸ್ಕೃತಿ,
  • ೬. ಆದಿಕದಂಬಕಾಲದ ಸಂಸ್ಕೃತಿಯ ಗುರುತುಗಳು ಕಂಡು ಬಂದಿರುವುದನ್ನು ಪತ್ತೆ ಹಚ್ಚಿದರು.. ಅದುವರೆಗೂ ತಿಳಿಯಲಾಗದ ಎರಡು ಸಂಸ್ಕೃತಿಗಳ ಕಾಲಮಾನ ನಿಗದಿ ಪಡಿಸಲು ಅದರಿಂದ ಅನುಕೂಲವಾಯಿತು. ಆರು ಪ್ರಾಗೈತಿಹಾಸ ಮತ್ತು ಇತಿಹಾಸ ಸಂಸ್ಕೃತಿಗಳನ್ನು ಗುರುತಿಸಿದ ಕೀರ್ತಿ ಅವರದು.
  • ಬ್ರಹ್ಮಗಿರಿಯಲ್ಲಿ ಅಶೋಕನ ಕಾಲದ ಇಸಿಲಾ ಪಟ್ಟಣದ ನವಶಿಲಾಯುಗದ ಅವಶೇಷಗಳು ಮೌರ್ಯರ ಕಾಲದ ಪದಾರ್ಥಗಳು :ಲೋಹ, ಮಡಿಕೆ ಕುಡಿಕೆ,ನವಶಿಲಾಯುಗ ಮತ್ತು ಅಲ್ಫಾ ಶಿಲಾಯುಗದ ಕುರುಹು ಮೊದಲು ತಿಳಿಸಿದರು. ನಂತರ ಮಾರ್ಟಮರ್ಹೀಲರ್, ಪುರಾತತ್ವ ಮಹಾ ನಿರ್ದೇಶಕರು ಆ ಕೆಲಸ ಮುಂದುವರಿಸಿದರು. ಅವರ ಶಿಸ್ತುಬದ್ಧ ಫಲಿತಾಂಶಗಳು ಕೃಷ್ಣರ ಶೋಧನೆಯನ್ನು ಸಂಪೂರ್ಣವಾಗಿ ದೃಢ ಪಡಿಸಿದವು.

ನಿರ್ದೇಶಕರಾಗಿ[ಬದಲಾಯಿಸಿ]

  • ಅವರು ನಿರ್ದೇಶಕರಾದ ಅವಧಿಯಲ್ಲಿ ಪುರಾತತ್ವ ಇಲಾಖೆಯ ಕೆಲಸ ಬಹು ಚುರುಕಾಗಿ ಸಾಗಿತು. ಅವರು ಒಂದು ಸಾವಿರಕ್ಕೂ ಹೆಚ್ಚು ಶಾಸನಗಳ ಶೋಧಕ್ಕೆ ಕಾರಣರಾದರು. ಕರ್ನಾಟಕದಲ್ಲಿ ದೊರೆತ ಕನ್ನಡದ ಮೊದಲ ಬರಹದ ದಾಖಲೆಯಾದ ಹಲ್ಮಿಡಿ ಶಾಸನವನ್ನು ಸಂಶೋಧಿಸಿದ ಹಿರಿಮೆ ಅವರದು.
  • ಚಂದ್ರವಳ್ಳಿಯ ಶಾಸನವು ಅವರ ಅತ್ಯಂತ ಶ್ರೇಷ್ಠ ಶೋಧನೆ. ಅವರ ಪ್ರಮುಖ ಶೋಧನೆಯಲ್ಲಿ ಚಂದ್ರವಳ್ಳಿಯ ಉತ್ಕನನವೂ ಒಂದು. ಅಲ್ಲಿ ಕದಂಬ ವಂಶ ಸ್ಥಾಪಕನಾದ ಮಯೂರವರ್ಮನ ಶಾಸನವನ್ನು ಪತ್ತೆ ಹಚ್ಚಿದರು. (ಎಮ್.ಎ. ಆರ್. ಪುಟ. ೫೦-೬೦) ಅದು ಕ್ರಿ ಪೂ.೩ನೇ ಶತಮಾನದ ಪ್ರಾಕೃತ ಭಾಷೆಯ ಶಾಸನ. ಅಲ್ಲಿ ಅವನು ತನ್ನ ವಿಜಯಗಳನ್ನು ಕುರಿತಾಗಿ ಶಾಸನ ಮಾಡಿರುವನು ಎಂದು ಅರ್ಥೈಸಿದರು. ಆದರೆ ಪ್ರೊ. ಬಿ. ರಾಜಶೇಖರಪ್ಪ ಇತ್ತೀಚೆಗೆ ಅದನ್ನು ಕುರಿತು ವಿಭಿನ್ನವಾಗಿ ಎಂದು ಮರುವ್ಯಾಖ್ಯಾನ ಮಾಡಿರುವರು.
