ಉದಯ ಶಂಕರ ಪುರಾಣಿಕ

ವಿಕಿಪೀಡಿಯ ಇಂದ
Jump to navigation Jump to search

ಇವರು ಬೆಂಗಳೂರಿನಲ್ಲಿ 9 ಫೆಬ್ರುವರಿ 1965ರಂದು ಜನಿಸಿದ್ದಾರೆ. ತಂದೆ ಸಾಹಿತ್ಯರತ್ನ ಅನ್ನದಾನಯ್ಯ ಪುರಾಣಿಕ, ತಾಯಿ ನೀಲಾಂಬಿಕೆ ಮತ್ತು ಅಕ್ಕ ಚಂದ್ರಿಕಾ ಪುರಾಣಿಕ. ಇವರ ದೊಡ್ಡಪ್ಪ ಸಿದ್ದಯ್ಯ ಪುರಾಣಿಕ ಮತ್ತು ಚಿಕ್ಕಪ್ಪ ಬಸವರಾಜ ಪುರಾಣಿಕ


ಇಂಜನೀಯರಿಂಗ್ ಮತ್ತು ಮ್ಯಾನೇಜ್ ಮೆಂಟ್ ಶಿಕ್ಷಣದ ನಂತರ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕಳೆದ 18 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿರುವ ಬಿಐ ಸಾಫ್ಟವೇರ್ ಹೆಸರಿನ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಮುಖ್ಯಸ್ಥರಾಗಿ ಇವರು ಕೆಲಸ ಮಾಡುತ್ತಿದ್ದಾರೆ. ಅಮೇರಿಕಾ, ಯ್ಯೂರೋಪ್, ಸಿಂಗಾಪುರ ದೇಶಗಳಲ್ಲಿರುವ ಹಲವಾರು ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಂದ (ಕೊಡಾಕ್,ಸನ್ ಮೈಕ್ರೋಸಿಸ್ಟಂ,ಎಲ್ಪಿಡಾ, ಎಫ್.ಟಿ.ಡಿ, ಐ.ಬಿ.ಎಂ ಇತ್ಯಾದಿ) ಗೌರವ-ಮಾನ್ಯತೆ ಪಡೆದಿದ್ದಾರೆ.


ಇವರು ಸಂಶೋಧನೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಕನ್ನಡದಲ್ಲಿ ತಂತ್ರಾಂಶ ಅಭಿವೃದ್ಧಿ, ಕರ್ನಾಟಕ ಕುರಿತ ಪ್ರಥಮ ಕನ್ನಡ-ಇಂಗ್ಲೀಷ್ ಭಾಷೆಯ ವೆಬ್ ಸೈಟ್ ಕರ್ನಾಟಕಇನ್ಫೋ.ಕಾಂನ ನಿರ್ವಹಣೆ, ಪ್ರಾಚೀನ ಹಸ್ತಪ್ರತಿ ಸಂರಕ್ಷಣೆಗಾಗಿ ಸೂಕ್ತವಾದ ಸ್ಕ್ಯಾನರ್ ತಂತ್ರಜ್ಞಾನದ ಅಭಿವೃದ್ಧಿ, ಮೊದಲಾದ ಕೆಲಸಗಳನ್ನು ಮಾಡಿದ್ದಾರೆ.

ಕಲ್ಲಿದ್ದಲು ಬಳಸುವ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಿಂದ ಹೊರಬರುವ ಹಾರುಬೂದಿಯಿಂದ ಪರಿಸರಕ್ಕಾಗುವ ಹಾನಿಯನ್ನು ತಪ್ಪಿಸಲು, ಹಾರುಬೂದಿಯಿಂದ ಇಟ್ಟಿಗೆ ಮೊದಲಾದ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ತಯಾರಿಸುವ ತಂತ್ರಜ್ಞಾನ ಅಭಿವೃದ್ಧಿ ಪಡಿಸಲು ಮತ್ತು ಬಳಕೆಯನ್ನು ಪ್ರಚಾರ ಮಾಡಲು ಕೆಲಸ ಮಾಡಿದ್ದಾರೆ. ( ಈ ತಂತ್ರಜ್ಞಾನ ಬಳಸಿ ಹಾರು ಬೂದಿಯಿಂದ ಇಟ್ಟಿಗೆ ತಯಾರಿಸುವ ಉದ್ಯಮಗಳು ರಾಯಚೂರಿನಲ್ಲಿವೆ.) ಅಮೇರಿಕಾನಾಸಾಸ್ಪೇಸ್ ಶಟಲ್ ನಲ್ಲಿ ಬಳಸುವ ಶಾಖನಿರೋಧಕವಾದ ಸಿಲಿಕಾನ್ ಟೈಲ್ಸ್ ನಿರ್ಮಾಣದ ಅತ್ಯಾಧುನಿಕ ತಂತ್ರಜ್ಞಾನದಂತಹ ತಂತ್ರಜ್ಞಾನವನ್ನು ಭಾರತದಲ್ಲಿ ಅಭಿವೃದ್ಧಿ ಪಡಿಸಿದ್ದಾರೆ. ಉಲೇಖ: ಕರ್ನಾಟಕ ಉದ್ಯೋಗ ವಾರ್ತೆ, ಹಿಂದೂ ಪತ್ರಿಕೆ, ಸಂಜೆವಾಣಿ ಸಾಗರದ ನೀರು ಮತ್ತು ಹವೆಯಲ್ಲಿರುವ ಲವಣಗಳಿಂದಾಗಿ ಬೇಗ ತುಕ್ಕು ಹಿಡಿದು ಹಾಳಾಗುತ್ತಿದ್ದ, ಭಾರತದ ನೌಕಾಪಡೆಹಡಗು ಮತ್ತು ಸಬ್ ಮೇರಿನ್ ಗಳ ಹೊರಮೈ ರಕ್ಷಿಸಲು ವಿಶೇಷ ಲೇಪನವೊಂದನ್ನು ಅಭಿವೃದ್ಧಿ ಪಡಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಸುಲಭವಾಗಿ ಬಳಸಲು ಸಾಧ್ಯವಾಗುವ ನೀರಿನ ಫಿಲ್ಟರ್, ಸೌರಶಕ್ತಿ ಚಾಲಿತ ಉಪಕರಣಗಳನ್ನು ಅಭಿವೃದ್ಧಿ ಪಡಿಸಿದ್ದಾರೆ.

