ಎಂ.ಎಸ್.ಕೃಷ್ಣನ್
M. S. Krishnan | |
|---|---|
Portrait of M. S. Krishnan | |
| ಜನನ | Maharajapuram Seetharaman Krishnan 24 August 1898 |
| ಮರಣ | 24 April 1970 (aged 71) |
| ವೃತ್ತಿ | Geologist |
ಎಂ.ಎಸ್.ಕೃಷ್ಣನ್ (1898-1970). ಭಾರತದ ಭೂವಿಜ್ಞಾನಿಗಳಲ್ಲಿ ಅಗ್ರಗಣ್ಯರೆನಿಸಿದ್ದರು.
ಬಾಲ್ಯ ಮತ್ತು ವಿದ್ಯಾಭ್ಯಾಸ
[ಬದಲಾಯಿಸಿ]ಮಹಾರಾಜಪುರಂ ಸೀತಾರಾಂ ಕೃಷ್ಣನ್ 1898ರ ಆಗಸ್ಟ್ 24ರಂದು ತಂಜಾವೂರು ಜಿಲ್ಲೆಯ ಮಹಾರಾಜಪುರಂ ಎಂಬ ಹಳ್ಳಿಯಲ್ಲಿ ಜನ್ಮ ತಳೆದರು. ಅವರ ಮನೆತನ ವೈದಿಕ ವಿದ್ವಾಂಸರದು. ಈ ಪರಿಸರದಲ್ಲಿ ಬೆಳೆದ ಕೃಷ್ಣನ್ ಮುಂದೆ ಮದರಾಸು ವಿಶ್ವವಿದ್ಯಾಲಯದ ಪ್ರೆಸಿಡೆನ್ಸಿ ಕಾಲೇಜನ್ನು ಸೇರಿ ಭೂವಿಜ್ಞಾನವನ್ನು ವಿಶೇಷವಾಗಿ ಅಧ್ಯಯನ ಮಾಡಿ 1919ರಲ್ಲಿ ಉತ್ತಮ ಶ್ರೇಣಿಯಲ್ಲಿ ಬಿ.ಎ. (ಆನರ್ಸ್) ಪದವಿಯನ್ನು ಪಡೆದರು. ಆ ಕಾಲೇಜಿನಲ್ಲೇ ಅಧ್ಯಾಪಕರಾಗಿ ಸುಮಾರು ಎರಡು ವರ್ಷ ಸೇವೆ ಸಲ್ಲಿಸಿ 1921ರಲ್ಲಿ ಎಂ.ಎ. ಪದವೀಧರರಾದರು. ಅಷ್ಟರಲ್ಲೇ ಈ ಪ್ರತಿಭಾವಂತ ಯುವಕನಿಗೆ ಲಂಡನ್ನಿನ ಇಂಪೀರಿಯಲ್ ಕಾಲೇಜ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ ಉನ್ನತವ್ಯಾಸಂಗಕ್ಕಾಗಿ ಸರ್ಕಾರದ ವಿದ್ಯಾರ್ಥಿ ವೇತನ ದೊರೆಯಿತು. ಅಲ್ಲಿ 1922ರಲ್ಲಿ ಉತ್ತಮ ಶ್ರೇಣಿಯ ಎ.ಆರ್.ಸಿ.ಎಸ್. ಪದವಿಯನ್ನೂ ಮರುವರ್ಷ ಡಿ.ಐ.ಸಿ. ಪದವಿಯನ್ನೂ ಸಂಪಾದಿಸಿದರು. ಮುಂದೆ ಪ್ರೊಫೆಸರ್ ಡಬ್ಲ್ಯೂ. ಡಬ್ಲ್ಯೂ. ವಾಟ್ಸ್ ಮತ್ತು ಡಾ: ಜೆ. ಡಬ್ಲ್ಯೂ ಇವಾನ್ಸ್ ಅವರ ಮಾರ್ಗ ದರ್ಶನದಲ್ಲಿ ಗುಜರಾತ್ ರಾಜ್ಯದ ಕಾಥೆವಾರ್ ಜಿಲ್ಲೆಯ ಗಿರ್ನಾರ್ ಮತ್ತು ಓಷಾಂ ಬೆಟ್ಟಗಳಲ್ಲಿನ ವಿವಿಧ ಶಿಲೆಗಳನ್ನು ಕುರಿತು ಸಂಶೋಧನೆ ನಡೆಸಿ 1924ರಲ್ಲಿ ಲಂಡನ್ ವಿಶ್ವವಿದ್ಯಾಲಯದ ಪಿಎಚ್.ಡಿ. ಪದವೀಧರರಾದರು. ಇದರೊಡನೆ ಅದೇ ಕಾಲೇಜಿನಲ್ಲಿ ಗಣಿಯ ಕೆಲಸದ ಬಗ್ಗೆ ಹೆಚ್ಚಿನ ತರಬೇತಿಯನ್ನೂ ಪಡೆದರು. ಇವರ ಪ್ರತಿಭೆಯನ್ನು ಗಮನಿಸಿದ ಬ್ರಿಟಿಷ್ ಸರ್ಕಾರ ಇವರನ್ನು ಭಾರತದ ಭೂವ್ಶೆಜ್ಞಾನಿಕ ಇಲಾಖೆಯಲ್ಲಿ ಉನ್ನತ ವರ್ಗದ ಅಧಿಕಾರಿಯನ್ನಾಗಿ ನೇಮಿಸಿತು. ಬಹುಶಃ ಈ ಇಲಾಖೆಗೆ ಸೇರಿದ ಮೊತ್ತಮೊದಲಿನ ಡಾಕ್ಟರ್ ಪದವೀಧರರು ಕೃಷ್ಣನ್ ಎನ್ನಬಹುದು. 