  • ಅವರ ಕಾಲದಲ್ಲಿ ಪ್ರಕಟವಾದ ಪುರಾತತ್ವ ಇಲಾಖೆಯ ವಾರ್ಷಿಕ ವರದಿಗಳು ಅನೇಕ ಸ್ವಾರಸ್ಯಕರ ಪುರಾತತ್ತ್ವ ಮತ್ತು ಶಿಲ್ಪ ಶಾಸ್ತ್ರದ ಸಂಗತಿಗಳನ್ನು ಹೊರ ಹಾಕುತ್ತವೆ(೧೯೨೯-೪೫). ಅವರ ಪ್ರಯತ್ನದಿಂದ ಕಾಕುಸ್ಥ ವರ್ಮನ ಹಲ್ಮಿಡಿಶಾಸನ ಬೆಳಕು ಕಂಡಿತು. ಕ್ರಿ. ಶ-೪೫೦- ಇಸವಿಯ ಶಾಸನವು ಆ ಮೊದಲೇ ದೊರೆತ ಮಂಗಳೇಶನ ಬದಾಮಿಯ ಶಾಸನಕ್ಕಿಂತ ಪುರಾತನವಾಗಿತ್ತು. ಇದರಿಂದ ಕನ್ನಡ ಭಾಷೆಯ ಇತಿಹಾಸದ ಪ್ರಾಚೀನತೆ ೧೦೦ ವರ್ಷಕ್ಕೂ ಹಿಂದೆ ಹೋಯಿತು.
  • ಅವರು ಮೈಸೂರಿನ ಅರಸರು ನಂಜನಗೂಡಿನ ಶ್ರೀಕಂಠೇಶ್ವರ ಮತ್ತು ಮೇಲುಕೋಟೆಯ ಚೆಲುವನಾರಾಯಣನಿಗೆ ನೀಡಿದ್ದ ರತ್ನಖಚಿತ ಮುಡಿಗಳ ಬಗ್ಗೆ ಅಧ್ಯಯನ ಮಾಡಿ ಪ್ರಕಟಿಸಿದರು.
  • ನಾಣ್ಯಶಾಸ್ತ್ರದಲ್ಲಿ ತಳಸ್ಪರ್ಶಿ ಅಧ್ಯಯನ ಸಾಗಿತು. ಹೊಯ್ಸಳ, ಪಶ್ಚಿಮ ಚಾಳುಕ್ಯ, ಪಾಂಡ್ಯ, ಪಲ್ಲವ ಚೇರ, ಕದಂಬರ ಕಾಲದ ನಾಣ್ಯಗಳ ವ್ಯಾಪಕ ಅಧ್ಯಯನ ನಡೆಸಿದರು (ಎಂ.ಎ.ಆರ್.೧೦೨೯).
  • ಕೃಷ್ಣ, ಕನ್ನಡ ನಾಡು ಮತ್ತು ನುಡಿಯ ಬಗ್ಗೆ ಅಪಾರ ಪ್ರೀತಿ, ಗೌರವ ಹೊಂದಿದ್ದರು. ಅವರು ಕರ್ನಾಟಕದ ಏಕೀಕರಣದ ಕನಸು ಕಂಡವರು. ಅದಕ್ಕೆಂದೆ ಅವರು ೧೩೩೮ ಅಖಂಡ ಕರ್ನಾಟಕದ ನಕ್ಷೆ ರಚಿಸಿದರು. ಕನ್ನಡ ಲಿಪಿಯ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸಿದರು. ಅವರು ಮಿಥಿಕ್ ಸೊಸೈಟಿಯಲ್ಲಿ ಸಕ್ರಿಯವಾಗಿ ಕೆಲಸ ಮಾಡಿ ಅದರ ಏಳಿಗೆಗ ಶ್ರಮಿಸಿದರು. ಅವರ ನೆನಪಿನಲ್ಲಿ ಮಿಥಿಕ್ ಸೊಸೈಟಿಯಲ್ಲಿ ಇಂಡಾಲಜಿ ಸಂಸ್ಥೆಯೊಂದು ಕೆಲಸ ಮಾಡುತ್ತಿದೆ.
  • ಕೃಷ್ಣ ವಿದ್ವತ್ಪೂರ್ಣ ಹಾಗೂ ಉಪಯುಕ್ತ ಪುರಾತತ್ತ್ವ ಇಲಾಖೆಯ ವರದಿಗಳನ್ನು ( ೧೯೨೫ ರಿಂದ ೧೯೪೫ ರ ವರೆಗೆ) ಪ್ರಕಟಿಸಿದರು.