ಅಂಧರು ಸುಲಭವಾಗಿ ಬಳಸಬಹುದಾದ ತಂತ್ರಾಂಶಗಳ ಅಭಿವೃದ್ಧಿ ಮತ್ತು ಬ್ರೇಲ್ ಲಿಪಿಯಲ್ಲಿ ಉತ್ತಮ ಕನ್ನಡ ಪುಸ್ತಕಗಳ ಪ್ರಕಟಣೆಯನ್ನು ಮಾಡುತ್ತಿದ್ದಾರೆ.ಇ-ಪುಸ್ತಕಗಳ ರೂಪದಲ್ಲಿ ಕನ್ನಡ ಸಾಹಿತ್ಯದ ಪ್ರಕಟಣೆ, ಎ.ಟಿ.ಎಂಗಳಲ್ಲಿ ಕನ್ನಡ ಭಾಷೆಯ ಬಳಕೆ, ಡಿಜಿಟಲ್ ತಂತ್ರಜ್ಞಾನ ಬಳಸಿ ಕನ್ನಡ ಸಂಗೀತದ ರೆಕಾರ್ಡುಗಳ-ಟೇಪು-ಕ್ಯಾಸೆಟ್ ಗಳ ಸಂರಕ್ಷಣೆ, ವೀಡಿಯೋ ಸಂರಕ್ಷಣೆ ಮೊದಲಾದ ಕೆಲಸಗಳನ್ನು ಮಾಡುತ್ತಿದ್ದಾರೆ.


ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನ- ವಿಜ್ಞಾನ-ತಂತ್ರಜ್ಞಾನ ಕುರಿತು ಬರೆಯುವ ಜನಪ್ರಿಯ ಲೇಖಕರಾಗಿದ್ದಾರೆ. ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಕನ್ನಡಮ್ಮ ಮೊದಲಾದ ಪತ್ರಿಕೆಗಳಲ್ಲಿ ವಿಜ್ಞಾನ-ತಂತ್ರಜ್ಞಾನ ಅಂಕಣದಲ್ಲಿ ನೂರಾರು ಲೇಖನಗಳನ್ನು ಬರೆದಿದ್ದಾರೆ. ಬೆಂಗಳೂರಿನಲ್ಲಿ ನೆಡೆದ ಪ್ರಥಮ ಕನ್ನಡ ವಿಜ್ಞಾನ ಸಮ್ಮೇಳನ, ಶಿವಮೊಗ್ಗೆಯಲ್ಲಿ ನೆಡೆದ ಕನ್ನಡ ಮಾಹಿತಿ ತಂತ್ರಜ್ಞಾನ ಸಮ್ಮೇಳನ, ಬೆಂಗಳೂರಿನಲ್ಲಿ ನೆಡೆದ ಪ್ರಪ್ರಥಮ ಕನ್ನಡ ಗಣಕ ಸಮ್ಮೇಳನ ಮೊದಲಾದ ಕಡೆ ಕನ್ನಡದಲ್ಲಿ ಮಾಹಿತಿ ತಂತ್ರಜ್ಙಾನ-ವಿಜ್ಙಾನ ಕುರಿತು ಪ್ರಬಂಧ-ಉಪನ್ಯಾಸಗಳನ್ನು ಮಂಡಿಸಿದ್ದಾರೆ. ವಿಶ್ವವಿದ್ಯಾಲಯಗಳು ಇವರು ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನ, ವೈರ್ ಲೆಸ್ ತಂತ್ರಜ್ಞಾನ , ವಿ-ಮಾಧ್ಯಮ ಕುರಿತು ಬರೆದಿರುವ ಪುಸ್ತಕಗಳನ್ನು ಪ್ರಕಟಸುತ್ತಿವೆ. ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿರುವ ಸಿ.ಡಿ ಮತ್ತು ಡಿ.ವಿ.ಡಿ ರೂಪದಲ್ಲಿರುವ ಕನ್ನಡ ವಿಶ್ವಕೋಶದಲ್ಲಿ ಮಾಹಿತಿ ತಂತ್ರಜ್ಙಾನ ಕುರಿತು ಕೆಲವು ಲೇಖನಗಳನ್ನು ಬರೆದಿದ್ದಾರೆ. ಮಾಹಿತಿ ತಂತ್ರಜ್ಞಾನ ವಿಶ್ವಕೋಶದ ಸಂಪಾದಕ ಮಂಡಳಿಯ ಸದಸ್ಯರಾಗಿ ಕೆಲಸ ಮಾಡುತ್ತಿದ್ದಾರೆ.ಭಾರತದ ಗ್ರಾಮಗಳಿಗೆ ಮಾಹಿತಿ ತಂತ್ರಜ್ಞಾನವನ್ನು ತಲುಪಿಸುವ ರಾಷ್ಟ್ರೀಯ ಯೋಜನೆ, ಮಿಷನ್ 2007ರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.