1935-36ರಲ್ಲಿ ಸರ್ಕಾರ ಇವರನ್ನು ಉನ್ನತ ತರಬೇತಿಗಾಗಿ ಮತ್ತೆ ಇಂಗ್ಲೆಂಡ್ ಮತ್ತು ಅಮೆರಿಕದ ಸಂಯುಕ್ತ ಸಂಸ್ಥಾನಗಳಿಗೆ ಕಳುಹಿಸಿತು. ಈ ಸದವಕಾಶವನ್ನು ಉಪಯೋಗಿಸಿಕೊಂಡು ಕೃಷ್ಣನ್ ಲಂಡನ್ನಿನ ತಮ್ಮ ಹಳೆಯ ಕಾಲೇಜಿನಲ್ಲಿ ಅನ್ವಯ ಭೂಭೌತ ವಿಜ್ಞಾನದಲ್ಲಿ ಹೆಚ್ಚಿನ ಪರಿಶ್ರಮ ಗಳಿಸಿದರು. ಅನಂತರ ಅಮೆರಿಕ ಸಂಯುಕ್ತ ಸಂಸ್ಥಾನದ ಭೂಶೋಧನ ಇಲಾಖೆಯಲ್ಲೂ ಖ್ಯಾತ ಹಾರ್ವರ್ಡ್ ಮತ್ತು ವಿಸ್ಕಾನ್ಸಿನ್ ವಿಶ್ವವಿದ್ಯಾನಿಲಯಗಳ ಭೂವೈಜ್ಞಾನಶಾಖೆಗಳ ಸಂಶೋಧನಾಲಯಗಳಲ್ಲೂ ಹೆಚ್ಚಿನ ಅಧ್ಯಯನ ನಡೆಸುವುದರ ಮೂಲಕ ತರಬೇತಿಯನ್ನು ಪಡೆದರು.
ಸಂಶೋಧನೆ
[ಬದಲಾಯಿಸಿ]ಈ ಖ್ಯಾತ ಭೂವಿಜ್ಞಾನಿ ಭಾರತ ಭೂವೈಜ್ಞಾನಿಕ ಇಲಾಖೆಯ ವಿವಿಧ ಹುದ್ದೆಗಳಲ್ಲಿದ್ದು ಉತ್ತಮ ಸೇವೆಯನ್ನು ಸಲ್ಲಿಸಿದ್ದಾರೆ. 1949ರಲ್ಲಿ ಕೊಂಚ ಕಾಲದ ಮತ್ತು 1951ರಲ್ಲಿ ಇಲಾಖೆಯ ಕಾಯಂ ಅವಧಿಯ ನಿರ್ದೇಶಕರಾಗಿ ನೇಮಕಗೊಂಡರು. ಈ ಹುದ್ದೆಯನ್ನು ಅಲಂಕರಿಸಿದ ಪ್ರಪ್ರಥಮ ಭಾರತೀಯರೇ ಕೃಷ್ಣನ್. ಅವರ ಸೇವಾವಧಿಯಲ್ಲಿ ದೇಶದ ನಾನಾ ಭಾಗಗಳಲ್ಲಿ-ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ, ಅಸ್ಸಾಮಿನಿಂದ ಬಲೂಚಿಸ್ತಾನದ ವರೆಗೆ- ಅವರು ದಕ್ಷತೆಯಿಂದ ಭೂಶೋಧನೆ ನಡೆಸಿದುದದೇ ಅಲ್ಲದೆ ಅನೇಕ ಯುವಕ ಭೂವಿಜ್ಞಾನಿಗಳಿಗೆ ಉತ್ತಮ ಮಾರ್ಗದರ್ಶನ ಸಹ ನೀಡಿದರು. ಸುಮಾರು 450 ಸಂಶೋಧನ ಲೇಖನಗಳನ್ನೂ, 8-10 ಪುಸ್ತಿಕೆಗಳನ್ನೂ ಪ್ರಕಟಿಸಿದ ಕೀರ್ತಿ ಅವರದು. ಈ ಅನುಭವಗಳ ಹಿನ್ನಲೆಯಲ್ಲಿ ಬರೆದ ಜಿಯಾಲಜಿ ಆಫ್ ಇಂಡಿಯ ಅಂಡ್ ಬರ್ಮ ಎಂಬ ಗ್ರಂಥ 1943ರಲ್ಲಿ ಪ್ರಕಟವಾಯಿತು. ಭಾರತದ (ಉಪಖಂಡದ) ಭೂವಿಜ್ಞಾನವನ್ನು ತಿಳಿಯಲು ಇದು ಅತ್ಯಂತ ಅವಶ್ಯಕ ಪುಸ್ತಕ. ಇದು ರಷ್ಯನ್ ಭಾಷೆಗೂ ಭಾಷಾಂತರಗೊಂಡಿದೆಯೆಂದರೆ ಇದರ ವ್ಶೆಜ್ಞಾನಿಕ ಮೌಲ್ಯವನ್ನು ಒತ್ತಿ ಹೇಳಬೇಕಾಗಿಲ್ಲ. ಸದ್ಯದಲ್ಲಿ ಉತ್ತಮ ಇಂಧನದ ಆಗರವೆನಿಸಿದ ನೈವೇಲಿ ಲಿಗ್ನೈಟ್ ಬೃಹತ್ ಯೋಜನೆ ಕೃಷ್ಣನ್ ಅವರ ಕೊಡುಗೆ. ದೇಶದ ವಿವಿಧ ಪ್ರದೇಶಗಳಲ್ಲಿನ ಕಬ್ಬಿಣದ ಅದರು ನಿಕ್ಷೇಪಗಳನ್ನು ಇವರು ವಿವರವಾಗಿ ಅಧ್ಯಯನ ಮಾಡಿ ಲೇಖನಗಳನ್ನು ಪ್ರಕಟಿಸಿದ್ದಾರೆ.