ಉಜ್ವಲ ರಾಷ್ಟ್ರ ಪ್ರೇಮಿ[ಬದಲಾಯಿಸಿ]

  • ಅವರು ಉಜ್ವಲ ರಾಷ್ಟ್ರ ಪ್ರೇಮಿ. ಅವರಿಗೆ ಭಾರತ ಪರದೇಶಿಯರ ಆಧೀನದಲ್ಲಿರುವುದು ತುಂಬ ಅಸಮಧಾನ ತಂದಿತ್ತು. ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮಕಲು ಹಾತೊರೆಯುತಿದ್ದರು. ಆದರೆ ತಜ್ಞರ ಸೇವೆ ಸಮಾಜಕ್ಕೆ ಅತಿ ಅವಶ್ಯವೆಂದು ಮನಗಂಡಿದ್ದ ಮದನಮೋಹನ ಮಾಳವಿಯರು ಅವರಿಗೆ ನೇರವಾಗಿ ಚಳುವಳಿಯಲ್ಲಿ ತೊಡಗದೆ ಪರೋಕ್ಷವಾಗಿ ಭಾರತದ ಏಳಿಗೆಗೆ ಶ್ರಮಿಸಲು ಸಲಹೆ ಮಾಡಿದರು. ಹಿರಿಯರ ಸಲಹೆಯಂತೆ ಕೃಷ್ಣ ತಮ್ಮದೇ ಆದ ವಿಧಾನದಲ್ಲ್ಲಿ ರಾಷ್ಟ್ರಪ್ರೇಮವನ್ನು ವ್ಯಕ್ತ ಪಡಿಸಿದರು. ದೇಶಪ್ರೇಮಿ ಮಾಲವಿಯರ ಸಲಹೆಯಂತೆ ನೇರವಾಗಿ ಭಾಗವಹಿಸಲಿಲ್ಲ.
  • ಹಸ್ತಪ್ರತಿಗಳ ರಂಗದಲ್ಲೂ ದುಡುದಿರುವರು. ಹೈದರ್ನಾಮ, ಕೊಡಗಿನ ಕೈಫಿಯತ್, ಮೈಸೂರು ದೊರೆಗಳ ಪರಂಪರೆ ಕೈಫಿಯತ್ ಇತ್ಯಾದಿ ೧೧ (ಹನ್ನೊಂದು) ಹಸ್ತಪ್ರತಿಗಳ ಸಂಗ್ರಹ, ಅಧ್ಯಯನ, ವಿಶ್ಲೇಷಣೆ ಮಾಡಿದರು.
  • ಹಾಸನ ಮತ್ತು ಮೈಸೂರು ಜಿಲ್ಲೆಗಳ ಎಪಿಗ್ರಾಫಿಕಾ ಕರ್ನಾಟಕದ ಸಂಪುಟಗಳ ಅಪೆಂಡಿಕ್ಸ್ ಅನ್ನು ಪ್ರಕಟಿಸಿದರು.
  • ರಾಜ್ಯದ ಪ್ರವಾಸಿ ತಾಣಗಳನ್ನು ಜನಪ್ರಿಯಗೊಳಿಸಲು ಚಿಕ್ಕ ಚಿಕ್ಕ ಪ್ರವಾಸಿ ಕೈಪಿಡಿಗಳನ್ನು ಸಿದ್ಧ ಪಡಿಸಿದರು. ಅವುಗಳೆಲ್ಲದರ ಸಂಚಿತ ಪ್ರಕಟಣೆಯಾಗಿ ಮೈಸೂರು ರಾಜ್ಯದ ಪೂರ್ಣ ವಿವರವಿರುವ ಸಮಗ್ರ ಸಂಪುಟ ಸಿದ್ದವಾಯಿತು.
  • ಬಿ.ಎಲ್. ರೈಸ್-೧೮೬೯ರಲ್ಲಿ ಅವರು ಪ್ರಕಟಿಸಿದ ಶಾಸನ ಸಂಪುಟಗಳಲ್ಲಿನ ಸುಮಾರು-೨೦೦೦ ಶಾಸನಗಳ ‘ಅ' ಕಾರದಿಂದ ಹಿಡಿದು ‘ಕೆ' ವರೆಗಿನ ಪಟ್ಟಿ ತಯಾರಿಸಿದರು.
  • ಅವರು ಒಟ್ಟು ೧೯ ಗ್ರಂಥಗಳನ್ನು ಮತ್ತು ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ವಿವಿಧ ವಿದ್ವತ್ ಪತ್ರಿಕೆಗಳಿಗಾಗಿ -೬೦ ಲೇಖನಗಳನ್ನೂ ಬರೆದಿರುವರು.
  • ಹೃದಯಾಘಾತದಿಂದ ೧೯೪೭ರಲ್ಲಿ ಮೃತರಾದರು. ಆಗ ಅವರಿಗೆ ಇನ್ನೂ- ೫೬ ವರ್ಷಮಾತ್ರ.