ಉರು ಹೊಡೆಯುವುದು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉರು ಹೊಡೆಯುವುದು ಪುನರಾವರ್ತನೆಯನ್ನು ಆಧರಿಸಿದ ಕಂಠಪಾಠ ಮಾಡುವ ಒಂದು ತಂತ್ರ. ಇದರ ಉದ್ದೇಶವೇನೆಂದರೆ ಒಬ್ಬರು ಒಂದು ಸಾಮಗ್ರಿಯನ್ನು ಹೆಚ್ಚೆಚ್ಚು ಪುನರಾವರ್ತಿಸಿದಂತೆ ಅವರು ಅದರ ಅರ್ಥವನ್ನು ಬೇಗ ನೆನಪು ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅರ್ಥಪೂರ್ಣ ಕಲಿಕೆ, ಸಹಾಯಕ ಕಲಿಕೆ, ಮತ್ತು ಸಕ್ರಿಯ ಕಲಿಕೆ ಉರು ಹೊಡೆಯುವುದರ ಕೆಲವು ಪರ್ಯಾಯಗಳಲ್ಲಿ ಸೇರಿವೆ.

ಒಂದು ನಾಟಕದಲ್ಲಿ ತಮ್ಮ ಸಾಲುಗಳನ್ನು ಕಲಿಯುವುದು ಅಥವಾ ಒಂದು ದೂರವಾಣಿ ಸಂಖ್ಯೆಯ ಬಾಯಿಪಾಠದಂತಹ ಕ್ಷಿಪ್ರ ಸ್ಮರಣದ ಅಗತ್ಯವಿದ್ದಾಗ ಉರು ಹೊಡೆಯುವ ವಿಧಾನಗಳನ್ನು ವಾಡಿಕೆಯಂತೆ ಬಳಸಲಾಗುತ್ತದೆ.

ಮೂಲಭೂತ ಜ್ಞಾನದಲ್ಲಿ ನೈಪುಣ್ಯ ಗಳಿಸಲು ಉರು ಹೊಡೆಯುವುದನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಶಾಲಾ ವಿಷಯಗಳಲ್ಲಿ ಉರು ಹೊಡೆಯುವುದನ್ನು ಆಗಾಗ್ಗೆ ಬಳಸಲಾಗುವ ಕೆಲವು ಉದಾಹರಣೆಗಳು: ಓದುವಿಕೆಯಲ್ಲಿ ಶಾಬ್ದಶಿಕ್ಷಾವಿಧಾನ, ರಸಾಯನ ಶಾಸ್ತ್ರದಲ್ಲಿ ಆವರ್ತಕ ಕೋಷ್ಟಕ, ಗಣಿತದಲ್ಲಿ ಮಗ್ಗಿ (ಗುಣಾಕಾರ ಪಟ್ಟಿಗಳು), ವೈದ್ಯಶಾಸ್ತ್ರದಲ್ಲಿ ಅಂಗರಚನಾಶಾಸ್ತ್ರ, ಕಾನೂನಿನಲ್ಲಿ ಮೊಕದ್ದಮೆಗಳು ಅಥವಾ ಕಾಯಿದೆಗಳು, ಯಾವುದೇ ವಿಜ್ಞಾನದಲ್ಲಿ ಮೂಲ ಸೂತ್ರ, ಇತ್ಯಾದಿ. ವ್ಯಾಖ್ಯಾನದ ಪ್ರಕಾರ, ಉರು ಹೊಡೆಯುವುದು ಗ್ರಹಿಸುವಿಕೆಯನ್ನು ಬಿಟ್ಟು ಬಿಡುತ್ತದೆ, ಹಾಗಾಗಿ ಅದು ಸ್ವತಃ ಯಾವುದೇ ಉನ್ನತ ಮಟ್ಟದ ಯಾವುದೇ ಸಂಕೀರ್ಣ ವಿಷಯದಲ್ಲಿ ಪಾರಂಗತನಾಗುವುದಕ್ಕೆ ಪರಿಣಾಮಕಾರಿಯಲ್ಲದ ಸಾಧನವಾಗಿದೆ. ಉದಾಹರಣೆಗೆ, ಉರು ಹೊಡೆಯುವುದರ ಒಂದು ದೃಷ್ಟಾಂತವನ್ನು ಪರೀಕ್ಷೆಗಳಿಗೆ ಬೇಗನೆ ಸಿದ್ಧಗೊಳ್ಳುವಲ್ಲಿ ಗಮನಿಸಬಹುದು.

ಉರು ಹೊಡೆಯುವುದರಲ್ಲಿ ತೊಡಗಿಕೊಳ್ಳುವವನು ತಾನು ಬರೆದದ್ದನ್ನು ಅಥವಾ ಹೇಳಿದ್ದನ್ನು ತಿಳಿದುಕೊಂಡಿದ್ದೇನೆ ಎಂಬ ತಪ್ಪು ಅಭಿಪ್ರಾಯ ನೀಡಬಹುದು. ಅನೇಕ ಹೊಸ ಪಠ್ಯಕ್ರಮದ ಮಾನದಂಡಗಳು ಉರು ಹೊಡೆಯುವುದನ್ನು ಬಲವಾಗಿ ವಿರೋಧಿಸುತ್ತವೆ. ಉದಾಹರಣೆಗೆ, ಅಮೇರಿಕಾದಲ್ಲಿ ವಿಜ್ಞಾನ ಮತ್ತು ಗಣಿತ ಮಾನದಂಡಗಳು ವಾಸ್ತವಾಂಶಗಳ ಬರಿಯ ನೆನಪಿನ ಬದಲು ಆಳದ ತಿಳುವಳಿಕೆಯ ಪ್ರಾಮುಖ್ಯತೆಯನ್ನು ಸ್ಪಷ್ಟವಾಗಿ ಒತ್ತಿ ಹೇಳುತ್ತವೆ. ಆದರೆ ಸಾಂಪ್ರದಾಯಿಕ ಶಿಕ್ಷಣದ ಪ್ರತಿಪಾದಕರು ಅಮೇರಿಕಾದ ಹೊಸ ಮಾನದಂಡಗಳನ್ನು ಟೀಕಿಸಿದ್ದಾರೆ. ಅವರ ಪ್ರಕಾರ ಈ ಮಾನದಂಡಗಳು ಮೂಲಭೂತ ಸಂಗತಿಗಳು ಮತ್ತು ಪ್ರಾಥಮಿಕ ಅಂಕಗಣಿತವನ್ನು ತಾತ್ಸಾರದಿಂದ ಕಂಡು, ವಿಷಯಗಳನ್ನು ಪ್ರಕ್ರಿಯೆ ಆಧಾರಿತ ಕೌಶಲಗಳಿಂದ ಬದಲಾಯಿಸುತ್ತಿವೆ.[೧]

ಈ ಪದ್ದತಿಯನ್ನು ಚೀನಾ, ಭಾರತ, ಪಾಕಿಸ್ತಾನ, ಮಲೇಷ್ಯಾ, ಸಿಂಗಾಪುರ್, ಜಪಾನ್, ರೊಮೇನಿಯಾ, ಇಟಲಿ, ದಕ್ಷಿಣ ಕೋರಿಯಾ, ಟರ್ಕಿ, ಗ್ರೀಸ್, ಮಾಲ್ಟಾ ದೇಶದ ಶಾಲೆಗಳಲ್ಲಿ ವ್ಯಾಪಕವಾಗಿ ಆಚರಿಸಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. "Understanding the Revised NCTM Standards: Arithmetic is Still Missing!". Archived from the original on 2018-08-17. Retrieved 2017-05-21.