ನಿವೃತ್ತ ಜೀವನ
[ಬದಲಾಯಿಸಿ]ಭೂವೈಜ್ಞಾನಿಕ ಇಲಾಖೆಯಿಂದ ನಿವೃತ್ತರಾದಮೇಲೆ ಧನಬಾದ್‍ನಲ್ಲಿರುವ ಭಾರತೀಯ ಗಣಿವಿಜ್ಞಾನ ಮತ್ತು ಅನ್ವಯ ಭೂವಿಜ್ಞಾನ ಶಾಲೆಯ ನಿರ್ದೇಶಕರಾಗಿಯೂ ಅನಂತರ ಕೊಂಚಕಾಲ ಆಂಧ್ರ ವಿಶ್ವವಿದ್ಯಾಲಯದ ಭೂವಿಜ್ಞಾನ ಶಾಖೆಯ ಪ್ರಾಧ್ಯಾಪಕರಾಗಿಯೂ ಕೆಲಸಮಾಡಿದರು. ಹೈದರಾಬಾದಿನಲ್ಲಿರುವ ರಾಷ್ಟ್ರೀಯ ಭೂಭೌತ ವಿಜ್ಞಾನ ಸಂಶೋಧನ ಕೇಂದ್ರದ ಸ್ಥಾಪಕರು ಮತ್ತು ಪ್ರಥಮ ನಿರ್ದೇಶಕರು ಕೃಷ್ಣನ್ ಅವರೇ. ಅಲ್ಲದೆ ರಾಷ್ಟ್ರದ ಹಲವಾರು ವಿಜ್ಞಾನ ಸಂಘಗಳ ಸ್ಥಾಪಕ ಸದಸ್ಯರಾಗಿ ಅಮೂಲ್ಯ ಸೇವೆಯನ್ನು ರಾಷ್ಟ್ರದ ವ್ಶೆಜ್ಞಾನಿಕ ಪ್ರಗತಿಗೆ ಸಲ್ಲಿಸಿದ ಕೀರ್ತಿ ಈ ಹಿರಿಯ ವಿಜ್ಞಾನಿಯದಾಗಿದೆ.
ಪ್ರಶಸ್ಥಿಗಳು
[ಬದಲಾಯಿಸಿ]ಇವರ ವ್ಶೆಜ್ಞಾನಿಕ ಸಂಶೋಧನೆಗಳನ್ನು ಮೆಚ್ಚಿ ದೇಶ ವಿದೇಶಗಳ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಭೂವಿಜ್ಞಾನವೇ ಅಲ್ಲದೆ ಕೃಷ್ಣನ್ ಅವರಿಗೆ ಸಾಹಿತ್ಯ, ಸಂಗೀತ ಮತ್ತು ಜ್ಯೋತಿಷ ಶಾಸ್ತ್ರಗಳಲ್ಲಿ ವಿಶೇಷ ಆಸಕ್ತಿ. ಭಾರತ ಸರ್ಕಾರ 1970ರಲ್ಲಿ ಇವರಿಗೆ ಪದ್ಮಭೂಷಣ ಪ್ರಶಸ್ತಿಯನ್ನಿತ್ತು ಗೌರವಿಸಿತು.
ನಿಧನ
[ಬದಲಾಯಿಸಿ]ಈ ಪ್ರತಿಭಾವಂತ ಹಿರಿಯವಿಜ್ಞಾನಿ 1970 ಏಪ್ರಿಲ್ 21ರಂದು ತಂಜಾವೂರಿನಲ್ಲಿ ಕಾಲವಾದರು.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |