ಉದಾಯಿನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉದಾಯಿನ್ (ಆ. ಸು. ಕ್ರಿ.ಪೂ. 460-444) ಆಧುನಿಕ ಭಾರತದಲ್ಲಿನ ಮಗಧದ ಒಬ್ಬ ರಾಜನಾಗಿದ್ದನು. ಬೌದ್ಧ ಮತ್ತು ಜೈನ ಕಥನಗಳ ಪ್ರಕಾರ, ಇವನು ಹರ್ಯಂಕ ರಾಜ ಅಜಾತಶತ್ರುವಿನ ಮಗ ಮತ್ತು ಉತ್ತರಾಧಿಕಾರಿಯಾಗಿದ್ದನು. ಉದಾಯಿನ್ ಸೋನ್ ಮತ್ತು ಗಂಗಾ ನದಿಗಳ ಸಂಗಮಸ್ಥಳದಲ್ಲಿ ಪಾಟಲಿಪುತ್ರ ನಗರಕ್ಕೆ ಅಡಿಪಾಯ ಹಾಕಿದನು. ಇವನು ತನ್ನ ರಾಜಧಾನಿಯನ್ನು ರಾಜಗೃಹದಿಂದ ಪಾಟಲೀಪುತ್ರಕ್ಕೆ ಸಾಮ್ರಾಜ್ಯದಲ್ಲಿ ಅದರ ಕೇಂದ್ರ ಸ್ಥಳದ ಕಾರಣ ಸ್ಥಳಾಂತರಿಸಿದನು.

ಬೌದ್ಧ ಕಥನಗಳ ಪ್ರಕಾರ, ಮಗಧ ರಾಜ ಬಿಂಬಿಸಾರನ ಉತ್ತರಾಧಿಕಾರಿಗಳೆಂದರೆ ಅಜಾತಶತ್ರು, ಉದಯಭದ್ದ, ಅನುರುದ್ಧ, ಮುಂಡ ಮತ್ತು ನಾಗದಾಸಕ.[೧] ಜೈನ ಸಂಪ್ರದಾಯವೂ ಉದಾಯಿನ್‍ನನ್ನು ಅಜಾತಶತ್ರುವಿನ ಮಗ ಮತ್ತು ಉತ್ತರಾಧಿಕಾರಿಯೆಂದು ಉಲ್ಲೇಖಿಸುತ್ತದೆ.[೨] ಆದರೆ, ಪುರಾಣಗಳು ಅಜಾತಶತ್ರು, ದರ್ಶಕ, ಉದಾಯಿನ್, ನಂದೀವರ್ಧನ ಮತ್ತು ಮಹಾನಂದಿನ್ ಬಿಂಬಿಸಾರನ ಉತ್ತರಾಧಿಕಾರಿಗಳೆಂದು ಹೆಸರಿಸುತ್ತವೆ. ಮತ್ಸ್ಯ ಪುರಾಣವು ವಂಶಕನು ಅಜಾತಶತ್ರುವಿನ ಉತ್ತರಾಧಿಕಾರಿಯೆಂದು ಹೆಸರಿಸುತ್ತದೆ. ಪುರಾಣಗಳನ್ನು ನಂತರದ ಕಾಲದಲ್ಲಿ ರಚಿಸಲಾಗಿದ್ದರಿಂದ, ಬೌದ್ಧ ಸಂಪ್ರದಾಯವು ಹೆಚ್ಚು ವಿಶ್ವಾಸಾರ್ಹವೆಂದು ತೋರುತ್ತದೆ. ಬೌದ್ಧ ಕಾಲಾನುಕ್ರಮಣಿಕೆಗಳ ನಾಗದಾಸಕನನ್ನು ಪುರಾಣಗಳ ದರ್ಶಕನೊಂದಿಗೆ ಗುರುತಿಸಲಾಗಿದೆ.

ಒಬ್ಬ ಪ್ರಾಧ್ಯಾಪಕರು ಉದಾಯಿನ್‍ನನ್ನು ಸಂಸ್ಕೃತ ನಾಟಕ ಸ್ವಪ್ನವಾಸವದತ್ತಾದಲ್ಲಿ ಉಲ್ಲೇಖಿಸಲ್ಪಟ್ಟ ರಾಜ ಉದಯನನೊಂದಿಗೆ ಗುರುತಿಸಿದರು. ಆದರೆ ಕೆಣಿಯವರು ಈ ಸಿದ್ಧಾಂತ ತಪ್ಪೆಂದು ಟೀಕಿಸಿದರು. ಅವರ ಪ್ರಕಾರ, ಸ್ವಪ್ನವಾಸವದತ್ತಾದ ಉದಯನನು ಬೇರೆ ರಾಜನಾಗಿದ್ದನು. ಅವನು ಕೌಶಾಂಬಿಯಲ್ಲಿ ರಾಜಧಾನಿಯನ್ನು ಹೊಂದಿದ್ದ ವತ್ಸ ರಾಜ್ಯವನ್ನು ಆಳಿದ್ದನು.

ಬೌದ್ಧ ಕಾಲಾನುಕ್ರಮಣಿಕೆಗಳಲ್ಲಿ ದರ್ಶಕ (ದಾಸಕ) ಹೆಸರಿನ ಹಿಂದೆ "ನಾಗ" ಎಂಬ ಉಪಸರ್ಗವನ್ನು ಬಳಸಲಾಗಿದೆ ಎಂದು ಭಂಡಾರ್‍ಕರ್ ಗಮನಿಸುತ್ತಾರೆ. ಇದು ಅವನ ಉತ್ತರಾಧಿಕಾರಿಗಳಿಗೆ ಅವನ ಬೇರ್ಪಡುವಿಕೆಯನ್ನು ಮತ್ತು ಪದ್ಮಾವತಿಯ ನಾಗರೊಂದಿಗೆ ಅವನ ಸಂಬಂಧವನ್ನು ಸೂಚಿಸಬಹುದು. ಇವನು ಒಂದು ಭಿನ್ನ ಕುಟುಂಬದವನಾಗಿದ್ದಿರಬಹುದು ಮತ್ತು ಅಜಾತಶತ್ರುವಿನ ಸುಮಾರು ಮೂರು ತಲೆಮಾರುಗಳ ನಂತರ ರಾಜನಾಗಿದ್ದನು, ಮತ್ತು ತಕ್ಷಣ ಅವನ ಉತ್ತರಾಧಿಕಾರಿಯಾಗಿರಲಿಲ್ಲ ಎಂದು ಇದು ಸೂಚಿಸುತ್ತದೆ.

ಉದಾಯಿನ್ ಅಜಾತಶತ್ರುವಿನ ಮೆಚ್ಚಿನ ಮಗನಾಗಿದ್ದನು ಮತ್ತು ತನ್ನ ಅಜ್ಜ ಬಿಂಬಿಸಾರನ ಆಳ್ವಿಕೆಯ ಅವಧಿಯಲ್ಲಿ ಜೀವಂತವಿದ್ದನು ಎಂದು ಬೌದ್ಧ ಸಂಪ್ರದಾಯಗಳು ಹೇಳುತ್ತವೆ. ಅಜಾತಶತ್ರುವು ಗೌತಮ ಬುದ್ಧನನ್ನು ಭೇಟಿಯಾದಾಗ, ಉದಾಯಿನ್ ಯುವ ರಾಜಕುಮಾರನಾಗಿದ್ದನು. ನಂದೀವರ್ಧನನು ಉದಾಯಿನ್‍ನ ಉತ್ತರಾಧಿಕಾರಿ ಎಂದು ಪುರಾಣಗಳು ಉಲ್ಲೇಖಿಸುತ್ತವೆ. ಆದರೆ, ಇವನ ನಂತರ ಅನುರುದ್ಧನು ಉತ್ತರಾಧಿಕಾರಿಯಾದನು ಎಂದು ಶ್ರೀಲಂಕಾದ ಬೌದ್ಧ ಕಾಲಾನುಕ್ರಮಣಿಕೆಗಳು ಹೇಳುತ್ತವೆ. ಅಜಾತಶತ್ರುವಿನಿಂದ ಹಿಡಿದು ನಾಗದಾಸಕನ ವರೆಗಿನ ಎಲ್ಲ ರಾಜರೂ ತಮ್ಮ ತಂದೆಯನ್ನು ಹತ್ಯೆ ಮಾಡಿದರು ಎಂದೂ ಈ ಬೌದ್ಧ ಕಾಲಾನುಕ್ರಮಣಿಕೆಗಳು ಹೇಳುತ್ತವೆ.

ಉಲ್ಲೇಖಗಳು[ಬದಲಾಯಿಸಿ]

  1. Liladhar B. Keny 1943, p. 61.
  2. V. K. Agnihotri, ed. (2010). Indian History. Allied Publishers. p. A-168. ISBN 978-81-8424-568-4.
"https://kn.wikipedia.org/w/index.php?title=ಉದಾಯಿನ್&oldid=812434" ಇಂದ ಪಡೆಯಲ್ಪಟ್ಟಿದೆ